varthabharthi

ಬುಡಬುಡಿಕೆ

ಪೇಜಾವರರ ಇಫ್ತಾರ್ ಮೇಲೆ ಜಿಎಸ್‌ಟಿ ತೆರಿಗೆ!

ವಾರ್ತಾ ಭಾರತಿ : 1 Jul, 2017
ಚೇಳಯ್ಯ chelayya@gmail.com

ಪೇಜಾವರರು ಉಡುಪಿಯಲ್ಲಿ ಇಫ್ತಾರ್ ಕೂಟ ಮಾಡಿದ್ದೇ ತಡ, ನಾಡಿನ ಪ್ರಗತಿಪರರೂ, ಕೋಮುವಾದಿ ಗಳೂ ಏಕಾಏಕಿ ಗೊಂದಲಕ್ಕೀಡಾಗತೊಡಗಿದರು. ಪ್ರಗತಿಪರರು ಬೆಂಬಲಕೊಡುವುದೋ ಬೇಡವೋ ಎಂದು ಸಭೆ ಮಾಡುತ್ತಿದ್ದರೆ, ಕೆಲವು ಕಪಿಸೇನೆಗಳು ಖಂಡಿಸುವುದೋ ಬೇಡವೋ ಎಂದು ಯೋಚಿಸುತ್ತಿದ್ದರು. ದೇಶದ ಸರ್ವಸಮಸ್ಯೆಯೂ ಕೃಷ್ಣ ಮಠದ ಇಫ್ತಾರ್ ಕೂಟದಲ್ಲೇ ಸೇರಿಕೊಂಡಿದೆ ಎನ್ನುವುದನ್ನು ಮನಗಂಡ ಪತ್ರಕರ್ತ ಎಂಜಲು ಕಾಸಿ, ತಕ್ಷಣ ದೇಶಾದ್ಯಂತ ಈ ಇಫ್ತಾರ್ ಕೂಟದ ಬಗ್ಗೆ ವಿವಿಧ ಸಂಘಟನೆಗಳಿಂದ ನಾಯಕರಿಂದ ಅಭಿಪ್ರಾ ಯಗಳನ್ನು ಸಂಗ್ರಹಿಸತೊಡಗಿದ. ಅದರಲ್ಲಿ ಆಯ್ದ ಹೇಳಿಕೆಗಳನ್ನು ಕೆಳಗೆ ನೀಡಲಾಗಿದೆ.

***

ಅರುಣ್ ಜೇಟ್ಲಿ, ವಿತ್ತ ಸಚಿವರು:

ಪೇಜಾವರ ಶ್ರೀ ಇಫ್ತಾರ್ ಕೂಡ ಮಾಡಿದ್ದಾರೆ ನಿಜ. ಈ ವಿವಾದವನ್ನು ಪರಿಹರಿಸಲು ನಾವು ಈಗಾಗಲೇ ಆರ್ಥಿಕ ತಜ್ಞರ ಜೊತೆ ಸಮಾಲೋಚನೆ ನಡೆಸಿ ಯೋಜನೆ ಹಾಕಿಕೊಂಡಿ ದ್ದೇವೆ. ಪೇಜಾವರರ ಇಫ್ತಾರ್‌ನ ಮೇಲೆ ನಾವು ಶೇ. 40ರಷ್ಟು ಜಿಎಸ್‌ಟಿ ತೆರಿಗೆಯನ್ನು ವಿಧಿಸಲಿದ್ದೇವೆ ಮತ್ತು ಆ ತೆರಿಗೆಯ ಹಣವನ್ನು ಶೇಕಡಾವಾರು ಬೇರೆ ಸಂಘಟನೆಗಳಿಗೆ ಹಂಚಲಿದ್ದೇವೆ. ಬಿಜೆಪಿಗೆ ಶೇ. 10, ಪ್ರಗತಿಪರರಿಗೆ ಶೇ. 12 ಹಾಗೂ ಉಳಿದೆಲ್ಲ ಸಣ್ಣ ಪುಟ್ಟ ಸಂಘಟನೆ ಗಳಿಗೆ ಸಮಾನವಾಗಿ ಲಾಭವನ್ನು ವಿತರಿಸಲಿದ್ದೇವೆ. ಇದರಿಂದ ಎಲ್ಲರ ಬೊಕ್ಕಸಗಳಿಗೂ ಸಮಾನ ಲಾಭವಾದಂತಾಗುತ್ತದೆ. ಇನ್ನು ಮುಂದೆ ಹಿಂದುತ್ವವಾದವನ್ನು ಮಂಡಿಸಲಿರುವ ಯಾವುದೇ ಸಂಘಟನೆಗಳು, ನಾಯಕರು ಇಫ್ತಾರ್‌ನಂತಹ ಕಾರ್ಯಕ್ರಮ ವನ್ನು ಆಯೋಜಿಸಿದರೆ ಅದರ ಮೇಲೆ ಕಡ್ಡಾಯವಾಗಿ ಶೇ. 40 ಜಿಎಸ್‌ಟಿ ತೆರಿಗೆ ವಿಧಿಸುವುದಾಗಿ ತೀರ್ಮಾನಿಸಿದ್ದೇವೆ.

ಬಾಬಾ ರಾಮ್‌ದೇವ್, ಯೋಗ-ಭೋಗ ಪಟು:

ಇಫ್ತಾರ್‌ನಲ್ಲಿ ಸೇವಿಸಿರುವುದು ಪತಂಜಲಿ ಆಹಾರಗಳಾಗಿದ್ದರೆ ಅದನ್ನು ಸ್ವದೇಶಿ ಇಫ್ತಾರ್ ಆಗಿ ಪರಿಗಣಿಸಬೇಕು. ಅದರಿಂದ ಹಿಂದೂ ಧರ್ಮದ ಯಾವುದೇ ಪ್ರಾಚೀನತೆಗೆ ಧಕ್ಕೆ ಬರುವುದಿಲ್ಲ. ಅವರು ಪತಂಜಲಿ ಕಂಪೆನಿಯ ಖರ್ಜೂರ ಸೇವಿಸಿದ್ದರೆ ಅವರ ನಮಾಝನ್ನು ನಾವು ಯೋಗದ ಒಂದು ಭಾಗವಾಗಿ ನೋಡಬ ಹುದು. ಆದುದರಿಂದ, ಇದರ ಕುರಿತಂತೆ ಪ್ರತಿಕ್ರಿಯಿಸುವುದಕ್ಕೆ ಮುನ್ನ ನಾನು ಪೇಜಾವರಶ್ರೀಗಳ ಬಳಿ ಮಾತುಕತೆ ನಡೆಸಬೇಕಾ ಗಿದೆ. ಕೃಷ್ಣ ಮಠದ ಈ ಸಮಸ್ಯೆಯನ್ನು ಇತ್ಯರ್ಥ ಮಾಡುವುದಕ್ಕಾ ಗಿಯೇ ಮುಂದಿನ ದಿನಗಳಲ್ಲಿ ಪತಂಜಲಿ ಕಂಪೆನಿಯು ಇಫ್ತಾರ್ ಗಾಗಿ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಲಿದೆಮತ್ತು ಅದನ್ನು ನಾವು ಕೃಷ್ಣ ಮಠಕ್ಕೆ ಪೂರೈಸಲು ತೀರ್ಮಾನಿಸಿ ದ್ದೇವೆ. ಯಾವುದೇ ಮಠಗಳು, ದೇವಸ್ಥಾನಗಳು ಇಫ್ತಾರ್ ಕೂಟ ಮಾಡಲು ಬಯಸುವುದೇ ಆಗಿದ್ದರೆ ಅವರಿಗಾಗಿ ವಿಶೇಷ ಇಫ್ತಾರ್ ಪದಾರ್ಥಗಳನ್ನು, ಖರ್ಜೂರಗಳನ್ನು ಮುಂದಿನ ದಿನಗಳಲ್ಲಿ ಪತಂಜಲಿ ಸಂಸ್ಥೆಯೂ ಒದಗಿಸಿ ಕೊಡಲಿದೆ. ಹಾಗೆಯೇ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ನಮಾಝ್‌ನ ಬಳಿಕ ಕಾಲು ಗಂಟೆ ನನ್ನ ಸಂಸ್ಥೆಯಿಂದ ಯೋಗ ತರಬೇತಿಯನ್ನು ನೀಡಲಾ ಗುತ್ತದೆ. ಯೋಗ ಮತ್ತು ನಮಾಝ್ ಎರಡೂ ಇರುವುದರಿಂದ ನಾವು ಇಂತಹ ಇಫ್ತಾರ್‌ಕೂಟಗಳನ್ನು ಹೆಚ್ಚು ಹೆಚ್ಚು ಬೆಳೆಸಬೇಕು. ಇನ್ನು ಮುಂದೆ ಪತಂಜಲಿಯಿಂದಲೇ ವಿಶೇಷ ಇಫ್ತಾರ್‌ಕೂಟ ಗಳನ್ನು ಹಮ್ಮಿಕೊಳ್ಳುವ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತಿದೆ. ಈ ಬಗ್ಗೆಯೂ ಪೇಜಾವರ ಶ್ರೀಗಳು ಮತ್ತು ನಾವು ಜಂಟಿಯಾಗಿ ಪ್ರಾಯೋಜಕತ್ವ ವಹಿಸಿಕೊಂಡರೆ ಹೇಗೆ ಎಂದು ಆಲೋಚಿಸುತ್ತಿದ್ದೇವೆ. ಅದೇನೇ ಇದ್ದರೂ, ನಮ್ಮ ಈ ಯೋಜನೆಗೆ ಜಿಎಸ್‌ಟಿ ತೆರಿಗೆಯಿಂದ ವಿನಾಯಿತಿ ನೀಡಬೇಕುಎಂದು ಮೋದಿ ಬಳಿ ಕೇಳಿಕೊಳ್ಳುತ್ತಾ ಇದ್ದೇವೆ.

ರಾಮನಾಥ ರಾಯ್, ದ.ಕ. ಜಿಲ್ಲಾ ಸುಸ್ತುವಾರಿ ಸಚಿವರು:

ಬಿಜೆಪಿಯವರು ಗಾಂಧಿಯನ್ನು ಹೈಜಾಕ್ ಮಾಡಿದರು. ಅಂಬೇಡ್ಕರ್‌ರನ್ನು ಹೈಜಾಕ್ ಮಾಡಿದರು. ಭಗತ್‌ಸಿಂಗ್‌ನನ್ನು ಹೈಜಾಕ್ ಮಾಡಿದರು. ಇದೀಗ ಕಾಂಗ್ರೆಸ್‌ನ ತಲೆ ತಲಾಂತರದ ಆಸ್ತಿಯಾಗಿ ರುವ ಇಫ್ತಾರ್‌ಕೂಟವನ್ನು ಹೈಜಾಕ್ ಮಾಡಲು ಹೊರಟಿದ್ದಾರೆ. ಪೇಜಾವರ ಶ್ರೀಗಳ ಇಫ್ತಾರ್ ಕೂಟದ ಹಿಂದೆ ಬಿಜೆಪಿಯ ಕೈವಾಡ ವಿದೆ. ಆದುದರಿಂದಲೇ ಅವರೆಲ್ಲರೂ ಇಫ್ತಾರ್ ಕೂಟವನ್ನು ಬೆಂಬಲಿಸಿ ದ್ದಾರೆ. ಕಲ್ಲಡ್ಕದ ಒಬ್ಬರ ಸಂಚು ಇದರಲ್ಲಿ ಇದೆ ಎನ್ನುವುದು ನನಗೆ ಗೊತ್ತಿದೆ. ಇತ್ತೀಚೆಗೆ ಕಲ್ಲಡ್ಕದಲ್ಲಿ ಗಲಭೆ ಸೃಷ್ಟಿಸಿ ನನ್ನ ಇಫ್ತಾರ್ ಕೂಟಕ್ಕೆ ಜನ ಬರದಂತೆ ಮಾಡಿರುವುದೂ ಅವರೇ ಆಗಿದ್ದಾರೆ. ಇದೀಗ ಉಡುಪಿಯ ಸ್ವಾಮೀಜಿಯ ಜೊತೆಗೆ ಸಂಚು ಮಾಡಿ, ಇಫ್ತಾರ್‌ಕೂಟವನ್ನು ಹೈಜಾಕ್ ಮಾಡಲು ಹೊರಟಿದ್ದಾರೆ. ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ. ಇದರ ವಿರುದ್ಧ ನಾನು ಮಾತನಾಡಿ ವಾಟ್ಸ್ ಆ್ಯಪ್‌ನಲ್ಲಿ ಊರಿಡೀ ಹಂಚುವೆ. ಮುಂದಿನ ಬಾರಿ ಅವರು ಇಫ್ತಾರ್ ಕೂಟ ಮಾಡಿದ್ದೇ ಆದರೆ ನಾನು ಉಪವಾಸ ಕೂರುತ್ತೇನೆ.

ಕೋಮುಸೌಹಾರ್ದ ವೇದಿಕೆಯ ಮುಖಂಡರು:

ಇಫ್ತಾರ್‌ನಲ್ಲಿ ಪೇಜಾವರಶ್ರೀಗಳು ಅಸ್ಪಶ್ಯತೆಯನ್ನು ಪ್ರದರ್ಶಿಸಿದ್ದಾರೆ. ಖರ್ಜೂರವನ್ನು ಮೇಲಿನಿಂದ ಅಲ್ಪಸಂಖ್ಯಾತರ ಕೈಗೆ ಎಸೆದಿ ದ್ದಾರೆ. ಹಾಗೆಯೇ ಮಠದೊಳಗೆ ನಮಾಝ್ ಮಾಡಲು ಅವಕಾಶ ಕೊಡದೇ ಪಂಕ್ತಿ ಭೇದ ಮಾಡಿದ್ದಾರೆ. ಇಫ್ತಾರ್‌ನಲ್ಲಿ ಬಿರಿಯಾನಿ ಮಾಡುವುದು ಕಡ್ಡಾಯ. ಆದರೆ ಚಿತ್ರಾನ್ನ ವನ್ನು ಬಿರಿಯಾನಿ ಎಂದು ನಂಬಿಸಿ ತಿನ್ನಿಸಿ ಅಲ್ಪಸಂಖ್ಯಾತರಿಗೆ ಮೋಸ ಮಾಡಿದ್ದಾರೆ. ಅವರ ಇಫ್ತಾರ್‌ಗೆ ಪರ್ಯಾಯವಾಗಿ ನಾವೂ ನಾನ್‌ವೆಜ್ ಇಫ್ತಾರ್ ಮಾಡಿ ಪ್ರತಿಭಟನೆ ಮಾಡಲಿದ್ದೇವೆ. ಹಾಗೆಯೇ ಅಲ್ಪಸಂಖ್ಯಾ ತರಿಗೆ ಉಡುಪಿ ಮಠದಲ್ಲಿ ಆಗಿರುವ ಅನ್ಯಾಯವನ್ನು ಖಂಡಿಸಿ, ಇನ್ನೊಂದು ಉಡುಪಿ ಚಲೋವನ್ನು ಆಯೋಜಿಸಲಿದ್ದೇವೆ. ಸ್ವಾಮೀಜಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡು, ತಕ್ಷಣ ನಾನ್‌ವೆಜ್ ಬಿರಿಯಾನಿಯ ಮೂಲಕ ಇನ್ನೊಂದು ಹೊಸ ಇಫ್ತಾರ್ ಮಾಡಿ ತಮ್ಮ ಜಾತ್ಯತೀತತೆಯನ್ನು ಸಾಬೀತು ಮಾಡಬೇಕು. ಹಾಗೆಯೇ ಇಫ್ತಾರ್‌ನಲ್ಲಿ ದಲಿತರನ್ನೂ ಪಾಲುಗೊಳ್ಳುವಂತೆ ಮಾಡಬೇಕು.

ನರಕವರ್ತಿ ಬೇಳೆಸೂಲಿ(ಕಕಿಬಕ), ಬ್ರಿಗೇಡ್ ಓರಾಟಗಾರರು:

ಕರುಳು ಕಿತ್ತು ಬರುತ್ತೆ ಕಣ್ರೀ(ಕಕಿಬಕ). ಪಾಕಿಸ್ತಾನ ಭಾರತಕ್ಕೆ ಮೋಸ ಮಾಡಿದ ಹಾಗೆ ಅವರು ಪೇಜಾವರ ಶ್ರೀಗಳಿಗೆ ಮೋಸ ಮಾಡಿದರು. ಪೇಜಾವರ ಶ್ರೀಗಳು ಖರ್ಜೂರ ತರಲು ಒಳಗೆ ಹೋದ ಹೊತ್ತು ನೋಡಿ, ಅವರು ನಮಾಝು ಮಾಡಿ ಬಿಟ್ಟರು. ಪೇಜಾವರರಿಗೆ ಅವರು ನಮಾಝು ಮಾಡುವುದು ಗೊತ್ತೇ ಇರಲಿಲ್ಲ. ಹೀಗೆ ಒಳಗೆ ಹೋಗಿ ಹಾಗೆ ಹೊರಗೆ ಬರುವ ಷ್ಟರಲ್ಲಿ ಅವರು ನಮಾಝ್ ಮಾಡಿ ಮುಗಿಸಿದ್ದಾರೆ. ವಂಚನೆ ಕಣ್ರೀ...ವಂಚನೆ. ಶತಶತಮಾನಗಳಿಂದ ಹಿಂದೂಗಳ ಮೇಲೆ ಇದೇ ರೀತಿ ವಂಚನೆ ಮಾಡಿಕೊಂಡು ಬಂದಿದ್ದಾರೆ. ಈಗಾಗಲೇ ನಮಾಝ್ ಮಾಡಿದ ಸ್ಥಳವನ್ನು ಶುದ್ಧೀಕರಿಸಲು ನಾವು ಸೆಗಣಿ ಮತ್ತು ಗೋಮೂತ್ರಕ್ಕಾಗಿ ಹುಡುಕಾಡುತ್ತಿದ್ದೇವೆ. ಇತ್ತೀಚೆಗೆ ಎಲ್ಲಿ ನೋಡಿದರೂ ಹಟ್ಟಿಗಳೇ ಇಲ್ಲ ಕಣ್ರೀ...ಗೋಮಾತೆಯನ್ನು ರಕ್ಷಿ ಸಲು ನಾವಿಷ್ಟು ಹೋರಾಡಿದರೂ, ಇಂದು ಕೃಷ್ಣ ಮಠ ಶುದ್ಧೀಕರಣ ಕ್ಕಾಗಿ ಗೋಮೂತ್ರಕ್ಕಾಗಿ ಹಟ್ಟಿ ಹಟ್ಟಿ ಅಲೆದಾಡ ಬೇಕಾದಂತಹ ಪರಿ ಸ್ಥಿತಿ ಬಂದಿದೆ. ಕರುಳು ಕಿತ್ತು ಬರುತ್ತೆ ಕಣ್ರೀ...ಕರುಳು ಕಿತ್ತು ಬರುತ್ತೆ....

ಪಾಕಿಸ್ತಾನ ಪ್ರಧಾನಿ ನವಾಝ್ ಶರೀಫ್:

ಕಳೆದ ಬಾರಿ ಪಾಕಿಸ್ತಾನಕ್ಕೆ ಬಂದು ಪ್ರಧಾನಿ ನವಾಝ್ ಶರೀಫ್ ಅವರು ಬಿರಿಯಾನಿ ತಿಂದು ಹೋಗಿರುವುದನ್ನು ನೋಡಿಯೇ ಸ್ವಾಮೀಜಿಗಳು ಇಫ್ತಾರ್ ಕೂಟ ಮಾಡಿದ್ದಾರೆ. ಇದು ಉಭಯ ದೇಶಗಳ ನಡುವಿನ ಮಾತುಕತೆಗೆ ಇನ್ನಷ್ಟು ದಾರಿಯನ್ನು ತೆರೆದು ಕೊಟ್ಟಂತಾಗಿದೆ. ಆದರೆ ಈ ಇಫ್ತಾರ್‌ಗೆ ಪಾಕಿಸ್ತಾನದ ಗಣ್ಯರನ್ನೂ ಕರೆದಿದ್ದರೆ ಚೆನ್ನಾಗಿರುತ್ತಿತ್ತು. ಭಾರತೀಯರೇ ತಮ್ಮಿಳಗೆ ಇಫ್ತಾರ್ ಮಾಡಿ ತಿನ್ನುವುದರಿಂದ ಸಂಬಂಧಗಳು ಬೆಳೆಯುವುದಿಲ್ಲ. ನಾನು ನನ್ನ ಮೊಮ್ಮಗಳ ಮದುವೆಗೆ ಮೋದಿಯನ್ನು ಕರೆದಿದ್ದೆ . ಆದರೆ ಮೋದಿ ಯವರಿಗೆ ಮೊಮ್ಮಗಳು ಆಗುವ ಸಾಧ್ಯತೆ ಕಡಿಮೆಯಾಗಿರುವುದ ರಿಂದ, ನಮಗಾಗಿ ವಿಶೇಷ ಇಫ್ತಾರ್ ಕೂಟ ಮಾಡಿ ಮೋದಿ ಕರೆಯ ಬೇಕಾಗಿತ್ತು. ಮುಂದಿನ ದಿನಗಳಲ್ಲಾದರೂ ಅವರು ನನ್ನನ್ನು ಇಫ್ತಾರ್‌ಗೆ ಕರೆಯುತ್ತಾರೆ ಎಂದು ಭಾವಿಸುವೆ.

ನರೇಂದ್ರ ಮೋದಿ:

ಬಾಯಿಂಯೋ...ಬೆಹೆನೋ...ಇಫ್ತಾರ್ ಮಾಡುವುದಕ್ಕಾಗಿ ಯೇ ಜಿಎಸ್‌ಟಿ ಯೋಜನೆ ಜಾರಿಗೆ ತಂದಿದ್ದೇವೆ. ತೆರಿಗೆಯನ್ನು ಕಟ್ಟಿ. ಜೀವನ ಪೂರ್ತಿ ಉಪವಾಸದಿಂದಿರಿ. ಒಂದೇ ದೇಶ, ಒಂದೇ ಹೊಟ್ಟೆ, ಎಲ್ಲರಿಗೂ ಉಪವಾಸ. ಈ ಮೂಲಕ ಸರ್ವಧರ್ಮೀಯರಿಗೆ ಇಫ್ತಾರ್ ಹಮ್ಮಿಕೊಳ್ಳಲು ಸ್ವಾಮೀಜಿಗಳಿಗೆ ಅವಕಾಶ ಸಿಕ್ಕಿದಂತಾ ಗುತ್ತದೆ. ನಮಶ್ಕಾರ್.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)