varthabharthi

ಅನುಗಾಲ

ಅಹಿಂಸೆಯಿಂದ ಹಿಂಸೆಗೆ-ಸಂಸ್ಕೃತಿಯಿಂದ ವಿಕೃತಿಗೆ- ಸ್ವಾತಂತ್ರ್ಯದ ಏಳು ದಶಕಗಳು

ವಾರ್ತಾ ಭಾರತಿ : 10 Aug, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಹಾಲು ಕುಡಿಯುವ ಹುಡುಗರು ದೊಡ್ಡವರಾಗುತ್ತಿದ್ದಂತೆ ದೇಶದ ಸತ್ಪ್ರಜೆಗಳಾಗುವ ಬದಲು, ವಿವೇಕಿಗಳಾಗುವ ಬದಲು, ರಕ್ತ ಕುಡಿಯಲು ಬಯಸುತ್ತಾರೇಕೆ ಎಂಬುದು ಚಿದಂಬರ ರಹಸ್ಯ. ಮನುಷ್ಯನು ಸಂಸ್ಕೃತಿಯನ್ನು ಅರಸಿಹೋಗುವ ಕಾಲವನ್ನು ದಾಟಿ, ಸುಸಂಸ್ಕೃತನಾಗುವ ಹಾದಿಯನ್ನು ತೊರೆದು, ವಿಕೃತನಾಗುವ ಕಾಲದಲ್ಲಿದ್ದೇವೆಯೋ ಎಂಬ ಸಂಶಯ ಬರುತ್ತಿದೆ.


1984ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯ ಸಾವು ಬ್ಲೂ ಸ್ಟಾರ್ ಕಾರ್ಯಾಚರಣೆಯ ಫಲಶೃತಿಯೆಂಬ ಸಬೂಬು ಹೇಳಿದರೂ ಅದು ಹೊಸ ರೀತಿಯ ಹಿಂಸಾ ಪ್ರವೃತ್ತಿಗೆ ನಾಂದಿ ಹಾಡಿದ್ದಂತೂ ನಿಜ. ಅದರ ಪ್ರತಿಕ್ರಿಯೆಯೆಂಬಂತೆ ದಿಲ್ಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸಿಖ್ಖರ ಹತ್ಯೆ ನಡೆಯಿತು ಮತ್ತು ಅನೇಕ ಸ್ಥಿರ-ಚರ ಆಸ್ತಿಪಾಸ್ತಿಗಳು ನಾಶವಾದವು. ಈ ಕುರಿತು ಪರ-ವಿರೋಧ ವಾದಗಳು ನ್ಯಾಯಾಲಯಗಳ ಹೊರಗೂ ಒಳಗೂ ನಡೆಯುತ್ತಿದ್ದರೂ ಅದೊಂದು ಭೀಕರ ಘಟನೆಯೆಂಬುದಂತೂ ನಿಜ. ಸೂಕ್ಷ್ಮವಾಗಿ ನೋಡಿದರೆ ಇಂದಿರಾ ಗಾಂಧಿ ದೇಶದ ಮೇಲೆ ಹೇರಿದ ತುರ್ತುಸ್ಥಿತಿಯಲ್ಲೂ ಆ ಪ್ರಮಾಣದ ಸಾಮುದಾಯಿಕ ಗುಂಪು ಹಿಂಸೆ ನಡೆದಿರಲಿಲ್ಲ.

ಇದೊಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತೆಂದು ಹೇಳಲೇ ಬೇಕು. ಏಕೆಂದರೆ ಆನಂತರ ಪ್ರಧಾನಿಯಾಗಿ ಬಂದ ರಾಜೀವ್ ಗಾಂಧಿ ಕೂಡಾ ಹತ್ಯೆಗೆ ಗುರಿಯಾದರು. ಇದನ್ನು ಶ್ರೀಲಂಕಾದ ತಮಿಳು ಉಗ್ರರು ನಡೆಸಿದರು. ಈ ಹತ್ಯೆಗೆ ಯಾವ ಸೈದ್ಧಾಂತಿಕ ತಳಹದಿಯಿಲ್ಲದಿದ್ದರೂ ಶ್ರೀಲಂಕಾದಲ್ಲಿ ಭಾರತದ ಶಾಂತಿ ಪಾಲನಾ ಪಡೆ ನಡೆಸಿದ ಕಾರ್ಯಾಚರಣೆಯೇ ಕಾರಣವೆಂದು ನಂಬಬೇಕು. ಮಹಾ ನಾಯಕರ ಹತ್ಯೆಗೆ ಕಾರಣ ಬೇಕಿಲ್ಲ. ಒಂದು ಉಗ್ರರ ಗುಂಪಿನ ಹುಂಬ ಅಸಂತುಷ್ಟತೆ ಸಾಕು. ಆದರೆ ಇಂತಹ ಎಲ್ಲ ಸಂದರ್ಭಗಳಲ್ಲಿ ತಾತ್ವಿಕ ಮತ್ತು ತಾರ್ಕಿಕ ವಾದಗಳಿಗೆ ಸಿದ್ಧರಾದವರು ಇದ್ದೇ ಇರುತ್ತಾರೆ.

21ನೆ ಶತಮಾನದ ಹಿಂದೆ ಮುಂದೆ ಹಿಂಸೆಯ ದೊಡ್ಡ ಘಟನಾವಳಿಗಳೇ ಇವೆ. ಅವು ಗುಜರಾತ್ ಇರಲಿ, ನಕ್ಸಲ್ ಚಳುವಳಿಯಿರಲಿ, ಕಾಶ್ಮೀರವಿರಲಿ, ಅಲ್ಲೆಲ್ಲ ಸಾಮಾಜಿಕ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವುದಕ್ಕಿಂತಲೂ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದಕ್ಕೆ ಮತ್ತು ರಾಜಕೀಯವಾಗಿ ಹೆಚ್ಚು ಪ್ರಸ್ತುತವಾಗುವುದಕ್ಕೆ ಒಲವಿರುವುದನ್ನು ಗಮನಿಸಬಹುದು. ನಾಗರಿಕವಾಗಿ ನಾವು ಮುಂದುವರಿಯುತ್ತೇವೆಂದು ಹೇಳಿಕೊಳ್ಳುವಾಗಲೇ ಚಲಿಸುವ ಬಸ್ಸಿನಲ್ಲಿ, ರೈಲಿನಲ್ಲಿ, ಜನಜಂಗುಳಿಯಲ್ಲಿ ಮಗುವೋ, ಯುವತಿಯೋ ಇನ್ಯಾರೋ ಬರ್ಬರವಾಗಿ ಸಾವು-ನೋವುಗಳಿಗೆ ಬಲಿಯಾಗುವುದನ್ನು ಕಾಣುತ್ತೇವೆ. ನ್ಯಾಯಾಲಯಗಳು ಎಷ್ಟೇ ಕಠೋರವಾಗಿ ನಡೆದುಕೊಂಡರೂ ಅವುಗಳ ನಿರ್ಣಯಕ್ಕೆ ಒಂದು ಸುಸೂತ್ರತೆ, ಸೂತ್ರ ಬದ್ಧತೆಯಿಲ್ಲದಂತಿರುವುದರಿಂದ ಅವು ಸಾಮಾಜಿಕ ನ್ಯಾಯವನ್ನು ನೀಡಲು ವಿಫಲವಾಗಿವೆಯೆಂದೇ ಹೇಳಬಹುದು. ಒಂದೇ ರೀತಿಯ ಎರಡು ಪ್ರಕರಣಗಳಲ್ಲಿ ಒಂದರಲ್ಲಿ ಬಿಡುಗಡೆ, ಇನ್ನೊಂದರಲ್ಲಿ ಶಿಕ್ಷೆ, ಒಂದೇ ರೀತಿಯ ಆರೋಪಗಳಲ್ಲಿ ಒಂದರಲ್ಲಿ ಜಾಮೀನು ಪುರಸ್ಕಾರ, ಇನ್ನೊಂದರಲ್ಲಿ ತಿರಸ್ಕಾರ ಇವು ಕಂಡು ಬಂದರೆ ಜನರಿಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಬರುವುದಾದರೂ ಹೇಗೆ?

ರಾಜಕಾರಣಿಗಳು, ಅಧಿಕಾರಶಾಹಿ, ಮತ್ತವರ ಬಂಧು-ಬಳಗ ಸಾಮಾನ್ಯ ಮಾತ್ರವಲ್ಲ, ಅಸಾಮಾನ್ಯ ಅಪರಾಧಗಳಲ್ಲೂ ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ಉರಿಗೆ ಉರಿಯೇ ಶತ್ರು ಎಂಬಂತೆ ಈ ಗುಂಪಿನೊಳಗೆ ಪರಸ್ಪರ ಮೇಲಾಟ ನಡೆದಾಗ ಮಾತ್ರ ಇವರ ಹೂರಣ ಹೊರಬರುತ್ತದೆ. ಅದರಲ್ಲೂ ಆಡಳಿತ ಪಕ್ಷದ ರಾಜಕಾರಣಿಗಳ ವಿರುದ್ಧ ತನಿಖೆ ನಡೆಯಬೇಕಾದರೆ ಅದೊಂದು ಭಗೀರಥ ಪ್ರಯತ್ನ; ಫಲಿಸಿದರೆ ಹಿಮಾಲಯವನ್ನೇರಿದ ಯಶಸ್ಸು. ಅಪರೂಪಕ್ಕೆ ಜನರು ಸಿಡಿದೆದ್ದಾಗ ಮಾತ್ರ ಸರಕಾರವು ವಿಶೇಷ ತನಿಖೆಗೆ ಅಂತಹ ಪ್ರಕರಣಗಳನ್ನು ಒಳಪಡಿಸುತ್ತದೆಯಾದರೂ ಕಾಲಾಂತರದಲ್ಲಿ ಅವು ಪೊಳ್ಳು ಗೋಳಗಳಾಗಿ ಅಳಿಯುತ್ತವೆ. ನಾಗರಿಕ ಪ್ರಜೆಯೊಬ್ಬ ಭ್ರಷ್ಟಾಚಾರದ ಆರೋಪಗಳನ್ನು ದೊಡ್ಡವರ ಮೇಲೆ ಮಾಡಿ ಯಶಸ್ಸು ಪಡೆದ ಉದಾಹರಣೆಗಳೆಷ್ಟಿವೆ? ತೀರ ಕಡಿಮೆ. ದೊಡ್ಡ ವಕೀಲರನ್ನು ನಿಯೋಜಿಸಿಕೊಳ್ಳುವುದಕ್ಕೆ ಜನಸಾಮಾನ್ಯರಿಗೆ ಸಾಧ್ಯವಿಲ್ಲ.

ಶ್ರೀಮಂತರು ಮತ್ತು ದೊಡ್ಡ ರಾಜಕಾರಣಿಗಳು ಮಾತ್ರವೇ ನಿಯೋಜಿಸಬಲ್ಲ ಹಿರಿಯ, ಖ್ಯಾತ, ಜನಪ್ರಿಯ ವಕೀಲರು ಪ್ರತಿನಿಧಿಸುವ ಪ್ರಕರಣಗಳಲ್ಲಿ ನಮ್ಮ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳು ಅಲ್ಲಲ್ಲೇ ತಡೆಯಾಜ್ಞೆ ನೀಡಿ ಅವುಗಳು ವಿಳಂಬವಾಗಿ ವಿಲೆಯಾಗುವುದಕ್ಕೆ ಅವಕಾಶ ಮಾಡಿಕೊಡುತ್ತವೆ. ಪಿ.ವಿ. ನರಸಿಂಹ ರಾವ್ ವಿರುದ್ಧದ ಪ್ರಕರಣಗಳು ಇತ್ಯರ್ಥವಾಗುವ ಮೊದಲೇ ಅವರು ಗತಿಸಿದರು. ಜಯಲಲಿತಾ ಕೂಡಾ ಹೀಗೆಯೇ ಅಂತಿಮ ತೀರ್ಪಿನಿಂದ ತಪ್ಪಿಸಿಕೊಂಡರು. ಕಾನೂನಿನ ದೃಷ್ಟಿಯಲ್ಲಿ ಇವುಗಳಲ್ಲಿ ತಪ್ಪಿರುವುದಿಲ್ಲ; ಎಲ್ಲರೂ ಸಮಾನರೇ. ಆದರೆ ಸಮಾನರಾಗುವ ಅವಕಾಶ ಎಷ್ಟು ಜನರಿಗಿದೆ?

ಕಳೆದ ಏಳು ದಶಕಗಳ ಭಾರತೀಯ ರಾಜಕೀಯ ಚರಿತ್ರೆಯನ್ನು ಗಮನಿಸಿದರೆ ಅಭಿವೃದ್ಧಿಯ ಹೆಸರಿನಲ್ಲಿ ಹೊಸ ತಂತ್ರಜ್ಞಾನವೆಷ್ಟೇ ಬಂದಿದ್ದರೂ ಮನುಷ್ಯನ ಮೂಲಭೂತ ಕ್ರೌರ್ಯವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲವೆಂಬುದು ಗೊತ್ತಾಗುತ್ತದೆ. ಅಧಿಕಾರಕ್ಕೆ ಬರಲು ಯಾವ ಮಾರ್ಗವನ್ನು ಬೇಕಾದರೂ ಅನುಸರಿಸಬಹುದು ಎಂಬುದು ಬಹಿರಂಗವಾಗಿ ನಡೆಯುವ ಮತ್ತು ಆಂತರಂಗಿಕವಾಗಿ ಬಹುಮತದ ಜನರು ಒಪ್ಪಿಕೊಂಡ ವಿಚಾರಗಳಂತಿವೆ. ಮತಗಳಿಕೆಗೆ ನಡೆಯುವ ಹಿಂಸೆಯನ್ನು ಗಮನಿಸಿದರೆ ನಾಗರಿಕರು ದೂರ ಉಳಿಯುವುದು ಮಾತ್ರವಲ್ಲ, ಎಲ್ಲಾದರೂ ದೂರ ಜನರಹಿತ ಜಗತ್ತಿಗೆ ಓಡಿಹೋಗಬೇಕು. ಸ್ವಾತಂತ್ರ್ಯ ಹೋರಾಟದಲ್ಲಿಯೂ ಸಾಕಷ್ಟು ಹಿಂಸೆ ನಡೆದಿದೆ, ನಿಜ. ಆದರೆ ಇವೆಲ್ಲವೂ ಒಂದು ಶಾಂತಿಯುತ, ನೆಮ್ಮದಿಯ ಬಾಳ್ವೆಯನ್ನು ಬಯಸಿ ನಡೆಸಿದ ಹೋರಾಟದ ಹಾದಿಯ ಧೂಳಿನಲ್ಲಿ ನಿಧಾನಕ್ಕೆ ನೆಲದಲ್ಲಿ ನೆಲೆನಿಂತ ಗುರುತುಕಲ್ಲುಗಳು.

ಸ್ವಾತಂತ್ರ್ಯ ಸಿಕ್ಕಾಗ ರಾಜಕೀಯವಾಗಿ ಒಂದಾದ ದೇಶವೊಂದು ಮೂರು ತುಂಡುಗಳಾಗಿ, ಎರಡು ದೇಶಗಳಾಗಿ ದಕ್ಕಿದವು. ಈಡುಗಾಯಿಯನ್ನು ನೆಲಕ್ಕೆ ಅಪ್ಪಳಿಸಿದಾಗ ಅದು ಹೋಳುಗಳಾಗಿ, ಚೂರುಗಳಾಗಿ ಚಲ್ಲಾಪಿಲ್ಲಿ ಬಿದ್ದರೂ ಅವನ್ನು ಪ್ರಸಾದ ರೂಪವಾಗಿ ಭಕ್ತರು ಹೆಕ್ಕಿಕೊಳ್ಳುವಂತೆ ಭಾರತೀಯರು ಮತ್ತು ಪಾಕಿಸ್ತಾನಿಯರು ತಮಗೆ ಬಂದ ಈ ಒಡಕಿನ ಪಾಲನ್ನು ಪಂಚಾಮೃತವೆಂದು ಸ್ವೀಕರಿಸಿದರು. ನಾಯಕರೆನಿಸಿಕೊಳ್ಳುವ ಮೋಹ, ಅಧಿಕಾರದ ದಾಹ ನೇಪಥ್ಯದಲ್ಲಿ ಕೆಲಸ ಮಾಡಿತಾದರೂ ಸೆರೆಮನೆಯಲ್ಲಿ ಬಹುಕಾಲ ಬದುಕಿದವನಿಗೆ ಬಿಡುಗಡೆಯ ಭಾಗ್ಯ ಬಂದಾಗ ಅದು ತಾತ್ಕಾಲಿಕವೋ ಶಾಶ್ವತವೋ ಎಂಬ ಪರಿಗಣನೆಯಿಲ್ಲದೆ ಆತ ಹೊರಗಿನ ಜಗತ್ತಿಗೆ, ಹೊಸಬೆಳಕಿಗೆ ಹಾತೊರೆದು ಹೋಗುವ ಹಾಗೆ ಈ ಎರಡೂ ದೇಶಗಳ ಜನರು ಉತ್ಸಾಹದಲ್ಲಿ ತೇಲಿದರು; ಮುಳುಗಿದರು. ಭಾರತ ವಿಭಜನೆಯೆಂಬ (ನನ್ನ ದೃಷ್ಟಿಯಲ್ಲಿ ಅಲ್ಲಿಯ ತನಕ ಹತ್ತಾರು ರಾಜರ, ನವಾಬರ ಪಾರುಪತ್ಯದೊಳಗಿದ್ದ ವಿವಿಧ ಸಂಸ್ಥಾನಗಳ ಭೂಭಾಗಗಳು ಮಿಶ್ರಗೊಂಡು ಹೊಸ ಸಂಯುಕ್ತರೂಪವನ್ನು ತಾಳಿ ‘ಭಾರತ’ ಎಂಬುದು ಉಗಮವಾದದ್ದೇ ಸ್ವಾತಂತ್ರ್ಯದೊಂದಿಗೆ!) ಪ್ರಹಸನಕ್ಕೆ ಸಾಕ್ಷಿಯಾಗಿ ಅಸಂಖ್ಯ ಜನರ ಸಾವುನೋವಿಗೆ ಕಾರಣರಾದಾಗಲೂ ಅದನ್ನು ಮುಂದಿನ ಸುಖೀ ಬದುಕಿಗೆ ಅನಿವಾರ್ಯವಾದ ಹೆರಿಗೆಯ ನೋವಿನಂತೆ ತಾಳಿಕೊಳ್ಳಲಾಯಿತು.

ಗಾಂಧಿ ಹತ್ಯೆ ಸ್ವತಂತ್ರ ಭಾರತದ ಹಿಂಸೆಯ ಮೊದಲ ಮೆಟ್ಟಲು. ಅಹಿಂಸೆಯ ಮಾರ್ಗ ಹಿಡಿದ ಮಹಾತ್ಮ ಹಿಂಸೆಗೆ ಗುರಿಯಾದದ್ದು ಒಂದು ವ್ಯಂಗ್ಯ. ಗಾಂಧಿಹತ್ಯೆ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದಿದ್ದರೆ ಅದರ ಹೊಣೆ ಬ್ರಿಟಿಷ್ ಆಡಳಿತದ್ದಾಗಿರುತ್ತಿತ್ತು. ಆದರೆ ರಾಷ್ಟ್ರಪಿತನ ಅಂತ್ಯವನ್ನು ಈ ದೇಶದ ಪ್ರಜೆಯೊಬ್ಬ ಅದರಲ್ಲೂ ಒಬ್ಬ ಹಿಂದೂವೇ ಮಾಡಿದ್ದು, ವಿಭಜನೆಯ ನಂತರದ ಸ್ವತಂತ್ರ ಭಾರತದ ಮೊದಲ ದುರಂತ ವಾದ ಈ ಘಟನೆ ಭಾರತದ ಅಲ್ಲಿಯ ವರೆಗಿನ ಅಥವಾ ಆಗ ಪ್ರಸ್ತಾವಿಸಲಾದ ‘ವಿವಿಧತೆಯಲ್ಲಿ ಏಕತೆ’ಯೆಂಬ ಕರೆಯು ಆಂತರ್ಯದಲ್ಲಿ ‘ಏಕತೆಯಲ್ಲಿ ವಿವಿಧತೆ’ಯಾಗಿ ಪರಿವರ್ತನೆಯಾದದ್ದು, ಇತಿಹಾಸದ ಅಪಹಾಸ್ಯಗಳಲ್ಲೊಂದು.

ಇಷ್ಟಾದರೂ ಗಾಂಧಿ ಹತ್ಯೆ ಒಂದು ಹಿಂಸಾಪರ್ವವೆಂದು ದೇಶಕ್ಕೆ ಅನ್ನಿಸಲಿಲ್ಲ; ಬದಲಿಗೆ ಶಾಂತಿಯ ಶ್ವೇತಭಿತ್ತಿಯ ಮೇಲೆ ಹಚ್ಚಿದ ಕುಂಕುಮದ ಬೊಟ್ಟಿನಂತೆ ಎಲ್ಲರಿಗೆ ಎಚ್ಚರಿಕೆ ನೀಡುವ ಸಾಧನವಾಯಿತೆಂದೇ ಬಗೆಯಲಾಯಿತು. ದೇಶದ ಬಹುತ್ವಕ್ಕೆ ಮಹಾತ್ಮರು ತಮ್ಮ ಹುತಾತ್ಮತೆಯಿಂದ ಒಂದು ನವನವೋನ್ಮೇಶ ದಾರಿಯನ್ನು ತೋರಿದರೆಂದು ತಿಳಿಯಲಾಯಿತು. ಸುಮಾರಾಗಿ ನೆಹರು ಯುಗದಲ್ಲೂ ದೇಶದ ಅನ್ಯಾನ್ಯ ಕಡೆಗಳಲ್ಲಿ ಹಿಂಸೆ ನಡೆಯುತ್ತಿತ್ತು. ಆದರೆ ಅಭಿವೃದ್ಧಿಯ ಪಥದ ಹುಮ್ಮಸ್ಸಿನಲ್ಲಿದ್ದ ದೇಶಕ್ಕೆ ಕೈಗಾರಿಕೆಗಳು ಬೆಳೆಯಬೇಕಾಗಿತ್ತಾದ್ದರಿಂದ ತೀರ ಬಡವರನ್ನು ಗಮನಿಸುವ ವ್ಯವಧಾನವಿರಲಿಲ್ಲ. ಹಳ್ಳಿಗಳು ದಿಳ್ಳಿಗೆ ಸಮೀಕರಣವಾಗಿ ಉಳಿದವಷ್ಟೇ ಹೊರತು ಬೆಳೆಯಲಿಲ್ಲ. ಅಜ್ಞಾನ, ಅನಕ್ಷರತೆ, ಅನಾರೋಗ್ಯ, ಇವು ಜನರನ್ನು ಅದರಲ್ಲೂ ಬಡವರನ್ನು ಕತ್ತಲಿನಲ್ಲಿಟ್ಟು ಆಗಾಗ ಮಿಂಚು ಸಂಚರಿಸಿದಂತೆ ಕಾಣುವ ನಾಗರಿಕ, ರಾಜಕೀಯ ವಿದ್ಯಮಾನಗಳು ತಮ್ಮವೇ ಎಂಬಂತೆ ಅವರು ಖುಷಿಪಡಲು ನೆರವಾದವೇ ಹೊರತು ದೇಶದ ಸಮಗ್ರ ಸುಧಾರಣೆಗೆ ಮೆಟ್ಟಲುಗಳನ್ನು ಇಡಲು ವಿಫಲವಾದವು.

ಸಂಶೋಧನೆ ಮತ್ತು ಅಭಿವೃದ್ಧಿ ಇವು ಮಹಾನಗರಗಳಿಂದ ಹೊರಬರಲೇ ಇಲ್ಲ. ನಗರಕ್ಕೆ ವಲಸೆ ಹೋದ ಹಕ್ಕಿಗಳು ಮಾತ್ರ ದೊಡ್ಡ ರೆಕ್ಕೆಗಳನ್ನು ಹೊಂದಿ ಎತ್ತರಕ್ಕೆ ಹಾರಲು ಶಕ್ತವಾದವು. ಲಾಲ್‌ಬಹದೂರ್ ಶಾಸ್ತ್ರಿ ಪ್ರಾಮಾಣಿಕವಾಗಿ ಜೋಡಿಸಿದ ‘ಜೈ ಜವಾನ್, ಜೈ ಕಿಸಾನ್’ ಅರೆತೆರೆದ ಎರಡು ಕಣ್ಣುಗಳಂತೆ ಉಳಿದವು. ಇಷ್ಟಕ್ಕೂ ದೇಶದಲ್ಲಿ ಅಲ್ಲಲ್ಲಿ ಪ್ರಾದೇಶಿಕವಾಗಿಯೋ ಸೈದ್ಧಾಂತಿಕವಾಗಿಯೋ ಬೆಳೆದ ಕೆಲವು ನಾಯಕರ ವಿಜಯಗಳೊಂದಿಗೆ ಸೀಮಿತ ವಾದಗಳ ಭೂಮಿಕೆಯ ಹೊರತಾಗಿ ಹೊರತಾದ ಕಾಂಗ್ರೆಸಿಗೆ ಪರ್ಯಾಯವಾದ ರಾಜಕೀಯ ಎದುರಾಳಿಗಳು ಇರಲೇ ಇಲ್ಲ. ಆದ್ದರಿಂದ ಯೋಜಿತ ಹಿಂಸೆಯ ಪ್ರಶ್ನೆ ಉದ್ಭವಿಸಿರಲಿಲ್ಲ. ಆದರೆ ಭಿನ್ನತೆಯೆಂಬುದು, ವಿರೋಧವೆಂಬುದು ಒಂದು ಧೈರ್ಯರಾಜಕಾರಣವಾಗಿ ಈ ಮಣ್ಣಿನ ಒಡಲಲ್ಲಿ ಸದಾ ಒರತೆಯೊತ್ತುತ್ತಲೇ ಇತ್ತು. ಇವೆಲ್ಲ ಒಂದು ಬಾಳೆ ಗಿಡವಾಗಿ ಬೆಳೆಯದೆ ಹತ್ತಾರು ಹಿಂಡುಹಿಳ್ಳೆಗಳಾಗಿ ಗುಂಪುಗೂಡಿದ್ದರಿಂದ ದೇಶದಲ್ಲಿ ಪರ್ಯಾಯ ರಾಜಕಾರಣಕ್ಕೆ ಒತ್ತು ಸಿಗಲಿಲ್ಲ.

ಮುಖ್ಯವಾಗಿ ಯಾವುದನ್ನು ವಿರೋಧ ಪಕ್ಷಗಳು ಹೇಳುತ್ತಿದ್ದವೋ ಅವುಗಳ ಕಾರ್ಯಕಾರಿಣೀ ಸೂತ್ರವು ಆಡಳಿತ ಪಕ್ಷದಲ್ಲಿ ಆಗಲೇ ಮನೆಮಾಡಿತ್ತಾದ್ದರಿಂದ ವಿರೋಧ ಪಕ್ಷಗಳು ಜನಮನವನ್ನು ಗೆಲ್ಲವುದು ಕಷ್ಟವಾಯಿತು. ಆದರೂ ಹಿಂಸಾಚಾರ ರಾಜಕೀಯ ಪಕ್ಷಗಳ ನೀತಿಸಂಹಿತೆಯೊಳಗಿರಲಿಲ್ಲ. 1960-70ರ ದಶಕದಲ್ಲಿ ನಕ್ಸಲ್ ಚಳವಳಿ ಬಂಗಾಳ ಮತ್ತು ನೆರೆಕರೆಯ ಪ್ರದೇಶಗಳಲ್ಲಿ ಭದ್ರವಾಗಿ ಬೇರೂರಿದ್ದರಿಂದ ಅದನ್ನು ಕಿತ್ತೆಸೆಯಲು ಸರಕಾರ ಹಿಂಸಾತ್ಮಕ ದಮನ ನೀತಿಯನ್ನು ಅನುಸರಿಸಿತ್ತು. ಹಾಗೆಂದು ಕಾಶ್ಮೀರ ಹಲವಾರು ದೊಡ್ಡ-ಸಣ್ಣ ಯುದ್ಧಗಳಿಗೆ ಕಾರಣವಾದರೂ ತನ್ನ ಪ್ರಾಕೃತಿಕ ಸೌಂದರ್ಯಕ್ಕೆ, ಪ್ರವಾಸದಾಕರ್ಷಣೆಗೆ ಆತಂಕ ತರುವಷ್ಟು ಮಾರಣ ಭೂಮಿಯಾಗಲಿಲ್ಲ.

ಇಂದಿರಾ ಸಾವಿನೊಂದಿಗೆ ಆರಂಭವಾದ ಸಮೂಹ ಹಿಂಸೆಯ ಯುಗ ರಾಜೀವ್ ಹತ್ಯೆ, ಗೋಧ್ರಾ, ಕಾಶ್ಮೀರ ಮತ್ತು ವರ್ತಮಾನದ ಅಮಾನವೀಯ (ಪಾಪದ ಪಶುವಾದ ದನದ ಹೆಸರಿನಲ್ಲೂ ನಡೆಯುವ!) ಅನೇಕ ಹಿಂಸಾ ಕೃತ್ಯಗಳಿಗೆ ಹೆದ್ದಾರಿಯನ್ನು ನಿರ್ಮಿಸಿಕೊಟ್ಟಿದೆ. ಹಾಲು ಕುಡಿಯುವ ಹುಡುಗರು ದೊಡ್ಡವರಾಗುತ್ತಿದ್ದಂತೆ ದೇಶದ ಸತ್ಪ್ರಜೆಗಳಾಗುವ ಬದಲು, ವಿವೇಕಿಗಳಾಗುವ ಬದಲು, ರಕ್ತ ಕುಡಿಯಲು ಬಯಸುತ್ತಾರೇಕೆ ಎಂಬುದು ಚಿದಂಬರ ರಹಸ್ಯ. ಮನುಷ್ಯನು ಸಂಸ್ಕೃತಿಯನ್ನು ಅರಸಿಹೋಗುವ ಕಾಲವನ್ನು ದಾಟಿ, ಸುಸಂಸ್ಕೃತನಾಗುವ ಹಾದಿಯನ್ನು ತೊರೆದು, ವಿಕೃತನಾಗುವ ಕಾಲದಲ್ಲಿದ್ದೇವೆಯೋ ಎಂಬ ಸಂಶಯ ಬರುತ್ತಿದೆ. ಇದರಲ್ಲಿ ಜಾತಿ-ಮತ-ಧರ್ಮ-ಭಾಷೆ-ಪಂಗಡ ಇವುಗಳ ವ್ಯತ್ಯಾಸವೇ ಗೋಚರಿಸುವುದಿಲ್ಲ. ನಾನು ಸರಿ; ಮತ್ತು ನಾನು ಮಾತ್ರ ಸರಿ ಎಂಬ ಧೋರಣೆಯೊಂದಿಗೆ ನಡೆಯುವ ಈ ಕುಕೃತ್ಯಗಳು ಅಂಗೈ ಹುಣ್ಣುಗಳಾದ್ದರಿಂದ ಇವಕ್ಕೆ ನಿದರ್ಶನಗಳು ಬೇಕಾಗಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)