varthabharthi

ನೇಸರ ನೋಡು

ಇದು ಅದಲ್ಲದೆ ಮತ್ತೇನು?

ವಾರ್ತಾ ಭಾರತಿ : 1 Jul, 2017
ಜಿ.ಎನ್.ರಂಗನಾಥ ರಾವ್

ಜಾತಿ, ಧರ್ಮ, ಗೋರಕ್ಷಣೆ, ಆಹಾರ ಪದ್ಧತಿ, ಶಿಕ್ಷಣ, ಅನೈತಿಕ ಪೊಲೀಸಗಿರಿ, ಆತ್ಮಹತ್ಯೆಗೆ ಶರಣಾಗುತ್ತಿರುವ ಪರಾಧೀನ ರೈತರು, ಕಾಶ್ಮೀರದಲ್ಲಿ ಉಲ್ಬಣಿಸುತ್ತಿರುವ ಹಿಂಸಾಚಾರ -ಹೀಗೆ ಜನತೆ ಒಂದಲ್ಲ ಒಂದು ರೀತಿಯಲ್ಲಿ ಸ್ವಾತಂತ್ರ್ಯದಿಂದ ವಂಚಿತರಾಗಿ ‘ನಾಟ್ ಇನ್ ಮೈ ನೇಮ್’ ಎಂಬಂಥ ಆತಂಕದಲ್ಲಿ ಬದುಕನ್ನು ದೂಡುತ್ತಿರುವ ಇಂದಿನ ಪರಿಸ್ಥಿತಿ ತುರ್ತು ಪರಿಸ್ಥಿತಿಗಿಂತ ಹೇಗೆ ಭಿನ್ನ?


ಇಂದಿರಾ ಗಾಂಧಿ 1975ರ ಜೂನ್ 25ರಂದು ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು. ಈ ತುರ್ತುಪರಿಸ್ಥಿತಿ 1977ರವರೆಗೆ, ಇಪ್ಪತ್ತೊಂದು ತಿಂಗಳ ಕಾಲ ಜಾರಿಯಲ್ಲಿತ್ತು. ಅಂದಿನಿಂದ ಇದನ್ನೊಂದು ದುಃಸ್ವಪ್ನ ಎಂದು ಮರೆಯುವುದು ನಮ್ಮಿಂದ ಸಾಧ್ಯವಾಗಿಲ್ಲ. ಪ್ರತಿ ವರ್ಷ ಜೂನ್ 25ರಂದು ತುರ್ತುಪರಿಸ್ಥಿತಿ ದಿವಸವನ್ನು ಆಚರಿಸುತ್ತಾ ಬಂದಿದ್ದೇವೆ. ಆಚರಣೆಗಳ ಮೂಲಕ ಪುಣ್ಯಪುರುಷರ ಸತ್ಕಾರ್ಯಗಳನ್ನು ಸ್ಮರಿಸುವುದು, ಅಸಾಧಾರಣವಾದ ಮಾನವೋದ್ಧಾರದ ಘಟನೆಗಳು, ವಿದ್ಯಮಾನಗಳನ್ನು ಸ್ಮರಿಸುವುದು ನಮ್ಮಲ್ಲಿ ಒಂದು ರೂಢಿಗತ ಸಂಗತಿಯಾಗಿಬಿಟ್ಟಿದೆ.

ಇಂಥ ಆಚರಣೆಗಳ ಮೂಲಕ ಆ ಸತ್ಪರಂಪರೆಗಳನ್ನು ಮುಂದುವರಿಸಿಕೊಂಡು ಹೋಗುವ ಪಣ ತೊಡುತ್ತೇವೆ. ಪ್ರತಿವರ್ಷ ತುರ್ತುಪರಿಸ್ಥಿತಿ ದಿನ ಆಚರಿಸಿ, ಆ ಭಯಂಕರ ದಿನಗಳನ್ನು ನೆನಪಿಸಿಕೊಂಡು ಅಂಥ ಪರಿಸ್ಥಿತಿ ಮತ್ತೆ ಬಾರದಿರಲಿ ಎಂದು ಧ್ಯಾನಿಸುತ್ತೇವೆ, ಅಂಥ ಪರಿಸ್ಥಿತಿಯ ಪುನರಾವರ್ತನೆಗೆ ಅವಕಾಶ ನೀಡುವುದಿಲ್ಲ ಎಂದು ಪಣ ತೊಡುತ್ತೇವೆ. ತುರ್ತುಪರಿಸ್ಥಿತಿ ಎಂದರೆ ಏನು? ಅಂದರೆ, ನಮಗೆ ಸಂವಿಧಾನದತ್ತವಾಗಿರುವ ಎಲ್ಲ ಬಗೆಯ ಸ್ವಾತಂತ್ರ್ಯವನ್ನು ಹರಣಮಾಡುವುದು. ಇಂದಿರಾಗಾಂಧಿಯವರು ಮಾಡಿದ್ದು ಅದನ್ನೇ. ಮನುಷ್ಯನಿಗೆ ಸ್ವಾತಂತ್ರ್ಯ ಬಲು ಅಮೂಲ್ಯವಾದದ್ದು ಎಂದೇ ಪ್ರತಿವರ್ಷ ನಾವು ತುರ್ತುಪರಿಸ್ಥಿತಿ ದಿನ ಆಚರಿಸಿ ನಮ್ಮ ಸ್ವಾತಂತ್ರ್ಯ ವನ್ನು ರಕ್ಷಿಸಿಕೊಳ್ಳುವ, ಸಂಸದೀಯ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳುವ ಮಾತುಗಳನ್ನು ಆಡುತ್ತೇವೆ.

ಆದರೆ ಪ್ರಜೆಗಳಿಗೆ ತಿಳಿದೋ ತಿಳಿಯದೆಯೋ ಅವರ ಸ್ವಾತಂತ್ರ್ಯಹರಣ ವ್ಯವಸ್ಥೆಯಿಂದ ನಡೆಯುತ್ತಲೇ ಇರುತ್ತದೆ-ಕೆಲವೊಮ್ಮೆ ಘೋಷಿತವಾಗಿ, ಬಹುತೇಕ ಅಘೋಷಿತವಾಗಿ. ಮೋದಿಯವರ ನಾಯಕತ್ವದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರ ಒಂದಲ್ಲ ಒಂದು ರೂಪದಲ್ಲಿ ಪ್ರಜೆಗಳ ಸ್ವಾತಂತ್ರ್ಯಕ್ಕೆ ಸಂಚಕಾರ ತರುತ್ತಿರುವ ಸಂಗತಿಗಳನ್ನು ನಾವು ದಿನಂಪ್ರತಿ ಓದುತ್ತಲೇ ಇದ್ದೇವೆ/ಕೇಳುತ್ತಲೇ ಇದ್ದೇವೆ. ಉದಾಹರಣೆಗೆ ಈ ಕೆಲವೊಂದು ವಿದ್ಯಮಾನಗಳನ್ನು ನೋಡಿ.

1. ಶಾಸಕರಿಬ್ಬರ ಹಕ್ಕುಚ್ಯುತಿಗೆಡೆಕೊಡುವಂಥ ಲೇಖನಗಳನ್ನು ಪ್ರಕಟಿಸಿದ್ದಕ್ಕಾಗಿ ಕರ್ನಾಟಕ ವಿಧಾನ ಸಭೆ ಕನ್ನಡದ ಎರಡು ನಿಯತಕಾಲಿಕಗಳ ಇಬ್ಬರು ಸಂಪಾದಕರಿಗೆ ಜೈಲು ಶಿಕ್ಷೆ ವಿಧಿಸಿದೆ.

 2. ದಾರಿ ತಪ್ಪಿಸುವ, ವಂಚಿಸುವ ಮಾಹಿತಿಗಳನ್ನು ಹಾಕಲಾಗಿದೆ ಎಂಬ ಕಾರಣ ನೀಡಿ ಫೇಸ್‌ಬುಕ್ ಪುಟದಲ್ಲಿ ನ್ಯೂಸ್ ಲಿಂಕ್ ಹಾಕುವ ಸೌಲಭ್ಯವನ್ನು ‘ವಾರ್ತಾ ಭಾರತಿ’ ಪತ್ರಿಕೆಗೆ ಫೇಸ್‌ಬುಕ್ ನಿರಾಕರಿಸಿದೆ ಹಾಗೂ ಪತ್ರಿಕೆಯನ್ನು ಅಮಾನತಿನಲ್ಲಿಡಲಾಗಿದೆ.

3. ಮುಸ್ಲಿಮರು ಮತ್ತು ದಲಿತರ ಮೇಲೆ ನಡೆಯುತ್ತಿರುವ ಹತ್ಯೆಯನ್ನು ಖಂಡಿಸಿ ದೇಶದಾದ್ಯಂತ ನಡೆಯುತ್ತಿರುವ ‘ನಾಟ್ ಇನ್ ಮೈ ನೇಮ್’ ಅಭಿಯಾನ.

4. ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬಂದರೆ ಸಹಿಸುವುದಿಲ್ಲ ಎಂದು ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡರ ಎಚ್ಚರಿಕೆ.

ಇವು ಕೆಲವು ನಿದರ್ಶನಗಳಷ್ಟೆ. ಇಂಥವು ದಿನ ನಿತ್ಯ ವರದಿಯಾಗುತ್ತಿವೆ. ಇವೆಲ್ಲ ಏನನ್ನು ಸೂಚಿಸುತ್ತವೆ? ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ ಇವು ಹೇಗೆ ಪ್ರಜೆಗಳ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಕವಿ ಚಂದ್ರಶೇಖರ ಪಾಟೀಲರು ಇತ್ತೀಚೆಗೆ, ತುರ್ತುಪರಿಸ್ಥಿತಿ ವಿರೋಧಿ ದಿನದ ಕಾರ್ಯಕ್ರಮವೊಂದರಲ್ಲಿ ‘ಭಾರತದಲ್ಲಿ ಪ್ರಜಾಪ್ರಭುತ್ವ-ಅಂದು-ಇಂದು’ ವಿಷಯ ಕುರಿತು ಮಾತನಾಡುತ್ತಾ ಆಡಿರುವ ಈ ಕೆಳಗಿನ ಮಾತುಗಳನ್ನು ಗಮನಿಸಬೇಕು:

‘‘ಮೈಸೂರಿನಲ್ಲಿ ಕೆ.ಎಸ್.ಭಗವಾನ್ ಅವರು ಗೋಮಾಂಸ ಸೇವಿಸಿದರು ಎಂಬ ಕಾರಣಕ್ಕೆ ಗೋಮೂತ್ರ ಸಿಂಪಡಣೆ ಮಾಡಿ ಶುದ್ಧೀಕರಿಸಿದ್ದಾರೆ. ಉಡುಪಿಯಲ್ಲಿ ಪೇಜಾವರ ಶ್ರೀಗಳು ಮುಸ್ಲಿಮರನ್ನು ಕರೆಸಿ ಸಸ್ಯಾಹಾರದ ಪ್ರಸಾದವನ್ನು ಉಣಬಡಿಸಿದ್ದಾರೆ. ಅದನ್ನು ಪ್ರಮೋದ್ ಮುತಾಲಿಕ್ ಎಂಬ ಮೂಲಭೂತವಾದಿ ಉಗ್ರ ಪ್ರತಿಭಟನೆ ಮಾಡಿದ್ದಾರೆ..... ಶಾಸಕಾಂಗವು ಪತ್ರಿಕಾ ರಂಗದ ಮೇಲೆ ಸವಾರಿಮಾಡುತ್ತಿದೆ. ಶಾಸನಬದ್ಧವಾಗಿ ನಡೆಯುವ ಹಲ್ಲೆ ಇದು. ಈ ಘಟನೆಗಳೇ ಅಘೋಷಿತ ತುರ್ತುಪರಿಸ್ಥಿತಿ.’’

ಚಂಪಾರ ಈ ಮಾತುಗಳು ಅಧಿಕಾರಾರೂಢ ಪಕ್ಷಗಳಿಗೆ ಉತ್ಪ್ರೇಕ್ಷೆಯ ಅಥವಾ ಸಿನಿಕತನದ ನುಡಿಗಳು ಎನ್ನಿಸಬಹುದು. ಆದರೆ, ಉತ್ಪ್ರೇಕ್ಷೆಯಲ್ಲ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹೇಗೆ ಪ್ರಜೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತಿದೆ ಎಂಬುದನ್ನು ಮೇಲಿನ ಘಟನೆಗಳ ಪರಾಮರ್ಶೆಯಿಂದ ಕಾಣಬಹುದಾಗಿದೆ.

ಕನ್ನಡದ ಎರಡು ನಿಯತಕಾಲಿಕಗಳ ಸಂಪಾದಕರಿಗೆ ಒಂದು ವರ್ಷ ಸೆರೆಮನೆ ಶಿಕ್ಷೆ ಮತ್ತು ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ಕರ್ನಾಟಕ ವಿಧಾನ ಸಭೆ ಅಂಗೀಕರಿಸಿರುವ ನಿರ್ಣಯ ಸಮರ್ಥನೀಯವಲ್ಲ. ಶಾಸಕರ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಸನ ಸಭೆಗಳಲ್ಲಿ ಅವರು ಆಡುವ ಮಾತುಗಳು ಮತ್ತು ಭಾಷಣಕ್ಕೆ ಸಂಬಂಧಿಸಿದಂತೆ ಹಾಗೂ ಶಾಸನ ಸಭೆಗಳ ಮೇಲೆ ಅನಗತ್ಯ ಪ್ರಭಾವ-ಒತ್ತಡಗಳನ್ನು ತಪ್ಪಿಸುವ ದೃಷ್ಟಿಯಿಂದ ಶಾಸಕಾಂಗದ ಸಂಸ್ಥೆಗಳಿಗೆ ಸಂವಿಧಾನ ಕೆಲವೊಂದು ವಿಶೇಷ ಹಕ್ಕುಗಳನ್ನು ನೀಡಿದೆ.

ಆದರೆ ದುರದೃಷ್ಟವಶಾತ್, ಸದನದ ಹಾಗೂ ಅದರ ಸದಸ್ಯರ ಘನತೆ ವರ್ಚಸ್ಸುಗಳ ರಕ್ಷಣೆಯ ನೆಪದಲ್ಲಿ ಹಕ್ಕು ಬಾಧ್ಯತೆ ವಿಧಿಯನ್ನು ದಂಡಿಸಲು ಬಳಸಲಾಗುತ್ತಿದೆ. ಇದು ಚುನಾಯಿತ ಸದಸ್ಯರನ್ನು ಟೀಕೆ-ವಿಮರ್ಶೆಗಳಿಂದ ರಕ್ಷಿಸುವ ಉಪಾಯವಷ್ಟೆ.ಶಿಕ್ಷೆಗೆ ಗುರಿಯಾಗಿರುವ ಸಂಪಾದಕರುಗಳು ಪ್ರಕಟಿಸಿರುವ ಲೇಖನಗಳಲ್ಲಿನ ಟೀಕೆ ಟಿಪ್ಪಣಿಗಳು ನ್ಯಾಯಯುಯತವಾದುದೇ ಇಲ್ಲವೇ ಎನ್ನವುದು ಇಲ್ಲಿ ಪ್ರಸ್ತುತವಲ್ಲ. ಈ ಲೇಖನಗಳು ಯಾವುದೇ ರೀತಿಯಲ್ಲೂ ಶಾಸಕರಿಬ್ಬರ ಕಾರ್ಯನಿರ್ವಹಣೆಗೆ, ಅವರ ಹಕ್ಕುಬಾಧ್ಯತೆಗಳಿಗೆ ಧಕ್ಕೆಯುಂಟುಮಾಡುವುದಿಲ್ಲ. ಅಂಥ ಅಂಶಗಳೇನೂ ಲೇಖನಗಳಲ್ಲಿಲ್ಲ. ಲೇಖನಗಳಿಂದ ತಮಗೆ ಅಪಮಾನವಾಗಿದೆ ಎನ್ನಿಸಿದ್ದಲ್ಲಿ ಶಾಸಕರು ಪತ್ರಿಕೆಗಳ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಬಹುದಿತ್ತು. ಹಕ್ಕುಬಾಧ್ಯತಾ ಸಮಿತಿಗೆ ದೂರುನೀಡುವ ಅವಶ್ಯಕತೆ ಇರಲಿಲ್ಲ.

ಶಾಸನ ಸಭೆ ತನ್ನ ಅಧಿಕಾರವನ್ನು ಸದನಗಳ ಹಕ್ಕುಬಾಧ್ಯತೆ ರಕ್ಷಣೆಗೆ ಬಳಸಬೇಕೆ ವಿನ: ಟೀಕಾಕಾರರ ಸ್ವಾತಂತ್ರ್ಯ ಹತ್ತಿಕ್ಕುವುದಕ್ಕಲ್ಲ. ಟೀಕೆಟಿಪ್ಪಣಿಗಳಿಗೆ ಸ್ಪಷ್ಟೀಕರಣ ನೀಡುವ ಅಥವಾ ನಿರಾಕರಿಸುವ, ಇಲ್ಲವೇ ನ್ಯಾಯಾಲಯಕ್ಕೆ ಹೋಗುವ ಅವಕಾಶವಿದ್ದೇ ಇದೆ. ಹಕ್ಕು ಬಾಧ್ಯತೆ ಉಲ್ಲಂಘನೆಯಾಗಿದೆ ಎನ್ನುವುದರಲ್ಲಿ ಹುರುಳಿಲ್ಲ, ಅದು ಅತಾರ್ಕಿಕ. ಎಂದೇ ಇಬ್ಬರು ಸಂಪಾದಕರಿಗೆ ವಿಧಿಸಿರುವ ಶಿಕ್ಷೆ ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಅಸಾಂವಿಧಾನಿಕ ಕ್ರಮವಲ್ಲದೆ ಬೇರೇನೂ ಅಲ್ಲ.

ಅಪ್ರಿಯವಾದ ಸತ್ಯವನ್ನು ನುಡಿಯಬೇಡ ಎನ್ನುವ ಹಿತೋಪದೇಶ ಆರ್ಷೇಯ ವಾಣಿಯದು. ಅಪ್ರಿಯವಾದ ಸತ್ಯವನ್ನು ನುಡಿಯುವವರಿಗೆ ತೊಂದರೆ ತಪ್ಪಿದಲ್ಲ ಎನ್ನುವುದಕ್ಕೆ ‘ವಾರ್ತಾ ಭಾರತಿ’ಯ ಫೇಸ್‌ಬುಕ್ ಪ್ರಕರಣ ಒಂದು ಜ್ವಲಂತ ನಿದರ್ಶನ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸುವುದರ ಜೊತೆಗೆ ಇಂಥ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಂವಿಧಾನ ವಿರೋಧಿ ಶಕ್ತಿಗಳ ಪ್ರಯತ್ನಗಳಿಗೆ ಕುಮ್ಮಕ್ಕಾಗಿ ನಿಲ್ಲುವುದೂ ಅಪರಾಧವಾಗುತ್ತದೆ. ಫೇಸ್‌ಬುಕ್ ‘ವಾರ್ತಾ ಭಾರತಿ’ಯನ್ನು ಅಮಾನತಿನಲ್ಲಿಡುವ ಮೂಲಕ ಈ ಎರಡು ಅಪರಾಧಗಳನ್ನು ಮಾಡಿದೆ.

ಅಮಾನತುಗೊಳಿಸುವುದರೊಂದಿಗೆ ಫೇಸ್‌ಬುಕ್ ಬಳಕೆದಾರರಿಗೆ ‘ವಾಭಾ’ ಪೇಜ್ ನ್ಯೂಸ್ ಸಿಗದ ಹಾಗೆ ಮಾಡಿರುವುದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವುದರೊಂದಿಗೆ ಮಾಹಿತಿ ಹಕ್ಕು ಸ್ವಾತಂತ್ರ್ಯವನ್ನೂ ಫೇಸ್‌ಬುಕ್ ಹತ್ತಿಕ್ಕಿದಂತಾಗಿದೆ. ‘ವಾಭಾ’ ಜೊತೆ ಸುದ್ದಿ ಬಳಸುವ ಒಪ್ಪಂದ ಮಾಡಿಕೊಂಡಿರುವ ಫೇಸ್‌ಬುಕ್ ಏಕಾಏಕಿ ‘ವಾಭಾ’ ಅಮಾನತುಗೊಳಿಸಿ, ಅದಕ್ಕೆ, ಫೇಸ್‌ಬುಕ್ ನೀತಿಗಳನ್ನು ಪಾಲಿಸದೇ ಇರುವುದು, ದಾರಿತಪ್ಪಿಸುವ, ವಂಚಿಸುವ ಸುದ್ದಿಗಳನ್ನು ಹಾಕುತ್ತಿದೆ ಎಂಬ ಕಾರಣ ನೀಡಿರುವುದನ್ನು ಪರ್ಯಾಲೋಚಿಸಿದಾಗ ಅದರ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂತಾಗುತ್ತದೆ.

ಮೊದಲು ಒಂದು ಪತ್ರಿಕೆಯ ವಿಶ್ವಾಸಾರ್ಹತೆಯನ್ನು ನಂಬಿ ಒಪ್ಪಂದ ಮಾಡಿಕೊಂಡ ಫೇಸ್ ಬುಕ್‌ಗೆ ಹಠಾತ್ತನೆ ‘ವಾಭಾ’ ಸುದ್ದಿ-ಮಾಹಿತಿಗಳು ದಾರಿತಪ್ಪಿಸುವಂಥವು, ವಂಚನೆ ಎಂಬ ಜ್ಞಾನೋದಯವಾದುದಾದರೂ ಹೇಗೆ? ಪತ್ರಿಕೆಗೆ ತನ್ನನ್ನು ಸಮರ್ಥಿಸಿಕೊಳ್ಳಲು ಅವಕಾಶವನ್ನೂ ನೀಡದೆ ಅಮಾನತು ಗೊಳಿಸಿರುವುದು ಸತ್ಯ ನುಡಿಯುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಲ್ಲದೆ ಮತ್ತೇನೂ ಅಲ್ಲ. ಕೇಸರಿ ಪಡೆಗಳ ಸುಳ್ಳು ಅಭಿಯಾನವೇ ಇಂಥ ಕ್ರಮಕ್ಕೆ ಕಾರಣ ಎಂಬುದು ನಿಜವಾದಲ್ಲಿ ಫೇಸ್ ಬುಕ್‌ನ ಕ್ರಮ ಅಕ್ಷಮ್ಯವಷ್ಟೇ ಅಲ್ಲ ಈ ದೇಶದಲ್ಲಿ ಸ್ವಾತಂತ್ರ್ಯ ಮತ್ತು ಪ್ರಜಾಸತ್ತೆಗೆ ಮಾರಕವಾದದ್ದು.

ರಾಷ್ಟ್ರದಾದ್ಯಂತ ಪ್ರಜ್ಞಾವಂತರು ನಡೆಸಿದ ‘ನಾಟ್ ಇನ್ ಮೈ ನೇಮ್’ ಆಂದೋಲನಕ್ಕೆ ಮುಖ್ಯ ಪ್ರೇರಣೆ-ಪ್ರಚೋದನೆ, ಕಳೆದ ಎರಡು ಮೂರು ವರ್ಷಗಳಿಂದ ಹೆಚ್ಚಿರುವ ಮುಸ್ಲಿಮರು ಮತ್ತು ದಲಿತರ ಮೇಲಿನ ಹಲ್ಲೆ ಮತ್ತು ಕೆಲವು ಸಂಘಟನೆಗಳಿಗೆ ಸೇರಿದ ಜನ ಕಾನೂನನ್ನು ಕೈಗೆತ್ತಿಕೊಂಡು ನಡೆಸುತ್ತಿರುವ ವಿಚಾರಣಾರಹಿತ ಕಗ್ಗೊಲೆಗಳು. ಗೋರಕ್ಷಣೆ, ಗೋಮಾಂಸ ಸೇವನೆಗೆ ಸಂಬಂಧಿಸಿದಂತೆ ಆರೆಸ್ಸೆಸ್ ಕೃಪಾಪೋಷಿತ ಸಂಘಟನೆಗಳು ತಾವೇ ಕಾನೂನು ಎಂಬಂತೆ ವರ್ತಿಸತೊಡಗಿರುವುದು ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ.ಇದಕ್ಕೆ ಇತ್ತೀಚಿನ ಉದಾಹರಣೆ ದಿಲ್ಲಿಯಿಂದ ಮಥುರಾಕ್ಕೆ ಹೋಗುತ್ತಿದ್ದ ರೈಲಿನಲ್ಲಿದ್ದ ಗೋರಕ್ಷಕರು ಎನ್ನಲಾದವರಿಂದ ಮುಸ್ಲಿಂ ತರುಣನೊಬ್ಬನ ಹತ್ಯೆಯಾಗಿರುವುದು.

ಕೊಲೆಯಾಗಿರುವ ತರುಣ ಜುನೈದ್ ದಿಲ್ಲಿಯಲ್ಲಿ ಈದ್ ಹಬ್ಬಕ್ಕಾಗಿ ಬಟ್ಟ್ಟೆಬರೆ ಖರೀದಿಸಿ ಸೋದರರೊಂದಿಗೆ ತನ್ನ ಹಳ್ಳಿಗೆ ವಾಪಸಾಗುತ್ತಿದ್ದ. ಇವರ ಮುಖದರ್ಶನವಾದದ್ದೇ ರೈಲಿನಲ್ಲಿದ್ದ ಕೆಲವರು ಜುನೈದ್‌ನನ್ನು ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆಸೆಯುವಂಥ ಬೀಭತ್ಸ ಕೃತ್ಯವನ್ನು ಎಸಗಿದ್ದಾರೆ. ಜಾನುವಾರುಗಳ ಮಾರಾಟ ಮತ್ತು ಖರೀದಿಯಲ್ಲಿ ತೊಡಗಿದ್ದ ಆರೋಪದ ಮೇಲೆ ಅಮಾಯಕರ ಹತ್ಯೆ ಅನೇಕ ರಾಜ್ಯಗಳಲ್ಲಿ ನಡೆಯುತ್ತಿದೆ. ಇಂಥ ಹಲ್ಲೆಗಳಲ್ಲಿ ಹೆಚ್ಚಾಗಿ ಹಲ್ಲೆಗೀಡಾಗಿರುವವರು ಮುಸ್ಲಿಮರು ಮತ್ತು ದಲಿತರು. ಹತ್ಯೆಗಳು ಹೆಚ್ಚಾಗಿ ನಡೆದಿರುವುದು ಬಿಜೆಪಿ ಸರಕಾರಗಳಿರುವ ರಾಜ್ಯಗಳಲ್ಲಿ.

ಇಂಥ ಹಲ್ಲೆ-ಹತ್ಯೆಗಳು ನಡೆಯುತ್ತಿರುವುದು ಬಿಜೆಪಿ ಬೆಂಬಲಿತ ಹಿಂದೂ ಸಂಘಟನೆಗಳಿಂದ. ನಾಚಿಕೆಗೇಡಿನ ಸಂಗತಿ ಎಂದರೆ ಈ ಕೊಲೆಪಾತಕರ ವಿರುದ್ಧ ಕ್ರಮ ಕೈಗೊಳ್ಳ ಬೇಕಾದ ಪೊಲೀಸ್ ವ್ಯವಸ್ಥೆ ನಿಷ್ಕ್ರಿಯವಾಗಿರುವುದು. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೇಕೆ, ಕಾಂಗ್ರೆಸ್ ಸರಕಾರವಿರುವ ನಮ್ಮ ರಾಜ್ಯದ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮು ಗಲಭೆ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವುದರಲ್ಲಿ ಪೊಲೀಸರು ಪೂರ್ವಾಗ್ರಹಪೀಡಿತರಾಗಿ ವರ್ತಿಸುತ್ತಿದ್ದಾರೆಂಬ ಆರೋಪಗಳಿವೆ.

ಹೀಗೆ, ಭಾರತದಾದ್ಯಂತ ಕೆಲವು ಸಮುದಾಯಗಳವರು ನಿರ್ಭಯವಾಗಿ ಓಡಾಡಲಿಕ್ಕಾಗದಂಥ ಆತಂಕ ಪರಿಸ್ಥಿತಿಯಲ್ಲಿ ಬದುಕನ್ನು ದೂಡುತ್ತಿದ್ದಾರೆ. ಇಂಥವರನ್ನು ಸ್ವತಂತ್ರರು ಎಂದು ಕರೆಯಬಹುದೆ? ಈ ಪರಿಯ ಅಪರಾಧಗಳ ಬಗ್ಗೆ ಇಲ್ಲಿಯವರೆಗೂ ಸುಮ್ಮನಿದ್ದ ನರೇಂದ್ರ ಮೋದಿಯವರು ತಮ್ಮ ದಿವ್ಯ ಮೌನಮುರಿದು ‘‘ಗೋರಕ್ಷಣೆ ನೆಪದಲ್ಲಿ ಕೊಲೆ, ಹಿಂಸಾಚಾರಗಳು ಸಲ್ಲದು’’ ಎಂದು ಮಹಾತ್ಮಾ ಗಾಂಧಿಯವರ ಹೆಸರನ್ನೆತ್ತಿ ಹೇಳಿದ್ದಾರೆ. ಆದರೆ ಹಿಂದುತ್ವವಾದಿಗಳು ಅವರ ಈ ಹಿತವಚನಕ್ಕೆ ಎಷ್ಟರಮಟ್ಟಿಗೆ ಕಿವಿಗೊಡುವರೆಂಬುದು ಅನುಮಾನಾಸ್ಪದವೇ. ಅಸುರೀಪ್ರವೃತ್ತಿಯನ್ನು ‘ಛೂ’ ಬಿಟ್ಟು ಬೀದಿಗಿಳಿಸಲಾಗಿದೆ. ಅವರನ್ನು ತಹಬಂದಿಗೆ ತರುವುದು ಕಷ್ಟ.

ಗೋ ರಕ್ಷಣೆ ಮತ್ತು ಗೋಮಾಂಸ ಸೇವನೆ ಜನರ ಭಾವನೆಗಳು ಮತ್ತು ಜೀವನಶೈಲಿಯನ್ನು ಅಲುಗಾಡಿಸುವಂಥ ಸೂಕ್ಷ್ಮ ವಿಷಯಗಳಾಗಿದ್ದು, ಈ ವಿವಾದ ದೇಶದಲ್ಲಿ ಎರಡು ವ್ಯತಿರಿಕ್ತ ಬಣಗಳನ್ನು ಸೃಷ್ಟಿಸಿದೆ. ಗೋ ರಕ್ಷಣೆಯನ್ನು ಹಿಂದೂ ಸಂಘಟನೆಗಳು ಕೈಗೆತ್ತಿಕೊಂಡಾಗಿನಿಂದ ಗೋವುಗಳ ಖರೀದಿ, ಮಾರಾಟ ಮತ್ತು ಸಾಗಣೆ ರೈತಾಪಿ ಜನರಿಗೆ ತ್ರಾಸದಾಯಕವಾಗಿ ಪರಿಣಮಿಸಿದೆ. ಗೋ ಸಂಬಂಧಿತ ಹಲ್ಲೆ, ಗಲಭೆಗಳು, ಕೊಲೆಗಳು, ಬೆದರಿಕೆಗಳು ಹೆಚ್ಚುತ್ತಿವೆ. ಕೆಲವು ರಾಜಕಾರಣಿಗಳು ಹಿಂಸೆ ಪ್ರಚೋದಿಸುವಂಥ ಮಾತುಗಳನ್ನಾಡುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಬಾಧಿತ ಮುಸ್ಲಿಮರು ಮತ್ತು ದಲಿತರು ಜೀವಭಯದಿಂದ ಓಡಾಡುವಂತಾಗಿದೆ. ಇನ್ನು ಕೆಲವು ಕೇಸರಿ ಸಂಘಟನೆಗಳು ಶಿಕ್ಷಣ, ಪ್ರೀತಿ-ಪ್ರೇಮ, ಮದುವೆ-ಮಕ್ಕಳು ಇಂಥ ವೈಯಕ್ತಿಕ ವಿಷಯಗಳಲ್ಲೂ ನೀತಿ ಪಾಠ ಹೇಳಲು ಶುರು ಮಾಡಿರುವುದು, ಅನೈತಿಕ ಪೊಲೀಸ್‌ಗಿರಿ ನಡೆಸಿರುವುದು ಇವೇ ಮೊದಲಾದಂಥ ಬೆಳವಣಿಗೆಗಳಿಂದಾಗಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆದರಿಕೆಯುಂಟಾಗಿದೆ.

ಇನ್ನು, ಒಕ್ಕೂಟ ವ್ಯವಸ್ಥೆಗೆ ಧಕ್ಕೆಯುಂಟುಮಾಡಲಿರುವ ಶಂಕೆಗಳು ಹಲವಾರು. ಜಿಎಸ್‌ಟಿಯಿಂದ ರಾಜ್ಯಗಳ ಆರ್ಥಿಕ ಸ್ವಾಯತ್ತ ಮುಕ್ಕಾಗಲಿದೆ ಎಂಬ ಶಂಕೆ ನಿವಾರಣೆಯಾಗಿಲ್ಲ. ಕಾಲವೇ ಇದಕ್ಕೆ ಉತ್ತರವೇನೋ? ಏಕ ತೆರಿಗೆ, ಏಕ ಭಾಷೆ, ಏಕಪಕ್ಷದ ಆಡಳಿತ ಇವೆಲ್ಲವೂ ಒಕ್ಕೂಟ ವ್ಯವಸ್ಥೆಯ ಸ್ವಾಯತ್ತವನ್ನು ಕಾಡುತ್ತಿರುವ ಗುಮ್ಮಗಳು. ಹಿಂದಿ ಹೇರಿಕೆಗೆ ನಡೆದಿರುವ ಪ್ರಯತ್ನಗಳು, ಅಭಿವೃದ್ಧಿ ಬೇಕಾದರೆ ನಮ್ಮನ್ನು ಅನುಸರಿಸಿ ಎಂದು ಕೇಂದ್ರ ಸಚಿವರು ರಾಜ್ಯಗಳಿಗೆ ಕಿವಿಮಾತು ಹೇಳುತ್ತಿರುವುದು ಇತ್ಯಾದಿಗಳು ಶಂಕೆಗಳು ನಿಜವಾಗುವುದರ ಕೆಟ್ಟ ಸೂಚನೆಗಳಾಗಿವೆ.

ರಾಜ್ಯ ಎದುರಿಸುತ್ತಿರುವ ಕಾವೇರಿ, ಮಹಾದಾಯಿ ನದಿ ನೀರು ವಿವಾದಗಳು ಮತ್ತಿತರ ಜನತಾ ಸಮಸ್ಯೆಗಳನ್ನು ಪರಿಹರಿಸುವ ನೈಜ ಜನಪರ ಕಳಕಳಿ ಯಾವ ಪಕ್ಷಕ್ಕೂ ಇಲ್ಲ. ಎಲ್ಲ ಪಕ್ಷಗಳೂ ಸಮಸ್ಯೆಗಳಿಂದ ರಾಜಕೀಯ ಲಾಭ ಪಡೆಯುವುದರಲ್ಲೇ ಮಗ್ನವಾಗಿವೆ. ಮಹಾದಾಯಿಯನ್ನೇ ತೆಗೆದುಕೊಳ್ಳಿ. ಬಿಜೆಪಿ ಕಾಂಗ್ರೆಸ್‌ನ ಮೇಲೆ, ಕಾಂಗ್ರೆಸ್ ಬಿಜೆಪಿಯ ಮೇಲೆ ಗೋವಾದ ಮನಒಲಿಸುವ ಹೊಣೆಯನ್ನು ವರ್ಗಾಯಿಸುತ್ತಿವೆ.

ಗೋವೆ ಮುಖ್ಯಮಂತ್ರಿಗಳ ಮನ ಒಲಿಸುವುದರಿಂದ ಸಮಸ್ಯೆ ಬಗೆಹರಿಯುವುದಾದಲ್ಲಿ ಏಕೆ ಬಿಜೆಪಿ/ಕಾಂಗ್ರೆಸ್ ಇಂಥ ಕೆಲಸ ಮಾಡುತ್ತಿಲ್ಲ? ಪರಿಸ್ಥಿತಿ ಹೀಗಿರುವಾಗ ದೇವೇಗೌಡರ ಎಚ್ಚರಿಕೆಯನ್ನು ರಾಜಕೀಯ ತಂತ್ರ ಎಂದು ಸುಲಭವಾಗಿ ತಳ್ಳಿಹಾಕಲಾಗದು. ಜಾತಿ, ಧರ್ಮ, ಗೋರಕ್ಷಣೆ, ಆಹಾರ ಪದ್ಧತಿ, ಶಿಕ್ಷಣ, ಅನೈತಿಕ ಪೊಲೀಸಗಿರಿ, ಆತ್ಮಹತ್ಯೆಗೆ ಶರಣಾಗುತ್ತಿರುವ ಪರಾಧೀನ ರೈತರು, ಕಾಶ್ಮೀರದಲ್ಲಿ ಉಲ್ಬಣಿಸುತ್ತಿರುವ ಹಿಂಸಾಚಾರ -ಹೀಗೆ ಜನತೆ ಒಂದಲ್ಲ ಒಂದು ರೀತಿಯಲ್ಲಿ ಸ್ವಾತಂತ್ರ್ಯದಿಂದ ವಂಚಿತರಾಗಿ ‘ನಾಟ್ ಇನ್ ಮೈ ನೇಮ್’ ಎಂಬಂಥ ಆತಂಕದಲ್ಲಿ ಬದುಕನ್ನು ದೂಡುತ್ತಿರುವ ಇಂದಿನ ಪರಿಸ್ಥಿತಿ ತುರ್ತುಪರಿಸ್ಥಿತಿಗಿಂತ ಹೇಗೆ ಭಿನ್ನ?

ಈ ಅಂಕಣ ಬರಹ ಮುಗಿಯುವ ಹಂತದಲ್ಲಿ ಬಂದಿರುವ ಜಾರ್ಖಂಡ್ ಸುದ್ದಿ: ‘‘ಗೋಮಾಂಸ ಸಾಗಿಸುತ್ತಿರುವ ಶಂಕೆಯಿಂದ ಮುಹಮ್ಮದ್ ಅಲೀಮುದ್ದಿನ್ ಎಂಬವನ ಹತ್ಯೆ.’’ ಶಂಕಿಸಿದ ಜನರ ಗುಂಪಿನ ಹೊಡೆತಬಡಿತಗಳಿಂದ ಘಟಿಸಿರುವ ಮತ್ತೊಂದು ವಿಚಾರಣಾರಹಿತ ಕೊಲೆ ಇದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)