varthabharthi

ಪ್ರಚಲಿತ

ಕರಾಳವಾಗುತ್ತಿರುವ ಕರಾವಳಿ ಬದುಕು

ವಾರ್ತಾ ಭಾರತಿ : 9 Jul, 2017

ಕರ್ನಾಟಕದ ಕರಾವಳಿ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಹೀಗೇಕಾಯಿತು? ಯಾಕೆ ಅಲ್ಲಿ ಬದುಕು ಅಸುರಕ್ಷಿತವಾಗಿದೆ ಎಂಬ ಆತಂಕ ಎಲ್ಲೆಡೆ ಕಾಡುತ್ತಿದೆ. ಇದು ಒಮ್ಮೆಲೆ ಉಂಟಾದ ಸಮಸ್ಯೆಯಲ್ಲ. 1992ರ ಅಯೋಧ್ಯೆ ಘಟನೆ ನಂತರ ಅವಿಭಜಿತ ದ.ಕ. ಜಿಲ್ಲೆಯ ಶಾಂತಿ, ನೆಮ್ಮದಿಯ ಬದುಕಿನಲ್ಲಿ ಬಿರುಗಾಳಿ ಎದ್ದಿದೆ. ಮನುಷ್ಯರ ನಡುವೆ ಅಪನಂಬಿಕೆಯ ಅಡ್ಡಗೋಡೆಗಳು ನಿಂತಿವೆ. ಅಮಾಯಕರು ಹತ್ಯೆಗೆ ಒಳಗಾಗುತ್ತಿದ್ದಾರೆ. ಯಾವ ಸರಕಾರ ಬಂದರೂ ಈ ಜಿಲ್ಲೆಯ ಜನರ ಬದುಕಿಗೆ ಶಾಂತಿ, ನೆಮ್ಮದಿ ತರಲಿಲ್ಲ. ಬಿಜೆಪಿ ಸರಕಾರ ಹೋಗಿ, ಕಾಂಗ್ರೆಸ್ ಬಂದ ನಂತರ ಎಲ್ಲಾ ಸರಿ ಆಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಇದಕ್ಕೆ ಬರೀಸರಕಾರವನ್ನು ದೂರಿದರೆ ಪ್ರಯೋಜನವಿಲ್ಲ. ಎಲ್ಲವನ್ನೂ ಸರಕಾರ ಮಾಡಲು ಆಗು ವುದೂ ಇಲ್ಲ. ಕಾನೂನು ಮತ್ತು ಸುವ್ಯವಸ್ಥೆ ಪ್ರಶ್ನೆಗೆ ಬಂದರೆ, ಕರಾವಳಿಯ ಪೊಲೀಸ್ ಇಲಾಖೆ ಮೇಲೆ ಸರಕಾರದ ನಿಯಂತ್ರಣ ಇದ್ದಂತೆ ಕಾಣುವುದಿಲ್ಲ. ಪೊಲೀಸರು ಸಂಘ ಪರಿವಾರದ ಜೊತೆ ಶಾಮೀಲಾಗಿದ್ದಾರೆ ಎಂಬ ಭಾವನೆ ಜನಸಾಮಾನ್ಯರಲ್ಲಿದೆ. ಇದು ಮಂಗಳೂರುವೊಂದರ ಸಮಸ್ಯೆಯಲ್ಲ. ದೇಶದ ಅನೇಕ ಕಡೆ ಕೋಮು ಗಲಭೆೆ ನಡೆದಾಗ, ಪೊಲೀಸರು ನಿಷ್ಪಕ್ಷಪಾತವಾಗಿ ವರ್ತಿಸುತ್ತಿಲ್ಲ ಎಂಬ ದೂರು ಗಳಿವೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕೋಮು ಗಲಭೆೆ ನಡೆದಾಗಲೆಲ್ಲ, ಪೊಲೀಸರು ವಹಿಸಿದ ಪಾತ್ರ ನ್ಯಾಯಸಮ್ಮತವಾಗಿರಲಿಲ್ಲ ಎಂಬ ವರದಿಗಳು ಇವೆ. ಹೀಗಾಗಿ ಜಾತ್ಯತೀತ ಪಕ್ಷ ಅಧಿಕಾರದಲ್ಲಿ ಇದ್ದರೂ ಶಾಂತಿ ಮತ್ತು ನೆಮ್ಮದಿ ಕಾಪಾಡುವುದು ಸುಲಭದ ಸಂಗತಿಯಲ್ಲ.

ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕೆಂದರೆ, ನಮ್ಮ ಕಾರ್ಯಕರ್ತರು ಪೊಲೀಸ್ ಇಲಾಖೆ, ಸೇನೆ ಮತ್ತು ಸರಕಾರದ ಆಡಳಿತಾಂಗದ ಎಲ್ಲಾ ಕಡೆ ಸೇರಿಕೊಳ್ಳ ಬೇಕು ಎಂದು ವಿನಾಯಕ ದಾಮೋದರ ಸಾವರ್ಕರ ಏಳು ದಶಕಗಳ ಹಿಂದೆಯೇ ಹೇಳಿದ್ದರು. ಏಳು ದಶಕಗಳ ನಂತರ ಆಡಳಿತ ಮತ್ತು ಪೊಲೀಸ್ ಇಲಾಖೆಯ ಕಾರ್ಯ ವೈಖರಿ ಗಮನಿಸಿದರೆ, ಸಂವಿಧಾನೇತರ ಶಕ್ತಿಗಳು ಆಡಳಿತಾಂಗವನ್ನು ನಿಯಂತ್ರಿಸುತ್ತಿ ವೆಯೇ ಎಂಬ ಸಂದೇಹ ಬರುತ್ತದೆ. ಮೀರತ್ ದಂಗೆಯಲ್ಲಿ ಮತ್ತು ಕಾನಪುರ ಕೋಮು ಗಲಭೆೆಯಲ್ಲಿ ಇದು ಸ್ಪಷ್ಟವಾಗಿದೆ. ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಇಲ್ಲವೆಂದಿಲ್ಲ. ಆದರೆ ಅಂಥವರು ಬಹಳ ರಿಸ್ಕ್ ತೆಗೆದುಕೊಂಡು ಕೆಲಸ ಮಾಡಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಸಂಘಿ ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕಲು ಮುಂದಾದ ಅತ್ಯಂತ ದಕ್ಷ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಅವರು ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಸಾವಿಗೀಡಾದರೂ ಅವರ ಸಾವಿನ ಬಗ್ಗೆ ಸಂದೇಹಗಳಿವೆ.

ಅದೇನೆ ಇರಲಿ, ಹಿಂದೂಗಳು, ಮುಸಲ್ಮಾನರು, ಕ್ರೈಸ್ತರು, ಬಿಲ್ಲವರು, ಮೊಗವೀರರು ಮತ್ತು ಜೈನರು ಹೀಗೆ ಎಲ್ಲಾ ಸಮುದಾಯದವರು ಒಟ್ಟಾಗಿ ಕಟ್ಟಿಕೊಂಡ ತುಳು ನಾಡಿನ ಬದುಕು ಛಿದ್ರವಾಗಿ ಹೋಗುತ್ತಿರುವ ಬಗ್ಗೆ ತುಂಬಾ ಆತಂಕ ಊಂಟಾಗುತ್ತದೆ. ಅಸ್ಪಶ್ಯ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಬದುಕನ್ನೇ ಮೀಸಲಿಟ್ಟ ಕುದ್ಮುಲ್ ರಂಗರಾಯರು ಆಗಾಗ್ಗೆ ಹೇಳುತ್ತಿದ್ದ ಮಾತು ನೆನಪಿಗೆ ಬರುತ್ತದೆ. ದಲಿತ ಮಕ್ಕಳು ಓದಿ, ದೊಡ್ಡ ಸಾಹೇಬರಾಗಿ ತನ್ನ ಮುಂದೆ ಕಾರಿನಲ್ಲಿ ಹೋದರೆ, ಅವರ ಕಾರಿನ ದೂಳು ನನ್ನ ಕಣ್ಣಿನಲ್ಲಿ ಬಿದ್ದರೆ, ಪುನೀತನಾಗುತ್ತೇನೆ ಎಂದು ಅವರು ಹೇಳುತ್ತಿದ್ದರು. ಮಾನವರೆಲ್ಲ ಒಂದೇ ಎಂಬ ಸಂದೇಶ ಸಾರಿದ ಕೇರಳದ ನಾರಾಯಣ ಗುರುಗಳು ಮಂಗಳೂರು ನೆಲದಲ್ಲೇ ನಡೆದಾಡಿ, ವಂಚಿತ ಸಮುದಾಯಗಳಿಗಾಗಿ ಗೋಕರ್ಣ ನಾಥೇಶ್ವರ ದೇವಸ್ಥಾನ ಕಟ್ಟಿದರು. ಸಂವಿಧಾನ ರಚನೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರೊಂದಿಗೆ ಹೆಗಲಿಗೆ ಹೆಗಲು ಕೊಟ್ಟ ಬೆನಗಲ್ ನರಸಿಂಗರಾಯರು ಇದೇ ದಕ್ಷಿಣ ಕನ್ನಡದವರು. ಈ ದೇಶದಲ್ಲಿ ಕಮ್ಯುನಿಸ್ಟ್ ಚಳವಳಿ ಕಟ್ಟಿದ ಪ್ರಮುಖರಲ್ಲಿ ಒಬ್ಬರಾದ ಸಚ್ಚಿದಾನಂದ ವಿಷ್ಣು ಘಾಟೆ ಇದೇ ಮಣ್ಣಿನಲ್ಲಿ ಹುಟ್ಟಿ ದೇಶದೆತ್ತರಕ್ಕೆ ಬೆಳೆದು ನಿಂತವರು. ಸಮಾಜವಾದಿ ನಾಯಕಿ, ಚಿಂತಕಿ ಕಮಲಾದೇವಿ ಚಟ್ಟೋಪಾಧ್ಯಾಯ ಮತ್ತು ಜಾರ್ಜ್ ಫೆರ್ನಾಂಡಿಸ್ ಅಂಥವರನ್ನು ನೀಡಿದ ಜಿಲ್ಲೆಯಿದು. ಸಾಹಿತ್ಯಕ್ಕೆ ಬಂದರೆ, ಶಿವರಾಮ ಕಾರಂತ, ನಿರಂಜನ, ವ್ಯಾಸರಾಯ ಬಲ್ಲಾಳ, ಬಿ.ಎಂ.ಇದಿನಬ್ಬ ಇಂಥವರೆಲ್ಲ ಇಲ್ಲಿ ಆಗಿ ಹೋಗಿದ್ದಾರೆ. ಪಕ್ಕದ ಕಾಸರಗೋಡು ಜಿಲ್ಲೆಯ ಕಯ್ಯಾರ ಕಿಂಞಣ್ಣ ರೈ, ಪಂಜೆ ಮಂಗೇಶರಾವ್ ಇವರೆಲ್ಲ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.

ರಾಜಕಾರಣಕ್ಕೆ ಬಂದರೆ, ಈ ಜಿಲ್ಲೆಯಿಂದ ಬಿ.ವಿ.ಕಕ್ಕಿಲಾಯ, ಕಾಮ್ರೇಡ್ ಕೃಷ್ಣಶೆಟ್ಟಿ, ವೈಕುಂಠ ಬಾಳಿಗಾ, ನಾಗಪ್ಪ ಆಳ್ವಾ, ಬಿ.ಎಂ.ಇದಿನಬ್ಬ, ಪಿ.ರಾಮಚಂದ್ರ ರಾವ್, ಬಿ.ಎ.ಮೊಹಿದ್ದಿನ್ ಅಂಥವರು ಇಲ್ಲಿ ಗೆದ್ದು ಬಂದು ವಿಧಾನಸಭೆ ಪ್ರವೇಶಿಸಿದ್ದರು. ವೀರಪ್ಪ ಮೊಯ್ಲಿ ಅಂಥವರು ಮುಖ್ಯಮಂತ್ರಿಯಾದರೆ, ಜನಾರ್ದನ ಪೂಜಾರಿ ಕೇಂದ್ರ ಮಂತ್ರಿಯಾದರು.

ಇಂಥ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ನೆತ್ತರು ಹರಿಯುತ್ತಿದೆ.ಇದು ಮನುಷ್ಯನ ನೆತ್ತರು. ಈ ಕೆಂಪು ನೆತ್ತರಿನಲ್ಲಿ ಜಾತಿ-ಧರ್ಮವನ್ನು ಹುಡುಕುವ ಕುಬ್ಜ ಮಾನವರು ಹುಟ್ಟಿಕೊಂಡಿದ್ದಾರೆ. 70ರ ದಶಕದಲ್ಲಿ ಕಕ್ಕಿಲಾಯರನ್ನು ಗೆಲ್ಲಿಸಿದ ಬಂಟ್ವಾಳ ಈಗ ಕೋಮು ಕಲಹದ ರಣರಂಗವಾಗಿದೆ. ಕಕ್ಕಿಲಾಯರು ಗೆದ್ದಾಗ, ಅವರನ್ನು ಹೊತ್ತು ಕುಣಿದಿದ್ದ ಬಂಟ್ವಾಳದ ಹಿರಿಯರು ಈಗ ಇಲ್ಲ. ಆದರೆ ಅವರ ಪೀಳಿಗೆಗೆ ಸೇರಿದವರು ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಹೊತ್ತು ಕುಣಿಯುತ್ತಿದ್ದಾರೆ. ಇರಿತಕ್ಕೆ ಒಳಗಾದ ತಮ್ಮ ಕಾರ್ಯಕರ್ತ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಸೆಣಸಾಡುತ್ತಿರುವಗಾಲೂ ಭಟ್ಟರು ಭಕ್ತರ ಹೆಗಲ ಮೇಲೆ ಕೂತು ಸಂಭ್ರಮಿಸುತ್ತಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆರೆಸ್ಸೆಸ್ ಕಾರ್ಯಕರ್ತ ಶರತ್ ಅವರನ್ನು ಆಸ್ಪತ್ರೆಗೆ ಕರೆದೊಯ್ದವರು ಸ್ವಯಂ-ಸೇವಕರಲ್ಲ, ಶರತ್ ಅವರ ಆತ್ಮೀಯ ಸ್ನೇಹಿತ ಅಬ್ದುಲ್ ರವೂಫ್. ಮನುಷ್ಯತ್ವದ ಈ ಬತ್ತದ ಸೆಲೆಯೇ ತುಳುನಾಡನ್ನು ಇಲ್ಲಿಯವರೆಗೆ ಬದುಕಿಸಿದೆ.

ಹೆಣಗಳನ್ನು ನೆಲಕ್ಕೆ ಕೆಡವಿ ವೋಟ್ ಬೆಳೆ ತೆಗೆಯುವ ನೀಚತನದ ರಾಜಕಾರಣ ಇಲ್ಲಿ ನಡೆದಿದೆ. ಇದನ್ನೆಲ್ಲ ಕಣ್ಣಾರೆ ಕಂಡು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಮತ್ತು ಉಡುಪಿಯ ಪೇಜಾವರ ಶ್ರೀಗಳು ಯಾಕೋ ಮೂಕಪ್ರೇಕ್ಷಕರಾಗಿದ್ದಾರೆ.

ನಾನು ಹುಟ್ಟಿ ಬೆಳೆದ ಬಿಜಾಪುರ ಜಿಲ್ಲೆ ಬಿಟ್ಟರೆ ಅತ್ಯಂತ ಇಷ್ಟಪಡುವ ಜಿಲ್ಲೆ ದಕ್ಷಿಣ ಕನ್ನಡ. 70ರ ದಶಕದಲ್ಲಿ ಈ ರಮ್ಯತಾಣಕ್ಕೆ ಕಾಲಿಟ್ಟಾಗ, ಇಲ್ಲಿ ಸುತ್ತಲೂ ಕಂಡ ಹಸಿರು, ಕಡಲು, ಬೆಟ್ಟ ಎಲ್ಲವನ್ನೂ ನೋಡಿ ವಿಸ್ಮಯಗೊಂಡಿದ್ದೆ. 1977ರಲ್ಲಿ ಪುತ್ತೂರಿನಲ್ಲಿ ನಡೆದ ಪ್ರಗತಿಪಂಥ ಸಾಹಿತ್ಯ ಸಮ್ಮೇಳನಕ್ಕೆ ನಿರಂಜನ ಅವರ ಜೊತೆ ಇಲ್ಲಿ ಬಂದಿದ್ದೆೆ. ಆತ್ಮೀಯ ಗೆಳೆಯ ಅಶೋಕ ಶೆಟ್ಟರ್ ಕೂಡ ಜೊತೆಯಿದ್ದರು. ಅಂದಿನ ಸಮ್ಮೇಳನದಲ್ಲಿ ನಿರಂಜನ ದಂಪತಿ, ಬಸವರಾಜ ಕಟ್ಟಿಮನಿ, ಮಿನುಗು ತಾರೆ ಕಲ್ಪನಾ ಮತ್ತು ಆಗಿನ ಶಾಸಕರಾಗಿದ್ದ ಬಿ.ವಿ.ಕಕ್ಕಿಲಾಯರು ಭಾಗವಹಿಸಿದ್ದರು. ಪುತ್ತೂರಿನ ವಿದ್ವಾಂಸ ಬಿ.ಎಂ.ಶರ್ಮ ಸಮ್ಮೇಳನ ಸಂಘಟಿಸಿದ್ದರು. ಆನಂತರ ಆಗಾಗ್ಗೆ ಮಂಗಳೂರಿಗೆ ಹೋಗಿ ಬರುತ್ತಲೇ ಇರುವೆ. ಕೋಮು ಸೌಹಾರ್ದ ವೇದಿಕೆಯ ಕಾರ್ಯದರ್ಶಿಯಾಗಿದ್ದಾಗ, ತಿಂಗಳಿಗೊಮ್ಮೆಯಾದರೂ ಮಂಗಳೂರು ಮತ್ತು ಉಡುಪಿಗೆ ಹೋಗಿ ಬರುತ್ತಲೇ ಇದ್ದೆ. ಕಳೆದ ಶತಮಾನದ 70ರ ದಶಕದಿಂದ ಈವರೆಗಿನ ಬದಲಾಗುತ್ತಿರುವ ಮಂಗಳೂರನ್ನು ನೋಡುತ್ತಲೇ ಇರುವೆ. ಮೊದಲ ಬಾರಿ ಪುತ್ತೂರಿಗೆ ಬಂದಾಗ, ಕನ್ನಡದ ಹಿರಿಯ ಕವಿ ಸುಬ್ಬಣ್ಣ ಎಕ್ಕುಂಡಿ ಜೊತೆಗಿದ್ದರು. ಮಂಗಳೂರಿನಿಂದ ವಾಪಸ್ ಹುಬ್ಬಳ್ಳಿಗೆ ಹೋಗುವಾಗ, ಹಂಪನಕಟ್ಟೆ ಬಸ್ ನಿಲ್ದಾಣದಲ್ಲಿ ಯಕ್ಕುಂಡಿ ಅವರೊಂದಿಗೆ ಕಳೆದ ಕ್ಷಣಗಳು ಈಗಲೂ ನೆನಪಿಗೆ ಬರುತ್ತವೆ. ಮಂಗಳೂರು ಬಗೆಗಿನ ಆಕರ್ಷಣೆಗೆ ಇನ್ನೊಂದು ಕಾರಣ ನಮಗೆಲ್ಲ ಕಮ್ಯುನಿಸಂ ಹೇಳಿಕೊಟ್ಟವರು ಮಂಗಳೂರು ಮೂಲದ ಎನ್.ಕೆ.ಉಪಾಧ್ಯಾಯರು. ಕಳೆದ ಶತಮಾನದ 40ರ ದಶಕದಲ್ಲಿ ಕಮ್ಯುನಿಸ್ಟ್ ಪಕ್ಷ ಕಟ್ಟಲು ನಮ್ಮ ಬಿಜಾಪುರ ಜಿಲ್ಲೆಗೆ ಬಂದ ಉಪಾಧ್ಯಾಯರು ಅದೇ ಊರಿನಲ್ಲಿ ಎಂಟೂವರೆ ದಶಕಗಳನ್ನು ಕಳೆದು ಅದೇ ಮಣ್ಣಿನಲ್ಲಿ ಮಣ್ಣಾಗಿ ಹೋದರು. ಹೀಗೆ ಮಂಗಳೂರಿನ ನಂಟು ಬಾಲ್ಯದಿಂದಲೂ ಅಂಟಿಕೊಂಡಿದೆ. ಇಂತಹ ನನ್ನ ಮೆಚ್ಚಿನ ಮಂಗಳೂರು ಈಗ ಹೀಗಾಗಿರುವುದು ಕಂಡು ಆತಂಕ ಉಂಟಾಗುತ್ತದೆ. ಯಾರಿಗೂ ಯಾವ ತೊಂದರೆಯನ್ನೂ ಮಾಡದ ಅಶ್ರಫ್ ಮತ್ತು ಶರತ್ ಅವರಂತಹ ಅಮಾಯಕರು ಬೀದಿ ಹೆಣವಾಗುತ್ತಿರುವುದು ಕಂಡು ಸಂಕಟವಾಗುತ್ತದೆ. ಕಾರಣವಿಲ್ಲದ ಕಗ್ಗೊಲೆಗಳಿಗೆ ಉತ್ತರ ಹುಡುಕುವುದು ಕಷ್ಟ. ಜಾತಿ, ಧರ್ಮದ ಅಮಲು ನೆತ್ತಿಗೇರಿದಾಗ ಮನುಷ್ಯ ಮೃಗವಾಗುತ್ತಾನೆ ಎಂಬುದಕ್ಕೆ ತುಳುನಾಡು ಉದಾಹರಣೆ ಆಗುತ್ತಿರುವುದು ವಿಷಾದದ ಸಂಗತಿ. ಧರ್ಮ ಎಂಬುದು ಲಾಭದಾಯಕ ದಂಧೆ ಯಾದಾಗ, ಕಲ್ಲಡ್ಕ ಪ್ರಭಾಕರ ಭಟ್ಟರಂತಹವರು ಹುಟ್ಟಿಕೊಳ್ಳುತ್ತಾರೆ. ಅಮಾಯಕ ಯುವಕರಲ್ಲಿ ಧರ್ಮದ ನಶೆಯೇರಿಸಿ, ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ನಗುತ್ತಾರೆ. ತಮ್ಮ ಮಕ್ಕಳನ್ನು ವ್ಯಾಸಂಗ ಮಾಡಲು ವಿದೇಶಕ್ಕೆ ಕಳುಹಿಸುತ್ತಾರೆ.

ತುಳುನಾಡಿನ ಬದುಕು ಕೋಮು ಆಧಾರದಲ್ಲಿ ಧ್ರುವೀಕರಣಗೊಂಡಿದ್ದರೂ ಚುನಾವಣೆಗಳು ಸಮೀಪಿಸಿದಾಗ ಇಲ್ಲಿ ಕೆಲವರ ಪಿತ್ಥ ನೆತ್ತಿಗೇರುತ್ತದೆ. ಇದು ಹಿಂದೂ-ಮುಸ್ಲಿಂ ದ್ವೇಷವೆಂದು ವ್ಯಾಖ್ಯಾನಿಸಬೇಕಿಲ್ಲ. ಹಿಂದೂಗಳೇ ಆದ ವಿನಾಯಕ ಬಾಳಿಗಾ, ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ ಹೀಗೆ ಅನೇಕ ಯುವಕರು ಇಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಅವರನ್ನು ಕೊಂದವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ದೇವಾಲಯವೊಂದರ ಭ್ರಷ್ಟಾಚಾರವನ್ನು ಬಯಲಿಗೆಳೆದ ಬಾಳಿಗಾ ಅವರ ಕೊಲೆ ಆರೋಪಿ ಜೊತೆಗೆ ಸೂಲಿಬೆಲೆಯಂಥವರು ತೆಗೆಸಿಕೊಂಡ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ದಕ್ಷಿಣ ಕನ್ನಡದಲ್ಲಿ ಚುನಾವಣೆ ಸಮೀಪಿಸಿದಾಗ ಕೋಮು ಜ್ವರ ಉಲ್ಬಣಗೊ ಳ್ಳುತ್ತದೆ. ಮನುಷ್ಯರನ್ನು ಕೊಂದು ವೋಟ್ ಬ್ಯಾಂಕ್ ನಿರ್ಮಿಸಿಕೊಳ್ಳುವ ರಾಜಕಾರಣ ಆರಂಭವಾಗುತ್ತದೆ. ಚುನಾಯಿತ ಪ್ರತಿನಿಧಿಗಳೇ ನಿಷೇಧಾಜ್ಞೆ ಉಲ್ಲಂಘಿಸಿ ಬೀದಿಗೆ ಇಳಿಯುತ್ತಾರೆ. ಈ ಜಿಲ್ಲೆಯನ್ನು ಸಂಘ ಪರಿವಾರಕ್ಕೆ ಬಿಟ್ಟುಕೊಟ್ಟ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ಪುನರ್ವಸತಿ ಪಡೆದಿದ್ದಾರೆ. ಜನಾರ್ದನ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಕಳೆದು ಹೋಗಿದ್ದಾರೆ. ದಿಲ್ಲಿಯಲ್ಲಿ ಕುಳಿತ ಆಸ್ಕರ್ ಫೆರ್ನಾಂಡಿಸ್ ಅನೇಕ ಆರೋಪಗಳಲ್ಲಿ ಸಿಲುಕಿದ ಬಿಜೆಪಿ ನಾಯಕರನ್ನು ರಕ್ಷಿಸುತ್ತ ಬಂದಿದ್ದಾರೆ. ಎಡಪಕ್ಷಗಳ ಶಕ್ತಿಯು ಈಗ ಮುಂಚಿನಂತಿಲ್ಲ. ಆದರೂ ತಮ್ಮ ಶಕ್ತಿಮೀರಿ ಪ್ರತಿರೋಧ ಒಡ್ಡುತ್ತಿವೆ.

ಇಂಥ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಮತ್ತು ನೆಮ್ಮದಿ ವಾತಾವರಣ ಮರುಕಳಿಸ ಬೇಕಾದರೆ, ಜಾತಿ ಮತ್ತು ಮತವನ್ನು ಮೀರಿ ಮನುಷ್ಯನನ್ನು ಮನುಷ್ಯ ಪ್ರೀತಿಸುವ ಬುದ್ಧ, ಬಸವ, ನಾರಾಯಣಗುರು, ಅಂಬೇಡ್ಕರ್, ಕುವೆಂಪು ನೀಡಿದ ಬೆಳಕಿನಲ್ಲಿ ನಾವು ಸಾಗಬೇಕು. ಹೊಸ ಪೀಳಿಗೆಯಲ್ಲಿ ವೈಚಾರಿಕ ಜಾಗೃತಿ ಮೂಡಿಸಬೇಕು. ಪೊಲೀಸ್ ಇಲಾಖೆ ಸೇರಿದಂತೆ ಆಡಳಿತಾಂಗವನ್ನು ಜಾತ್ಯತೀತಗೊಳಿಸಬೇಕು. ಧರ್ಮವನ್ನು, ದೇವರನ್ನು ವ್ಯಾಪಾರಕ್ಕೆ ಇಟ್ಟ ಮಠಾಧೀಶರ ಬದಲಿಗೆ ಸ್ವಾಮಿ ವಿವೇಕಾನಂದರು ನೀಡಿದ ವಿಶ್ವ ಮಾನವತೆಯ ದಾರಿಯಲ್ಲಿ ಸಾಗಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)