varthabharthi

ಕರಾವಳಿ

ಒಂದಲ್ಲ ಹತ್ತು ‘ಶಾ’ ಗಳು ಬಂದರೂ ನಮಗೆ ಭಯವಿಲ್ಲ : ಯು.ಟಿ.ಖಾದರ್

ವಾರ್ತಾ ಭಾರತಿ : 12 Aug, 2017

ಭಟ್ಕಳ,ಆ.12: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬರುತ್ತಿದ್ದು ಕಾಂಗ್ರೆಸ್ ಪಕ್ಷದಲ್ಲಿ ದುಗುಡ ಆರಂಭಗೊಂಡಿದೆ ಎಂಬುದು ಶುದ್ಧ ಸುಳ್ಳು, ಒಂದಲ್ಲ ಇಂತಹ ಹತ್ತು ಅಮಿತ್ ಶಾ ಬಂದರೂ ಕಾಂಗ್ರೆಸ್ ಪಕ್ಷಕ್ಕೆ ಭಯವಿಲ್ಲ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದರು.

ಅವರು ಇಲ್ಲಿನ ರಾಬಿತಾ ಸೂಸೈಟಿಯ ಶೈಕ್ಷಣಿಕ ಪುರಸ್ಕಾರ ಸಮಾರಂಭಕ್ಕೆ ಆಗಮಿಸಿದ ಸಂದರ್ಭದಲ್ಲಿ ಯೂನೂಸ್ ಕಾಝಿಯಾ ರ ಮೌಲಾನ ಬಂಗ್ಲೆಯಲ್ಲಿ ರಾತ್ರಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡುತ್ತಿದ್ದರು.

ರಾಜ್ಯಕ್ಕೆ ಅಮಿತ್ ಶಾ ರ ಆಗಮನದಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಆತಂಕವಿಲ್ಲ, ಇಲ್ಲಿ ಯಾವುದೇ ಆಪರೇಶನ್ ಯಶಸ್ವಿಯಾಗಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದು ಮುಂದಿನ ಡಿಸೆಂಬರ್ ಒಳಗೆ ಬೇರೆ ಪಕ್ಷಗಳಿಂದ ಯಾರ್ಯಾರು ಕಾಂಗ್ರೆಸ್ ಮಡಿಲು ಸೇರುತ್ತಾರೆ ಎನ್ನುವುದು ಕಾದು ನೋಡಿ ಎಂದ ಅವರು, ಅಮಿತ್ ಶಾ ಪಕ್ಷ ಸಂಘಟನೆಗಾಗಿ ರಾಜ್ಯಕ್ಕೆ ಬರುತ್ತಿದ್ದು ಅದಕ್ಕೂ ಕಾಂಗ್ರೆಸ್ಸಿಗೂ ಯಾವುದೇ ಸಂಬಂಧವಿಲ್ಲ ಎಂದರು.

ಕಲ್ಲಡ್ಕ ಭಟ್ಟರ ಶಾಲೆಗೆ ನೀಡುತ್ತಿದ್ದ ಅನುದಾನದ ಕುರಿತಂತೆ ಮಾತನಾಡಿದ ಸಚಿವರು, ದೇವಸ್ಥಾನದಿಂದ ಶಾಲೆಗೆ ಅನುದಾನ ನೀಡುವುದಕ್ಕೆ ಎಲ್ಲಿಯೂ ನಿಯಮವಿಲ್ಲ, ನಮ್ಮಲ್ಲಿ ನೂರಾರು ಸರ್ಕಾರಿ, ಅನುದಾನಿತ ಶಾಲೆಗಳಿವೆ. ಈ ಎಲ್ಲ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳೇ ಓದುತ್ತಿದ್ದಾರೆ ಯಾವ ಶಾಲೆಗೂ ನೀಡದ ಅನುದಾನ ಅವರ ಶಾಲೆಗೆ ಮಾತ್ರ ಏಕೆ? ಎಂದು ಪ್ರಶ್ನಿಸಿದ ಅವರು ಇದರಲ್ಲಿ ಯಾವುದೇ ದುರುದ್ಧೇಶವಿಲ್ಲ ಎಂದರು.

ದ.ಕ. ಜಿಲ್ಲೆಯ ಜನರು ಶಾಂತಿಯನ್ನು ಬಯಸುತ್ತಾರೆ. ಅಲ್ಲಿ ನಡೆದ ಎಲ್ಲ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ. ಶರತ್ ಕೊಲೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದರು.

ಮೂಡಬಿದ್ರೆ ಅಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯ ಪ್ರಕರಣದ ಬಗ್ಗೆ ಮಾತನಾಡಿದ ಅವರು “ಪೊಲೀಸರಿಗೆ ಪ್ರಕರಣದ ಕುರಿತಂತೆ ತನಿಖೆಯನ್ನು ಕೈಗೊಳ್ಳುವ ನಿರ್ದೇಶನ ನೀಡಲಾಗಿದ್ದು ತಮ್ಮ ಕರ್ತವ್ಯವನ್ನು ಅವರು ಸಂಪೂರ್ಣ ಜವಾಬ್ದಾರಿಕೆಯಿಂದ ನಿಭಾಯಿಸುತ್ತಾರೆ” ಎಂದರು.

ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷ ದುರ್ಬಲವಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಯು.ಟಿ.ಖಾದರ್, ಹಿಂದಿನ ಚುನಾವಣೆಗಳಿಗಿಂತ ಈ ಬಾರಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಬಿತಾ ಸೂಸೈಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಯೂನೂಸ್ ಕಾಝಿಯಾ, ತಂಝೀಮ್ ಪ್ರಧಾನ ಕಾರ್ಯದರ್ಶಿ, ಮುಹಿದ್ದೀನ್ ಅಲ್ತಾಫ್ ಖರೂರಿ,  ತಂಝೀಮ್ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಹೀಮ್ ಶೇಖ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

 

Comments (Click here to Expand)