varthabharthi

ನಿಮ್ಮ ಅಂಕಣ

ಲಿಂಗಧಾರಿಗಳೆಲ್ಲಾ ಲಿಂಗಾಯತರು

ವಾರ್ತಾ ಭಾರತಿ : 29 Jul, 2017
ಈ.ಕೃಷ್ಣಪ್ಪ ಬಸವ ತತ್ವ ಪ್ರಚಾರ ಪ್ರತಿಷ್ಠಾನ (ರಿ.)

ಮಾನ್ಯರೆ,

ಮೂಢನಂಬಿಕೆ, ವೌಢ್ಯ, ಅವೈಜ್ಞಾನಿಕ ಆಚರಣೆಗಳ ವಿರುದ್ಧ ಮತ್ತು ಬಹುದೇವೋಪಾಸನೆಯ ವೈದಿಕ ವ್ಯವಸ್ಥೆಯ ವಿರುದ್ಧ ಕ್ರಾಂತಿ ಮಾಡಿದವರು ಬಸವಣ್ಣವರು. ಅಸ್ಪಶ್ಯ, ಹಿಂದುಳಿದ, ಕಾಯಕ ಶರಣರನ್ನು ಮನುವಾದಿಗಳು, ಪ್ರಾಣಿಗಳಂತೆ ಉಪಚರಿಸುತ್ತಿದ್ದ 12ನೆಯ ಶತಮಾನದಲ್ಲಿ, ವೈದಿಕರನ್ನು ಬಿಟ್ಟು ಉಳಿದೆಲ್ಲಾ ವರ್ಗದವರನ್ನು ಅಸ್ಪಶ್ಯತೆಯ ಮಟ್ಟಕ್ಕಿಳಿಸಿದ್ದ ಕಾಲಘಟ್ಟದಲ್ಲಿ ಬಸವಣ್ಣನವರು ಈ ಶೋಷಿತ ವರ್ಗದವರಿಗೆ ಪ್ರವಾದಿ ರೂಪದಲ್ಲಿ ಬಂದು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆ ನೀಡಿ, ಮಡಿ, ಮೈಲಿಗೆ, ಗುಡಿ ಸಂಸ್ಕೃತಿಗೆ ತಿಲಾಂಜಲಿ ಹೇಳಿ ಮನುವಾದಿಗಳಾದ ವೈದಿಕರು ಕೊಟ್ಟಂತಹ ದೇವರುಗಳ ಬದಲಿಗೆ ವಿಶ್ವರೂಪಿಯಾದ ಇಷ್ಟಲಿಂಗವನ್ನು ಪೂಜೆಗಾಗಿ ನೀಡಿ ದೇಹವನ್ನೇ ದೇಗುಲ ಮಾಡಿ ಇಷ್ಟಲಿಂಗ ಪೂಜೆ ಎಂಬ ಏಕದೇವೋಪಾಸನೆಗೆ ಎಲ್ಲಾ ವರ್ಗದವರು ಒಳಗಾಗುವಂತೆ ಮಾಡಿದವರು ಬಸವಣ್ಣನವರು, ಲಿಂಗಧಾರಿಗಳಿಗೆ ಲಿಂಗಾಯತ ಎನ್ನುವ ಹೊಸ ಧರ್ಮವನ್ನು ಕೊಟ್ಟರು.ಲಿಂಗಾಯತ ಧರ್ಮ ಎಂಬುದು ಅಸ್ಪಶ್ಯರ ಧರ್ಮ, ಕಾಯಕ ಜೀವಿಗಳ ಧರ್ಮ, ಇದು ಶರಣರ ಧರ್ಮ, ಇದು ಜಾತ್ಯತೀತ ಧರ್ಮ, ಇದು ಮಾನವ ಧರ್ಮ.
*ಇಂತಹ ಧರ್ಮವನ್ನು ಬ್ರಿಟಿಷ್ ಆಡಳಿತದಲ್ಲಿ ಜಾತಿ ಪಟ್ಟಿಗೆ ಸೇರಿಸದೆ ಹೊರಗಡೆ ಇಟ್ಟಿದ್ದರು.
* ಜಾತ್ಯತೀತ ಪ್ರಜಾಪ್ರಭುತ್ವ ಎಂದು ಹೇಳಿಕೊಂಡು ಆಡಳಿತಕ್ಕೆ ಬಂದ ನಮ್ಮ ಸರಕಾರ ಲಿಂಗಾಯತ ಪದವನ್ನು ಜಾತಿ ಪಟ್ಟಿಗೆ ಸೇರಿಸಿ ಬಸವಣ್ಣನವರಿಗೆ ಅಪಮಾನ ಮಾಡಿದೆ.
* ಬಸವಣ್ಣನವರು ಜಾತಿಯನ್ನು ಹುಟ್ಟು ಹಾಕಲು ಬಂದವರಲ್ಲ, ಅವರು ಧರ್ಮ ಸಂಸ್ಥಾಪಕರೆಂಬುದು ಸೂರ್ಯ, ಚಂದ್ರರಷ್ಟೇ ಸತ್ಯ.
* ಶೈವ ಪರಂಪರೆಯಿಂದ ಬಂದಂತಹ ಲಿಂಗಧಾರಿಗಳು ಲಿಂಗವನ್ನು ಧರಿಸಿಕೊಂಡು ವಚನ ತತ್ವಗಳನ್ನು ನಂಬದೆ ವೈಷ್ಣವ ಆಚರಣೆಯಲ್ಲಿ ತೊಡಗಿ ವೇದಶಾಸ್ತ್ರ, ಪುರಾಣ ನಂಬಿಕೊಂಡು ಬಹುದೇವೋಪಾಸನೆ ಮಾಡುತ್ತಿರುವುದು ಲಿಂಗಕ್ಕೆ ಮಾಡಿದ ಅಪಚಾರವಾಗುತ್ತಿದೆ.
* ಆಚರಣೆಯಲ್ಲಿ ಲಿಂಗತತ್ವದ ಏಕರೂಪತೆ ಬಂದರೆ ಎಲ್ಲರೂ ಲಿಂಗವಂತರಾಗುತ್ತಾರೆ.
* ಲಿಂಗಾಯತ ಎಂಬುದು ಜಾತಿಯಲ್ಲ. ಲಿಂಗಾಯತ ಎಂಬುದು ಧರ್ಮ
* ಧರ್ಮವನ್ನು ಜಾತಿ ಪಟ್ಟಿಗೆ ಸೇರಿಸಿ, ಜನರಲ್ಲಿ ಗೊಂದಲ ಉಂಟು ಮಾಡಿದ ಸರಕಾರವೇ ಇದನ್ನು ಸರಿಪಡಿಸಿ ಬಸವಣ್ಣನವರಿಗೆ ಕೃತಜ್ಞತೆ ತೋರುವ ಹೊಣೆಗಾರಿಕೆ ತೋರ ಬೇಕಾಗಿದೆ.
 

 

Comments (Click here to Expand)