varthabharthi

ಅನುಗಾಲ

ಸ್ವದೇಶಿ ಮಂಚ ಮತ್ತು ವಿದೇಶಿ ಕುರ್ಚಿ

ವಾರ್ತಾ ಭಾರತಿ : 26 Jul, 2017

ರಾಮಾಯಣದಲ್ಲಿ ಶ್ರೀರಾಮನು ಲಂಕೆಯನ್ನು ತೊರೆದು ಅಯೋಧ್ಯೆಗೆ ಮರಳುವ ಸಂದರ್ಭದಲ್ಲಿ ಜನನಿ ಮತ್ತು ಜನ್ಮಭೂಮಿಯು ಸ್ವರ್ಗಕ್ಕಿಂತಲೂ ಶ್ರೇಷ್ಠ (ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರೀಯಸೀ) ಎಂದು ಹೇಳಿದನಂತೆ. ಮಾತೆ ಶಾಶ್ವತವಲ್ಲ. ಆಕೆಯು ಇರುವ ವರೆಗೆ ಮತ್ತು ಆಕೆ ತೀರಿಕೊಂಡ ಬಳಿಕವೂ ಆಕೆಯನ್ನು ಬೇಷರತ್ತಾಗಿ ಪ್ರೀತಿಸುವುದು-ಕೊನೆಗೆ ನೋವಿನ ಘಳಿಗೆಯಲ್ಲಾದರೂ ಅಯಾಚಿತವಾಗಿ ಅಯೋಚಿತವಾಗಿ ನೆನಪಿಸುವುದು- ಮನುಷ್ಯ ಸಹಜ. ಹೀಗೆ ಮನುಷ್ಯನಿಗೆ ಇರುವ ಈ ಸಂಬಂಧವು ಮಾನವಿಕವಾದದ್ದು; ಭಾವನೆಗೆ ಸಂಬಂಧಿಸಿದ್ದು. ತಾಯಿಯೆಂಬ ಕಲ್ಪನೆ ಮನುಷ್ಯರಿಗಷ್ಟೇ ಅಲ್ಲ; ಎಲ್ಲ ಚರಾಚರ ಜೀವಿಗಳಿಗೂ ಇರುವಂಥದ್ದೇ.

ಮಾತೃ ಭೂಮಿಯನ್ನು ಪ್ರೀತಿಸುವ ಪ್ರತಿಯೊಬ್ಬನೂ ಶ್ರೀರಾಮನಂದಂತೆ ಹೇಳಬೇಕಾದದ್ದೇ. ಮಾತೆಗೂ ಮಾತೃಭೂಮಿಗೂ ವ್ಯತ್ಯಾಸವೆಂದರೆ ಮಾತೃಭೂಮಿಗೆ ಅಸಂಖ್ಯ ಮಕ್ಕಳು. (ಭಾರತದಲ್ಲಿ ನೂರಿಪ್ಪತ್ತೈದು ಕೋಟಿಗೂ ಮಿಕ್ಕಿ!) ತಾವು ಈ ಭೂಮಿಯ ಮಕ್ಕಳು ಎಂದು ಮಕ್ಕಳು ಗುರುತಿಸಬೇಕೇ ಹೊರತು ಆಕೆ ಹೇಳಿಕೊಂಡದ್ದಿಲ್ಲ. ಮಾತೃಭೂಮಿಗೆ ಶಾಶ್ವತದೊಡೆಯರೂ ಇಲ್ಲ. ಅಷ್ಟೇ ಅಲ್ಲ-ಮಾತೃಭೂಮಿ ತನ್ನ ಮಕ್ಕಳ ಜೀವಿತಾವಧಿಯ ಜೊತೆಗೆ ಯಾವ ಸಂಬಂಧವೂ ಇರುವುದಿಲ್ಲ. ತಾಯ ಹೊಟ್ಟೆಯಿಂದ ಹುಟ್ಟಿದ ಮಕ್ಕಳು ನೆಲದೊಡಲನ್ನು ಸೇರುತ್ತಾರೆ.

ಪಾಕಿಸ್ತಾನವೆಂದು ನಾವಿಂದು ಕರೆಯುವ ಕೆಲವು ಭೂಭಾಗಗಳಲ್ಲಿ ಹುಟ್ಟಿದ ಎಲ್.ಕೆ. ಅಡ್ವ್ವಾನಿ, ಪ್ರೊ. ಯಶಪಾಲ್ ಇವರಿಗೆ ಮಾತೃಭೂಮಿ ಯಾವುದು? ಅವರು ಪ್ರೀತಿಸುವುದು ಯಾವ ಭೂಮಿಯನ್ನು? ತಾವು ಹುಟ್ಟಿ ಬೆಳೆದ ಜಾಗದಲ್ಲೇ ತಾವು ಬದುಕಬೇಕೆಂದು ಬಯಸುವುದಕ್ಕೆ ಭಾವಕ್ಕಿಂತ ಬೇರೆ ಸಮರ್ಥನೆಯಿದೆಯೇ? ಬೇರೆ ಆಧಾರವಿದೆಯೇ? ಒಟ್ಟಿನಲ್ಲಿ ಮಾತೃಭೂಮಿಯೆಂದು ನಾವು ಬಣ್ಣಿಸುವುದು ನಮ್ಮ ಒಂದು ಅನುಕೂಲ ಮತ್ತು ಸಮಾಧಾನದ ಸಂಗತಿಯನ್ನಷ್ಟೇ. ವಿಶ್ವದ ಎಲ್ಲ ದೇಶಗಳೂ ತಮ್ಮ ತಮ್ಮ ಪ್ರಜೆಗಳನ್ನು ಹೀಗೆ ಹೇಳಬೇಕೆಂದು ಒತ್ತಾಯಿಸುತ್ತವೆ ಮತ್ತು ಅದಕ್ಕೆ ಬೇಕಾದ ಭೂಮಿಕೆಗಳನ್ನು ಸಿದ್ಧಪಡಿಸುತ್ತವೆ. ಇವೆಲ್ಲವೂ ಒಂದು ತಂತ್ರವೆಂಬ ಸತ್ಯವನ್ನು ಹೇಳಲು ನಮ್ಮ ಸಮಾಜಕ್ಕೆ ಸಂಕೋಚವಾಗುತ್ತದೆ; ಹಲವಾರು ತೋರಿಕೆಯ ಕಾರಣಗಳಿಂದಾಗಿ ಹಾಗೆ ಹೇಳಲು ಹಿಂಜರಿಯುತ್ತೇವೆ.

ಇದು ಸಾಂಪ್ರದಾಯಿಕ ಭಾರತೀಯ ನಂಬಿಕೆಯಾದರೆ ಸಮಕಾಲೀನ ಭಾರತವು ಇದನ್ನೊಂದು ತಂತ್ರವಾಗಿ ಬಳಸಿಕೊಳ್ಳುತ್ತಿದೆ. ದೇಶಪ್ರೇಮ, ದೇಶಭಕ್ತಿ ಇತ್ಯಾದಿ ಸರಕುಗಳು ಈಗ ಮತಕ್ಕೆ, ಅಧಿಕಾರಕ್ಕೆ, ಲೋಭಕ್ಕೆ, ಲಾಭಕ್ಕೆ ವಿನಿಮಯಗೊಳ್ಳುತ್ತಿವೆ; ವಿಕ್ರಯಗೊಳ್ಳುತ್ತಿವೆ. ಸ್ವದೇಶವನ್ನು ಪ್ರೀತಿಸುವುದು ಒಂದು ಉದ್ಯಮವಾಗಿ ಬೆಳೆಯುತ್ತಿದೆ. ಅನೇಕ ಸಂಘಟನೆಗಳು ತಾವು ಈ ದೇಶಪ್ರೇಮವನ್ನು ಗುತ್ತಿಗೆಗೆ ಪಡೆದುಕೊಂಡಂತೆ ವರ್ತಿಸುತ್ತವೆ; ಮತ್ತು ತಮ್ಮ ದೇಶಪ್ರೇಮವನ್ನು ಬಹಿರಂಗವಾಗಿ ಘೋಷಿಸಿಕೊಳ್ಳದವರನ್ನು ಅಷ್ಟೇ ಬಹಿರಂಗವಾಗಿ ಬೇಟೆಯಾಡುತ್ತಿವೆ. ‘ನಾನು ನನ್ನ ದೇಶವನ್ನು ಬೆಂಬಲಿಸುತ್ತೇನೆ’ ಎಂಬ ಅಭಿಯಾನವನ್ನು ಆರಂಭಿಸಲು ಕೇಂದ್ರ ಸರಕಾರವೇ ಯೋಜಿಸಿದೆಯೆಂದ ಮೇಲೆ ಗೋರಕ್ಷಣೆಯಂತೆ ಇದೂ ಒಂದು ಹಿಂಸಾತ್ಮಕ ಚಳವಳಿಯಾಗುವುದು ಶತಸ್ಸಿದ್ಧ. ದೇಶದ ಯುವಜನತೆಗೆ ಅಹಿಂಸೆ, ಪ್ರಾಮಾಣಿಕತೆ, ಅಸ್ಮಿತೆಗಳನ್ನು ಪೋಷಿಸುವ ಶಿಕ್ಷಣಗಳನ್ನು ನೀಡಬೇಕೇ ವಿನಾ ರೊಚ್ಚಿಗೇಳುವಂತಹ, ರಕ್ತದೊತ್ತಡ ಹೆಚ್ಚಿಸುವಂತಹ ಮಾದರಿಗಳನ್ನು ಹೇಳಿಕೊಡಬಾರದು. ಕ್ರಿಕೆಟ್ ಆಟವನ್ನು ಯುದ್ಧವೆಂಬಂತೆ ಬಣ್ಣಿಸುವಾಗ ಎದುರಾಳಿಯು ನಿಮಗೆ ಒಬ್ಬ ಆಟಗಾರನಂತೆ ಕಾಣದೆ ಶತ್ರುವಿನಂತೆ ಕಾಣಿಸುವುದು ಸಹಜ.

20ನೆ ಶತಮಾನದ ಕೊನೆಯ ದಶಕದಲ್ಲಿ ಸ್ವತಂತ್ರ ಭಾರತದಲ್ಲಿ ಸ್ವದೇಶಿ ಚಿಂತನೆಗೆಂದೇ ಸ್ವಯಂಭೂ ಸಂಘಗಳು ಹುಟ್ಟಿಕೊಂಡವು. ಭಾರತದ್ದೆಲ್ಲವನ್ನೂ ಪ್ರೀತಿಸಬೇಕು ಮಾತ್ರವಲ್ಲ ಅವೇ ಶ್ರೇಷ್ಠವೆಂದು ಹೇಳಬೇಕು ಹಾಗೂ ಅವನ್ನೇ ಬಳಸಬೇಕು ಎಂಬ ಅಭಿಯಾನವು ಆರಂಭವಾಯಿತು. ನನ್ನ ಪರಿಚಯದ ಹಿರಿಯ ವೈದ್ಯರೊಬ್ಬರು ಯಾವ ಸ್ವದೇಶಿ ಸಂಘಗಳ ದೃಢೀಕರಣವಿಲ್ಲದೆಯೂ ದೇಶಭಕ್ತರೇ. ಸಮಾಜಸೇವಕರೇ. ಅವರನ್ನು ಇಂತಹದ್ದೊಂದು ಚಳವಳಿಯ ಮುಂದಾಳ್ತನವನ್ನು ವಹಿಸಬೇಕೆಂದು ಸ್ಥಳೀಯ ಸಂಘಟಕರು ಕೋರಿಕೊಂಡಾಗ ಅವರು ‘‘ನೀವು ಹೇಳುವುದನ್ನು ನಾನು ಆಕ್ಷೇಪಿಸುವುದಿಲ್ಲ; ಆದರೆ ನನ್ನಲ್ಲಿ ಸಾಕಷ್ಟು ವಿದೇಶಿ ಒಳ್ಳೆಯ ವಸ್ತುಗಳಿವೆ; ನಾನು ಧರಿಸಿದ ವಾಚು ವಿದೇಶದ್ದು, ನನ್ನಲ್ಲಿರುವ ಕ್ಯಾಮೆರಾ ವಿದೇಶದ್ದು; ಹೀಗೆ ನನ್ನಲ್ಲಿರುವ ಈ ಉಪಯೋಗದ ವಸ್ತುಗಳನ್ನು ನಾನು ಎಸೆಯಲಾರೆನಾದ್ದರಿಂದ ನಾನು ನಿಮ್ಮಾಂದಿಗೆ ಭಾಗವಹಿಸಲಾರೆ’’ ಎಂದು ಹೇಳಿದರು. ಅವರಿಗೆ ಗುಣಮಟ್ಟ ಮತ್ತು ಇರುವ ವಸ್ತುಗಳ ಬಳಕೆ ಪ್ರಾಥಮಿಕ; ಅದರ ಕುರಿತಾದ ಮಡಿವಂತಿಕೆ ಆನಂತರದ್ದು.

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಗಾಂಧಿ ಸ್ವದೇಶಿ ಚಳವಳಿಯನ್ನು ಮಾಡಿದ್ದರು. ಅದು ಸಂದರ್ಭೋಚಿತವಾದದ್ದು. ಬ್ರಿಟಿಷರು ಭಾರತದ ನೇಯ್ಗೆಗೆ ಕತ್ತರಿ ಹಾಕಿ ತಮ್ಮ ಬಟ್ಟೆಗಳನ್ನು ಇಲ್ಲಿನ ಮಾರುಕಟ್ಟೆಗೆ ಇಳಿಸಿದಾಗ ಅವುಗಳ ಬಳಕೆಯು ಪಾರತಂತ್ರ್ಯವನ್ನು, ಗುಲಾಮಗಿರಿಯನ್ನು ಮಾತ್ರವಲ್ಲ, ನಮ್ಮ ಅಸ್ಮಿತೆಯ ನಾಶವನ್ನೂ ಸಾಂಕೇತಿಸಿತ್ತು. ಈ ಆಯಾಮದಲ್ಲಿ ಗಾಂಧಿ ಕೈಗೊಂಡ ನಿರ್ಣಯವು ಸರಿಯಾಗಿತ್ತೆಂದೇ ಹೇಳಬಹುದು. ಆದರೂ ಅವರು ಇಲ್ಲಿ ಬಳಸಲ್ಪಡುತ್ತಿದ್ದ ವಿದೇಶಿ ಪೋಷಾಕುಗಳನ್ನು, ಬಟ್ಟೆಗಳನ್ನು ಸುಡಲು ಕರೆಕೊಟ್ಟಾಗ ರವೀಂದ್ರನಾಥ ಠಾಗೋರ್ ಅದನ್ನು ವಿರೋಧಿಸಿ ಈ ಬಟ್ಟೆಗಳನ್ನು ನಿರ್ಗತಿಕರಿಗಾದರೂ ನೀಡಿ ಅವರ ಅಗತ್ಯಗಳನ್ನು ಪೂರೈಸ ಬಹುದು ಎಂದು ಹೇಳಿದ್ದರು. ಹೀಗೆ ಹೇಳಿದ ಠಾಗೋರ್ ಅಪ್ರತಿಮ ದೇಶ ಭಕ್ತ. ನಮ್ಮ ಭಾವನೆಗಳು ಅವ್ಯವಹಾರಿಕವಾದಾಗ ಇಂತಹ ಎಚ್ಚರಿಕೆ ಅಗತ್ಯ.

ಸಮಕಾಲೀನ ಭಾರತದ ಸ್ವದೇಶಿ ಚಿಂತನೆಗೆ ಕಾಲುಗಳೂ ಇಲ್ಲ; ರೆಕ್ಕೆಗಳೂ ಇಲ್ಲ. ಇವೆಲ್ಲ ಅನುಕೂಲಕರ ಸಿದ್ಧಾಂತಗಳೂ ಅಲ್ಲ. ಬದಲಿಗೆ ಮುಚ್ಚಿಟ್ಟ ರಾಜಕೀಯ ಕಾರ್ಯಸೂಚಿಗಳ ಮುನ್ನುಡಿ. ಚಿಕ್ಕ ವಿಚಾರವೆಂದು ನಾವು ಬಗೆಯುವ ನಿತ್ಯ ಬಳಕೆಯ ಸರಕುಗಳು ಬಹುತೇಕ ವಿದೇಶಿಗಳೇ. ನಾವು ಬಳಸುವ ವಿಶ್ವಮಟ್ಟದ್ದೆಂದು ಹೇಳಲಾದ ಜೀನ್ ಧಿರಿಸುಗಳು, ಔಷಧಿಗಳು, ವೈದ್ಯಕೀಯ-ತಾಂತ್ರಿಕ ಉಪಕರಣಗಳು, ಕಂಪ್ಯೂಟರ್, ಮೊಬೈಲ್, ಪ್ರಿಂಟರ್ ಮತ್ತಿತರ ವಿದ್ಯುನ್ಮಾನ ಜ್ಞಾನಸಾಧನ-ಸಲಕರಣೆಗಳಲ್ಲಿ ಸಿಂಹಪಾಲು ವಿದೇಶಿ. ನಮ್ಮ ನಾಯಕರು ಬಳಸುವ ಬಹುಪಾಲು ವಾಹನಗಳು ವಿದೇಶಿ. ನಮ್ಮ ‘ಜೈ ಜವಾನ್’ಗಳು ಬಳಸುವ, ಬಳಸಬೇಕಾದ ಶಸ್ತ್ರಾಸ್ತ್ರಗಳು ವಿದೇಶದಿಂದ ಆಮದು ಮಾಡಿಕೊಂಡವುಗಳು. ನಮ್ಮ ಸಮಾಜದಲ್ಲಿ ಗೌರವ ಪಡೆಯುವ ಬಹಳಷ್ಟು ವಿದ್ಯಾರ್ಹತೆಗಳು ವಿದೇಶಿ. ಭಾರತೀಯ ಪ್ರವಾಸಿಗರಲ್ಲೂ ವಿದೇಶ ಪ್ರವಾಸ ಕೈಗೊಂಡವರೆಂದರೆ ಅವರ ಅಂತಸ್ತು ಹೆಚ್ಚೆಂದು ಲೆಕ್ಕ. ವಿಶ್ವದೆಲ್ಲೆಡೆಯ ದೇಶಗಳಲ್ಲಿರುವ ವಲಸಿಗರಲ್ಲಿ ಅತೀ ಹೆಚ್ಚು ಮಂದಿ ಭಾರತೀಯರು.

ಅಷ್ಟೇ ಅಲ್ಲ: ನಮ್ಮ ಪ್ರಧಾನಿಯಾಗಲೀ ಇತರ ಸಚಿವರಾಗಲೀ ವಿದೇಶಕ್ಕೆ ಹೋದರೆಂದರೆ ಅಲ್ಲಿನ ಶಸ್ತ್ರಾಸ್ತ್ರಗಳಿಗೆ ವ್ಯಾಪಾರ ವಾಯಿತೆಂದರ್ಥ. ಮೋದಿ ಇತ್ತೀಚೆಗೆ ಅಮೆರಿಕ, ಜರ್ಮನಿ, ಇಸ್ರೇಲ್ ದೇಶಗಳ ಪ್ರವಾಸ ಕೈಗೊಂಡ ಫಲವೆಂದರೆ ಸಾವಿರಾರು ಕೋಟಿ ಶಸ್ತ್ರಾಸ್ತ್ರಗಳ ಖರೀದಿಗೆ ಒಪ್ಪಂದ ಮಾಡಿಕೊಂಡದ್ದು. ಒಂದೆಡೆ ‘ಮೇಕ್ ಇನ್ ಇಂಡಿಯಾ’ ಎಂದು ಹೇಳುತ್ತಲೇ ಸಾವಿರಾರು ಕೋಟಿ ಹಣವನ್ನು ಕಳೆದುಕೊಂಡದ್ದರ ಜೊತೆಗೇ ನಮ್ಮ ಅಭಿಮಾನವನ್ನೂ ಅಲ್ಲಿ ಅಡವಿಟ್ಟೆವು. ಈ ರಹಸ್ಯ ನಮ್ಮ ದೇಶೀ ಚಿಂತಕರಿಗೆ ಗೊತ್ತಿಲ್ಲದ್ದೇನಲ್ಲ. ಆದರೆ ಅವರೆಲ್ಲ ಜಾಣ ಕುರುಡು, ಕಿವುಡುಗಳಿಗೆ ಮೊರೆ ಹೋಗುತ್ತಾರೆ.

ಹೀಗೆ ಖರೀದಿ ಮಾಡಬಾರದೆಂದೇನಿಲ್ಲ. ವಿಶ್ವ ವ್ಯಾಪಾರ ಸಂಸ್ಕೃತಿಯಲ್ಲಿ ಇವೆಲ್ಲ ಸರ್ವೇಸಾಮಾನ್ಯ. ಆದರೆ ಹೀಗೆ ಸಹಜ ವಾದ ಬದುಕು, ವ್ಯವಹಾರ ನಡೆಸುವುದನ್ನು ಸ್ವೀಕರಿಸದೆ ಮುಗ್ಧರ ತಲೆತಿರುಗಿಸುವ ಸ್ವದೇಶಿತನದ ಮಂತ್ರಕ್ಕೆ ಮಾವಿನಕಾಯಿ ಬೀಳುವುದಿಲ್ಲ.

ಭಾರತವು ಕಳೆದ ಮೂರು-ನಾಲ್ಕು ವರ್ಷಗಳಿಂದ ಪಾಕಿಸ್ತಾನದ ವಿರುದ್ಧ ರಣಕಹಳೆಯನ್ನೂದುತ್ತಿದೆ. ವೀರಾವೇಶದ ಈ ನಡವಳಿಕೆ ಗಡಿಗೆ ಹೋಗದೆ, ಕಷ್ಟವನ್ನು ಅನುಭವಿಸದೆ ಆರಾಮಕುರ್ಚಿಯಲ್ಲಿ ಕುಳಿತೇ ದೇಶಪ್ರೇಮವನ್ನು ಘೋಷಿಸುವ ಮಂದಿಗೆ ಭಾರೀ ಸಂತೋಷವನ್ನು ನೀಡಿದೆ. ಜಿಮ್ನಾಶಿಯಮ್‌ನ, ವ್ಯಾಯಾಮಶಾಲೆಯ ಟ್ರೆಡ್‌ಮಿಲ್‌ನಲ್ಲಿ ನಡೆದಂತೆ ನಮ್ಮ ಎಲ್ಲ ಪರಾಕ್ರಮ ಇಲ್ಲಿಗೇ ನಿಂತು ನಮಗೇ ಸುಸ್ತು ಹಿಡಿಸುತ್ತದೆಯೇ ಹೊರತು ಕಾರ್ಯದಲ್ಲಿ ಒಂದಿಷ್ಟೂ ಮುಂದುವರಿಯುವ ಸೂಚನೆ ಕಂಡು ಬರುತ್ತಿಲ್ಲ. ಇವು ರಸ್ತೆ ಸಂದುಗಳ ಗುರ್.. ಗುರ್.. ಹಂತದಲ್ಲಿವೆಯೇ ವಿನಾ ಖಾಸ್ ಯುದ್ಧ/ಘರ್ಷಣೆಗಳ ಹಂತ ತಲುಪಿಲ್ಲ. ಕಾರಣ-ಸಾರ್ವಜನಿಕ ಸಮಾ ರಂಭಗಳಲ್ಲಿ ಧ್ವನಿವರ್ಧಕಗಳನ್ನು ಒಳದಿಕ್ಕಿಗೆ ಮುಖ ಮಾಡಿಟ್ಟಂತೆ ಈ ಅಬ್ಬರದ ಧ್ವನಿಗಳೆಲ್ಲ ಭಾರತೀಯರನ್ನುದ್ದೇಶಿಸಿದಂತೆ ಕಾಣುತ್ತಿದೆಯೇ ಹೊರತು ನಿಜವಾದ ವೈರಿಯ ಕಡೆಗೆ ಒಂದಿಷ್ಟೂ ಪರಿಣಾಮವನ್ನು ಬೀರಿಲ್ಲವೇನೋ?

ಕಳೆದ ಕೆಲವು ವಾರಗಳಿಂದ ಭಾರತ-ಚೀನಾ ನಡುವೆ ಟಿಬೆಟ್-ಸಿಕ್ಕಿಮ್ ಗಡಿಯ ಡೋಕಾಲಾ ಸರಹದ್ದಿಗೆ ಸಂಬಂಧಿಸಿದಂತೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಚೀನಾವು ಭಾರತಕ್ಕಿಂತ ಹೆಚ್ಚು ಮಿಲಿಟರಿ ಶಕ್ತಿ ಯನ್ನು ಹೊಂದಿದ ದೇಶವೆಂದು ಎಂತಹ ದೇಶಭಕ್ತ ಭಾರತೀಯನೂ ಒಪ್ಪಿಕೊಳ್ಳಲೇಬೇಕು. (ಹುಂಬರಿಗೆ ಈ ಷರತ್ತು ಅನ್ವಯಿಸುವುದಿಲ್ಲ!) ಭಾರತ 1962ರಲ್ಲಿ ಇದ್ದುದಕ್ಕಿಂತ ಈಗ ಹೆಚ್ಚು ಶಕ್ತವಾಗಿದೆ ನಿಜ; ಆದರೆ ಈ ಅವಧಿಯಲ್ಲಿ ಚೀನಾವು ಮಿಲಿಟರಿ ಮಾತ್ರವಲ್ಲ, ವಿಶ್ವ ರಾಜಕೀಯದಲ್ಲಿ, ಮಾರುಕಟ್ಟೆಯಲ್ಲಿ ಲಗ್ಗೆ ಹಾಕಿ ನಿಂತ ವೈಖರಿಯನ್ನು ಗಮನಿಸಿದರೆ ನಾವು ಭಾರತೀಯರು ಮಾಡಿದ್ದೆಷ್ಟೋ ಮಾಡಬೇಕಾದ್ದು ಅದಕ್ಕಿಂತಲೂ ಬಹಳಷ್ಟಿದೆ ಎಂದು ಅನ್ನಿಸುತ್ತದೆ.

ಈ ವಿಚಾರವನ್ನು ನಮ್ಮ ನಾಯಕರು ಅರ್ಥಮಾಡಿಕೊಂಡಿಲ್ಲವೆಂದಲ್ಲ. ಅದಕ್ಕೇ ಅವರ ಸ್ವರ, ಧಾಟಿ ಸ್ವಲ್ಪ ಸೌಮ್ಯವಾಗಿದೆ. ಪಾಕಿಸ್ತಾನಕ್ಕೆಸೆದಷ್ಟು ಮಾತಿನ ಬಾಂಬು ಚೀನಾದ ಕಡೆ ನಮ್ಮ ಪ್ರಧಾನಿಯಾಗಲೀ ಅವರ ಪಡೆಯಾಗಲೀ ಎಸೆದಿಲ್ಲ. ಬದಲಾಗಿ ಈ ಕುರಿತಂತೆ ಸರ್ವಪಕ್ಷಸಭೆಯನ್ನು ಕರೆಯುವ ಸೌಜನ್ಯ ಅಪರೂಪವಾಗಿಯಾದರೂ ದಾಖಲಾಗಿದೆ. ಭಾರತದ ರಕ್ಷಣಾ ಸಲಹೆಗಾರರು ಚೀನಾಕ್ಕೆ ಭೇಟಿ ನೀಡಲಿದ್ದಾರೆ. ಇವೆಲ್ಲ ಸ್ವಾಗತಾರ್ಹ ಪ್ರಬುದ್ಧ ರಾಜಕಾರಣ.

ಆದರೆ ನಮ್ಮಲ್ಲೊಂದಿಷ್ಟು ಮಂದಿ (ಇವರಲ್ಲಿ ಅರ್ಥಶಾಸ್ತ್ರಜ್ಞರೂ ಸೇರಿದ್ದಾರೆಂಬುದು ಕುಹಕವೇನಲ್ಲ!) ಚೀನಾಕ್ಕೆ ಪಾಠಕಲಿಸಲು ಅವರ ಉತ್ಪನ್ನಗಳನ್ನು ಕೊಳ್ಳಬೇಡಿರೆಂದು ಪ್ರಚಾರ ಮಾಡುತ್ತಿದ್ದಾರೆ. ಇಂದು ಭಾರತದಲ್ಲಿ ಯಾವುದೇ ಒಂದು ದೇಶದ ಸರಕುಗಳು ಅತೀ ಹೆಚ್ಚು ಚಲಾವಣೆಯಾಗುತ್ತಿದ್ದರೆ ಅವು ಚೀನಾದ್ದು. ಅವಿಲ್ಲದೆ ನಮ್ಮ ಬದುಕೇ ಇಲ್ಲವೆಂಬಷ್ಟು ಅವು ಮುತ್ತಿವೆ. ಯುರೋಪ್ ಮತ್ತು ಅಮೆರಿಕದ ಸರಕುಗಳೂ ಚೀನಾದಲ್ಲೇ ತಯಾರಾಗಿ ಬರುತ್ತಿವೆ. ನಾವೂ ಚೀನಾಕ್ಕೆ ರಫ್ತು ಮಾಡುತ್ತೇವೆ. ಅವು ನಿಂತು ಹೋದರೆ ನಮ್ಮಲ್ಲನೇಕರ ಬದುಕು ಬವಣೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಸ್ವದೇಶಿ ಪ್ರೀತಿಯು ಅವಾಸ್ತವದ ಅಸಂಗತತೆಗೆ ಹೋಗಬಾರದೆಂಬ ಸೂಚನೆಯನ್ನು ನಮ್ಮ ಸರಕಾರವು ಈ ಮಂದಿಗೆ ನೀಡಬೇಕು.

 ಜನ್ಮ ಭೂಮಿಯನ್ನು ಹಾಡಿಹೊಗಳುವ ಅನೇಕ ಭಾರತೀಯರು ಒಮ್ಮೆ ವಿದೇಶಕ್ಕೆ ಹೋದರೆಂದರೆ ಮರಳಿ ಬರಲು ಒಲ್ಲರು. ಅಲ್ಲಿನ ಸುಖಭೋಗ ಗಳಿಗೆ ಮನಸೋತು ಅಲ್ಲಿಯೇ ನೆಲೆಸಿ ಆಗಾಗ ‘ನಾನಿಲ್ಲಿದ್ದರೂ ನನ್ನ ಮನಸ್ಸೆಲ್ಲವೂ ಭಾರತದಲ್ಲಿದೆ’ ಎಂದು ಜಾನಪದ ಕತೆಗಳಲ್ಲಿ ಬರುವ ಏಳು ಸಮುದ್ರದಾಚೆಗೆ ತನ್ನ ಪ್ರಾಣಪಕ್ಷಿಯನ್ನು ಜತನದಲ್ಲಿರಿಸಿದ ರಾಕ್ಷಸರಂತೆ ಗೋಳಾಡುವವರು. ಯಾಕೆ ಒದ್ದಾಡುತ್ತೀರಿ, ಬಂದುಬಿಡಿ ಎಂದರೆ ನಾನು ಇಲ್ಲಿ ನನ್ನ ಉದ್ಯೋಗ/ವೃತ್ತಿ ಸಂಬಂಧವಾಗಿ ಇದ್ದೇನೆ; ನನ್ನ ಮಗ/ಮಗಳು ಇಲ್ಲಿನವರನ್ನು ಮದುವೆಯಾಗಿದ್ದಾರೆ; ಇಲ್ಲೇ ಮನೆ, ಆಸ್ತಿ ಇವೆ; ಭಾರತಕ್ಕೆ ಬಂದು ಏನು ಮಾಡಲಿ? ಎಂದು ಹಲುಬುತ್ತ ತಮ್ಮ (ಸ್ವ)ದೇಶ ಪ್ರೇಮವನ್ನು ಹನಿಸುತ್ತಾರೆ.

ನಮಗೆ ಅಂತಲ್ಲ, ನಮ್ಮ ದೇಶಕ್ಕೇ ತನ್ನ ಗುಣಮಾನ ಅಲೆಯಲು ವಿದೇಶಿ ಸರ್ಟಿಫಿಕೆಟ್ ಬೇಕು. ಭಾರತ ಶ್ರೇಷ್ಠ ಎಂದು ಟ್ರಂಪ್ ಹೇಳಿದ್ದಾರೆ ಇಸ್ರೇಲಿ ಪ್ರಧಾನಿ ಹೇಳಿದ್ದಾರೆ ಎಂಬುದು ಭಾರತೀಯರ ಅಭಿಮತಕ್ಕಿಂತಲೂ ದೊಡ್ಡದು; ಮಹತ್ವದ್ದು.

ಇದನ್ನೆಲ್ಲ ಗಮನಿಸಿದರೆ ಜನನಿಯೂ ಜನ್ಮಭೂಮಿಯೂ ಸ್ವರ್ಗಕ್ಕಿಂತ ಹೆಚ್ಚು ಆದರೆ ವಿದೇಶಗಳಿಗಿಂತ ಕಿಂಚಿದೂನ (ಸ್ವಲ್ಪ ಕಡಿಮೆ) ಎಂಬರ್ಥ ಬರುವ ಹೊಸ ಉಕ್ತಿಯನ್ನು ಸಂಸ್ಕೃತದಲ್ಲಿ ರಚಿಸುವುದಕ್ಕೆ ನಮ್ಮ ಸ್ವದೇಶಿ ವಿದ್ವಾಂಸರಿಗೆ ಹೇಳಬೇಕಾಗಬಹುದು. ವಿದೇಶಿ ಕುರ್ಚಿಯ ಕನಸು ಕಾಣು ವವರು ಸ್ವದೇಶಿ ಮಂಚದಿಂದ ಎದ್ದು ನಿಲ್ಲಬೇಕಾದ್ದು ಅನಿವಾರ್ಯ.

ಇಂದು ಭಾರತದಲ್ಲಿ ಯಾವುದೇ ಒಂದು ದೇಶದ ಸರಕುಗಳು ಅತೀ ಹೆಚ್ಚು ಚಲಾವಣೆಯಾಗುತ್ತಿದ್ದರೆ ಅವು ಚೀನಾದ್ದು. ಅವಿಲ್ಲದೆ ನಮ್ಮ ಬದುಕೇ ಇಲ್ಲವೆಂಬಷ್ಟು ಅವು ಮುತ್ತಿವೆ. ಯುರೋಪ್ ಮತ್ತು ಅಮೆರಿಕದ ಸರಕುಗಳೂ ಚೀನಾದಲ್ಲೇ ತಯಾರಾಗಿ ಬರುತ್ತಿವೆ. ನಾವೂ ಚೀನಾಕ್ಕೆ ರಫ್ತು ಮಾಡುತ್ತೇವೆ. ಅವು ನಿಂತು ಹೋದರೆ ನಮ್ಮಲ್ಲನೇಕರ ಬದುಕು ಬವಣೆಯಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)