ನಯನ್ಸ್ ಚಿತ್ರಕ್ಕೆ ಹೀರೋ ಬೇಕಿಲ್ಲ
ಇತ್ತೀಚಿನ ವರ್ಷಗಳಲ್ಲಿ ಸಾಲುಸಾಲಾಗಿ ಹಿಟ್ ಚಿತ್ರಗಳನ್ನು ನೀಡುತ್ತಿರುವ ದಕ್ಷಿಣ ಭಾರತದ ಸೂಪರ್ ಹಿರೋಯಿನ್ ನಯನತಾರಾ ಚಿತ್ರಕ್ಕೆ ಹೀರೋಗಳ ಅಗತ್ಯವಿಲ್ಲವೇ?. ಸದ್ಯದಲ್ಲೇ ಚಿತ್ರೀಕರಣಕ್ಕೆ ರೆಡಿಯಾಗಿರುವ ತಮಿಳು ಚಿತ್ರ ವೊಂದರ ವಿಷಯದಲ್ಲಂತೂ ಇದು ನೂರಕ್ಕೆ ನೂರು ನಿಜವಾಗಿದೆ.
ಈಗ ಹೆಚ್ಚು ಹೆಚ್ಚಾಗಿ ನಾಯಕಿ ಪ್ರಧಾನ ಸಿನೆಮಾಗಳಲ್ಲೇ ಕಾಣಿಸಿಕೊಳ್ಳು ತ್ತಿರುವ ನಯನತಾರಾ ನಟನೆಯ ‘ಕೋಕೋ’ ಚಿತ್ರದಲ್ಲಿ ನಾಯಕನೇ ಇಲ್ಲವಂತೆ. ದಿಲೀಪ್ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. 2015ರಲ್ಲಿ ತೆರೆಕಂಡ ನಯನತಾರಾ ನಟಿಸಿದ್ದ ‘ನಾನ್ ರೌಡಿದಾನ್’ ಚಿತ್ರದಂತೆ, ‘ಕೋಕೋ’ ಕೂಡಾ ಒಂದು ಸಂಪೂರ್ಣ ಮನರಂಜನಾತ್ಮಕ ಚಿತ್ರವೆನ್ನಲಾಗಿದೆ.
‘ಕೊಲವೆರಿ’ ಖ್ಯಾತಿಯ ಅನಿರುದ್ಧ ರವಿಚಂದ್ರನ್ ಸಂಗೀತ ನೀಡಲಿರುವ ಈ ಚಿತ್ರದಲ್ಲಿ ಶರಣ್ಯಾ ಹಾಗೂ ಯೋಗಿ ಬಾಬು ಮುಖ್ಯ ಪಾತ್ರಗಳಲ್ಲಿ ಕಾಣಿಸಿ ಕೊಳ್ಳಲಿದ್ದಾರೆ. ಇವರನ್ನುಳಿದು ಚಿತ್ರದಲ್ಲಿ ನಟಿಸಲಿರುವ ಉಳಿದ ನಟ, ನಟಿಯರ ಬಗ್ಗೆ ಯಾವುದೇ ವಿವರಗಳು ದೊರೆತಿಲ್ಲ. ನಯನತಾರಾ ಸದ್ಯಕ್ಕೆ ‘ಅರಂ’, ‘ವೆಲೈಕ್ಕಾರನ್’, ‘ಇಮೈಕಾ ನೊಡಿಗಳ್’, ‘ಕೊಲಯುದಿರ್ ಕಾಲಂ’ ಚಿತ್ರಗಳ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದು, ಅವುಗಳ ಜೊತೆಗೆ ‘ಕೋಕೋ’ ಚಿತ್ರಕ್ಕೂ ಬಣ್ಣಹಚ್ಚಲಿದ್ದಾರೆ.