varthabharthi

ರಾಷ್ಟ್ರೀಯ

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಕುರಿತು ಜನಾಭಿಪ್ರಾಯ ಸಂಗ್ರಹಕ್ಕೆ ಎನ್‌ಸಿ ಆಗ್ರಹ

ವಾರ್ತಾ ಭಾರತಿ : 12 Aug, 2017

ಶ್ರೀನಗರ,ಆ.12: ಸಂವಿಧಾನದಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ ಕುರಿತು ಜನಾಭಿಪ್ರಾಯ ಸಂಗ್ರಹ ನಡೆಸುವಂತೆ ಪ್ರತಿಪಕ್ಷ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಆಗ್ರಹಿಸಿದೆ.

‘ಕಾಯಂ ನಿವಾಸಿಗಳ’ ಪಟ್ಟಿ ಮತ್ತು ಅವರ ವಿಶೇಷ ಹಕ್ಕುಗಳನ್ನು ವ್ಯಾಖ್ಯಾನಿಸುವ ಅಧಿಕಾರವನ್ನು ರಾಜ್ಯ ಶಾಸಕಾಂಗಕ್ಕೆ ನೀಡಿರುವ ಸಂವಿಧಾನದ 35(ಎ) ವಿಧಿಯ ಕುರಿತು ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಎನ್‌ಸಿ ಈ ಆಗ್ರಹವನ್ನು ಮಾಡಿದೆ. 1954ರಲ್ಲಿ ರಾಷ್ಟ್ರಪತಿಗಳ ಆದೇಶದ ಮೇರೆಗೆ ಈ ವಿಧಿಯನ್ನು ಸಂವಿಧಾನದ 370ನೇ ವಿಧಿಗೆ ಸೇರಿಸಲಾಗಿತ್ತು.

ರಾಜ್ಯದ ಮೆಹಬೂಬ ಮುಫ್ತಿ ನೇತೃತ್ವದ ಸಮ್ಮಿಶ್ರ ಸರಕಾರದ ಪಾಲುದಾರನಾಗಿರುವ ಬಿಜೆಪಿ 1980ರಲ್ಲಿ ಸ್ಥಾಪನೆಯಾದಾಗಿನಿಂದಲೂ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ವನ್ನು ರದ್ದುಗೊಳಿಸುವಂತೆ ಆಗ್ರಹಿಸುತ್ತಿದೆ.

ದಿಲ್ಲಿಯ ಎನ್‌ಜಿಒವೊಂದು ಈ ವಿಧಿಯ ಸಾಂವಿಧಾನಿಕ ಸಿಂಧುತ್ವವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗಿನಿಂದ ಅದರ ಮುಂದುವರಿಕೆಯ ಬಗ್ಗೆ ಮತ್ತೆ ಹೊಸದಾಗಿ ಚರ್ಚೆಗಳು ಆರಂಭವಾಗಿವೆ.

ಬಿಜೆಪಿಯು ರಾಜ್ಯದಲ್ಲಿ ಹಿಂದುಗಳು ಬಹುಸಂಖ್ಯಾಕರಾಗಿರುವ ಜಮ್ಮು ಪ್ರದೇಶದ ಜನರನ್ನು ತನ್ನ ರಾಷ್ಟ್ರೀಯ ರಾಜಕಾರಣದಲ್ಲಿ ದಾಳವನ್ನಾಗಿ ಬಳಸುತ್ತಿದೆ ಎಂದು ಎನ್‌ಸಿ ಆರೋಪಿಸಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್‌ಸಿಯ ಪ್ರಾಂತೀಯ ಅಧ್ಯಕ್ಷ ಹಾಗೂ ನಗ್ರೋತಾ ಶಾಸಕ ದೇವೇಂದರ್ ಸಿಂಗ್ ಅವರು, 35(ಎ) ವಿಧಿಯನ್ನು ಸ್ಪರ್ಶಿಸಲು ಸಾಧ್ಯವಿಲ್ಲದ ಪವಿತ್ರ ಆಕಳಿಗೆ ಹೋಲಿಸಿದರು. ಇದೊಂದು ಗಂಭೀರ ಮತ್ತು ಸೂಕ್ಷ್ಮ ವಿಷಯವಾಗಿದೆ. 35(ಎ) ವಿಧಿಯನ್ನು ರದ್ದುಗೊಳಿಸಿದರೆ ಅದು ರಾಜ್ಯದ ಜನತೆಗೆ, ವಿಶೇಷವಾಗಿ ಜಮ್ಮುವಿನ ಡೋಗ್ರಾಗಳಿಗೆ ಮಾಡುವ ಘೋರ ಅನ್ಯಾಯವಾಗುತ್ತದೆ ಎಂದ ಅವರು, ಈ ವಿಧಿಯನ್ನು ರದ್ದುಗೊಳಿಸಿದರೆ ಆಗುವ ಅಪಾಯಕಾರಿ ಪರಿಣಾಮಗಳ ಬಗ್ಗೆ ತಿಳಿಸಲು ತನ್ನ ಪಕ್ಷವು ಪ್ರತಿ ಜಿಲ್ಲೆಯ ಜನರನ್ನು ಸಂಪರ್ಕಿಸಲಿದೆ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)