varthabharthi

ಅನುಗಾಲ

ಮುಹಮ್ಮದ್ ಹಾಮಿದ್ ಅನ್ಸಾರಿ ಎಂಬ ರಾಜಕೀಯ ಸಂತ

ವಾರ್ತಾ ಭಾರತಿ : 17 Aug, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಉದ್ಯೋಗ, ವೃತ್ತಿ, ಸ್ಥಳ, ಕೊನೆಗೆ ಬದುಕನ್ನೇ ಆದರೂ-ತೊರೆದು ನಿರ್ಗಮಿಸುವವರ ಕುರಿತು ಗೌರವ ಬರುವಂತೆ ವ್ಯವಹರಿಸಬೇಕೆಂಬುದು ಲೋಕರೂಢಿ. ಆದರೆ ಮಾಧ್ಯಮಗಳು ಗಾಳಿಯಂತೆ ಒಳ್ಳೆಯದನ್ನೂ ಕೆಟ್ಟದ್ದನ್ನೂ ತಾರತಮ್ಯವಿಲ್ಲದೆ (ಜವಾಬ್ದಾರಿಯೂ ಇಲ್ಲದೆ!) ಬಿತ್ತರಿಸುವ, ಶಕುನಿಯನ್ನು ಚಾಣಕ್ಯನೆಂದು ವರ್ಣಿಸುವ ಈ ಕಾಲದಲ್ಲಿ ಅನ್ಸಾರಿಯವರ ವಿರುದ್ಧದ ಹೊಣೆಗೆಡಿತನದ ಟೀಕೆಗಳನ್ನು ಸಾಂವಿಧಾನಿಕ ಯಂತ್ರಗಳು ನಿಯಂತ್ರಿಸುತ್ತಾವೆಂದು ತಿಳಿಯುವುದು ತಪ್ಪಾದೀತು.


ಮಾಧ್ಯಮ ವರದಿಗಳ ಕುರಿತು ಕ್ಲೀಷೆಯಾಗಿರುವ ಒಂದು ದಂತಕತೆಯಿದೆ: ಅಮೆರಿಕಕ್ಕೆ ಒಬ್ಬ ಭಾರತೀಯ ಸಂತರು ಹೋಗಿದ್ದರು. ಹೋಗುವ ಮೊದಲೇ ಅವರಿಗೆ ಅಮೆರಿಕದ ಮಾಧ್ಯಮಗಳು ಕೇಳುವ ಪ್ರಶ್ನೆಗೆ ಜಾಗ್ರತೆಯಿಂದ ಉತ್ತರಿಸಬೇಕೆಂದೂ ಇಲ್ಲವಾದರೆ ಅವರು ತಪ್ಪುಕಲ್ಪನೆಗೆ ಎಡೆಮಾಡಿಕೊಡುವಂತೆ ವರದಿಸುತ್ತಾರೆಂದೂ ಎಚ್ಚರಿಸಲಾಗಿತ್ತು. ಅಮೆರಿಕದಲ್ಲಿ ಸಂತರು ಇಳಿದಾಗ ವಿಮಾನ ನಿಲ್ದಾಣದಲ್ಲೇ ಅವರನ್ನು ಮಾಧ್ಯಮದ ಪ್ರತಿನಿಧಿಗಳು ಸುತ್ತುವರಿದರು. ಅವರಲ್ಲೊಬ್ಬ ‘‘ಅಮೆರಿಕದಲ್ಲಿರುವ ನೈಟ್ ಕ್ಲಬ್ಬುಗಳ ಕುರಿತು ನಿಮ್ಮ ಅಭಿಪ್ರಾಯವೇನು?’’ ಎಂದು ಕೇಳಿದ. ಸಂತರಿಗೆ ಅಮೆರಿಕದ ನೈಟ್ ಕ್ಲಬ್ಬುಗಳ ಬಗ್ಗೆ ಏನೂ ತಿಳಿಯದ್ದರಿಂದ ಅವರು ‘‘ಅಮೆರಿಕದಲ್ಲಿ ನೈಟ್ ಕ್ಲಬ್ಬುಗಳಿವೆಯೇ?’’ ಎಂದು ಉತ್ತರಿಸಿದರು. ಮರುದಿನ ಹಲವು ಪತ್ರಿಕೆಗಳಲ್ಲಿ ‘‘ಭಾರತೀಯ ಸಂತರು ಅಮೆರಿಕದಲ್ಲಿ ಇಳಿದ ತಕ್ಷಣ ನೈಟ್ ಕ್ಲಬ್ಬುಗಳಿವೆಯೇ ಎಂದು ವಿಚಾರಿಸಿದರು’’ ಎಂದು ವರದಿಯಾಯಿತು.

ಸಾಮಾನ್ಯವಾಗಿ ಮಾಧ್ಯಮಗಳಲ್ಲಿ ಬರುವ ಈ ಎಡಬಿಡಂಗಿ ವರದಿ ಗಳಿಂದ ವಿವೇಕಿಗಳು ವಿಚಲಿತರಾಗುವುದಿಲ್ಲ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿದ್ದವರೂ ಇಂತಹ ತಪ್ಪು ಮಾಹಿತಿಯನ್ನು ತಮ್ಮ ರಾಜಕೀಯ ಉದ್ದೇಶಗಳಿಗೆ ಬಳಸಿದಾಗ ಮತ್ತು ಜನರನ್ನು ಧ್ರುವೀಕರಣಕ್ಕೆ ಉಪಯೋಗಿಸಿ ದಾಗ ಅದು ಸಂಸ್ಕೃತಿಯ ನೇರ ಅಪಚಾರವಾಗುತ್ತದೆ. ಉಲ್ಲೇಖಿತ ದೃಷ್ಟಾಂತದ ಪ್ರಮಾಣದಲ್ಲಿ ಮುಜುಗರ ತರಿಸದೆಯೂ ಗಂಭೀರವಾದ ಒಂದು ಸಾಧ್ಯತೆಯನ್ನು ತೆರೆದಿಟ್ಟ ಘಟನೆ ನಮ್ಮ ದೇಶದಲ್ಲೇ ನಡೆದದ್ದು ವಿಪರ್ಯಾಸ.

ಮೊನ್ನೆ ಮೊನ್ನೆ ಅಂದರೆ, 2017ರ ಆಗಸ್ಟ್ 11ರಂದು ಭಾರತದ ಉಪರಾಷ್ಟ್ರಪತಿ ಮುಹಮ್ಮದ್ ಹಾಮಿದ್ ಅನ್ಸಾರಿ ಅವರ ಹುದ್ದೆಯ ಅವಧಿ ಮುಗಿದು ಅಧಿಕಾರದಿಂದ ನಿರ್ಗಮಿಸುವ ಹೊತ್ತಿಗೆ ರಾಜ್ಯಸಭಾ ಟಿವಿಗಾಗಿ ಖ್ಯಾತ ಪತ್ರಕರ್ತ ಕರಣ್ ಥಾಪರ್ ಅನ್ಸಾರಿಯವರನ್ನು ಸಂದರ್ಶಿಸುತ್ತ ನಡುವೆ ‘‘ಈ ದೇಶದಲ್ಲಿನ ಮುಸ್ಲಿಮ್ ಸಮುದಾಯ ಆತಂಕದಲ್ಲಿದೆ ಮತ್ತು ಅಭದ್ರತೆಯನ್ನು ಅನುಭವಿಸುತ್ತಿದೆಯೆಂಬ ಮಾತು ಕೇಳಿಬರುತ್ತಿದೆಯೆಂದು ವಿಶ್ಲೇಷಿಸುತ್ತಿದ್ದಾರೆ; ಇದು ನೈಜ ವಿಶ್ಲೇಷಣೆಯೇ ಅಥವಾ ಉತ್ಪ್ರೇಕ್ಷಿತವೇ?’’ ಎಂದು ಪ್ರಶ್ನಿಸಿದರು. ಇದಕ್ಕುತ್ತರವಾಗಿ ಅನ್ಸಾರಿಯವರು ‘‘ಹೌದು, ಅದು ನೈಜ ವಿಶ್ಲೇಷಣೆ, ವಿವಿಧ ಕಾರ್ಯಕ್ಷೇತ್ರಗಳಿಂದ ಅಂತಹ ಮಾತು ಕೇಳಿಬರುತ್ತಿದೆ, ದೇಶದ ವಿವಿಧ ಭಾಗಗಳಿಂದ ಕೇಳಿದ್ದನ್ನೇ ಬೆಂಗಳೂರಿನಲ್ಲೂ ಕೇಳಿದ್ದೇನೆ, ಅದಕ್ಕೂ ಹೆಚ್ಚಾಗಿ ಉತ್ತರ ಭಾರತದಲ್ಲಿ ಈ ಮಾತು ಕೇಳಿಬರುತ್ತಿದೆ’’ ಎಂದರು. ಇದೊಂದು ಸಹಜವಾದ ಪ್ರತಿಕ್ರಿಯೆಯಾಗಿತ್ತು. ಮುಸ್ಲಿಮರ ಕುರಿತಾದ ಸಂದರ್ಶನ ಅದಾಗಿರಲಿಲ್ಲ. ಅನೇಕ ಇನ್ನಿತರ ವಿಚಾರಗಳು ಸಂದರ್ಶನದಲ್ಲಿದ್ದವು.

ಆದರೆ ಮರುದಿನ ದೇಶವೇ ಮತ್ತೊಮ್ಮೆ ಇಬ್ಭಾಗವಾದಂತೆ ಮಾಧ್ಯಮಗಳು ಈ ಉತ್ತರವನ್ನೇ ಮುಖ್ಯವಾಗಿಟ್ಟುಕೊಂಡು ‘‘ಅನ್ಸಾರಿಯವರು ಮುಸ್ಲಿಮರು ಆತಂಕವನ್ನು, ಅಭದ್ರತೆಯನ್ನು ಅನುಭವಿಸುತ್ತಾರೆಂದು ಹೇಳಿದರು’’ ಎಂದು ವರದಿ ಮಾಡಿದವು. ಕೇಂದ್ರ ಸರಕಾರದ ಉನ್ನತ ಸ್ಥಾನದಲ್ಲಿದ್ದವರೂ ಅನ್ಸಾರಿಯವರನ್ನು ಬಹುಕಾಲದಿಂದ ಅರಿತವರೂ ಅವರ ಸ್ಥಾನ-ಮಾನಗಳ ಅರಿವಿದ್ದವರೂ ಏಕಾಏಕಿ ಅವರ ವಿರುದ್ಧ ಮತೀಯ ವಾಗ್ಬಾಣಗಳನ್ನು ಪ್ರಯೋಗಿಸಿದರು. ಮುಖ್ಯವಾಗಿ ಪ್ರಧಾನಿ ಮೋದಿ ಅವರ ಬೀಳ್ಕೊಡುಗೆಯ ಭಾಷಣದಲ್ಲಿ ಪರೋಕ್ಷವಾಗಿ ಅವರನ್ನು ಟೀಕಿಸಿದರು.

ಅವರು ಮುಸ್ಲಿಮರಾಗಿರುವುದು, ಹಿಂದೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದದ್ದು, ಅದಕ್ಕೂ ಮೊದಲು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದದ್ದು, ಅದಕ್ಕೂ ಮೊದಲು ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಉಪಕುಲಪತಿಯಾಗಿದ್ದದ್ದು, ಅದಕ್ಕೂ ಮೊದಲು ಪಶ್ಚಿಮ ಏಷ್ಯಾದ ಮುಸ್ಲಿಮ್ ರಾಷ್ಟ್ರಗಳಲ್ಲಿ ಭಾರತೀಯ ರಾಯಭಾರಿಯಾಗಿದ್ದದ್ದನ್ನು ನೆನಪಿಸಿದರು. ಇದು ಮೇಲ್ನೋಟಕ್ಕೆ ಅವರ ಪರಿಚಯವನ್ನು ಮಾಡಿದಂತೆ ಮತ್ತು ಅವರ ಸಾಧನೆಗಳನ್ನು ಹೇಳಿದಂತೆ ಕಂಡರೂ ಬಹು ಜಾಣತನದಿಂದ ಮೋದಿ ಅನ್ಸಾರಿಯವರು ಒಬ್ಬ ಕಾಂಗ್ರೆಸ್ ಪರ ರಾಜಕಾರಣಿ ಮತ್ತು ಅವರು ಮೊದಲು ಮುಸ್ಲಿಮ್ ಮತ್ತು ಆನಂತರವೇ ಭಾರತೀಯ ಎಂದು ಚುಚ್ಚಿದರು.

ಮೋದಿ ಹೇಳದೇ ಬಿಟ್ಟ ಮುಖ್ಯಾಂಶಗಳು ಅನೇಕವಿದ್ದವು. ಅನ್ಸಾರಿಯವರು ಯುಎಇ, ಅಫ್ಘಾನಿಸ್ತಾನ, ಇರಾನ್, ಸೌದಿ ಅರೇಬಿಯಾದಲ್ಲಿ ಭಾರತೀಯ ರಾಯಭಾರಿಯಾಗಿದ್ದರು, ನಿಜ. ಆದರೆ ಅದಕ್ಕೂ ಮೊದಲು ಅವರು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿದ್ದರು ಮತ್ತು ಆನಂತರ ಆಸ್ಟ್ರೇಲಿಯಾದಲ್ಲಿ ಭಾರತದ ರಾಯಭಾರಿಯಾಗಿದ್ದವರು. ಅತ್ಯಂತ ದಕ್ಷ ಆಡಳಿತಗಾರರೆಂದು ಹೆಸರು ಗಳಿಸಿದವರು. ಈ ಜಾತ್ಯತೀತ ಮತ್ತು ಅಚ್ಚ ಭಾರತೀಯ ಅಂಶಗಳು ಉಗ್ರ ಮತೀಯತೆಯಲ್ಲಿ ಮುಚ್ಚಿಹೋದವು.

ಜೊತೆಗೇ ಮೋದಿಯವರ ಮಾತಿನ ಸನ್ನೆಯನ್ನು ಅರ್ಥಮಾಡಿಕೊಂಡ ವರಂತೆ ನೂರಾರು ಮಂದಿ ಭಾಜಪ ಬೆಂಬಲಿಗರು ಅನ್ಸಾರಿಯವರು ಏನೆಂಬುದನ್ನು ಅರಿಯದವರೂ ಅವರನ್ನು ಕೀಳು ಮಾತಿನಿಂದ ಅವಹೇಳನಮಾಡಿದರು. ಮೋದಿಯವರ ಮಾತು ಯೋಜಿತ ಮತ್ತು ಯೋಚಿತವೆಂಬುದು ಗೊತ್ತಾದದ್ದು ಅವರ ಮಾತಿನ ಹಿಂದೆಯೇ ಭಾಜಪದ ಮೀನಾಕ್ಷಿ ಲೇಖಿ ಮುಂತಾದ ಸಂಸದರು ಅನ್ಸಾರಿಯವರು ತಮ್ಮ ಹುದ್ದೆಗೆ ಶೋಭೆಯಲ್ಲದ, ಒಬ್ಬ ರಾಜಕಾರಣಿಯ ರೀತಿಯಲ್ಲಿ ಮಾತನಾಡಿದರು ಎಂದು ಪ್ರತಿಕ್ರಿಯಿಸಿದಾಗ. ಮರುದಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ವಕ್ತಾರರಾದ ಇಂದ್ರೇಶ್ ಕುಮಾರ್ ನೇರವಾಗಿಯೇ ‘‘ಅನ್ಸಾರಿಯವರು ತಮಗೆ ಎಲ್ಲಿ ಸುರಕ್ಷಿತವೆಂದು ಕಾಣಿಸು ತ್ತದೆಯೋ ಅಂತಹ ದೇಶಕ್ಕೆ ಹೋಗಬಹುದು’’ ಎಂದು ಉಗ್ರವಾಗಿ ಟೀಕಿಸಿದರು.

(ಹೊರಕಳಿಸುವುದಕ್ಕೆ ಭಾರತ ಯಾರ ಪಿತ್ರಾರ್ಜಿತ ಆಸ್ತಿಯೂ ಅಲ್ಲವೆಂಬುದನ್ನು ಈ ಸಾಂಸ್ಕೃತಿಕ ವಕ್ತಾರರು ಮರೆತಿದ್ದರು!) ಇದೂ ಸಾಲದೆಂಬಂತೆ ಆಗ ತಾನೇ ಅನ್ಸಾರಿಯವರ ಜಾಗಕ್ಕೆ ಆಯ್ಕೆಯಾದ ವೆಂಕಯ್ಯ ನಾಯ್ಡು ತಮ್ಮ ರಾಜಕಾರಣವನ್ನು ಪ್ರದರ್ಶಿಸಿ ‘‘ಮುಸ್ಲಿಮರು ಅಭದ್ರತೆಯನ್ನು ಅನುಭವಿಸುತ್ತಿದ್ದಾರೆಂಬುದು ಒಂದು ತಪ್ಪುಕಲ್ಪನೆ ಮತ್ತು ಅದು ರಾಜಕೀಯ ಯೋಚನೆಯಿಂದ ಬಾಧಿತವಾದದ್ದು’’ ಎಂದು ಅನ್ಸಾರಿಯವರ ಹೆಸರು ಉಲ್ಲೇಖಿಸದೆ ಹೇಳಿದರು. ಒಟ್ಟಿನಲ್ಲಿ ಈ ಕೆಲವು ಮಂದಿ ಅನ್ಸಾರಿಯವರು ಯಾವ ವಿವಾದಗಳಿಗೂ ಎಡೆಕೊಡದೆ ತಮ್ಮ ಹುದ್ದೆಯ ಘನತೆಯನ್ನು ಎತ್ತಿಹಿಡಿದಿದ್ದರೋ ಅದನ್ನು ವಿನಾಕಾರಣ ಮಣ್ಣುಪಾಲು ಮಾಡಲು ಪ್ರಯತ್ನಿಸಿದರು.

ದುರದೃಷ್ಟವೆಂದರೆ ಇತರ ಯಾವ ಪಕ್ಷದ ರಾಜಕಾರಣಿಗಳೂ ಅನ್ಸಾರಿ ಯವರ ಮಾತಿನ ಸೂಕ್ಷ್ಮತೆಯನ್ನು ಗಮನಿಸಲೇ ಇಲ್ಲ ಅಥವಾ ಗಮನಿಸಿ ದರೂ ಅವರೀಗ ನಿವೃತ್ತರಾದ್ದರಿಂದ ಮತ್ತು ಮತ್ತೆ ರಾಜಕಾರಣಕ್ಕೆ ಮರಳಲಾಗದ ನಿರುಪಯುಕ್ತ ವ್ಯಕ್ತಿಯಾದ್ದರಿಂದ ಅವರನ್ನು ಸಮರ್ಥಿಸಿ ತಮಗೇನಾಗಬೇಕಾಗಿದೆ ಎಂಬಂತೆ ಸುಮ್ಮನಿದ್ದರು. ಮೋದಿಯವರನ್ನು ಬಲ್ಲವರು. ಅವರ ರಾಜಕಾರಣದ ಹಿನ್ನೆಲೆಯನ್ನು ಬಲ್ಲವರು ಅವರ ಮಾತುಗಳಿಂದ ಅಚ್ಚರಿಗೊಳ್ಳಲು ಕಾರಣವಿಲ್ಲ. ಮೋದಿ ಜಾತಿ, ಮತ, ಜನಾಂಗೀಯ ದ್ವೇಷ, ದಮನ ನೀತಿ ಮತ್ತು ಪೊಳ್ಳು ಭರವಸೆಗಳನ್ನು ಬಂಡವಾಳವಾಗಿಸಿಯೇ ರಾಜಕೀಯದ ಏಣಿಯನ್ನೇರಿದ ರೆಂಬುದನ್ನು ಸಾಕಷ್ಟು ಮಂದಿ ಬಲ್ಲರು. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಡೆದ ಹಿಂಸೆಯ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಚುನಾವಣೆಗೆ ಕಾಲ ಪಕ್ವವಾಗಿಲ್ಲವೆಂದು ಮುಂದೂಡಿತು.

ಆಗ ಮೋದಿಯವರು ಪತ್ರಿಕಾ ಗೋಷ್ಠಿಯೊಂದರಲ್ಲಿ ಮುಖ್ಯ ಚುನಾವಣಾ ಆಯುಕ್ತ ಜೇಮ್ಸ್ ಮೈಕೇಲ್ ಲಿಂಗ್ಡೋ ಅವರ ಹೆಸರು ಹೇಳದೆಯೇ ಅವರು ಕ್ರಿಶ್ಚಿಯನ್ ಆದ್ದರಿಂದ ಸೋನಿಯಾರಿಗೆ ಸಮೀಪದವರಾಗಿರಬಹುದೆಂಬ ಸೂಚನೆಗಳ ಮಾತನ್ನಾಡಿದ್ದರು. ಇವೆಲ್ಲ ಅವರ ಸಮೃದ್ಧ ಕೌಟಿಲ್ಯವನ್ನು ಪ್ರದರ್ಶಿಸಿದವಾದರೂ ಈ ಮತೀಯ ರಾಜಕೀಯದ ಲಾಭವನ್ನು ಸಹಜವಾಗಿಯೇ ಪಡೆದರು. ಸರಿಯಾಗಿ ಹತ್ತು ವರ್ಷಗಳ ಕಾಲ (11.08.2007-11.08.2017) ಎರಡು ಅವಧಿಗಳಷ್ಟು ದೀರ್ಘಾವಧಿ ಅನ್ಸಾರಿಯವರು ಈ ದೇಶದ ಎರಡನೆ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಘನತೆಯಿಂದ ನಿರ್ವಹಿಸಿ ದರು. ಅವರು ಧರಿಸಿದ ಹುದ್ದೆಗಳನ್ನು ಈಗಾಗಲೇ ಪ್ರಸ್ತಾವಿಸಿದೆಯಾದರೂ ಮತ್ತೊಮ್ಮೆ ಅವರ ಬದುಕಿನ ಮೈಲಿಗಲ್ಲುಗಳನ್ನು ಹುಡುಕಬಹುದು.

ಅನ್ಸಾರಿಯವರು ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರು. ಈಗಿನ ಪಶ್ಚಿಮ ಬಂಗಾಳದ ಕಲ್ಕತ್ತದಲ್ಲಿ 01.04.1931ರಂದು ಜನಿಸಿದರು. ಅವರ ತಂದೆ ಪ್ರಖ್ಯಾತರಲ್ಲ. (ಆದರೆ ತಂದೆಯ ದೊಡ್ಡಪ್ಪಮುಖ್ತಾರ್ ಮುಹಮ್ಮದ್ ಅನ್ಸಾರಿಯವರು ಮದ್ರಾಸ್ ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದು ಲಂಡನ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಲಂಡನ್ ಲಾಕ್ ಆಸ್ಪತ್ರೆ ಮತ್ತು ಚಾಗ್ ಕ್ರಾಸ್ ಆಸ್ಪತ್ರೆಯಲ್ಲಿ ದುಡಿದು ಖ್ಯಾತರಾದರು. ಅಲ್ಲಿ ಅವರ ಹೆಸರಿನ ಒಂದು ವಾರ್ಡ್ ಈಗಲೂ ಇದೆ. ಮುಂದೆ ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಹೋರಾಟಕ್ಕೆ ಇಳಿದರು; ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು.) ಅಂತಹ ಕುಟುಂಬದಲ್ಲಿ ಹುಟ್ಟಿದ ಅನ್ಸಾರಿಯವರಿಗೆ ಸಹಜವಾಗಿಯೇ ವಿಶಾಲ ದೃಷ್ಟಿಕೋನ ದಕ್ಕಿತ್ತು. ಅವರು ಶಿಮ್ಲಾದ ಸೈಂಟ್ ಎಡ್ವರ್ಡ್ಸ್ ಸ್ಕೂಲ್, ಕೋಲ್ಕತಾದ ಸೈಂಟ್ ಕ್ಸೇವಿಯರ್ಸ್‌ ಕಾಲೇಜಿನಲ್ಲಿ ಓದಿ ಮುಂದೆ ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದರು.

1961ರಲ್ಲಿ ಭಾರತೀಯ ವಿದೇಶಾಂಗ ಸೇವೆ (ಐ.ಎಫ್.ಎಸ್.)ಗೆ ಆಯ್ಕೆ ಯಾದರು. ಅಲ್ಲಿಂದ ಅವರ ವೃತ್ತಿ ಮೊನ್ನೆಯ ವರೆಗೂ ಸರಳವಾಗಿ ಬೆಳಗಿತು. 1984ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿಯನ್ನು ಪಡೆದರು. 2006ರಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದರು. ಅವರು ಮತೀಯ ಶಕ್ತಿಗಳೊಂದಿಗೆ ಗುರುತಿಸಿಕೊಂಡದ್ದಾಗಲೀ, ಜಾತೀಯತೆಯನ್ನು ಬೆಂಬಲಿಸಿ ದ್ದಾಗಲೀ ಇಲ್ಲ. ಮದರಾಸಿನ ಸೈಂಟ್ ಸ್ಟೀಫನ್ ಕಾಲೇಜಿನಲ್ಲಿ ದಲಿತ ಕ್ರೈಸ್ತರಿಗೆ ಮೀಸಲಾತಿಯನ್ನು ಕಲ್ಪಿಸಿದಾಗ ಅವರು ಆ ನಿರ್ಧಾರವನ್ನು ಆಯೋಗದ ಮೂಲಕ ಎತ್ತಿಹಿಡಿದಿದ್ದರು. ಯುಪಿಎ ರಂಗ ಅವರನ್ನು ತಮ್ಮ ಅಭ್ಯರ್ಥಿ ಯಾಗಿ ಆಯ್ಕೆ ಮಾಡಿದಾಗಲೂ ಅವರ ಕುರಿತು ವೈಯಕ್ತಿಕವಾದ ಯಾವ ಟೀಕೆಯೂ ಇರಲಿಲ್ಲ. ಅವರು ತಮ್ಮ ಎದುರಾಳಿಗಳನ್ನು ಟೀಕಿಸಿದ್ದೇ ಇಲ್ಲ. (ವೈಯಕ್ತಿಕವಾಗಿ ಕೆಸರೆರಚುವ ಮಟ್ಟಕ್ಕೆ ರಾಜಕಾರಣ ಇಳಿದು ಕಳೆದ ಮಹಾ ಚುನಾವಣೆಯ ಆನಂತರವೇ!) ರಾಜ್ಯಸಭಾಪತಿಯಾಗಿ ಪೂರ್ಣ ಗೌರವದೊಂದಿಗೆ ಅದನ್ನು ನಿರ್ವಹಿಸಿದರು.

ವರ್ತಮಾನದ ತಲೆಮಾರಿನ ಕೊಂಕಿನ ರಾಜಕಾರಣಕ್ಕೆ ವಿರೋಧವಾಗಿ ಪಾರಂಪರಿಕ ನಂಬಿಕೆಯೊಂದಿಗೆ ಅವರು ತಮ್ಮ ಹುದ್ದೆಗಳ ಘನತೆಯನ್ನೂ ಪಾವಿತ್ರ್ಯವನ್ನೂ ಅತ್ಯಂತ ಗಂಭೀರವಾಗಿ, ಜಾಗ್ರತೆಯಾಗಿ ಹಾಗೂ ಪ್ರಜ್ಞಾಪೂರ್ವಕವಾಗಿ ಕಾಪಾಡಿಕೊಂಡು ಬಂದರು. ಒಂದರ್ಥದಲ್ಲಿ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅನುಯಾಯಿಯಂತಿದ್ದು ಅವರ ವಾರಸುದಾರಿಕೆಯನ್ನೂ ದರ್ಶಿಸಿದರು.

ಅನ್ಸಾರಿಯವರು ರಾಜಕೀಯದ ರಂಗದಿಂದೊಂದಿಷ್ಟು ದೂರವಿದ್ದವರು. ಆದರೆ ಅವರ ನಿಲುವು ಸ್ಪಷ್ಟವಿತ್ತು. ‘‘ಯಾವ ಪ್ರಜೆಯೂ ರಾಜಕೀಯೇತರ ನಾಗಿರಲು ಸಾಧ್ಯವಿಲ್ಲ; ಪ್ರಜೆಯೆಂಬ ನಿರೂಪಣೆಯಿಂದಲೇ ಆತ/ಆಕೆ ಸಾರ್ವಜನಿಕ ವ್ಯವಹಾರಗಳಲ್ಲಿ ಆಸಕ್ತಿಯನ್ನು ತೋರಬೇಕು’’ ಎಂದಿದ್ದರು. (ಇಂತಹ ನಿಲುವು ಕನ್ನಡದ ಹಿರಿಯ ಚೇತನ ಡಿವಿಜಿಯವರಿಗಿತ್ತು.) ಈ ಆಸಕ್ತಿಯೊಂದಿಗೇ ಅನವಶ್ಯಕ ಟೀಕೆಯನ್ನೂ ಅನುಭವಿಸಬೇಕು ಎಂಬುದು ಮಾತ್ರ ಅವರಿಗೆ ಮೊನ್ನೆ ಉಪರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸುವ ವರೆಗೂ ಹೊಳೆದಿರಲಿಕ್ಕಿಲ್ಲ. ರಾಜಕಾರಣಿಗಳಾಗಿದ್ದ ಬೈರಾಂಸಿಂಗ್ ಶೆಕಾವತ್ ಮತ್ತು ವೆಂಕಯ್ಯ ನಾಯ್ಡು ಅವರ ನಡುವೆ ಅಧಿಕಾರ ಅನುಭವಿಸಿದ ಅನ್ಸಾರಿಯವರು ರಾಜಕಾರಣದ ಸೂಕ್ಷ್ಮಗಳನ್ನು ಬಲ್ಲವರು. ರಾಜಕಾರಣಕ್ಕೂ ರಾಜಕೀಯಕ್ಕೂ ವ್ಯತ್ಯಾಸವಿದೆಯೆಂಬುದನ್ನು ಅರಿತು ಈ ಎಲ್ಲ ಟೀಕೆಗಳೆದುರು ಸುಮ್ಮನಿದ್ದಾರೆ. ಇದು ಅವರ ಗಾಂಭೀರ್ಯಕ್ಕೆ ಇನ್ನಷ್ಟು ಶೋಭೆ ತಂದಿದೆ.

ಉದ್ಯೋಗ, ವೃತ್ತಿ, ಸ್ಥಳ, ಕೊನೆಗೆ ಬದುಕನ್ನೇ ಆದರೂ-ತೊರೆದು ನಿರ್ಗಮಿಸುವವರ ಕುರಿತು ಗೌರವ ಬರುವಂತೆ ವ್ಯವಹರಿಸಬೇಕೆಂಬುದು ಲೋಕರೂಢಿ. ಆದರೆ ಮಾಧ್ಯಮಗಳು ಗಾಳಿಯಂತೆ ಒಳ್ಳೆಯದನ್ನೂ ಕೆಟ್ಟದ್ದನ್ನೂ ತಾರತಮ್ಯವಿಲ್ಲದೆ (ಜವಾಬ್ದಾರಿಯೂ ಇಲ್ಲದೆ!) ಬಿತ್ತರಿಸುವ, ಶಕುನಿಯನ್ನು ಚಾಣಕ್ಯನೆಂದು ವರ್ಣಿಸುವ ಈ ಕಾಲದಲ್ಲಿ ಅನ್ಸಾರಿಯವರ ವಿರುದ್ಧದ ಹೊಣೆಗೇಡಿತನದ ಟೀಕೆಗಳನ್ನು ಸಾಂವಿಧಾನಿಕ ಯಂತ್ರಗಳು ನಿಯಂತ್ರಿಸುತ್ತಾವೆಂದು ತಿಳಿಯುವುದು ತಪ್ಪಾದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)