varthabharthi

ನಿಮ್ಮ ಅಂಕಣ

ಹೆದ್ದಾರಿ ಕೂಡಲೇ ದುರಸ್ತಿಗೊಳಿಸಿ

ವಾರ್ತಾ ಭಾರತಿ : 25 Jul, 2017
-ಆರ್. ಎಲ್. ಡಯಾಸ್ ಅಧ್ಯಕ್ಷರು, ರೈಲ್ವೆ ಯಾತ್ರಿಕರ ಸಂಘ, ಉಡುಪಿ

ಮಾನ್ಯರೆ,

ರಾ.ಹೆ. 169ಎ ಶೃಂಗೇರಿ ಇದರ ವ್ಯಾಪ್ತಿಯಲ್ಲಿರುವ ಪರ್ಕಳ-ಮಣಿಪಾಲ ರಸ್ತೆಯ ಪರ್ಕಳ ಪೇಟೆಯಲ್ಲಿರುವ ಬಸ್ ಸ್ಟಾಂಡ್‌ನ ರಸ್ತೆಯ ದುರವಸ್ಥೆ ಬಗ್ಗೆ ಇಲ್ಲಿಯ ಅನೇಕ ಮಹನೀಯರು ಮಾಧ್ಯಮಗಳಲ್ಲಿ ವಿನಂತಿಸಿದರೂ ಅದು ಅರಣ್ಯರೋದನವಾಗಿದೆ. ಪರ್ಕಳ ಪೇಟೆಯಿಂದ ಪಶ್ಚಿಮದಲ್ಲಿ ತಿರುವುಗಳಿಂದ ಕೂಡಿದ್ದ ರಸ್ತೆಯು ದೊಡ್ಡ ದೊಡ್ಡ ಹೊಂಡಗಳಿಂದಾವೃತವಾಗಿದ್ದು ದ್ವಿಚಕ್ರ ಮತ್ತು ಲಘು ವಾಹನ ಸವಾರರಿಗೆ ಕಂಟಕಪ್ರಾಯವಾಗಿದೆ. ಈ ರಸ್ತೆಯ ಆಯಕಟ್ಟಿನ ತಿರುವಿನಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನವಿದ್ದು ಅದನ್ನು ಸಂಬಂಧಪಟ್ಟವರು ಈಗಾಗಲೇ ಸ್ಥಳಾಂತರಗೊಳಿಸಿ ರಸ್ತೆಯ ಅಗಲೀಕರಣಕ್ಕೆ ಅವಕಾಶವನ್ನು ನೀಡಿ ವರ್ಷಗಳೇ ಉರುಳಿದ್ದರೂ ಹಳೆ ಕಟ್ಟಡ ಯಥಾ ಸ್ಥಿತಿಯಲ್ಲಿಯೇ ಇದೆ.

ಕೂಡಲೇ ರಾ.ಹೆ.ಯ ಇಂಜಿನಿಯರರು ಈ ಹಳೆ ಕಟ್ಟಡವನ್ನು ತೆಗೆದು ರಸ್ತೆಯನ್ನು ಅಗಲ ಗೊಳಿಸಬೇಕಾಗಿದೆ. ಹಾಗೆಯೇ ಅದರ ಮುಂದಿನ ತಿರುವಿನ ಮೋರಿಯ ಬಳಿ, ಮಣಿಪಾಲ ವ್ಯಾಲಿ ವ್ಯೆ ಪಕ್ಕದ ರಸ್ತೆ, ಟೈಗರ್ ಸರ್ಕಲ್ ಸುತ್ತ ಕೂಡ ಹೊಂಡಗಳಿಂದ ತುಂಬಿದ್ದು ಸಂಬಂಧ ಪಟ್ಟವರು ಕೇವಲ ಅದಕ್ಕೆ ಮಣ್ಣು ಅಥವಾ ಜಲ್ಲಿ ತುಂಬಿಸಿ ಕೈ ತೊಳೆಯದೆ ಶಾಶ್ವತ ಪರಿಹಾರಕ್ಕೆ ಯೋಚನೆ ಮಾಡಬೇಕು. ಅಲ್ಲದೆ ಪರ್ಕಳ-ಹೆರ್ಗ-ಗೋಳಿಕಟ್ಟೆಗೆ ಖಾಸಗಿ ಬಸ್ಸುಗಳ ಸೌಲಭ್ಯವಿದ್ದರೂ ಶೆಟ್ಟಿಬೆಟ್ಟು ವಾರ್ಡ್‌ನ ಬೊಬ್ಬರ್ಯ ಕಟ್ಟೆಗೆ ಯಾವ ಬಸ್ಸುಗಳ ಸಂಚಾರವೂ ಇರುವುದಿಲ್ಲ ಮತ್ತು ಈ ಪರಿಸರದಲ್ಲಿ ಅನೇಕ ಮನೆಗಳು ಇರುವುದರಿಂದ ಅಲ್ಲಿ ಸಿಟಿ ಬಸ್ಸಿನ ಆವಶ್ಯಕತೆ ಇದ್ದು ಪ್ರತಿದಿನ ಬೆಳಗ್ಗೆ ಮಧ್ಯಾಹ್ನ ಮತ್ತು ಸಂಜೆ ಮೂರು ಟ್ರಿಪ್ ನರ್ಮ್ ಬಸ್ಸಿನ ಓಡಾಟ ನಡೆಸ ಬೇಕೆಂದು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮನವಿ ನೀಡಿದ್ದು ಸಾರಿಗೆ ಇಲಾಖೆ ಕೂಡಲೇ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. 

 

Comments (Click here to Expand)