varthabharthi

ನಿಮ್ಮ ಅಂಕಣ

ಜೈಲ್‌ಡೈರಿಯ ಮೂಲಕ ಭಗತ್ ಸಿಂಗ್

ವಾರ್ತಾ ಭಾರತಿ : 6 Aug, 2017
-ಕಾರುಣ್ಯಾ

ಯುವ ಸಮೂಹಕ್ಕೆ ಇಂದಿಗೂ ಆಕರ್ಷಕ, ರೋಚಕ ಹೆಸರು ಭಗತ್‌ಸಿಂಗ್. ಆತನ ಹೋರಾಟ, ತ್ಯಾಗ, ಬಲಿದಾನ ಇವುಗಳನ್ನು ಇಷ್ಟ ಪಡದೆ ಇರಲು ಕಾರಣವೇ ಇಲ್ಲ. ಆರಂಭದಲ್ಲಿ ಭಗತ್‌ಸಿಂಗ್‌ರನ್ನು ಸಂಘಪರಿವಾರ ಹೈಜಾಕ್ ಮಾಡಿ, ತನ್ನ ಅಜೆಂಡಾಗಳಿಗೆ ಬಳಸುವುದಕ್ಕೆ ಹವಣಿಸಿತಾದರೂ, ಭಗತ್‌ಸಿಂಗ್ ಅವರ ಬರಹಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದ್ದಂತೆಯೇ ಈ ಯತ್ನ ವಿಫಲವಾಯಿತು.

ಭಗತ್ ಸಿಂಗ್‌ರ ಬದುಕು ಮತ್ತು ಹೋರಾಟಗಳನ್ನು ಬೇರೆ ಬೇರೆ ನೆಲೆಗಳಲ್ಲಿ ವಿಶ್ಲೇಷಿಸಲಾಗಿದೆ. ಅದರಲ್ಲಿ ಮುಖ್ಯವಾದ ಕೃತಿ ‘ಭಗತ್ ಸಿಂಗ್- ಜೈಲ್ ಡೈರಿ’. ಇನ್ನೇನು ಗಲ್ಲಿಗೇರಲು ಸಿದ್ಧನಾಗಿರುವ ವ್ಯಕ್ತಿಯೊಬ್ಬ ಜೈಲಿನೊಳಗೆ ಕುಳಿತು ಏನು ಮಾಡಬಹುದು? ಆತ ಆಸ್ತಿಕನಾಗಿದ್ದರೆ ಪ್ರಾರ್ಥನೆಗೆ ತೊಡಗಬಹುದು. ಧ್ಯಾನ ಮಾಡಬಹುದು. ಅಥವಾ ಕುಟುಂಬಿಕರನ್ನು ನೆನೆಯುತ್ತಾ ಕಾಲ ಕಳೆಯಬಹುದು. ಆದರೆ ಭಗತ್‌ಸಿಂಗ್ ರಾಶಿ ಪುಸ್ತಕಗಳನ್ನು ಸುತ್ತ ಇಟ್ಟು ಅದರ ಮೂಲಕ ಬದುಕ ತೊಡಗಿದರು.

ವಿಶ್ವದ ಅತ್ಯುತ್ತಮ ಪುಸ್ತಕಗಳನ್ನು ತರಿಸಿ ಓದಿದರು. ಓದುವುದು ತನ್ನ ಜ್ಞಾನ ಪ್ರದರ್ಶನಕ್ಕಲ್ಲ. ತಾನು ಹೆಚ್ಚು ಸಮಯ ಬದುಕುವುದಿಲ್ಲ ಎನ್ನುವ ಅರಿವಿದ್ದೂ ಪುಸ್ತಕಗಳನ್ನು ಓದುತ್ತಿದ್ದ ಭಗತ್, ಓದಿನ ನಿಜವಾದ ಉದ್ದೇಶವನ್ನು ಅರಿತಿದ್ದರು. ಆತ ಪುಸ್ತಕಗಳಿಗಾಗಿಯೇ ಜೈಲಿನ ಅಧಿಕಾರಿಗಳೊಂದಿಗೆ ಸಂಘರ್ಷ ಕ್ಕಿಳಿದಿದ್ದರು. ರಾಷ್ಟ್ರೀಯ ಪತ್ರಾಗಾರದಲ್ಲಿರುವ ಭಗತ್‌ಸಿಂಗ್‌ರ ದಿನಚರಿಗಳನ್ನು ಚಮನ್‌ಲಾಲ್ ಈ ಕೃತಿಯಲ್ಲಿ ಸಂಪಾದಿಸಿದ್ದಾರೆ. ಭೂಪೇಂದ್ರ ಹೂಜಾ ಅದಕ್ಕೆ ವ್ಯಾಪಕ ಅಡಿ ಟಿಪ್ಪಣಿಗಳನ್ನೊದಗಿಸಿ ಅದನ್ನು ಸುಧನ್ವ ದೇಶಪಾಂಡೆ ಪರಿಷ್ಕರಿಸಿದ್ದಾರೆ.

ಭಗತ್‌ರ ಹೋರಾಟ ಹೊರಗೆ ನಡೆದಿರುವುದಕ್ಕಿಂತ ಜೈಲಿನ ಒಳಗೆ ನಡೆದಿರುವುದೇ ವಿಭಿನ್ನವಾದುದು. 1929ರ ಜೂನ್ 15ರಂದು ಒಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ತನಗೆ ಮತ್ತು ತನ್ನಂತಹ ಇತರರಿಗೆ ಓದಲು ಬೇಕಾದ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಲು ನಡೆಸಿದ ಹೋರಾಟ ಅದು. ಅಂದರೆ ತಮಗೆ ಇಷ್ಟವೆನಿಸಿದ ಪುಸ್ತಕಗಳನ್ನು ತರಿಸಿಕೊಂಡು ಜೈಲಿನ ಕೋಣೆಯಲ್ಲೇ ಓದಿಕೊಳ್ಳುವುದು. ಉಪವಾಸ ಆರಂಭಿಸಿದ ಆನಂತರ ಜೂನ್ 17ರಂದು ಸ್ವತಃ ಭಗತ್ ಸಿಂಗ್ ಪಂಜಾಬ್ ಜೈಲುಗಳ ಇನ್ ಸ್ಪೆೆಕ್ಟರ್ ಜನರಲ್‌ಗೆ ಪತ್ರ ಬರೆದು ಉಪವಾಸದ ಬಗ್ಗೆ ತಿಳಿಸಿದರು. ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಕಾವ್ಯ, ನಾಟಕ, ಕಾದಂಬರಿ ಮುಂತಾದ ಪ್ರಕಾರಗಳ ಸಾಹಿತ್ಯವನ್ನು ಎಲ್ಲ ರಾಜಕೀಯ ಕೈದಿಗಳಿಗೂ ಒದಗಿಸ ಬೇಕೆಂದು ಕೇಳಿದ್ದು ಆ ಪತ್ರದ ವೈಶಿಷ್ಟ. ಈ ಕೃತಿಯಲ್ಲಿ ಎರಡು ಅಧ್ಯಾಯಗಳಿವೆ.

ಮೊದಲನೆ ಅಧ್ಯಾಯ ಭಗತ್‌ಸಿಂಗ್‌ರ ಬದುಕು, ಹೋರಾಟವನ್ನು ತೆರೆದಿಡುತ್ತದೆ. ಭಗತ್ ಸಿಂಗ್ ಹುಟ್ಟುವುದಕ್ಕೆ ಕಾರಣವಾದ ಅಂದಿನ ಪಂಜಾಬ್‌ನ ಸ್ಥಿತಿಗತಿಯನ್ನು ಕಥನ ರೂಪದಲ್ಲಿ ವಿವರಿಸುತ್ತದೆ. ಎರಡನೆ ಅಧ್ಯಾಯ ಭಗತ್ ಸಿಂಗ್ ಜೈಲಿನಲ್ಲಿ ಬರೆದ ಡೈರಿಯ ಟಿಪ್ಪಣಿಗಳನ್ನು ಕೊಡುತ್ತದೆ. ಈ ಡೈರಿಯಲ್ಲಿ ಭಗತ್ ಸಿಂಗ್, ಬಹುತೇಕ ತಾನು ಓದಿದ ವಿವಿಧ ಕೃತಿಗಳ ಟಿಪ್ಪಣಿಗಳನ್ನು ದಾಖಲಿಸಿದ್ದಾರೆ. ಕೆಲವು ಕಡೆ ಆ ಕೃತಿಯ ಕುರಿತಂತೆ ತನ್ನ ಅಭಿಪ್ರಾಯಗಳನ್ನೂ ದಾಖಲಿಸಿದ್ದಾರೆ. ಕವಿತೆಯ ಸಾಲುಗಳು, ನುಡಿಮುತ್ತುಗಳು, ವಿವಿಧ ಲೇಖಕರ ಚಿಂತನೆಯ ಸಾರಗಳು...ಹೀಗೆ ವೈವಿಧ್ಯಮಯ ಟಿಪ್ಪಣಿಗಳನ್ನು ಈ ಡೈರಿಯಲ್ಲಿ ಭಗತ್ ಸಿಂಗ್ ದಾಖಲಿಸಿದ್ದಾರೆೆ. ಭಗತ್ ಸಿಂಗ್‌ರ ಕುರಿತಂತೆ ಅತ್ಯಂತ ಕುತೂಹಲಕರವಾದ ಮಾಹಿತಿಗಳು ಈ ಡೈರಿಯ ಮೂಲಕ ನಮಗೆ ದೊರಕುತ್ತದೆ. ಅತೀ ಸಣ್ಣ ವಯಸ್ಸಲ್ಲಿ ಅತೀ ದೊಡ್ಡದನ್ನು ಸಾಧಿಸಿದ ಭಗತ್ ಸಿಂಗ್‌ರನ್ನು ಹೊಸ ಬಗೆಯಲ್ಲಿ ನಿರೂಪಿಸುತ್ತದೆ ಈ ಕೃತಿ. ಡಾ. ಎಚ್. ಎಸ್. ಅನುಪಮಾ ಅವರು ಈ ಕೃತಿಯನ್ನು ಕನ್ನಡಕ್ಕೆ ಇಳಿಸಿದ್ದಾರೆ. ಲಡಾಯಿ ಪ್ರಕಾಶನ ಗದಗ ಕೃತಿಯನ್ನು ಪ್ರಕಟಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)