varthabharthi

ಕರಾವಳಿ

ಶರತ್ ಕುಮಾರ್ ಹತ್ಯೆ ಪ್ರಕರಣ

ಅಮಾಯಕ ಯುವಕರನ್ನು ವಶಕ್ಕೆ ಪಡೆದು ಕಿರುಕುಳ ನೀಡುತ್ತಿರುವ ಪೊಲೀಸರು : ಎಸ್‌ಡಿಪಿಐ ಆರೋಪ

ವಾರ್ತಾ ಭಾರತಿ : 12 Aug, 2017

ಮಂಗಳೂರು, ಆ. 12: ಬಂಟ್ವಾಳದ ಬಿ.ಸಿ.ರೋಡ್‌ನಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ಶರತ್ ಕುಮಾರ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ಅಮಾಯಕ ಯುವಕರನ್ನು ವಶಕ್ಕೆ ಪಡೆದು ಕಿರುಕುಳ ನೀಡುತ್ತಿದ್ದಾರೆ ಎಂದು ಎಸ್‌ಡಿಪಿಐ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಮ್.ಅಥಾವುಲ್ಲಾ ಆರೋಪಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಸುಮಾರು 50ಕ್ಕೂ ಅಧಿಕ ಮುಸ್ಲಿಂ ಯುವಕರನ್ನು ವಶಕ್ಕೆ ಪಡೆದು ಅದರಲ್ಲಿ ಕೆಲವರಿಗೆ ಮಾನಸಿಕ ಮತ್ತು ದೈಹಿಕವಾಗಿ ದೌರ್ಜನ್ಯ ನಡೆಸಿ ಬಿಡುಗಡೆಗೊಳಿಸಿದ್ದಾರೆ. ಮತ್ತೆ ಕೆಲವರನ್ನು ಮನೆಯವರಿಗೂ ಮಾಹಿತಿ ನೀಡದೆ ಅಕ್ರಮ ಬಂಧನದಲ್ಲಿರಿಸುವ ಮೂಲಕ ಕಾನೂನನ್ನು ಗಾಳಿಗೆ ತೂರಿದ್ದಾರೆ ಎಂದರು.

ಸಜಿಪಮುನ್ನೂರು ಗ್ರಾಮದ ಶಾಫಿ, ಮುಹಮ್ಮದ್ ಸಹದ್, ಪಿಕಪ್ ಚಾಲಕ ಅಬ್ದುಲ್ ನಾಸಿರ್ ಎಂಬವರನ್ನು ಆ.9ರಂದು ಮಂಡ್ಯ ಜಿಲ್ಲೆಯ ಕದಬಹಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ತರಕಾರಿ ವ್ಯಾಪಾರ ನಡೆಸುತ್ತಿದ್ದ ಇವರು, ಆ.9ರಂದು ಕದಬಹಳ್ಳಿಗೆ ತೆರಳಿದ್ದ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧನದ ಬಗ್ಗೆ ಯಾವುದೇ ಮಾಹಿತಿಯನ್ನು ಈವರೆಗೆ ಮನೆಯರಿಗೆ ನೀಡಿಲ್ಲ.

ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆಯುವಾಗ ಅವರ ಕುಟುಂಬದವರಿಗೆ ಮಾಹಿತಿ ನೀಡಬೇಕು. ವಿಚಾರಣೆ ನಡೆಸಿ 24 ಗಂಟೆಯೊಳಗೆ ನ್ಯಾಯಾಧೀಶರೆದುರು ಹಾಜರುಪಡಿಸಬೇಕು. ಇದು ಯಾವುದನ್ನೂ ಮಾಡದೆ ಪೊಲೀಸರು ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದರು. ಯುವಕರ ಬಂಧನದ ಬಗ್ಗೆ ಕುಟುಂಬಸ್ಥರು ಬಿ.ಸಿ.ರೋಡ್ ನಗರ ಪೊಲೀಸ್ ಠಾಣೆಗೆ ಹೋಗಿ ಕೇಳಿದರೆ ನಮಗೆ ಗೊತ್ತಿಲ್ಲ. ಎಸ್ಪಿ ಅಧೀನಕ್ಕೆ ಬರುತ್ತದೆ ಎಂದು ಉತ್ತರಿಸುತ್ತಾರೆ.

ಯುವಕರ ಪೋಷಕರು ತಮ್ಮ ಮಕ್ಕಳ ಬಗ್ಗೆ ಪೊಲೀಸ್ ಠಾಣೆಗಳಿಗೆ ಅಲೆಯುವಂತಾಗಿದೆ. ಶರತ್ ಹತ್ಯೆ ಪ್ರಕರಣದ ತನಿಖೆಗಾಗಿ ಈಗಾಗಲೇ ಆರು ವಿಶೇಷ ಪೊಲೀಸ್ ತನಿಖಾ ತಂಡಗಳನ್ನು ರಚಿಸಲಾಗಿದೆ. ತನಿಖೆಯ ವಿಚಾರದಲ್ಲಿ ಈ ಆರು ತಂಡಗಳೊಳಗೆ ಪರಸ್ಪರ ಪೈಪೋಟಿ ನಡೆಯುತ್ತಿದ್ದು, ಇದಕ್ಕೆ ಅಮಾಯಕ ಯುವಕರು ಬಲಿಯಾಗುತ್ತಿದ್ದಾರೆ. ಇದೇ ರೀತಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ತಿಕ್‌ರಾಜ್ ಹತ್ಯೆ ಪ್ರಕರಣದಲ್ಲೂ ಪೊಲೀಸರು ಮುಸ್ಲಿಂ ಯುವಕರನ್ನು ಗುರಿಯಾಗಿಸಿ ಹಲವು ಅಮಾಯಕ ಮುಸ್ಲಿಂ ಯುವಕರನ್ನು ವಶಕ್ಕೆ ಪಡೆದು ಅಕ್ರಮ ಬಂಧನದಲ್ಲಿಸಿ ದೈಹಿಕ ದೌರ್ಜನ್ಯ ಎಸಗಿದ್ದರು. ಬಳಿಕ ಹತ್ಯೆಯ ನೈಜತೆ ಹೊರಬಂದಿತು ಎಂದು ಅಥಾವುಲ್ಲಾ ಹೇಳಿದರು.

ಪೊಲೀಸರು ಕಾನೂನನ್ನು ಗಾಳಿಗೆ ತೂರಿ ತಮಗೆ ಬೇಕಾದ ರೀತಿಯಲ್ಲಿ ದುರುಪಯೋಗ ಮಾಡುತ್ತಿರುವುದು ಖಂಡನೀಯ. ಪೊಲೀಸರ ಈ ನೀತಿಯ ವಿರುದ್ಧ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿರುವ ಅವರು, ಅಕ್ರಮ ಬಂಧನದಲ್ಲಿರುವ ಅಮಾಯಕ ಯುವಕರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಅಕ್ರಮ ಬಂಧನದಲ್ಲಿರಿಸಿದ ಪೊಲೀಸರು ವಿರುದ್ಧ ಸರಕಾರ, ಜಿಲ್ಲಾಡಳಿತ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ತಕ್ಷಣ ಕ್ರಮ ಜರಗಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್., ಬಂಟ್ವಾಳ ಪುರಸಭಾ ಸದಸ್ಯ ಇಕ್ಬಾಲ್ ಗೂಡಿನಬಳಿ, ಸಂತ್ರಸ್ತರ ಕುಟುಂಬಸ್ಥರಾದ ಎ.ಇಬ್ರಾಹೀಂ, ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

 

Comments (Click here to Expand)