varthabharthi

ಅನುಗಾಲ

ಶಾಶ್ವತದ ಭ್ರಮೆ ಮತ್ತು ಅರಿವು

ವಾರ್ತಾ ಭಾರತಿ : 24 Aug, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಮೊದಲಿನಿಂದಲೂ ಒಂದು ಕೈಯಲ್ಲಿ ಚಿವುಟಿ ಇನ್ನೊಂದು ಕೈಯಲ್ಲಿ ಕಣ್ಣೀರೊರೆಸುವ ತಂತ್ರ ಮೋದಿಯವರದ್ದು. ಮನಸ್ಸು ಮಾಡಿದರೆ ಗೋರಕ್ಷಕರನ್ನು ಮಟ್ಟಹಾಕುವುದು ಕೇಂದ್ರ ಸರಕಾರಕ್ಕೆ ತೀರ ಚಿಕ್ಕ ವಿಚಾರ. ಆದರೆ ಅವರ ಉದ್ದೇಶವಿರುವುದು ಇಂತಹ ಸಮಸ್ಯೆಗಳನ್ನು ಜೀವಂತವಿರಿಸುವುದರಲ್ಲೇ.


ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ಪ್ರಧಾನಿ ಮೋದಿ ತಮ್ಮ ಸರಕಾರ ಮಾಡಿದ ಸಾಧನೆಗಳನ್ನು ಪುನರುಚ್ಚರಿಸಿದರು. ಕಳೆದ ಮೂರು ವರ್ಷಗಳಿಗಿಂತ ಈ ಬಾರಿಯ ಭಾಷಣ ಚಿಕ್ಕದಾಗಿತ್ತು. ಜೊತೆಗೆ ಭಾಷೆ, ಧಾಟಿಯ ಹೊರತಾಗಿ ನಡೆ-ನುಡಿಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಮುಖ್ಯವಾಗಿ ಜರ್ಮನಿಯ ಬಿಎಮ್‌ಡಬ್ಲ್ಯು ಕಾರಿನ ಬದಲಾಗಿ ಬ್ರಿಟಿಷ್ ಲ್ಯಾಂಡ್ ರೋವರ್ ಕಾರಿನಲ್ಲಿ ಬಂದರು. (ಮೇಕ್ ಇನ್ ಇಂಡಿಯಾ ಈ ಎರಡು ಕಾರುಗಳಡಿ ನರಳಿತು.)

ಪ್ರಧಾನಿ ಯುದ್ಧದ ರಣೋತ್ಸಾಹವನ್ನು ಸ್ವಲ್ಪಬದಿಗಿರಿಸಿ ಮಾತುಕತೆ, ಪ್ರೀತಿಯ ಮಾತನಾಡಿದರು. ದೇಶವನ್ನು ರಾಜ್ಯಗಳ ಒಕ್ಕೂಟ ವ್ಯವಸ್ಥೆಯೆಂದು ಮೊದಲ ಬಾರಿಗೆ ಉದ್ಗರಿಸಿದರು. ಸಹಕಾರ ಮತ್ತು ಸ್ಪರ್ಧೆಗಳು ರಾಜ್ಯ-ರಾಜ್ಯಗಳ ಸಂಬಂಧದಲ್ಲಿರಬೇಕೆಂದು ಉಚ್ಚರಿಸಿದರು. ಉಳಿದಂತೆ ನೋಟು ಅಮಾನ್ಯೀಕರಣ, ಕಪ್ಪುಹಣ, ಜಿಎಸ್‌ಟಿ ಮುಂತಾದ ವಿಚಾರಗಳನ್ನು ಪ್ರಸ್ತಾವಿಸಿದರು. ಹೊಸ ತೆರಿಗೆದಾರರ ಅಂಕಿ-ಅಂಶಗಳಲ್ಲಿ ಹೊಸ ಅಂಕಿ-ಅಂಶಗಳನ್ನು ಹೇಳಿದರು. ಎಲ್ಲಕ್ಕಿಂತ ಮಿಗಿಲಾಗಿ ತಾವು ಶಾಶ್ವತ ಮತ್ತು ತಮಗೆ ಸವಾಲೇ ಇಲ್ಲ ಎಂಬ ವಿಶ್ವಾಸವನ್ನು ಗಟ್ಟಿಪಡಿಸಿಕೊಳ್ಳುವ ರೀತಿಯಲ್ಲಿ ಮಾತನಾಡಿದರು. ಯಾವುದೇ ಸರಕಾರದ ಕ್ರಮಗಳನ್ನು ಸೂಕ್ತವಾಗಿ ನಿಕಷಕ್ಕೆ ಒಡ್ಡುವ ಮೂಲಕ ಮಾಧ್ಯಮಗಳು ವಿರೋಧ ಪಕ್ಷದ ಕೆಲಸವನ್ನು ಮಾಡಬೇಕೆನ್ನು ವುದು ಪತ್ರಿಕೋದ್ಯಮದ ಮೂಲ ರಾಜಕೀಯ ಚಿಂತನೆ. ಕೆಲವು ಪತ್ರಿಕೆಗಳು ಇದನ್ನು ಮಾಡುತ್ತಲೇ ಬಂದಿವೆ.

ಕಾಂಗ್ರೆಸ್ ಸರಕಾರವಿದ್ದಾಗ ಅವು ಕಾಂಗ್ರೆಸಿಗೆ ವಿರೋಧವಾಗಿದ್ದವು. ಈಗ ಭಾಜಪ ಸರಕಾರವಿರುವಾಗ ಅದರ ದೋಷಗಳನ್ನೂ ಗುರುತಿಸಿ ಟೀಕಿಸುತ್ತಿವೆ. ಇಂದಿರಾ ಗಾಂಧಿ ಪತ್ರಿಕಾ ಸೆನ್ಸಾರ್‌ಶಿಪ್ ತಂದಾಗ ಸಂಪಾದಕೀಯವನ್ನು, ಮುಖಪುಟವನ್ನು ಖಾಲಿಬಿಟ್ಟು ಪ್ರತಿಭಟಿಸಿದ ಪತ್ರಿಕೆಗಳು ಅನೇಕವಿದ್ದವು. ಆದರೆ ಈಗ ಅವು ಮೋದಿ ಸರಕಾರವನ್ನು ಟೀಕಿಸಿದರೆ ತಕ್ಷಣ ಅವಕ್ಕೆ ದೇಶದ್ರೋಹದ ಪದವಿ ಪ್ರದಾನವಾಗುತ್ತದೆ. ಬಾಗುವ ಕಲೆಯನ್ನೇ ಕರಗತಮಾಡಿಕೊಂಡ ಕೆಲವೊಂದು ಮಾಧ್ಯಮಗಳು ಅವಿವೇಕದ ವರ್ತನೆಯೊಂದಿಗೆ ದೇಶಭಕ್ತಿಯ ಸಾಕಾರಮೂರ್ತಿಗಳಾಗಿವೆ. ಮಾಧ್ಯಮಗಳು ತಮ್ಮ ಕರ್ತವ್ಯದಲ್ಲಿ ಹಿಂದೆ ಬಿದ್ದಾಗ ಅಥವಾ ತಮ್ಮ ಕರ್ತವ್ಯಕ್ಕೆ ತಿಲಾಂಜಲಿ ಬಿಟ್ಟಾಗ ಪ್ರಜೆಯೇ ಈ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಮೋದಿ ಹೇಳಿದ ವಿಚಾರಗಳ ದೋಷಗಳನ್ನು ಈ ದೇಶದ ಬಹುಮತ ಒಪ್ಪಿಕೊಳ್ಳುವುದಿಲ್ಲ. ಮಾಧ್ಯಮಗಳೂ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತಿಲ್ಲ.

ದುರದೃಷ್ಟವೆಂದರೆ, ಬಹುತೇಕ ಮಾಧ್ಯಮಗಳು ಪೀಕದಾನಿಗಳಂತೆ ನಮ್ಮ ನಾಯಕರು ಉಗುಳಿದ್ದನ್ನೆಲ್ಲ ಯಥಾವತ್ತು ಪ್ರಕಟಿಸುತ್ತವೆಯೇ ಹೊರತು ಅವುಗಳನ್ನು ವಿಮರ್ಶಿಸಿ, ವಿವೇಚಿಸಿ ಓದುಗರಿಗೆ, ಆ ಮೂಲಕ ಜನರಿಗೆ ಹೊಸದೃಷ್ಟಿಯನ್ನು ನೀಡಬಯಸುವುದಿಲ್ಲ. ಸರಕಾರಿ ಸ್ವಾಮ್ಯದ ಆಕಾಶವಾಣಿಯ ಸುದ್ದಿ ಸಂಚಿಕೆಗಳಂತೆ ಮಾಧ್ಯಮಗಳೂ ಇವು ಯಾಕೆ ಸರಿ ಎಂಬ ಸಮರ್ಥನೆಯ ವಾದವನ್ನು ಮಾಡುತ್ತಿವೆ. ಇವಕ್ಕೆ ಹೊರತಾದ ಮತ್ತು ಭಟ್ಟಂಗಿತನಕ್ಕೆ ಮಾರಕವಾದ ಕೆಲವು ವಿಚಾರಗಳನ್ನು ವಿಶ್ಲೇಷಿಸುವುದೇ ನನ್ನ ಉದ್ದೇಶ.

ರಾಜ್ಯ-ರಾಜ್ಯಗಳ ಸ್ಪರ್ಧೆ ಮತ್ತು ಸಹಕಾರ ಅತ್ಯಂತ ಸಹಜವಾದದ್ದು. ಅವು ವಿವಾದಕ್ಕೆ ಗುರಿಯಾಗುವುದು ಕೇಂದ್ರ ತಾರತಮ್ಯವೆಸಗಿದಾಗ ಮಾತ್ರ. ಉಳಿದಂತೆ ನದಿನೀರಿನ, ಗಡಿಯ ವಿವಾದಗಳು ಇದ್ದಾಗಲೂ ಸಂಬಂಧ ಹಳಸುವುದಿಲ್ಲ. ಇನ್ನು ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗಿಂತ ದೊಡ್ಡದು ಅನ್ನಿಸುವುದಿಲ್ಲ; ಅನ್ನಿಸಬಾರದು. ಅದು ಸಮಾನರಲ್ಲಿ ಮೊದಲನೆಯದು. ಸೋದರರಲ್ಲಿ ಹಿರಿಯವನಂತಾದರೂ ದೊಡ್ಡಣ್ಣ ‘ಬಿಗ್ ಬ್ರದರ್’ ಆಗಬಾರದು. ಮೋದಿಯವರು ಸ್ವಾತಂತ್ರ್ಯೋತ್ಸವ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಗಾತ್ರ ವ್ಯತ್ಯಾಸವಿರಬಲ್ಲ ಅಂತಹ ಸಾವಿರಾರು ಕಾರ್ಯಕ್ರಮಗಳು ದೇಶದೆಲ್ಲೆಡೆ ನಡೆದವು. ಜಗತ್ತಿನ ಇನ್ನಿತರ ಭಾರತೀಯ ಕೇಂದ್ರಗಳಲ್ಲೂ ನಡೆದವು.

ಮೋದಿಯವರು ಹೇಳಿಕೊಂಡ ಒಕ್ಕೂಟ ವ್ಯವಸ್ಥೆಯನ್ನು ಮತ್ತು ಅದಕ್ಕಿಂತಲೂ ಹೆಚ್ಚಾಗಿ ಸ್ವಾತಂತ್ರ್ಯದ ಕಲ್ಪನೆಯನ್ನು ಬುಡಮೇಲುಮಾಡಿದಂತೆ ತ್ರಿಪುರಾದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ಭಾಷಣವನ್ನು ಪ್ರಸಾರ ಮಾಡದೇ ಇರುವ ಮೂಲಕ ಆಕಾಶವಾಣಿಯು ತಾನು ಅವಕಾಶವಾಣಿಯೆಂದು ತೋರಿಸಿಕೊಟ್ಟಿತು. ತ್ರಿಪುರಾದಲ್ಲಿರುವುದು ಕಮ್ಯುನಿಸ್ಟ್ ಸರಕಾರ. ಸಹಜವಾಗಿಯೇ ಅವರಿಗೂ ಕೇಂದ್ರ ಸರಕಾರಕ್ಕೂ ಆದ್ಯತೆಗಳಲ್ಲಿ, ಆದರ್ಶಗಳಲ್ಲಿ, ಯೋಜನೆಗಳಲ್ಲಿ, ಗ್ರಹಿಕೆಯಲ್ಲಿ, ಅಭಿಪ್ರಾಯಭೇದವಿರುವುದು ಸಹಜ. ಕಳೆದ ಸುಮಾರು ಎರಡು ದಶಕಗಳಿಂದ ಅಲ್ಲಿ ಮುಖ್ಯ ಮಂತ್ರಿಯಾಗಿರುವ ಮಾಣಿಕ್ ಸರ್ಕಾರ್ ಈ ದೇಶದಲ್ಲಿರುವ ಅಪರೂಪದ ಸರಳ, ಪ್ರಾಮಾಣಿಕ ಸಾಧಕರಲ್ಲೊಬ್ಬರು. ಅವರು ತಮ್ಮ ಮಿತಿ ಮತ್ತು ವ್ಯಾಪ್ತಿಯಲ್ಲಿ ಜಾತ್ಯತೀತತೆ ಈಗ ಎದುರಿಸುತ್ತಿರುವ ಗಂಡಾಂತರ, ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಅವಾಂತರ ಮುಂತಾದ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ದಬ್ಬಾಳಿಕೆಯ ಕುರಿತು ಸ್ವತಃ ಮೋದಿಯವರೇ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದರು. ಆದರೆ ಈ ಸ್ವಾತಂತ್ರ್ಯ ಅವರೊಬ್ಬರಿಗೇ ಇದೆಯೆಂಬ ರೀತಿಯಲ್ಲಿ ಆಕಾಶವಾಣಿಯು ನಡೆದುಕೊಂಡಿತು. ತಮ್ಮ ಭಾಷಣವನ್ನು ಸರಿಪಡಿಸಬೇಕೆಂದು ಅದು ಮಾಣಿಕ್ ಸರ್ಕಾರ್ ಅವರಿಗೆ ಸೂಚಿಸಿತು. ಅವರು ಒಪ್ಪದಿದ್ದಾಗ ಅವರ ಭಾಷಣವನ್ನು ಕಪ್ಪುಪಟ್ಟಿಗೆ ಸೇರಿಸಿತು. ಪ್ರಸಾರ್ ಭಾರತಿಯ ಮುಖ್ಯಸ್ಥರಾದ ಸೂರ್ಯಪ್ರಕಾಶ್ ಅವರ ಬರಹಗಳನ್ನು ಓದಿದವರಿಗೆ ಆಕಾಶವಾಣಿಯ ಈ ನಿಲುವು ನಿರೀಕ್ಷಿತ. ಬಾಗಲು ಹೇಳಿದರೆ ತೆವಳುವವರಿಗೆ 1975-77ರ ತುರ್ತು ಪರಿಸ್ಥಿತಿಯಂತೆ ಈಗಲೂ ಸುವರ್ಣಾವಕಾಶ. ಆದ್ದರಿಂದ ಕೆಂಪುಕೋಟೆಯಲ್ಲಿ ಮೋದಿ ಹೇಳಿದ ಒಕ್ಕೂಟ ವ್ಯವಸ್ಥೆಯ ಧ್ವಜ ಕ್ಷಣಾರ್ಧದಲ್ಲೇ ಹರಿದು ಹೋಯಿತು.

ಮೊನ್ನೆಯ ಭಾಷಣದ ಆನಂತರ ಇನ್‌ಫೋಸಿಸ್‌ನ ಸಂಸ್ಥಾಪಕರಲ್ಲೊಬ್ಬರಾದ ಎನ್.ಆರ್.ನಾರಾಯಣ ಮೂರ್ತಿ ಮೋದಿಯವರು ಹೇಳಿದ ಒಕ್ಕೂಟ ವ್ಯವಸ್ಥೆ ಮತ್ತು ರಾಜ್ಯ-ರಾಜ್ಯಗಳ ನಡುವಣ ಸಹಕಾರ-ಸ್ಪರ್ಧೆಯ ಪ್ರಸ್ತಾವನೆಯನ್ನು ಶ್ಲಾಘಿಸಿದರು. ಒಂದು ಕಾಲಕ್ಕೆ ನವತಂತ್ರಜ್ಞಾನದ ಹರಿಕಾರರಲ್ಲೊಬ್ಬರಾಗಿದ್ದ ನಾರಾಯಣ ಮೂರ್ತಿ ಈಗ ಅಸಲೀ ವ್ಯವಹಾರಸ್ಥರಾಗಿ ಉಳಿದಿದ್ದಾರೆಂಬುದಕ್ಕೆ ಅವರದೇ ಕೂಸು ಇನ್‌ಫೋಸಿಸ್ ಪಡುವ ಪಾಡನ್ನು ಗಮನಿಸಬಹುದು. ಯೌವನ ಜಾರಿದಾಗ ಮುಂದಿನ ತಲೆಮಾರಿಗೆ ಪಟ್ಟವನ್ನು ಬಿಟ್ಟುಕೊಟ್ಟು ತೆರೆಮರೆಗೆ ಸರಿಯುವುದು ಒಳ್ಳೆಯ ಪರಿವರ್ತನೆ. ಅವರೂ ಇದನ್ನೇ ಮಾಡಿದ್ದರು. ಆದರೆ ಅಲ್ಲಿಂದಲೇ ಗೊಂಬೆಯಾಟವನ್ನು ಆಡಬಯಸಿದಾಗ ರಂಗದಲ್ಲಿರುವ ಮುಖ್ಯಸ್ಥರು ಪ್ರತಿಕ್ರಿಯಿಸುವುದು ಸಹಜ. ನಾರಾಯಣ ಮೂರ್ತಿಯವರು ತಾನು ಎದುರಿಸಬೇಕಾದ ಸವಾಲೆಂದರೆ ತನ್ನ ಕ್ರಿಯೆಗಳು ಸಮಾಜದಲ್ಲಿ ತನ್ನ ಮತ್ತು ತನ್ನ ಕಂಪೆನಿಯ ಗೌರವವನ್ನು ಹೆಚ್ಚಿಸುತ್ತದೆಯೇ ಎಂಬುದು ಎಂದು ಬೇರೊಂದು ಸಂದರ್ಭದಲ್ಲಿ ಹೇಳಿದ್ದಾರೆ. ಆದರೆ ಅವರು ಇನ್‌ಫೋಸಿಸ್‌ನ ಗತಿಯ ಕುರಿತು ಕೈಗೊಂಡ ಕ್ರಮ ಅವರ ಈ ಆದರ್ಶವನ್ನು ಬಿಂಬಿಸುತ್ತಿದೆಯೇ ಎಂಬುದನ್ನು ಅವರು ತಮಗೇ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಸಿಕ್ಕಾ ಅವರ ರಾಜೀನಾಮೆ ಮತ್ತು ಆನಂತರದ ಅಲ್ಲಿನ ಬೆಳವಣಿಗೆ ರಾಜಕೀಯವನ್ನು ನಾಚಿಸುವಂತಿದೆ. ಸಾವಿರಾರು ಮಂದಿಯ ಅನ್ನದ ಪ್ರಶ್ನೆಯಾಗಿರುವ ಈ ಸಂಸ್ಥೆಯು ಮುಂದೇನಾಗಬಹುದು ಎಂಬುದು ಯಕ್ಷ ಪ್ರಶ್ನೆ. ಒಳಿತನ್ನು ಹಾರೈಸೋಣ.

ಇಂತಹ ನಾರಾಯಣ ಮೂರ್ತಿ ಮೋದಿಯವರ ವಿಚಾರಗಳನ್ನು ಮೆಚ್ಚಿಕೊಂಡಾಗ ಅದರಲ್ಲಿ ಆರ್ಥಿಕ ಲಾಭ ಮತ್ತು ರಾಜಕೀಯ ಬೆರೆತು ಕೊಳ್ಳುತ್ತದೆ. ಅದಾನಿ, ಅಂಬಾನಿಗಳಂತೆ ಮೋದಿಯವರ ಆಪ್ತವಲಯದಲ್ಲಿ ನಾರಾಯಣ ಮೂರ್ತಿ ಎಂದೂ ಗುರುತಿಸಿಕೊಳ್ಳಲಿಲ್ಲ. ಆದರೆ ಪ್ರತಿಷ್ಠಿತ ವಾದ ಸಾರ್ವಜನಿಕ ಸ್ಥಾನ-ಮಾನಗಳನ್ನು ಮೋದಿಕಾಲದಲ್ಲಿ ಅವರು ಪಡೆಯಬಹುದೆಂದು ಅವರ ಸಹಿತ ಬಹಳಷ್ಟು ಜನರು ನಿರೀಕ್ಷಿಸಿದ್ದರು. ಆದರೆ ಹಾಗಾಗಲಿಲ್ಲ. (ಈ ಅದೃಷ್ಟ ಮೋದಿಯ ಹೊಗಳಿಕೆಯನ್ನೇ ತತ್ವಶಾಸ್ತ್ರವಾಗಿ ಮಾಡಿಕೊಂಡ ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪನವರಿಗೂ, ಎಲ್ಲವನ್ನೂ ಬಲಪಂಥೀಯವಾಗಿ ಸಂಶೋಧಿಸಲು ಆರಂಭಿಸಿದ ಎಂ. ಚಿದಾನಂದ ಮೂರ್ತಿಯವರಿಗೂ ಒಲಿಯಲಿಲ್ಲ!) ಇವನ್ನೆಲ್ಲ ಗಮನಿಸಿದರೆ ನಾರಾಯಣಮೂರ್ತಿಯವರ ಅಭಿಮತದ ಹಿಂದೆ ನಿರೀಕ್ಷೆ ಮತ್ತು ಗುಪ್ತ-ದೂರದೃಷ್ಟಿ ಸೇರಿಕೊಂಡಿದೆಯೆಂದು ಅನ್ನಿಸುತ್ತದೆ.

ಪ್ರೀತಿ ಮತ್ತು ಯುದ್ಧದಲ್ಲಿ ಏನೇ ಮಾಡಿದರೂ ಸರಿಯೇ. ಇವಕ್ಕೆ ಈ ಒಂದು ಕಾರಣದಿಂದಲೇ ಶಾಶ್ವತ ಸಮೀಕರಣ ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು. ಆದರೆ ಮೋದಿಯವರು ಈ ಎರಡು ಅಂಶಗಳನ್ನು ಭಿನ್ನರೀತಿಯಲ್ಲಿ (ಪ್ರ)ದರ್ಶಿಸಿದರು. ಪಾಕಿಸ್ತಾನದ ವಿರುದ್ಧ ಗುಡುಗಿದ ಮೋದಿ ಚೀನಾದ ಡೋಕಾಲಾ ಪ್ರಕರಣದಲ್ಲಿ ಈ ಮೋಡಬಿತ್ತನೆಯ ಕೆಲಸವನ್ನು ಮಾಡಲಿಲ್ಲ ಅಥವಾ ಮಾಡಲಾಗಲಿಲ್ಲ. ಅದಕ್ಕಾಗಿ ಅವರು ಕಾಶ್ಮೀರದ ಸಮಸ್ಯೆಯನ್ನು ಎತ್ತಿಕೊಂಡು ‘ಪ್ರೀತಿಸು-ದ್ವೇಷಿಸಬೇಡ’ ಎಂಬ ಕ್ಲೀಷೆಗೊಂಡ ಉಕ್ತಿಯನ್ನಾಡಿದರು. ಪ್ರಶ್ನೆಯಿರುವುದು ಈ ಮಾತುಗಳನ್ನಾಡುವುದಕ್ಕೆ ಮತ್ತು ಅದನ್ನು ತಾತ್ವಿಕವಾಗಿ ಪ್ರಯೋಗಿಸುವುದಕ್ಕೆ ಇಷ್ಟು ವಿಳಂಬವಾಯಿತೇಕೆ ಎಂಬುದು. ಮೊದಲಿನಿಂದಲೂ ಒಂದು ಕೈಯಲ್ಲಿ ಚಿವುಟಿ ಇನ್ನೊಂದು ಕೈಯಲ್ಲಿ ಕಣ್ಣೀರೊರೆಸುವ ತಂತ್ರ ಮೋದಿಯವರದ್ದು. ಮನಸ್ಸು ಮಾಡಿದರೆ ಗೋರಕ್ಷಕರನ್ನು ಮಟ್ಟಹಾಕುವುದು ಕೇಂದ್ರ ಸರಕಾರಕ್ಕೆ ತೀರ ಚಿಕ್ಕ ವಿಚಾರ. ಆದರೆ ಅವರ ಉದ್ದೇಶವಿರುವುದು ಇಂತಹ ಸಮಸ್ಯೆಗಳನ್ನು ಜೀವಂತವಿರಿಸುವುದರಲ್ಲೇ.

ಇದು ಮೋದಿ ಅಂತಲ್ಲ, ಎಲ್ಲ ರಾಜಕೀಯ ಪಕ್ಷಗಳ ಸಿದ್ಧಾಂತವೂ ಹೌದು. ಬಹಳಷ್ಟು ವರ್ತಮಾನದ ಸಮಸ್ಯೆಗಳ ಬೇರು ಇರುವುದು ಕಾಂಗ್ರೆಸಿನ ಆಡಳಿತ ಇತಿಹಾಸದಲ್ಲಿ. ಅವನ್ನು ಭಾಜಪ ಹೈಜಾಕ್ ಮಾಡಿದೆ ಅಷ್ಟೇ. ಕೆಲವು ಒಳ್ಳೆಯ ಪರಿಣಾಮ, ಫಲಿತಾಂಶ ನೀಡಿವೆ; ಇನ್ನು ಕೆಲವು ಕೆಟ್ಟ ಪರಿಣಾಮ, ಫಲಿತಾಂಶಗಳನ್ನು ನೀಡಿವೆ. ಜಿಎಸ್‌ಟಿ ತೆರಿಗೆ ಪದ್ಧತಿ ಕಾಂಗ್ರೆಸ್ ಸರಕಾರವಿದ್ದಾಗಲೇ ರೂಪುಗೊಂಡಿತ್ತು. ಅದು ಮಂಡನೆಯಾಗಲು, ಮಂಜೂರಾಗಲು, ಕೇಂದ್ರದಲ್ಲಿದ್ದ ವಿರೋಧ ಪಕ್ಷಗಳು ಮಾತ್ರವಲ್ಲ, ಮೋದಿ ಸಹಿತ ಸಾಕಷ್ಟು ವಿರೋಧಪಕ್ಷಗಳ ರಾಜ್ಯ ಸರಕಾರಗಳೂ ಕಾರಣ. ಈಗ ಕಾನೂನಾಗಿ ಬಂದಿರುವ ಈ ತೆರಿಗೆ ಪದ್ಧತಿಯನ್ನು ‘‘ದೇಶವನ್ನೂ, ಜನರನ್ನೂ ಲೂಟಿ ಮಾಡಲು ಹಾಕಿಕೊಂಡ ಸಂಚು’’ ಎಂದು (ಈಗ ಮರೆತಿದ್ದಾರಾದರೂ) ಮೋದಿಯೇ ಬಣ್ಣಿಸಿದ್ದರು. ಇದೇ ರೀತಿಯಲ್ಲಿ ‘ಆಧಾರ್’ ಯೋಜನೆಯನ್ನು ಒಂದು ದೊಡ್ಡ ಗೋಲ್ ಮಾಲ್ ಎಂದು ಮೋದಿಯ ಸಹಿತ ಸಾಕಷ್ಟು ಜನರು ಪ್ರಚಾರ ಮಾಡಿ ದ್ದರು. ಅದರ ಯೋಜಕ ನಂದನ್ ನಿಲೇಕಣಿ ಒಬ್ಬ ರಾಜಕೀಯೇತರ ದಕ್ಷ ವೃತ್ತಿಪರನೆಂಬುದನ್ನು ಮರೆತು ಎಲ್ಲರೂ ಅಪಚಾರದ ಮಾತುಗಳನ್ನಾಡಿದ್ದರು. ಆದರೆ ಕೊನೆಗೂ ಆಧಾರ್ ಈ ದೇಶದ ಕ್ರಾಂತಿಕಾರಕ ಮತ್ತು ಮಹತ್ತರ ಯೋಜನೆಗಳಲ್ಲೊಂದೆಂಬುದನ್ನು ದೇಶ ಒಪ್ಪಿಕೊಂಡಿದೆ.

ಇವೆಲ್ಲವುಗಳ ಹಿಂದೆ ನಿಜವಾದ ರಾಷ್ಟ್ರನೀತಿಯನ್ನು ಒಪ್ಪಿಕೊಳ್ಳುವ ಮನಸ್ಸು, ಧೈರ್ಯ ಇಲ್ಲದಿದ್ದರೆ ಎಲ್ಲ ರಾಜಕಾರಣಿಗಳೂ ತಮ್ಮ ತುತ್ತೂರಿಯನ್ನು ತಾವೇ ಊದುವ ಸಾಮಾನ್ಯರಾಗುತ್ತಾರೆಯೇ ವಿನಾ ಮುತ್ಸದ್ದಿಗಳಾಗಲಾರರು. ನಮ್ಮ ರಾಷ್ಟ್ರಭಕ್ತಿಯನ್ನು ಇಂತಹ ರಾಷ್ಟ್ರನೀತಿ ಯೆದುರು ಪರೀಕ್ಷಿಸಬೇಕು. ಅದಲ್ಲದಿದ್ದರೆ ಯಾವುದೇ ಸಾಮಾಜಿಕ, ಸಮೂಹ ಹಿತದ ಪ್ರಶ್ನೆ ಬಂದಾಗ ನಾವು ಮಾಡಿದರೆ ಸರಿ, ನಾವು ಮಾಡಿದ್ದೇ ಸರಿ ಎಂಬ ಹುಂಬ ಅಹಂಭಾವ ಸೃಷ್ಟಿಯಾಗುತ್ತದೆ. ಶಾಶ್ವತವಾದ ಒಳಿತನ್ನು ಸಾಧಿಸುವವರಷ್ಟೇ ದೇಶಕ್ಕೆ ಹಿತ. ಕೇಡು ಎಂದೂ ಶಾಶ್ವತ ನೆಲೆಯನ್ನು ಕಲ್ಪಿಸಿಲ್ಲ.

ಭಾಜಪಾದ ಅಧ್ಯಕ್ಷ ಅಮಿತ್ ಶಾ ತಾವು ಇನ್ನೂ ಐವತ್ತು ವರ್ಷ ಆಡಳಿತದಲ್ಲಿರುತ್ತೇವೆ ಎಂದು ಹೇಳಿದಾಗ ಜನರು ತಮ್ಮನ್ನು ಅಲ್ಲಿಯವರೆಗೆ ತಾಳಿಕೊಳ್ಳುತ್ತಾರೆಂಬ ವಿಶ್ವಾಸದಿಂದ ಹೇಳಿರಬೇಕು. ಈ ವಿಶ್ವಾಸ ಉಳಿಯಬೇಕಾದರೆ ಘೋಷಣೆಗಳು, ಕೃತ್ರಿಮಗಳು, ಬದಿಗೆ ಸರಿದು ಸತ್ಯ, ಸತ್ವ, ನ್ಯಾಯ, ಧರ್ಮಗಳು ವಿಶಾಲ ದೃಷ್ಟಿಯನ್ನು ಪಡೆದುಕೊಂಡು ನಡೆಯುವುದು ಎಲ್ಲರಿಗೂ ಗೊತ್ತಾಗಬೇಕಾಗುತ್ತದೆ; ಅರ್ಥವಾಗದಿದ್ದರೂ ಅನುಭವಕ್ಕೆ ಬರಬೇಕಾಗುತ್ತದೆ. ಪ್ರಾಸಂಗಿಕವಾಗಿ ನೆನಪಿಸಿಕೊಳ್ಳಬಹುದಾದರೆ ದೇಶದ ಮುಖ್ಯ ಚುನಾವಣಾ ಆಯುಕ್ತರು ಈ ದೇಶದ ಪ್ರಜಾತಂತ್ರದ ಚುನಾವಣೆಗಳು ಹೇಗೆ ಹಣ, ತೋಳ್ಬಲ, ಅನೈತಿಕತೆಯನ್ನು ಗೆಲುವಿನ ಸಾಧನಗಳನ್ನಾಗಿಸಿವೆಯೆಂಬುದನ್ನು ಹೇಳಿದ ರೀತಿ ಮತ್ತು ಹೇಗೆ ಟೀಕಿಸಿದರೆಂಬುದನ್ನು ಗಮನಿಸಿದರೆ ನಮ್ಮ ಮೌಲ್ಯಗಳು ಎಷ್ಟು ಶಾಶ್ವತ, ಎಷ್ಟು ಶಿಥಿಲ ಮತ್ತು ಎಷ್ಟು ಭ್ರಮೆ ಎನ್ನುವುದು ಮನದಟ್ಟಾದೀತು. ಆಕಾಶವಾಣಿಯೂ ಇದನ್ನು ಕೇಳಿಸಿಕೊಂಡರೆ ಒಳಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)