varthabharthi

ಅನುಗಾಲ

ಚೆನ್ನವೀರ ಕಣವಿಯವರ ‘ಸ್ಮತಿ ಸೌರಭ’

ವಾರ್ತಾ ಭಾರತಿ : 12 Jul, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕಣವಿಯವರು ತಮ್ಮ ಬಗ್ಗೆ ಈ ಕೃತಿಯಲ್ಲಿ ಫೋಕಸ್ ಮಾಡಿಕೊಳ್ಳದೆ ತಾನು ಬರೆಯುವವರ ಕುರಿತೇ ಕೇಂದ್ರೀಕರಿಸಿದ್ದನ್ನು ಕನ್ನಡದಲ್ಲಿ ಇತ್ತೀಚೆಗೆ ಬರೆಯುತ್ತಿರುವ ವ್ಯಕ್ತಿಚಿತ್ರಗಾರರು ಅನುಸರಿಸುವುದು, ಅನುಕರಿಸುವುದು ಕನ್ನಡ ಸಾಹಿತ್ಯಕ್ಕೆ ಒಳಿತನ್ನು ಮಾಡೀತು.


ಕನ್ನಡ ಸಾಹಿತ್ಯದಲ್ಲಿ ವ್ಯಕ್ತಿ ಚಿತ್ರಗಳ ಅನೇಕ ಕೃತಿಗಳು ಬಂದಿವೆ. ಸಮಗ್ರವಲ್ಲದಿದ್ದರೂ ಈ ಪ್ರಕಟನೆಗಳು ನಮ್ಮೆದುರಿರುವ, ಇಲ್ಲದಿರುವ ಮಹಾ ಚೇತನಗಳ ಕೆಲವು ಮುಖಗಳನ್ನು, ಅವರ ಬೃಹತ್ತು- ಮಹತ್ತುಗಳನ್ನು ಅಚ್ಚಿನಲ್ಲಿಟ್ಟು ಒಂದಷ್ಟು ಮಂದಿಗೆ ಒಂದಷ್ಟು ಕಾಲ ಚಿರವಾಗಿ ನೆನಪಿನಲ್ಲುಳಿಯುವಂತೆ ಮಾಡಿದ ಕೃತಿಗಳು ಅನೇಕವಿವೆ.

ಚೆನ್ನವೀರ ಕಣವಿಯವರು ಹೊಸಗನ್ನಡದ ಮತ್ತು ನವ್ಯಕಾಲದ ಮಹತ್ವದ ಕವಿ. ಉತ್ತರ ಕರ್ನಾಟಕದ ಗಂಡುಕನ್ನಡದೆದುರು ನವಿರು ಕನ್ನಡದಲ್ಲಿ ಕಾವ್ಯದ ಗಂಧವನ್ನು ಪಸರಿಸಿದವರು. ಒಳ್ಳೆಯ ವಿದ್ವಾಂಸರು ಕೂಡಾ ಹೌದು. ಕುವೆಂಪು ಮತ್ತು ಬೇಂದ್ರೆ ತಮ್ಮ ಕಾಲದಲ್ಲಿ ಹಳೆಯ ಮೈಸೂರು ಮತ್ತು ಉತ್ತರ ಕರ್ನಾಟಕದ ಸಂಬಂಧವನ್ನು ಕಾದುಕೊಂಡಂತೆ ಜಿ.ಎಸ್.ಶಿವರುದ್ರಪ್ಪಮತ್ತು ಕಣವಿಯವರು ಈ ಸಂಬಂಧವನ್ನು ಮುಂದುವರಿಸಿ ಕನ್ನಡ ಕಾವ್ಯ ಜಾಗೃತಿಯನ್ನು ಕಾದುಕೊಂಡವರು. ಕಾವ್ಯಪರಂಪರೆಯ ಸೌಜನ್ಯ ಮತ್ತು ವಿನಯಶೀಲತೆಯನ್ನು ಈ ಕವಿಗಳು ಪ್ರತಿನಿಧಿಸಿದಂತೆ ಆನಂತರದ ಕವಿಗಳು ಪ್ರತಿನಿಧಿಸಿಲ್ಲ/ಪ್ರತಿನಿಧಿಸುತ್ತಿಲ್ಲವೇನೋ?

ಕಣವಿಯವರು ವಿವಿಧ ಸಂದರ್ಭಗಳಲ್ಲಿ ಬರೆದ ನಾಡು-ನುಡಿಯ ಜ್ಯೇಷ್ಠರ, ಶ್ರೇಷ್ಠರ ವ್ಯಕ್ತಿಚಿತ್ರಗಳ ಸಂಕಲನ ‘ಸ್ಮತಿ ಸೌರಭ’ ಧಾರವಾಡದ ಮನೋಹರ ಗ್ರಂಥಮಾಲೆಯಿಂದ ಪ್ರಕಟವಾಗಿದೆ. 117 ಪುಟಗಳಲ್ಲಿ ಹಬ್ಬಿಕೊಂಡ ಈ ಕೃತಿಯು ಮಾಸ್ತಿ, ಬೇಂದ್ರೆ, ಡಿ.ವಿ.ಜಿ, ಶಂಬಾ, ವಿ.ಸೀ., ಪ್ರೊ.ಶಿ.ಶಿ. ಬಸವನಾಳ, ತೀ.ನಂ.ಶ್ರಿ., ಅ.ನ.ಕೃ., ಕಟ್ಟೀಮನಿ, ಜಿಎಸ್ಸೆಸ್, ಜಿ.ಬಿ.ಜೋಶಿ, ಹಿರೇಮಲ್ಲೂರು ಈಶ್ವರನ್, ಡಾ.ಆರ್.ಸಿ.ಹಿರೇಮಠ, ಪ್ರೊ.ಸ.ಸ.ಮಾಳವಾಡ, ಎಂ.ಎಂ.ಕಲ್ಬುರ್ಗಿ ಹೀಗೆ ಹದಿನೈದು ವ್ಯಕ್ತಿಚಿತ್ರಗಳನ್ನು ನೀಡುತ್ತದೆ.

ಕಣವಿಯವರು ತಮ್ಮ ಮಾತುಗಳಲ್ಲಿ ಹೇಳಿದಂತೆ ಅವರ ನೆನಪುಗಳು ಅವರ ಅನೇಕ ಕವಿತೆಗಳಲ್ಲಿ ಹಾಗೂ ಕೆಲ ಗದ್ಯಬರಹಗಳಲ್ಲಿ (ವಿಶೇಷವಾಗಿ ವ್ಯಕ್ತಿಚಿತ್ರಗಳಲ್ಲಿ) ಪ್ರಸ್ತಾಪಗೊಂಡಿರುವುದರಿಂದ ಪುನರುಕ್ತಿಯಾಗಬಹುದೆಂದು (ಅವರು) ಅದಕ್ಕೆ ಮನಸ್ಸು ಮಾಡಲಿಲ್ಲ. ‘‘ಅದಕ್ಕೆ ಪರ್ಯಾಯವೆಂಬಂತೆ ಈ ‘ಸ್ಮತಿ ಸೌರಭ’ ರೂಪುಗೊಂಡಿದೆ. ಇಲ್ಲಿ ಚಿತ್ರಣಗೊಂಡ ಹಿರಿಯರ ಹಾಗೂ ಮಿತ್ರರ ಒಡನಾಟದಿಂದ ನಾನು ಧನ್ಯತೆ ಪಡೆದಿದ್ದೇನೆ’’ ಎನ್ನುತ್ತಾರೆ ಕಣವಿಯವರು.

ಇವು ವಿವಿಧ ಸಂದರ್ಭಗಳಲ್ಲಿ ಬೇಡಿಕೆ-ಅಪೇಕ್ಷೆಗಳಿಗನುಗುಣವಾಗಿ ಬರೆದಿರುವುದರಿಂದಾಗಿ ಇವುಗಳ ಪಾತ್ರ-ಗಾತ್ರಗಳು ಭಿನ್ನವಾಗಿವೆ. ಆದರೆ ಇವುಗಳು ನೀಡುವ ಅನುಭವ ಮಾತ್ರ ಹೃದಯಸಂಪನ್ನ. ಮುಖ್ಯವಾಗಿ ಇಲ್ಲಿ ಚಿತ್ರಿತವಾದವರು ಉತ್ತರ ಕರ್ನಾಟಕದ ಅದರಲ್ಲೂ ಧಾರವಾಡ ಸುತ್ತುಮುತ್ತಲಿನ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ-ಸಾಹಿತ್ಯಕ ಪರಿಸರದ ಹಿರಿಯರು ಮತ್ತು ಅವರ ಸಮಕಾಲೀನರು. ಆದರೆ ಅವರು ಕಂಡ, ಕೇಳಿದ, ಸಂವಹಿಸಿದ ಮಾಸ್ತಿ, ಡಿ.ವಿ.ಜಿ., ವಿ.ಸೀ., ತೀ.ನಂ.ಶ್ರೀ, ಅ.ನ.ಕೃ, ಜಿಎಸ್ಸೆೆಸ್ ಮುಂತಾದವರೂ ಇಲ್ಲಿ ಪೂಜ್ಯ ಇಲ್ಲವೇ ಆತ್ಮೀಯತೆಯ ಸಹಭಾಗಿತ್ವವನ್ನು ಪಡೆದಿದ್ದಾರೆ.

ಒಂದೊಂದು ಲೇಖನವೂ ಇವರ ಕುರಿತ ಗೌರವಾದರಗಳನ್ನು ಆಪ್ತವಾಗಿ ವಿವರಿಸುತ್ತವೆ. ಮಾಸ್ತಿಯವರ ವಿನಯ ಎಲ್ಲರಿಗೂ ಗೊತ್ತು. ಕಣವಿಯವರು ಆ ಮಹಾನ್ ವ್ಯಕ್ತಿತ್ವವನ್ನು ಚಿತ್ರಿಸಿದ್ದಾರೆ. ಮಾಸ್ತಿಯವರು ತೋರಿಸುವ ಹೃದಯ ವೈಶಾಲ್ಯ, ಉದಾತ್ತತೆ, ಅನುಕಂಪ ಮುಂತಾದ ದೊಡ್ಡ ಗುಣಗಳನ್ನು ಬಿಚ್ಚಿಟ್ಟ ಬಳಿಕ ಮಾಸ್ತಿಯವರು ಜ್ವರ ಹಾಗೂ ‘ಕಾಲಿಗೆ ಮುಳ್ಳು ಚುಚ್ಚಿದ್ದೋ ಚಪ್ಪಲಿ ಒತ್ತಿದ್ದೋ ನೆಪವಾಗಿ’ ಕಾಲಿನ ಬೆರಳು ಬಾತುಕೊಂಡು ಅಸೌಖ್ಯದಿಂದ ನರಳಿದ ಸಂದರ್ಭದಲ್ಲಿ ಕಣವಿಯವರು ‘‘ಆಗ ದಿನಕ್ಕೆ ಮೂರು ಹೊತ್ತು ಅವರಿಗೆ ಔಷಧಿ ಕುಡಿಸುವ ಕೆಲಸ ನನ್ನ ಪಾಲಿಗೆ ಬಂದಿತ್ತು. ಇದರಿಂದ ನಾನು ಅವರಿಗೆ ಇನ್ನಷ್ಟು ಸಮೀಪದವನಾಗಿಬಿಟ್ಟೆ.

ಇಷ್ಟು ದಿನ ಗೆಲುವಿನಿಂದ ಕೂಡಿದ ಅವರ ಮುಖದಿಂದ ಸರಸವಾದ ವೀಣಾವಾಣಿಯನ್ನು ಕೇಳಿದ ನಾನು ಈಗ ಅವರು ಆಗಾಗ ‘ಅಪ್ಪಾಶ್ರೀನಿವಾಸ’ ಎಂದು ಮೆಲ್ಲಗೆ ನರಳುವುದನ್ನು ಕೇಳಿದಾಗೆಲ್ಲ ನನ್ನ ಜೀವನವೇ ಹಿಡಿದಂತಾಗುತ್ತಿತ್ತು.’’ ಎನ್ನುತ್ತಾರೆ. (ಜೀವವೇ ಹಿಂಡಿದಂತಾಗುತ್ತಿತ್ತು ಎಂದಿರಬೇಕಾಗಿತ್ತೇನೋ?) ಹಾಗೆಯೇ ಮಾಸ್ತಿಯವರ ಒಟ್ಟು ವ್ಯಕ್ತಿತ್ವವನ್ನು ಕಣವಿಯವರು ಈ ವಾಕ್ಯದಲ್ಲಿ ಕಟ್ಟಿಕೊಡುತ್ತಾರೆ: ‘‘ಸಂಪ್ರದಾಯ ಮನೋಭಾವಕ್ಕೂ ಹೊಸಮೌಲ್ಯಗಳಿಗೂ ಘರ್ಷಣೆ ನಡೆದರೆ ಮಾಸ್ತಿಯವರು ಬಹುಶಃ ಸಂಪ್ರದಾಯಕ್ಕೆ ಒಲಿದಾರು.’’

ವರಕವಿ ಬೇಂದ್ರೆಯವರ ಸನಿಹದಲ್ಲೇ ಬೆಳೆದ ಕಣವಿ ಬೇಂದ್ರೆಯವರ ಕುರಿತ ಅನೇಕ ಮೌಲಿಕ ಘಟನೆಗಳನ್ನು ಹೇಳುತ್ತಾರೆ: ‘‘ಒಂದು ಸಂದರ್ಭದಲ್ಲಿ ನಾನವರನ್ನು ಕೇಳಿದ್ದೆ: ‘ಆಕಾಶವಾಣಿ ಸಾಹಿತ್ಯ ಸಲಹಾಕಾರ ಹುದ್ದೆಯಲ್ಲಿರುವ ನೀವು ಮನೆಯಲ್ಲಿ ಬಹಳ ವೇಳೆ ರೇಡಿಯೊ ಕೇಳಬೇಕಾಗಿ ಬಂತಲ್ಲ’ ಎಂದು. ‘ಯಾವಾಗಲಾದರೂ ಸ್ವಲ್ಪಹೊತ್ತು ಕೇಳ್ತೀನಿ. ಹಗಲೆಲ್ಲ ಕೇಳಿದರ ನನ್ನ ಕಲ್ಪನಾ ಶಕ್ತಿಯನ್ನೇ ಕಳಕೊಳ್ಳಬೇಕಾದೀತು’ ಎಂದು ನಕ್ಕರು.’’ ಬೇಂದ್ರೆಯವರು ‘ಏಕಾಂತತೆ ಗದ್ದಲದಲ್ಲಿಯೂ ಸಾಧ್ಯ’, ‘‘ವಿಮರ್ಶಕರೆಂಬವರ ಟೀಕೆಗಿಂತ ರಸಿಕರ ವಿಮರ್ಶೆ ತಮಗೆ ಪ್ರೇರಣೆ ಉದ್ದೀಪನಗಳನ್ನು ಕೊಟ್ಟಿವೆ’’ ಎಂದು ಹೇಳಿದ್ದನ್ನು, ಕಣವಿಯರು ನೆನಪಿಸಿಕೊಳ್ಳುತ್ತ ಓದುಗರೊಂದಿಗೆ ಹಂಚಿಕೊಳ್ಳುತ್ತಾರೆ.

ಮುಪ್ಪಿನ ಷಡಕ್ಷರಿಯ ‘ಹೋರಾಟವಿಕ್ಕಿಸಲು ಬೇರಾದೆಯಲ್ಲದೆ ಬೇರುಂಟೆ ಜಗದೊಳಗೆ ಎಲೆ ದೇವನೆ’ ಎಂಬುದರ ವಿಚಾರವಾಗಿ ಬೇಂದ್ರೆಯವರು ‘‘ಬೇರಾದೆ ಎಂಬ ಪದವನ್ನು ‘ಬೇರು ಆದೆ, ಹೋರಾಟಕ್ಕೆ ಮೂಲ ಕಾರಣವಾದೆ’ ಎಂದು ಅರ್ಥೈಸಿದಾಗ ಮಾಸ್ತಿಯವರೂ ಗೋಣು ಹಾಕಿದರು. ಶ್ಲೇಷೆ ಒಂದು ಸಹಜವಾದ ಶಕ್ತಿಯಾಗಿ ಬೇಂದ್ರೆಯವರಿಗೊಲಿದಿರುವುದನ್ನು ಅವರ ಕಾವ್ಯದುದ್ದಕ್ಕೂ ಕಾಣಬಹುದು’’ ಎಂದು ಬರೆಯುತ್ತ ಬೇಂದ್ರೆಯವರ ಕಾವ್ಯದ ಒಂದು ಗುಣವನ್ನೂ ವ್ಯಾಖ್ಯಾನಿಸುತ್ತಾರೆ.

ಡಿ.ವಿ.ಜಿ. ಸಾಹಿತ್ಯ ಋಷಿ. ಜನಜನಿತವಾಗಿರುವ ಅವರ ಸರಳತೆ, ಪಾಂಡಿತ್ಯ ಇವನ್ನು ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ. ಪ್ರಾಯಃ ಡಿ.ವಿ.ಜಿ.ಯವರನ್ನು ಅವರು ಒಮ್ಮೆ ಮಾತ್ರ ಮುಖತಃ ಭೇಟಿಯಾಗಿದ್ದುದರಿಂದ (ಮತ್ತು ಉಳಿದಂತೆ ಪತ್ರ ಮುಖೇನ!) ಹೆಚ್ಚು ವಿವರಣೆಗಳಿಲ್ಲ. ಇದೂ ಒಂದು ರೀತಿಯ ಪ್ರಾಮಾಣಿಕತೆಯೇ. ನಾಡು-ನುಡಿಗೆ ದುಡಿದ ಕನ್ನಡದ ಹಿರಿಯ ವಿದ್ವಾಂಸ ಶಂಬಾ ಕುರಿತ ಸ್ಮತಿಯೂ ನಿಚ್ಚಳವಾಗಿದೆ ಮತ್ತು ಶಂಬಾ ವ್ಯಕ್ತಿತ್ವದಂತೆ ಮುಕ್ತವಾಗಿದೆ. ಶಂಬಾ ಅವರಿಗೆ ಸಿಗಬೇಕಾಗಿದ್ದ ಗೌರವ ಮತ್ತು ಸ್ಥಾನ ಸಿಗಲಿಲ್ಲವೆಂದು ಸೂಚಿಸುವಾಗ ಕಣವಿಯವರಿಗೆ ಹಿಂಜರಿಕೆ, ಸಂಕೋಚಗಳಿಲ್ಲ. ತಡವಾಗಿಯಾದರೂ ಶಂಬಾ ಗೌರವ ಡಾಕ್ಟರೇಟ್, ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಇವುಗಳನ್ನು ಪಡೆದದ್ದನ್ನು ಉಲ್ಲೇಖಿಸುತ್ತಾ ‘‘ಆದರೆ ಬರಬರುತ್ತ ಶಂಬಾ ಅವರು ಈ ‘ಖಗ್ರಾಸಗ್ರಹಣ’ದಿಂದ ಮುಕ್ತರಾದರು.’’ ಎನ್ನುತ್ತಾರೆ.

ವಿ.ಸೀ.ಯವರು ಕನ್ನಡದ ಕಟ್ಟಾಳು. ವಿದ್ವತ್ತು ಮತ್ತು ಪ್ರತಿಭೆ ಇವೆರಡರಲ್ಲೂ ಅಪ್ರತಿಮರು. ವಿ.ಸೀ.ಯವರನ್ನು ಸಮೀಪದಿಂದ ಕಂಡು ಕೇಳಿದ ಕಣವಿಯವರು ಅವರ ಪಾಂಡಿತ್ಯವನ್ನು ಮತ್ತು ನಿರರ್ಗಳತೆಯನ್ನು ಮನಸಾರೆ ಕೊಂಡಾಡುತ್ತಾರೆ. ವಿ.ಸೀ. ಅವರ ‘ಕಸ್ಮೈ ದೇವಾಯ’, ‘ಅಭೀಃ’ ಮುಂತಾದ ಕವನಗಳು ವಿದ್ಯಾರ್ಥಿದೆಸೆಯಲ್ಲೇ ತಮ್ಮನ್ನು ಸೆಳೆದ ಬಗೆಯನ್ನು ಉಲ್ಲೇಖಿಸುತ್ತಾರೆ. ಪ್ರೊ.ಶಿ.ಶಿ.ಬಸವನಾಳರು ಶಿಕ್ಷಣ, ಪತ್ರಿಕೋದ್ಯಮ, ಸಾಹಿತ್ಯ, ಸಾಮಾಜಿಕ, ಧಾರ್ಮಿಕ ಈ ಎಲ್ಲ ಕ್ಷೇತ್ರಗಳಲ್ಲಿ ಚಿಂತನೆ ನಡೆಸಿದವರು ಮಾತ್ರವಲ್ಲ, ಕ್ರಿಯಾಶೀಲ ಮನೋಧರ್ಮವನ್ನು ಬೆಳೆಸಿಕೊಂಡವರು ಮತ್ತು ಬೆಳೆಸಿದವರು. ಅವರ ಕುರಿತ ಲೇಖನವೇ ಈ ಕೃತಿಯಲ್ಲಿ ಅತ್ಯಂತ ದೀರ್ಘವಾದದ್ದು. ಬಸವನಾಳರು ಕಣವಿಯವರಿಗೆ ಕಾಲಮಾನದಲ್ಲಿ ತೀರ ಹಿರಿಯರಾದ್ದರಿಂದ ಮತ್ತು ಅವರ ಸಂಗ ಹೆಚ್ಚಾಗಿ ಕಂಡುಬರದಿರುವುದರಿಂದ ಇದೊಂದು ಬಗೆಯ ವಿವರಣಾತ್ಮಕ ಮತ್ತು ಅಭಿನಂದನಾತ್ಮಕ ಲೇಖನವಾಗಿ ಮೂಡಿದೆ.

ತೀ.ನಂ.ಶ್ರೀಯವರು ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ದುಡಿದು ಅನಂತರ ಮೈಸೂರಿಗೆ ಹೋದರು. ಧಾರವಾಡದಲ್ಲಿ ತೀ.ನಂ.ಶ್ರೀ.ಯವರ ವಿದ್ಯಾರ್ಥಿಯಾಗಿದ್ದ ಮತ್ತು ಅವರ ಮನೆಯ ಎದುರುಸಾಲಿನಲ್ಲೇ ವಾಸಿಸುತ್ತಿದ್ದ ಕಣವಿಯವರು ತೀ.ನಂ.ಶ್ರೀ.ಯವರ ಪ್ರಭಾವವನ್ನು ವಿವರಿಸಿದ್ದಾರೆ. ‘‘ಹೇಳುವ ವಿಷಯವನ್ನು ತಲಸ್ಪರ್ಶಿಯಾಗಿ ತಿಳಿಸಿಕೊಡುವುದು, ಆದಷ್ಟು ಶುಷ್ಕವೆನಿಸದಂತೆ ರಸವತ್ತಾಗಿ ನಿರೂಪಿಸುವುದು ಅವರ ಬೋಧನಕ್ರಮವಾಗಿತ್ತೆಂದು ನನಗೆ ತೋರಿತು’’ ಎನ್ನುತ್ತಾರೆ ಕಣವಿಯವರು. ತೀ.ನಂ.ಶ್ರೀಯವರ ಲಾಂಛನ ಕೃತಿ ‘ಭಾರತೀಯ ಕಾವ್ಯ ಮೀಮಾಂಸೆ’ ಪ್ರಕಟವಾದದ್ದು 1953ರಲ್ಲಿ, ಅವರು ಧಾರವಾಡದಲ್ಲಿದ್ದಾಗ ಎಂಬುದನ್ನು ಮತ್ತು ಕಣವಿ ದಂಪತಿಯ ಭಾವಚಿತ್ರವನ್ನು ತೀ.ನಂ.ಶ್ರೀ.ಯವರು ಸ್ವತಃ ತಮ್ಮ ಮನೆಯಂಗಳದಲ್ಲಿ ನಿಲ್ಲಿಸಿ ತೆಗೆದುಕೊಂಡಿದ್ದನ್ನು ಕಣವಿಯವರು ಹೆಮ್ಮೆಯಿಂದ ಉಲ್ಲೇಖಿಸುತ್ತಾರೆ.

ಅ.ನ.ಕೃ. ಕನ್ನಡದ ಅದಮ್ಯ ಮತ್ತು ಅದ್ಭುತ ಚೇತನ. ಕಣವಿಯವರ ವಿದ್ಯಾರ್ಥಿ ದಿನಗಳ ಹೀರೋ. ಅವರ ಕುರಿತ ಅತ್ಯಂತ ಆಕರ್ಷಕ ನೆನಪುಗಳು ಈ ಕೃತಿಯಲ್ಲಿವೆ. ಅ.ನ.ಕೃ. ಕುರಿತು ‘‘ಅನೇಕ ಹಿರಿಯ ಸಾಹಿತಿಗಳೆಂಬವರಲ್ಲಿ ಕಂಡು ಬರುವ ಸಣ್ಣತನ, ಸಂಕುಚಿತ ಮನೋಭಾವನೆಗಳು ಅ.ನ.ಕೃ. ಅವರ ಸಮೀಪ ಕೂಡ ಸುಳಿಯಲಿಲ್ಲ. ತರುಣ ಲೇಖಕರ ಬೆನ್ನು ತಟ್ಟಿ ಪ್ರೋತ್ಸಾಹ ನೀಡುವುದರಲ್ಲಿ ಅವರು ಮೇಲ್ಪಂಕ್ತಿಯಾಗಿದ್ದರು.’’ ಎನ್ನುತ್ತಾರೆ. ಅ.ನ.ಕೃ. ಹೇಳಿದ ‘‘ಕನ್ನಡ ನಾಡು ಒಂದಾದ ಮೇಲೂ ಕನ್ನಡ ಜನರ ಮನಸ್ಸನ್ನು ಒಡೆಯುವ ಪ್ರಯತ್ನ ಪುನಃ ನಡೆದರೆ ಆಶ್ಚರ್ಯವೇನಿಲ್ಲ. ಮೈಸೂರು ಬೇರೆ, ಉತ್ತರ ಕರ್ನಾಟಕ ಬೇರೆ ಎನ್ನುವಂಥ ಚಳವಳಿ ಮತ್ತೆ ನಡೆದರೆ ಸೋಜಿಗವೇನಿಲ್ಲ’’ ಎಂಬ ಅ.ನ.ಕೃ. ಅವರ ಆತಂಕವನ್ನು ಕಣವಿಯವರು ಸಮಯೋಚಿತವಾಗಿ, ಸಂದರ್ಭೋಚಿತವಾಗಿ ನೆನಪಿಸಿದ್ದಾರೆ.

ಪ್ರಗತಿಶೀಲ ಚಳವಳಿಯ ಕ್ರಾಂತಿಕಾರಿ, ಪತ್ರಿಕಾರಂಗದ ಧೀಮಂತ, ಹಿರಿಯ ಸಾಹಿತಿ ಕಟ್ಟೀಮನಿ ಅವರ ಕುರಿತ ಇನ್ನೊಂದು ದೀರ್ಘ ಲೇಖನ ಈ ಕೃತಿಯಲ್ಲಿದೆ. ಕಟ್ಟೀಮನಿ ಬೆಳೆದು ಬಂದ ಹಾದಿಯನ್ನು ನಿಕಟವರ್ತಿ ಯಾಗಿ ಕಂಡ ಕಣವಿಯವರು ಶಕ್ತವಾಗಿ ವಿವರಿಸಿದ್ದಾರೆ. (ಬಸವನಾಳರ ಕುರಿತ ಲೇಖನಕ್ಕೂ ಇದಕ್ಕೂ ಇರುವ ಭಿನ್ನತೆಯನ್ನು ಗುರುತಿಸಬಹುದು.) ಕಟ್ಟೀಮನಿಯವರು ವ್ಯಾಪ್ತಿ ಹಾಗೂ ಮಿತಿಯನ್ನು ಮೀರುವಲ್ಲಿ ಗತಿಯ ಸ್ವನಿಯಂತ್ರಣವನ್ನು ಈ ಮಾತುಗಳು ಹೇಳುತ್ತವೆ: ‘‘ಸಾಹಿತ್ಯ ರಾಜಕೀಯ ಪ್ರಚಾರವಾಗುವ ಅಪಾಯ ಇರುವೆಡೆಯಲ್ಲೆಲ್ಲ ಕಲೆ ಅದರಿಂದ ಪಾರುಗೊಳಿಸಿತು. (‘‘ಆನಂದಕಂದರ ತರುವಾಯ ಉತ್ತರ ಕರ್ನಾಟಕದ ಹಳ್ಳಿಯ ಜೀವನವನ್ನು ಹುಲುಸಾಗಿ ಚಿತ್ರಿಸಿದವರು ಕಟ್ಟೀಮನಿಯವರೇ ಎಂದು ಹೇಳಿದರೆ ತಪ್ಪಾಗಲಾರದು’’ ಎನ್ನುವಲ್ಲಿ ಕಣವಿಯವರು ರಾವಬಹದ್ದೂರರನ್ನು ಮರೆತರೇಕೆ ಎನ್ನಿಸದೇ ಇರದು.) ಕಟ್ಟೀಮನಿಯವರ ಸಂದರ್ಶನದ ಭಾಗದಲ್ಲಿ ಸಣ್ಣ್ಣಕಥೆಯ ಮೀಮಾಂಸೆಯೂ ಬಿಚ್ಚಿಕೊಳ್ಳುತ್ತದೆ.

 ಇವಲ್ಲದೆ ಜಿಎಸ್ಸೆಸ್ ಕುರಿತ ಲೇಖನದಲ್ಲಿ ಜೊತೆಗಾರನೆಂಬ ಓರಗೆಯ ಸಲುಗೆಯಿದೆ. ಜಿ.ಬಿ.ಜೋಶಿಯವರ ಕುರಿತ ಸಾಂದರ್ಭಿಕ ನೆನಪುಗಳ ಜೊತೆಗೆ ನಿಸ್ಸಂಕೋಚವಾಗಿ (ಗೆಳೆಯರ) ‘‘ಗುಂಪಿನ ಬೆಸುಗೆಗಳು ಎಲ್ಲರೂ ತಿಳಿದುಕೊಂಡಷ್ಟು ಭದ್ರವಾಗಿರಲಿಲ್ಲ’’ ಎನ್ನುತ್ತಾರೆ. ವಿಶೇಷವಾಗಿ ಯಾರೂ ಪ್ರಸ್ತಾವಿಸದ ಹಿರೇಮಲ್ಲೂರು ಈಶ್ವರನ್ ಕುರಿತ ಗುಣದೋಷಗಳ ವಿಮರ್ಶೆಯೊಂದಿಗೂ ಅವರ ದೈತ್ಯಶಕ್ತಿಯನ್ನು ‘ಹೋರು ಬೀಳ್ವೆನ್ನಗಂ ಒಬ್ಬೊಂಟಿಯಾದೊಡಂ’ ಎಂಬ ಸಾದೃಶ್ಯದೊಂದಿಗೆ ಚಿತ್ರಿಸುತ್ತಾರೆ. ಡಾ.ಆರ್.ಸಿ.ಹಿರೇಮಠರು ಕನ್ನಡ ಅಧ್ಯಯನಕ್ಕೆ ಮಾಡಿದ ಸೇವೆಯನ್ನು ಕೊಂಡಾಡುತ್ತಾರೆ. ಪ್ರೊ.ಸ.ಸ.ಮಾಳವಾಡರ ನಿಷ್ಕಪಟ ಮನೋಧರ್ಮವನ್ನು ಮತ್ತು ಆ ಕಾರಣದಿಂದಲೇ ಅವರು ವಾಸ್ತವತೆಗೆ ಹೊಂದಿಕೊಳ್ಳಲಾರದೇ ಹೋದದ್ದನ್ನು ಮಾರ್ಮಿಕವಾಗಿ ಹೇಳಿದ್ದಾರೆ.

ಅವರ ಕುರಿತ ಲೇಖನದಲ್ಲಿ ಆನುಷಂಗಿಕವಾಗಿ ಬರುವ ಗಳಗನಾಥರ ಕುರಿತ ‘‘ಬಡಕಲು ದೇಹ, ಮಾಸಿದ ಬಟ್ಟೆ, ಬೆಳೆದ ಗಡ್ಡ, ದೈನ್ಯ ಮುಖಮುದ್ರೆಯ ಮುದುಕರೊಬ್ಬರು ಭಾರವಾದ ಗಂಟನ್ನು ತಲೆಯ ಮೇಲೆ ಹೊತ್ತುಕೊಂಡು’’ ಮತ್ತು ‘‘ಪತ್ರಿಕೆ, ಪುಸ್ತಕ, ಪ್ರಕಟನೆಗಳಿಂದಾಗಿ ಮಾಡಿದ ಸಾಲವನ್ನು ತೀರಿಸಲೆಂದು ಈಗ ಗಳಗನಾಥರು ಪುಸ್ತಕಗಳ ಮೂಟೆಯನ್ನು ತಲೆಯ ಮೇಲೆ ಹೊತ್ತುಕೊಂಡು ಮನೆಮನೆಗೆ ಹೋಗಿ ಪುಸ್ತಕ ಮಾರಾಟ ಮಾಡಲು ತೊಡಗಿದ್ದರು.’’ ಎಂಬ ವಿವರಣೆ ಕನ್ನಡ ಸಾಹಿತ್ಯಕ್ಕಾಗಿ ಶ್ರಮಿಸಿದ ಒಂದು ಶ್ರೇಷ್ಠ ಚೇತನದ ವಾಸ್ತವಿಕ ದುರಂತ ಸ್ಥಿತಿಯನ್ನು ಹೇಳಿದೆ. ಇದೊಂದು ಅಸದೃಶ ಚಿತ್ರ. ಕೊನೆಯದಾಗಿ ಈಗೆರಡು ವರುಷಗಳ ಹಿಂದೆ ದುರಂತ ಅಂತ್ಯವನ್ನು ಕಂಡ ಎಂ.ಎಂ. ಕಲ್ಬುರ್ಗಿಯವರ ಕುರಿತ ನೆನಪುಗಳಿವೆ.

ಕಣವಿಯವರು ತಮ್ಮ ಬಗ್ಗೆ ಈ ಕೃತಿಯಲ್ಲಿ ಫೋಕಸ್ ಮಾಡಿಕೊಳ್ಳದೆ ತಾನು ಬರೆಯುವವರ ಕುರಿತೇ ಕೇಂದ್ರೀಕರಿಸಿದ್ದನ್ನು ಕನ್ನಡದಲ್ಲಿ ಇತ್ತೀಚೆಗೆ ಬರೆಯುತ್ತಿರುವ ವ್ಯಕ್ತಿಚಿತ್ರಗಾರರು ಅನುಸರಿಸುವುದು, ಅನುಕರಿಸುವುದು ಕನ್ನಡ ಸಾಹಿತ್ಯಕ್ಕೆ ಒಳಿತನ್ನು ಮಾಡೀತು. ಇಡೀ ಕೃತಿ ಪ್ರಮಾಣಿಕವಾದ ಅಭಿವ್ಯಕ್ತಿಯೊಂದಿಗೆ ಹೊಸ ವಿಸ್ಮಯಗಳನ್ನು ದರ್ಶಿಸುತ್ತದೆ. ಈ ಎಲ್ಲ ಕಾರಣಗಳಿಗಾಗಿ ಕಣವಿಯವರು ಅಭಿನಂದನಾರ್ಹರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)