varthabharthi

ಬುಡಬುಡಿಕೆ

ಈ ಮದುವೆಯಿಂದ ಮಗು ಹುಟ್ಟೇ ಹುಟ್ಟತ್ತೆ.....

ವಾರ್ತಾ ಭಾರತಿ : 9 Jul, 2017
*ಚೇಳಯ್ಯ chelayya@gmail.com

‘‘ನಮ್ಮ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿತ್ತು’’ ಎಂದು ಇಸ್ರೇಲ್ ಪ್ರಧಾನಿ ಘೋಷಿಸಿ, ನರೇಂದ್ರ ಮೋದಿಯನ್ನು ತಬ್ಬಿಕೊಂಡದ್ದೇ ಒಂದು ಗೊತ್ತು, ಇತ್ತ ಭಾರತದಲ್ಲಿ ನರೇಂದ್ರ ಮೋದಿಯವರ ಭಕ್ತರು ಇನ್ನೇನು ಮಗು ಹುಟ್ಟಿಯೇ ಬಿಡುತ್ತದೆ ಎಂದು ತೊಟ್ಟಿಲು ಕಟ್ಟಲು ಶುರು ಹಚ್ಚಿದರು. ಕೆಲವರು ಬಗೆ ಬಗೆಯ ಕುಲಾವಿಗಳನ್ನು ಸಾಮಾಜಿಕ ತಾಣಗಳಲ್ಲಿ ಹೆಣೆಯ ತೊಡಗಿದರೆ, ಇನ್ನುಳಿದವರು ಹುಟ್ಟಲಿರುವ ಮಗುವಿಗೆ ಬಗೆಬಗೆಯ ಹೆಸರುಗಳನ್ನು ಹುಡುಕ ತೊಡಗಿದರು. ಕೆಲವು ಜೋತಿಷಿಗಳು ಹುಟ್ಟುವ ಮಗು ಗಂಡೋ, ಹೆಣ್ಣೋ ಎನ್ನುವುದರ ಕುರಿತಂತೆ ವಿವಿಧ ಟಿವಿ ವಾಹಿನಿಗಳಲ್ಲಿ ವೈಜ್ಞಾನಿಕವಾಗಿ ವಿಶ್ಲೇಶಿಸತೊಡಗಿದರು. ಕೆಲವು ಭಾಷಾ ತಜ್ಞರು ಹುಟ್ಟುವ ಮಗುವಿನ ಮಾತೃಭಾಷೆ ‘ಹಿಂದಿಯೋ ಹಿಬ್ರೂವೋ’ ಎಂಬ ಬಗ್ಗೆ ಪತ್ರಿಕೆಗಳಲ್ಲಿ ಚರ್ಚಿಸತೊಡಗಿದರು. ಇದೇ ಸಂದರ್ಭದಲ್ಲಿ ಮೋದಿಯ ಹೆರಿಗೆಗಾಗಿ ವಿಶ್ವದ ಖ್ಯಾತ ಆಸ್ಪತ್ರೆಗಳು ತಾಮುಂದು, ನಾಮುಂದು ಎಂದು ಕರೆಯುತ್ತಿರುವುದನ್ನು ಭಾರತೀಯ ಪತ್ರಿಕೆಗಳು ಭಾಷ್ಪಾಂಜಲಿ ಸುರಿಸುತ್ತಾ ಬರೆಯತೊಡಗಿದವು. ಅಮೆರಿಕವು ಮೋದಿಯ ಈ ಹೆರಿಗೆಗಾಗಿ ಎಪ್ಪತ್ತು ವರ್ಷಗಳ ಹಿಂದೆಯೇ ಒಂದು ಆಸ್ಪತ್ರೆಯನ್ನು ಕಟ್ಟಿರುವುದು, ಇಸ್ರೇಲ್ ಜೊತೆಗೆ ಮದುವೆಯಾಗಿ ಚೊಚ್ಚಲ ಹೆರಿಗೆಯನ್ನು ಇಲ್ಲೇ ಮಾಡಿಸಲು ಕಾಯುತ್ತಿರುವುದನ್ನು ಪಬ್ ಲಿಂಕ್ ಚಾನೆಲ್‌ನ ಮಂಗಣ್ಣ ಅವರು 24 ಗಂಟೆ ಯದ್ವಾತದ್ವಾ ವಾಂತಿ ಮಾಡತೊಡಗಿದರು. ಇವೆಲ್ಲವನ್ನೂ ಕೇಳುತ್ತಾ ಪತ್ರಕರ್ತ ಎಂಜಲು ಕಾಸಿಗೆ ಒಂದು ಕಾನೂನು ಸಮಸ್ಯೆ ತಲೆಯಲ್ಲಿ ಹೊಳೆದು ಬಿಟ್ಟಿತು. ಈಗಾಗಲೇ ಮದುವೆಯಾಗಿರುವ ನರೇಂದ್ರ ಮೋದಿಯವರು ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಮದುವೆಯಾಗಿರುವುದು ಎಷ್ಟು ಸರಿ? ಈ ಬಗ್ಗೆ ವಿವಿಧ ಭಕ್ತರ ಕೈಯಿಂದ ಅಭಿಪ್ರಾಯಗಳನ್ನು ತೆಗೆದುಕೊಂಡರೆ ಹೇಗೆ ಎಂದು ಆಲೋಚಿಸಿದವನೇ ತನ್ನ ಜೋಳಿಗೆಯನ್ನು ಹೆಗಲಲ್ಲಿ ಹಾಕಿಕೊಂಡು ಹೊರಟು ಅಭಿಪ್ರಾಯ ಸಂಗ್ರಹಿಸತೊಡಗಿದ. ಅದರಲ್ಲಿ ಆಯ್ದ ಭಕ್ತರ ಹೇಳಿಕೆಗಳನ್ನು, ಮದುವೆಯ ಶುಭಾಶಯಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಅಮಿತ್ ಶಾ:  ಇಸ್ರೇಲ್‌ನ ಪ್ರಧಾನಿಯವರು ಈ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿತ್ತು ಎನ್ನುವುದು ನಮ್ಮ ಪ್ರಧಾನಿಯವರಿಗೆ ಈ ಮೊದಲೇ ಗೊತ್ತಿತ್ತು. ನರೇಂದ್ರ ಮೋದೀಜಿಯವರು ಅಪ್ರಾಪ್ತವಯಸ್ಸಿನಲ್ಲಿ ಮದುವೆಯಾದರು. ಆದರೆ ಅವರು ಮದುವೆಯ ವಯಸ್ಸಿಗೆ ತಲುಪಿದಾಗ ಅವರಿಗೆ, ತನ್ನ ಮದುವೆ ಇಸ್ರೇಲ್‌ನ ಪ್ರಧಾನಿಯ ಜೊತೆಗೆ ಸ್ವರ್ಗದಲ್ಲೇ ನಿಶ್ಚಯವಾಗಿರುವುದು ಅಂತರ್ವಾಣಿಯ ಮೂಲಕ ಗೊತ್ತಾಯಿತು. ಆದುದರಿಂದ ಅವರು ಅನಿವಾರ್ಯವಾಗಿ ಪತ್ನಿಯನ್ನು ತೊರೆಯಬೇಕಾಯಿತು. ಹಲವು ದಶಕಗಳ ಕಾಲ ಅವರು ಈ ಪತ್ನಿಯನ್ನು ಕೂಡಿಕೊಳ್ಳಲು ಶಬರಿಯಂತೆ ಕಾದಿದ್ದಾರೆ. ಇದೀಗ ಇಸ್ರೇಲ್‌ನಲ್ಲಿ ಅವರ ನಿವಾದ ಮದುವೆ ನಡೆದಿದೆ. ಸ್ವರ್ಗದಲ್ಲೇ ನಿಶ್ಚಯವಾಗಿರುವ ಮದುವೆ ಇದಾಗಿರುವುದರಿಂದ ಈ ಬಗ್ಗೆ ಯಾವ ಕಾನೂನು ತೊಡಕೂ ಇರುವುದಿಲ್ಲ. ಸ್ವರ್ಗದಲ್ಲಿ ಮದುವೆ ನಿಶ್ಚಯವಾಗಿರುವುದಕ್ಕೆ ಬೇಕಾಗಿರುವ ಎಲ್ಲ ದಾಖಲೆಗಳು ಇಸ್ರೇಲ್‌ನ ಪ್ರಧಾನಿಯ ಬಳಿ ಇವೆ. ಸಂದರ್ಭ ಬಂದಾಗ ಅದನ್ನು ನಾವು ಬಹಿರಂಗ ಪಡಿಸುತ್ತೇವೆ.

ಎಂಜಲು ಕಾಸಿ: ಅಲ್ಲ ಸಾರ್? ಕೆಲವು ತಿಂಗಳ ಹಿಂದೆ ಇದೇ ಇಸ್ರೇಲ್ ಚೀನಾದ ಜೊತೆಗೂ ಮದುವೆಯಾಗಿತ್ತು. ಆಗಲೂ ‘ಚೀನಾ ಜೊತೆಗಿನ ಸಂಬಂಧ ಸ್ವರ್ಗದಲ್ಲಿ ನಿಶ್ಚಯವಾಗಿತ್ತು’ ಎಂದು ಪ್ರಧಾನಿ ಹೇಳಿದ್ದರು. ಹಾಗಾದರೆ ಇಸ್ರೇಲ್ ಪ್ರಧಾನಿಗಳು ಎರಡು ಮದುವೆ ಮಾಡಿಕೊಂಡಂತಾಗಲಿಲ್ಲವೇ?

ಅಮಿತ್ ಶಾ: ಕಾಸೀಜಿ, ಪುರಾಣ ಕಾಲದಲ್ಲಿ ಎಲ್ಲ ಬಲಿಷ್ಠ ರಾಜರಿಗೂ ಎರಡೆರಡು ಹೆಂಡಂದಿರು ಇದ್ದರು. ಹಾಗೆಯೇ ವಿಶ್ವದಲ್ಲಿ ಬಲಿಷ್ಠವಾಗಿರುವ ಇಸ್ರೇಲ್ ಎರಡು ಮದುವೆಯಾದರೆ ತಪ್ಪೇನು? ಚೀನಾದ ಜೊತೆಗೆ ಮದುವೆ ನಡೆದಿದೆಯಾದರೂ, ಮೋದಿಯ ಸರ್ವಸಂಪನ್ನ ಗುಣಗಳಿಗೆ ಒಲಿದು ಇಸ್ರೇಲ್ ಕೈ ಹಿಡಿದಿದೆ. ಇದು ನಮ್ಮೆಲ್ಲರ ಭಾಗ್ಯ.

ಎಂಜಲು ಕಾಸಿ: ಈ ಸವತಿ ಜಗಳ ಮುಂದುವರಿದರೆ...

ಅಮಿತ್ ಶಾ: ನೋಡ್ರೀ...ಈ ವಿವಾಹ ನಡೆದಿರುವುದರಿಂದಲೇ ಚೀನಾ ತಕರಾರು ತೆಗೆದಿರುವುದು. ಇದೊಂದು ರೀತಿ ಸವತಿ ಮತ್ಸರ ಎಂದು ಹೇಳಬಹುದು.

***

ನರಕವರ್ತಿ ಬೇಲೆ ಸೂಲಿ(ಕಕಿಬಕ) ಬ್ರಿಗೇಡ್ ಓರಾಟಗಾರರು:

ಕರುಳು ಕಿತ್ತು ಬರುತ್ತೆ ಕಣ್ರೀ(ಕಕಿಬಕ). ತನ್ನ ಇನಿಯನನ್ನು ಸೇರಲು ಎಷ್ಟೋ ವರ್ಷಗಳಿಂದ ಮೋದಿಯವರು ತಪಸ್ಸು ಮಾಡುತ್ತಿದ್ದರು. ಇಡೀ ವಿಶ್ವ ಈ ಸಂಗಮಕ್ಕಾಗಿ ಕಾಯುತ್ತಿತ್ತು. ಹಿಂದೆ ರಾಕ್ಷಸರನ್ನು ನಾಶ ಮಾಡಲು ಹರಿ-ಹರರು ಸೇರಿದ ಪುರಾಣವನ್ನೊಮ್ಮೆ ನೆನೆದುಕೊಳ್ಳಿ. ಇದೀಗ ಅಂತಹದೇ ಇನ್ನೊಂದು ಸಂಭವ ನಡೆದಿದೆ. ಇಸ್ರೇಲ್ ಪ್ರಧಾನಿಯವರು ಚೀನಾವನ್ನು ಈ ಹಿಂದೆ ವರಿಸಿದ್ದರೂ ಚೀನಾವನ್ನು ತನ್ನ ಮುಡಿಯಲ್ಲಿ ಕಟ್ಟಿಕೊಂಡಿದೆ. ಆದರೆ ಮೋದಿಯನ್ನು ತನ್ನ ಮಡಿಲಲ್ಲಿ ಇರಿಸಿಕೊಂಡಿದೆ. ಇದು ನಾವೆಲ್ಲ ಹೆಮ್ಮೆ ಪಡಬೇಕಾದ ವಿಷಯ. ಎಂಜಲು ಕಾಸಿ: ಸಾರ್, ಮಹಾತ್ಮಗಾಂಧೀಜಿಯವರು ಇಸ್ರೇಲ್‌ನ ದೌರ್ಜನ್ಯವನ್ನು ಖಂಡಿಸಿದ್ದರು ಅಲ್ಲವೇ?

ಕಕಿಬಕ: ನೋಡ್ರಿ...ಈ ಮಹಾತ್ಮಗಾಂಧೀಜಿಯವರ ಕಾರಣದಿಂದಲೇ ನಮ್ಮ ಸಂಘಪರಿವಾರದ ಹಿರಿಯರು ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಲಿಲ್ಲ. ಅಷ್ಟೇ ಅಲ್ಲ, ನೇತಾಜಿ ಸುಭಾಶ್ ಚಂದ್ರ ಭೋಸರು ಜರ್ಮನಿಯಲ್ಲಿ ಹಿಟ್ಲರನ ಜೊತೆಗೆ ಕೈ ಜೋಡಿಸಿದರು. ಇದೇ ಹಿಟ್ಲರ್ ಯಹೂದಿಗಳನ್ನು ಮಾರಣ ಹೋಮ ಮಾಡಿದ್ದ. ಇದರಿಂದಾಗಿಯೇ ನೇತಾಜಿಗೆ ವಿರುದ್ಧವಾಗಿ ನಾವು ಕೆಲಸ ಮಾಡಿದೆವು. ನೇತಾಜಿಯ ಜೊತೆ ಸಂಘಪರಿವಾರದವರು ಕೈಜೋಡಿಸದೇ ಇದ್ದ ಕಾರಣಕ್ಕಾಗಿ ಇದೀಗ ನಮ್ಮ ಜೊತೆಗೆ ಇಸ್ರೇಲ್ ಕೈ ಜೋಡಿಸಿದೆ. ನಮ್ಮ ಹಿರಿಯರು ಅದೆಷ್ಟು ದೂರದೃಷ್ಟಿಯನ್ನು ಹೊಂದಿದ್ದಾರೆ ಎನ್ನುವುದನ್ನು ಇದು ತಿಳಿಸುತ್ತದೆ.

ಎಂಜಲು ಕಾಸಿ: ಸಾರ್...ಈ ವಿವಾಹದಿಂದ ಮುಂದಿನ ದಿನಗಳಲ್ಲಿ ಭಾರತದಲ್ಲಿ ಏನೆಲ್ಲ ಬದಲಾವಣೆಗಳಾಗಲಿವೇ?

ಕಕಿಬಕ: ನೋಡ್ರೀ...ಇಸ್ರೇಲ್‌ನಿಂದ ನೂರಾರು ಗ್ಯಾಸ್‌ಚೇಂಬರ್‌ಗಳನ್ನು ತರಿಸಿಕೊಳ್ಳುವ ಯೋಜನೆಗಳಿವೆ. ಭಾರತದಲ್ಲಿ ಇದೀಗ ತೆರಿಗೆಸಂಗ್ರಹ ಆರಂಭವಾಗಿದ್ದು, ಹಣವನ್ನೆಲ್ಲ ನಾವು ವರದಕ್ಷಿಣೆಯಾಗಿ ಇಸ್ರೇಲ್‌ಗೆ ನೀಡಬೇಕಾಗಿದೆ. ಆದುದರಿಂದ ದೇಶದ ಜನರು ಹೆಚ್ಚು ಹೆಚ್ಚು ತೆರಿಗೆಯನ್ನು ನೀಡಿ ಈ ವಿವಾಹ ಬಂಧವನ್ನು ಬಲಪಡಿಸಲು ಕೈ ಜೋಡಿಸಬೇಕಾಗಿದೆ. ಇದು ಜನ್ಮ ಜನ್ಮಾಂತರದ ಸಂಬಂಧವಾಗಿರುವುದರಿಂದ ಇದನ್ನು ಉಳಿಸುವುದಕ್ಕಾಗಿ ಇನ್ನಷ್ಟು ವರದಕ್ಷಿಣೆ ತೆಗೆದುಕೊಂಡು ಬರಲು ಬೀಗರು ಒತ್ತಾಯಿಸಿದ್ದಾರೆ. ಅವರು ವಧುದಕ್ಷಿಣೆಯಾಗಿ ಭಾರತಕ್ಕೆ ಅತ್ಯಮೂಲ್ಯವಾದ ಶಸ್ತ್ರಾಸ್ತ್ರಗಳನ್ನು ವಿತರಿಸಲಿದ್ದಾರೆ. ಇದರಿಂದಾಗಿ ಭಾರತ ಇನ್ನಷ್ಟು ಸಮೃದ್ಧವಾಗಲಿದೆ. ಇನ್ನು ಮುಂದೆ ಭಾರತಾದ್ಯಂತ ಹಿಂದಿ ಹೇರಿಕೆಯ ಜೊತೆಗೆ ಇಸ್ರೇಲ್‌ನ ಹಿಬ್ರೂ ಹೇರಿಕೆಯೂ ನಡೆಯಲಿದೆ. ಎಲ್ಲರೂ ಕಡ್ಡಾಯವಾಗಿ ಹಿಬ್ರೂ ಭಾಷೆಯನ್ನು ಕಲಿಯಬೇಕಾಗಿದೆ. ಆದುದರಿಂದ, ಬೆಂಗಳೂರಿನ ಮೆಟ್ರೋದಲ್ಲಿ ಹಿಂದಿಯ ಜೊತೆಗೆ ಹಿಬ್ರೂ ಭಾಷೆಯನ್ನೂ ಬಳಸಬೇಕು ಎಂದು ನಮ್ಮ ಬ್ರಿಗೇಡ್‌ನಿಂದ ವ್ಯಾಪಕವಾಗಿ ಹೋರಾಟ ಮಾಡಲಾಗುತ್ತದೆ. ಹಿಬ್ರೂ ಮಾಧ್ಯಮ ಶಾಲೆಗಳನ್ನು ಮಾಡುವ ಮೂಲಕ ನಾವು ಬೀಗರನ್ನು ಸಂತೋಷ ಪಡಿಸಬೇಕಾದ ಹೊಣೆಗಾರಿಕೆ ನಮ್ಮ ಮುಂದಿದೆ. ಎಲ್ಲ ಕನ್ನಡಿಗರೂ ತಮ್ಮ ತಮ್ಮ ಕನ್ನಡ ಭಾಷೆಗಾಗಿ ಎತ್ತಿರುವ ಕೈಗಳನ್ನು ಇಳಿಸಿ, ಹಿಬ್ರೂ, ಹಿಂದಿ ಹೇರಿಕೆಗಾಗಿ ಕೈ ಎತ್ತಬೇಕಾಗಿದೆ.

ಎಂಜಲು ಕಾಸಿ: ಸಾರ್...ಆದ್ರೂ ಈ ವಿವಾಹಕ್ಕೆ ನಮ್ಮ ಸುಪ್ರೀಂಕೋರ್ಟ್ ಅನುಮತಿ ನೀಡುತ್ತದೆಯೇ? ಮುಖ್ಯವಾಗಿ ಭಾರತದಲ್ಲಿ ಗಂಡು ಮತ್ತು ಹೆಂಗಸರ ನಡುವೆ ಮದುವೆ ನಡೆಯುತ್ತದೆ. ಆದರೆ ಇದು....ಮುಖ್ಯವಾಗಿ ಈ ಮದುವೆಯಲ್ಲಿ ಮಗು ಹುಟ್ಟುತ್ತದೆ ಎಂದು ನಂಬುವುದು ಎಷ್ಟು ಸರಿ?

ಕಕಿಬಕ:  ನೋಡ್ರೀ...ನಿಮ್ಮ ಈ ಹೇಳಿಕೆ ನ್ಯಾಯಾಂಗ ನಿಂದನೆಯಾಗಿದೆ. ಈಗಾಗಲೇ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಗಂಡು ನವಿಲಿನ ಕಣ್ಣೀರು ಕುಡಿದು ಹೆಣ್ಣು ನವಿಲು ಗರ್ಭ ಧರಿಸುತ್ತದೆ ಎಂದು ತೀರ್ಪು ನೀಡಿದ್ದಾರೆ. ಇದರ ಪ್ರಕಾರ ಈ ವಿವಾಹದಿಂದ ಮಗು ಹುಟ್ಟಿಯೇ ಹುಟ್ಟುತ್ತದೆ ಎಂದು ನಾವೆಲ್ಲ ನಂಬಿದ್ದೇವೆ. ನೀವು ನಂಬಬೇಕು. ನಂಬದವರನ್ನೆಲ್ಲ ದೇಶದ್ರೋಹಿಗಳೆಂದು ಪರಿಗಣಿಸಿ, ಇಸ್ರೇಲ್‌ನಿಂದ ಆಮದು ಮಾಡಲಾಗುವ ಗ್ಯಾಸ್ ಚೇಂಬರ್‌ನಲ್ಲಿ ಹಾಕಿ ಬಿಡಲಿದ್ದೇವೆ.
ಕಾಸಿಗೆ ಮುಂದಿನ ಪ್ರಶ್ನೆಯನ್ನು ಕೇಳುವ ಧೈರ್ಯವಾಗದೆ, ಅಲ್ಲಿಂದ ಕಾಲು ಕಿತ್ತ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)