ಗಲ್ಫ್ ಸುದ್ದಿ

ದುಬೈ: ಭಾರತದ ಸ್ವಾತಂತ್ರ್ಯೋತ್ಸವಕ್ಕೆ 25 ಲಕ್ಷ ರೂ.ಗಳ 'ದಂಗಲ್' ಕೇಕ್ ತಯಾರಿಸಿದ ಬೇಕರಿ

ವಾರ್ತಾ ಭಾರತಿ : 11 Aug, 2017

ದುಬೈ,ಆ.11 : ದುಬೈಯಲ್ಲಿನ ಬೇಕರಿಯೊಂದು ತಾನು ಭಾರತದ 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ  ವಿಶ್ವದ ಅತ್ಯಂತ ದುಬಾರಿ ಕೇಕ್ ತಯಾರಿಸಿದ್ದಾಗಿ ಹೇಳಿಕೊಂಡಿದೆ. ಅಷ್ಟಕ್ಕೂ ಈ ಕೇಕ್ ಹೇಗಿದೆ ಗೊತ್ತೇ? ಇದು ಆಮಿರ್ ಖಾನ್ ಅವರ ಬ್ಲಾಕ್ ಬಸ್ಟರ್ ಚಿತ್ರ `ದಂಗಲ್' ಆಧರಿತವಾಗಿದ್ದು ಕೇಕ್ ನಲ್ಲಿ ಬೃಹದಾಕಾರದ ಆಮಿರ್ ಖಾನ್  ಅವರನ್ನು ರಚಿಸಲಾಗಿದೆ. ದಂಗಲ್ ಚಿತ್ರದಲ್ಲಿ ಅವರು ಕುಸ್ತಿಪಟು ಮಹಾವೀರ್ ಫೋಗಟ್ ಆಗಿ ಕಾಣಿಸಿಕೊಂಡಿದ್ದರು.

ಒಟ್ಟು 54 ಕೆಜಿ ತೂಗುವ ಈ ಕೇಕ್ ಅನ್ನು ದುಬೈ ನಗರದ ಬ್ರಾಡ್ ವೇ ಬೇಕರಿ ತಯಾರಿಸಿದ್ದು ಸುಮಾರು ಒಂದು ತಿಂಗಳುಗಳ ಕಾಲ, 1200 ಗಂಟೆ ಅವಧಿಯಲ್ಲಿ  40,000 ಡಾಲರ್ (ಸುಮಾರು ರೂ 25 ಲಕ್ಷ) ವೆಚ್ಚದಲ್ಲಿ  ಕೇಕ್ ತಯಾರಿಸಲಾಗಿದೆ.

ಈ ಕೇಕ್ ತಯಾರಿಸಲು  ಹೇಳಿದ ಗ್ರಾಹಕ ಕೇಕ್ ನಲ್ಲಿ ಚಿನ್ನ ಕೂಡ ಉಪಯೋಗಿಸಲು ಹೇಳಿದ್ದರಿಂದ  ಪ್ರತಿಯೊಂದು ಪದಕಕ್ಕೂ 75 ಗ್ರಾಂ ತೂಕದ ಖಾದ್ಯದ ಚಿನ್ನದ ಲೇಪನ ಮಾಡಲಾಗಿದೆ, ಎಂದು ಬ್ರಾಡ್ ವೇ ಬೇಕರಿ ತನ್ನ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಹೇಳಿಕೊಂಡಿದೆ.  ಕೇಕ್ ನಲ್ಲಿ ಮಹಾವೀರ್ ಫೋಗಟ್ ಪುತ್ರಿಯರಾದ  ಒಲಿಂಪಿಕ್ ಪದಕ ವಿಜೇತರಾದ ಗೀತಾ ಮತ್ತು ಬಬಿತಾ  ತಾತ್ಕಾಲಿಕ ಅಖಾಡವೊಂದರಲ್ಲಿ ಕುಸ್ತಿ  ಅಭ್ಯಸಿಸುತ್ತಿರುವುದನ್ನೂ ತೋರಿಸಲಾಗಿದೆ.

ಕೇಕ್ ಸಂಪೂರ್ಣವಾಗಿ ತಿನ್ನಲು ಯೋಗ್ಯವಾಗಿದ್ದು ಸಿಗ್ನೇಚರ್ ಚಾಕೊಲೇಟ್ ಸ್ಪಾಂಜ್, ಬೆಲ್ಜಿಯನ್ ಚಾಕೊಲೇಟ್, ಡೆಮೆರೆರಾ ಶುಗರ್ ಮತ್ತು ಎಡಿಬಲ್ ಗೋಲ್ಡ್ ಉಪಯೋಗಿಸಿ ತಯಾರಿಸಲಾಗಿದೆ. ಸುಮಾರು 240 ಅತಿಥಿಗಳಿಗೆ ಈ ಸ್ವಾದಿಷ್ಟ ಕೇಕ್ ನೀಡಬಹುದಾಗಿದೆ ಎಂದು ಅದನ್ನು ತಯಾರಿಸಿದವರು ಹೇಳುತ್ತಾರೆ.

 

Comments (Click here to Expand)