varthabharthi

ಕರ್ನಾಟಕ

ಶಿಕ್ಷಣ ವಿಶ್ವಮಾನವತೆ, ಜೀವಪರತೆ ಬೆಳೆಸಲಿ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

ವಾರ್ತಾ ಭಾರತಿ : 12 Aug, 2017

ತುಮಕೂರು,ಆ.12: ಶಿಕ್ಷಣ ವಿದ್ಯಾರ್ಥಿಗಳಲ್ಲಿ ವಿಶ್ವಮಾನವತೆ ಹಾಗೂ ಜೀವಪರ ಕಾಳಜಿಯನ್ನು ಬೆಳೆಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ 2017-18ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ರೆಡ್‌ಕ್ರಾಸ್ ಚಟುವಟಿಕೆಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡುತಿದ್ದ ಅವರು, ನಮ್ಮ ಮಕ್ಕಳು ಇನ್ನೊಬ್ಬರ ಕೈಯ ಅಸ್ತ್ರವಾಗದಂತೆ ಎಚ್ಚರ ವಹಿಸಬೇಕು ಎಂದರು.
ಶಿಕ್ಷಣ ಕ್ಷೇತ್ರ ಕೋಮುವಾದಿಗಳ ಮತ್ತು ಲಾಭಕೋರರ ಕೈಯಲ್ಲಿ ನಲುಗುತ್ತಿದೆ. ಮಕ್ಕಳನ್ನು ಸಮಾಜ ಘಾತುಕರನ್ನಾಗಿ ಬೆಳೆಸಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ದೇಶ ಪ್ರೇಮದ ಹೆಸರಿನಲ್ಲಿ ಮನಸುಗಳನ್ನು ಒಡೆಯುವ ಕೆಲಸ ನಡೆಯುತ್ತಿದೆ. ನಮ್ಮ ದೇಶ ನೂರಾರು ಆಕ್ರಮಣಗಳನ್ನು ಎದುರಿಸಿ ಬೆಳೆದು ಬಂದಿದೆ. ಆದರೆ ಹೊರಗಿನ ಆಕ್ರಮಣಕ್ಕಿಂತಲೂ ಒಳಗಿನ ಆಕ್ರಮಣಗಳೇ ಅಪಾಯಕಾರಿ. ಇದರ ಬಗ್ಗೆ ಎಲ್ಲರೂ ಜಾಗೃತರಾಗಿರಬೇಕು. ನಮ್ಮದು ಬಹುತ್ವಗಳ ರಾಷ್ಟ್ರ. ಧರ್ಮ, ಜಾತಿ, ಆಚಾರ, ವಿಚಾರ ಎಲ್ಲದರಲ್ಲೂ ವೈವಿಧ್ಯತೆ ಇದೆ. ಆದರೆ ಈಚಿನ ವರ್ಷಗಳಲ್ಲಿ ಈ ಬಹುತ್ವವನ್ನು ಹಾಳುಗಡೆಹುವ ಪ್ರಯತ್ನಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ಕನ್ನಡ ಅನ್ನದ ಭಾಷೆಯಲ್ಲ, ಕಾನ್ವೆಂಟಿನಲ್ಲಿ ಓದಿದವರೇ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಾರೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದಿದವರು ನಿರುದ್ಯೋಗಿಗಳಾಗುತ್ತಾರೆ ಎಂಬ ಹಸಿಸುಳ್ಳು ಬಿತ್ತಲಾಗುತ್ತಿದೆ. ಒಕ್ಕೂಟ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವವವನ್ನು ರಕ್ಷಿಸುವ ಶಿಕ್ಷಣ ಸಿಗಬೇಕು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಹಾಗೂ ಜೀವಪರ ನಿಲುವುಗಳನ್ನು ಪೋಷಿಸಬೇಕು ಎಂದು ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸಲಹೆ ನೀಡಿದರು.

ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸೀಬಿ ರಂಗಯ್ಯ ಮಾತನಾಡಿ, ವಿದ್ಯಾರ್ಥಿಗಳು ಆತ್ಮಸ್ಥೈರ್ಯ ಹಾಗೂ ಗುರು ಪರಂಪರೆ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ (ಪ್ರಭಾರ) ಪ್ರೊ.ಜಯಶೀಲ, ಶಿಕ್ಷಣದಲ್ಲಿ ಪಾಠ ಪ್ರವಚನಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು.

ಪ್ರಾಂಶುಪಾಲ ಡಾ. ಬಿ.ಕರಿಯಣ್ಣ ಪ್ರಾಸ್ತಾವಿಕ ಮಾತನ್ನಾಡಿದರು. ಶ್ರೀಸಾಯಿ ರಾಮನ್ ನೃತ್ಯ ಕೇಂದ್ರದವರಿಂದ ಸಾಯಿ ಚರಿತೆ ಎಂಬ ನೃತ್ಯ ರೂಪಕ ನಡೆಯಿತು. ವಿದ್ಯಾರ್ಥಿಗಳು ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಡಾ.ಎಸ್.ಶಿವಣ್ಣ,ಶ್ರೀಪಾದ ಕುಲಕರ್ಣಿ,ಡಾ. ಪದ್ಮನಾಭ ಕೆ.ವಿ. ಮತ್ತಿತರರು ಉಪಸ್ಥಿತಿರದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)