varthabharthi

ಅನುಗಾಲ

ನಿತೀಶ್ ಕುಮಾರ್ ಎಂಬ ವಿಷಾದ ಯೋಗ

ವಾರ್ತಾ ಭಾರತಿ : 3 Aug, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ನಿತೀಶ್‌ಕುಮಾರ್ ಒಬ್ಬ ಮುತ್ಸದ್ದಿಯಂತೆ ಗೋಚರಿಸಿದ್ದರು. ಈಗ ಯಕಶ್ಚಿತ್ ರಾಜಕಾರಣಿಯಾಗಿದ್ದಾರೆ. ಹೂ ತುಂಬಿದ ಮರವಾಗುವ ಅವಕಾಶವನ್ನು ಕಳೆದುಕೊಂಡು ಮರದ ನೆರಳೂ ಆಗದೆ ಧೊಪ್ಪನೆ ಉರುಳಿ ಬಿದ್ದಿದ್ದಾರೆ; ಉಳಿದಿದ್ದಾರೆ. ಹಗುರಾಗಿದ್ದಾರೆ.

2014ರ ಮಹಾ ಚುನಾವಣೆಯಲ್ಲಿ ಮೋದಿ ನಾಯಕತ್ವದ ಎನ್‌ಡಿಎಯು ಕಾಂಗ್ರೆಸನ್ನು ಬಹುಪಾಲು ಗುಡಿಸಿಹಾಕಿ ರಾಷ್ಟ್ರವ್ಯಾಪಿ ಶಕ್ತಿವರ್ಧನೆಯತ್ತ ಗುರಿಯಿಟ್ಟು ಹೊರಟಾಗ ದಿಲ್ಲಿಯಲ್ಲಿ ಅರವಿಂದ ಕೇಜ್ರಿವಾಲ್ ಅಡ್ಡಗೋಡೆಯಾಗಿ ನಿಂತರೂ ದಿಲ್ಲಿ ದೇಶದ ರಾಜಧಾನಿಯೆಂಬುದರ ಹೊರತಾಗಿ ಅಲ್ಲಿನ ರಾಜ್ಯ ರಾಜಕೀಯ ನಿಜಕ್ಕೂ ಕೇಂದ್ರಕ್ಕೆ ಭಾರೀ ಸವಾಲಾಗಿ ಪರಿಣಮಿಸುವುದು ಸಾಧ್ಯವಿರಲಿಲ್ಲ. ಆದರೆ ಮೋದಿಯ ಅಶ್ವಮೇಧದ ಕುದುರೆಯನ್ನು ಮೊದಲ ಬಾರಿಗೆ ಕಟ್ಟಿಹಾಕಿದ್ದು ಬಿಹಾರದ ಮಹಾ ಘಟಬಂಧನ.

ಬಿಹಾರಕ್ಕೆ ಇಂತಹ ಜ್ಞಾನೋದಯದ ಕೀರ್ತಿ ಬುದ್ಧನ ಲಾಗಾಯ್ತು ಇದೆ. (1990ರಲ್ಲಿ ಅಡ್ವಾನಿಯವರ ಪ್ರಸಿದ್ಧ ಸೋಮನಾಥ-ಅಯೋಧ್ಯಾ ರಥಯಾತ್ರೆಯನ್ನು ನಿಲ್ಲಿಸಿದ್ದೂ ಬಿಹಾರ-ಅದೂ ಲಾಲೂ ಪ್ರಸಾದ್ ಸಾರಥ್ಯದಲ್ಲಿ!) ಬಿಹಾರದ ಕಳೆದ ಬಾರಿಯ ಚುನಾವಣೆಯಲ್ಲಿ ಲಾಲೂ ಪ್ರಸಾದ್ ಯಾದವ್ ಅವರಿಗಿಂತಲೂ ಮುಖ್ಯ ಪಾತ್ರವಾಗಿ ಹೊರಹೊಮ್ಮಿದ್ದು ಬಿಹಾರದ ಜನತಾ ದಳ (ಯು) ನಾಯಕ ನಿತೀಶ್‌ಕುಮಾರ್. ಬಿಹಾರದಲ್ಲಿ ಲಾಲೂಪ್ರಸಾದ್‌ಯಾದವರ ಆರ್‌ಜೆಡಿಯೊಂದಿಗೂ ಕಾಂಗ್ರೆಸ್‌ನೊಂದಿಗೂ ಮೈತ್ರಿ ಮಾಡಿಕೊಂಡು ಎನ್‌ಡಿಎಯ ಮೊದಲ ಮಹತ್ವದ ಅಪಜಯಕ್ಕೆ ಕಾರಣರಾದದ್ದು ನಿತೀಶ್‌ಕುಮಾರ್.

ಭಾಜಪದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ನಿತೀಶ್‌ಕುಮಾರ್ ಮೋದಿಯ ಬೆಳವಣಿಗೆಯ ಹೊತ್ತಿಗೆ ಮೋದಿಯ ಪ್ರತಿಸ್ಪರ್ಧಿಯಾಗಿ ಬೆಳಗಿದರು. ಜಾತ್ಯತೀತ ತತ್ವದ ಪ್ರತಿಪಾದಕನಂತೆ ನಿತೀಶ್‌ಕುಮಾರ್ ಬಿಹಾರದಲ್ಲಿ ಹೊಸ ಯುಗದ ಸ್ಥಾಪನೆಗೆ ಬುನಾದಿ ಹಾಕಿದ್ದಾರೆಂದೇ ದೇಶ ಭಾವಿಸಿತು. ಇಷ್ಟೇ ಅಲ್ಲ, ಮೋದಿಯ ವಿರುದ್ಧ ವಿರೋಧಪಕ್ಷಗಳನ್ನು ಮುನ್ನಡೆಸಬೇಕಾದರೆ ನಿತೀಶ್‌ಕುಮಾರ್‌ಗಿಂತ ಒಳ್ಳೆಯ ರಾಜಕಾರಣಿ ಬೇರಿಲ್ಲವೆಂಬ ಅಭಿಪ್ರಾಯವು ಎಲ್ಲೆಡೆ ಮೂಡಿತು.

ಇತ್ತೀಚೆಗೆ ಇತಿಹಾಸಕಾರ, ಚಿಂತಕ ರಾಮಚಂದ್ರ ಗುಹಾ ದೇಶದ ರಾಜಕೀಯ ಸನ್ನಿವೇಶದ ಕುರಿತು ಮಾತನಾಡುತ್ತ ಸದ್ಯಕ್ಕೆ ವಿರೋಧ ಪಕ್ಷಗಳ ಗುಂಪಾದ ಯುಪಿಎಗೆ ಕಾಂಗ್ರೆಸ್ ನಾಯಕತ್ವ ವಹಿಸುವುದು ಸರಿಯಲ್ಲ, ಏಕೆಂದರೆ ಅಲ್ಲಿ ಸರಿಯಾದ ನಾಯಕತ್ವವಿಲ್ಲ ಎಂದು ಹೇಳುತ್ತ, ಕಾಂಗ್ರೆಸಿಗೆ ನಾಯಕರಿಲ್ಲ, ಬಿಹಾರದ ಮುಖ್ಯ ಮಂತ್ರಿ ನಿತೀಶ್ ಕುಮಾರ್‌ಗೆ ರಾಷ್ಟ್ರೀಯ ಪಕ್ಷವಿಲ್ಲ, ಆದ್ದರಿಂದ ನಿತೀಶ್‌ಕುಮಾರ್ ಕಾಂಗ್ರೆಸ್ ಅಥವಾ ಯುಪಿಎಯ ನಾಯಕತ್ವ ವಹಿಸುವುದು ಒಳ್ಳೆಯದು ಎಂದು ಹೇಳಿದರು.

ಗುಹಾ ರಾಜಕೀಯದ ಮುನ್ನೋಟವನ್ನು ಬಲ್ಲ ಚಿಂತಕ. ಅವರು ನಿತೀಶ್ ಕುಮಾರ್ ಅವರ ಅಭಿಮಾನಿಯೂ ಅಲ್ಲ; ಅನಯಾಯಿಯೂ ಅಲ್ಲ. ಆದರೂ ಆವರ ಮಾತು ಆ ಕ್ಷಣಕ್ಕೆ ಅತ್ಯಂತ ಪ್ರಸ್ತುತವಾಗಿತ್ತು. ಅದನ್ನು ತಕ್ಷಣಕ್ಕೆ ಕೈಬಿಡುವುದು ಕಾಂಗ್ರೆಸ್ ಪಕ್ಷಕ್ಕಾಗಲೀ ಇತರ ವಿರೋಧ ಪಕ್ಷಗಳಿಗಾಗಲೀ ಸಾಧ್ಯವಿರಲಿಲ್ಲ. (ರಾಜಕೀಯ ಪಕ್ಷಗಳೂ ರಾಜಕಾರಣಿಗಳೂ ದಿನನಿತ್ಯ ಸಮಾಜ, ಪ್ರಜೆಗಳು ತಮ್ಮ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ಗಮನಿಸದಷ್ಟು ದಡ್ಡರಲ್ಲ; ಆದರೆ ತಮಗೆ ಸರಿಬಾರದ್ದನ್ನು ನಿರ್ಲಕ್ಷಿಸುವಷ್ಟು ಧೂರ್ತರು ಹೌದು!)

ಗುಹಾ ಸೇರಿದಂತೆ ದೇಶದ ರಾಜಕೀಯ ಚಿಂತಕರು ಬೆಚ್ಚಿ ಬೀಳುವಂತೆ ಮತ್ತು ಮೋದಿಯ ಟೀಕಾಕಾರರ ಕಪಾಳಕ್ಕೆ ಹೊಡೆದಂತೆ ನಿತೀಶ್ ಕಳೆದ ವಾರ ಜೆಡಿಯು-ಆರ್‌ಜೆಡಿ-ಕಾಂಗ್ರೆಸ್ ಮಹಾಘಟಬಂಧನದ ಘಟಶ್ರಾದ್ಧಕ್ಕೆ ಕಾರಣರಾದರು. ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿ ಒಂದೇ ದಿನದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾಗಿ ಹೊಸದಾಗಿ ಪ್ರಮಾಣವಚನ ಸ್ವೀಕರಿಸಿ ನಿತೀಶ್ ತನ್ನ ಹೊಸ ಸಂಸಾರ ಹೂಡಿದರು. ಲಾಲೂ ಪ್ರಸಾದ್ ಯಾದವ್ ಅವರ ಮಗ ಹಾಗೂ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ವಿರುದ್ಧ ನಡೆದ ಸಿಬಿಐ ದಾಳಿಯ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ವಿರೋಧವಾಗಿ ತಾನು ಈ ನಡೆಯನ್ನು ಕೈಗೊಂಡುದಾಗಿ ನಿತೀಶ್ ಹೇಳಿಕೆ ನೀಡಿದ್ದಾರೆ.

ಇಂತಹ ಹೇಳಿಕೆಗಳು ರಾಜಕಾರಣದಲ್ಲಿ ಸಾಮಾನ್ಯವೆಂಬುದು ಮತ್ತು ಭರವಸೆಯ ಆಶಾಕಿರಣವಾಗಿದ್ದ ನಿತೀಶ್‌ಕುಮಾರ್ ಕೂಡಾ ಇದಕ್ಕೆ ಹೊರತಾಗಲಿಲ್ಲವೆಂಬುದು ಸಮಾಜವು ಕಂಡ ಮತ್ತು ಕಾಣಬೇಕಾದ ದುರಂತ ಸತ್ಯ. ಇದನ್ನು ರಾಜಕಾರಣದ ಒಂದು ನಟನೆಯೆಂದು ಅಲಕ್ಷಿಸಬಹುದು ಇಲ್ಲವೇ ದೇಶದ ಸಂಕ್ರಮಣ ಸ್ಥಿತಿಯ ಒಂದು ಅಪೂರ್ವ ಘಟನೆಯೆಂದು ಪರಿಭಾವಿಸಿ ಕೆಲವು ಮಗ್ಗುಲುಗಳಿಂದ ಪರಿಶೋಧಿಸಬಹುದು. 2017ರಲ್ಲಿ ಮೊದಲ ಬಾರಿಗೆ ಆರ್‌ಜೆಡಿಯಾಗಲೀ ಲಾಲೂ ಕುಟುಂಬವಾಗಲೀ ಭ್ರಷ್ಟಾಚಾರದ ಆಪಾದನೆಗೆ ಗುರಿಯಾದದ್ದಲ್ಲ. ನಿತೀಶ್‌ಕುಮಾರ್ ಮಹಾಘಟಬಂಧನದ ಪಾತ್ರಧಾರಿಯಾಗಿಯೂ ಸೂತ್ರಧಾರಿಯಾಗಿಯೂ ತನ್ನ ರಾಜಕೀಯದ ದಾಳವನ್ನೆಸೆಯುವ ಬಹಳ ಮೊದಲೇ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಭ್ರಷ್ಟಾಚಾರದ ಬಲೆಯಲ್ಲಿ ಸಿಕ್ಕಿಬಿದ್ದಿದ್ದರು.

ಶಿಕ್ಷೆಯನ್ನೂ ಅನುಭವಿಸಿ ಜಾಮೀನಿನಲ್ಲಿ ಬಿಡುಗಡೆಯಾಗಿ ಆನಂತರ ಸ್ಪರ್ಧೆಗಿಳಿಯದಂತೆ ನ್ಯಾಯಾಲಯದ ನಿಷೇಧಾಜ್ಞೆಗೂ ತುತ್ತಾಗಿದ್ದರು. ಲಾಲೂ ಪ್ರಸಾದ್ ಭ್ರಷ್ಟರೆಂಬುದು ಮತ್ತು ತಮ್ಮ ಸಂಸಾರವೇ ಅವರಿಗೆ ಎಲ್ಲವೂ ಎಂಬುದು ಇಡೀ ದೇಶಕ್ಕೇ ಗೊತ್ತಿದ್ದ ಸತ್ಯ. ಇದು ನಿತೀಶ್‌ಕುಮಾರ್‌ಗೆ ಗೊತ್ತಿಲ್ಲದ ಹೊಸ ಸತ್ಯವೇನಲ್ಲ. ಆದ್ದರಿಂದ ನಿತೀಶ್‌ಕುಮಾರ್ ತಾನು ಭ್ರಷ್ಟಾಚಾರದ ವಿರುದ್ಧದ ತನ್ನ ನೀತಿಯಾಗಿ ಮಹಾಘಟಬಂಧನವನ್ನು ತೊರೆದೆನೆಂಬ ಹೇಳಿಕೆಯು ಮೇಲ್ನೋಟಕ್ಕೇ ಪೊಳ್ಳೆಂದು ಗೊತ್ತಾಗುತ್ತದೆ. ಎರಡನೆಯದಾಗಿ ನಿತೀಶ್ ಭಾಜಪ ಪ್ರಣೀತ ಎನ್‌ಡಿಎಯ ಕೋಮುವಾದವನ್ನು ಖಂಡಿಸಿಯೇ ಅದರಿಂದ ದೂರವಾದದ್ದು. ಮತ್ತೆ ಅದರೊಂದಿಗಿನ ಮೈತ್ರಿಗೆ ಕಾರಣವಾಗುವಂತಹ ಹೊಸ ಸ್ವಾಗತಾರ್ಹ ಬೆಳವಣಿಗೆಯೇನೂ ಈ ಎರಡು-ಮೂರು ವರ್ಷಗಳಲ್ಲಿ ಸಂಭವಿಸಿರಲಿಲ್ಲ.

ಆದ್ದರಿಂದ ತಾನು ವಿರೋಧಿಸುವ ಕೋಮುವಾದ ಮತ್ತು ಭ್ರಷ್ಟಾಚಾರ ಇವೆರಡರಿಂದ ಸಮಾನ ಅಂತರವನ್ನು ಕಾಯ್ದುಕೊಳ್ಳುವ ನಡೆಯನ್ನೇನಾದರೂ ನಿತೀಶ್‌ಕುಮಾರ್ ನಡೆಸಿದ್ದರೆ ಅದಕ್ಕೆ ಸಾರ್ವಜನಿಕ ಮನ್ನಣೆ ದೊರಕಬಹುದಾಗಿತ್ತು. ಇದಕ್ಕೆ ಇದ್ದ ಒಂದೇ ಒಂದು ಸಾಧ್ಯತೆಯೆಂದರೆ ಬಿಹಾರದ ಶಾಸನಸಭೆಯ ವಿಸರ್ಜನೆಗೆ ಕ್ರಮಕೈಗೊಂಡು ಹೊಸದಾಗಿ ಚುನಾವಣೆಯನ್ನು ಎದುರಿಸುವುದು. ಬದಲಾಗಿ ಅತ್ತ ದರಿ ಇತ್ತ ಪುಲಿ ಸ್ಥಿತಿಯಲ್ಲಿ ಲಾಭಕರ ಉದ್ಯಮಕ್ಕೆ ಅಥವಾ ಇನ್ಯಾವುದೋ ಬ್ಲಾಕ್‌ಮೇಲ್ ತಂತ್ರಕ್ಕೆ ನಿತೀಶ್ (ಮನ)ಸೋತರೆಂಬುದು ಸ್ಪಷ್ಟವಾಗುತ್ತದೆ. ನಿತೀಶ್‌ಕುಮಾರ್ ಒಂದು ಮುಂಜಾನೆ ಯೋಗನಿದ್ರೆಯಿಂದ ಎಚ್ಚೆತ್ತು ಈ ನಿರ್ಣಯ ಮಾಡಿದ್ದಲ್ಲವೆಂಬುದೂ ಈ ಮೊದಲಿನ ಮತ್ತು ಆನಂತರದ ಬೆಳವಣಿಗೆಗಳನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ.

ಇದಕ್ಕೆ ಮುನ್ಸೂಚನೆಯನ್ನು ನಿತೀಶ್ ಕುಮಾರ್ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಿದಾಗಲೇ ಅವರ ಸಹವರ್ತಿಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕಿತ್ತು. ತಮಾಷೆಯೆಂದರೆ ವಿಪಕ್ಷಗಳ ಒಕ್ಕೂಟದಲ್ಲಿದ್ದೇ ನಿತೀಶ್ ಕುಮಾರ್ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಿದರು. ಆದರೆ ರಾಷ್ಟ್ರಪತಿ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಸ್ವೀಕರಿಸಿರಲಿಲ್ಲವೆಂಬುದು ಅದರ ತೀರ ತಡವಾದ ಆಯ್ಕೆ ಪ್ರಕ್ರಿಯೆಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಇದರಿಂದಾಗಿ ಅಥವಾ ಅಜ್ಞಾನದಿಂದಾಗಿ ಅದು ನಿತೀಶ್ ಕುಮಾರ್ ತಳೆದ ನಿಲುವನ್ನು ಖಂಡಿಸುವ ಅಥವಾ ಪ್ರತಿಭಟಿಸುವ ಗೋಜಿಗೆ ಹೋಗಲಿಲ್ಲ. ನಿತೀಶ್‌ಕುಮಾರ್ ನಿಮ್ಮಾಡನಿದ್ದೂ ನಿಮ್ಮಂತಾಗದೆ ವಿಪಕ್ಷದಲ್ಲಿ ಉಳಿದು ಜೈಸಿದರು.

ಈಗ ನಿತೀಶ್‌ಕುಮಾರ್ ಅಧಿಕಾರದಲ್ಲಿ ಉಳಿಯಬಹುದು. ಇಂತಹ ಗೆಲುವು ಪಕ್ಷಾಂತರದ ಪ್ರಶ್ನೆಯಲ್ಲ; ಆತ್ಮಸಾಕ್ಷಿಯದ್ದು. ಅಧಿಕಾರವೇ ಒಬ್ಬ ರಾಜಕಾರಣಿಯ ಯಶಸ್ಸಿನ ಹೆಗ್ಗುರುತಲ್ಲ. ಅದು ಆಕಸ್ಮಿಕ; ಕೆಲವೊಮ್ಮೆ ಅಪಘಾತ. ಆದರೆ ಒಬ್ಬ ರಾಜಕಾರಣಿಗೆ ಉಳಿಯುವ ವರ್ಚಸ್ಸಿರುವುದು ಆತನ ದೃಢತೆಯಲ್ಲಿ. ಸೋಲು-ಗೆಲುವಿನಲ್ಲಲ್ಲ. ಇದರಿಂದಾಗಿಯೇ ಗಾಂಧಿ, ಅಂಬೇಡ್ಕರ್, ಲೋಹಿಯಾ, ಕರ್ನಾಟಕದ ಗೋಪಾಲಗೌಡರಂಥವರು ಜನನಾಯಕರಾಗುತ್ತಾರೆ; ಭವಿಷ್ಯದ ಮಹಾನಾಯಕರಾಗುತ್ತಾರೆ; ಸದಾ ಜನಮಾನಸದಲ್ಲಿ ಉಳಿಯುತ್ತಾರೆ.

ಉಳಿದವರು ರಾಷ್ಟ್ರಪತಿಗಳಾದರೂ, ಪ್ರಧಾನಿಗಳಾದರೂ ಅಧಿಕಾರಾವಧಿಯಲ್ಲಿ ವೇದಿಕೆ, ಬ್ಯಾನರ್, ಮತ್ತಿತರ ಕೃತ್ರಿಮದ ಕೆಂಪುಕೋಟೆಯ ಗೌರವಗಳಲ್ಲಷ್ಟೇ ಉಳಿಯುತ್ತಾರೆ. ಪದವಿಯೇ ಬೇಕಾದವರು ಹೇಗಾದರೂ ಅದನ್ನು ಪಡೆದು ಐಹಿಕ ಭೋಗಭಾಗ್ಯಗಳನ್ನು ಪಡೆಯಬಹುದು; ಮುಖಸ್ತುತಿಯ ಉಗುಳನ್ನೂ ತುಂಬಿಕೊಳ್ಳಬಹುದು. ಆದರೆ ನಿತ್ಯಶಾಶ್ವತದ ಫಲವನ್ನು ಪಡೆಯಲಾರರು. ಎಂತಹ ಅಧಿಕಾರವೂ ಶಾಶ್ವತವಲ್ಲ. ಪ್ರಾಯಃ ಈ ಸತ್ಯದಿಂದಲೇ ಪ್ರಜ್ಞಾವಂತ ನಾಗರಿಕರು ಎಂತಹ ಭಯಾನಕ ಸ್ಥಿತಿ ಎದುರಾದಾಗಲೂ ದೂರದ ಬೆಳಕಿನ ಭರವಸೆಯನ್ನಿಟ್ಟುಕೊಂಡು ಬದುಕುತ್ತಾರೆ.

ನಿತೀಶ್‌ಕುಮಾರ್ ಈಗ ಆರ್‌ಜೆಡಿ, ಕಾಂಗ್ರೆಸ್ ಮಾತ್ರವಲ್ಲ, ಇತರರಿಂದಲೂ ವಿರೋಧವನ್ನೆದುರಿಸಬಹುದು. ಆದರೆ ಅವರು ಪ್ರಬಲ ಪ್ರತಿಭಟನೆಯನ್ನೆದುರಿಸಬೇಕಾದದ್ದು ಇತರರಿಂದಲ್ಲ; ತನ್ನ ಮನಸ್ಸಾಕ್ಷಿಯಿಂದಲೇ. ಇದನ್ನು ಮುಚ್ಚಿಕೊಳ್ಳುವಂತೆ ನಿತೀಶ್ ಕುಮಾರ್ ಈಗ ಮೋದಿಯವರ ಪರವಾಗಿ ಕಹಳೆಯನ್ನೂದುವುದಕ್ಕೆ ಅರಂಭಿಸಿದ್ದಾರೆ. 2019ರಲ್ಲಿ ಮೋದಿಯವರ ಗೆಲುವು ಖಚಿತ; ಅವರನ್ನೆದುರಿಸುವ ನಾಯಕರೇ ಈ ದೇಶದಲ್ಲಿ ಇಲ್ಲ ಮುಂತಾದ- ಸಾಮಾನ್ಯವಾಗಿ ಸ್ಮತಿ ಇರಾನಿಯಂತಹವರು ಹೇಳಬೇಕಾದ- ಮಾತುಗಳನ್ನು ಅಯಾಚಿತವಾಗಿ ಹೇಳಲಾರಂಭಿಸಿದ್ದಾರೆ. ಈ ಯಾವ ಘೋಷಣೆಗೂ ಅವರು ತಮ್ಮ ಪಕ್ಷದ, ಹೋಗಲಿ, ಬಹುಕಾಲದ ಸಖ ಹಿರಿಯ ನಾಯಕ ಶರದ್ ಯಾದವ್ ಅವರ ಜೊತೆಗೂ ಸಮಾಲೋಚಿಸಿದಂತೆ ಕಾಣುವುದಿಲ್ಲ. ಇದೊಂದು ರೀತಿಯಲ್ಲಿ ಬ್ರಿಟಿಷರಿಗಿಂತ ಹೆಚ್ಚು ಬ್ರಿಟಿಷರಾಗಬಯಸುವ ಭಾರತೀಯರಂತೆ.

ಮೋದಿಯವರ ವಿರುದ್ಧ ಯಾರೂ ಇರಲಾರರೆಂಬ ಮಾತನ್ನು ಒಬ್ಬ ರಾಜಕಾರಣಿಯಾಗಿ ನಿತೀಶ್‌ಕುಮಾರ್ ಹೇಳಬಾರದಿತ್ತು. ಒಂದು ವೇಳೆ ಅವರು ಹೇಳಿದಂತೆ ರಾಹುಲ್ ಗಾಂಧಿಯಾಗಲಿ, ಇತರ ಕಾಂಗ್ರೆಸ್ ರಾಜಕಾರಣಿಗಳಾಗಲಿ ಅಂತಹ ಶಕ್ತಿ-ಸಾಮರ್ಥ್ಯಗಳನ್ನು ಹೊಂದಿಲ್ಲವಾದರೆ ತಾನು ಅಂತಹ ನಾಯಕತ್ವದ ಹೊಣೆಯನ್ನು ನಿಭಾಯಿಸಬಲ್ಲೆನೆಂದು ಬಹಿರಂಗವಾಗಿ ಹೇಳುವುದು ನ್ಯಾಯ. ಕೊನೇ ಪಕ್ಷ ಅದು ಆತ್ಮವಿಶ್ವಾಸ, ಸ್ಥೈರ್ಯವನ್ನಾದರೂ ಹೊಮ್ಮಿಸೀತು. ಹಾಗಲ್ಲದಿದ್ದರೆ, ಅದು ಕಾಲದ ಸತ್ಯವನ್ನು ಹೇಳುವುದರ ಬದಲಾಗಿ ವೈಯಕ್ತಿಕ ಕೊರತೆ, ದೋಷಗಳ ಶಬ್ದಕೋಶವಾದೀತಷ್ಟೇ.

ಇನ್ನೂ ವಿಶೇಷವೆಂದರೆ ಈಗ ಎನ್‌ಡಿಎಯೊಂದಿಗೆ ಮೈತ್ರಿ ಮಾಡಿಕೊಂಡೂ ನಿತೀಶ್‌ಕುಮಾರ್ ತಾವು ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಈ ಅಳಿಯ ಅಲ್ಲ, ಮಗಳ ಗಂಡ ಪ್ರವೃತ್ತಿ ಇಷ್ಟು ಬಹಿರಂಗವಾಗಿ ನಡೆಯುವುದು ಭಾರತದಲ್ಲಿ ಮಾತ್ರ ಸಾಧ್ಯವೇನೋ? ಇದೊಂದು ತರಹದ ಹೌದಿನಿ ಮ್ಯಾಜಿಕ್. ಯಾವಾಗ ಯಾವ ಪೆಟ್ಟಿಗೆಯೊಳಗಿರುತ್ತಾರೆ, ಯಾವಾಗ ಹೊರಬರುತ್ತಾರೆಂಬುದು ಗೊತ್ತಾಗದ ಗಿಮಿಕ್. ಸಾಮಾನ್ಯವಾಗಿ ರಾಜಕಾರಣಿಗಳಿಗೆ ಮನಸ್ಸಾಕ್ಷಿಯೆಂಬುದು ಇರುವುದಿಲ್ಲವೆಂಬ ನಂಬಿಕೆಯಿದೆ. ಆದರೆ ಯಾವುದೋ ಒಂದು ಹಂತದಲ್ಲಿ, ಒಂದು ಮಂದ ಬೆಳಕಿನಲ್ಲಿ, ಒಂದು ಮುಸ್ಸಂಜೆಯಲ್ಲಿ, ಅವರಿಗೂ ತಮ್ಮ ಗತದ ಸತ್ಯದ ಭಯಾನಕ ಅರಿವು ಮೂಡುತ್ತದೆ. ನಾದಿರ್ ಶಾನ ಹಾಗೆ. ತೀರ ತಡವಾಗಿ. ಅಂತಹ ಸಂದರ್ಭದಲ್ಲಿ ಹಲುಬುವುದರ ಹೊರತು ಇನ್ನೇನೂ ಉಳಿದಿರುವುದಿಲ್ಲ.

ಎಲ್ಲ ರಾಜಕಾರಣಿಗಳ ಕುರಿತು ಯೋಚಿಸುವಾಗ ಹೀಗನ್ನಿಸುವುದಿಲ್ಲ. ಆದರೆ ಭರವಸೆಯನ್ನು ನೀಡಬಹುದಾದವರು, ಬೌದ್ಧಿಕವಾಗಿ ಇತರರಿಗಿಂತ ಭಿನ್ನವಾದಂತೆ ಕಾಣುವವರು ಮೂರ್ಖರಂತೆ ವರ್ತಿಸುವಾಗ ಅವರಿಗೆ ಮುಂದಿನ ತಲೆಮಾರಿಗಿಂತ ಮುಂದಿನ ಚುನಾವಣೆೆ ಮುಖ್ಯವಾಗಿರುವಂತೆ ಕಾಣುತ್ತದೆ. ಆಕಾಶಕ್ಕೆ ಗುರಿಯಿಟ್ಟರೆ ಮರದ ತುದಿಗಾದರೂ ಗುರಿ ಮುಟ್ಟೀತು. ಮರಕ್ಕೆ ಗುರಿಯಿಟ್ಟರೆ ನೆಲವೇ ಗುರಿಯಾದೀತು ಎಂಬ ಹೇಳಿಕೆಯಿದೆ. ಆದರೆ ನೆಲವನ್ನೇ ಗುರಿಯಾಗಿಡುವ ಪ್ರವೃತ್ತಿಗೆ ಮಣ್ಣುತಿನ್ನಬೇಕಾದೀತೆಂಬುದರ ಹೊರತಾಗಿ ಇನ್ನೇನನ್ನಬೇಕು?

ನಿತೀಶ್‌ಕುಮಾರ್ ಒಬ್ಬ ಮುತ್ಸದ್ದಿಯಂತೆ ಗೋಚರಿಸಿದ್ದರು. ಈಗ ಯಕಶ್ಚಿತ್ ರಾಜಕಾರಣಿಯಾಗಿದ್ದಾರೆ. ಹೂ ತುಂಬಿದ ಮರವಾಗುವ ಅವಕಾಶವನ್ನು ಕಳೆದುಕೊಂಡು ಮರದ ನೆರಳೂ ಆಗದೆ ಧೊಪ್ಪನೆ ಉರುಳಿ ಬಿದ್ದಿದ್ದಾರೆ; ಉಳಿದಿದ್ದಾರೆ. ಹಗುರಾಗಿದ್ದಾರೆ. (-ನಮ್ಮ ಎಸ್.ಎಮ್. ಕೃಷ್ಣರಂತೆ.)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)