varthabharthi

ನೇಸರ ನೋಡು

ಭಾಷೆಗಳ ಅಳಿವೋ ಹತ್ಯೆಯೋ?

ವಾರ್ತಾ ಭಾರತಿ : 20 Aug, 2017
ಜಿ.ಎನ್.ರಂಗನಾಥ್ ರಾವ್

ಇದು ಕೇವಲ ಭಾಷೆಗಳ ಸಾವಿನ ಪ್ರಶ್ನೆಯಲ್ಲ. ಒಂದು ಸಮುದಾಯದ ಭಾಷೆ ನಶಿಸಿತೆಂದರೆ ಆ ಸಮುದಾಯವೇ ನಾಶವಾದಂತೆ. ನಂತರದ ಪ್ರಕ್ರಿಯೆಯಾದ ವಿಸ್ಮತಿಯಲ್ಲಿ ಆ ಸಮುದಾಯದ ಸಂಸ್ಕೃತಿ-ವಿಶಿಷ್ಟ ಚಹರೆಗಳೂ ನಾಶವಾಗುತ್ತವೆ. ಸಾವಿನ ಅಂಚಿನಲ್ಲಿರುವ ಭಾಷೆಗಳನ್ನು ಉಳಿಸಿಕೊಳ್ಳುವುದು ತ್ರಾಸದಾಯಕವಾದದ್ದು. ಪ್ರಾಂತೀಯ/ಸ್ಥಳೀಯ ಭಾಷೆಗಳನ್ನು ಈ ದುರ್ಮರಣದಿಂದ ಪಾರುಮಾಡುವ, ಅವುಗಳನ್ನು ಬೆಳೆಸುವ ಪ್ರಯತ್ನಗಳು ನಡೆಯುತ್ತಿವೆಯಾದರೂ ಅಂಥ ಪ್ರಯತ್ನಗಳಿಗೆ ಸೂಕ್ತ ಸಾಂಸ್ಥಿಕ ಬೆಂಬಲ ಸಿಗುತ್ತಿಲ್ಲ.


ಬಹಳ ವರ್ಷಗಳ ನಂತರ ಮೈಸೂರಿನ ಹಳೆಯ ಗೆಳೆಯರೊಬ್ಬರ ಭೇಟಿಯಾಯಿತು. ಇಬ್ಬರೂ ಎಪ್ಪತ್ತೈದು ವಸಂತಗಳನ್ನು ದಾಟಿದವರು. ಮಕ್ಕಳು, ಮದುವೆ, ಮೊಮ್ಮಕ್ಕಳು ಹೀಗೆ ಹಂಚಿಕೊಳ್ಳುವ ಕೌಟುಂಬಿಕ ವಿಷಯಗಳು ಬಹಳಷ್ಟಿದ್ದವು. ಈ ಎಲ್ಲ ಉಭಯಕುಶಲೋಪರಿಯ ನಂತರ ನಮ್ಮ ಮಾತುಕತೆ ನಮ್ಮಿಬ್ಬರ ಸಮಾನ ಪ್ರೀತಿಯಾದ ಪುಸ್ತಕ ಪ್ರೀತಿಯತ್ತ ತಿರುಗಿತು. ಪುಸ್ತಕ ಎಂದಾಕ್ಷಣ ನನ್ನ ಮಿತ್ರನ ಮುಖದಲ್ಲಿ ಖಿನ್ನತೆಯ ಗೆರೆಗಳು ಮೂಡಿದವು. ಏಕೆ, ಈ ಮನುಷ್ಯ ನಾನು ಹಿಂದಿರುಗಿಸದ ಪುಸ್ತಕಗಳ ಬಗ್ಗೆ ಏನಾದರೂ...ಎಂದು ಒಂದು ಕ್ಷಣ ಅಧೀರನಾದೆ.

‘‘ಏಕಯ್ಯ ಮುಖ ಒಂದು ಥರಾ...ಏನು ಸಮಾಚಾರ?’’
‘‘ಪುಸ್ತಕಗಳದ್ದೇ ಸಮಸ್ಯೆ ಕಣಯ್ಯ?’’
‘‘ಏನು ಸಮಸ್ಯೆ?’’
‘‘ಇಷ್ಟು ವರ್ಷ ಅವು ನನಗೆ ಸಂಗಾತಿಯಾಗಿದ್ದವು. ನಾನು ಅವಕ್ಕೆ ಸಂಗಾತಿಯಾಗಿದ್ದೆ. ಈಗಲೂ ನನಗೆ ಪ್ರಿಯವಾದ ಶೇಕ್ಸ್ ಪಿಯರ್, ಎಲಿಯಟ್, ಸಾರ್ತರ್, ಕಾಫ್ಕ, ಕಾರಂತ, ಬೇಂದ್ರೆ, ಕುವೆಂಪು, ಅನಕೃ, ದೇವುಡು ಇವರನ್ನೆಲ್ಲ ಮತ್ತೆಮತ್ತೆ ಓದ್ತೀನಿ...’’
‘‘ಒಳ್ಳೆಯದೇ ಆಯ್ತು. ವೃದ್ಧಾಪ್ಯದಲ್ಲಿ ಕಾಲಹರಣ ಸರಿಯಾಗೇ ಆಗ್ತಿದೆ...’’
‘‘ನನ್ನ ನಂತರ ಈ ಸಂಗಾತಿಗಳ ಗತಿ ಏನೂಂತ ಯೋಚಿಸುವಂತಾಗಿದೆ ಈಗ...’’
‘‘ಅದಕ್ಯಾಕಯ್ಯ ಯೋಚನೆ, ಮಕ್ಕಳು ಮೊಮ್ಮಕಳು ಇದಾರಲ್ಲ...’’
‘‘ಅದೇನಯ್ಯ ಸಮಸ್ಯೆ. ಮಕ್ಕಳು ಸೊಸೆಯರಿಗೆ ಯಾರಿಗೂ ಸಾಹಿತ್ಯದಲ್ಲಿ ಆಸಕ್ತಿ ಇಲ್ಲ. ಪುಸ್ತಕಗಳ ಕಡೆ ಕಣ್ಣೆತ್ತಿಯೂ ನೋಡಲ್ಲ. ಮನೇಲೇನೋ ಕನ್ನಡ ಮಾತಾಡ್ತಾರೆ. ಮೊಮ್ಮಕ್ಕಳು ಅದೂ ಇಲ್ಲ.’’

ಮಿತ್ರನ ಕೊರಗು ಈಗ ಅರ್ಥವಾಯಿತು. ಈ ವಿಷಯದಲ್ಲಿ ನಾವಿಬ್ಬರೂ ಸಮಾನ ದು:ಖಿಗಳು. ಕಾಲೇಜು ದಿನಗಳಿಂದ ನಾವಿಬ್ಬರೂ ಪುಸ್ತಕ ಕೊಳ್ಳುವುದರಲ್ಲಿ, ಕದಿಯುವುದರಲ್ಲಿ (ಕದಿಯುವುದು ಎಂದರೆ ಗೆಳೆಯರಿಂದ ತಂದ ಒಳ್ಳೆಯ ಪುಸ್ತಕವನ್ನು ಹಿಂದಿರುಗಿಸದೇ ಇರುವುದು-ಪುಸ್ತಕಂ ವನಿತಂ ವಿತ್ತಂ ಪರಹಸ್ತಮ್ ಗತಾಗತಮ್ ಅಂತಾರಲ್ಲ ಹಾಗೆ)ಪರಸ್ಪರ ಪೈಪೋಟಿ ನಡೆಸುತ್ತಿದ್ದವರು...ಹೀಗೆ ನಮ್ಮ ಪುಸ್ತಕ ಸಂಗ್ರಹ ಒಂದು ಪುಟ್ಟ ಗ್ರಂಥ ಭಂಡಾರವಾಗಿ ಬೆಳೆದಿತ್ತು. ನನ್ನ ಮಕ್ಕಳೂ ಕನ್ನಡ ಮಾತಾಡ್ತಾರೆ. ಆದರೆ ಸಾಹಿತ್ಯ ಎಂದರೆ ಅಷ್ಟಕ್ಕಷ್ಟೆ.

‘‘ಅದಕ್ಯಾಕಯ್ಯ ಅಷ್ಟೊಂದು ಯೋಚನೆ. ಯಾವುದಾದರೂ ಲೈಬ್ರರಿಗೆ ಕೊಟ್ಟರೆ ಆಯಿತು. ಇಂಥವರ ಕೊಡುಗೆ ಅಂತ ನಿನ್ನ ಹೆಸರು ಹಾಕಿ ಒಂದು ಕಪಾಟಿನಲ್ಲಿ ಭದ್ರವಾಗಿಡ್ತಾರೆ.’’
       ‘‘ಅದೇನಯ್ಯ ಯೋಚನೆ. ಅಲ್ಲಿ ತಾನೆ ಯಾರು ಅವುಗಳನ್ನ್ನು ಪ್ರೀತಿಯಿಂದ ತೆಗೆದುಕೊಂಡು ಓದ್ತಾರೆ? ಅಲ್ಲೂ ಅವು ಪಳೆಯುಳಿಕೆಗಳಾಗಿ ಅನಾಥವಾಗಿ ಬಿಡಬಹುದು, ಅಂತ ಯೋಚನೆ...’’
‘‘ಏಕಯ್ಯ ಹಾಗಂತಿ?’’

‘‘ಈಗೀಗ ತಂದೆತಾಯಿಯರಿಗೆ, ಮಕ್ಕಳಿಗೆ ಮಾತೃ ಭಾಷೆ ಮಾತಾಡೋದು, ಮಾತೃ ಭಾಷೆಯಲ್ಲಿ ಶಿಕ್ಷಣ ಅಂದರೆ ಅಸಡ್ಡೆ ಕಣಯ್ಯ. ಇದರಿಂದಾಗಿ ಪ್ರಪಂಚದಲ್ಲಿ ಅನೇಕ ಭಾಷೆಗಳು ಆಡೋರಿಲ್ಲದೆ, ಓದೋರಿಲ್ಲದೆ ಸತ್ತುಹೋಗ್ತಿವೆಯಂತೆ....’’

ಮಿತ್ರನ ಕಳವಳ ಸುಳ್ಳಲ್ಲ. ಇತ್ತೀಚಿನ ಒಂದು ವರದಿ ಪ್ರಕಾರ ಇನ್ನು ಐವತ್ತು ವರ್ಷಗಳಲ್ಲಿ ನಾಲ್ಕು ನೂರು ಭಾರತೀಯ ಭಾಷೆಗಳು ನಶಿಸಿಹೋಗಲಿವೆಯಂತೆ. ಅಂದರೆ ಅವು ಅಳಿವಿಂಚಿನಲ್ಲಿವೆ.ವಡೋದರಾದಲ್ಲಿರುವ ‘ದಿ ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ’ ಸಂಶೋಧನಾ ಸಂಸ್ಥೆಯ ವರದಿ ಪ್ರಕಾರ ಇನ್ನು ಐದು ದಶಕಗಳಲ್ಲಿ ಸುಮಾರು ಇನ್ನೂರೈವತ್ತು ಭಾರತೀಯ ಭಾಷೆಗಳು ಜನರ ನಾಲಗೆಯಿಂದ ಅಳಿದು ಗತಕಾಲದ ಇತಿಹಾಸ ಸೇರಲಿವೆ. 1961ರ ಜನಗಣತಿ ವರದಿ ಪ್ರಕಾರ ಭಾರತದಲ್ಲಿ 1,100 ಭಾಷೆಗಳು ಜನರ ನಾಲಗೆಯ ಮೇಲೆ ನಲಿಯುತ್ತಿದ್ದವು, ಪುಸ್ತಕಗಳಲ್ಲಿ ಮುದ್ರಣ ವಿನ್ಯಾಸ ಮತ್ತ ಅಲಂಕಾರಗಳಿಂದ ಬಣ್ಣಬಣ್ಣದ ಜಾಕೆಟ್ ಧರಿಸಿ ಕಂಗೊಳಿಸುತ್ತಿದ್ದವು. ಆದರೆ ಈಗ ಅವುಗಳಲ್ಲಿ ಹಲವಾರು ಭಾಷೆಗಳು ಕೊನೆಯಿಸಿರು ಎಳೆದಿದ್ದು ಹಾಲಿ 400 ಭಾಷೆಗಳು ಮಾತ್ರ ಹಳೆಯ ತಲೆಮಾರಿನವರ ನಾಲಿಗೆಯಡಿ ನರಳುತ್ತಾ ಮರಣಾವಸ್ಥೆಯಲ್ಲಿವೆ.

ಇನ್ನು ಐವತ್ತು ವರ್ಷಗಳ ನಂತರ ಭಾರತದಲ್ಲಿ ಕೇವಲ 450 ಭಾಷೆಗಳು ಮಾತ್ರ ಜೀವ ಉಳಿಸಿಕೊಂಡಿರಬಹುದು ಎನ್ನುತ್ತಾರೆ ಸಂಶೋಧಕರು. ಈ ಆತಂಕಕಾರಿ ಸ್ಥಿತಿ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಇತರ ಪ್ರದೇಶಗಳಲ್ಲೂ ಇದೇ ಸ್ಥಿತಿ. ಹೀಗಾಗಿ ಅನೇಕ ಭಾಷಾ ಪ್ರೇಮಿಗಳ ಕಿವಿಗಳಲ್ಲಿ ತಮ್ಮ ಮಾತೃಭಾಷೆಗಳ ಮರಣದ ಗಂಟೆ ನಿನದಿಸುತ್ತಿದೆ. ಯುನೆಸ್ಕೊ ವರದಿ ಪ್ರಕಾರ ಜಗತ್ತಿನ 7,000 ಭಾಷೆಗಳ ಪೈಕಿ 2,500 ಭಾಷೆಗಳು ಅಳಿವಿನ ಅಪಾಯದ ಅಂಚಿನಲ್ಲಿದ್ದು ಬರಲಿರುವ ವರ್ಷಗಳಲ್ಲಿ ಅವು ಜನರ ನಾಲಗೆಗಳ ಮೇಲಿಂದ ಮಾಯವಾಗಿ ಮೂಕ ಭಾಷೆಗಳಾಗಬಹುದು. ಭಾರತದಲ್ಲಿ 1,652 ತಾಯಿ ನುಡಿಗಳಿದ್ದವು ಎಂದು 1961ರ ಜನಗಣತಿ ವರದಿ ಹೇಳುತ್ತದೆ. ಆದರೆ ತರುವಾಯದ ಕಾಲಮಾನದಲ್ಲಿ ಕಾಲಾಘಾತಕ್ಕೆ ಸಿಲುಕಿ ಆ ಭಾಷೆಗಳು ಅಳಿಯುತ್ತಾ ಹೋಗಿ ಅವುಗಳ ಸಂಖ್ಯೆ ಇಳಿಮುಖವಾಗಿದೆ. ಇದಕ್ಕೆ ಕಾರಣವೇನಿದ್ದೀತು?

ಕಾರಣ ತಿಳಿಯುವ ಉದ್ದೇಶದಿಂದ ‘ಪೀಪಲ್ಸ್ ಲಿಂಗ್ವಿಸ್ಟಿಕ್ಸ್ ಸರ್ವೇ ಆಫ್ ಇಂಡಿಯಾ ಸಂಸ್ಥೆ, ಭಾಷಾ ಶಾಸ್ತ್ರಜ ್ಞ ಗಣೇಶ್ ಎನ್. ದೇವಿ ನೇತೃತ್ವದಲ್ಲಿ ಸಮೀಕ್ಷಾ ಕಾರ್ಯವನ್ನು ಕೈಗೊಂಡಿತು. ಮೂರು ಸಾವಿರ ಜನರ ತಂಡದೊಂದಿಗೆ ಈ ಸಮಿತಿ 2010ರಿಂದ ಕ್ಷೇತ್ರ ಕಾರ್ಯ ನಡೆಸಿ ಹನ್ನೊಂದು ಸಂಪುಟಗಳಲ್ಲಿ ತನ್ನ ವರದಿಯನ್ನು ಸಲ್ಲಿಸಿದೆ. ಗಣೇಶ್ ಎನ್. ದೇವಿಯವರು ಜಗತ್ತಿನ ಎಲ್ಲ ಭಾಷೆಗಳ ಸ್ಥಿತಿಗತಿ ಕುರಿತೂ ಅಧ್ಯಯನ ನಡೆಸುತ್ತಿದ್ದಾರೆ. ಅವರು ವಿಶ್ವದ ವಿವಿಧೆಡೆ ಮಾತನಾಡುವ 6,000 ಜೀವಂತ ಭಾಷೆಗಳ ಬಗ್ಗೆ ಅಧ್ಯಯನ ನಡೆಸಿದ್ದು ಮೊದಲ ಹಂತದಲ್ಲಿ ಆಫ್ರಿಕಾ, ಆಸ್ಟ್ರೇಲಿಯಾ ಮೊದಲಾದ ದೇಶಗಳ ತಾಯ್ನುಡಿ ಅಧ್ಯಯನ ಪೂರೈಸಿದ್ದಾರೆನ್ನಲಾಗಿದೆ.

ಈ ಆರು ಸಾವಿರ ಭಾಷೆಗಳ ಪೈಕಿ ನಾಲ್ಕು ಸಾವಿರ ಭಾಷೆಗಳು ಅಳಿವಿನ ಅಂಚಿನಲ್ಲಿವೆ ಎಂಬುದು ವಿವಂಚನೆಯುಂಟುಮಾಡುವ ಸಂಗತಿ. ಅಧ್ಯಯನ ಪೂರ್ತಿಯಾದಾಗ ಇವುಗಳ ಸ್ಥಿತಿಗತಿ ಕುರಿತು ಸ್ಪಷ್ಟ ಚಿತ್ರ ಸಿಗಬಹುದು. ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಅನನ್ಯತೆ ಇದೆ.ವಿಶೇಷ ಪ್ರಾದೇಶಿಕ ಲಕ್ಷಣಗಳಿವೆ. ಈ ಭಾಷೆಗಳು ನಾಗರಿಕತೆಗಳನ್ನು ಕಟ್ಟಿಬೆಳೆಸುವ ಸಂವಹನ ತಂತುಗಳಾಗಿವೆ. ಅವು ನಾಗರಿಕತೆಗಳ ಏಳುಬೀಳುಗಳ ಕಥೆಗಳನ್ನು ಹೇಳುತ್ತವೆ. ವಿಜ್ಞಾನ, ಕಲೆ, ಸಾಹಿತ್ಯ, ಪರಿಸರ, ಧರ್ಮ, ಪುರಾಣ ಶಾಸ್ತ್ರಗಳು ಇವೆಲ್ಲದರ ಮೂಲವನ್ನು ವಿವಿಧ ಪಾರಿಭಾಷಿಕ ಪದಗಳಲ್ಲಿ ತಲೆಮಾರಿನಿಂದ ತಲೆಮಾರಿಗೆ ಹರಿಸುವ ಜ್ಞಾನ ಗಂಗೆ ಭಾಷೆಗಳು.

ಭಾಷೆ ಒಂದು ಪ್ರದೇಶದ, ಆ ಪ್ರದೇಶದ ಜನರ, ಸಂಸ್ಕೃತಿಯ ಅಸ್ಮಿತೆಯಾಗಿರುತ್ತದೆ. ಪ್ರತಿಯೊಂದು ಭಾಷೆಯೂ ಜಗತ್ತನ್ನು ಅರ್ಥಮಾಡಿಕೊಳ್ಳುವ ಮಾಧ್ಯಮ. ಭಾಷೆಗಳು ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಪ್ರಾಪಂಚಿಕ ಅನುಭಗಳ ಭಂಡಾರವಿದ್ದಂತೆ. ಅವು ಒಂದು ಸಮಾಜ, ಒಂದು ಸಮುದಾಯ, ವ್ಯಕ್ತಿಗಳ ಅಸ್ಮಿತೆ ಮತ್ತು ಸಾಮಾಜಿಕ ನೆನಪುಗಳನ್ನು ಜೀವಂತವಾಗಿರಿಸುವ ಪ್ರಭಾವಿ ಸಾಧನ ಸಂಪತ್ತು. ಆದರೆ ಜಾಗತೀಕರಣದ ಫಲವಾಗಿ ಎಲ್ಲವನ್ನೂ ಏಕತ್ವದಲ್ಲಿ ಹಾಗೂ ಒಂದು ಪ್ರಮಾಣಕ್ಕನುಸಾರವಾಗಿ ಚಾಲ್ತಿಗೆ ತರುವ ಹಪಾಹಪಿತನದ ಶಕ್ತಿಗಳು ಪ್ರಪಂಚದ ಸಣ್ಣಪುಟ್ಟ ಭಾಷೆಗಳನ್ನು ನಿರ್ಲಕ್ಷಿಸುತ್ತಿರುವುದರ ಪರಿಣಾಮವಾಗಿ ಈ ಭಾಷೆಗಳ ಅಸ್ತಿತ್ವಕ್ಕೆ ಅಪಾಯ ತಲೆದೋರಿದೆ, ಈ ಭಾಷೆಗಳನ್ನಾಡುವ ಜನರ ಸಂಸ್ಕೃತಿಗೆ, ಅಸ್ಮಿತೆಗೆ ಧಕ್ಕೆಯುಂಟಾಗಿದೆ.

ವಿಕಾಸವಾದದ ಪ್ರತಿಪಾದನೆಯಂತೆ ಬಲವಿದ್ದವನು ಬದುಕಿದ ಎನ್ನುವಂತೇ ಆಗಿದೆ ಪ್ರಾಂತೀಯ ಭಾಷೆಗಳ ಸ್ಥಳೀಯ ಉಪಭಾಷೆಗಳ ಸ್ಥಿತಿ. ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸಶಕ್ತವಾದ ಭಾಷೆಗಳು ದುರ್ಬಲ ಭಾಷೆಗಳ ಮೇಲೆ ಸವಾರಿ ನಡೆಸುವುದು ಐತಿಹಾಸಿಕವಾಗಿ ಸಾಬೀತಾಗಿರುವ ಸಂಗತಿ. ಸಾಮ್ರಾಜ್ಯಗಳು ಮತ್ತು ಧರ್ಮಗಳು ಕೇವಲ ಶಸ್ತ್ರಾಸ್ತ ಬಲದಿಂದಲೇ ಬದುಕಿ ಉಳಿದಿಲ್ಲ. ಭಾಷೆ ಅವುಗಳ ಜೀವದುಸಿರಾಗಿದ್ದವು ಎಂಬುದೂ ಇತಿಹಾಸವೇದ್ಯವಾದ ಸತ್ಯ ಸಂಗತಿಯಾಗಿದೆ. ಎಂದೇ ಸಾಮ್ರಾಜ್ಯಶಾಹಿ ಭಾಷೆಗಳು ಸ್ಥಳೀಯ ಭಾಷೆಗಳ ಉಸಿರುಗಟ್ಟಿಸುತ್ತಿರುವುದು ಇಂದಿಗೂ ನಮಗೆ ಅನುಭವ ವೇದ್ಯವಾಗಿದೆ. ಇದಕ್ಕೆ ಇಂಗ್ಲಿಷ್‌ಗಿಂತ ಮತ್ತೊಂದು ಉತ್ತಮ ಉದಾಹರಣೆ ಬೇಕಿಲ್ಲ. ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಶೇ.95ರಷ್ಟು ಜನರು ಹದಿನೈದು ಭಾಷೆಗಳನ್ನು ಮಾತ್ರ ಮಾತನಾಡುತ್ತಾರಂತೆ.

ವಸಾಹತುಶಾಹಿ ಆಡಳಿತ ಮತ್ತು ಜಾಗತೀಕರಣದ ದುಷ್ಪರಿಣಾಮಗಳಿಂದಾಗಿ ಅಳಿವಿನಂಚಿಗೆ ಬಂದಿರುವ ಪ್ರಾಂತೀಯ ಭಾಷೆಗಳನ್ನು ಸ್ಥಳೀಯ ಉಪಭಾಷೆಗಳನ್ನು ಉಳಿಸಿಕೊಳ್ಳುವುದೆಂತು? ಇದು ಕೇವಲ ಭಾಷೆಗಳ ಸಾವಿನ ಪ್ರಶ್ನೆಯಲ್ಲ. ಒಂದು ಸಮುದಾಯದ ಭಾಷೆ ನಶಿಸಿತೆಂದರೆ ಆ ಸಮುದಾಯವೇ ನಾಶವಾದಂತೆ. ನಂತರದ ಪ್ರಕ್ರಿಯೆಯಾದ ವಿಸ್ಮತಿಯಲ್ಲಿ ಆ ಸಮುದಾಯದ ಸಂಸ್ಕೃತಿ-ವಿಶಿಷ್ಟ ಚಹರೆಗಳೂ ನಾಶವಾಗುತ್ತವೆ. ಸಾವಿನ ಅಂಚಿನಲ್ಲಿರುವ ಭಾಷೆಗಳನ್ನು ಉಳಿಸಿಕೊಳ್ಳುವುದು ತ್ರಾಸದಾಯಕವಾದದ್ದು. ಪ್ರಾಂತೀಯ/ಸ್ಥಳೀಯ ಭಾಷೆಗಳನ್ನು ಈ ದುರ್ಮರಣದಿಂದ ಪಾರುಮಾಡುವ, ಅವುಗಳನ್ನು ಬೆಳೆಸುವ ಪ್ರಯತ್ನಗಳು ನಡೆಯುತ್ತಿವೆಯಾದರೂ ಅಂಥ ಪ್ರಯತ್ನಗಳಿಗೆ ಸೂಕ್ತ ಸಾಂಸ್ಥಿಕ ಬೆಂಬಲ ಸಿಗುತ್ತಿಲ್ಲ. ನಶಿಸುತ್ತಿರುವ ಭಾಷೆಗಳನ್ನು ಮತ್ತು ಅವುಗಳ ಸಂಸ್ಕೃತಿಯನ್ನು ರಕ್ಷಿಸುವ ಒಂದು ಕ್ರಮ ದಾಖಲೀಕರಣ. ಆದರೆ ಆ ಭಾಷೆಗಳನ್ನು ಆಡುವ ಜನರ ಸಂಖ್ಯೆ ಕಡಿಮೆಯಾದಲ್ಲಿ ಆ ದಾಖಲೆಗಳೆಲ್ಲ ಗ್ರಂಥ ಭಂಡಾರಗಳಲ್ಲಿನ ಪಳೆಯುಳಿಕೆಗಳಾಗಿ ಮೂಕ ಸಾಕ್ಷಿಯಂತಿರುತ್ತವಷ್ಟೆ.

ಆಡುಮಾತಿನಿಂದ ನಿರ್ಗಮಿಸಿದ ಭಾಷೆ ನಿಜವಾದ ಅರ್ಥದಲ್ಲಿ ಅದೊಂದು ಮೂಕ ಭಾಷೆಯೇ ಸರಿ. ಇಂಗ್ಲಿಷ್ ಶಿಕ್ಷಣ ಮಾಧ್ಯಮದ ಮೋಹದಿಂದಾಗಿ ಕನ್ನಡವೂ ಒಂದು ದಿನ ಅಳಿವಿನ ಅಂಚಿನಲ್ಲಿರುವ ಭಾಷೆಯ ಪಟ್ಟಿಗೆ ಸೇರಬಹುದೆಂಬ ಕಳವಳ ಇತ್ತೀಚಿನ ದಿನಗಳಲ್ಲಿ ಅನೇಕ ವೇದಿಕೆಗಳಲ್ಲಿ ವ್ಯಕ್ತವಾಗಿದೆ. ಆದರೆ ಅಂಥ ಭಯ ಅನವಶ್ಯಕ ಎಂದು ‘ದಿ ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ’ ವರದಿ ತಿಳಿಸಿರುವುದು ಸಮಾಧಾಕರ ಸಂಗತಿ. ಎರಡು ಕೋಟಿಗೂ ಹೆಚ್ಚು ಜನರು ಮಾತನಾಡುವ ಕನ್ನಡ, ತಮಿಳು, ತೆಲುಗು, ಮಲೆಯಾಳಿ, ಹಿಂದಿ, ಮರಾಠಿ, ಬಂಗಾಳಿ, ಪಂಜಾಬಿಯಂಥ ಭಾಷೆಗಳಿಗೆ ಇಂಗ್ಲಿಷ್‌ನಿಂದ ಅಪಾಯವಿದೆ ಎಂಬುದು ಕೇವಲ ಭ್ರಮೆ ಎಂದು ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ.

ಕೇಳಲಿಕ್ಕೆ ಇದು ಕಿವಿಗಳಿಗೆ ಆಪ್ಯಾಯಮಾನವಾದುದೇ ಸರಿ. ಹಾಗೆಂದು ಕನ್ನಡಿಗರು ಮೈಮರೆತಲ್ಲಿ ಕನ್ನಡಕ್ಕೆ ಅಪಾಯ ತಪ್ಪಿದ್ದಲ್ಲ. ನಮಗೀಗ ದೇಶದ ಹೊರಗಿನ ಶತ್ರುಗಳಿಗಿಂತ ಬಹುಭಾಷಾ ಸಂಸ್ಕೃತಿ ಹಾಳುಗೆಡಹುವ ಹುನ್ನಾರ ನಡೆಸಿರುವ ಒಳಗಿನವರ ಭೀತಿಯೇ ಹೆಚ್ಚಾಗಿದೆ ಎನ್ನುವ ಮಾತು ಉತ್ಪ್ರೇಕ್ಷೆಯದಲ್ಲ. ರಾಷ್ಟ್ರ ಪ್ರೇಮ-ಭಕ್ತಿಗಳ ನೆಪದಲ್ಲಿ ಈಗಿನ ದೇಶದ ಸಾಂಸ್ಕೃತಿಕ ಹಾಗೂ ಭಾಷಾ ವೈವಿಧ್ಯಗಳನ್ನು ನಾಶಗೊಳಿಸುವ ಉತ್ಸಾಹ ಹೆಚ್ಚಾಗಿ ಕಂಡುಬರುತ್ತಿದೆ. ಏಕಪಕ್ಷದ ಆಡಳಿತ, ಏಕತೆರಿಗೆ, ಏಕ ಭಾಷೆ ಇತ್ಯಾದಿ ಏಕರೂಪತೆಗಳ ಮಾತು ಕೇಳಿಬರುತ್ತಿದೆ.ಇಂಥ ಪರಿಸ್ಥಿತಿಯಲ್ಲಿ ಪ್ರದೇಶ ಭಾಷೆಗಳು ಸುರಕ್ಷಿತವಾಗಿರಲಾರವು ಎನ್ನುವ ಭೀತಿ ಮೂಡುತ್ತಿದೆ. ಹಿಂದೂ ಧರ್ಮ/ವೇದಕಾಲೀನ ಸಂಸ್ಕೃತಿ-ಸಂಸ್ಕೃತಗಳ ಕಕ್ಷೆಯೊಳಗೇ ಏಕತ್ವದಲ್ಲಿ ಭಾರತದ ಹಿರಿಮೆಯನ್ನು ಬಿಂಬಿಸುವ ‘ನವ ಭಾರತ’ದ ಕನಸು ಕಾಣುತ್ತಿರುವ ಈಗಿನ ಆರೆಸ್ಸೆಸ್ ನಿರ್ದೇಶಿತ ಬಿಜೆಪಿ ಸರಕಾರದಿಂದ ನಮ್ಮ ಮಾತೃಭಾಷೆಗಳ ರಕ್ಷಣೆಯಲ್ಲಿ ಎಂಥ ಬೆಂಬಲ/ಪೋಷಣೆಗಳನ್ನು ನಿರೀಕ್ಷಿಸಲು ಸಾಧ್ಯ? ಭಾಷಾವಾರು ರಾಜ್ಯಗಳ ರಚನೆಯ ಮೂಲ ಉದ್ದೇಶ ಮತ್ತು ಅದಕ್ಕಾಗಿ ನಡೆದ ಹೋರಾಟ, ತ್ಯಾಗಗಳನ್ನು ಮರೆತು ಹಿಂದಿಯನ್ನು ಹೇರುವ ಪ್ರಯತ್ನ ನಡೆಸಿರುವ ಮೋದಿ ಸರಕಾರ ಪ್ರಾಂತೀಯ-ಸ್ಥಳೀಯ ಭಾಷೆಗಳ ಪರವಾಗಿರುತ್ತದೆಂದು ಹೇಗೆ ಹೇಳುವುದು?

 ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕು, ಇದಕ್ಕೆ ಸಂವಿಧಾನಕ್ಕೆ ತಿದ್ದುಪಡಿಯನ್ನು ಮಾಡಬೇಕಾಗುತ್ತದೆ. ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸುವ ಶಾಸನಮಾಡುವಂತೆ ಕರ್ನಾಟಕ ಸರಕಾರ ಮತ್ತು ಕನ್ನಡದ ಸಾಹಿತಿಗಳು ಮತ್ತು ಕಲಾವಿದರು ಮಾಡಿರುವ ಮನವಿಗೆ ಮೋದಿಯವರು ಸೂಕ್ತವಾಗಿ ಸ್ಪಂದಿಸಿಲ್ಲ. ಪ್ರದೇಶ ಭಾಷೆಗಳ ಬಗೆಗಿನ ಕೇಂದ್ರ ಸರಕಾರದ ಅಲಕ್ಷ್ಯಕ್ಕೆ ಬೇರೇನು ಸಾಕ್ಷಿ ಬೇಕು? ಭಾಷೆಗಳು ಸಾಯುವುದಿಲ್ಲ. ರಾಜಕೀಯ ಅವುಗಳ ಹತ್ಯೆ ಮಾಡುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)