varthabharthi

ಭೀಮ ಚಿಂತನೆ

ಡಾ. ಬಿ.ಆರ್.ಅಂಬೇಡ್ಕರ್ ಅವರ ಆಯ್ದ ಭಾಷಣ-ಬರಹಗಳು

ಹಿಂದೂ ಸ್ತ್ರೀಯರ ಉನ್ನತಿ ಮತ್ತು ಅವನತಿ: ಯಾರು ಹೊಣೆಗಾರರು?

ವಾರ್ತಾ ಭಾರತಿ : 14 Jul, 2017

ಭಾಗ 4

ಸಾಮಾನ್ಯವಾಗಿ ಭಾರತೀಯರಿಗೆ ಪ್ರಾಚೀನ ಕಾಲದಿಂದಲೂ ಹೆಣ್ಣು ಮಗುವಿನ ಜನ್ಮವು ಬಲು ದುಃಖದ ಸಂಗತಿಯಾಗಿ ಕಂಡಿದೆ. ಬುದ್ಧನು ಈ ಭಾವನೆಯನ್ನು ಒಪ್ಪಿಕೊಳ್ಳುತ್ತಿದ್ದನೇ? ಅವನು ಪ್ರಸೇನಜಿತ ರಾಜನಿಗೆ ಮಾಡಿದ ಉಪದೇಶದಿಂದ ಈ ಪ್ರಶ್ನೆಯನ್ನು ಕುರಿತಾದ ಅವನ ದೃಷ್ಟಿಕೋನವು ಸಾಂಪ್ರದಾಯಿಕ ದೃಷ್ಟಿಕೋನಕ್ಕೆ ತೀರ ವಿರುದ್ಧವಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಬುದ್ಧನು ಶ್ರಾವಸ್ತಿಯ ಚೇತವನದಲ್ಲಿ ಇರುವಾಗ ಒಂದು ಸಲ ಪ್ರಸೇನಜಿತ ರಾಜನು ಬಂದು ಅವನನ್ನು ಭೇಟಿಯಾದನು. ಅರಮನೆಯಿಂದ ಒಬ್ಬ ಸೇವಕನು ಬಂದು ಅವನ ರಾಣಿ ಮಲ್ಲಿಕಾ ಒಂದು ಹೆಣ್ಣು ಮಗುವಿಗೆ ಜನ್ಮ ಕೊಟ್ಟುದನ್ನು ಅವನಿಗೆ ಹೇಳುತ್ತಾನೆ. ಈ ವಾರ್ತೆಯನ್ನು ಆಲಿಸಿ ರಾಜನ ಮುಖವು ಕಳೆಗುಂದಿತು. ಅವನು ದುಃಖಿತನಾಗಿ ಹಾಗೂ ವಿಷಣ್ಣನಾಗಿ ಕಾಣತೊಡಗಿದನು. ಬುದ್ಧನು ಅವನ ಮುಖದ ಮೇಲಾದ ಬದಲಾವಣೆಯನ್ನು ಗಮನಿಸಿದನು. ಅದಕ್ಕೇನು ಕಾರಣವೆಂದು ಅವನು ರಾಜನಲ್ಲಿ ಕೇಳಿದನು. ಅವನಿಂದ ತಿಳಿದ ಬಳಿಕ ಬುದ್ಧನು ಹೀಗೆಂದನು: ‘‘ದುಃಖಿಸುವುದೇಕೆ? ಅಯ್ಯಾ ರಾಜ ಪುರುಷನೆ, ಮಗನಿಗಿಂತಲೂ ಮಗಳು ಒಳ್ಳೆಯ ಸಂತಾನ ಎನ್ನಿಸಬಹುದು. ಅವಳು ಜ್ಞಾನಿ ಸದ್ಗುಣಿಯಾಗಬಲ್ಲಳು....ಅವಳು ಜನ್ಮ ಕೊಡುವ ಮಗನ ಕೈಯಿಂದ ಮಹತ್ತರ ಕೆಲಸಗಳು ನೆರವೇರಬಹುದು. ಅವನು ದೊಡ್ಡ ದೊಡ್ಡ ರಾಜ್ಯಗಳ ಮೇಲೆ ಅಧಿಸತ್ತೆಯನ್ನು ಮೆರೆಯಬಹುದು. ....’’ ಕೆಲವು ಕುಟುಂಬಗಳು ಏಳಿಗೆಯನ್ನು ಹೊಂದಿದ್ದರೆ ಕೆಲವು ನಾಶ ಹೊಂದುತ್ತದೆ, ಎನ್ನುವ ಪ್ರಶ್ನೆಗಳಿಗೆ ಬುದ್ಧನು ಹೀಗೆಂದು ಉತ್ತರಿಸಿದನೆಂದು ನಮೂದಿಸಲಾಗಿದೆ:
‘‘ಭಿಕ್ಕುಗಳೇ, ಆಸ್ತಿಪಾಸ್ತಿಗಳಿಂದ ದೊಡ್ಡಸ್ತಿಕೆಯನ್ನು ಗಳಿಸುವ ಕುಟುಂಬಗಳು ತಮ್ಮ ದೊಡ್ಡಸ್ತಿಕೆಯನ್ನು ದೀರ್ಘಕಾಲ ಉಳಿಸಿಕೊಳ್ಳಲಾರವು. ಇದಕ್ಕೆ ಕಾರಣವೆಂದರೆ ಅವು ತಾವು ಕಳೆದುಕೊಂಡುದನ್ನು ಮರಳಿಪಡೆಯಲು ಯತ್ನಿ ಸುವುದಿಲ್ಲ, ತಮಗಾದ ನಷ್ಟವನ್ನು ತುಂಬಿಕೊಳ್ಳುವುದಿಲ್ಲ. ಅತಿಯಾದ ಊಟ, ತಿಂಡಿಗಳಲ್ಲಿ ಮೈ ಮರೆಯುವವರು, ಅನೈತಿಕರಾದ ಪುರುಷ ಮತ್ತು ಸ್ತ್ರೀಯರನ್ನು ಅವಲಂಬಿಸುವ ಕುಟುಂಬಗಳು ದೀರ್ಘಕಾಲ ಉಳಿಯಲಾರವು. ಇದೆಲ್ಲದಕ್ಕೆ ಮೇಲಿನ ನಾಲ್ಕರಲ್ಲಿ ಒಂದು ಅಥವಾ ಇನ್ನಿತರ ಕಾರಣಗಳಿರುತ್ತವೆ.’’

 ‘‘ಭಿಕ್ಕುಗಳೇ, ದೀರ್ಘಕಾಲ ಉಳಿಯುವ ಕುಟುಂಬಗಳು ತಾವು ಕಳೆದುಕೊಂಡದ್ದನ್ನೆಲ್ಲ ಮರಳಿ ಪಡೆಯಲು ಯತ್ನಿಸುತ್ತವೆ, ಆದ ನಷ್ಟವನ್ನು ತುಂಬಿಕೊಳ್ಳುತ್ತವೆ. ಅವು ತಿಂಡಿ-ತಿನಿಸುಗಳನ್ನು ಮಿತಿಯಲ್ಲಿರಿಸುತ್ತವೆ. ಅವು ಸದ್ಗುಣಿಗಳಾದ ಸ್ತ್ರೀ ಹಾಗೂ ಪುರುಷರಿಗೆ ಹೊಣೆಯನ್ನು ಒಪ್ಪಿಸುತ್ತವೆ. ಇಂಥ ಕುಟುಂಬಗಳು ದೀರ್ಘಕಾಲ ಉಳಿಯುತ್ತವೆ. ಇವೆಲ್ಲಾ ಸಂಗತಿಗಳಿಗಾಗಿ ನಾಲ್ಕರಲ್ಲಿ ಒಂದು ಅಥವಾ ಇನ್ನಿತರ ಕಾರಣಗಳಿರುತ್ತದೆ.’’ ಒಬ್ಬ ರಾಜನು ಎಲ್ಲ ಬಗೆಯ ಕ್ರಾಂತಿಕಾರಕ ಪರಿವರ್ತನೆಯ ಕಾರ್ಯವನ್ನು ಮಾಡಿ ಪ್ರಪಂಚದ ಚಕ್ರವರ್ತಿಯಾಗಲು ಸಂಕಲ್ಪವನ್ನು ಮಾಡುವ ಕಾಲಕ್ಕೆ ಏನಾಗುತ್ತದೆ ಎನ್ನುವುದನ್ನು ಬುದ್ಧನು ಭಿಕ್ಕುಗಳಿಗೆ ಹೀಗೆ ಹೇಳಿದನೆಂದು ನಮೂದಿಸಲಾಗಿದೆ
 ‘‘ಇಂಥ ಒಬ್ಬನು ಚಕ್ರವರ್ತಿಯಾಗುತ್ತಲೆ ಏಳು ಸಾಂಪತ್ತಿಕ (ಭಂಡಾರಗಳು) ಲಕ್ಷಣಗಳು ಅಸ್ತಿತ್ವಕ್ಕೆ ಬರುತ್ತವೆ. ಈ ಸಾಂಪತ್ತಿಕ ಲಕ್ಷಣಗಳೆಂದರೆ ರಥ, ಆನೆ, ಕುದುರೆ, ರತ್ನ, ಸ್ತ್ರೀ, ಗೃಹಪಿತಾ ಮತ್ತು ವಾರಸುದಾರರು.’’
 ಇನ್ನೊಂದು ಸನ್ನಿವೇಶದಲ್ಲಿ, ಬುದ್ಧನು ಸ್ತ್ರೀಯ ಘನತೆಯನ್ನು ವಿವರಿಸುತ್ತ ಪ್ರಪಂಚಕ್ಕೆ ಹೀಗೆ ಹೇಳುವನು.
‘‘(ಭಾಷ್ಯಕಾರನು ಸೂಚಿಸಿದಂತೆ) ಬೋಧಿಸತ್ತ್ವ ಹಾಗೂ ಚಕ್ರವರ್ತಿಯು ಸ್ತ್ರೀಯಿಂದಲೇ ಜನ್ಮ ತಳೆದುದರಿಂದ ಅವಳು ಸರ್ವೋಚ್ಚ ಉಪಯುಕ್ತಳು. ಅವಳು ಅಪರಿಹಾರ್ಯವಾಗಿಯೂ ಉಪಯುಕ್ತಳು.’’
 ಯಾವ ಕುಟುಂಬದಲ್ಲಿ ಹೆಣ್ಣುಮಗುವಿನ ಜನ್ಮವು ದುಃಖದ ಸನ್ನಿವೇಶವಾಗಿರದೆ ಸಂತೋಷದ್ದಾಗಿರುತ್ತದೋ, ಯಾವ ಕುಟುಂಬಗಳು ಸ್ತ್ರೀಯನ್ನು ಅವಲಂಬಿಸಿ ಇರುತ್ತವೋ ಅಂಥ ಕುಟುಂಬಗಳು ನಾಶ ಹೊಂದು ವುದು ತಪ್ಪುತ್ತವೆ. ಸರ್ವೋಚ್ಚ ವೌಲ್ಯಯುತವಾದ ಏಳು ವಸ್ತುಗಳಲ್ಲಿ ಸ್ತ್ರೀ ಒಬ್ಬಳೆಂದು ನಿಸ್ಸಂಕೋಚರಾಗಿ ಪ್ರತಿಪಾದಿಸುವವರನ್ನು ಸ್ತ್ರೀಯರನ್ನು ದ್ವೇಷಿಸುವವರು ಮತ್ತು ತುಚ್ಚರೆಂದು ಕಾಣುವವರೆಂದು ಬಗೆಯಬೇಕೆ? ಬುದ್ಧನು ಸಾಮಾನ್ಯರಲ್ಲಿ ಸ್ತ್ರೀಯರನ್ನು ಕುರಿತು ಇರುವ ಭಾವನೆಗಳನ್ನು ಅರಿತುಕೊಂಡನು. ಹೀಗಾಗಿ ಯಾರಾದರೂ, ಸ್ತ್ರೀಯರ ಅಪಹಾಸ್ಯ ಹಾಗೂ ಅ ಗೌರವಕ್ಕಾಗಿ ಇದೆಲ್ಲವನ್ನು ಯೋಜಿಸಲಾಗಿತ್ತೆಂದು ಅನ್ನಲು ಸಾಧ್ಯವೇ?
3
  ಬುದ್ಧನು ಭಿಕ್ಕುಣಿಯರನ್ನು ಭಿಕ್ಕುಗಳ ಅಧಿಪತ್ಯದಲ್ಲಿ ಇರಿಸಿ ಸಾಮಾಜಿಕ ತಪ್ಪು ಮಾಡಿದನೆಂದು ಅನ್ನಿಸುವವರು, ಸಂನ್ಯಾಸ ಅಥವಾ ಪರಿವ್ರಜೆಯ (ಭಿಕ್ಕುಣಿಯ)ರ ದೀಕ್ಷೆಯನ್ನು ಪಡೆಯಲು ಸ್ತ್ರೀಯರಿಗೆ ಅಪ್ಪಣೆ ನೀಡಿದಂತಹ, ಅವನು ಎಸಗಿದ ಕ್ರಾಂತಿಕಾರಕ ಕಾರ್ಯವನ್ನು ಗಮನಿಸುವುದಿಲ್ಲ. ಬ್ರಾಹ್ಮಣೀ ತತ್ವಜ್ಞಾನವನ್ನು ಅನುಸರಿಸಿ ಸ್ತ್ರೀಯರಿಗೆ ಮೊದಲಿನಿಂದಲೇ ಜ್ಞಾನಾರ್ಜನೆಯ ಹಕ್ಕನ್ನು ನಿಷೇಧಿಸಲಾಗಿತ್ತು. ಭಾರತೀಯ ಸ್ತ್ರೀಯರು ಸಂನ್ಯಾಸವನ್ನು ಸ್ವೀಕರಿಸುವ ಪ್ರಶ್ನೆ ಎದುರಾದಾಗ ಅವರು (ಬ್ರಾಹ್ಮಣರು) ಎರಡನೆಯ ತಪ್ಪು ಮಾಡಿದರು. ವೇದ ಪೂಜೆಯನ್ನು ಮಾಡುವ ಬ್ರಾಹ್ಮಣರು ದೀರ್ಘಕಾಲ ಉಪನಿಷತ್ತುಗಳ ಪೂಜೆಯನ್ನು ನಿರಾಕರಿಸಿದ್ದರೆಂದು ಇತಿಹಾಸವು ಹೇಳುತ್ತದೆ. ‘ಸಂನ್ಯಾಸ’ವು ಅದರ ದೃಷ್ಟಿಯಿಂದ ಆದರ್ಶವಾಗಿರಲಿಲ್ಲ. ಸಂನ್ಯಾಸವು ಉಪನಿಷತ್ತುಗಳ ಆದರ್ಶವಾಗಿತ್ತು. ಸಂನ್ಯಾಸದ ಫಲವೆಂದರೆ ‘ಆತ್ಮನೇ ಬ್ರಹ್ಮನು’ ಎನ್ನುವ ಉಪನಿಷತ್ತಿನ ತತ್ತ್ವಜ್ಞಾನವನ್ನು ಅನುಭವಿಸುವುದು. ಬ್ರಾಹ್ಮಣರಿಂದ ಸಂನ್ಯಾಸಿ ಜೀವನಕ್ಕೆ ತೀವ್ರ ವಿರೋಧವಿತ್ತು. ಕೊಟ್ಟ ಕೊನೆಗೆ ಅವರು ಮಣಿದರು. ಕೆಲವು ಷರತ್ತುಗಳೊಂದಿಗೆ ಅವರು ಅದಕ್ಕೆ ಮನ್ನಣೆಯನ್ನು ಇತ್ತರು. ಅವುಗಳಲ್ಲಿ ಒಂದು ಷರತ್ತೆಂದರೆ, ಸ್ತ್ರೀಯರು (ಮತ್ತು ಶೂದ್ರರು) ಸಂನ್ಯಾಸಕ್ಕೆ ಪಾತ್ರರಲ್ಲ, ಎಂಬುದು,
 ಸ್ತ್ರೀಯರನ್ನು ಕುರಿತಾದ ಬ್ರಾಹ್ಮಣರ ಮನೋಧರ್ಮವು ಬುದ್ಧನದಕ್ಕೆ ತೀರ ವಿರುದ್ಧವಾಗಿತ್ತು. ಹೀಗಾಗಿ, ಬ್ರಾಹ್ಮಣರು ಸ್ತ್ರೀಯರ ಸಂನ್ಯಾಸವನ್ನು ವಿರೋಧಿಸಿದ್ದೇಕೆ ಎಂಬ ಸಂಗತಿಯ ಮಹತ್ವದ ಕಾರಣವನ್ನು ಅರಿತುಕೊಳ್ಳವುದು ಉಪಯುಕ್ತವೆನಿಸೀತು. ಮನುವು ಇದರ ಕಾರಣಗಳನ್ನು ನೀಡಿರುವನು ಅವು ಹೀಗಿವೆ:
 ಸ್ತ್ರೀಯರಿಗೆ ವೇದಗಳನ್ನು ಕಲಿಯುವ ಅಧಿಕಾರವಿಲ್ಲ. ಆದುದರಿಂದ ವೇದಮಂತ್ರಗಳಿಂದ ಅವರ ಸಂಸ್ಕಾರಗಳನ್ನು ಮಾಡಬೇಕು. ಸ್ತ್ರೀಯರಿಗೆ ಧರ್ಮದ ಜ್ಞಾನವು ಇಲ್ಲದಿರಲು ಕಾರಣವೆಂದರೆ ಅವರಿಗೆ ವೇದಗಳನ್ನು ಕಲಿಯುವ ಅಧಿಕಾರವಿಲ್ಲ. ವೇದ ಮಂತ್ರಗಳ ಉಚ್ಚಾರಣೆಗಳು ಪಾಪಕ್ಷಾಲನಕ್ಕಾಗಿ ಉಪಯುಕ್ತವಾಗಿವೆ. ಸ್ತ್ರೀಯರು ವೇದ ಮಂತ್ರಗಳನ್ನು ಉಚ್ಚರಿಸಲಾರರೆಂದ ಮೇಲೆ ಅವರು ಅಸತ್ಯರು (ಪಾಪಮಯರು).
 ಮನುವು ಬುದ್ಧನ ತರುವಾಯ ಆಗಿ ಹೋದವನಾದರೂ ಅವನು ಹಳೆಯ ಧರ್ಮ ಗ್ರಂಥಗಳಲ್ಲಿ ವ್ಯಕ್ತಪಡಿಸಲಾದ ದೃಷ್ಟಿಕೋನವನ್ನೇ ಪ್ರತಿಪಾದಿಸಿರುವನು. ಸ್ತ್ರೀಯರನ್ನು ಕುರಿತಾದ ಈ ದೃಷ್ಟಿಕೋನವು ಭಾರತಿಯ ಸ್ತ್ರೀಯರನ್ನು ಅವಮಾನಗೊಳಿಸುವಂಥದೂ, ಅವರ ಮೇಲೆ ಅನ್ಯಾಯವನ್ನು ಮಾಡುವಂಥದೂ ಆಗಿದೆ. ವಿದ್ಯಾರ್ಜನೆಯನ್ನು ಮಾಡುವುದು ಪ್ರತಿಯೊಬ್ಬ ಮಾನವನ ಜನ್ಮಸಿದ್ಧ ಹಕ್ಕು. ಯಾವುದೇ ಸೂಕ್ತವಲ್ಲದ ಕಾರಣದಿಂದಾಗಿ ಸ್ತ್ರೀಯರಿಗೆ ಅದನ್ನು ನಿರಾಕರಿಸಲಾಯಿತು. ಇದು ಸ್ತ್ರೀಯರ ಮೇಲೆ ಎಸಗಲಾದ ಅನ್ಯಾಯ. ಮೊದಲು ಸ್ತ್ರೀಯರಿಗೆ ವಿದ್ಯಾರ್ಜನೆಯ ಅಧಿಕಾರವನ್ನು ನಿರಾಕರಿಸುವುದು, ಅವಳಿಗೆ ಜ್ಞಾನವಿಲ್ಲದ ಕಾರಣ ಅವಳು ಅಶುದ್ಧಳು ಹಾಗೂ ಅಸತ್ಯಳೆಂದು (ಪಾಪಮಯಳು) ಘೋಷಿಸುವುದು, ಹೀಗಾಗಿ ಬ್ರಹ್ಮನ ಬಳಿಗೆ ತೆರಳುವ ಮಾಧ್ಯಮವಾದ ಸಂನ್ಯಾಸದ ಅಪ್ಪಣೆಯನ್ನು ಅವಳಿಗೆ ನಿರಾಕರಿಸುವುದೆಂದರೆ ಅವಳನ್ನು ಅವಮಾನಿಸುವುದು ಆಗಿದೆ. ಬ್ರಾಹ್ಮಣರು ಸ್ತ್ರೀಯರಿಗೆ ಆಧ್ಯಾತ್ಮಿಕ ಶಕ್ತಿಯ ಅನುಭವವನ್ನು ಪಡೆಯುವ ಹಕ್ಕನ್ನು ನಿರಾಕರಿದರೆಂದಷ್ಟೇ ಅಲ್ಲದೆ ಅವಳಲ್ಲಿ ಆಧ್ಯಾತ್ಮಿಕ ಶಕ್ತಿಯ ಕೊರತೆಯಿದೆ ಎಂದೂ ಸಾರಿದರು.
ಇದೆಂದರೆ ಸ್ತ್ರೀಯರೊಡನೆಯ ಕ್ರೂರ ನಡವಳಿಕೆ. ಇತಿಹಾಸದಲ್ಲಿ ಇದಕ್ಕೆ ಸರಿಸಾಟಿ ಇನ್ನಿಲ್ಲ. ಪ್ರೊ.ಮ್ಯಾಕ್ಸ್ ಮುಲ್ಲರ್ ಅವರು ಹೇಳಿದಂತೆ, ‘‘ಮಾನವನು ದೈವಿ ಶಕ್ತಿಯಿಂದ ಅದೆಷ್ಟೋ ದೂರವಿದ್ದರೂ ಪುರುಷನನ್ನು ಬಿಟ್ಟರೆ ಆ ಪೃಥ್ವಿಯ ಮೇಲೆ ಈಶ್ವರನ ಸಮ ಯಾರೂ ಇಲ್ಲ. ಪುರುಷನನ್ನು ಬಿಟ್ಟರೆ ಈಶ್ವರನಂಥವರು ಯಾರು ಇಲ್ಲ.’’ ಇದು ಪುರುಷನ ಬಗೆಗೆ ನಿಜವಾಗಿದ್ದರೆ ಸ್ತ್ರೀಯ ಬಗೆಗೆ ನಿಜವಲ್ಲವೇಕೇ? ಬ್ರಾಹ್ಮಣರ ಬಳಿ ಇದಕ್ಕೆ ಉತ್ತರವಿಲ್ಲ.
ಬುದ್ಧನು ಸ್ತ್ರೀಯರಿಗೆ ಪರಿವ್ರಾಜಕಿಯ ಜೀವನವನ್ನು ಪ್ರವೇಶಿಸುವ ಸ್ವಾತಂತ್ರವನ್ನು ನೀಡಿ ಇವೆರಡೂ ಅನ್ಯಾಯವನ್ನು ಒಂದೇ ಗಳಿಗೆಯಲ್ಲಿ ತೊಲಗಿಸಿದನು. ಅವನು ಅವರಿಗೆ ಜ್ಞಾನಾರ್ಜನೆಯ ಹಕ್ಕನ್ನು ನೀಡುವ ಮೂಲಕ ಪುರುಷರಿಗೆ ಸರಿ ಸಮಾನವಾದ ಆಧ್ಯಾತ್ಮಿಕ ಶಕ್ತಿಯ ಅನುಭವವನ್ನು ಪಡೆಯುವ ಹಕ್ಕನ್ನು ಕೂಡ ಅವರಿಗೆ ನೀಡಿದನು. ಇದು ಭಾರತಿಯ ಸ್ತ್ರೀಯರ ದೃಷ್ಟಿಯಿಂದ ಕ್ರಾಂತಿ ಹಾಗೂ ಅವರ ಬಿಡುಗಡೆ, ಎರಡೂ ಆಗಿತ್ತು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ಮಹಾಬೋಧಿ’ ನಿಯತಕಾಲಿಕೆಯ ಮೇ -ಜೂನ್ 1951ರ ಸಂಚಿಕೆಯಲ್ಲಿ ಪ್ರಕಟಗೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್‌ರ ‘‘the rise and fall of the hindu women: who was responsible for it?’’ ಎಂಬ ಶೀರ್ಷಿಕೆಯ ಇಂಗ್ಲಿಷ್ ಲೇಖನದ ಅನುವಾದವಿದು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)