varthabharthi

ಬುಡಬುಡಿಕೆ

ರಾಜ್ಯವನ್ನು ಕಲ್ಲಡ್ಕ ಮಾದರಿ ಮಾಡುತ್ತೇನೆ....!

ವಾರ್ತಾ ಭಾರತಿ : 16 Jul, 2017

ಕಲ್ಲಡ್ಕಕ್ಕೆ ಬೆಂಕಿ ಹಚ್ಚಿ ‘ಬೆಂಕಿ ಬಡಿಯೂರಪ್ಪ’ ಗುಂಪುಗಳು ಚಳಿ ಕಾಯುಸುತ್ತಿರುವಾಗ ದೂರದಲ್ಲೇ ಯಾರೋ ಬರುತ್ತಿರುವುದು ಕಂಡು, ಪೊಲೀಸರಿರಬಹುದೇ ಎಂದು ಸಂಭ್ರಮಿಸುತ್ತಾ ‘‘ಬೆಂಕಿ ಹಾಕುತ್ತೇನೆ....ಕರ್ನಾಟಕಕ್ಕೆ ಬೆಂಕಿ ಹಾಕುತ್ತೇನೆ...ದಯವಿಟ್ಟು ಕಲ್ಲಡ್ಕ ಹೂಸು ಭಟ್ಟರನ್ನು ಬಂಧಿಸಿರಿ...ಧೈರ್ಯವಿದ್ದರೆ ಅವರನ್ನು ಬಂಧಿಸಿ ದಯವಿಟ್ಟು ರಾಜ್ಯಕ್ಕೆ ಬೆಂಕಿ ಹಾಕಲು ಸಹಕರಿಸಿ...’’ ಎಂದು ಗೋಗರೆಯತೊಡಗಿದರು. ಅವರು ಬೆದರಿಸುತ್ತಿದ್ದಾರೆಯೋ, ಗೋಗರೆಯುತ್ತಿದ್ದಾರೆಯೋ, ಅಥವಾ ತನ್ನನ್ನು ಬಂಧಿಸಲು ಸರಕಾರಕ್ಕೆ ಒತ್ತಡ ಹೇರುತ್ತಿದ್ದಾರೆಯೋ ಎನ್ನುವುದು ಗೊತ್ತಾಗದೇ ಪಕ್ಕದ ಬಿಲದೊಳಗೆ ಅವಿತು ಕೂತಿದ್ದ ಹೂಸು ಭಟ್ಟರು ಬಿಲದೊಳಗಿರ್ದುಂ ಬೆವರತೊಡಗಿದರು. ಅಷ್ಟರಲ್ಲಿ ಅಲ್ಲಿಗೆ ಹಲ್ಲು ಕಿರಿಯುತ್ತಾ ಬಂದ ಪತ್ರಕರ್ತ ಎಂಜಲು ಕಾಸಿ ‘‘ನಾನು ಸಾರ್....ಕಾಸಿ....ಇಂಟರ್ಯೂ ಮಾಡಲು ಬಂದಿದ್ದೇನೆ....’’ ಎಂದು ತನ್ನೆರಡು ೈಗಳನ್ನೆತ್ತಿ ಶರಣಾಗತನಾಗಿ ನಿಂತ.

ಇನ್ನೇನೂ ಪೊಲೀಸರು ಬಂದು ಈ ಬಿಲಕ್ಕೆ ಬೆಂಕಿ ಹಾಕಿ ಹೂಸು ಭಟ್ರನ್ನು ಆರೆಸ್ಟ್ ಮಾಡಿ, ತನಗೆ ರಾಜ್ಯಕ್ಕೆ ಬೆಂಕಿ ಹಾಕಲು ಅವಕಾಶ ಕೊಟ್ಟೇ ಬಿಟ್ಟರು ಎನ್ನುವಾಗ ಈ ಕಾಸಿ ಬಂದು ಎದುರು ನಿಂತದ್ದು ಕಂಡು ಬಡಿಯೂರಪ್ಪರ ಸಿಟ್ಟು ನೆತ್ತಿಗೇರಿತು ‘‘ಬರುವುದು ಹೇಗೂ ಬಂದ್ರಿ....ಒಂದಿಷ್ಟು ಪೊಲೀಸರನ್ನೂ ಕರ್ಕೊಂಡು ಬರುವುದಲ್ವೇನ್ರೀ...?’’

‘‘ಸಾರ್...ನೀವು ರಾಜ್ಯಕ್ಕೆ ಬೆಂಕಿ ಹಚ್ಚೋದು ನಿಜವಾ ಸಾರ್? ನಾವು ಪತ್ರಕರ್ತರೆಲ್ಲ ತುದಿಗಾಲಲ್ಲಿ ನಿಂತಿದ್ದೇವೆ ಸಾರ್. ಬೇಕಾದರೆ ನಮ್ಮ ಪತ್ರಿಕೆಗಳನ್ನೆಲ್ಲ ಬಳಸಿಕೊಳ್ಳಲು ಪೂರ್ಣ ಸಹಕಾರವಿದೆ ಸಾರ್...’’ ಎನ್ನುತ್ತಾ ಬಡಿಯೂರಪ್ಪರನ್ನು ಓಲೈಸತೊಡಗಿದ.

‘‘ನೋಡ್ರೀ...ಮುಂದಿನ ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯಕ್ಕೆ ಬೆಂಕಿ ಹಚ್ಚುವುದೇ ಮೊದಲ ಸ್ಥಾನದಲ್ಲಿರುತ್ತದೆ....ಹೂಸು ಭಟ್ಟರನ್ನು ಬಂಧಿಸಿದರೆ ನಾವು ರಾಜ್ಯಕ್ಕೆ ಬೆಂಕಿ ಕೊಡುವುದು ಖಂಡಿತ...’’ ಬಡಿಯೂರಪ್ಪ ಘೋಷಿಸಿದರು.

‘‘ಸಾರ್...ಇನ್ನೂ ಯಾವ್ಯಾವ ಕಾರಣಗಳಿಗಾಗಿ ರಾಜ್ಯಕ್ಕೆ ಬೆಂಕಿ ಕೊಡುವ ಯೋಜನೆ ಹಾಕಿಕೊಂಡಿದ್ದೀರಿ...ಸ್ವಲ್ಪ ಹೇಳುತ್ತೀರಾ?’’ ಕಾಸಿ ಬೆಂಕಿಗೆ ತುಪ್ಪ ಸುರಿದ.

‘‘ಮುಂದಿನ ಚುನಾವಣೆಯಲ್ಲಿ ಮತದಾರರು ನನಗೆ ಮತ ಹಾಕದೇ ಇದ್ದರೆ ರಾಜ್ಯಕ್ಕೆ ಬೆಂಕಿ ಬೀಳುತ್ತೆ...’’ ಬಡಿಯೂರಪ್ಪ ಘೋಷಿಸಿದರು.

‘‘ಸಾರ್....ಮತ ಹಾಕಿದರೆ....’’ ಕಾಸಿ ಕೇಳಿದ.

‘‘ಮತ ಹಾಕಿ ಬಿಜೆಪಿ ಅಧಿಕಾರಕ್ಕೆ ಬಂದು, ನನಗೆ ಮುಖ್ಯಮಂತ್ರಿ ಹುದ್ದೆ ಕೊಡದೇ ಇದ್ದರೆ ರಾಜ್ಯಕ್ಕೆ ಬೆಂಕಿ ಬೀಳುತ್ತೆ....’’ ಬಡಿಯೂರಪ್ಪ ಇನ್ನೂ ಜೋರಾಗಿ ಅಬ್ಬರಿಸಿದರು.

ಅವರು ಈ ಮಾತು ಹೇಳಿದ್ದೇ ತಡ, ಶಿವಮೊಗ್ಗದಲ್ಲಿ ಈಶ್ವರಪ್ಪರ ಕಚೇರಿಯಲ್ಲಿ ಹೊಗೆ ಕಾಣಿಸತೊಡಗಿತು.

‘‘ಸಾರ್ ನೀವು ಮುಖ್ಯಮಂತ್ರಿಯಾದರೆ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು ಸಾರ್?’’ ಕಾಸಿ ಮತ್ತೆ ಕಾಲೆಳೆದ.

‘‘ಇಡೀ ಕರ್ನಾಟಕವನ್ನು ಕಲ್ಲಡ್ಕ ಮಾದರಿಯಲ್ಲಿ ನಾನು ಅಭಿವೃದ್ಧಿ ಮಾಡುತ್ತೇನೆ....ಕಲ್ಲಡ್ಕವನ್ನು ಕರ್ನಾಟಕದ ರಾಜಧಾನಿ ಮಾಡುತ್ತೇನೆ....’’ ಬಡಿಯೂರಪ್ಪನವರು ಘೋಷಿಸಿದರು.

‘‘ಕಲ್ಲಡ್ಕ ಹೂಸು ಭಟ್ಟರನ್ನು ಬಂಧಿಸಿದರೆ ಯಾಕೆ ತಪ್ಪು ಸಾರ್?’’ ಕಾಸಿ ಅರ್ಥವಾಗದೆ ಕೇಳಿದ.

‘‘ನೋಡಿ...ಅದಕ್ಕೆ ಕೆಲವು ಸಾಂವಿಧಾನಿಕ ತೊಡಕುಗಳಿವೆ. ಒಂದು ವೇಳೆ ಬಂಧಿಸಿದರೆ ಸಂವಿಧಾನ ಉಲ್ಲಂಘಿಸಿದಂತಾಗುತ್ತದೆ’’ ಬಡಿಯೂರಪ್ಪ ವಿವರಿಸಿದರು.

‘‘ಅದು ಹೇಗೆ ಭಾರತದ ಸಂವಿಧಾನದ ಉಲ್ಲಂಘನೆಯಾಗುತ್ತದೆ ಹೇಳಿ ಸಾರ್’’ ಕಾಸಿ ಆತುರದಿಂದ ಕೇಳಿದ.

‘‘ನಾನು ಹೇಳುತ್ತಿರುವುದು ಮನುಸಂವಿಧಾನದ ಉಲ್ಲಂಘನೆಯಾಗುತ್ತದೆ ಎಂದು. ನೋಡ್ರೀ...ಇಂದು ಗುಜರಾತ್ ಮಾದರಿಯನ್ನು ಇಟ್ಟುಕೊಂಡು ಕರ್ನಾಟಕದಲ್ಲಿ ಅಭಿವೃದ್ಧಿಯಾಗಿರುವ ಒಂದೇ ಒಂದು ಪ್ರದೇಶವೆಂದರೆ ಅದು ಕಲ್ಲಡ್ಕ. ಇದರ ಹಿಂದೆ ಹೂಸು ಭಟ್ಟರ ಕಾಣಿಕೆ ಬಹುದೊಡ್ಡದು....ಕಲ್ಲಡ್ಕವು ಸದ್ಯಕ್ಕೆ ಕರ್ನಾಟಕದಲ್ಲಿ ಇದ್ದರೂ ಅದು ಭಾರತದ ಸಂವಿಧಾನದ ವ್ಯಾಪ್ತಿಯೊಳಗೆ ಬರುವುದಿಲ್ಲ...’’ ಬಡಿಯೂರಪ್ಪ ಒಂದೊಂದಾಗಿ ವಿವರಿಸತೊಡಗಿದರು.

‘‘ಹೂಸುಭಟ್ಟರ ಕೆಲವು ಕೊಡುಗೆಗಳನ್ನು ಹೇಳಿ ಸಾರ್...’’ ಕಾಸಿ ಕೇಳಿದ.

‘‘ನೋಡ್ರೀ...ಇಡೀ ದೇಶ ಅಡುಗೆ ಅನಿಲ ಕೊರತೆಯಿಂದ ನರಳುತ್ತಿರುವಾಗ ತಾವು ಉತ್ಪಾದಿಸಿದ ಗೋಬರ್ ಗ್ಯಾಸ್ ಮೂಲಕ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಉಚಿತವಾಗಿ ಬೆಂಕಿಯನ್ನು ಹಚ್ಚಿದ್ದಾರೆ. ಇಷ್ಟರಮಟ್ಟಿಗೆ ಬೆಂಕಿ ಹಚ್ಚಲು ಕೇಂದ್ರ ಸರಕಾರ ಎಷ್ಟು ಅನಿಲ ಸಿಲಿಂಡರ್‌ಗಳನ್ನು ವ್ಯಯ ಮಾಡಬೇಕಿತ್ತು ಎನ್ನುವುದು ಒಮ್ಮೆ ಊಹಿಸಿ. ಭವಿಷ್ಯದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ, ಅವರು ಪೂರೈಸುವ ಗ್ಯಾಸ್ ಮೂಲಕ ಇಡೀ ರಾಜ್ಯಕ್ಕೆ ಉಚಿತ ಬೆಂಕಿಯನ್ನು ಪೂರೈಸಲು ಅನುಕೂಲವಾಗುತ್ತದೆ. ಶ್ರೀಸಾಮಾನ್ಯರು ಈ ಬೆಂಕಿಯನ್ನು ಬಳಸಿಕೊಂಡು ಉಚಿತವಾಗಿ ಅಡುಗೆ ಮಾಡಿಕೊಂಡು ಉಣ್ಣ ಬಹುದು...’’

‘‘ಸಾರ್, ಭಟ್ಟರನ್ನು ಬಂಧಿಸಿದರೆ ಅದು ರಾಜ್ಯ ಸರಕಾರದ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆ ಎಂದು ಕೆರಂದ್ಲಾಜೆ ಹೇಳಿದ್ದಾರಲ್ಲ, ಇದರ ಬಗ್ಗೆ ನಿಮ್ಮ ಅಭಿಪ್ರಾಯ?’’ ಕಾಸಿ ಪ್ರಶ್ನೆಯನ್ನು ಕೆರಂದ್ಲಾಜೆ ಕಡೆಗೆ ತಿರುಗಿಸಿದ.

ಈಗ ಒಮ್ಮಿಂದೊಮ್ಮೆಗೆ ಬಡಿಯೂರಪ್ಪ ನಾಚತೊಡಗಿದರು. ಕಾಸಿಗೆ ಅಚ್ಚರಿ! ‘‘ಯಾಕೆ ಸಾರ್ ನಾಚುತ್ತಾ ಇದ್ದೀರಿ?’’

‘‘ಅವರು ಹಾಗೆ ಹೇಳಿದ್ದು ಹೌದು ಎಂದಾದರೆ ನನ್ನ ಶವಪೆಟ್ಟಿಗೆಗೇ ಹೊಡೆಯಲಿ ಎಂದು ಅವರಿಗೊಂದು ಸಂದೇಶ ತಿಳಿಸಿ....’’ ಕಾಲ ಹೆಬ್ಬೆರಳಲ್ಲಿ ಉಂಗುರ ಬರೆಯುತ್ತಾ ಬಡಿಯೂರಪ್ಪ ಹೇಳಿದರು.

‘‘ಸಾರ್ ನಿಮ್ಮ ಶವಪೆಟ್ಟಿಗೆಗೆ ಅವರು ಮೊಳೆ ಹೊಡೆಯುವುದೇ?’’ ಕಾಸಿ ಅರ್ಥವಾಗದೇ ಕೇಳಿದ.

‘‘ಹೂಂ ಕಣ್ರೀ.....ನಮ್ಮದು ಜನ್ಮ ಜನ್ಮಾಂತರದ ಸಂಬಂಧ...’’ ಎಂದು ಇನ್ನೇನೋ ವಿವರಿಸಲು ಹೋದಾಗ, ಕಾಸಿಗೆ ವಿಷಯ ಅರ್ಥವಾಗಿ ಗಾಬರಿಯಿಂದ ಹೇಳಿದ ‘‘ಸಾರ್...ಇದು ನೀವು ಎಣಿಸಿದ ಮೊಳೆ ಅಲ್ಲ ಸಾರ್...ಇದಕ್ಕೆ ಕರಾವಳಿಯಲ್ಲಿ ಆಣಿ ಎಂದೂ ಹೇಳುತ್ತಾರೆ. ಶವಪೆಟ್ಟಿಗೆಗೆ ಹೊಡೆಯುವ ಆಣಿ ಸಾರ್ ಇದು...ನೀವು ತಪ್ಪು ಭಾವಿಸಿದ್ದೀರಿ....’’ ಕಾಸಿ ತಿದ್ದಲು ಹೊರಟ.

‘‘ನೋಡ್ರಿ...ನನಗೆ ಗೊತ್ತು...ನೀವು ಅವರ ಮಾತುಗಳನ್ನು ತಿರುಚಿ ಬರೆದಿದ್ದೀರಿ. ಅವರು ಏನೋ ಹೇಳಿದರೆ ನೀವು ಇನ್ನೇನೋ ಬರೆದಿದ್ದೀರಿ...ಪಾಪ...ಅವರು ಏನೇ ಹೊಡೆಯಲಿ. ನಿಮಗೇನ್ರೀ? ಅದು ಅವರ ವೈಯಕ್ತಿಕ ವಿಷಯ. ಇನ್ನೊಬ್ಬರ ವೈಯಕ್ತಿಕ ವಿಷಯಕ್ಕೆ ತಲೆಯಿಡಬಾರದು....’’ ಯಡಿಯೂರಪ್ಪ ಬುದ್ಧಿ ಹೇಳಿದರು.

‘‘ಸಾರ್...ನಿಮ್ಮ ರಾಜಕೀಯ ಶವಪೆಟ್ಟಿಗೆಗೂ ಮೊಳೆ ಹೊಡೆದದ್ದು ಅಂದರೆ ಆಣಿ ಹೊಡೆದದ್ದು ಅವರೇ ಅಂತೆ ಹೌದಾ?’’ ಕಾಸಿ ಕೊನೆಯ ಪ್ರಶ್ನೆ ಕೇಳಿದ.

ಬಡಿಯೂರಪ್ಪ ಅಬ್ಬರಿಸಿದರು ‘‘ಯಾರ್ರೀ ಅಲ್ಲಿ. ಆ ಬೆಂಕಿ ತನ್ನಿ. ಮೊದಲು ಈ ಪತ್ರಕರ್ತರಿಗೆ ಬೆಂಕಿ ಕೊಡಬೇಕು. ಬಳಿಕ ರಾಜ್ಯಕ್ಕೆ...’’ ಎನ್ನುತ್ತಾ ಕಡ್ಡಿಪೆಟ್ಟಿಗೆ ಹುಡುಕತೊಡಗಿದರು. ಕಾಸಿ ಬಾಲಕ್ಕೆ ಬೆಂಕಿ ಬಿದ್ದವನಂತೆ ಅಲ್ಲಿಂದ ಓಡತೊಡಗಿದ್ದು ನೋಡಿ, ಹೂಸು ಭಟ್ಟರು ಮೆಲ್ಲಗೆ ಬಿಲದಿಂದ ಹೊರಗೆ ಬಂದು ಹೇಳಿದರು ‘‘ಯಡಿಯೂರಪ್ಪ ಅವರೇ...ನಿಮಗೆ ಜೈಲಿಗೆ ಹೋಗಿ ಅನುಭವ ಉಂಟಲ್ಲ.... ಅಲ್ಲಿ ಒಳ್ಳೆಯ ವೆಜ್ ಊಟ ಸಿಗುತ್ತದ?’’

ಬಡಿಯೂರಪ್ಪ ಸಮಾಧಾನಿಸಿದರು ‘‘ನೋಡಿ...ನಿಮ್ಮನ್ನು ಜೈಲಿಗೆ ಹಾಕಿದರೆ ನಾನು....’’

ಎನ್ನುತ್ತಿದ್ದಂತೆಯೇ ಹೂಸು ಭಟ್ಟರು ತಡೆದರು ‘‘ಸಾಕು...ಸಾಕು...ನನ್ನನ್ನು ಜೈಲಿಗೆ ಹಾಕದೇ ನೀವು ಬೆಂಗಳೂರಿಗೆ ಹೊರಡುವ ಹಾಗೆ ಕಾಣುವುದಿಲ್ಲ. ನನಗೆ ಗೊತ್ತುಂಟು...ನಿಮ್ಮನ್ನು ನಂಬಿದರೆ ಉಂಟಲ್ಲ...’’

ಅಷ್ಟರಲ್ಲಿ ಅದೇನೋ ಚರಪರ ಸದ್ದು ಕೇಳಿ ಪೊಲೀಸರು ಬಂದೇ ಬಿಟ್ಟರೋ ಎಂಬಂತೆ ಹೂಸು ಭಟ್ಟರು ಮತ್ತೆ ಬಿಲ ಸೇರಿಕೊಂಡರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)