ಓ ಮೈ ಗಾಡ್ ರಿಮೇಕ್ ನಲ್ಲಿ ಲಾಲ್, ಕಮಲ್
ಮೋಹನ್ಲಾಲ್, ಕಮಲ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ. ದಕ್ಷಿಣ ಭಾರತದ ಈ ಇಬ್ಬರೂ ಸೂಪರ್ಸ್ಟಾರ್ಗಳು ಇದೇ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಜೊತೆಯಾಗಿ ಅಭಿನಯಿಸುತ್ತಿದ್ದಾರೆ. ಬಾಲಿವುಡ್ನ ಸೂಪರ್ಡ್ಯೂಪರ್ ಹಿಟ್ ಚಿತ್ರ ‘ಓ ಮೈ ಗಾಡ್’ನ ರಿಮೇಕ್ನಲ್ಲಿ ಈ ಮಹಾನ್ ತಾರೆಯರು ಒಂದಾಗುತ್ತಿದ್ದಾರೆ. ತಮಿಳು, ತೆಲುಗಿನಲ್ಲಿ ಏಕಕಾಲದಲ್ಲಿ ಈ ಚಿತ್ರಕ್ಕೆ ಸ್ವತಃ ಕಮಲ್ಹಾಸನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅಷ್ಟೇ ಅಲ್ಲ ಅವರ ರಾಜ್ಕಮಲ್ ಇಂಟರ್ನ್ಯಾಶನಲ್ ಬ್ಯಾನರ್ನಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದೆ.
ಅಕ್ಷಯ್ ಕುಮಾರ್ ಹಾಗೂ ಪರೇಶ್ ರಾವಲ್ ನಟನೆಯ ‘ಓ ಮೈ ಗಾಡ್’ ಬಾಕ್ಸ್ ಆಫೀಸ್ನಲ್ಲಿ 180 ಕೋಟಿ ಗಳಿಸಿ ದಾಖಲೆ ಸ್ಥಾಪಿಸಿತ್ತು. ಇದೀಗ ರಿಮೇಕ್ನಲ್ಲಿ ಅಕ್ಷಯ್ ಅಭಿನಯಿಸಿದ್ದ ಪಾತ್ರವನ್ನು ಮೋಹನ್ಲಾಲ್ ನಿರ್ವಹಿಸಲಿದ್ದರೆ, ಪರೇಶ್ ರಾವಲ್ ಅಭಿನಯದ ಪಾತ್ರದಲ್ಲಿ ಕಮಲ್ ಕಾಣಿಸಿಕೊಳ್ಳಲಿದ್ದಾರೆ.
ಅಂದಹಾಗೆ ಕಮಲ್ ನೇಟಿವಿಟಿಗೆ ತಕ್ಕಂತೆ ಚಿತ್ರದ ಕಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದಾರೆ. ಚಿತ್ರದ ಉಳಿದ ಪಾತ್ರವರ್ಗದ ಆಯ್ಕೆ ಸದ್ಯದಲ್ಲೇ ನಡೆಯಲಿದ್ದು, ಎಲ್ಲ ಸರಿಹೋದಲ್ಲಿ ಮುಂದಿನ ಎರಡು ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ.
2008ರಲ್ಲಿ ಬಿಡುಗಡೆಯಾದ ಓ ಮೈಗಾಡ್ ತನ್ನ ವಿಶಿಷ್ಟ ಕಥಾವಸ್ತುವಿನಿಂದಾಗಿ ಇಡೀ ಭಾರತೀಯ ಚಿತ್ರರಂಗದ ಗಮನಸೆಳೆದಿತು. ಸ್ಯಾಂಡಲ್ವುಡ್ನಲ್ಲಿ ಈ ಚಿತ್ರವು ‘ಮುಕುಂದ ಮುರಾರಿ’ ಹೆಸರಿನಲ್ಲಿ ರಿಮೇಕ್ ಆಗಿ, ಕಳೆದ ವರ್ಷ ಬಿಡುಗಡೆಗೊಂಡಿತ್ತು. ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಅಭಿನಯದ ಈ ಚಿತ್ರ ಸಾಧಾರಣ ಯಶಸ್ಸನ್ನು ಕಂಡಿತ್ತು.