varthabharthi

ಅಂತಾರಾಷ್ಟ್ರೀಯ

ನನ್ನನ್ನು ವಜಾಗೊಳಿಸಿರುವುದು ತಮಾಷೆ: ಶರೀಫ್

ವಾರ್ತಾ ಭಾರತಿ : 12 Aug, 2017

ಇಸ್ಲಾಮಾಬಾದ್, ಆ. 12: ಪ್ರಧಾನಿ ಹುದ್ದೆಯಿಂದ ತನ್ನನ್ನು ಅನರ್ಹಗೊಳಿಸಿರುವ ಕ್ರಮ ‘ತಮಾಷೆ’ಯಾಗಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಶನಿವಾರ ಬಣ್ಣಿಸಿದ್ದಾರೆ. ಅದೇ ವೇಳೆ, ತಾನು ನಾಲ್ಕನೆ ಬಾರಿಗೆ ದೇಶದ ಪ್ರಧಾನಿಯಾಗಿ ಆಯ್ಕೆಯಾಗುತ್ತೇನೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಶರೀಫ್ ಮತ್ತು ಅವರ ಕುಟುಂಬಿಕರು ವಿದೇಶಗಳಲ್ಲಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ, ಪಾಕಿಸ್ತಾನ ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ನ್ಯಾಯಪೀಠವೊಂದು ಕಳೆದ ತಿಂಗಳು ಶರೀಫ್‌ರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿತ್ತು.

ತನ್ನ ರಾಜಕೀಯ ಸಾಮರ್ಥ್ಯವನ್ನು ಪ್ರದರ್ಶಿಸುವುದಕ್ಕಾಗಿ ಇಸ್ಲಾಮಾಬಾದ್‌ನಿಂದ ತವರು ನಗರ ಲಾಹೋರ್‌ಗೆ ಕೈಗೊಂಡಿರುವ ಯಾತ್ರೆಯ ಮೂರನೆ ದಿನದಂದು ಪಾಕಿಸ್ತಾನದ ಗುಜರಾತ್‌ನಲ್ಲಿ ಬೃಹತ್ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಶರೀಫ್ ಮೆರವಣಿಗೆ ವಾಹನ ಬಡಿದು ಬಾಲಕ ಸಾವು: ಪಾಕಿಸ್ತಾನದ ಗುಜರಾತ್‌ನಲ್ಲಿ ಪದಚ್ಯುತ ಪ್ರಧಾನಿ ನವಾಝ್ ಶರೀಫ್‌ರ ಸಭೆಯಲ್ಲಿ ಭಾಗವಹಿಸಲು ಬಂದಿದ್ದ 13 ವರ್ಷದ ಬಾಲಕನೊಬ್ಬ ಶುಕ್ರವಾರ ಶರೀಫ್‌ರ ಮೆರವಣಿಗೆಯಲ್ಲಿದ್ದ ವಾಹನವೊಂದು ಢಿಕ್ಕಿಯಾಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕನ ಮನೆಗೆ ಭೇಟಿ ಕೊಟ್ಟು ಕುಟುಂಬಕ್ಕೆ ಜೀವನಪರ್ಯಂತ ನೆರವು ನೀಡುವುದಾಗಿ ಶರೀಫ್ ಘೋಷಿಸಿದ್ದಾರೆ.

 

Comments (Click here to Expand)