varthabharthi

ಅನುಗಾಲ

ಕೋವಿಂದಾಯ ನಮಃ

ವಾರ್ತಾ ಭಾರತಿ : 29 Jun, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ರಾಷ್ಟ್ರಪತಿಗಳೆಂದರೆ ಕೇಂದ್ರ ಸರಕಾರದ ‘ರಬ್ಬರ್ ಸ್ಟಾಂಪ್’ ಎಂಬುದು ಭಾರತದ ಸಂವಿಧಾನವನ್ನು ಮತ್ತು ಈ ವರೆಗಿನ ರಾಜಕೀಯ ಇತಿಹಾಸವನ್ನು ಬಲ್ಲವರಿಗೆ ಗೊತ್ತಿದೆ. ಅಲ್ಲಿರುವವರು ಮಿಂದು ಉಣ್ಣುವ ಹಿರಿಯಣ್ಣ. ಇದ್ದೂ ಇಲ್ಲದಂತಿರಬೇಕಾದವರು. ಬ್ರಿಟನ್ ರಾಣಿಯ ಹಾಗೆ ಉತ್ಸವ ಮೂರ್ತಿ.


ರಾಮ್‌ನಾಥ್ ಕೋವಿಂದರ ನಾಮಪತ್ರದೊಂದಿಗೆ ರಾಷ್ಟ್ರಪತಿಗಳ ಆಯ್ಕೆಗೆ ರಂಗ ಸಜ್ಜಾಗಿದೆ. ಬಹುತೇಕ ಫಲಿತಾಂಶವೂ ನಿರ್ಣಯವಾಗಿದೆ. ಮೀರಾಕುಮಾರ್‌ಎಂಬ ಹರಕೆಯ ಕುರಿ ತಮ್ಮ ಪಕ್ಷನಿಷ್ಠೆಯನ್ನು ತೋರಿ ಸ್ಪರ್ಧಿಯಾಗಲು ಒಪ್ಪಿಕೊಂಡಿದ್ದಾರೆ. ಆಡಳಿತ ರಂಗ ಈಗಾಗಲೇ ತನ್ನ ಮತ್ತು ತನ್ನನ್ನು ಬೆಂಬಲಿಸುವ ಪಕ್ಷಗಳಿಂದಾಗಿ ಗೆಲುವಿನ ಗುರುತನ್ನು ಮುಟ್ಟಿದಂತಿದೆ. ಇನ್ನೇನಿದ್ದರೂ ಔಪಚಾರಿಕ ಸ್ಪರ್ಧೆ.

ಭಾರತದ ಸಂವಿಧಾನದ 52ನೆ ವಿಧಿಯನ್ವಯ ಕೇಂದ್ರ ಸರಕಾರದ ಕಾರ್ಯಾಂಗದ ಮುಖ್ಯಸ್ಥರು ರಾಷ್ಟ್ರಪತಿ. ‘‘ಭಾರತಕ್ಕೆ ಒಬ್ಬ ರಾಷ್ಟ್ರಪತಿ ಇರತಕ್ಕದ್ದು’’ ಎನ್ನುತ್ತದೆ ಸಂವಿಧಾನ. ಈ ಪದದಲ್ಲೇ ಒಂದು ಬಲವಂತದ ಮಾಘಸ್ನಾನದ ಆಂತರ್ಯವಿದೆ. ಅವರು ನಮ್ಮ ರಕ್ಷಣಾ ಬಲದ ಸರ್ವೋಚ್ಚ ನಾಯಕರು ಎಂದಿದ್ದರೂ ಜೊತೆಯಲ್ಲೇ ಅವರ ಹಕ್ಕು ಕಾನೂನಿನ ಮಿತಿ/ವ್ಯಾಪ್ತಿಗೊಳಪಟ್ಟಿದೆಯೆಂದು ಸಂವಿಧಾನದ ಈ ವಿಧಿ ಹೇಳಿದೆ. ಹೀಗೆಂದಾಕ್ಷಣ ಕೇಂದ್ರ ಇಲ್ಲವೆ ರಾಜ್ಯ ಸರಕಾರಗಳ ಕಾನೂನಿನ ಯಾವುದೇ ಕಾರ್ಯ ಅಥವಾ ಅಧಿಕಾರ ಅವರಿಗೆ ವರ್ಗವಾಗುವಂಥದ್ದಲ್ಲ ಮತ್ತು ಸಂಸತ್ತಿಗೆ ಯಾವುದೇ ಕಾರ್ಯ ಇಲ್ಲವೆ ಅಧಿಕಾರವನ್ನು ರಾಷ್ಟ್ರಪತಿಯ ಹೊರತಾಗಿ ಇತರರಿಗೆ ವಹಿಸುವುದಕ್ಕೆ ಅಡ್ಡಿಯಾಗುವಂತಿಲ್ಲ ಎಂದೂ ಸಂವಿಧಾನವೇ ಹೇಳಿದೆ.

ರಾಷ್ಟ್ರಪತಿಗಳನ್ನು 5 ವರ್ಷಗಳ ಅವಧಿಗೆ ಆರಿಸುವುದು ದೇಶದ 125 ಕೋಟಿಗೂ ಮಿಕ್ಕಿದ ಮತದಾರರಲ್ಲ. ಸಂಸತ್ತಿನ ಎರಡೂ ಮನೆಗಳ, ಹಾಗೆಯೇ ರಾಜ್ಯ ಶಾಸನ ಸಭೆಗಳ, ಚುನಾಯಿತ ಸದಸ್ಯರು. ವಿಧಾನ ಪರಿಷತ್ತಿನ ಮತ್ತು ನಾಮಕರಣಗೊಂಡ ಸದಸ್ಯರಿಗೆ ಈ ಹಕ್ಕಿಲ್ಲ. ರಾಷ್ಟ್ರಪತಿಗಳಾಗುವುದಕ್ಕೆ ಬೇಕಾದ ಅರ್ಹತೆಗಳೆಂದರೆ-ಭಾರತೀಯ ಪ್ರಜೆಯಾಗಿರಬೇಕು; 35 ವರ್ಷಗಳನ್ನು ತುಂಬಿದವರಾಗಿರಬೇಕು; ಲೋಕಸಭಾ ಸದಸ್ಯನಾಗುವ ಅರ್ಹತೆಯಿರಬೇಕು. ಹಾಗೆಂದು ಸರಕಾರದಡಿ ಪ್ರತ್ಯಕ್ಷ-ಪರೋಕ್ಷವಾಗಿ ಲಾಭದಾಯಕ ಹುದ್ದೆಯುಳ್ಳವರು ಸ್ಪರ್ಧಿಸುವಂತಿಲ್ಲ. ತಮಾಷೆಯೆಂದರೆ ಈ ಲಾಭದಾಯಕ ಹುದ್ದೆಗೆ ‘ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲ ಅಥವಾ ಕೇಂದ್ರ ಇಲ್ಲವೆ ರಾಜ್ಯದ ಸಚಿವತನ’ ಅನ್ವಯಿಸು ವುದಿಲ್ಲ.

ಸಂಸತ್ತಿನ ಇಲ್ಲವೆ ಶಾಸನಸಭೆಯ ಸದಸ್ಯನಾಗಿದ್ದಲ್ಲಿ ರಾಷ್ಟ್ರಪತಿಯಾಗಿ ಆಯ್ಕೆಯಾದ ತಕ್ಷಣದಲ್ಲಿ ಆ ಹುದ್ದೆಯನ್ನು ತ್ಯಜಿಸಿದನೆಂದು ಪರಿಗಣಿಸತಕ್ಕದ್ದು. ರಾಷ್ಟ್ರಪತಿಗಳಾಗಿರುವಾಗ ಆ ವ್ಯಕ್ತಿಯು ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದುವಂತಿಲ್ಲ. ರಾಷ್ಟ್ರಪತಿಗಳನ್ನು ಹುದ್ದೆಯಿಂದ ಇಳಿಸಬೇಕಾದರೆ ನಾಲ್ಕನೆ ಒಂದರಷ್ಟು ಸಂಖ್ಯೆಯ ಸಂಸದರು ನಿರ್ದಿಷ್ಟ ಆರೋಪಗಳೊಂದಿಗೆ ನಿರ್ಣಯವನ್ನು ಮಂಡಿಸಬೇಕು ಮತ್ತು ಅದು ಸಂಸತ್ತಿನ ಮೂರನೆ ಎರಡು ಬಹುಮತದೊಂದಿಗೆ ಅಂಗೀಕೃತವಾಗಬೇಕು; ಮತ್ತು ಆರೋಪಗಳು ತನಿಖೆಯಾಗಬೇಕು, ಹಾಗೂ ವಜಾಗೊಳಿಸುವ ನಿರ್ಣಯವು ಮತ್ತೆ ಮೂರನೆ ಎರಡರ ಬಹುಮತದೊಂದಿಗೆ ಅಂಗೀಕೃತವಾಗಬೇಕು. (ರಾಜ್ಯ ವಿಧಾನಸಭಾ ಸದಸ್ಯರು ಮತದಾರರೇ ಹೌದಾದರೂ ಅವರಿಗೆ ಈ ಅಶುಭ ಕ್ರಿಯೆಯಲ್ಲಿ ಪ್ರಾತಿನಿಧ್ಯವಿಲ್ಲ!)

ಇವಿಷ್ಟು ರಾಷ್ಟ್ರಪತಿಗಳ ಆಯ್ಕೆ, ಹುದ್ದೆ ಮತ್ತು ವಜಾಗೊಳಿಸಲು ಇರುವ ಮುಖ್ಯ ಮತ್ತು ಸಂಕ್ಷಿಪ್ತ ಸಾಂವಿಧಾನಿಕ ಅವಕಾಶಗಳು. ರಾಷ್ಟ್ರಪತಿಗಳೆಂದರೆ ಕೇಂದ್ರ ಸರಕಾರದ ‘ರಬ್ಬರ್ ಸ್ಟಾಂಪ್’ ಎಂಬುದು ಭಾರತದ ಸಂವಿಧಾನವನ್ನು ಮತ್ತು ಈ ವರೆಗಿನ ರಾಜಕೀಯ ಇತಿಹಾಸವನ್ನು ಬಲ್ಲವರಿಗೆ ಗೊತ್ತಿದೆ. ಅಲ್ಲಿರುವವರು ಮಿಂದು ಉಣ್ಣುವ ಹಿರಿಯಣ್ಣ. ಇದ್ದೂ ಇಲ್ಲದಂತಿರಬೇಕಾದವರು. ಬ್ರಿಟನ್ ರಾಣಿಯ ಹಾಗೆ ಉತ್ಸವ ಮೂರ್ತಿ. ಒಂದು ದೃಷ್ಟಿಯಲ್ಲಿ ಬ್ರಿಟನ್‌ನ ರಾಣಿ ಎಷ್ಟೋ ಪಾಲು ಮೇಲು. ಏಕೆಂದರೆ ಅವರಿಗೆ ಸೂರ್ಯ ಮುಳುಗದ ಸಾಮ್ರಾಜ್ಯದಿಂದಾಗಿ ಇತರ ಅನೇಕ ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿಯೂ ‘ಹರ್ ಮೆಜೆಸ್ಟಿ’ ಎಂಬ ಹಾಗೆ ಆಲಂಕಾರಿಕ ಗೌರವವಿದೆ.

ಸ್ವತಂತ್ರ ಭಾರತದಲ್ಲಿ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಹುದ್ದೆಗಳು ಪೊಲೀಸರಿಗೆ ಭದ್ರತೆಯ ಹೊಣೆಗಾರಿಕೆಯನ್ನು ಹೆಚ್ಚಿಸಿದ್ದು ಬಿಟ್ಟರೆ ಇನ್ನೇನೂ ಮಾಡಿಲ್ಲ. ಮೊದಮೊದಲಿನ ರಾಷ್ಟ್ರಪತಿಗಳು ಘನವಾಗಿಯಾದರೂ ಇದ್ದರು. ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ತಾಂತ್ರಿಕವಾಗಿ ಭಾರತದ ಮೊದಲ ರಾಷ್ಟ್ರಪತಿಗಳಾಗುತ್ತಾರೇನೋ? ಆನಂತರ ಚಕ್ರವರ್ತಿ ರಾಜಗೋಪಾಲಾಚಾರಿ ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಆದರು. ಸಂವಿಧಾನ ಅಂಗೀಕೃತವಾದ ಆನಂತರ ಬಾಬು ರಾಜೇಂದ್ರ ಪ್ರಸಾದ್ ಪೂರ್ಣ ಪ್ರಮಾಣದ ರಾಷ್ಟ್ರಪತಿಯಾದರು.

ಅವರು ನೆಹರು, ಪಟೇಲ್ ಅವರಂತೆಯೇ ಮೊದಲ ಸಾಲಿನ ರಾಜಕೀಯ ಧುರೀಣರಾಗಿದ್ದರೂ ಸ್ಥಾನಗಳನ್ನು ತುಂಬಿಸುವ ಸರ್ಕಸ್‌ನಲ್ಲಿ ಅವರು ಹೊಣೆರಹಿತ ಹಿರಿಯರಾದರು. ನೆಹರೂ ಇಂತಹ ಅನೇಕ ಸಾಂದರ್ಭಿಕ ಜಾಣ್ಮೆಯನ್ನು ತೋರಿದ್ದಾರೆ. ಪಟೇಲ್, ಅಂಬೇಡ್ಕರ್ ಮುಂತಾದವರು ಉಗುಳುನುಂಗಿಕೊಂಡು ನೆಹರುವಿನ ಜೊತೆಗೆ ದುಡಿದರು. ಆನಂತರ ಬಂದ ಡಾ. ರಾಧಾಕೃಷ್ಣನ್, ಡಾ. ಝಕೀರ್ ಹುಸೈನ್ ಮತ್ತು ಇತ್ತೀಚೆಗೆ ಎ.ಪಿ.ಜೆ. ಅಬ್ದುಲ್ ಕಲಾಂ ಹೀಗೆ ರಾಜಕಾರಣದ ಹೊರತಾಗಿಯೂ ಸ್ವಪ್ರತಿಷ್ಠೆಯನ್ನು ಸಂಪಾದಿಸಿದ ಗಣ್ಯರು ಅನೇಕರಿದ್ದರು. ಇಂದಿರಾ ಪ್ರಾಬಲ್ಯದ ಕಾಲದಲ್ಲಿ ಆತ್ಮಸಾಕ್ಷಿಯ ಬಲದಲ್ಲಿ ಗಿರಿ ಆಯ್ಕೆಯಾದದ್ದು ಸರಿಯೋ ತಪ್ಪೋ ಅಂತೂ ಒಂದು ಮಹತ್ವದ ಘಟನೆ. ಬರಬರುತ್ತ ಈ ಸ್ಥಾನವು ಆಡಳಿತ ಪಕ್ಷದ ಹೌದಪ್ಪಗಳಿಗೆ ಅಥವಾ ಅಧಿಕಾರಾಕಾಂಕ್ಷಿಗಳನ್ನು ದೂರವಿಡುವುದಕ್ಕೆ ಒಂದು ಸಾಧನವಾಯಿತು.

ಹಿಂದೆ ಉಪರಾಷ್ಟ್ರಪತಿಗಳು ಆನಂತರ ರಾಷ್ಟ್ರಪತಿಗಳಾಗುವ ಸಂಪ್ರದಾಯವಿತ್ತು. ಬರಬರುತ್ತ ಉಪರಾಷ್ಟ್ರಪತಿಗಳೆಂದರೆ ರಾಜ್ಯಸಭಾಪತಿ ಗಳಾಗುವುದು ಮತ್ತು ಕೆಲವು ರಾಷ್ಟ್ರಗಳ ಭೇಟಿ ಮಾಡುವುದು ಮತ್ತು ಕೆಲವು ವಿಧ್ಯುಕ್ತ ಸಮಾರಂಭಗಳಲ್ಲಿ ಶೋಭಿಸುವುದು ಇಷ್ಟಕ್ಕೇ ಮೀಸಲಾದರು. ಇದರಿಂದಾಗಿ ಉಪರಾಷ್ಟ್ರಪತಿಗಳ ಆಯ್ಕೆಗೂ ರಾಷ್ಟ್ರಪತಿಗಳ ಆಯ್ಕೆಗೂ ಸಂಬಂಧ ತಪ್ಪಿಹೋಯಿತು. ಈಗ ಏನಿದ್ದರೂ ಅವು ಎರಡು ಪ್ರತ್ಯೇಕ ಹುದ್ದೆಗಳು.

ಏನೂ ಇಲ್ಲದಂತಹ ಸ್ಥಾನಗಳು ಇವಲ್ಲ. ಸಾಂವಿಧಾನಿಕವಾಗಿ ಇವರು ದೊಡ್ಡವರು. ಪ್ರಧಾನಿಯೇ ಬಂದು ಮಾತನಾಡಿಸಬೇಕಾದವರು. ರಾಷ್ಟ್ರಪತಿಗಳಂತೂ ಇಡೀ ದೇಶದ ಚಾಲನಾಶಕ್ತಿಯೆಂದು ದಾಖಲೆಗಳಲ್ಲಿ ಕಾಣುವವರು. ಕೇಂದ್ರದ ಅಂದರೆ ರಾಷ್ಟ್ರದ ಆಡಳಿತದ ಎಲ್ಲ ಶಾಸನ-ಅನುಶಾಸನಗಳೂ, ಅರ್ಜೆಂಟಿನ ಅಧ್ಯಾದೇಶಗಳೂ, ನೇಮಕಾತಿಗಳೂ ಇವರ ಹೆಸರಿನಲ್ಲೇ ನಡೆಯುತ್ತದೆ. ಇವೆಲ್ಲವನ್ನೂ ಕೇಂದ್ರ ಸರಕಾರ ಅಂದರೆ ಅಲ್ಲಿ ಪ್ರಧಾನಿ ಮತ್ತು ಸಂಬಂಧಿತ ಇಲಾಖೆಯ ಸಚಿವರು ಕೈಗೊಂಡ ನಿರ್ಣಯಗಳು ರಾಷ್ಟ್ರಪತಿಗಳ ಹೆಸರಿನಲ್ಲಿ ಚಲಾವಣೆಗೆ ಬರುತ್ತವೆ; ಜಾರಿಯಾಗುತ್ತವೆ.

ಸರ್ವೋಚ್ಚ ನ್ಯಾಯಾಲಯವು ಮರಣದಂಡನೆಯಂತಹ ಘೋರ ಶಿಕ್ಷೆಯನ್ನು ನೀಡಿದರೂ ಕ್ಷಮಾಭಿಕ್ಷೆಯನ್ನು ನೀಡುವ ದಾಖಲಿತ ಹಕ್ಕು ರಾಷ್ಟ್ರಪತಿಗಳಿಗೆ ಮಾತ್ರ. ‘ದಾಖಲಿತ ಹಕ್ಕು’ ಏಕೆಂದರೆ ಕೇಂದ್ರ ಗೃಹಸಚಿವಾಲಯವೇ ಅಂದರೆ ಒಟ್ಟಿನಲ್ಲಿ ಕೇಂದ್ರ ಸರಕಾರವೇ ಈ ಅಂತಿಮ ನಿರ್ಣಯದ ಲೇಖಕ. ಅದಕ್ಕೆ ಹೆಸರನ್ನು ಪಡೆಯುವವರು ಮಾತ್ರ ರಾಷ್ಟ್ರಪತಿ. ನಮ್ಮ ಮಾಧ್ಯಮಗಳೂ ಈ ಸೂಕ್ಷ್ಮತೆಯನ್ನು ಅರಿದಂತಿಲ್ಲ. ಸಂಸತ್ತಿನ ಅಧಿವೇಶನಗಳಲ್ಲಿ ರಾಷ್ಟ್ರಪತಿಗಳದ್ದೇ ಉದ್ಘಾಟನಾ ಭಾಷಣ. ಅದನ್ನೂ ಸಂಬಂಧಿತ ಸಚಿವಾಲಯವೇ ಸಿದ್ಧಗೊಳಿಸುತ್ತದೆ. ಕೇಂದ್ರ ಸರಕಾರದ ಯಾವ ನಿರ್ಣಯವನ್ನೂ ನಿರಾಕರಿಸುವ ಅಧಿಕಾರ ರಾಷ್ಟ್ರಪತಿಗಳಿಗಿಲ್ಲ. ಅವರೇನಾದರೂ ತಿದ್ದುಪಡಿ ಮಾಡಿದರೂ ಮತ್ತೆ ಅದು ಅವರಿಗೆ ತಿದ್ದುಪಡಿ ಸಹಿತ ಅಥವಾ ರಹಿತವಾಗಿ ಬಂದರೆ ಸ್ವೀಕರಿಸಬೇಕಾದ ಅನಿವಾರ್ಯತೆ ಅವರದ್ದು. ಕೆಲವು ರಾಷ್ಟ್ರಪತಿಗಳು ಅನಿವಾರ್ಯವಾಗಿ ಅವನ್ನು ಶೈತ್ಯಾಗಾರದಲ್ಲಿಡುತ್ತಾರೆ. ಅದೊಂದೇ ಅವರು ಮಾಡಬಹುದಾದ ಸ್ವತಂತ್ರ ನಟನೆ.

ಹೀಗೆ ರಾಷ್ಟ್ರಪತಿಗಳ ಹುದ್ದೆ ಒಂದು ಬಹುದೊಡ್ಡ ಅಸಂಗತ ನಾಟಕ. ನಾಟಕ ಕಂಪೆನಿಯಲ್ಲಿ ಕೆಲಸಮಾಡುವವನು ರಾಜನ ಪಾತ್ರ ವಹಿಸಿ, ಮಾಲಕನು ಸೇವಕನ ಪಾತ್ರ ವಹಿಸಿದರೆ ಹೇಗಿರುತ್ತದೆಯೋ ಹಾಗೆ ಪ್ರಧಾನಿಗಳು ರಾಷ್ಟ್ರಪತಿ ಭವನಕ್ಕೆ ಹೋಗಿ ರಾಷ್ಟ್ರಪತಿಗಳಿಗೆ ಮಾಹಿತಿ, ವಿವರಣೆ ನೀಡುತ್ತಾರೆ. ಇವು ಎಷ್ಟರ ಮಟ್ಟಿಗೆ ಮುಜುಗರ ತರುವ, ತರಿಸುವ ವಿಚಾರವೋ ಅವರವರೇ ಬಲ್ಲರು.

‘ಪುಟ್ಟ ರಾಜಕುಮಾರ’ ಎಂದು ಕನ್ನಡಕ್ಕೆ ಅನುವಾದಗೊಂಡ ‘ದಿ ಲಿಟಲ್ ಪ್ರಿನ್ಸ್’ ಎಂಬ ಜನಪ್ರಿಯ ಕೃತಿಯಲ್ಲಿ ಯಾವುದೋ ಒಂದು ಕಾಲ್ಪನಿಕ ಗ್ರಹದಲ್ಲಿ ಒಬ್ಬಾನೊಬ್ಬ ರಾಜನಿರುತ್ತಾನೆ. ಆತನ ಧಿರಿಸು ಇಡೀ ಗ್ರಹವನ್ನಾವರಿಸಿರುತ್ತದೆ. ಯಾರಿಗೂ ಕೂರಲು ಜಾಗವಿಲ್ಲ; ಆಸನವೂ ಇಲ್ಲ. ಈ ನಮ್ಮ ಪುಟ್ಟ ರಾಜಕುಮಾರ ನಿಂತು ಸುಸ್ತಾಗಿ ಆಕಳಿಸುತ್ತಾನೆ. ರಾಜನ ಸಮ್ಮುಖದಲ್ಲಿ ಆಕಳಿಸುವುದು ಸಭ್ಯತೆಯಲ್ಲ ಮತ್ತು ಅದನ್ನು ನಿಷೇಧಿಸಿರುವುದಾಗಿ ರಾಜ ಹೇಳುತ್ತಾನೆ. ಆಗ ಪುಟ್ಟ ರಾಜಕುಮಾರ ತಾನು ದೀರ್ಘ ಪ್ರಯಾಣ ಮಾಡಿದ್ದೇನೆಂದೂ ನಿದ್ರಿಸಿಲ್ಲವೆಂದೂ ಹೇಳುತ್ತಾನೆ. ತಕ್ಷಣ ರಾಜನು ಆತನಿಗೆ ‘‘ಹಾಗಾದರೆ ನೀನು ಆಕಳಿಸಬೇಕೆಂದು ಆದೇಶಿಸುತ್ತೇನೆ’’ ಎನ್ನುತ್ತಾನೆ. ಪುಟ್ಟ ರಾಜಕುಮಾರನು ‘‘ನನಗೆ ಭಯವಾಗುತ್ತಿದೆ.. ನಾನು ಆಕಳಿಸಲಾರೆ’’ ಎನ್ನುತ್ತಾನೆ. ಮರುಕ್ಷಣವೇ ರಾಜನು ‘‘ಹಾಗಾದರೆ ನಾನು ನಿನಗೆ ಕೆಲವು ಬಾರಿ ಆಕಳಿಸುವಂತೆಯೂ ಇನ್ನು ಕೆಲವು ಬಾರಿ ಆಕಳಿಸದಂತೆಯೂ ಆದೇಶಿಸುತ್ತೇನೆ’’ ಎನ್ನುತ್ತಾನೆ. ಇಂತಹ ಅನೇಕ ಹಾಸ್ಯಮಯ ಪ್ರಸಂಗಗಳು ಪುಟ್ಟ ರಾಜಕುಮಾರನಿಗೆ ಎದುರಾಗುತ್ತವೆ.

ರಾಷ್ಟ್ರಪತಿಗಳ ಹುದ್ದೆ ಹೆಚ್ಚು ಕಡಿಮೆ ಹೀಗೆಯೇ. ಆದ್ದರಿಂದ ಚಿಕ್ಕ ಮಕ್ಕಳಾಗಲೀ, ವಿದ್ಯಾರ್ಥಿಗಳಾಗಲೀ, ಉದ್ಯೋಗಾಕಾಂಕ್ಷಿಗಳಾಗಲೀ, ರಾಜಕಾರಣದ ಸಕ್ರಿಯರಾಗಲೀ ಇತರ ಎಲ್ಲ ಆಸೆಗಳನ್ನು ಹೊಂದಿರುತ್ತಾರಾ ದರೂ ರಾಷ್ಟ್ರಪತಿಗಳಾಗಬೇಕೆಂಬ ಆಸೆ/ಗುರಿಯನ್ನಿಟ್ಟುಕೊಳ್ಳುವುದಿಲ್ಲ. ಸದ್ಯ ಕೇಂದ್ರ ಸರಕಾರದ ಆಡಳಿತರಂಗದ ಭಾಜಪವು ಬಿಹಾರದ ರಾಜ್ಯಪಾಲ, ಮೂಲತಃ ಉತ್ತರ ಪ್ರದೇಶದ ದಲಿತ ವಕೀಲ-ರಾಜಕಾರಣಿ ಯೊಬ್ಬರನ್ನು ತನ್ನ ಅಭ್ಯರ್ಥಿಯಾಗಿ ಹೆಸರಿಸಿದೆ. ಇದೊಂದು ಅನಿರೀಕ್ಷಿತ ಆಯ್ಕೆ. ರಾಮ್‌ನಾಥ್ ಕೋವಿಂದರು ಪ್ರಸಿದ್ಧರೇನಲ್ಲ; ಹಾಗೆಂದು ಅವರ ಕುರಿತಾಗಿ ನೇತ್ಯಾತ್ಮಕ ಅಂಶಗಳಿಲ್ಲ. ಮೈಕೈ ಕೊಳಕಾಗಿರದ ಒಬ್ಬ ವ್ಯಕ್ತಿ ರಾಷ್ಟ್ರಪತಿಗಳ ಆಸನದಲ್ಲಿ ಕುಳಿತರೆ ಅಲ್ಲಿನ ಗುಲಾಬಿ ತೋಟಕ್ಕೇನೂ ಹಾನಿಯಿಲ್ಲ. ಹೀಗಾಗಿ ಅವರು ‘ಆಗಬಹುದು’.

ಈ ಆಯ್ಕೆಯಿಂದಾಗಿ ವಿರೋಧ ಪಕ್ಷಗಳು ಸ್ವಲ್ಪಮಟ್ಟಿಗಾದರೂ ವಿಚಲಿತವಾಗಿವೆ. ಕೋವಿಂದರನ್ನು ಭಾಜಪ ಆಯ್ಕೆ ಮಾಡುವ ಮೊದಲೇ ವಿರೋಧ ಪಕ್ಷಗಳು ತಮ್ಮ ದಲಿತ ಅಭ್ಯರ್ಥಿಯನ್ನು ಘೋಷಿಸಿದ್ದರೆ ಆಗ ಭಾಜಪಕ್ಕೆ ಅದನ್ನು ಎದುರಿಸಲು ಕಷ್ಟವಾಗುತ್ತಿತ್ತು. ಆದರೆ ವಿರೋಧ ಪಕ್ಷಗಳು ಈ ನೈಪುಣ್ಯವನ್ನು ಸಾಧಿಸದೆ ಕಾದು ನೋಡುವ ತಂತ್ರವನ್ನು ಹೂಡಿ ಬೇಸ್ತುಬಿದ್ದಿವೆ. ಈ ಮೊದಲೇ ಬಿಹಾರದ ನಿತೀಶ್ ಕುಮಾರ್ ಕೋವಿಂದರಿಗೆ ಬೆಂಬಲ ಘೋಷಿಸಿ ವಿರೋಧ ಪಕ್ಷಗಳ ಸಂಚಲನಕ್ಕೆ ಆಘಾತ ನೀಡಿದ್ದರು.

ದಲಿತರ ವಿರುದ್ಧ ಕಾಂಗ್ರೆಸ್ ದಲಿತರನ್ನೇ ಅಭ್ಯರ್ಥಿಯಾಗಿ ಘೋಷಿಸಿದರೂ ಅದೀಗ ಜನಮನ್ನಣೆಯ ತಂತ್ರವಾಗದೆ ಒಂದು ಉದ್ದೇಶರಹಿತ ಪ್ರತಿತಂತ್ರವಾಗಿದೆ. ಹೇಗೂ ಸೋಲುವುದಾದರೆ ಮೌಲ್ಯಯುತವಾದ ಒಬ್ಬ ಅರಾಜಕೀಯ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಘೋಷಿಸಿದ್ದರೆ, ಅವರನ್ನು ಬೆಂಬಲಿಸುವಷ್ಟು ಗಟ್ಟಿತನ ಈ ವಿರೋಧಪಕ್ಷಗಳಿಗಿದ್ದಿದ್ದರೆ ಅದೊಂದು ಸತ್ವಯುತವಾದ ವಿಳಂಬವಾದರೂ ಸೋತು ಗೆಲ್ಲುವ ನಡೆಯಾಗುತ್ತಿತ್ತು. ವಿರೋಧ ಪಕ್ಷಗಳು ಆರಿಸಿದ ಅಭ್ಯರ್ಥಿ ಮೀರಾ ಕುಮಾರ್ ಆಡಳಿತ ಮತ್ತು ರಾಜನೀತಿಯ ತಜ್ಞರು, ಜಗಜೀವನ ರಾಮ್ ಮಗಳು, ಲೋಕಸಭಾಪತಿಯಾಗಿದ್ದವರು, ಅನುಭವಿಗಳು, ದಲಿತರು ಮುಂತಾದ ವಿಶೇಷಣಗಳೊಂದಿಗೆ ಯೋಗ್ಯರೇ ಇರಬಹುದಾದರೂ ಅವರೀಗ ‘ಡಿಫಾಲ್ಟ್ ಕ್ಯಾಂಡಿಡೇಟ್’.

ಆದ್ದರಿಂದ 17 ವಿರೋಧ ಪಕ್ಷಗಳು ಒಟ್ಟಾಗಿ ವ್ಯವಹರಿಸಿದರೂ ಈ ಕಾರ್ಯತಂತ್ರವು ಯಶಸ್ವಿಯಾಗುವುದು ಕಷ್ಟ. ಆತ್ಮ ಸಾಕ್ಷಿಗನುಗುಣವಾಗಿ ಮತದಾನಕ್ಕೆ ಆಗ್ರಹಿಸಿದರೂ ಪಕ್ಷ ರಾಜಕೀಯದಲ್ಲಿ ಆತ್ಮಸಾಕ್ಷಿಯೂ ಒಂದು ರಾಜಕಾರಣವೇ ಎಂಬುದು ಅವರಿಗೆ ಗೊತ್ತಿರುವ ಸತ್ಯವೇ ಆಗಿದೆ. ಆದ್ದರಿಂದ ಮೀರಾ ಕುಮಾರ್ ಈ ವಿಳಂಬದಿಂದಾಗಿ ಬಸ್ ಮಿಸ್ ಮಾಡಿಕೊಂಡಿದ್ದಾರೆ.
ಪ್ರಜಾತಂತ್ರದಲ್ಲಿ ಪವಾಡಗಳು ನಡೆಯಬಾರದೆಂದೇನೂ ಇಲ್ಲ. ಆದರೆ ಈಗ ಸದ್ಯಕ್ಕೆ ಕೋವಿಂದಾಯ ನಮಃ ಎಂದು ಹೊಸ ದೇವರ ಪ್ರಾರ್ಥನೆ ನಡೆಯಲಡ್ಡಿಯಿಲ್ಲ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)