varthabharthi

ನಿಮ್ಮ ಅಂಕಣ

ದಲಿತರ ಮನೆಯ ಊಟಕ್ಕೆ ಯಾಕಿಷ್ಟು ಪ್ರಚಾರ?

ವಾರ್ತಾ ಭಾರತಿ : 25 Jul, 2017
-ಏಕಲವ್ಯ ಮುಂಡಾಲ, ಅತ್ತಾವರ, ಮಂಗಳೂರು

ಮಾನ್ಯರೆ,

ಮೊನ್ನೆ ಬಿಜೆಪಿ ಅಧ್ಯಕ್ಷರಾದ ಅಮಿತ್ ಶಾ ಜೈಪುರದಲ್ಲಿ ಒಬ್ಬ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಊಟ ಮಾಡಿದ್ದು ದೊಡ್ಡ ರಾಷ್ಟ್ರೀಯ ಸುದ್ದಿಯಾಯಿತು. ಕಾರಣ ಆ ಕಾರ್ಯಕರ್ತ ದಲಿತನಾಗಿದ್ದ್ದುದು!. ಭಾರತ ದಲ್ಲಿ ಎಂತೆಂತಹಾ ವಿಷಯಗಳು ದೊಡ್ಡ ರಾಷ್ಟ್ರೀಯ ಸುದ್ದಿ ಎನಿಸುತ್ತವೆ ನೋಡಿ! ಯಾರೋ ತನ್ನ ಹೊಟ್ಟೆ ತುಂಬಿಸಲು ಊಟ ಮಾಡಿದ್ದೂ ಒಂದು ರಾಷ್ಟ್ರೀಯ ಸುದ್ದಿಯೇ? ಎಲ್ಲರ ಮನೆಯಲ್ಲಿ ಊಟ ಮಾಡಿದಂತೆ ದಲಿತರ ಮನೆಯ ಊಟವೂ ಹಸಿವು ನೀಗಿಸುವ ಒಂದು ಆಹಾರವಾಗಿದೆ ಅಷ್ಟೇ. ಅದರಲ್ಲಿ ವಿಶೇಷವಾದುದೇನೂ ಇರುವುದಿಲ್ಲ. ಅದಕ್ಕೆ ಯಾಕಿಷ್ಟು ಪ್ರಚಾರ? ಆದರೆ ಕೊಳಕು ರಾಜಕಾರಣಿಗಳು ಅದನ್ನು ತಾವು ದಲಿತರಿಗೆ ಮಾಡಿದ ಒಂದು ಮಹಾ ಉಪಕಾರ ಎನ್ನುವ ರೀತಿಯಲ್ಲಿ ಪಬ್ಲಿಸಿಟಿ ಮಾಡುತ್ತಾರೆ. ದಲಿತರೇನು ಮನುಷ್ಯರಲ್ಲವೇ? ಹಾಗಿರುವಾಗ ದಲಿತರ ಮನೆಯಲ್ಲಿ ಊಟ ಮಾಡಿದ್ದು ಯಾಕೆ ವಿಶೇಷ ಸುದ್ದಿಯಾಗಬೇಕು? ‘‘ಮೇಲ್ಜಾತಿಯವರು ದಲಿತರ ಮನೆಯಲ್ಲಿ ಊಟ ಮಾಡಿದರು’’ ಎಂದು ಪ್ರಚಾರ ಮಾಡುವುದು ನಿಜವಾಗಿ ದಲಿತರಿಗೇ ಅವಮಾನಕರ. ಊಟ ಮಾಡುವುದು ನೀರು ಕುಡಿಯುವುದು ಮುಂತಾದ ಕ್ಷುಲ್ಲಕ ವಿಷಯಗಳು ದೊಡ್ಡ ಸುದ್ದಿಯಾಗುವುದು ಕೇವಲ ಭಾರತದಲ್ಲಿ ಮಾತ್ರ. ಇನ್ನು ದಲಿತರು ಕೂಡಾ ಮೇಲ್ಜಾತಿ ರಾಜಕಾರಣಿಗಳನ್ನು ತಮ್ಮ ಮನೆಗೆ ಕರೆದು ಊಟ ಹಾಕುವುದು ಮತ್ತು ಅದರಿಂದ ತಾವೂ ಬಿಟ್ಟಿ ಪ್ರಚಾರ ಪಡೆಯುವುದು ಡಾ.ಬಾಬಾ ಸಾಹೇಬ್ ಅಂಬೇಡ್ಕರರ ತತ್ವಗಳಿಗೆ ವಿರುದ್ಧ ಎಂದು ಭಾವಿಸಬೇಕು. ಈಗ ಕೋವಿಂದ್ ಎಂಬ ದಲಿತರೊಬ್ಬರು ರಾಷ್ಟ್ರಪತಿ ಆಗಿದ್ದಾರೆ. ಇನ್ನು ಮುಂದೆ ಆಗಾಗ ರಾಷ್ಟ್ರಪತಿ ಭವನದಲ್ಲಿ ಅಧಿಕೃತವಾಗಿ ಭೋಜನಕೂಟ ನಡೆಯುತ್ತಿರುತ್ತದೆ. ಹಾಗಾದರೆ ಆ ಭೋಜನಕೂಟಕ್ಕೆ ಹೋಗಿ ಬಂದ ರಾಜಕಾರಣಿಗಳೆಲ್ಲಾ ನಾವು ದಲಿತರ ಮನೆಯಲ್ಲಿ ಊಟ ಮಾಡಿದೆವು ಎಂಬ ರೀತಿಯಲ್ಲಿ ಮಾಧ್ಯಮದಲ್ಲಿ ಪೋಸ್ ಕೊಡುತ್ತಾರೆಯೇ? 

 

Comments (Click here to Expand)