varthabharthi

ನೇಸರ ನೋಡು

ಸದ್ದು ಮಾಡದೇ ಸಂದು ಹೋದ ಒಂದು ಜನ್ಮ ಶತಾಬ್ದಿ

ವಾರ್ತಾ ಭಾರತಿ : 30 Jul, 2017
ಜಿ.ಎನ್.ರಂಗನಾಥ್ ರಾವ್

ಹುಡುಗ ಸಾಂಬಾನಂದ ಬಾಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡು ಹುಟ್ಟಿದವನಲ್ಲ. ಬಡ ಕುಟುಂಬದಲ್ಲಿ ಪಂಡಿತರ ಜನನವಾಯಿತು.ಆದರೆ ಮನೆಯಲ್ಲಿ ಕಲೆಯ ಶ್ರೀಮಂತ ವಾತಾವರಣವಿತ್ತು. ತಂದೆ ಮೋನಪ್ಪನವರಲ್ಲಿ ಕಲಾಭಿರುಚಿಯಿತ್ತು. ಮನೆತುಂಬ ನೇತಾಡುತ್ತಿದ್ದ ರವಿವರ್ಮನ ಚಿತ್ರಗಳನ್ನು ಕಂಡು ಸಾಂಬಾನಂದ ಬೆರಗಾಗಿದ್ದರು. ಬಹುಶಃ ಬಾಲ್ಯದಲ್ಲೇ ಈ ಚಿತ್ರಗಳು ಅವರ ಸುಪ್ತಚಿತ್ತವನ್ನು ಪ್ರಭಾವಿ ಶಕ್ತಿಯಾಗಿ ಪ್ರವೇಶಿಸಿರಬಹುದು.

ರವಿವರ್ಮನ ಚಿತ್ರಗಳ ಜೊತೆ ಬಾಲಕ ಸಾಂಬಾನಂದರನ್ನು ಅಕರ್ಷಿಸಿದ್ದು ಗಣಪತಿ ಹಬ್ಬದ ಕಾಲದಲ್ಲಿ ತಂದೆ ಮಾಡುತ್ತಿದ್ದ ಗಣಪತಿಯ ಪ್ರತಿಮೆಗಳು. ಮಣ್ಣನ್ನು ಕಲಸಿ ಅದಕ್ಕೊಂದು ಮೂರ್ತಿರೂಪ ನೀಡಿ ತಂದೆ ನಿರ್ಮಿಸುತ್ತಿದ್ದ ಗಣಪತಿಯ ವಿಗ್ರಹಗಳನ್ನು ತದೇಕಚಿತ್ತರಾಗಿ ಗಮನಿಸುತ್ತಿದ್ದರು.

ಮಹಾನುಭಾವರಲ್ಲಿ ಕೆಲವರು ಜೀವಿತಾವಧಿಯಲ್ಲೂ ಆನಂತರದಲ್ಲೂ ಎಲೆಯ ಮರೆಯ ಹೂವಿನಂತೆ ಪರಂಪರೆಯ ಒಂದು ಭಾಗವಾಗಿ ಉಳಿದುಬಿಡುತ್ತಾರೆ. ಅಂಥ ಮಹಾನುಭಾವರಲ್ಲಿ ಒಬ್ಬರು ವರ್ಣ ಚಿತ್ರ ಕಲಾವಿದ ಎಸ್.ಎಂ.ಪಂಡಿತ್. ಇದೇ ಮಾರ್ಚ್ ತಿಂಗಳಿನಲ್ಲಿ ಅವರ ಜನ್ಮಶತಾಬ್ದಿ ವರ್ಷ ಸದ್ದುಗದ್ದಲವಿಲ್ಲದೆ ಸಂದುಹೋಯಿತು.

ಪಂಡಿತ್ ಅವರ ಜನ್ಮಶತಾಬ್ದಿ ವರ್ಷ ಆರಂಭವಾದದ್ದು ಮುಗಿದದ್ದು ಯಾರ ಗಮನಕ್ಕೂ ಬಂದಂತೆ ಕಾಣುವುದಿಲ್ಲ. ಇದೇ ಮಾಹೆಯ ಎರಡನೆಯ ವಾರದಲ್ಲಿ ಕರ್ನಾಟಕ ಲಲಿತಕಲಾ ಅಕಾಡಮಿ ಪಂಡಿತ್ ಅವರ ಸ್ಮರಣಾರ್ಥ ಸಮಾರಂಭವೊಂದನ್ನು ನಡೆಸಿದ್ದು ಪತ್ರಿಕೆಗಳಲ್ಲಿ ಒಂದು ಸಣ್ಣ ಸುದ್ದಿಯಾಗಿ ಪ್ರಕಟಗೊಂಡಿದ್ದು ಎಷ್ಟೋಅಷ್ಟೇ. ಇಪ್ಪತ್ತನೆಯ ಶತಮಾನದ ಮಹಾನ್ ಕಲಾವಿದರಲ್ಲಿ ಒಬ್ಬರಾದ ಕನ್ನಡಿಗ ಎಸ್.ಎಂ.ಪಂಡಿತ್ ಜಲವರ್ಣ ಮತ್ತು ತೈಲವರ್ಣ ಕಲೆಯಲ್ಲಿ ಅದ್ಭುತವಾದ ಕೌಶಲ ಸಾಧಿಸಿದ ಅಂತಾರಾಷ್ಟ್ರೀಯ ಖ್ಯಾತಿವೇತ್ತರು. ಮತ್ತೊಬ್ಬ ರವಿವರ್ಮನೆಂದು ಕಲಾ ವಿಮರ್ಶಕರ ಪ್ರಶಂಸೆಗೆ ಪಾತ್ರರಾಗಿದ್ದ ಪಂಡಿತರು ಹುಟ್ಟಿದ್ದು 1916ರ ಮಾರ್ಚ್ 25ರಂದು, ಕಲಬುರಗಿಯಲ್ಲಿ, ಕಂಚುಗಾರರ ಮನೆತನದಲ್ಲಿ.

ಕಂಚುಗಾರರು ಲೋಹ ಶಿಲ್ಪ ಮತ್ತು ಲೋಹದ ದೇವತಾ ವಿಗ್ರಹಗಳಿಗೆ ಹೆಸರಾದ ಕಲಾಕಾರರು. ಸಾಂಬಾನಂದ ಮೋನಪ್ಪ, ಪಂಡಿತರ ಪೂರ್ಣ ನಾಮಧೇಯ. ‘ಪಂಡಿತ’ ಎನ್ನುವುದು ಮನೆತನದ ಹೆಸರು. ತಂದೆ ಮೋನಪ್ಪ;ತಾಯಿ ಕಾಳಮ್ಮ.ದಂಪತಿ ಮಹಾನ್ ದೈವ ಭಕ್ತರು. ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ಅವಧೂತರೆನಿಸಿದ್ದ ಲಚ್ಚ್ಯಾಣದ ಸಿದ್ದಪ್ಪಜ್ಜನವರ ಆಶೀರ್ವಾದದಿಂದ ಸಾಂಬಾನಂದ ಪಂಡಿತರು ಜನ್ಮತಳೆದರೆಂದು ಒಂದು ಐತಿಹ್ಯವಿದೆ. ಮಕ್ಕಳು ಸಾಮಾನ್ಯವಾಗಿ ನವಮಾಸ ತುಂಬಿದ ನಂತರ ಹುಟ್ಟುತ್ತವೆ. ಆದರೆ ಎಸ್.ಎಂ.ಪಂಡಿತರು ಹನ್ನೊಂದು ತಿಂಗಳು ತಾಯಿಯ ಗರ್ಭದಲ್ಲಿ ಪೋಷಣೆಪಡೆದು ಜನಿಸಿದವರು. ಸಾಂಬಾನಂದರೇ ತಮ್ಮ ಮನೆಯಲ್ಲಿನ ಸಿದ್ದಪ್ಪಜ್ಜನವರ ಫೋಟೊ ತೋರಿಸಿ ತಮ್ಮ ಹುಟ್ಟಿನ ಕಥೆಯನ್ನು ಹೇಳಿಕೊಂಡಿರುವ ಸಂದರ್ಭಗಳುಂಟು.

ಎಸ್.ಎಂ.ಪಂಡಿತರ ಸೃಜನಶೀಲ ಪ್ರತಿಭೆಯ ಶಕ್ತಿ, ಹಾಸುಬೀಸುಗಳು ದೊಡ್ಡದು. ವೆಂಕಟಪ್ಪ. ಸುಬ್ರಹ್ಮಣ್ಯರಾಜೇ ಅರಸು,ಕೆ.ಕೆ.ಹೆಬ್ಬಾರ್,ರುಮಾಲೆ ಚೆನ್ನಬಸವಯ್ಯ ಅವರುಗಳಂತೆ ಕರ್ನಾಟಕ ಚಿತ್ರಕಲಾ ಪರಂಪರೆಯ ಜಾಡಿನಲ್ಲೇ ಸಾಗಿ ತಮ್ಮ ಅನನ್ಯತೆಯನ್ನು ಬೆಳಸಿಕೊಂಡವರಾದರೂ ಪಂಡಿತರಲ್ಲಿ ಇವತ್ತು ನಾವು ಸಾಮಾನ್ಯವಾಗಿ ಎಲ್ಲ ಕ್ಷೇತ್ರಗಳಲ್ಲೂ ಕಾಣುವ ಆತ್ಮಪ್ರತ್ಯಯದ ಅಹಂ ಲವಲೇಶವೂ ಇರಲಿಲ್ಲ.ತಾನೊಂದು ನೆಪ ಮಾತ್ರ,ಯಾವುದೋ ಅಗೋಚರ ಶಕ್ತಿ ತನ್ನಿಂದ ಈ ಕಲಾ-ಸೃಷ್ಟಿಯನ್ನು ಮಾಡಿಸುತ್ತಿದೆ ಎಂದು ಅವರು ಗಾಢವಾಗಿ ನಂಬಿದ್ದರು.ಅವರ ಈ ಮಾತುಗಳನ್ನು ಗಮನಿಸಿ: ಇವತ್ತಿನ ಜನ ದೇವರನ್ನು ನಂಬುವುದಿಲ್ಲ. ಆ ದೇವರು ಇಲ್ಲದಿದ್ದರೆ ಈ ಜಗತ್ತಿನ ಅಸ್ತಿತ್ವ ಹೇಗೆ ಸಾಧ್ಯವಾಗುತ್ತಿತ್ತು? ನೋಡಿ....ನೀವು ದೇವರು ಎನ್ನಿ, ಬೇಕಾದರೆ ಇನ್ನೊಂದು ಹೆಸರಿನಿಂದ ಕರೆಯಿರಿ.

ನಮ್ಮನ್ನೆಲ್ಲ ನೋಡಿಕೊಳ್ಳುವ ಅಗೋಚರ ಶಕ್ತಿಯೊಂದಿದೆ.ಅದಿಲ್ಲದೆ ನಾವಾರು ಇರುವುದಿಲ್ಲ.ಈ ಚಿತ್ರಗಳನ್ನೆಲ್ಲ ಪಂಡಿತ ಬರೆದದ್ದು ಎಂದು ನಿವು ಹೇಳುತ್ತೀರಿ!ಪಂಡಿತ ಏನು ಬರೆಯುತ್ತಾನೆ?ಆ ಶಕ್ತಿ ಕೈಹಿಡಿದುಬರೆಯಿಸುತ್ತದೆ.ನಾನು ಬರೆದದ್ದು ಒಂದು ನೆಪ.ಚಿತ್ರಗಳನ್ನು ನಾನು ಬರೆಯುವುದಿಲ್ಲ;ಆ ಕುರಿತು ಚಿಂತನೆಯನ್ನೂ ಮಾಡುವುದಿಲ್ಲ.ಸಮಯ ಸಂದರ್ಭ ಇಲ್ಲದೆ ನನ್ನ ಮನಸ್ಸಿನಲ್ಲಿ ಒಂದು ಚಿತ್ರ ಮೂಡುತ್ತದೆ.

ಅದನ್ನು ಕ್ಯಾನ್ವಾಸಿಗೆ ಇಳಿಸಬೇಕೆಂದು ತೀವ್ರವಾಗಿ ಅನ್ನಿಸುತ್ತದೆ. ಮಧ್ಯರಾತ್ರಿಯಾಗಿದ್ದರೂ ಸರಿ,ನನ್ನ ಮನಸ್ಸಿನಲ್ಲಿ ಮೂಡಿದ ಚಿತ್ರವನ್ನು ಅದೇ ರೀತಿಯಾಗಿ ಬಣ್ಣಗಳೊಡನೆ ಕ್ಯಾನ್ವಾಸಿನ ಮೇಲೆ ತರುತ್ತೇನೆ.ಇದರಲ್ಲಿ ನನ್ನ ಪಾಲು ಏನಿದೆ ಹೇಳಿ?ನನ್ನ ಅನೇಕ ಚಿತ್ರಗಳ ರಚನೆಯಲ್ಲಿ ಇದು ನನ್ನ ಅನುಭವವಾಗಿದೆ.ಆ ಶಕ್ತಿ ನಿಮ್ಮ ಪಾಲಿಗೆ ಬೇರೆ ಒಂದಿರಬಹುದು.ನನ್ನ ಪಾಲಿಗೆ ಆ ಜಗನ್ಮಾತೆ ಕಾಳಿಕಾ ದೇವಿ ನನ್ನ ಕೈ ಹಿಡಿದು ಬರೆಸುತ್ತಾಳೆ.

ಹುಡುಗ ಸಾಂಬಾನಂದ ಬಾಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡು ಹುಟ್ಟಿದವನಲ್ಲ. ಬಡ ಕುಟುಂಬದಲ್ಲಿ ಪಂಡಿತರ ಜನನವಾಯಿತು.ಆದರೆ ಮನೆಯಲ್ಲಿ ಕಲೆಯ ಶ್ರೀಮಂತ ವಾತಾವರಣವಿತ್ತು. ತಂದೆ ಮೋನಪ್ಪನವರಲ್ಲಿ ಕಲಾಭಿರುಚಿಯಿತ್ತು. ಮನೆತುಂಬ ನೇತಾಡುತ್ತಿದ್ದ ರವಿವರ್ಮನ ಚಿತ್ರಗಳನ್ನು ಕಂಡು ಸಾಂಬಾನಂದ ಬೆರಗಾಗಿದ್ದರು. ಬಹುಶಃ ಬಾಲ್ಯದಲ್ಲೇ ಈ ಚಿತ್ರಗಳು ಅವರ ಸುಪ್ತಚಿತ್ತವನ್ನು ಪ್ರಭಾವಿ ಶಕ್ತಿಯಾಗಿ ಪ್ರವೇಶಿಸಿರಬಹುದು. ರವಿವರ್ಮನ ಚಿತ್ರಗಳ ಜೊತೆ ಬಾಲಕ ಸಾಂಬಾನಂದರನ್ನು ಅಕರ್ಷಿಸಿದ್ದು ಗಣಪತಿ ಹಬ್ಬದ ಕಾಲದಲ್ಲಿ ತಂದೆ ಮಾಡುತ್ತಿದ್ದ ಗಣಪತಿಯ ಪ್ರತಿಮೆಗಳು.

ಮಣ್ಣನ್ನು ಕಲಸಿ ಅದಕ್ಕೊಂದು ಮೂರ್ತಿರೂಪ ನೀಡಿ ತಂದೆ ನಿರ್ಮಿಸುತ್ತಿದ್ದ ಗಣಪತಿಯ ವಿಗ್ರಹಗಳನ್ನು ತದೇಕಚಿತ್ತರಾಗಿ ಗಮನಿಸುತ್ತಿದ್ದರು. ತಂದೆಯ ಕರಕೌಶಲವೂ ಅವರ ಮೇಲೆ ಅಚ್ಚಳಿಯದ ಪ್ರಭಾವ ಬೀರಿತ್ತು. ಇದನ್ನೆಲ್ಲ ತಾನು ಸಾಧಿಸುವುದೆಂತು ಎಂಬ ಚಿಂತನೆಯಲ್ಲಿ ಪಂಡಿತರು ಆ ದಿನಗಳಲ್ಲಿ ಮಗ್ನರಾಗಿದ್ದರಂತೆ. ಬಾಲಕ ಸಾಂಬಾನಂದರ ಮನಸೂರೆಗೊಂಡ ಜಗತ್ತಿನ ಮತ್ತೊಂದು ಚೋದ್ಯವೆಂದರೆ ಪ್ರಕೃತಿ ಸೌಂದರ್ಯ. ಸೂರ್ಯೋದಯ ಸೂರ್ಯಾಸ್ತಗಳು ಅವರಿಗೆ ಬಿಡಿಸಲಾಗದ ಒಗಟಾಗಿದ್ದವಂತೆ. ನಿಸರ್ಗದ ರಮಣೀಯ ಸೌಂದರ್ಯದ ಆಸ್ವಾದನೆ ಬಾಲಕನ ನಿತ್ಯ ಹವ್ಯಾಸವಾಗಿತ್ತು. ಮಗ ಓದಿ ದೊಡ್ಡ ಅಧಿಕಾರಿಯಾಗಬೇಕು ಎಂಬುದು ಬಡತನದಲ್ಲೂ ತಂದೆ ಮೋನಪ್ಪನವರು ಕಂಡ ಕನಸು. ಆದರೆ ಬಾಲಕನಿಗೆ ನಾಲ್ಕು ಗೋಡೆಯ ನಡುವಣ ಶಿಕ್ಷಣಲ್ಲಿ ಆಸಕ್ತಿ ಹುಟ್ಟಲಿಲ್ಲ.

ಹತ್ತು ವರ್ಷದ ಬಾಲಕ ಸಾಂಬಾನಂದ ಬೀದರಿಗೆ ಹೋಗಿ ಚಿತ್ರಕಲೆಯಲ್ಲಿ ಅಧ್ಯಾಪಕರಾಗಿದ್ದ ಭಾಸ್ಕರ ರಾವ್ ಎಂಬವರಲ್ಲಿ ಗುರುವನ್ನು ಕಂಡುಕೊಂಡರು.ಭಾಸ್ಕರ ರಾವ್ ಅವರಲ್ಲಿ ಚಿತ್ರ ಕಲೆಯ ಓನಾಮ ಕಲಿತ ಸಾಂಬಾನಂದರಿಗೆ ಉನ್ನತ ವ್ಯಾಸಂಗದ ಬಯಕೆ ತೀವ್ರಗೊಂಡಿತು. ಗುಲಬರ್ಗಾದಲ್ಲಿ ಪ್ರಖ್ಯಾತ ಕಲಾವಿದರಾದ ಶಂಕರ ರಾವ್ ಅಳಂದ್‌ಕರ ಅವರ ಶಿಷ್ಯತ್ವದಲ್ಲಿ ಕಲೆಯಲ್ಲಿ ಉನ್ನತ ವ್ಯಾಸಂಗದ ಹಾದಿ ಸುಗಮವಾಯಿತು. ಹದಿನೈದನೆಯ ವಯಸ್ಸಿನಲ್ಲೇ ಮದ್ರಾಸ್ ಕಲಾ ಶಾಲೆಯಿಂದ ಡಿಪ್ಲೋಮಾ ಪಡೆದುಕೊಂಡರು. ಆದರೆ ಇದರಿಂದ ಅವರ ಕಲಾದಾಹ ಇಂಗಲಿಲ್ಲ. ಆ ದಿನಗಳಲ್ಲಿ ಇಡೀ ದೇಶದಲ್ಲಿಯೇ ಕಲಾ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಮತ್ತಷ್ಟು ಕಲಿಯುವ ಹಂಬಲ ಉಂಟಾಯಿತು.

ಶಿಷ್ಯನ ಹಂಬಲ ಅರಿತ ಕೂಡಲೇ ಗುರುಗಳಾದ ಶಂಕರ ರಾವ್ ಅಳಂದಕರ ತಮ್ಮ ಕೊರಳಲ್ಲಿದ್ದ ಚಿನ್ನದ ಸರವನ್ನು ಮಾರಿ ಸಾಂಬಾನಂದ ಪಂಡಿತರನ್ನು ಬಾಂಬೆ ರೈಲು ಹತ್ತಿಸಿದರು. ಯಾವ ಸುಮುಹೂರ್ತದಲ್ಲಿ ಅಳಂದಕರ ಅವರು ಶಿಷ್ಯನನ್ನು ಜೆ.ಜೆ.ಕಲಾ ಶಾಲೆಗೆ ಕಳುಹಿಸಿದರೋ! ಅಂದಿನಿಂದ ಕಲಾಅವಿದ ಎಸ್.ಎಂ.ಪಂಡಿತರು ಹಿಂದಿರುಗಿ ನೋಡಿದ್ದೇ ಇಲ್ಲ. 1935ರಲ್ಲಿ ಬಾಂಬೆ ಸೇರಿದ ಪಂಡಿತರು ಜೆ.ಜೆ. ಕಲಾ ಶಾಲೆಯಲ್ಲಿ ಪದವಿ ಪಡೆದುದಕ್ಕಿಂತ ಹೆಚ್ಚಿನದೆಂದರೆ, ಸುಪ್ರಸಿದ್ಧ ಕಲಾವಿದ ಜಿ.ಎಸ್.ದಂಡಾವತಿ ಮಠ ಅವರ ರೂಪದಲ್ಲಿ ಅದೃಷ್ಟ ಈ ಕಲಾವಿದನನ್ನು ಅರಸಿ ಬಂದದ್ದು. ಬಾಂಬೆ ಮುಟ್ಟಿದ್ದೇ ತಡ ನೂತನ ಕಲಾ ಶಾಲೆ ಸೇರಿದರು. ದಂಡಾವತಿಮಠರ ಮಾರ್ಗದರ್ಶನದಲ್ಲಿ ಕಲೆಯಲ್ಲಿ ಉನ್ನತ ವ್ಯಾಸಂಗ ಪ್ರಾರಂಭಿಸಿದರು. ಮತ್ತೊಬ್ಬ ಖ್ಯಾತ ಕಲಾವಿದ ಎಂ.ವಿ.ದುರಂಧರ ನೂತನ ಕಲಾ ಶಾಲೆಯ ಮುಖ್ಯೋಪಾಧ್ಯಾರಾಗಿದ್ದರು.

ಆ ಕಾಲಕ್ಕೆ ದುರಂಧರ ಅವರು ನಿಸರ್ಗ ಸಹಜವಾದ ತಂತ್ರಗಳಿಂದ ಪುರಾಣ, ಇತಿಹಾಸ ಮತ್ತು ಅಭಿಜಾತ ಸಾಹಿತ್ಯ ಕೃತಿಗಳ ಚಿತ್ರಗಳನ್ನು ಬಿಡಿಒಸುವುದರಲ್ಲಿ ಖ್ಯಾತರಾಗಿದ್ದರು. ಈ ಸಹಜ ಶೈಲಿಯ ಕಲೆಯನ್ನು ಅವರು ರವಿವರ್ಮನಿಂದ ಪ್ರಭಾವಿತರಾಗಿ ಸಾಧಿಸಿದ್ದರು. ದುರಂಧರರು ತಮ್ಮೀ ಸಾಧನೆಯನ್ನು ಶಿಷ್ಯ ಎಸ್.ಎಂ.ಪಂಡಿತರಿಗೆ ಧಾರೆ ಎರೆದರು. ಇದರಿಂದಾಗಿ ಎಸ್.ಎಂ.ಪಂಡಿತರು ಮುಂದೆ ಭಾರತದ ಮತ್ತೊಬ್ಬ ರವಿ ವರ್ಮ ಎಂದು ದೇಶವಿದೇಶಗಳಲ್ಲಿ ಪ್ರಸಿದ್ಧಿ ಪಡೆದರು.ಜೆ.ಜೆ.ಶಾಲೆಯಲ್ಲಿ ಪಂಡಿತರ ಮೇಲೆ ಗಾಢ ಪ್ರಭಾವ ಬೀರಿದ ಮತ್ತೊಬ್ಬರು ಶಾಲೆಯ ನಿರ್ದೇಶಕರಾಗಿದ್ದ ಡಬ್ಲ.ಎ.ಗ್ಲಾಡ್ ಸ್ಟೋನ್ ಎಂಬವರು.ವಿದ್ಯಾರ್ಥಿಯಾಗಿದ್ದಾಗಲೇ ಪಂಡಿತರು ನೀರು, ಜೇನುತುಪ್ಪ ಮತ್ತು ಗೋಂದಿನ ಅಂಟಿನಲ್ಲಿ ವಿವಿಧ ಬಣ್ಣಗಳನ್ನು ಮಿಶ್ರಮಾಡಿ ಮಂದಗೊಳಿಸಿದ ಅಪಾರದರ್ಶಕ ಬಣ್ಣಗಳನ್ನು ಬಳಸುವ ತಂತ್ರವೊಂದನ್ನು ಕಂಡುಕೊಂಡಿದ್ದರು. ಈ ತಂತ್ರ ಮುಂದೆ ಅವರಿಗೆ ಹೊಸ ಶೈಲಿಯಲ್ಲಿ ಸಿನೆಮಾ ಪೋಸ್ಟರುಗಳನ್ನು ರಚಿಸುವುದರಲ್ಲಿ ನೆರವಿಗೆ ಬಂತು.

ಜೆ.ಜೆ.ಕಲಾ ಶಾಲೆಯಿಂದ ಪದವಿಗಳಿಸಿದ ನಂತರ ಎಸ್.ಎಂ.ಪಂಡಿತರು 1938-39ರಲ್ಲಿ ವಿಶ್ವ ವಿಖ್ಯಾತ ಚಲಚಿತ್ರ ನಿರ್ಮಾಣ ಸಂಸ್ಥೆಯಾದ ಎಂ.ಜಿ.ಎಂ.ಗೆ ಪೋಸ್ಟರುಗಳನ್ನು ಕುಂಚಿಸುವುದರೊಂದಿಗೆ ಕಲಾಜೀವನವನ್ನು ಪ್ರಾರಂಭಿಸಿದರು. ಇದೇ ಕಾಲದಲ್ಲಿ ಕೆಲವು ಗೆಳೆಯರೊಂದಿಗೆ ಕೂಡಿಕೊಂಡು ಬಾಂಬೆಯಲ್ಲಿ ಯಂಗ್ ಆರ್ಟಿಸ್ಟ್ಸ್ ಸ್ಟುಡಿಯೊ ಸ್ಥಾಪಿಸಿ ಸಿನೆಮಾ ಪ್ರಚಾರಕ್ಕೆ ಹೊಸಹೊಸ ವಿನ್ಯಾಸಗಳನ್ನು ರೂಪಿಸಿವ ಕಾರ್ಯದಲ್ಲಿ ಉದ್ಯುಕ್ತರಾದರು.

ಹಾಲಿವುಡ್ ಚಿತ್ರಗಳಿಗೆ ಪ್ರಚಾರ ಸಾಮಗ್ರಿಯನ್ನು ವಿನ್ಯಾಸಗೊಳಿಸಿದ ಪೋಸ್ಟರುಗಳನ್ನು ರಚಿಸಿಕೊಟ್ಟ ಪ್ರಪ್ರಥಮ ಭಾರತೀಯರು ಎಸ್.ಎಂ.ಪಂಡಿತ್. ಗ್ರೆಟಾ ಗಾರ್ಬೊ, ನಾರ್ಮ ಶಿಯ್ರ, ಜೋನ್ ಕ್ರಾಂಟ್ ಫೋರ್ಡ ಮೊದಲಾದ ಹಾಲಿವುಡ್‌ನ ಆ ಕಾಲದ ಮಹಾನ್ ಚಿತ್ರ ತಾರೆಯರು ಹಾಗೂ ಹಿಂದಿ ಚಿತ್ರರಂಗದ ತಾರೆಯರು ಪಂಡಿತರ ಕುಂಚದಲ್ಲಿ ತಾವಿರುವುದಕ್ಕೂ ಹೆಚ್ಚು ಸುಂದ್ರೋಪಸುಂದರಿಯರಾಗಿ ಕಾಣಿಸಿದರಂತೆ. 1944ರಲ್ಲಿ ಬಾಂಬೆಯ ಶಿವಾಜಿ ಪಾರ್ಕಿನಲ್ಲಿ ಸ್ವಂತ ಸ್ಟುಡಿಯೋ ಸ್ಥಾಪಸಿದ ನಂತರ ಪಂಡಿತರ ಕಲಾ ಜೀವನ ಹೆಚ್ಚು ವ್ಯಾಪಕವೂ ವಿಸ್ತೃತವೂ ಆಯಿತು.

ಅವರ ಸೃಜನಶೀಲ ಪ್ರತಿಭೆ ಹೊಸ ಆಯಾಮಗಳನ್ನು ಪಡೆದುಕೊಂಡಿತು. ಭಾರತೀಯ ಚಿತ್ರ ರಂಗದ ಒಂದು ಮೈಲಿಗಲ್ಲು ಎನ್ನಿಸಿಕೊಂಡಿರುವ ಪ್ರಭಾತ್ ಸ್ಟುಡಿಯೋಗೆ,ರಾಜ್ ಕಪೂರ್,ಸೊಹ್ರಾಬ್ ಮೋದಿಯಂಥವರಿಗೆ ಕಲಾ ಸಲಹೆಗಾರರಾಗಿ ಕೆಲಸ ಮಾಡಿದರು.ಅವರ ಚಿತ್ರಗಳಿಗೆ ಪೋಸ್ಟರುಗಳನ್ನೂ ಪ್ರಚಾರ ಸಾಮಗ್ರಿಗಳನ್ನು ವಿನ್ಯಾಸಗೊಳಿಸುವ ಮೂಲಕ ಸಿನೆಮಾ ಪ್ರಚಾರದಲ್ಲಿ ಹೊಸಹೊಸ ಆವಿಷ್ಕಾರಗಳಿಗೆ ಕಾರಣಪುರುಷರಾದರು. ಭಾರತದಲ್ಲಿ ಚಲನಚಿತ್ರ ಪತ್ರಿಕೋದ್ಯಮದ ಪ್ರವರ್ತಕರೆನಿಸಿಕೊಂಡಿರುವ ಖ್ಯಾತ ಪತ್ರಕರ್ತ ಬಾಬು ರಾವ್ ಪಟೇಲ್ ಅವರು ಪಂಡಿತರ ಸ್ಟುಡಿಯೋ ಬಾಗಿಲು ತಟ್ಟಿದರು. ಅಂದಿನಿಂದ ಪಟೇಲರ ‘ಫಿಲ್ಮ್ ಇಂಡಿಯಾ’ ಸುಪ್ರಸಿದ್ಧ ನಿಯತಕಾಲಿಕದ ಮುಖಪುಟಕ್ಕೆ ಕಲೆ-ವಿನ್ಯಾಸಗಳನ್ನು ರೂಪಿಸುವ ಹೊಣೆ ಪಂಡಿತರದಾಯಿತು.

ಪಂಡಿತರಿಗೆ ನಮ್ಮ ಪುರಾಣ, ಪ್ರಚೀನ ಸಾಹಿತ್ಯಗಳಲ್ಲಿ ವಿಶೇಷ ಆಸಕ್ತಿ ಇತ್ತು. ಪುರಾಣ, ಪುಣ್ಯ ಕತೆಗಳನ್ನು ಆಧರಿಸಿದ ಅವರ ಹಲವಾರು ತೈಲ/ಜಲವರ್ಣಚಿತ್ರಗಳು ಜನಮನವನ್ನು ಸೂರೆಗೊಂಡಿವೆ. ವಿಶ್ವಾಮಿತ್ರ-ಮೇನಕೆ, ನಳದಮಯಂತಿ, ಶಿವ ಲೀಲೆಗಳು, ಶಕುಂತಲೆಯ ಪತ್ರಲೇಖನ, ಪುಂಡರೀಕ-ಮಹಾಶ್ವೇತಾ, ಉಮರ್ ಖಯಾಂ ಮೊದಲಾದ ಚಿತ್ರಗಳು ಪಂಡಿತರ ಅದ್ಭುತ ಕಲಾವಂತಿಕೆಗೆ ಇಂದಿಗೂ ಸಲ್ಲುವ ನಿದರ್ಶನಗಳಾಗಿವೆ. ‘ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರು’ ಪಂಡಿತರ ಕುಂಚದಲ್ಲಿ ಮೂಡಿಬಂದಿರುವ ಮೇರುಕೃತಿಗಳಲ್ಲಿ ಅತ್ಯಂತ ಜನಪ್ರಿಯವಾದದ್ದು.

ರಾಷ್ಟ್ರಮಟ್ಟದಲ್ಲಿ ಹಾಗೂ ಅಂತಾರಾಷ್ಟ್ರೀಯ ಕಲಾ ಶಾಲೆಗಳಲ್ಲಿ ಪ್ರದರ್ಶನಗಳನ್ನು ನಡೆಸಿ ಭಾರತೀಯ ಚಿತ್ರಕಲೆಯ ಹಿರಿಮೆಯ ಬಾವುಟ ಹಾರಿಸದ ಕೀರ್ತಿ ಪಂಡಿತರದು. 1978ರಲ್ಲಿ ಲಂಡನ್‌ನ ಭಾರತೀಯ ಹೈಕಮಿಷನ್‌ನ ರವಿಶಂಕರ್ ಸಭಾಂಗಣದಲ್ಲಿ ಪಂಡಿತರು ಪ್ರದರ್ಶಿಸಿದ ‘ಭಾರತೀಯ ಪೌರಾಣಿಕ ಚಿತ್ರಗಳು’ ಅವರಿಗೆ ಅಂತರ ರಾಷ್ಟ್ರೀಯ ಮನ್ನಣೆ ತಂದುಕೊಟ್ಟಿತು. ಅಂತೆಯೇ ಭಾರತ ಉತ್ಸವದಲ್ಲಿ ಅವರು ಕುಂಚಿಸಿದ ಆಗಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಮತ್ತು ಮಾರ್ಗರೆಟ್ ಥ್ಯಾಚರ್ ಅವರ ಭಾವಚಿತ್ರಗಳು ಇಂದಿಗೂ ಲಂಡನ್‌ನ ಆಲ್ಬರ್ಟ್ ಗ್ಯಾಲರಿಯ ಪ್ರಮುಖ ಆಕರ್ಷಣೆಯಾಗಿ ರಸಿಕರ ಮನ ಸೆಳೆಯುತ್ತಿವೆ. ದೇಶವಿದೇಶಗಳ ಕಲಾ ಶಾಲೆಗಳಲ್ಲಿ ಮತ್ತು ಕಲಾಪ್ರಿಯರ ಖಾಸಗಿ ಸಂಗ್ರಹಗಳಲ್ಲಿ ಪಂಡಿತರ ಕಲಾಕ್ರತಿಗಳು ಪ್ರತಿಷ್ಠೆ ಸ್ಥಾನ ಗಳಿಸಿವೆ.

ಹಲವಾರು ಕೀರ್ತಿಗೌರವಗಳು,ಪ್ರಶಸ್ತಿಪುರಸ್ಕಾರಗಳು ಜೀವಿತಾವಧಿಯಲ್ಲೇ ಎಸ್.ಎಂ. ಪಂಡಿತರನ್ನು ಅರಸಿ ಬಂದದ್ದುಂಟು. ‘ಫಿಲ್ಮಿಂಡಿಯಾ’ ಮುಖಪುಟ ಕಲಾಕೃತಿ ರಚನೆ ಮತ್ತು ವಿನ್ಯಾಸಕ್ಕಾಗಿ ಅವರು ಟೊರೆಂಟೋದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರದರ್ಶನದಲ್ಲಿ ಪ್ರಥಮ ಪಾರಿತೋಷಕ ಪಡೆದರು. ಜೆ.ಜೆ.ಕಲಾ ಶಾಲೆಯ ಫೆಲೋಶಿಪ್, ಕಾರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಲಲಿತ ಕಲಾ ಅಕಾಡಮಿ ಪ್ರಶಸ್ತಿ , ಕಲಬುರಗಿ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೆಟ್ ಹೀಗೆ ಹಲವಾರು ಪ್ರಶಸ್ತಿಗಳಿಂದ ಪಂಡಿತರು ಸಮ್ಮಾನಿತರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)