varthabharthi

ಭೀಮ ಚಿಂತನೆ

ಡಾ. ಬಿ.ಆರ್.ಅಂಬೇಡ್ಕರ್ ಅವರ ಆಯ್ದ ಭಾಷಣ-ಬರಹಗಳು

ಸ್ವರಾಜ್ಯದ ಶ್ರೇಷ್ಠತೆ ಸುರಾಜ್ಯಕ್ಕಿಲ್ಲ

ವಾರ್ತಾ ಭಾರತಿ : 25 Aug, 2017

ಇಂದಿನವರೆಗೆ ನಮಗೆ ಗೊತ್ತಿರುವ ಭೂಗೋಲವನ್ನು, ಅದರಲ್ಲಿರುವ ದೇಶಗಳನ್ನು ರಾಜಕೀಯ ದೃಷ್ಟಿಯಿಂದ ನೋಡಿದಾಗ ನಾವದನ್ನು ಎರಡು ಭಾಗಗಳಲ್ಲಿ ವಿಂಗಡಿಸಬಹುದು.

1. ಸ್ವಯಂಶಾಸಿತ ದೇಶ 2. ಪರಶಾಸಿತ ದೇಶ
 ಸ್ವಯಂಶಾಸಿತ ದೇಶದಲ್ಲಿ ಎಲ್ಲ ಜವಾಬ್ದಾರಿಗಳು ಆ ದೇಶವಾಸಿಗಳದ್ದಾಗಿರುತ್ತದೆ. ಅದೇ ಪರಶಾಸಿತ ದೇಶದ ಸ್ಥಿತಿ ಹಾಗಿರುವುದಿಲ್ಲ. ಅದರ ರಾಜ್ಯ ಕಾರ್ಯಭಾರ ಹೊರದೇಶದ ಜನರ ಕೈಯಲ್ಲಿರುತ್ತದೆ. ಈ ವಿಂಗಡನೆಯಲ್ಲಿ ಭಾರತ ಎರಡನೆಯ ಶಾಸನದಡಿ ಬರುತ್ತದೆ. ಈ ದೇಶದಲ್ಲಿ ಹಿಂದೂ ಮುಸಲ್ಮಾನರು, ಪಾರಸಿ ಜನರು ವಾಸಿಸುತ್ತಿದ್ದರೂ ಅವರೆಲ್ಲರನ್ನೂ ಹಿಂದೂಗಳೆಂದೇ ಸಂಬೋಧಿಸಲಾಗುತ್ತದೆ. ಆದರೆ ಈ ಹಿಂದೂಗಳನ್ನು ಆಳುವವರು ಮಾತ್ರ ಹಿಂದೂಗಳಲ್ಲ, ಆದ್ದರಿಂದ ಹಿಂದೂ ಜನ ಸ್ವಯಂಶಾಸಿತರಲ್ಲ. ಅನೇಕ ವರ್ಷಗಳಿಂದ ಭಾರತವು ಪರಕೀಯರ ಕೈಯಲ್ಲಿದೆ. ಈ ಸುಜಲಾಂ ಸುಫಲಾಂ ದೇಶವನ್ನು ಗೆಲ್ಲಲು ಅನೇಕ ಹಳೆಯ ಪಾಶ್ಚಾತ್ಯ ರಾಷ್ಟ್ರಗಳು ಸುಮಾರು ಸಲ ಪ್ರಯತ್ನಪಟ್ಟವು. ರೋಮನ್ ಹಾಗೂ ಗ್ರೀಕ್ ದೇಶಗಳು ಕೂಡ ಇದಕ್ಕೆ ಹೊರತಾಗಿರಲಿಲ್ಲ.

ಅವರಾರಿಗೂ ಸಫಲತೆ ಸಿಗಲಿಲ್ಲ. ಆದರೆ ಮುಸಲ್ಮಾನರಿಗೆ ಈ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ. ಭಾರತದ ಮೇಲೆ ಮುಸಲ್ಮಾನರ ದಾಳಿ 986ನೆಯ ಇಸವಿಯಲ್ಲೇ ಆರಂಭವಾಗಿದ್ದರೂ ಈ ದೇಶದಲ್ಲಿ ಅವರಿಗೆ ಕಾಲೂರಲು ಸಾಕಷ್ಟು ಸಮಯಾವಕಾಶ ಬೇಕಾಯಿತು. ಪೃಥ್ವಿರಾಜ್ ಚವ್ಹಾಣ 1193ರಲ್ಲಿ ಯುದ್ಧದಲ್ಲಿ ಮಡಿದಾಗ ಹಿಂದೂ ಬಾದಶಾಹರ ದಿಲ್ಲಿಯ ಸಿಂಹಾಸನ ಬರಿದಾಗಿತ್ತು. ತದನಂತರ ಆ ಸಿಂಹಾಸನವನ್ನು ಕಿತ್ತುಕೊಂಡ ಪಠಾಣರನ್ನು 1526ರ ಪಾನಿಪತ್‌ನಲ್ಲಿ ಮೊಘಲ್ ಅಧಿಪತಿ ಬಾಬರನು ಸೋಲಿಸಿ ದಿಲ್ಲಿಯಲ್ಲಿ ತಾನು ಹಿಂದೂಸ್ಥಾನದ ಬಾದಶಾಹ ಎಂದು ಘೋಷಿಸಿದನು. ಆದರೆ ಇವರು ಕಾಲೂರಿದ ಇನ್ನೂರು ವರ್ಷಗಳೊಳಗೆ ದಿಲ್ಲಿಯ ಸಿಂಹಾಸನವನ್ನು ಗೆದ್ದ ಮುಸಲ್ಮಾನರ ಸಾರ್ವಭೌಮತ್ವವು ನೆಲಕಚ್ಚಲಾರಂಭಿಸಿತು. ಕೆಲವು ಕಾಲ ಈ ಸಿಂಹಾಸನವು ಮರಾಠಾ ಜನರ ಕೈಯಲ್ಲಿತ್ತು. ಕಡೆಗೊಂದು ದಿನ ಅದು ಶಾಶ್ವತವಾಗಿ ಇಂಗ್ಲಿಷರ ಕೈಗೆ ಹೊರಟುಹೋಗಿದ್ದ ಇಂದಿನವರೆಗೆ ದೇವರ ಯೋಜನೆಯಂತೆ ಅವರ ಕೈಯಲ್ಲೇ ಇದೆ. ಹೀಗಿದೆ ಈ ದೇಶದ ಪಾರತಂತ್ರ್ಯದ ಪೂರ್ವ ಇತಿಹಾಸ.

 ಸಾಮಾನ್ಯವಾಗಿ ರಾಜಕಾರಣದ ಎರಡು ಮುಖ್ಯ ಉದ್ದೇಶಗಳಿರುತ್ತವೆ. ಒಂದು ಶಾಸನ ಮತ್ತೊಂದು ಸಂಸ್ಕೃತಿ. ಶಾಸನ ಅಂದರೆ ಶಿಸ್ತು ಅಥವಾ ಶಾಂತತೆಯನ್ನು ಕಾಪಾಡುವುದು. ಶಾಂತತೆಯನ್ನು ಎರಡು ರೀತಿಯಲ್ಲಿ ಭಂಗಗೊಳಿಸಬಹುದು. ಪರರ ಆಕ್ರಮಣದಿಂದ ಹಾಗೂ ಅಂತರ್‌ಕಲಹದಿಂದ ಕೂಡ. ಹೊರದೇಶದಿಂದ ಆಕ್ರಮಣವಾಗುವ ಸಾಧ್ಯತೆ ಬಹಳ ಕಡಿಮೆಯಾದ್ದರಿಂದ ಆ ವಿಷಯವನ್ನು ಪಕ್ಕಕಿಟ್ಟು ಶಾಸನ ನಡೆಸುವಾಗ ಅಂತರ್‌ವ್ಯವಸ್ಥೆಯನ್ನು ಸರಿಯಾಗಿಟ್ಟುಕೊಳ್ಳುವುದೇ ಉದ್ದೇಶವಾಗುತ್ತದೆ.

ಯಾವುದೇ ರಾಷ್ಟ್ರದಲ್ಲಿ ಜಾತಿ ಹಾಗೂ ಪಂಗಡಗಳು ಇದ್ದೇ ಇರುತ್ತವೆ. ಅಷ್ಟೇಯಲ್ಲದೆ ಆಯಾ ಜಾತಿಗಳ ಮಧ್ಯೆ ಹಾಗೂ ವೈಯಕ್ತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಧಾರ್ಮಿಕ ಹಿತಸಂಬಂಧಗಳಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ. ಈ ಭಿನ್ನಾಭಿಪ್ರಾಯಗಳಿಂದಲೇ ಒಬ್ಬ ವ್ಯಕ್ತಿ ಅಥವಾ ಜಾತಿಯವರು ತಮ್ಮ ಒಳ್ಳೆಯದಕ್ಕಾಗಿ ಬೇರೊಬ್ಬ ವ್ಯಕ್ತಿಯ ಮೇಲೆ ಅಥವಾ ಜಾತಿಯ ಮೇಲೆ ದಂಗೆ ಎದ್ದರೆ ಇಲ್ಲವೆ ಇನ್ಯಾವುದೇ ರೀತಿಯಿಂದ ಹಾನಿ ಮಾಡಿದರೆ ದೇಶದ ಶಾಂತಿಗೆ ಭಂಗ ಬರುತ್ತದೆ. ಶಾಂತಿಯಿಲ್ಲದೆ ಸಾಮಾಜಿಕ ಜೀವನ ಅಪಾಯಕ್ಕೊಳಗಾಗಿ ಮಾನವನ ದಿನನಿತ್ಯದ ಕೆಲಸಗಳಲ್ಲಿ ತೊಡಕುಂಟಾಗುತ್ತದೆ. ಆದ್ದರಿಂದ ಶಾಸನ ನಡೆಸುವುದು ಒಂದು ಮುಖ್ಯ ಉದ್ದೇಶವಾಗಿದ್ದರೂ ಕೇವಲ ಶಾಸನ ನಡೆಸುವವರು ಅಂದರೆ ಪ್ರಜೆಗಳಿಗೆ ಹಾಗಲ್ಲ ಹೀಗೆ, ಹೀಗಾದರೆ ತೊಂದರೆ, ಇಂತಹ ಕೆಲಸ ಮಾಡಿದರೆ ಶಾಂತತೆಗೆ ಭಂಗವಾಗುತ್ತದೆ, ದಂಡ ಹೇರಲಾಗುತ್ತದೆ ಎಂದೆಲ್ಲ ದಬಾಯಿಸುವ ರಾಜ್ಯಪದ್ಧತಿಯನ್ನವಲಂಬಿಸಿದರೆ ಅಂತಹ ರಾಜ್ಯಪದ್ಧತಿಯನ್ನು ಇಂದಿನ ಕಾಲದಲ್ಲಿ ತಾರತಮ್ಯವಾಗಿ ಅಸಭ್ಯ, ಅಸಾಂಸ್ಕೃತಿಕ ಪದ್ಧತಿ ಅನ್ನಬಹುದು.

ಮುಂದುವರಿದ ರಾಷ್ಟ್ರಗಳ ರಾಜ್ಯಪದ್ಧತಿಯ ಉದ್ದೇಶ ಶಾಸನದಷ್ಟೆ ಸಂಸ್ಕೃತಿಯೂ ಆಗಿರುತ್ತದೆ. ಈಗಿರುವುದಕ್ಕಿಂತ ಹೆಚ್ಚು ಒಳ್ಳೆಯ ರೀತಿಯಿಂದ ಪ್ರಜೆಯ ಉನ್ನತಿ ಹೇಗೆ ಸಾಧ್ಯ? ಅನ್ನುವುದರ ಬಗ್ಗೆ ಉಪಾಯ ಯೋಜನೆಗಳನ್ನು ರಚಿಸುವುದು, ಶಾಸನದ ಉಪಾಯ ಯೋಜನೆಗಳನ್ನು ಎಲ್ಲರಲ್ಲಿ ಸಮನಾಗಿ ಹಂಚುವುದು, ಉನ್ನತಿಗಾಗಿ ಅನುಕೂಲ ಪರಿಸ್ಥಿತಿಯನ್ನು ನಿರ್ಮಿಸುವುದು, ಬಹುಶಃ ಶಾಸನದಷ್ಟೆ ಅಥವಾ ಅದಕ್ಕಿಂತಲೂ ಹೆಚ್ಚು ಮಹತ್ವದ ಕೆಲಸ ಇದಾಗಿದೆ.

 ರಾಜಕಾರಣದ ಈ ಎರಡೂ ಉದ್ದೇಶಗಳು ಪರಿಸ್ಥಿತಿಗನುಸಾರವಾಗಿ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ಜಾರಿಗೆ ಬರುತ್ತವೆ. ರಾಜ್ಯದ ಕೆಲಸಗಳು ಒಂದು ವಿಶಿಷ್ಟ ಜಾತಿಯ ಅಥವಾ ಪಂಗಡದ ಹಿತಕ್ಕಾಗಿಯೇ ಅದು ತಮ್ಮ ಜಾತಿಯಿರಲಿ ಅಥವಾ ಪರಕೀಯ ಜಾತಿಯಾಗಿರಲಿ ಆರಂಭವಾದಾಗ ಅಲ್ಲಿ ಸಂಸ್ಕೃತಿಗಿಂತ ಶಾಸನಕ್ಕೆ ಹೆಚ್ಚು ಪ್ರಧಾನ್ಯತೆ ಸಿಗುತ್ತದೆ. ಏಕೆಂದರೆ ಶಾಂತತೆ ಭಂಗವಾದರೆ ಅವರ ಆಧಿಪತ್ಯಕ್ಕೆ ಕುಂದು ಬರುವ ಸಾಧ್ಯತೆಗಳಿರುತ್ತವೆ. ಶಾಂತತೆ ಆವಶ್ಯಕವಾಗಿದ್ದರೂ ಶಾಂತತೆ ಕಾಪಾಡಲು ಯಾರದ್ದಾದರೂ ಸ್ವಾತಂತ್ರಕ್ಕೆ ಕಡಿವಾಣ ಹಾಕಬೇಕಾಗಿ ಬರುವುದರಿಂದ ಶಾಂತತೆಯ ಹೆಸರಿನಲ್ಲಿ ಅನ್ಯಾಯವಾಗುವ ಸಾಧ್ಯತೆಗಳಿರುತ್ತವೆ. ವ್ಯಕ್ತಿಯೊಬ್ಬನ ಸ್ವಾತಂತ್ರಕ್ಕೆ ಕಡಿವಾಣ ಹಾಕುವಾಗ ಯಾವಾಗ ಹಾಕಬೇಕು, ಅಥವಾ ಹಾಕಬಾರದು ಅನ್ನುವುದನ್ನು ನಿರ್ಧರಿಸುವಾಗ ಸ್ವಾತಂತ್ರ ಹಾಗೂ ಸ್ವಚ್ಛಂದ ಎಂದು ಎರಡು ಭಾಗಗಳನ್ನಾಗಿ ವಿಂಗಡಿಸಬೇಕು. ಆದರೆ ಸ್ವಾತಂತ್ರವನ್ನು ಕಾಪಾಡಲು ಹೋಗಿ ಅದರ ಕೊನೆ ಸ್ವಚ್ಛಂದದಲ್ಲಾಗದಂತೆ ನೋಡಿಕೊಳ್ಳುವುದು ಬಹಳ ಕಷ್ಟದ ಕೆಲಸ. ಕೆಲವೊಮ್ಮೆ ಅನಿರ್ಬಂಧ (ಕಡಿವಾಣವಿಲ್ಲದ) ಸ್ವಾತಂತ್ರಕ್ಕೆ ಕಡಿವಾಣ ಹಾಕುವಾಗ ಸ್ವಾತಂತ್ರ ನಷ್ಟವಾಗುತ್ತದೆ.

ಸ್ವಾತಂತ್ರ ನಷ್ಟವಾಗುವುದರಿಂದ ಶಾಂತತೆಯನ್ನು ಕಾಪಾಡಬಹುದೇ ಹೊರತು ವ್ಯಕ್ತಿವಿಕಸನ ಸಾಧ್ಯವಾಗುವುದಿಲ್ಲ. ಹಾಗಾಗಿ ಶಾಸನದ ಅತಿರೇಕತನದಿಂದ ನಷ್ಟವೇ ಆಗುತ್ತದೆ. ಎರಡನೆಯ ಆರೋಪ ಏನು ಅಂದರೆ ಪರಕೀಯರ ಆಧಿಪತ್ಯದಲ್ಲಿ ರಾಜ್ಯಕರ್ತರು ತಮ್ಮ ಜಾತಿ ಬಂಧುಬಾಂಧವರ ಹಿತಕ್ಕಾಗಿ ಇತರ ಪ್ರಜೆಗಳ ಹಿತದತ್ತ ಗಮನ ಹರಿಸುವುದಿಲ್ಲ, ಅಷ್ಟೇ ಅಲ್ಲ, ಅವರ ಆಹುತಿಯನ್ನೇ ಕೊಡುತ್ತಾರೆ. ಹಾಗಾಗಿ ಒಂದು ದೇಶದ ಮೇಲೆ ಮತ್ತೊಂದು ದೇಶದ ಆಳ್ವಿಕೆಯಿದ್ದಾಗ ಅವರ ಆಳ್ವಿಕೆಯಡಿ ಬರುವ ಜನರ ಲಾಭವಾಗುವುದು ಬಹಳ ಕಡಿಮೆಯೆಂದೇ ಹೇಳಬಹುದು ಅನ್ನುವ ಈ ನಿಯಮವನ್ನು ಎಲ್ಲ ತಜ್ಞರೂ ಒಪ್ಪುತ್ತಾರೆ. ಆದರೆ ಭಾರತದ ಮೇಲೆ ಬ್ರಿಟಿಷರ ಆಳ್ವಿಕೆ ಇದಕ್ಕೆ ಅಪವಾದ ಅನ್ನುವುದರಲ್ಲಿ ಅನುಮಾನವಿಲ್ಲ.

ಯಾವ ದೇಶದ ಮೇಲೆ ಅನೇಕ ಪರಕೀಯರು ದಾಳಿಮಾಡಿ ಇಲ್ಲಿನ ಜನರ ಅನ್ನ, ಬಟ್ಟೆ ವಸತಿಗೆ ಸಂಚಕಾರ ತಂದರೋ, ಯಾವ ದೇಶದಲ್ಲಿ ಅನೇಕ ರಾಜಕೀಯ ಬಂಡುಕೋರತನದಿಂದ ಪ್ರಜೆಗಳಿಗೆ ಶಾಂತಿ ಅನ್ನುವುದು ಮರಿಚೀಕೆಯಾದಾಗ ಇಂತಹ ವಾತಾವರಣದಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ದೇಶಕ್ಕೆ ಸಿಕ್ಕ ಶಾಂತತೆಯ ಲಾಭವನ್ನು ಕಡೆಗಾಣಿಸಲಾದೀತೇ? ಹಾಗೆಯೇ ಭಾರತದಂತಹ ಸಾಂಸ್ಕೃತಿಕ ದೃಷ್ಟಿಯಿಂದ ಅಸಭ್ಯ ಜನರಲ್ಲಿ ಮೊದಲನೆಯ ಸ್ಥಾನದಲ್ಲಿ ಅಥವಾ ಮುಂದುವರಿದ ದೇಶಗಳ ದೃಷ್ಟಿಯಲ್ಲಿ ಕಡೆಯ ಸ್ಥಾನದಲ್ಲ್ಲಿರುವಂತಹ ದೇಶವು ಹೊಸದಾಗಿ ಸ್ಥಾಪನೆಯಾಗುತ್ತಿರುವಂತಹ ರಾಷ್ಟ್ರ ಸಂಘದಲ್ಲಿ ಸೇರಿಕೊಳ್ಳಲು ಲಾಯಕ್ಕಾಗಿದೆ ಎಂದು ಸಿದ್ಧವಾದಾಗ ಬ್ರಿಟಿಷ್ ಆಳ್ವಿಕೆಯಲ್ಲಿ ಆ ದೇಶದ ಸಂಸ್ಕೃತಿಯ ಬೆಳವಣಿಗೆ ಕುಂಠಿತವಾಗಿದೆ ಅಂದರೆ ತಪ್ಪಾದೀತು. ಆದರೆ ಸಜ್ಜನರ ಆಳ್ವಿಕೆಯಲ್ಲಿ ಪ್ರಜೆ ಸುಖ ವಾಗಿರುವುದಿಲ್ಲ ಅನ್ನುವುದು ಅನುಭವವೇದ್ಯವಾದರೆ ಪರಕೀಯರ ಆಳ್ವಿಕೆಯಲ್ಲಿ ಅವರು ಅಸಂತುಷ್ಟರಾಗಿದ್ದರೆ ಆಶ್ಚರ್ಯಪಡಬೇಕಿಲ್ಲ. ಅಲ್ಲದೆ ಪರಕೀಯರ ಆಳ್ವಿಕೆ ಸುಖವಾಗಿದ್ದರೂ ಕೇವಲ ಪರಕೀಯರಾಗಿ ಪಾರತಂತ್ರದಲ್ಲಿ ಸಿಕ್ಕಿರುವ ಜನರ ಗಮನ ಯಾವತ್ತೂ ಅವರ ಮೇಲೆ ಆಳ್ವಿಕೆ ನಡೆಸುವವರ ದೋಷಗಳ ಮೇಲೆಯೇ ಇರುತ್ತದೆ. ಹಾಗಾಗಿಯೇ ಇಂದು ಬ್ರಿಟಿಷರ ವಿರುದ್ಧ ಚಳವಳಿಗಳು ನಡೆದಿವೆ. ಈ ಚಳವಳಿಯ ಮೂಲ ಉದ್ದೇಶವನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ.

ರಾಷ್ಟ್ರೀಯ ಸಭೆ-ಜಿಲ್ಲಾ ಕಾಂಗ್ರೆಸ್ ಇದೇ ಚಳವಳಿಯ ಜನನಿ. ಪ್ರತಿವರ್ಷ ಈ ಸಭೆಯನ್ನು ಕರೆಯಲಾಗುತ್ತದೆ. ಇದರ 34ನೆಯ ಅಧಿವೇಶನ ಕಳೆದ ಕ್ರಿಸ್‌ಮಸ್‌ನಲ್ಲಿ ಅಮೃತಸರದಲ್ಲಾಯಿತು. ಈ ರಾಷ್ಟ್ರೀಯ ಸಭೆಯು 1885ರಲ್ಲಿ ಬೆಳಕಿಗೆ ಬಂತು ಹಾಗೂ ಅದು ಬೆಳಕಿಗೂ ಬರುವ ಕಾರಣಗಳೂ ಸ್ವಾಭಾವಿಕವಾಗಿವೆ. ಯಾವುದೇ ದೇಶಕ್ಕೆ ತನ್ನ ನಿಜವಾದ ಪರಿಸ್ಥಿತಿ ಹೇಗಿದೆ ಅನ್ನುವುದು ಆ ದೇಶದಲ್ಲಿ ಘಟಿಸುವ ಒಳ್ಳೆಯ ಹಾಗೂ ಕೆಟ್ಟ ಘಟನೆಗಳಿಂದ ತಿಳಿಯುತ್ತದೆ. ನಾವು ಶ್ರೀಮಂತರೋ ಬಡವರೋ, ಒಳ್ಳೆಯವರೋ ಕೆಟ್ಟವರೋ, ಜ್ಞಾನಿಗಳೋ ಅಜ್ಞಾನಿಗಳೋ, ಬೆಳ್ಳಗಿದ್ದೇವೋ ಇಲ್ಲ ಕಪ್ಪಗಿದ್ದೇವೋ ಅನ್ನುವುದನ್ನು ಉಳಿದವರನ್ನು ನೋಡದೆ ತಿಳಿಯುವುದಿಲ್ಲ.

ಹಾಗೆಯೇ ಒಂದು ರಾಷ್ಟ್ರಕ್ಕೆ ನಾವು ಇತರ ರಾಷ್ಟ್ರಗಳಿಗಿಂತ ಮುಂದುವರಿದಿದ್ದೇವೆಯೋ ಇಲ್ಲವೋ ಅನ್ನುವುದು ಇತರ ರಾಷ್ಟ್ರಗಳನ್ನು ಅಭ್ಯಸಿಸಿದಾಗ ಅಥವಾ ಆ ರಾಷ್ಟ್ರದ ಸಂಚಾರ ವ್ಯವಸ್ಥೆಯ ಅರಿವಿದ್ದಾಗಲೇ ಅರ್ಥವಾಗುತ್ತದೆ. ಇತರ ರಾಷ್ಟ್ರಗಳನ್ನು ಅಭ್ಯಸಿಸದಿದ್ದರೆ, ತಮ್ಮ ರಾಷ್ಟ್ರದೊಡನೆ ಇತರ ರಾಷ್ಟ್ರಗಳ ತುಲನೆ ಮಾಡದಿದ್ದರೆ ಆ ಒಂಟಿ ರಾಷ್ಟ್ರವು ತಾನಿರುವ ಅಧೋಗತಿಯಲ್ಲೊ ಸಾಕಷ್ಟು ಬೆಳವಣಿಗೆ ಮಾಡಿಕೊಂಡಿದ್ದೇವೆ ಅನ್ನುವ ತಪ್ಪು ಕಲ್ಪನೆಯಲ್ಲೇ ಇರಲು ಇಷ್ಟಪಡುತ್ತದೆ.

ಈ ದೃಷ್ಟಿಯಿಂದ ಇಲ್ಲಿಯ ಜನರಿಗೆ ತುಲನೆಯಿಂದ ತಮ್ಮ ನಿಜವಾದ ಪರಿಸ್ಥಿತಿಯ ಅರಿವಾಗಲು ಭಾರತ ಹಾಗೂ ಬ್ರಿಟಿಷರ, ಪ್ರಜೆ ಹಾಗೂ ರಾಜರ ನಡುವೆ ಇರುವ ನಿಕಟ ಸಂಬಂಧ ಮಹತ್ವದ ಪಾತ್ರ ವಹಿಸುತ್ತದೆ. ಇಂಗ್ಲಿಷ್ ವಿದ್ಯೆ ಅನ್ನುವುದು ‘ಹುಲಿಯ ಹಾಲು’ ಅದನ್ನು ಕುಡಿಯಲು ಸಿಕ್ಕವರಿಗೆ ಹೊಸ ಉತ್ಸಾಹ, ಹೊಸ ತೇಜಸ್ಸು, ಹೊಸ ಹುಮ್ಮಸ್ಸು ಬರುತ್ತದೆ. ಈ ವಿದ್ಯೆ ಲಭಿಸಿದವರು ಇಂಗ್ಲಿಷ್ ದೇಶದ ಇತಿಹಾಸವನ್ನು ಅಭ್ಯಸಿಸಿ ಅನಿಯಂತ್ರಿತ ಕಾರ್ಯಭಾರದಿಂದಾಗುವ ನಷ್ಟವನ್ನು ಕಂಡುಹಿಡಿದರಾದ್ದರಿಂದ ಸ್ವಾತಂತ್ರದ ಕನಸು ಅವರ ಮನಸ್ಸಿನಲ್ಲಿ ಹುಟ್ಟಲಾರಂಭಿಸಿತು. ಇಂಗ್ಲಿಷ್ ವಿದ್ಯೆಯ ಸಹಾಯದಿಂದ ಅವರಿಗೆ ರಾಜ ಹಾಗೂ ಪ್ರಜೆಯ ಹಕ್ಕುಗಳ್ಯಾವವು ಅನ್ನುವುದು ಅರ್ಥವಾಯಿತು. ಹುಲಿಯ ಹಾಲನ್ನು ಕುಡಿದು ದೃಢಕಾಯರಾದ ಮರಿಗಳು ಬ್ರಿಟಿಷ್ ಸರಕಾರದ ವಿರುದ್ಧ ಬಂಡಾಯಯೇಳಲಾರಂಭಿಸಿದರು.

ಬ್ರಿಟಿಷ್ ರಾಜ್ಯ ಪರಕೀಯ ರಾಜ್ಯವಾದರೂ ಕೆಲವು ಸರಕಾರಿ ಅಧಿಕಾರಿಗಳನ್ನು ಬಿಟ್ಟರೆ ಉಳಿದ ಬ್ರಿಟಿಷ್ ಜನ ಈ ಪ್ರಜಾಪಕ್ಷದ ಸಭೆಗೆ ಸಹಾನುಭೂತಿ ತೋರಿಸಿದ್ದಾರೆ. ಅಷ್ಟೇ ಅಲ್ಲ ಭಾರತದ ಮಾಜಿ ಗವರ್ನರ್ ಜನರಲ್ ಲಾರ್ಡ್ ಡಪ್ಹರೀನ್ ಅವರು ಸ್ವತಃ ಇದರ ಹುಟ್ಟಿಗೆ ಸಹಾಯ ಮಾಡಿದ್ದಾರೆ. ತಮ್ಮ ಸಹಾನುಭೂತಿಯನ್ನುವರು ಕೇವಲ ಶಬ್ದಗಳಲ್ಲಷ್ಟೆ ವ್ಯಕ್ತಪಡಿಸದೆ ಪ್ರಜಾಪಕ್ಷದ ಬೇಡಿಕೆಯನುಸಾರವಾಗಿ ತಮ್ಮ ರಾಜ್ಯ ವ್ಯವಸ್ಥೆಯಲ್ಲಿ ಕೆಲವು ಸುಧಾರಣೆಗಳನ್ನು ಮಾಡಿದ್ದಾರೆ. ಈ ಪ್ರಜಾಪಕ್ಷ ಬೆಳಕಿಗೆ ಬಂದಂದಿನಿಂದ ಬ್ರಟಿಷ್ ಸರಕಾರವು ಶಿಕ್ಷಣ ಪದ್ಧತಿಯಲ್ಲಿ ಸಾಕಷ್ಟು ಉದಾರತೆ ತೋರಿಸಿದೆ. ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣದಾರಂಭ, ಪ್ರಾಯೋಗಿಕ ಹಾಗೂ ಶಾಸ್ತ್ರೀಯ ಶಿಕ್ಷಣಕ್ಕಾಗಿ ಶಿಷ್ಯವೃತ್ತಿಯ ಆರಂಭ, ಆರೋಗ್ಯದ ದೃಷ್ಟಿಯಲ್ಲಿ ಸರಕಾರದ ವತಿಯಿಂದ ಸಾಕಷ್ಟು ಹಣ ಖರ್ಚಾಗುತ್ತಿದೆ. ಮದ್ಯದಂತಹ ಮಾದಕ ದ್ರವ್ಯದ ತೆರಿಗೆಯನ್ನು ಹೆಚ್ಚಿಸಿ ಮದ್ಯದ ಆಸಕ್ತಿಯನ್ನು ಕಡಿಮೆಮಾಡಲು ಮದ್ಯದ ಅಂಗಡಿಗಳನ್ನು ಮುಚ್ಚಿ ಮದ್ಯದ ಮಾರಾಟವನ್ನು ನಿಯಂತ್ರಿಸಲು ಆರಂಭಿಸಿದ್ದಾರೆ.

ಜನತೆಯ ದೂರನ್ನು ಗಮನಕ್ಕೆ ತೆಗೆದುಕೊಂಡು ಕಾಡಿನಲ್ಲಿ ಬೆಳೆಯುವ ಹುಲ್ಲು ಹಾಗೂ ಉರುವಲು ಕಟ್ಟಿಗೆಗಳನ್ನು ರಿಯಾಯಿತಿ ದರದಲ್ಲಿ ಕೊಡಲಾಗುತ್ತಿದೆ. ಉಪ್ಪಿನ ತೆರಿಗೆಯ ಮೇಲಿನ ಕನಿಷ್ಠ ಮಿತಿಯನ್ನು ಹೆಚ್ಚಿಸಲಾಗಿದೆ. ಪೊಲೀಸ್ ಖಾತೆಯ ವರಿಷ್ಠ ಹಾಗೂ ಕನಿಷ್ಠ ಹುದ್ದೆಯ ಜಾಗಗಳು ಹಾಗೂ ಮಿಲಿಟರಿ ಖಾತೆಯ ವರಿಷ್ಠ ಹುದ್ದೆಗಳು ಈ ದೇಶದ ಜನರಿಗೆ ಸಿಗಲಾರಂಭಿಸಿವೆ. ಮುಲ್ಕಿ ಶಿಕ್ಷಣ ಹಾಗೂ ಇತರ ಖಾತೆಯಲ್ಲಿಯ ವರಿಷ್ಠ ಹುದ್ದೆಯ ಕೆಲಸಗಳು ಇವರಿಗೆ ಸಿಗಬೇಕು ಅನ್ನುವುದು ಇತ್ತೀಚೆಗೆ ಸಮ್ಮತವಾಗಿದೆ. ಕೃಷಿ ಸುಧಾರಣೆ, ವಿತ್ತ ಸಹಾಯಕ ಸಂಸ್ಥೆಗಳ ಸ್ಥಾಪನೆಗಳನ್ನು ಸರಕಾರವು ಆದ್ಯತೆಯ ಮೇಲೆ ಮಾಡಿಕೊಡುತ್ತಿದೆ. ಅಷ್ಟೇ ಅಲ್ಲದೆ ಸಬಲ ಹಾಗೂ ಜವಾಬ್ದಾರಿಯುಳ್ಳ ಪ್ರಜೆಗಳನ್ನು ಪ್ರಾಂತದ ಹಾಗೂ ವರಿಷ್ಠ ನ್ಯಾಯಾಲಯಗಳಲ್ಲಿ ಕೆಲಸ ಕೊಟ್ಟು ಅವರ ಸಲಹೆಯಂತೆ ಕಾನೂನುಗಳನ್ನು ರಚಿಸಲಾಗುತ್ತಿದೆ.

ಪ್ರಜಾಪಕ್ಷದ ಜನರನ್ನು ನ್ಯಾಯಾಲಯದ ಕೌನ್ಸಿಲ್‌ನಲ್ಲಿ ಸೇರಿಸಿಕೊಳ್ಳುವ ಪದ್ಧತಿಯಲ್ಲೂ ಸರಕಾರವು ದಿನಕಳೆದಂತೆ ಉದಾರತೆ ತೋರಿಸುತ್ತಿದೆ. ಮೊದಲು ಅಂದರೆ 1861ರಲ್ಲಿ ಪ್ರಜಾಪಕ್ಷದ ಜನರನ್ನು ಸರಕಾರಿ ನ್ಯಾಯಾಲಯದ ಕೌನ್ಸಿಲ್‌ಗಳಲ್ಲಿ ಸೇರಿಸಿಕೊಳ್ಳುವುದನ್ನು ಒಪ್ಪಿಕೊಂಡ ದಿನದಿಂದ 1892ರ ವರೆಗೆ ಸರಕಾರಿ ಚುನಾವಣೆಯಲ್ಲಿ ಯಾರನ್ನು ಆರಿಸಿಕೊಳ್ಳುವುದು ಅನ್ನುವ ನಿರ್ಧಾರ ಸರಕಾರದ ಇಷ್ಟಾನಿಷ್ಟಗಳನ್ನವಲಂಬಿಸಿತ್ತಾದರೂ ಸರಕಾರ ಆರಿಸಿದ ಸಭಾಸದರು ಯಾವತ್ತೂ ಪ್ರಜೆಯ ಹಿತಕ್ಕಾಗಿಯೇ ದುಡಿಯುತ್ತಿದ್ದರು ಎಂದೇನೂ ಇಲ್ಲ. ಅವರು ಸರಕಾರದ ಮಾತಿಗೆ ಕೇವಲ ಗೋಣಲ್ಲಾಡಿಸುವವರೇ ಆಗಿದ್ದರು. ಕೌನ್ಸಿಲ್‌ನಲ್ಲಿ ತಮ್ಮ ಜಾಗವನ್ನು ಸುರಕ್ಷಿತವಾಗಿಡಲು, ಸರಕಾರದ ಮರ್ಜಿ ಕಾಪಾಡಲು ಪ್ರಜಾಪಕ್ಷವು ಸ್ವಾರ್ಥಕ್ಕಾಗಿ ಸತ್ಯದ ಆಹುತಿ ಕೊಡುತ್ತಿತ್ತು. ಇವರು ಆರಿಸಿರುವ ಸಭಾಸದರು ಗೋಣಲ್ಲಾಡಿಸುವವರಾಗಿದ್ದು ಪ್ರಜೆಯ ಹಿತಕ್ಕಾಗಿ ದುಡಿಯುವವರಲ್ಲ ಅನ್ನುವ ಟೀಕೆಗಳಿಂದ ಬೇರೆ ಸಭಾಸದರನ್ನು ಆರಿಸುವುದನ್ನು ಬಿಟ್ಟು ಚುನಾವಣೆಯ ಮಾರ್ಗವನ್ನು ಅವಲಂಬಿಸಿದ್ದಾರೆ, ಒಟ್ಟಿನಲ್ಲಿ ಬ್ರಿಟಿಷ್ ಆಡಳಿತವು ವರ್ಷಗಳುರುಳಿದಂತೆ ಸುರಾಜ್ಯ ಪದ್ಧತಿಯತ್ತ ವಾಲುತ್ತಿದೆ ಅನ್ನುವುದನ್ನು ಅವರ ವೈರಿಗಳು ಕೂಡ ನಂಬಲೇಬೇಕು. ಪ್ರಜಾಪಕ್ಷದ ಈ ರಾಷ್ಟ್ರೀಯ ಸಭೆಯು ಬ್ರಿಟಿಷ್ ಆಡಳಿತವನ್ನು ಸುರಾಜ್ಯ ಆಡಳಿತ ಪದ್ಧತಿಯಲ್ಲಿ ಪರಿವರ್ತಿಸಲೆಂದೇ ಹುಟ್ಟಿರುವುದಾದರೆ ಮೇಲೆ ಹೇಳಿರುವ ಎಲ್ಲ ಬದಲಾವಣೆಗಳನ್ನು ನೋಡಿ ಇವರಿಗೆ ಸಮಾಧಾನವಾಗಬೇಕಿತ್ತು.

ಆದರೆ ಅಸಂತೋಷ ಹೆಚ್ಚಾಗುತ್ತಿದೆ ಅನ್ನುವುದು ಕಂಡುಬಂದಿದೆ. ರಾಷ್ಟ್ರೀಯ ಸಭೆಯ ಮೂಲ ಉದ್ದೇಶದಲ್ಲಾದ ಬದಲಾವಣೆಯೇ ಇದಕ್ಕೆ ಕಾರಣ. ಇವರಿಗೆ ಈ ‘ಸುರಾಜ್ಯ’ ಬೇಡವಾಗಿದೆ. ಏಕೆಂದರೆ ‘ಸ್ವರಾಜ್ಯದ ಶ್ರೇಷ್ಠತೆ ಸುರಾಜ್ಯಕ್ಕಿಲ್ಲ’ ಅನ್ನುವ ಹೊಸ ತತ್ವ ಅವರಿಗರ್ಥವಾಗಿದೆ. ಕೇವಲ ತತ್ವ ಎಂದಾದರೆ ತೊಂದರೆಯಿಲ್ಲ ಆದರೆ ವ್ಯಾವಹಾರಿಕ ದೃಷ್ಟಿಯಲ್ಲಿ ತತ್ವಕ್ಕಿಂತ ವ್ಯವಹಾರ ಶ್ರೇಷ್ಠವಾಗಿದೆ. ಸ್ವರಾಜ್ಯ ಯಾರದ್ದು? ಹಾಗೂ ಯಾರಿಗಾಗಿ ಅನ್ನುವುದು ತಿಳಿಯದೆ ನಾವಂತೂ ಇದನ್ನು ಅನುಸರಿಸುವುದಿಲ್ಲ. ಅನುಸರಿಸುವವರು ಅನುಸರಿಸಲಿ ಪಾಪ!

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)