ರಾಷ್ಟ್ರೀಯ

ಮದ್ರಸಾಗಳಲ್ಲಿ ವಂದೇಮಾತರಂ ಹಾಡಲು ಆದೇಶಿಸಿದ ಸರ್ಕಾರದ ಸಚಿವರಿಗೇ ವಂದೇ ಮಾತರಂ ಹಾಡಲು ಬರುವುದಿಲ್ಲ!

ವಾರ್ತಾ ಭಾರತಿ : 12 Aug, 2017

ಹೊಸದಿಲ್ಲಿ, ಆ.12; ಇತ್ತೀಚೆಗಷ್ಟೇ ಬೃಹತ್ ಮುಂಬೈ ನಗರ ಪಾಲಿಕೆ ಮುಂಬೈನಾದ್ಯಂತ ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿತ್ತು. ಇದನ್ನು ಬೆಂಬಲಿಸಿದ ಬಿಜೆಪಿ  ಮಹಾರಾಷ್ಟ್ರದಾದ್ಯಂತ ಶಾಲೆಗಳಲ್ಲಿ ವಂದೇಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿ ಆದೇಶಿಸಿತು. ಈ ಎಲ್ಲಾ ಬೆಳವಣಿಗೆಗಳ ನಡುವೆ ನಿನ್ನೆಯಷ್ಟೇ ಆದೇಶ ಹೊರಡಿಸಿದ್ದ ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರ ಮದ್ರಸಾಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವಿಡಿಯೋ ಮಾಡುವಂತೆಯೂ ಹಾಗೂ ವಂದೇಮಾತರಂ ಅನ್ನು ಹಾಡುವಂತೆ ಆದೇಶ ಹೊರಡಿಸಿತ್ತು.

ಆದರೆ ಇಂಡಿಯಾ ಟುಡೆ ಚಾನೆಲ್ ನಡೆಸಿದ ಚರ್ಚಾ ಕಾರ್ಯಕ್ರಮವೊಂದರಲ್ಲಿ ಉತ್ತರ ಪ್ರದೇಶದ ಸಚಿವ ಬಲ್ದೇವ್ ಸಿಂಗ್ ಔಲಖ್ “ವಂದೇ ಮಾತರಂ” ಹಾಡಿನ ಒಂದೂ ಸಾಲನ್ನು ಹಾಡಲಾಗದೆ ತಡವರಿಸಿ, ಮುಜುಗರಕ್ಕೀಡಾದ ಘಟನೆ ನಡೆದಿದೆ,

“ವಂದೇ ಮಾತರಂ” ಹಾಡಿ ಎಂದಾಗ ಮಾತು ಬದಲಾಯಿಸುವ ಔಲಖ್ “ಇಡೀ ದೇಶಕ್ಕೇ ಹಾಡು ಗೊತ್ತಿರಬೇಕು” ಎನ್ನುತ್ತಾರೆ. ಕೇವಲ ನಾಲ್ಕು ಸಾಲುಗಳನ್ನು ಹಾಡಿ ಎಂದು ಹೇಳಿದಾಗ, “ನಾನು ಫೋನ್ ಮಾಡಿ ಹಾಡುತ್ತೇನೆ” ಎಂದು ಸಚಿವ ಔಲಖ್ ಹೇಳುತ್ತಾರೆ. ಈ ಸಂದರ್ಭ “ನಿಮಗೇ ವಂದೇ ಮಾತರಂ ಬರದೇ ಇರುವಾಗ ನೀವು ಬೇರೆಯವರಿಗೆ ಹಾಡು ಹಾಡಲು ಕಡ್ಡಾಯಗೊಳಿಸುತ್ತೀರಿ” ಎಂದು ಆ್ಯಂಕರ್ ರಾಹುಲ್ ಕನ್ವಾಲ್ ಟೀಕಿಸುತ್ತಾರೆ. ಆದರೆ ಡಿಬೇಟ್ ಮುಗಿಯುವವರೆಗೂ ಉತ್ತರ ಪ್ರದೇಶದ ಬಿಜೆಪಿ ಸಚಿವರಿಗೆ ವಂದೇ ಮಾತರಂನ ಒಂದೇ ಒಂದು ಸಾಲನ್ನೂ ಹಾಡಲು ಸಾಧ್ಯವಾಗುವುದೇ ಇಲ್ಲ!.

 

Comments (Click here to Expand)