varthabharthi

ಕರ್ನಾಟಕ

ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರಿಗೆ ಆಶಾ ಕಾರ್ಯಕರ್ತೆಯರ ಮನವಿ

ವಾರ್ತಾ ಭಾರತಿ : 12 Aug, 2017

ಚಿಕ್ಕಬಳ್ಳಾಪುರ, ಆ.12: ಆಶಾ ಕಾರ್ಯಕರ್ತೆಯರಿಗೆ ಬಾಕಿಯಿರುವ ಮಾಸಿಕ ವೇತನ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಅವರಿಗೆ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿದರು.

ಜಿಲ್ಲೆಯ ಆಶಾಕಾರ್ಯಕರ್ತೆಯರಿಗೆ ಕಳೆದ 2 ತಿಂಗಳಿಂದ ವೇತನ ಬಿಡುಗಡೆ ಮಾಡದಿರುವುದರಿಂದ ಜೀವನ ನಿರ್ವಹಣೆಯು ದುಸ್ತರವಾಗಿದೆ ಎಂದು ಸಚಿವರಲ್ಲಿ ಅಳಲು ತೋಡಿಕೊಂಡ ಆಶಾ ಕಾರ್ಯಕರ್ತೆಯರು, ನೂತನ ತಂತ್ರಾಂಶದಲ್ಲಿ ಲೋಪಗಳಿಂದಾಗಿ ಕೆಲಸ ನಿರ್ವಹಿಸಿದರೂ ಗೈರು ಹಾಜರಿ ಎಂದು ನಮೂದಾಗುತ್ತಿದೆ ಎಂದು ಆರೋಪಿಸಿದರು.

ನಗರದಲ್ಲಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳಿಗೆ ಆಶಾ ಕಾರ್ಯಕರ್ತೆಯರು ಭಾಗವಹಿಸುವುದು ಕಡ್ಡಾಯ ಮಾಡಿರುವುದರಿಂದ ಇದರಿಂದ ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ಇತ್ಯರ್ಥಪಡಿಸುವಂತೆ ಕೋರಿದ ಕಾರ್ಯಕರ್ತೆಯರು,  ಲಾರ್ವ ಸಮೀಕ್ಷೆಯನ್ನು ಕೈಗೊಳ್ಳುವವರಿಗೆ ಪ್ರೋತ್ಸಾಹ ಧನ ವಿತರಣೆ, ಉಚಿತ ಬಸ್‌ವಿತರಣೆ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ಆಶಾ ಕಾರ್ಯಕರ್ತೆಯರಿಂದ ಮನವಿ ಸ್ವೀಕರಿಸಿದ ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪಾರ್ವತಮ್ಮ, ಮಂಜುಳ, ಲಕ್ಷ್ಮೀ, ಅಂಬುಜ, ಎಸ್.ಎಂ. ಸುನಂದ, ನಿರ್ಮಲ, ಗಾಯತ್ರಿ, ರಾಧ, ಪ್ರಮೀಳ, ಮಂಜುಳಮ್ಮ, ಭಾಗ್ಯಮ್ಮ, ಸೇರಿದಂತೆ ಮತ್ತಿತರರು ಇದ್ದರು.

 

Comments (Click here to Expand)