varthabharthi

ನಿಮ್ಮ ಅಂಕಣ

ಇಂದು ಗ್ರಂಥಪಾಲಕರ ದಿನ

ಗ್ರಂಥ ವರ್ಗೀಕರಣದ ಪಿತಾಮಹ -ಡಾ.ಎಸ್.ಆರ್.ರಂಗನಾಥ್

ವಾರ್ತಾ ಭಾರತಿ : 12 Aug, 2017
ಬಾಲಾಜಿ ಟಿ.ಆರ್., ಬೆಂಗಳೂರು

ಇಂದು ನಾವೆಲ್ಲ ‘ಗ್ರಂಥಪಾಲಕರ ದಿನ’ವನ್ನು ಅಚರಿಸುತ್ತೇವೆ. ಗ್ರಂಥಪಾಲಕರಿಗೆ ಈ ದಿನ ಮಹತ್ವದ ದಿನ. ಏಕೆಂದರೆ, ‘ಗ್ರಂಥಾಲಯದ ಪಿತಾಮಹ’ ಎನಿಸಿರುವ ಡಾ. ಎಸ್. ಆರ್. ರಂಗನಾಥ್ ಇವರು ಹುಟ್ಟಿದ ದಿನ ಇಂದು. ಗ್ರಂಥಾಲಯದಲ್ಲಿ ನಾವು ಓದುವ ಪುಸ್ತಕಗಳನ್ನು, ನಮಗೆ ಕೈಗೆಟಕುವ ಹಾಗೆ ಅವುಗಳ ಹೆಸರು, ಅವುಗಳನ್ನು ರಚಿಸಿದ ಲೇಖಕರ ಹೆಸರಿನಿಂದ ವರ್ಗೀಕರಿಸಿ, ಓದುಗರಿಗೆ ಅವುಗಳ ಸದುಪಯೋಗ ಪಡೆಯಲು ನೆರವಾದವರು ಎಸ್ ಅರ್ ರಂಗನಾಥ್‌ನವರು. ಪುಸ್ತಕ ಪ್ರೇಮಿಗಳು ಓದಲೆಂದು ಗ್ರಂಥಾಲಯಗಳಿಗೆ ಹೋದರೆ ಅಲ್ಲಿ ರ್ಯಾಕುಗಳಿಂದ ಪುಸ್ತಕ ತೆಗೆದು ನಾವು ಬಳಸಲು ನಮಗೆ ನೆರವಾಗುವವರು ಗ್ರಂಥಪಾಲಕರು.

ಆದರೆ ಅವರು ಅಷ್ಟು ಬೇಗ ನಾವು ಕೇಳಿದ ಪುಸ್ತಕಗಳನ್ನು ನಮಗೆ ಒದಗಿಸುತ್ತಾರೆ ಎಂಬ ಕುತೂಹಲವಿದೆಯಲ್ಲವೇ? ಅವರು ಶೀಘ್ರವಾಗಿ ಓದುಗರಿಗೆ ಹೇಗೆ ಪುಸ್ತಕ ಒದಗಿಸುತ್ತಾರೆಂದರೆ, ಅದಕ್ಕೆ ಅವರು ಪುಸ್ತಕಗಳಿಗೆ ಒಂದು ಸಂಖ್ಯೆಯನ್ನು ಕೊಟ್ಟಿರುತ್ತಾರೆ, ಅದನ್ನು ಗ್ರಂಥಸೂಚಿ ಮತ್ತು ವಿಷಯವಾರು ವಿಂಗಡಿಸಿರುತ್ತಾರೆ. ಪ್ರತೀ ಪುಸ್ತಕಗಳಿಗೂ ಒಂದು ನಂಬರ್ ಇರುತ್ತದೆ. ಅದರಿಂದ ಅವರು ನಮಗೆ ಬೇಕಾದ ಪುಸ್ತಕ ಸಲೀಸಾಗಿ ಹುಡುಕಿ ಕೊಡುತ್ತಾರೆ. ಈ ವಿಷಯವಾರು ವರ್ಗೀಕರಣ, ಅದರ ನಂಬರ್‌ಗಳನ್ನು ಜಗತ್ತಿಗೆ ಪರಿಚಯಿಸಿದವರು ಡಾ. ಎಸ್. ಆರ್. ರಂಗನಾಥ್‌ರವರು. ನಮ್ಮ ದೇಶ ಮಾತ್ರವಲ್ಲ ವಿದೇಶಗಳ ಗ್ರಂಥಾಲಯಗಳಲ್ಲಿ ಕೂಡ ಇವರ ತತ್ವವನ್ನು ಪಾಲಿಸಿ, ಅದರಂತೆ ಪುಸ್ತಕಗಳನ್ನು ವರ್ಗೀಕರಿಸಿದ್ದಾರೆ.

ಇದಕ್ಕೆ ಡಾ. ಎಸ್. ಆರ್. ರಂಗನಾಥ್‌ರವರಿಗೆ ಪುಸ್ತಕ ಪ್ರೇಮಿಗಳೆಲ್ಲ ಆಭಾರಿಗಳಾಗಬೇಕಾಗಿದೆ. ಡಾ. ಎಸ್. ಆರ್. ರಂಗನಾಥ್‌ರವರು ಅಗಸ್ಟ್ 9ರಂದು ಹುಟ್ಟಿದ್ದರೂ ಅವರನ್ನು ಶಾಲೆಗೆ ಸೇರಿಸುವಾಗ 12 ಎಂದು ಬರೆಸಿದ್ದರಿಂದ ಅವರ ಜನ್ಮ ದಿನಾಂಕ ಅಗಸ್ಟ್ 12ರಂದೇ ಅಚರಣೆಗೆ ಬಂತು. ಅವರು ಸಿದ್ಧ ಪಡಿಸಿದ ಪಂಚಸೂತ್ರಗಳು ಗ್ರಂಥಾಲಯಗಳ ಜೀವನಾಡಿಯಾಗಿದ್ದು, ಗ್ರಂಥಪಾಲಕರಿಗೆ ವರದಾನವಾಗಿದೆ. ಎಲ್ಲ ಗ್ರಂಥಾಲಯದಲ್ಲಿಯೂ ಇದನ್ನು ಪ್ರದರ್ಶಿಸಿರುತ್ತಾರೆ. ಇವುಗಳು:

1. ಪುಸ್ತಕಗಳು ಸದುಪಯೋಗದ ಓದಿಗಾಗಿ ಇವೆ.

2. ಪ್ರತೀ ಪುಸ್ತಕಕ್ಕೂ ಒಬ್ಬ ಓದುಗನಿದ್ದಾನೆ.

3. ಪ್ರತೀ ಓದುಗನಿಗೂ ಒಂದು ಪುಸ್ತಕವಿದೆ.

4 ಓದುಗನ ಸಮಯದ ಉಳಿತಾಯದ ಅಗತ್ಯವಿದೆ.

5. ಗ್ರಂಥಾಲಯ ಒಂದು ಸಂಘಟಿತ ಕ್ಷೇತ್ರ ಅಥವಾ ಕೇಂದ್ರವಾಗಿದೆ ಇಂತಹ ಸೂತ್ರಗಳನ್ನು ಜಗತ್ತಿಗೆ ನೀಡಿದ ಮಹನೀಯರ ನೆನೆಯುವುದು ಪುಸ್ತಕ ಪ್ರೇಮಿಗಳ ಮಹತ್ವದ ಕೆಲಸವಲ್ಲವೆ?

ಜನನ, ಸಾಧನೆ:

ತಂಜಾವೂರು ಜಿಲ್ಲೆಯ ಶೀಯಾಳಿಯಲ್ಲಿ 1892 ಅಗಸ್ಟ್ 9ರಂದು ರಾಮಾನುಜ ಅಯ್ಯರ್ ಮತ್ತು ಸೀತಾಲಕ್ಷ್ಮೀಯವರ ಸುಪುತ್ರರಾಗಿ ಜನಿಸಿದ ಡಾ. ಎಸ್. ಆರ್. ರಂಗನಾಥ್, 1913ರಲ್ಲಿ ಬಿ. ಎ. ಪದವಿ ಮುಗಿಸಿ, ನಂತರ ಗಣಿತವನ್ನು ಐಚ್ಚಿಕ ವಿಷಯವಾಗಿ ಅಯ್ಕೆ ಮಾಡಿ ಎಂ.ಎ. ಪದವಿ ಪಡೆದರು. 1917ರಲ್ಲಿ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ, 1921ರಲ್ಲಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಗಣಿತ ಶಾಸ್ತ್ರದ ಸಹಾಯಕ ಉಪನ್ಯಾಸಕರಾಗಿ ಕೆಲಸ ಮಾಡಿದರು. 1924ರಲ್ಲಿ ಮದ್ರಾಸಿನ ವಿಶ್ವವಿದ್ಯಾನಿಲಯದ ಗ್ರಂಥಾಲಯದ ಗ್ರಂಥಪಾಲಕ ಹುದ್ದೆಗೆ ಕರೆ ಬಂದು ಅದನ್ನು ವಹಿಸಿಕೊಂಡರು.

ಮುಂದೆ ಇವರು ಹೆಚ್ಚಿನ ತರಬೇತಿ ಪಡೆಯಲು ಲಂಡನ್‌ಗೆ ಹೋದರು. ಅಲ್ಲಿ ಗ್ರಂಥಗಳ ವರ್ಗೀಕರಣ, ಅವುಗಳ ಪದ್ಧತಿಯಲ್ಲಿದ್ದ ಲೋಪದೋಷಗಳ ಬಗ್ಗೆ ಅಧ್ಯಯನ ನಡೆಸಿ ಅವುಗಳ ನಿವಾರಣೆಗೆ ‘ದ್ವಿಬಿಂದು’ ವರ್ಗೀಕರಣ ಪದ್ಧತಿಯನ್ನು ಅನುಷ್ಟಾನಕ್ಕೆ ತಂದರು. ಈ ತರಬೇತಿಯಿಂದ ಇವರು ಮದ್ರಾಸಿನ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಮೊತ್ತ ವೇದಲು ‘ಮುಕ್ತದ್ವಾರ ಪದ್ಧತಿ’ ಜಾರಿಗೆ ತಂದರು. ಈ ಪದ್ಧತಿಯಿಂದ ಸಾರ್ವಜನಿಕ ಓದುಗರು ತಮ್ಮ ಪುಸ್ತಕಗಳನ್ನು ತಾವೇ ಆರಿಸಿಕೊಳ್ಳುವ ವ್ಯವಸ್ಥೆ ಜಾರಿಗೆ ಬಂತು. 1931-1933ರವರೆಗೆ ಇವರ ಗ್ರಂಥಗಳ ವರ್ಗೀಕರಣ ಸೂತ್ರಗಳ ಪುಸ್ತಕಗಳು ಪ್ರಕಟವಾಗಿ ಜನಮನ್ನಣೆ ಪಡೆದವು. 1944ರವರೆಗೂ ಮದ್ರಾಸಿನ ವಿಶ್ವವಿದ್ಯಾನಿಲಯದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದರು. ಆನಂತರ ಬನರಾಸ್ ಹಿಂದು ವಿಶ್ವವಿದ್ಯಾನಿಲಯದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ 1959ರಲ್ಲಿ ನಿವೃತ್ತಿ ಹೊಂದಿದರು.

ನಿವೃತ್ತಿ ನಂತರ ಕೂಡ ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿದರು. 1964ರಲ್ಲಿ ಪಿಟ್ಸ್ಸ್‌ಬರ್ಗ್ ವಿಶ್ವವಿದ್ಯಾಲಯ ಡಿ ಲಿಟ್ ಪದವಿ ನೀಡಿಗೌರವಿಸಿತು. ಅಮೆರಿಕದ ಮಾರ್ಕಟ್ಟೇನ್ ಸೊಸೈಟಿ ‘ಗ್ರ್ಯಾಂಡ್ ನೈಟ್ ಅಫ್ ದಿ ಪೀಸ್’ ಎಂಬ ಗೌರವ ನೀಡಿದೆ 1935ರಲ್ಲಿ ಭಾರತ ಸರಕಾರ ‘ರಾವ್ ಸಾಹೇಬ್’ ಪ್ರಶಸ್ತಿ, 1952ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಮಾರ್ಗದರ್ಶನ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ವರದಾನವಾಗಿದೆ. ಜಗತ್ತಿನ ಎಲ್ಲ ‘‘ಗ್ರಂಥಾಲಯದ ಸುಧಾರಣೆಗೆ ಶ್ರಮಿಸಿ, ಓದಲು ಬರುವ ಓದುಗ ಮಿತ್ರರಿಗೆ ಸಕಾಲದಲ್ಲಿ ಬೇಕಾದ ಮಾಹಿತಿಯನ್ನು ಓದಗಿಸಲು , ಗ್ರಂಥಪಾಲಕರು ಪ್ರಾಯೋಗಿಕವಾಗಿ ಜಾರಿಗೆ ತರಲು ಅವರು ನೀಡಿದ ಸೂತ್ರಗಳು ನೆರವಾಗಿದೆ. ಹೀಗಾಗಿಯೇ ಇವರು ‘ಗ್ರಂಥಾಲಯದ ಪಿತಾಮಹ’ ಎಂದು ಕರೆಯಲ್ಪಡುತ್ತಾರೆ. ಅಲ್ಲದೆ ಇಂದಿನ ವೇಗದ ಬದುಕಿನ ಈ ಕಂಪ್ಯೂಟರ್ ಯುಗದಲ್ಲಿ ಕೂಡ ಇವರು ಪ್ರಸ್ತುತವೆನಿಸುತ್ತಾರೆ.

 

Comments (Click here to Expand)