varthabharthi

ಪ್ರಚಲಿತ

ಸಂಘ ಪರಿವಾರದ ಹೊಸ ಅವತಾರಗಳು

ವಾರ್ತಾ ಭಾರತಿ : 3 Jul, 2017
ಸನತ್ ಕುಮಾರ್ ಬೆಳಗಲಿ

ಗೋವೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಧ್ಯಪ್ರದೇಶದ ಸಾಧ್ವಿ ಸರಸ್ವತಿ ಎಂಬ ಬಾಲಕಿ, ಮುಂದಿನ ರಕ್ಷಾ ಬಂಧನದ ವೇಳೆಗೆ ಸಹೋದರರು ತಲವಾರ್‌ಗಳನ್ನು(ಖಡ್ಗ) ಕಾಣಿಕೆಯಾಗಿ ನೀಡಬೇಕು ಎಂದು ಬಹಿರಂಗವಾಗಿ ಕರೆ ನೀಡಿದರು. ರಾಖಿ ಕಟ್ಟಿದ ಸಹೋದರಿಗೆ ಚಿನ್ನ, ಬೆಳ್ಳಿ ಬೇಡ. ತಮ್ಮ ಮೇಲೆ ಎರಗುವ ಅನ್ಯಧರ್ಮೀಯರನ್ನು ಎದುರಿಸಲು ತಲವಾರ್ ನೀಡಬೇಕು ಎಂದು ಹೇಳಿದರು. ಇದೇ ಸಾಧ್ವಿ ಬೆಳಗಾವಿಯಲ್ಲಿ ಮಾತನಾಡುತ್ತಾ, ದನದ ಮಾಂಸ ತಿನ್ನುವವರನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಬೇಕು ಎಂದು ಆಕ್ರೋಶದಿಂದ ಹೇಳಿದಳು. ಹಿಂದೂಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮನೆಯಲ್ಲಿ ಆಯುಧ ಇಟ್ಟುಕೊಳ್ಳಬೇಕು ಎಂದು ಈಕೆ ಬಹಿರಂಗವಾಗಿ ಹೇಳಿದಳು. ಈ ಮಾತಿಗೆ ಬರಬೇಕಾದಷ್ಟು ಪ್ರತಿರೋಧ ಬರಲಿಲ್ಲ.


ಎಲ್ಲರೂ ಶಾಂತಿ-ಸೌಹಾರ್ದದಿಂದ, ಪ್ರೀತಿ-ವಿಶ್ವಾಸದಿಂದ ಬದುಕಬೇಕೆಂದು ಕರೆ ನೀಡುವ ಸಾವಿರಾರು ಸಂತರು ನಮ್ಮ ದೇಶದಲ್ಲಿ ಆಗಿ ಹೋಗಿದ್ದಾರೆ. ಸಹನೆ, ಅಹಿಂಸೆ, ಅಪರಿಗ್ರಹ ಬೋಧಿಸಿದ ಬುದ್ಧ, ಬಸವಣ್ಣ, ಮಹಾವೀರ ಇವರೆಲ್ಲ ನೀಡಿದ ಉಪದೇಶದ ಬೆಳಕು ನಮ್ಮಲ್ಲಿ ಇನ್ನೂ ಇದೆ. ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಜಗತ್ತಿನ ಎಲ್ಲಾ ಜಾತಿ, ಮತಗಳ ಜನರನ್ನು ಸೋದರ, ಸೋದರಿಯರೆಂದು ಸಂಬೋಧಿಸಿದ ಸ್ವಾಮಿ ವಿವೇಕಾನಂದರು ಜನಿಸಿದ ನೆಲವಿದು. ಕುಲಕುಲವೆಂದು ಹೊಡೆದಾಡದಿರಿ, ಕುಲದ ನೆಲವನ್ನೇನಾದರೂ ಬಲ್ಲಿರಾ ಎಂದು ಕನಕದಾಸರು ಕೇಳಿದರು. ಇಂತಹ ಮಹಾನ್ ಚೇತನಗಳು ಜನಿಸಿದ ಭೂಮಿಯಲ್ಲಿ ಬಹಿರಂಗವಾಗಿ ಹಿಂಸೆಗೆ ಕರೆ ಕೊಡುವ, ತಲವಾರ್‌ಗಳನ್ನು ಹಿಡಿಯಬೇಕೆಂದು ಪ್ರಚೋದಿಸುವ ಸ್ವಾಮಿಗಳು ಮತ್ತು ಸಾಧ್ವಿಗಳು ಹುಟ್ಟಿಕೊಂಡಿದ್ದಾರೆ. ಅಮಾಯಕ ಹೆಣ್ಣುಮಕ್ಕಳಿಗೆ ಕೇಸರಿ ಬಟ್ಟೆ ಉಡಿಸಿ, ಅವರ ಮೂಲಕ ಸಾಮಾಜಿಕ ಶಾಂತಿ ಮತ್ತು ನೆಮ್ಮದಿ ಕದಡುವ ಯತ್ನ ನಡೆದಿದೆ.

ಬಾಯಿ ತೆರೆದರೆ, ಬೆಂಕಿಯನ್ನು ಉಗುಳುವ ಇಂತಹ ಸನ್ಯಾಸಿ, ಸಾಧ್ವಿಗಳ ಹಾವಳಿ 80ರ ದಶಕದ ಕೊನೆಯಲ್ಲಿ ಆರಂಭವಾಯಿತು. ಅಯೋಧ್ಯೆಯ ರಾಮಜನ್ಮ ಭೂಮಿ ಚಳವಳಿಯಲ್ಲಿ ಹೆಸರು ಮಾಡಿದ ಉಮಾ ಭಾರತಿಯವರು ಈಗ ಕೇಂದ್ರ ಸಚಿವೆಯಾಗಿದ್ದಾರೆ. ಅವರೊಂದಿಗೆ ಪ್ರಚೋದನಾಕಾರಿ ಪ್ರವಚನ ನೀಡುತ್ತಿದ್ದ ಸಾಧ್ವಿ ರಿತಾಂಬರಾ ಅವರು ಉತ್ತರ ಭಾರತಕ್ಕೆ ಸೀಮಿತಗೊಂಡಿದ್ದಾರೆ. ಪ್ರಜ್ಞಾ ಸಿಂಗ್ ಎಂಬ ಸನ್ಯಾಸಿನಿ ಜೈಲಿಗೆ ಹೋಗಿ, ಮೋದಿಯವರು ಅಧಿಕಾರಕ್ಕೆ ಬಂದ ನಂತರ ಕ್ಲೀನ್ ಚಿಟ್ ಆಗಿ ಹೊರಬಂದಿದ್ದಾರೆ. ಸಂಜೋತಾ ಎಕ್ಸ್‌ಪ್ರೆಸ್ ಬಾಂಬ್ ಸ್ಫೋಟದಲ್ಲಿ ಬಂಧಿಸಲ್ಪಟ್ಟ ಅಸೀಮಾನಂದ ಕೂಡ ಬಿಡುಗಡೆಯ ಹಾದಿಯಲ್ಲಿದ್ದಾರೆ. ಆದರೆ ಈಗ ಸಂಘ ಪರಿವಾರದ ಪ್ರಯೋಗಾಲಯದಲ್ಲಿ ಹೊಸ ಸಾಧ್ವಿ, ಸನ್ಯಾಸಿಗಳು ಹುಟ್ಟಿಕೊಂಡಿದ್ದಾರೆ.

ಬುದ್ಧ, ಬಸವಣ್ಣ ಮತ್ತು ಬಾಬಾ ಸಾಹೇಬರು ನೀಡಿದ ಬೆಳಕಿನ ಜ್ಯೋತಿ ನಂದಿಸಲು ಹೊರಟಿರುವ ಶಕ್ತಿಗಳು ಜಾತ್ಯತೀತ, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡಲು ಸಂಕಲ್ಪ ತೊಟ್ಟಿವೆ. ಇತ್ತೀಚೆಗೆ ಗೋವೆಯ ಪಣಜಿಯಲ್ಲಿ ನಡೆದ ಹಿಂದೂ ಪರ ಸಂಘಟನೆಗಳ ರಹಸ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಗೋವೆಯ ಸಭೆಯನ್ನು ಸನಾತನ ಸಂಸ್ಥೆ ಆಯೋಜಿಸಿತ್ತು. ಇದೇ ಸಂದರ್ಭದಲ್ಲಿ ಬೆಳಗಾವಿಯ ಶಾಸ್ತ್ರಿನಗರದ ಗುಜರಾತ್ ಭವನದಲ್ಲಿ ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗ ದಳಗಳು ಜಂಟಿಯಾಗಿ ಕಾರ್ಯಕರ್ತರ ಸಭೆ ಏರ್ಪಡಿಸಿದ್ದವು.

ಈ ಎರಡೂ ಸಭೆಗಳ ಗುರಿಯೊಂದೇ, ಹೆಸರು ಬೇರೆ. ಗೋವೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಸನಾತನ ಸಂಸ್ಥೆ ಅತ್ಯಂತ ಆಕ್ರಮಣಕಾರಿ ಸಂಸ್ಥೆಯೆಂದು ಹೆಸರಾಗಿದೆ. ನರೇಂದ್ರ ದಾಭೋಳ್ಕರ್ ಮತ್ತು ಗೋವಿಂದ ಪನ್ಸಾರೆ ಹತ್ಯೆ ಆರೋಪವನ್ನು ಸಂಸ್ಥೆ ಎದುರಿಸುತ್ತಿದೆ. ಧಾರವಾಡದಲ್ಲಿ ನಡೆದ ಕಲಬುರ್ಗಿಯವರ ಹತ್ಯೆಗೂ ಮತ್ತು ಮಹಾರಾಷ್ಟ್ರದಲ್ಲಿ ನಡೆದ ಹತ್ಯೆಗಳಿಗೂ ಸಂಬಂಧ ಇದೆಯೆಂದು ಹೇಳಲಾಗುತ್ತಿದೆ.

ಸನಾತನ ಸಂಸ್ಥೆಗೂ ಮತ್ತು ತಮಗೂ ಸಂಬಂಧವಿಲ್ಲ ಎಂದು ಹೇಳುತ್ತಾ ರಹಸ್ಯವಾಗಿ ಸಂಬಂಧ ಇರಿಸಿಕೊಂಡಿರುವ ಸಂಘ ಪರಿವಾರ ಕೇಂದ್ರದಲ್ಲಿರುವ ಬಿಜೆಪಿ ಸರಕಾರದ ಮೂಲಕ ಅದಕ್ಕೆ ರಕ್ಷಣೆ ಕೊಡಿಸುತ್ತಾ ಬಂದಿದೆ. ಸನಾತನ ಸಂಸ್ಥೆಯ ಮೇಲೆ ಯಾವ ಆರೋಪವೂ ಇಲ್ಲವೆಂದು ಕೇಂದ್ರ ಗೃಹ ಸಚಿವರು ಸಮರ್ಥಿಸಿಕೊಳ್ಳುತ್ತಾ ಬಂದಿದ್ದಾರೆ. ಗೋವೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಧ್ಯಪ್ರದೇಶದ ಸಾಧ್ವಿ ಸರಸ್ವತಿ ಎಂಬ ಬಾಲಕಿ, ಮುಂದಿನ ರಕ್ಷಾ ಬಂಧನದ ವೇಳೆಗೆ ಸಹೋದರರು ತಲವಾರ್‌ಗಳನ್ನು(ಖಡ್ಗ) ಕಾಣಿಕೆಯಾಗಿ ನೀಡಬೇಕು ಎಂದು ಬಹಿರಂಗವಾಗಿ ಕರೆ ನೀಡಿದರು.

ರಾಖಿ ಕಟ್ಟಿದ ಸಹೋದರಿಗೆ ಚಿನ್ನ, ಬೆಳ್ಳಿ ಬೇಡ. ತಮ್ಮ ಮೇಲೆ ಎರಗುವ ಅನ್ಯಧರ್ಮೀಯರನ್ನು ಎದುರಿಸಲು ತಲವಾರ್ ನೀಡಬೇಕು ಎಂದು ಹೇಳಿದರು. ಇದೇ ಸಾಧ್ವಿ ಬೆಳಗಾವಿಯಲ್ಲಿ ಮಾತನಾಡುತ್ತಾ, ದನದ ಮಾಂಸ ತಿನ್ನುವವರನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಬೇಕು ಎಂದು ಆಕ್ರೋಶದಿಂದ ಹೇಳಿದಳು. ಹಿಂದೂಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮನೆಯಲ್ಲಿ ಆಯುಧ ಇಟ್ಟುಕೊಳ್ಳಬೇಕು ಎಂದು ಈಕೆ ಬಹಿರಂಗವಾಗಿ ಹೇಳಿದಳು.

ಈ ಮಾತಿಗೆ ಬರಬೇಕಾದಷ್ಟು ಪ್ರತಿರೋಧ ಬರಲಿಲ್ಲ. 2020ರ ವೇಳೆಗೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಗೋವೆಯಲ್ಲಿ ನಡೆದ ಸಮಾವೇಶದಲ್ಲಿ ನಿರ್ಣಯ ಅಂಗೀಕರಿಸಲಾಯಿತು. ಈ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ದೇಶದ ಇತರ ಕಡೆಗಳಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು. ಹಿಂದೂಗಳ ಮೇಲೆ ಈ ದೇಶದಲ್ಲಿ ನಿತ್ಯವೂ ದೌರ್ಜನ್ಯ ನಡೆದಿದೆ ಎಂದು ಖಂಡಿಸಲಾಯಿತು.

ರಕ್ಷಾ ಬಂಧನಕ್ಕೆ ತಲವಾರ್ ನೀಡಲು ಬಹಿರಂಗವಾಗಿ ಕರೆ ನೀಡುವ ಈ ಸಾಧ್ವಿ ನೇರವಾಗಿ ಒಂದು ಸಮುದಾಯದ ವಿರುದ್ಧ ವಿಷ ಕಾರಿದರು. ಆದರೆ ಈ ದೇಶದಲ್ಲಿ ನಿತ್ಯವೂ ಜಾತಿ, ಮತ, ಭೇದವಿಲ್ಲದೇ ಎಲ್ಲಾ ಸಮುದಾಯಗಳ ಮಹಿಳೆಯರು ಅತ್ಯಾಚಾರಕ್ಕೆ ಗುರಿಯಾಗುತ್ತಿದ್ದಾರೆ. ಅತ್ಯಾಚಾರ ಮತ್ತು ದೌರ್ಜನ್ಯ ಮಾಡುವವರೆಲ್ಲ ಒಂದೇ ಸಮುದಾಯಕ್ಕೆ ಸೇರಿದವರಲ್ಲ. ದಿಲ್ಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಹಿಂದೂ ಯುವತಿಯನ್ನು ಹಿಂದೂ ಯುವಕರೇ ವಿಕೃತವಾಗಿ ಹಿಂಸಿಸಿ ಕೊಂದು ಹಾಕಿದರು.

ಇಲ್ಲಿ ತಲವಾರ್‌ನಿಂದ ಯಾರನ್ನು ಯಾರು ಕೊಚ್ಚಿ ಹಾಕಬೇಕು? ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ 2006ರಲ್ಲಿ ಬೂತಮಾಂಗೆ ಕುಟುಂಬದ ದಲಿತ ತಾಯಿ, ಮಗಳನ್ನು ನಡುರಸ್ತೆಯಲ್ಲಿ ಎಳೆದು ತಂದು ಸಾಮೂಹಿಕವಾಗಿ ಅತ್ಯಾಚಾರ ಮಾಡಿ, ಕೊಚ್ಚಿ ಹಾಕಿದರು. ಇದನ್ನು ತಡೆಯಲು ಹೋದ, ಆಕೆಯ ಪುತ್ರನನ್ನು ಕೊಂದರು. ಕೊಂದವರೆಲ್ಲ, ಮೇಲ್ಜಾತಿಯ ಹಿಂದೂಗಳು. ಅವರಲ್ಲಿ ಕೆಲವರು ಬಿಜೆಪಿ ಕಾರ್ಯಕರ್ತರು. ಈ ಪ್ರಕರಣದ ಆರೋಪಿಗಳಲ್ಲಿ ಕೆಲವರು ದೋಷ ಮುಕ್ತರಾಗಿ ಹೊರ ಬಂದಿದ್ದಾರೆ.

ಈ ಸಾಧ್ವಿಯಾಗಲಿ, ಈಕೆಗೆ ಖಾವಿ ಬಟ್ಟೆ ತೊಡಿಸಿ ಭಾಷಣ ಮಾಡಿಸಿದ ಸಂಘ ಪರಿವಾರದ ನಾಯಕರಾಗಲಿ ದಲಿತ ಮಹಿಳೆ ಮೇಲೆ ನಿತ್ಯವೂ ನಡೆಯುತ್ತಿರುವ ಅತ್ಯಾಚಾರವನ್ನು ಎಂದಾದರೂ ಖಂಡಿಸಿದ್ದಾರೆಯೇ? ದನದ ಚರ್ಮ ಸುಲಿದರೆಂದು ಗುಜರಾತ್‌ನ ಉನಾದಲ್ಲಿ ದಲಿತರಿಗೆ ಚಿತ್ರಹಿಂಸೆ ನೀಡಿದವರು ಅನ್ಯಧರ್ಮೀಯರೇ? ದನದ ಮಾಂಸ ತಿಂದರೆಂದು ಹರ್ಯಾಣದಲ್ಲಿ ದಲಿತರನ್ನು ಕೊಂದವರು ಅನ್ಯಧರ್ಮೀಯರಲ್ಲ. ತಾವು ಮಾಡುತ್ತಿರುವ ಈ ಕಗ್ಗೊಲೆಗಳನ್ನು ಮುಚ್ಚಿಕೊಳ್ಳಲು ಹಿಂದೂಗಳು ಆಯುಧ ಹಿಡಿಯಬೇಕೆಂದು ಇವರು ಕರೆ ನೀಡುತ್ತಿದ್ದಾರೆ. ಈ ಆಯುಧಗಳನ್ನು ಇವರು ಬಳಸುವುದು ದಲಿತರ ವಿರುದ್ಧ ಎಂಬುದು ಎಲ್ಲರಿಗೂ ಗೊತ್ತಿದೆ.

ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡುವ ಇವರ ಹುನ್ನಾರವನ್ನು 60 ವರ್ಷಗಳ ಹಿಂದೆಯೇ ತಿಳಿದುಕೊಂಡು ಅದನ್ನು ವಿಫಲಗೊಳಿಸಿದ ಬಾಬಾ ಸಾಹೇಬರು, ಭಾರತ ಒಂದು ವೇಳೆ ಹಿಂದೂ ರಾಷ್ಟ್ರವಾದರೆ, ಅದು ದೇಶಕ್ಕೆ ಆಗುವ ಮಹಾ ವಿಪತ್ತು ಎಂದು ಎಚ್ಚರಿಕೆ ನೀಡಿದ್ದರು. ಹಿಂದೂಗಳು ಏನೇ ಹೇಳಲಿ, ಹಿಂದೂ ಧರ್ಮ ಸ್ವಾತಂತ್ರ್ಯ, ಸಮಾನತೆ ಮತ್ತು ಪ್ರಜಾಪ್ರಭುತ್ವದ ಶತ್ರುವಾಗಿದೆ ಎಂದು ಅವರು ಹೇಳಿದ್ದರು. ಯಾವುದೇ ಬೆಲೆ ತೆತ್ತಾದರೂ ಹಿಂದೂ ರಾಷ್ಟ್ರ ಸ್ಥಾಪನೆಯ ಯತ್ನವನ್ನು ತಡೆಯಬೇಕೆಂದು ಅಂಬೇಡ್ಕರ್ ಕರೆ ನೀಡಿದ್ದರು.

ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಹಿಂದೂ ರಾಷ್ಟ್ರಕ್ಕೆ ಕರೆ ಕೊಡುವ, ಎಲ್ಲರೂ ತಲವಾರ್ ಹಿಡಿಯಬೇಕು ಎನ್ನುವ ಸಾಧ್ವಿ, ಸನ್ಯಾಸಿಯರ ಸಂಖ್ಯೆ ಹೆಚ್ಚಾಗಿದೆ. ಈ ಕರೆಗಳಿಗೆ ಅಷ್ಟು ಮಹತ್ವ ಕೊಡಬೇಕಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಇವು ಭಾಷಣಗಳಾಗಿ ಉಳಿದಿಲ್ಲ. ನಮ್ಮ ಕಣ್ಣು ಮುಂದೆ ನಡೆದ ದಾಭೋಳ್ಕರ್, ಪನ್ಸಾರೆ ಮತ್ತು ಕಲಬುರ್ಗಿ ಹತ್ಯೆಗಳನ್ನು ನೋಡಿದ್ದೇವೆ. ಇವರಿಗೆ ರಕ್ಷಣೆ ನೀಡುವವರು ಸರಕಾರದಲ್ಲೂ ಇರುವುದರಿಂದ ಇವರ ಆರ್ಭಟ ಹೆಚ್ಚಾಗುತ್ತಿದೆ.

ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ದೇಶಕ್ಕೆ ನೀಡಿದ ಭರವಸೆಗಳೆಲ್ಲ ಹುಸಿಯಾಗುತ್ತಿರುವಾಗ, ಜನರ ಗಮನ ಬೇರೆಡೆ ಸೆಳೆಯಲು ಕೋಮು ಆಧಾರದಲ್ಲಿ ಜನರನ್ನು ವಿಭಜಿಸುವ ಹುನ್ನಾರಗಳು ನಡೆದಿವೆ. ಏಕ ಧರ್ಮ, ಏಕ ಭಾಷೆ, ಏಕ ಸಂಸ್ಕೃತಿ ಹೆಸರಿನಲ್ಲಿ ಬಹುಮುಖಿ ಭಾರತವನ್ನು ನಾಶ ಮಾಡುವ ಸಂಚಿನ ಭಾಗವಾಗಿ ಈ ಸಾಧ್ವಿ, ಸನ್ಯಾಸಿನಿಗಳು ದೇಶದಲ್ಲಿ ಮತ್ತೆ ಸಂಚರಿಸುತ್ತಿದ್ದಾರೆ.

ನಿತ್ಯವೂ ವಿಮಾನದಲ್ಲಿ ಸಂಚರಿಸುವ, ಐಷಾರಾಮಿ ಜೀವನ ನಡೆಸುವ ಈ ಸನ್ಯಾಸಿನಿಗಳ ಖರ್ಚುವೆಚ್ಚವನ್ನು ಕಾರ್ಪೊರೇಟ್ ಬಂಡವಾಳಶಾಹಿಗಳು ನೋಡಿಕೊಳ್ಳುತ್ತಿದ್ದಾರೆ. ಗೋ ಹತ್ಯೆ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿ, ಮತಾಂತರದ ಹೆಸರಿನಲ್ಲಿ ಕ್ರೈಸ್ತರ ಮೇಲೆ ನಡೆಯುತ್ತಿರುವ ಹಲ್ಲೆಗಳು, ಕೇರಳ ಮುಂತಾದ ಕಡೆ ಕಮ್ಯುನಿಸ್ಟರ ಮೇಲೆ ನಡೆಯುತ್ತಿರುವ ಹಿಂಸಾಚಾರಗಳು ಇವೆಲ್ಲ ಆಕಸ್ಮಿಕವಲ್ಲ. ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಮುಸಲ್ಮಾನರು, ಕ್ರೈಸ್ತರು ಮತ್ತು ಕಮ್ಯುನಿಸ್ಟರು ಅಡ್ಡಿಯಾಗಿದ್ದಾರೆ. ಅವರೇ ನಮ್ಮ ಪ್ರಧಾನ ಶತ್ರುಗಳು ಎಂದು ಆರೆಸ್ಸೆಸ್ ಸರಸಂಘ ಚಾಲಕ ಮಾಧವ ಗೋಳ್ವಾಲ್ಕರ್ ಹಿಂದೆ ಹೇಳಿದ್ದರು. ಈ ಪ್ರಧಾನ ಶತ್ರುಗಳ ವಿರುದ್ಧ ಈಗ ದಾಳಿ ಆರಂಭವಾಗಿದೆ.

ಕರ್ನಾಟಕದಂತಹ ರಾಜ್ಯದಲ್ಲಿ ವೈದಿಕ ಪುರೋಹಿತಶಾಹಿಯನ್ನು ಧಿಕ್ಕರಿಸಿ ಎದ್ದು ನಿಂತ ಲಿಂಗಾಯತ ಧರ್ಮವನ್ನು ಮುಗಿಸುವ ಸಂಚು ನಡೆದಿದೆ. ಬಸವ ಕ್ರಾಂತಿಯ ಆಶಯಗಳನ್ನು ಮಣ್ಣುಗೂಡಿಸಲು ಉತ್ತರ ಭಾರತದ ಸಾಧ್ವಿ, ಸನ್ಯಾಸಿಗಳು ಪದೇ ಪದೇ ಈ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್‌ನಂತಹ ಜಾತ್ಯತೀತ ಪಕ್ಷಗಳಿಂದ ನಿರೀಕ್ಷಿತ ಪ್ರತಿರೋಧ ಕಂಡು ಬರುತ್ತಿಲ್ಲ. ಭಾರತ ಈಗ ಅಪಾಯದಲ್ಲಿದೆ. ಬುದ್ಧ, ಬಸವಣ್ಣ, ಅಂಬೇಡ್ಕರ್ ಮತ್ತು ಗಾಂಧಿ ನೀಡಿದ ಜೀವಪರ ಸಂದೇಶಗಳು ಮಾತ್ರ ಈ ದೇಶವನ್ನು ರಕ್ಷಿಸಲು ಸಾಧ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)