varthabharthi

ರಾಷ್ಟ್ರೀಯ

"ಜೆಡಿಯು ನಿತೀಶ್ ರಿಗೆ ಮಾತ್ರ ಸೇರಿದ್ದಲ್ಲ”: ಶರದ್ ಯಾದವ್

ವಾರ್ತಾ ಭಾರತಿ : 12 Aug, 2017

ಪಾಟ್ನಾ,ಆ.12: ಜೆಡಿಯುದಿಂದ ರಾಜ್ಯಸಭೆಯಲ್ಲಿ ಪಕ್ಷದ ನಾಯಕನ ಸ್ಥಾನದಿಂದ ವಜಾಗೊಳಿಸಲ್ಪಟ್ಟಿರುವ ಹಿರಿಯ ನಾಯಕ ಶರದ್ ಯಾದವ್ ಅವರು ಶನಿವಾರ ಜೆಡಿಯು ಅಧ್ಯಕ್ಷ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ತೀವ್ರ ದಾಳಿ ನಡೆಸಿ, ಪಕ್ಷವು ಕುಮಾರ್ ಅವರಿಗೆ ಮಾತ್ರ ಸೇರಿದ್ದಲ್ಲ, ಅದು ತನಗೂ ಸೇರಿದೆ ಎಂದು ಹೇಳಿದರು.

ತನ್ನ ಮೂರು ದಿನಗಳ ಸಂವಾದ ಯಾತ್ರಾದ ಅಂತಿಮ ದಿನ ಮಾಧೇಪುರ ಜಿಲ್ಲೆಯಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಯಾದವ್ ಅವರು ಜೆಡಿಯು- ಆರ್‌ಜೆಡಿ- ಕಾಂಗ್ರೆಸ್ ಮಹಾ ಮೈತ್ರಿಕೂಟದಿಂದ ಹೊರಬಂದು ಬಿಜೆಪಿಯೊಂದಿಗೆ ಸೇರಿಕೊಂಡು ಸರಕಾರವನ್ನು ರಚಿಸಿದ ಕುಮಾರ್ ನಿರ್ಧಾರದ ಬಗ್ಗೆ ಅಸಂತೋಷವನ್ನು ವ್ಯಕ್ತಪಡಿಸಿದರು.

ಬಿಹಾರದಲ್ಲಿ ಎರಡು ಜೆಡಿಯುಗಳಿವೆ. ಒಂದು ಸರಕಾರಿ ಮತ್ತು ಇನ್ನೊಂದು ಜನತಾ. ವೈಯಕ್ತಿಕ ಲಾಭಕ್ಕಾಗಿ ಸರಕಾರಕ್ಕೆ ನಿಕಟರಾಗಿರುವ ಎಲ್ಲ ಶಾಸಕರು ಮತ್ತು ನಾಯಕರು ಕುಮಾರ್ ಜೊತೆಯಲ್ಲಿದ್ದಾರೆ. ಆದರೆ ಜನತೆಗೆ ನಿಕಟರಾಗಿರುವ ನಾಯಕರು ಮತ್ತು ಕಾರ್ಯಕರ್ತರು ತನ್ನ ಜೊತೆಯಲ್ಲಿದ್ದಾರೆ ಎಂದರು.

ಸಂಸದೀಯ ಪಕ್ಷದ ನಾಯಕನ ಸ್ಥಾನದಿಂದ ತನ್ನ ವಜಾ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

ತುರ್ತು ಸ್ಥಿತಿಯ ಸಂದರ್ಭದಲ್ಲಿ ಅಂತಹ ಇಂದಿರಾ ಗಾಂಧಿಯವರಿಗೇ ತಾನು ಹೆದರಿರಲಿಲ್ಲ, ಇತರರು ಯಾವ ಲೆಕ್ಕ ಎಂದೂ ಅವರು ಕುಟುಕಿದರು.

ತಾನು ಈಗಲೂ ಐದು ವರ್ಷಗಳವರೆಗೆ ಅಧಿಕಾರ ನಡೆಸಲು ಚುನಾವಣೆಯಲ್ಲಿ ಜನಾದೇಶ ಪಡೆದಿದ್ದ ಮಹಾ ಮೈತ್ರಿಕೂಟದೊಂದಿಗಿದ್ದೇನೆ ಎಂದು ಯಾದವ್ ಹೇಳಿದರು.

 

Comments (Click here to Expand)