varthabharthi

ಅನುಗಾಲ

‘ಸಂಚಯ’ದ ಪ್ರಹ್ಲಾದ್

ವಾರ್ತಾ ಭಾರತಿ : 6 Jul, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಸುಮಾರು ಮೂವತ್ತು ವರ್ಷಗಳ ಅನಂತರ (1986-2016) ಡಿ.ವಿ. ಪ್ರಹ್ಲಾದ್ ಅವರು ತಮ್ಮ ‘ಸಂಚಯ’ ನಿಯತಕಾಲಿಕ ಸಾಹಿತ್ಯ ಪತ್ರಿಕೆಯನ್ನು ನಿಲ್ಲಿಸಿದ್ದಾರೆ. 2016ರ ಕೊನೆಗೆ ಬಂದ ಭಗವದ್ಗೀತೆಯ ಕುರಿತ 110-112ನೆ ಸಂಯುಕ್ತ ಸಂಚಿಕೆಯೇ ‘ಸಂಚಯ’ದ ಹಂಸಗೀತೆಯೂ ಆಯಿತು. ಕೊನೆಯ ಮತ್ತು ಅತ್ಯಂತ ಸಂಕ್ಷಿಪ್ತ ಸಂಪಾದಕೀಯದಲ್ಲಿ ಅವರು ಹೀಗೆ ಬರೆದರು:

‘‘ಸಂಚಿಕೆಯೊಂದಿಗೆ ‘ಸಂಚಯ’ದ ಸಾಹಿತ್ಯ ಯಾನವೂ ಮುಗಿಯಲಿದೆ. ಇಪ್ಪತ್ತೊಂಬತ್ತು ವರ್ಷಗಳ ನಿರಂತರತೆಗೆ ಈಗ ಪೂರ್ಣ ವಿರಾಮ. ಗೆಳೆಯರ ಗುಂಪಿನ ಚಟುವಟಿಕೆಯಾಗಿ ರೂಪುಗೊಂಡರೂ ಕಾಲಾಂತರದಲ್ಲಿ ‘ಸಂಚಯ’ದ ವಜನು ನಿಂತಿದ್ದು ನನ್ನ ಹೆಗಲ ಮೇಲೆ. ಇಷ್ಟು ವರ್ಷಗಳು ಹೊತ್ತು ಕುಣಿದ, ಸಂಭ್ರಮಿಸಿದ ಈ ಕಾವಡಿಯನ್ನು ಹೆಗಲಿನಿಂದ ಈಗ ಇಳಿಸಬೇಕೆನ್ನಿಸಿದೆ. ಮಾಡಿದ್ದೇ ಮಾಡುವ ಯಾಂತ್ರಿಕ ಭಾವ ಮೂಡಿದೆ; ಅದಕ್ಕೆ ಸಾಕು ಅನ್ನಿಸಿದೆ. ‘ಜಗತ್ತಿನ ಯಾವುದೂ ಅಮರವಲ್ಲ’ ಎನ್ನುವ ಮಾತು ಮನಸ್ಸಿಗೆ ಬರುತ್ತಿದೆ. ಗಾಣ ಸುತ್ತಿದ ಹಾಗೆ ಯಾಂತ್ರಿಕವಾಗಿ ಪತ್ರಿಕೆ ಪ್ರಕಟಿಸುವುದು ನನ್ನ ಆಯ್ಕೆಯಲ್ಲ. ಈ ಕೆಲಸ ಕೊಟ್ಟ ಹೆಮ್ಮೆ, ಖುಷಿ, ಸಾರ್ಥಕತೆ ದೊಡ್ಡದು. ಹಿಂದಿರುಗಿ ನೋಡಿಕೊಂಡಾಗ ಅನೇಕ ಒಳ್ಳೆಯ ಕೆಲಸಗಳು ಸಾಧ್ಯವಾದ ಬಗ್ಗೆ ಒಂದು ಸಾರ್ಥಕ ಭಾವ....’’

 ಕನ್ನಡದ ಆರು ಕೋಟಿ ಜನಕ್ಕೆ ‘ಸಂಚಯ’ ಪರಿಚಯವಿರಲಿಕ್ಕಿಲ್ಲ. ದಿವಂಗತ ರಾ.ಶಿ. ಅವರ ಕೊರವಂಜಿ ಪತ್ರಿಕೆಯ ಕೊನೆಯ ಸಂಚಿಕೆಯಲ್ಲಿ ಒಂದು ವ್ಯಂಗ್ಯ ಚಿತ್ರವಿತ್ತು: ಹೋಗಿ ಬರುತ್ತೇನೆಂದು ವಿದಾಯ ಹೇಳುವ ಹೆಣ್ಣಿಗೆ ತಂದೆ ‘‘ಅರೆ ನೀನಿಲ್ಲೇ ಈ ವರೆಗೂ ಇದ್ದೆಯಾ?’’ ಎಂದು ಕೇಳುವ ಚಿತ್ರ. ಹಾಗೆಯೇ ಅನೇಕರಿಗೆ ‘ಸಂಚಯ’ ಎಂಬೊಂದು ಕನ್ನಡ ಸಾಹಿತ್ಯ, ಸಂಸ್ಕೃತಿ ಪತ್ರಿಕೆ ಕನ್ನಡದ ನೆಲದಲ್ಲಿ ಇತ್ತೇ ಎಂಬ ಸಂಶಯ ಬಾರದಿರದು. ಪ್ರಹ್ಲಾದ್ ತಮ್ಮ ಕೆಲವು ಸ್ನೇಹಿತರ ಜೊತೆಗೆ ‘ಸಂಚಯ’ವನ್ನು ಡಿ.ವಿ. ಪ್ರಹ್ಲಾದ್ ಮತ್ತು ಮಂಡಳಿ (ಸುಮಾರಾಗಿ ಕಂಪೆನಿ ನಾಟಕಗಳ ಮಾದರಿ!) ಎಂಬ ಸಂಸ್ಥೆಯ ಮೂಲಕ ಆರಂಭಿಸಿದರು.

ಅವರೇ ಹೇಳುವಂತೆ ಮೊದಲು ಜೆರಾಕ್ಸ್ ಪ್ರತಿಗಳಲ್ಲಿ ತಯಾರಿಸಿ ಹಂಚಿದ್ದರು. ಅನಂತರ ಮಂಡಳಿಗಳು ಮುಗಿದು ಗುಂಪು ಚದುರಿದ ಮೇಲೆ ಉಳಿದ ಮೂವರ ಹೆಸರುಗಳು- ಪ್ರಹ್ಲಾದ್, ಎನ್.ಎಸ್. ಶ್ರೀಧರ ಮೂರ್ತಿ ಮತ್ತು ರವಿಕುಮಾರ ಕಾಶಿ. ಮತ್ತಷ್ಟು ಕಾಲದ ನಂತರ ಅವರಿಬ್ಬರ ಹೆಸರುಗಳೂ ಹಿಂದೆ ಸರಿದು ಕೊನೆಗೆ ಬೌಂಡರಿ ಗೆರೆಯ ಫೀಲ್ಡರ್‌ನ ಹಾಗೆ ಉಳಿದದ್ದು ಡಿ.ವಿ. ಪ್ರಹ್ಲಾದ್ ಮಾತ್ರ. ಅಂದಿನಿಂದ ಮೊನ್ನೆ ಮೊನ್ನೆಯ ಕೊನೆಯ ಸಂಚಿಕೆಯ ವರೆಗೆ ನಿರಂತರವಾಗಿ ಸಂಪಾದಕೀಯವನ್ನು ಬರೆದಿದ್ದರು.

ಕನ್ನಡದಲ್ಲಿ ಅನೇಕ ಸಾಹಿತ್ಯ ಪತ್ರಿಕೆಗಳು ಬಂದಿವೆ; ಹೋಗಿವೆ; ನಡೆಯುತ್ತಿವೆ. ‘ಸಂಕ್ರಮಣ’, ‘ಸಾಕ್ಷಿ’, ‘ಗಾಂಧಿ ಬಜಾರ್’ ‘ಸಂಚಯ’, ‘ರುಜುವಾತು’, ‘ದೇಶ ಕಾಲ’, ‘ಸಂಕಥನ’, ‘ಸಮಾಹಿತ’, ‘ಅರುಹು-ಕುರುಹು’, ‘ಮಾತುಕತೆ’, ‘ಚಿಂತನ ಬಯಲು’ ಮುಂತಾದವನ್ನು ಹೆಸರಿಸಬಹುದು. ಈ ಪೈಕಿ ‘ಸಂಕ್ರಮಣ’ವು ಚಂಪಾ ಅವರ ಸೈದ್ಧಾಂತಿಕ, ವ್ಯಾವಹಾರಿಕ ಚಾತುರ್ಯ ಮತ್ತು ಪ್ರಭಾವದಿಂದಾಗಿ ಸರಾಗವಾಗಿ ನಡೆಯುತ್ತ ಬಂದಿದೆ. ‘ಸಾಕ್ಷಿ’ ಒಮ್ಮೆ ಕನ್ನಡದ ತಾತ್ವಿಕ ಪ್ರತಿನಿಧಿಯಾಗಿದ್ದು ಅಡಿಗರ ಸಂಪಾದಕತ್ವ ಮತ್ತು ಕನ್ನಡದ ಪ್ರಮುಖ ಬರಹಗಾರರ ಲೇಖನಗಳನ್ನೊಳಗೊಂಡು ಭಾರೀ ಪ್ರಸಿದ್ಧಿ ಪಡೆದರೂ ಆನಂತರ ನಿಂತೇ ಹೋಯಿತು.

‘ರುಜುವಾತು’ ಅನಂತಮೂರ್ತಿಗಳ ಸಾರಥ್ಯವಿದ್ದರೂ ಹೆಚ್ಚು ಬಾಳಿಕೆ ಬರಲಿಲ್ಲ. ‘ಗಾಂಧಿ ಬಜಾರ್’ ಬಾಕಿನ ಅವರ ಪೂರ್ಣ ಶ್ರದ್ಧೆಯ ಹೊರತಾಗಿಯೂ ನಿಂತಿತು. ‘ಸಂಕಥನ’ ಮತ್ತು ‘ಸಮಾಹಿತ’ ಇತ್ತೀಚೆಗೆ ಆರಂಭವಾದ್ದರಿಂದ ಏನೂ ಹೇಳಲಾಗದು. (ನಿಯತಕಾಲಿಕವಾಗಿ ಪ್ರಕಟವಾಗುವ ಇನ್ನೂ ಹಲವನ್ನು ಇಲ್ಲಿ ಈ ಲೇಖನದ ಗಾತ್ರ ಮಿತಿಯಿಂದಾಗಿ ಹೆಸರಿಸಿಲ್ಲ.) ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಸಾಹಿತ್ಯ ಪತ್ರಿಕೆಗಳಿವೆ. ಆದರೆ ಇವುಗಳ ಪೈಕಿ ಅನೇಕವು ಕೊನೆಗೂ ಯಾವುದೋ/ಯಾರದೋ ಹಂಗಿನಲ್ಲಿ ಬದುಕುವಂತಿರುತ್ತವೆ. 20ನೆ ಶತಮಾನದ ಕೊನೆಯ ಮತ್ತು 21ನೆ ಶತಮಾನದ ಮೊದಲ ದಶಕಗಳ ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ಗಮನಿಸಿದವರಿಗೆ ‘ಸಂಚಯ’ ಮತ್ತು ಪ್ರಹ್ಲಾದ್ ಮಾಡಿದ ಪ್ರಯತ್ನ ಮತ್ತು ಸಾಧನೆಗಳ ಅರಿವಾಗದಿರದು.

ಪ್ರಾಯಃ ಮೊದಲ ಫೋಟೊಪ್ರತಿಗಳ ಮೂಲಕ ಪ್ರಕಟವಾಗುತ್ತಿದ್ದ ಪತ್ರಿಕೆಯನ್ನು ನೋಡಿದ ನೆನಪು ನನಗಿಲ್ಲ; ಆದರೆ ಅದು ಒಂದು ಸ್ಥಿರವಾದ ನಡೆಯನ್ನು ಕಾಪಾಡಿಕೊಂಡು ಬಂದ ಆನಂತರದ ಬಹುಪಾಲು ಸಂಚಿಕೆಗಳನ್ನು ನಾನು ಓದಿದ್ದೇನೆ. ಸಾಕಷ್ಟು ಸಾಹಿತ್ಯ ಪತ್ರಿಕೆಗಳು ಆ ಮೊದಲೂ ಆನಂತರವೂ ಬಂದಿದ್ದು ‘ಸಂಚಯ’ವೂ ಒಂದು ಅಂತಹ ಪತ್ರಿಕೆ ಅನ್ನಿಸುತ್ತಿರಲಿಲ್ಲ. ಸುಂದರವಾದ ಮತ್ತು ಸರಳವಾದ ಮುದ್ರಣ ಹಾಗೂ ಕಲಾಭಿವ್ಯಕ್ತಿಯನ್ನು ಪೋಷಿಸುವ ಅಂದವಾದ ಬರಹಗಳು, ಚಿತ್ರಗಳು ಹೀಗೆ ಒಂದು ಭಿನ್ನ ಮತ್ತು ವಿಶಿಷ್ಟ ವಾತಾವರಣವನ್ನು ಈ ಪತ್ರಿಕೆ ಸೃಷ್ಟಿಸಿತ್ತು. ಮುಖ್ಯವಾಗಿ ಯುವ ಬರಹಗಾರರನ್ನು ಬೆಳೆಸುವ ಮತ್ತು ಹಿರಿಯ ಬರಹಗಾರರು ತಾವೂ ಈ ಪತ್ರಿಕೆಯಲ್ಲಿ ಬರೆಯಬೇಕೆನ್ನಿಸುವ ವೇದಿಕೆಯಾಗಿ ‘ಸಂಚಯ’ ನಿಯತ್ತಿನಿಂದ ಮುಂದುವರಿಯಿತು.

ಪ್ರಹ್ಲಾದ್ ‘ಸಂಚಯ’ದ ವೇದಿಕೆಯಿಂದ ನೂರಾರು ಹೊಸ ಬರಹಗಾರರನ್ನು ಬೆಳಕಿಗೆ ತಂದರು; ನೀರೆರೆದು ಪೋಷಿಸಿದರು. ಪತ್ರಿಕೆಯ ಪ್ರಕಟನೆಗೆ ಅವರ ಚಟುವಟಿಕೆ ಪರಿಮಿತವಾಗಿರಲಿಲ್ಲ. ಅವರು ಕವನ-ಕಥೆ-ವಿಮರ್ಶೆಗಳ ಸ್ಪರ್ಧೆ, ಹಿರಿಯ ಸಾಹಿತಿಗಳ-ಸಾಹಿತ್ಯದ ಕುರಿತು ಕಮ್ಮಟ, ವಿಚಾರಗೋಷ್ಠಿ, ಸಾಹಿತ್ಯ ಸಂಜೆ ಮತ್ತಿತರ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರಿಸಿದರು. ವರಕವಿ ದ.ರಾ.ಬೇಂದ್ರೆಯವರ ಜನ್ಮದಿನವಾದ ಜನವರಿ 31ರಂದು ಕವಿದಿನವೆಂದು ಅವರು ಅರ್ಥಪೂರ್ಣವಾಗಿ ಆಚರಿಸಲಾರಂಭಿಸಿದರು. ಅಲ್ಲಿ ಯಾವ ತೋರಿಕೆ, ಆಡಂಬರ, ಮಾಮೂಲಾಗಿ ಇರುವ ಪರಸ್ಪರ ಹೊಗಳಿಕೆಯ ವಾತಾವರಣ ಇರುವುದಿಲ್ಲ. ವಸ್ತುನಿಷ್ಠೆ, ಪುಸ್ತಕ ನಿಷ್ಠೆ, ಮೌಲ್ಯ ನಿಷ್ಠೆ ಇವೇ ಅವರ ಬಂಡವಾಳಗಳು.

ಇವಲ್ಲದೆ ಸುಮಾರು 40 ಕೃತಿಗಳನ್ನು ‘ಸಂಚಯ’ದ ಮೂಲಕ ಪ್ರಕಟಿಸಿದರು. ಬೆಂಗಳೂರಿಗರಿಗೆ ಅವರೊಬ್ಬ ಸಾಹಿತ್ಯದ ಪರಿಚಾರಕ; ಕರ್ನಾಟಕದ ಉಳಿದೆಡೆ ಇರುವ ನನ್ನಂಥವರಿಗೆ ಅವರೊಂದು ಸೋಜಿಗ; ಬೆಂಗಳೂರಿನ ಸದ್ದು-ಗದ್ದಲದ ಜಗತ್ತಿನಲ್ಲಿ ಇಂಥದ್ದೊಂದು ಏಕಾಂತವನ್ನು ಸೃಷ್ಟಿಸಿದರು ಹೇಗೆ ಎಂಬ ವಿಸ್ಮಯ.

ಪ್ರಹ್ಲಾದ್ ಅವರಿಗೆ ‘ಸಂಚಯ’ ಅವರ ಇತರ ಸಾಹಿತ್ಯಕ ಚಟುವಟಿಕೆೆಯಂತೆಯೇ ಒಂದು ಚಟುವಟಿಕೆಯಾದ್ದರಿಂದ ತಾನೇ ಅದರ ಪ್ರಧಾನ/ಕೇಂದ್ರ ಬಿಂದುವಾಗಬೇಕೆಂಬ ತಹತಹ ಎಂದೂ ಕಾಣಿಸುತ್ತಿರಲಿಲ್ಲ. ಅವರು ಸ್ವತಃ ಬರಹಗಾರರು. ಸಾಹಿತಿಗಳು ಪ್ರಕಾಶಕರೂ ಆದಾಗ ಸಹಜವಾಗಿಯೇ ಅವರಿಗೆ ಆತ್ಮರತಿಯ ಕಾಯಿಲೆ ಅಂಟಿಕೊಳ್ಳುತ್ತದೆ. ತನ್ನ ಮೂಲಕ ಇತರರು ಬೆಳೆದರು ಅಥವಾ ತನ್ನ ಕೃತಿಯ ಇಷ್ಟು ಪ್ರತಿಗಳು ಮಾರಾಟವಾದವು ಎಂದು ಫಲಕ ಹಾಕಿಸಿಕೊಳ್ಳುವವರೂ ಇದ್ದಾರೆ.

ಇನ್ನೊಂದು ಮುಖ್ಯ ಅಂಶವೆಂದರೆ ಸಾಮಾನ್ಯವಾಗಿ ಸಾಹಿತ್ಯ ಪತ್ರಿಕೆಗಳು ಒಂದು ನಿರ್ದಿಷ್ಟ ಸೈದ್ಧಾಂತಿಕ ಒಲವಿನಿಂದ ಕೂಡಿರುತ್ತವೆ. ವ್ಯಕ್ತಿಗಳೇ ಮುಖ್ಯವಾದ ಗುಂಪು ಪತ್ರಿಕೆಗಳೂ ಇರುತ್ತವೆ. ಕಾರ್ಪೊರೇಟ್ ಬ್ರೋಷರ್‌ಗಳಂತೆ ಕೆಲವು ಸದಸ್ಯರನ್ನು ಹೊಂದಿ ಅವರದೇ ಮುಖವಾಣಿಯಂತೆ ವರ್ತಿಸುವ, ನರ್ತಿಸುವ ಲಗ್ಸುರಿ ಪತ್ರಿಕೆಗಳೂ ಇವೆ. ಬಹುಪಾಲು ಇತ್ತೀಚೆಗೆ ಬರುವ ಇಂತಹ ಅಂಥಾಲಜಿಗಳಲ್ಲಿ ಒಂದೇ ಸೈದ್ಧಾಂತಿಕ ಒಲವನ್ನು ಸಮರ್ಥಿಸುವ ಲೇಖನಗಳನ್ನು ಕಾಣುತ್ತೇವೆ. ಸಾಹಿತ್ಯ ಪತ್ರಿಕೆಗಳನ್ನು ಮಾಧ್ಯಮವಾಗಿಟ್ಟುಕೊಂಡು ಹೆಚ್ಚುಗಾರಿಕೆಗೆ ಲಗ್ಗೆ ಹಾಕುವ ಮಂದಿಯೂ ಇದ್ದಾರೆ.

ಇಂತಹವರ ನಡುವೆ ಪ್ರಹ್ಲಾದ್ ಒಬ್ಬ ಅಪವಾದ. ಅವರು ವೈಯಕ್ತಿಕವಾಗಿ ಯಾವೊಬ್ಬನನ್ನು ಕಾಡುವ ಜಾತಿ-ಮತ-ಪಕ್ಷ ರಾಜಕೀಯ- ಎಡಬಲ ಒಲವುಗಳು ತಮ್ಮನ್ನು ಬಾಧಿಸದಂತೆ ಎಚ್ಚರವಾಗಿಯೇ ಇದ್ದರು. ಇತ್ತೀಚೆಗೆ ಬಂದ ಭಗವದ್ಗೀತೆಯ ಕುರಿತ ಸಂಚಿಕೆಯನ್ನು ಗಮನಿಸಿದರೆ ಅಲ್ಲಿ ಎಡ, ಬಲ, ನಾಸ್ತಿಕ, ಆಸ್ತಿಕ ಹಿರಿಯ, ಕಿರಿಯ ಹೀಗೆ ಎಲ್ಲ ವಿಭಿನ್ನ ದೃಷ್ಟಿಕೋನದ ಲೇಖನಗಳನ್ನು ಕಾಣಬಹುದು. ಈ ದೃಷ್ಟಿಯಿಂದ ಪ್ರಹ್ಲಾದ್ ಭಗವದ್ಗೀತೆಯ ಸ್ಥಿತಪ್ರಜ್ಞ. ಪಾಂಡವರ ಮತ್ತು ಕೌರವರ ನಡುವೆ ನಿಲ್ಲಬಲ್ಲವರು; ಸಮರವಾಗಲಿ, ನೀತಿಯಾಗಲಿ ದಿಟ್ಟವಾಗಿ ಎದುರಿಸಬಲ್ಲವರು.

ಪ್ರಹ್ಲಾದ್ ‘ಸಂಚಯ’ದ ಜೊತೆಗೇ ಇತರ ಅನೇಕ ಒಳ್ಳೆಯ ಪ್ರಕಟನೆೆಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಟ್ಟರು. ಎಕ್ಕುಂಡಿ, ಕಾಮರೂಪಿ ಮುಂತಾದ ಹಿರಿಯರ ಸಮಗ್ರವನ್ನು, ಗಾಂಧಿಯ ಕುರಿತು, ಚಿತ್ತಾಲ, ರಾಮಚಂದ್ರ ಶರ್ಮ, ತೇಜಸ್ವಿ, ರಾಮಾನುಜನ್, ಕೀ.ರಂ. ಮುಂತಾದ ಪ್ರಮುಖ ಸಾಹಿತಿಗಳ ಕುರಿತು ವಿಮರ್ಶಾ ಸಂಕಲನಗಳನ್ನು ಪರಿಚಯಿಸಿದರು. ಪ್ರಹ್ಲಾದ್ ತುಂಬಾ ಗೌರವಿಸುತ್ತಿದ್ದ ಪ್ರೊ. ಚಿ. ಶ್ರೀನಿವಾಸ ರಾಜು ಅವರ ಕುರಿತು ‘ನಮ್ಮ ಮೇಷ್ಟ್ರಿಗೆ’ ಎಂಬ ಕವಿತಾ ಸಂಕಲನವನ್ನು ಮತ್ತು ಅವರ ಒಟ್ಟಾರೆ ಬದುಕು-ಬರಹದ ಕುರಿತು ಪ್ರತ್ಯೇಕ ಮೌಲ್ಯಯುತ ಕೃತಿ- ಅಂತರ್ಜಲವನ್ನು ಪ್ರಕಟಿಸಿದರು.

ಖಾಸನೀಸರೂ ಸೇರಿದಂತೆ ಅನೇಕರ ಸಂದರ್ಶನಗಳನ್ನು ಮಾಡಿದರು. ಅವರು ಪ್ರಕಟಿಸಿದ ದಿವಂಗತ ಎನ್. ಎಸ್. ಶಾರದಾ ಪ್ರಸಾದ್ ಅವರು ಬರೆದ ‘ಒಂದು ಮರ ನೂರು ಸ್ವರ’ ಎಂಬ ಭಾರತೀಯ ಸಣ್ಣ ಕಥೆಗಳ ಸಂಕಲನ ಕನ್ನಡ ಸಾಹಿತ್ಯದಲ್ಲಿಯೇ ಅಪರೂಪವೆಂಬಂತಿರುವ ಸಂಗ್ರಹ. ಈ ಎಲ್ಲ ಕೃತಿಗಳಲ್ಲಿ ಗಮನಿಸಬೇಕಾದದ್ದು ಪ್ರಹ್ಲಾದ್‌ಗಿರುವ ಸ್ಪಶ್ಯ ಧೋರಣೆ. ಇವರು ನಮ್ಮವರಲ್ಲ ಎಂಬ ನೇತ್ಯಾತ್ಮಕ ಧೋರಣೆ ಕನ್ನಡದ ಬಹುಪಾಲು ಹಿರಿಯ-ಕಿರಿಯ ಸಾಹಿತಿಗಳಿಗಿದೆ. ತಮ್ಮ ತತ್ವ-ಸಿದ್ಧಾಂತ, ವಿಮರ್ಶಾ ಧೋರಣೆ, ಇವನ್ನು ಒಪ್ಪದ ಕೃತಿಗಳು ಸಾಹಿತ್ಯ ಕೃತಿಗಳೇ ಅಲ್ಲ, ಮತ್ತು ಅವನ್ನು ಬರೆದವರು ಸಾಹಿತಿಗಳೇ ಅಲ್ಲ ಎಂಬ ದರ್ಪ, ಅಹಂಕಾರ ಇಲ್ಲದವರು ಕಡಿಮೆ. ವಸ್ತುನಿಷ್ಠತೆ ಎಂಬುದು ವೇದಿಕೆಯ ಮಾತಾಗಿ ಉಳಿದ ಕಳೆದ ಅನೇಕ ವರ್ಷಗಳಲ್ಲಿ ಎಲ್ಲೂ ಅದನ್ನು ಮೀರಿ ಹೋಗಬಾರದೆಂಬ ಪ್ರಜ್ಞಾಪೂರ್ವಕ ಪ್ರಯತ್ನ ಮಾಡಿದವರು ಪ್ರಹ್ಲಾದ್. ಬೆಂಗಳೂರಿನಲ್ಲಿದ್ದೂ ಇದನ್ನು ಸಾಧಿಸಿದ್ದು ಅವರ ಹೆಗ್ಗಳಿಕೆ.

ಒಂದು ಸಂದರ್ಭವನ್ನು ನಾನು ನೆನಪು ಮಾಡಿಕೊಳ್ಳಲೇ ಬೇಕು: ಬೆಂಗಳೂರಿನ ಬನಶಂಕರಿಯಲ್ಲಿರುವ ಸುಚಿತ್ರಾ ಫಿಲ್ಮ್ ಸೊಸೈಟಿಯ ಆವರಣದಲ್ಲಿ ಪ್ರಹ್ಲಾದ್ ಅಡಿಗರ ‘ಭೂಮಿಗೀತ 50’ ಎಂಬ ಕಾರ್ಯಕ್ರಮ ರೂಪಿಸಿದ್ದರು. ವಿಶೇಷವೆಂದರೆ ಪ್ರತಿಷ್ಠಿತರಲ್ಲವೆಂದು ನಾವು ಭಾವಿಸಬಹುದಾದ ಪ್ರಹ್ಲಾದ್ ಆ ಸಂದರ್ಭಕ್ಕೆ ಪ್ರಕಾಶ ರೈಯಂತಹ ಖ್ಯಾತ ಸಿನೆಮಾ ಕಲಾವಿದರನ್ನು ಬರಿಸಿ ಅವರಿಂದ ಅಡಿಗರ ಪದ್ಯವನ್ನು ಓದಿಸಿದರು. ಪ್ರಕಾಶ ರೈ ಅಡಿಗರ ಒಳ್ಳೆಯ ಓದುಗ ಎಂದು ನನಗಂತೂ ಅರಿವಾದ್ದು ಆ ದಿನವೇ.

ಜನಪ್ರಿಯ ಪತ್ರಿಕೆಗಳ ಅಬ್ಬರದ ನಡುವೆಯೂ ಕೆಲವು ಸಾಹಿತ್ಯ ಪತ್ರಿಕೆಗಳು ತಮ್ಮ ಸೀಮಿತ ಬಳಗವನ್ನು ಅವಲಂಬಿಸಿ ಇಲ್ಲವೇ ಕಟ್ಟಿಕೊಂಡು ಸಾಹಿತ್ಯದ ಜೀವಜಲವನ್ನು ರಕ್ಷಿಸುವ ಒಂದಷ್ಟು ಪ್ರಯತ್ನ ಮಾಡುತ್ತಿವೆ. ಹೇಗೆ ಬಹುರಾಷ್ಟ್ರೀಯ ವ್ಯಾಪಾರೋದ್ಯಮದಲ್ಲಿ ಅಥವಾ ನಮ್ಮವೇ ಟಾಟಾ-ಬಿರ್ಲಾಗಳ ಅಡಿಯಲ್ಲಿ ಸಣ್ಣ ಅಂಗಡಿಯ ವ್ಯಾಪಾರ ಕುಸಿಯುತ್ತಿದೆಯೋ ಹಾಗೆಯೇ ಈ ಸಾಹಿತ್ಯ ಪತ್ರಿಕೆಗಳು ಹುತಾತ್ಮರಾಗುತ್ತಿವೆ.

ಆದರೆ ಪ್ರಹ್ಲಾದ್ ಈ ಕಾರಣಕ್ಕೆ ತಮ್ಮ ‘ಸಂಚಯ’ವನ್ನು ನಿಲ್ಲಿಸಿಲ್ಲ. ಏಕೆಂದರೆ ಪ್ರಹ್ಲಾದ್ ಅಂದರೆ ‘ಸಂಚಯ’; ‘ಸಂಚಯ’ ಅಂದರೆ ಪ್ರಹ್ಲಾದ್. ಅವರು ಕೊಟ್ಟ ಕಾರಣವನ್ನೇ ನಾವು ಸತ್ಯವೆಂದು ಒಪ್ಪಿಕೊಳ್ಳಬೇಕು. ಏಕೆಂದರೆ ಅವರು ಇಲ್ಲಿಯವರೆಗೂ ಬೆಳೆದದ್ದು ಈ ಸತ್ಯ ನಿಷ್ಠುರತೆಯಿಂದ; ಸಜ್ಜನಿಕೆಯಿಂದ; ಪಾರದರ್ಶಕತೆಯಿಂದ. ಬೆಳೆಸಿದ್ದೂ ಇವನ್ನೇ. ಪ್ರಹ್ಲಾದ್ ಅವರ ಈ ನೀತಿಯನ್ನು ಇಷ್ಟಪಡದವರೂ ಅವರನ್ನು ನಿರಾಕರಿಸಲಾರರು; ನಿರಾಕರಿಸಿದವರೂ ಖಂಡಿತವಾಗಿ ನಿರ್ಲಕ್ಷಿಸಲಾರರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)