varthabharthi

ನಿಮ್ಮ ಅಂಕಣ

ತಮ್ಮನ್ನು ತಾವೇ ತನಿಖೆಗೆ ಒಳಪಡಿಸಿಕೊಳ್ಳಲಿ

ವಾರ್ತಾ ಭಾರತಿ : 11 Aug, 2017
-ಕೆ.ಎಸ್.ನಾಗರಾಜ್, ಹನುಮಂತನಗರ, ಬೆಂಗಳೂರು

ಮಾನ್ಯರೆ,

ಕಳೆದ 20 ವರ್ಷಗಳಿಂದ ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಸರಕಾರಗಳಲ್ಲಿ ಅಧಿಕಾರ ಅನುಭವಿಸಿದ ಮತ್ತು ಅನುಭವಿಸುತ್ತಿರುವ ಎಲ್ಲರೂ ಹಾಗೂ ಉನ್ನತ ಮಟ್ಟದ ಸರಕಾರಿ ಹುದ್ದೆಗಳಲ್ಲಿರುವ ಪ್ರಮುಖರು ಮುಂದೆ ಬಂದು ತಾವೇ ತಮ್ಮನ್ನು ಅದಾಯ ತೆರಿಗೆಯ ತನಿಖೆಗೆ ಒಳಪಡಿಸಿಕೊಂಡು ಪ್ರಾಮಾಣಿಕರಾಗಿ ಹೊರ ಬರಲಿ. ಪ್ರಾಮಾಣಿಕತೆಯ ಬಗ್ಗೆ ಮಾತನಾಡುವುದು ಮತ್ತು ಭ್ರಷ್ಟಚಾರದ ವಿರುದ್ಧ ಮಾತನಾಡುವುದು ಒಂದು ರೀತಿಯ ಸೋಗಲಾಡಿತನವಾಗಿದೆ. ಅನೇಕರು ಅನೇಕ ಕಾರಣಗಳಿಂದ ಅಕ್ರಮವಾದಂತಹ ಆಸ್ತಿಗಳನ್ನು ಮಾಡಿದ್ದರೂ ಸಹ ಯಾವುದೇ ರೀತಿಯ ತೊಂದರೆಗೆ ಸಿಲುಕಿರುವುದಿಲ್ಲ. ಯಾವ ಯಾವ ಸರಕಾರಗಳು ಬರುತ್ತದೆಯೋ ಅಂತಹ ಸರಕಾರದ ಪರವಾಗಿ ನಿಲ್ಲುವುದು ಇಲ್ಲದಿದ್ದರೆ, ಆ ಸರಕಾರದಲ್ಲಿ ಪಕ್ಷಾಂತರದ ಮೂಲಕ ಪಾಲುದಾರರಾಗಿರುವುದು ಈ ಮೂಲಕ ತಮ್ಮ ಮೇಲೆ ಯಾವುದೇ ರೀತಿಯ ತನಿಖೆಗಳು ಆಗದ ರೀತಿಯಲ್ಲಿ ಎಚ್ಚರಿಕೆಯಿಂದಲೇ ಸಾರ್ವಜನಿಕ ಬದುಕನ್ನು ನಡೆಸಿಕೊಂಡು ಬಂದಿದ್ದಾರೆ. ಕೆಲವರ ಮೇಲೆ ತನಿಖೆಯಾದ ಮಾತ್ರಕ್ಕೆ ಅವರು ಆರೋಪಿಗಳಾಗಿ ಕಾಣುತ್ತಾರೆ. ಮತ್ತೆ ಕೆಲವರು ಎಷ್ಟೇ ದೋಚಿದ್ದರೂ ಸಹ ಪ್ರಾಮಾಣಿಕರಂತೆ ಪೋಸು ಕೊಡುತ್ತಾರೆ. ಯಾವ ರಾಜಕಾರಣಿಯ ಮನೆ ಚಿಕ್ಕದಾಗಿದೆ, ಯಾವ ರಾಜಕಾರಣಿ ತಾನು ಓಡಾಡುವ ವಾಹನವನ್ನು ಚಿಕ್ಕದಾಗಿ ಹೊಂದಿದ್ದಾನೆ, ಯಾವ ರಾಜಕಾರಣಿ ತೋಟವನ್ನು ಮಾಡದೆ ಅಥವಾ ಬಂಗಲೆಗಳನ್ನು ಹೊಂದಿರದೆ ಇದ್ದಾರೆ? ಪ್ರತ್ಯಕ್ಷವಾಗಿ ಪರೋಕ್ಷವಾಗಿ ಅನೇಕ ರೀತಿಯ ತಮ್ಮ ವ್ಯಾಪಾರ ವ್ಯವಹಾರಗಳಿಗೆ ತಮ್ಮ ಅಧಿಕಾರದ ಪ್ರಭಾವವನ್ನು ಬಳಸಿಲ್ಲವೇ?, ಟ್ರಸ್ಟ್‌ಗಳನ್ನು ಸ್ಥಾಪಿಸಿಕೊಂಡು ತಾವು ದೋಚುವ ಹಣವನ್ನು ಇದರ ಹೆಸರಿನಲ್ಲಿ ಜೋಪಾನ ಮಾಡಿಕೊಂಡಿಲ್ಲವೇ? ಹೇಳುವುದಕ್ಕೂ ಮತ್ತು ಬದುಕುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ರಾಜಕಾರಣಿಗಳಲ್ಲಿ ಹೇಳಿದಂತೆ ಬದುಕಿದವರು, ಬದುಕಿದಂತೆ ಹೇಳಿದವರು ಈ ಭೂಮಿಯ ಮೇಲೆ ಸದ್ಯದಲ್ಲಂತೂ ಭೂತಕನ್ನಡಿ ಇಟ್ಟು ಹುಡುಕಬೇಕಾಗಿದೆ.

 

Comments (Click here to Expand)