varthabharthi

ನಿಮ್ಮ ಅಂಕಣ

ಮರಳು ಮಾಫಿಯಾ ವಿರುದ್ಧ ಪೊಲೀಸರ ಕ್ರಮ ಏಕಿಲ್ಲ ?

ವಾರ್ತಾ ಭಾರತಿ : 31 Jul, 2017
-ಆಂಜನಪ್ಪ, ಶಿವಮೊಗ್ಗ

ಮಾನ್ಯರೆ,

ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿವೆ. ಇದರಲ್ಲಿ ಕೆಲವು ಪೊಲೀಸ್ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂದು ಕಳೆದ ಶಿವಮೊಗ್ಗ ಜಿಲ್ಲಾ ಪಂಚಾಯತ್‌ನ ವಿಶೇಷ ಸಭೆಯಲ್ಲಿ ಜಿಪಂ ಸದಸ್ಯರಾದ ಕೆ.ಇ. ಕಾಂತೇಶ್ ಹಾಗೂ ವೀರಭದ್ರಪ್ಪ ಪೂಜಾರ್ ಗಂಭೀರ ಆರೋಪ ಮಾಡಿದ್ದರು. ಅಕ್ರಮ ಮರಳು ಸಾಗಾಟದಲ್ಲಿ ಪೊಲೀಸರ ಶಾಮೀಲು ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸರು ಅಕ್ರಮ ಮರಳು ಸಾಗಾಟದಾರರ ಜೊತೆ ಶಾಮೀಲಾಗಿ ಮಾಮೂಲಿ ಕೂಡ ಫಿಕ್ಸ್ ಮಾಡಿಕೊಂಡು ವಸೂಲಿ ಮಾಡುತ್ತಿದ್ದಾರೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಜಿಲ್ಲೆಯ ಜನರು ಮನೆ ಕಟ್ಟಲು ಎತ್ತಿನಗಾಡಿ, ಸಣ್ಣಪುಟ್ಟ ವಾಹನಗಳಲ್ಲಿ ಮರಳು ಕೊಂಡೊಯ್ಯುತ್ತಾರೆ.

ಇಂತಹ ಗ್ರಾಮಸ್ಥರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಆದರೆ, ದೊಡ್ಡ ಕುಳಗಳನ್ನು ಪೊಲೀಸರು ಮುಟ್ಟುತ್ತಿಲ್ಲ. ಹಾಗಾದರೆ ಜನಸಾಮಾನ್ಯರಿಗೊಂದು ಪ್ರಭಾವಿಗಳಿಗೊಂದು ಮರಳು ನೀತಿ ಈ ರಾಜ್ಯದಲ್ಲಿದೆಯೇ? ಸಾಗರ ತಾಲೂಕಿನಲ್ಲೇ ಸುಮಾರು 400 ಲಾರಿಗಳು ಅಕ್ರಮ ಮರಳು ಸಾಗಾಟದಲ್ಲಿ ತೊಡಗಿವೆ. ಪ್ರತಿಯೊಂದು ಲಾರಿಯಿಂದ ಪ್ರತೀ ತಿಂಗಳಿಗೆ ಮಾಮೂಲಿ ಫಿಕ್ಸ್ ಮಾಡಿ, ಹಣ ವಸೂಲಿ ಮಾಡಲಾಗುತ್ತಿದೆ. ಆದರೆ, ಇದನ್ನು ತಡೆಯುವವರು ಯಾರೂ ಇಲ್ಲ.

ನಕಲಿ ಪರ್ಮಿಟ್ ಸೃಷ್ಟಿಸಿ ಕಾನೂನು ಬಾಹಿರವಾಗಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಗ್ರಾಮಾಂತರ ಠಾಣೆ ಪೊಲೀಸರು ಏಳು ಜನರನ್ನು ಬಂಧಿಸಿದ ಕುರಿತು ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅಕ್ರಮವಾಗಿ ಯಾರೇ ಮರಳು ಸಾಗಿಸಿದರೂ ಅದು ಅಪರಾಧವೇ. ಆದರೆ, ಪೊಲೀಸರು ಮರಳು ಮಾಫಿಯಾ ಜೊತೆ ಕೈಜೋಡಿಸಿಕೊಂಡು ಜನರ ಕಣ್ಣಗೆ ಮಣ್ಣೆರಚುವ ಸಲುವಾಗಿ ಸಣ್ಣಪುಟ್ಟ ಅಪರಾಧಿಗಳನ್ನು ಮಾತ್ರ ಬಂಧಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಸಾಮಾನ್ಯವಾಗಿ ಸಣ್ಣ ಪುಟ್ಟ ಒಂದೋ ಎರಡೋ ಲಾರಿ, ಟ್ರಾಕ್ಟರ್‌ಗಳಲ್ಲಿ ಮರಳು ಸಾಗಾಟ ಮಾಡುವವರನ್ನು ಪೊಲೀಸರು ಬಂಧಿಸಿ, ತಾವು ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಿದಂತೆ ತೋರಿಸಲು ಪ್ರಕರಣ ದಾಖಲಿಸುತ್ತಿದ್ದಾರೆ. ಆದರೆ ಇಲ್ಲಿ ನಿಜವಾಗಿಯೂ ಅಕ್ರಮ ಮರಳು ಸಾಗಾಟದ ದಂಧೆಯಲ್ಲಿ ನಿರತರಾಗಿರುವ ದೊಡ್ಡ ಕುಳಗಳನ್ನು ಮಟ್ಟ ಹಾಕಲು ಪೊಲೀಸರಿಂದ ಏಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ಯಕ್ಷ ಪ್ರಶ್ನೆ.

 ಪೊಲೀಸರು ಸಮಾಜದ ಬಾಯಿಗೆ ಬೀಗ ಹಾಕಲು ಸಣ್ಣಪುಟ್ಟ ವ್ಯಾಪಾರಸ್ಥರ ಮೇಲೆ ಅಕ್ರಮ ಮರಳು ಸಾಗಾಟದ ಪ್ರಕರಣ ದಾಖಲಿಸಿ, ದೊಡ್ಡ ಕುಳಗಳಿಗೆ ಪೊಲೀಸ್ ರಕ್ಷಣೆಯಲ್ಲಿಯೇ ಅಕ್ರಮ ಸಾಗಾಟಕ್ಕೆ ಎಡಮಾಡಿಕೊಡುತ್ತಿದ್ದಾರೆ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ.

ಇನ್ನಾದರೂ ಹಿರಿಯ ಅಧಿಕಾರಗಳು, ಸಂಬಂಧಪಟ್ಟ ಜನಪ್ರತಿನಿಧಿಗಳು, ಆಡಳಿತ ವರ್ಗ ಮತ್ತು ರಾಜ್ಯ ಸರಕಾರ ಸಣ್ಣ ಮರಳು ವ್ಯಾಪಾರಸ್ಥರ ಮೇಲೆ ಕ್ರಮಕೈಗೊಳ್ಳುವಂತೆಯೇ ದೊಡ್ಡ ಕುಳಗಳ ಮೇಲೆ ಕ್ರಮ ಕೈಗೊಳ್ಳಬೇಕು. ಈವರೆಗೆ ಮರಳು ಮಾಫಯಾದಲ್ಲಿ ಕೈಜೋಡಿಸಿದ್ದ ಪೊಲೀಸ್ ಅಧಿಕಾರಿಗಳನ್ನು ಗುರುತಿಸಿ ಕಾನೂನು ರೀತಿಯ ಕ್ರಮ ಜರುಗಿಸಬೇಕಿದೆ.

 

Comments (Click here to Expand)