varthabharthi

ಅನುಗಾಲ

ಧರ್ಮ, ಖಾಸಗಿತನ ಮತ್ತು ಸರಕಾರ

ವಾರ್ತಾ ಭಾರತಿ : 31 Aug, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಆಳುವವರು ಬದಲಾಗಬಹುದು; ಆದರೆ ಸಮಾಜ, ದೇಶ ತನ್ನ ಹರಿವನ್ನು ಕಾಪಾಡಿಕೊಳ್ಳಬೇಕು. ಈ ದಿಸೆಯಲ್ಲಿ ನ್ಯಾಯಾಂಗವು ಸ್ವಲ್ಪಮಟ್ಟಿಗಾದರೂ ಕಾರ್ಯಪ್ರವೃತ್ತವಾಗಿದೆ. ಈ ಹಾದಿಯನ್ನು ರೂಢಿಗೊಳಿಸಿ ಮುಂದುವರಿಯುವುದು ಇಂದಿನ ಅಗತ್ಯ ಮಾತ್ರವಲ್ಲ, ಎಂದೆಂದಿನ ಅಗತ್ಯವೂ ಹೌದು.


ಆಗಸ್ಟ್ 2017 ಭಾರತದ ನ್ಯಾಯದಾನದ ಇತಿಹಾಸದ ಮಹತ್ವದ ತಿಂಗಳಲ್ಲೊಂದು. ಭಾರತದ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರು ಆಗಸ್ಟ್ 28ರಂದು ನಿವೃತ್ತರಾದರು ಮತ್ತು ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಭಾರತದ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು.

ಇದಿಷ್ಟೇ ಆದರೆ ಮಹತ್ವವೇನು ಬಂತು? ಆದರೆ ಇದೇ ತಿಂಗಳಲ್ಲಿ ತ್ರಿವಳಿ ತಲಾಖ್ ಕುರಿತಾದಂತೆ ಐದು ಸದಸ್ಯರ ಸಂವಿಧಾನ ಪೀಠವು 3-2 ಬಹುಮತದಿಂದ ತ್ರಿವಳಿ ತಲಾಖ್ ಸಂಪ್ರದಾಯವನ್ನು ಅಸಾಂವಿಧಾನಿಕವೆಂದು ಘೋಷಿಸಿತು. ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ರೋಹಿಂಗ್ಟನ್ ನಾರಿಮನ್, ಯು.ಯು.ಲಲಿತ್ ಅವರು ತ್ರಿವಳಿ ತಲಾಖ್ ಅಮಾನವೀಯವೆಂದೂ ಅದರಿಂದಾಗಿ ವೈಯಕ್ತಿಕ ಸ್ವಾತಂತ್ರ್ಯಹರಣವಾಗುತ್ತದೆಂದೂ ಹೇಳಿದ ಬಹುಮತದ ತೀರ್ಪಿನ ವಕ್ತಾರರಾದರೆ, ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಮತ್ತು ನ್ಯಾಯಮೂರ್ತಿ ನಝೀರ್ ಭಿನ್ನಮತವನ್ನು ವ್ಯಕ್ತಪಡಿಸಿ ತಲಾಖ್‌ನಂತಹ ವೈಯಕ್ತಿಕ ಸಂಪ್ರದಾಯ ಮತ್ತು ಆಚರಣೆಗಳಲ್ಲಿ (ಅವೆಷ್ಟೇ ಕೆಡುಕಾಗಿರಲಿ ಅದನ್ನು ವ್ಯಕ್ತಿ ಮತ್ತು ಸಮಾಜವೇ ಸರಿಪಡಿಸಬೇಕೆಂದು ಹೇಳಿ) ನ್ಯಾಯಾಲಯದ ಹಸ್ತಕ್ಷೇಪವು ಸರಿಯಲ್ಲವೆಂದು ಹೇಳಿದರು. ಒಂದು ರೀತಿಯಲ್ಲಿ ಇದು ಕೂದಲೆಳೆಯ ಅಂತರದ ತೀರ್ಪು.

ತೀರ್ಪಿನ ವಿವರಗಳನ್ನು ಗಮನಿಸಿದರೆ ಇದು ಕ್ರಿಕೆಟಿನ ಡಕ್‌ವರ್ತ್ ಲೂಯಿಸ್ ನಿಯಮದಲ್ಲಿ ಘೋಷಿಸಲ್ಪಟ್ಟ ತೀರ್ಪು. ಫಲಿತಾಂಶ ಬಂದರೂ ಗೊಂದಲ ನಿಂತರೂ ವಿವಾದ ಮಾತ್ರ ತಾರ್ಕಿಕ ಅಂತ್ಯ ಕಾಣಲಿಲ್ಲ. ತೀರ್ಪಿನ ನ್ಯಾಯ ಪರತೆ, ಕಾನೂನಿನ ವಿಶ್ಲೇಷಣೆ ಮತ್ತು ಸಾರ್ವಜನಿಕ ಸ್ವೀಕಾರಾರ್ಹತೆ ಇವುಗಳ ಕುರಿತು ಸರ್ವೋಚ್ಚ ನ್ಯಾಯಾಲಯಕ್ಕೆ ಆರಂಭದಿಂದಲೇ ಗೊಂದಲ ಕಾಡಿದ ಪ್ರಕರಣ ಇದು. ಪ್ರಾಯಃ ತ್ರಿವಳಿ ತಲಾಖ್ ಕುರಿತಂತೆ ಎದ್ದಿದ್ದ ವಿವಾದವು ಮತ್ತೆ ತಲೆಯೆತ್ತಲಿಕ್ಕಿಲ್ಲ. ಆದ್ದರಿಂದ ಸರ್ವಧರ್ಮ ಸಮನ್ವಯತೆಯನ್ನು ಸಾದರಪಡಿಸಲು ಜಾತ್ಯತೀತ ನ್ಯಾಯಾಲಯಕ್ಕಿದ್ದ ವಸ್ತುನಿಷ್ಠತೆಯ ಬದಲಾಗಿ ಐದು ಧರ್ಮ/ಮತಗಳಿಗೆ ಸೇರಿದ ಐವರು ನ್ಯಾಯಾಧೀಶರು ಈ ಪ್ರಕರಣವನ್ನು ಇತ್ಯರ್ಥಪಡಿಸಲು ನೇಮಕವಾ ದದ್ದು ಒಂದು ವ್ಯಂಗ್ಯವೆಂಬುದು ಬಹಿರಂಗವಾಗಲು ಸಾಧ್ಯವಿಲ್ಲ.

ಧರ್ಮ-ಕಾನೂನು-ಸಂವಿಧಾನದ ಮೂಲಭೂತ ಹಕ್ಕು ಈ ತ್ರಿವಳಿ ಮಾಪನಗಳ ದ್ವಂದ್ವದ ನಡುವೆ ತ್ರಿವಳಿ ತಲಾಖ್ ರದ್ದಾದದ್ದನ್ನು ಸ್ವಾಗತಿಸಿದ ಯಾರೂ ಇದನ್ನು ವಸ್ತುನಿಷ್ಠವಾಗಿ ವಿವೇಚಿಸಿಲ್ಲವೆಂಬುದು ಗಮನಾರ್ಹ. ಏನಿದ್ದರೂ ಈ ಪ್ರಕರಣವೂ, ತೀರ್ಪೂ ಅಧ್ಯಯನಕ್ಕೆ ಯೋಗ್ಯವಾಗಿದೆ. ನ್ಯಾಯವಾದಿಗಳೂ ಕಾನೂನಿನ ವಿದ್ಯಾರ್ಥಿಗಳೂ ಈ ಕುರಿತು ಚರ್ಚಿಸಬಹುದು. ದೇಶದಲ್ಲಿ ತಮಾಷೆಗೆ ಬರವಿಲ್ಲ. ತ್ರಿವಳಿ ತಲಾಖ್ ತೀರ್ಪಿನ ಕುರಿತು ಸಮಾಧಾನ ಹೊಂದಬೇಕಾದವರು ಮುಸ್ಲಿಂ ಸಮುದಾಯಕ್ಕೆ ಸೇರಿದ ಪ್ರಗತಿಪರರು ಮತ್ತು ವಿಶೇಷವಾಗಿ ತಲಾಖ್‌ಗೆ ಬಲಿಯಾದ ಇಲ್ಲವೇ ಅದನ್ನು ಎದುರಿಸಬೇಕಾದ ಆತಂಕದಲ್ಲಿರುವ ಸತಿಯರು. ಆದರೆ ತೀರ್ಪಿನ ಕುರಿತು ಅತೀವ ಸಂತೋಷ ವ್ಯಕ್ತಪಡಿಸಿ ದವರು ಕೆಲವು ಸ್ವಯಂಘೋಷಿತ ಹಿಂದೂ ಧುರೀಣರು. ಬಿಜೆಪಿಯ ಮಹಿಳಾ ಅಂಗವೊಂದು ತೀರ್ಪಿನ ಕುರಿತು ಅತೀವ ಸಂತಸ ವ್ಯಕ್ತಪಡಿಸಿತು- ಪಟಾಕಿ ಸಿಡಿಸಿದರೋ ಗೊತ್ತಾಗಲಿಲ್ಲ. ಈ ಮಂದಿಗೆ ಯಾರು ತಲಾಖ್ ನೀಡಿದರೋ ಅಥವಾ ತಲಾಖ್ ನೀಡುವ ಬೆದರಿಕೆ ಹಾಕಿದರೋ ಗೊತ್ತಿಲ್ಲ.

ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧವೆಂದು ಕೇಳಿದರೆ ಈ ದೇಶದ ಸಂಸ್ಕೃತಿಯಲ್ಲಿ ಯಾರು ಬೇಕಾದರೂ ಯಾವ ಹಬ್ಬವನ್ನಾ ದರೂ ಆಚರಿಸಬಹುದು ಎಂಬ ಉತ್ತರ ಸಿಕ್ಕೀತು. ಆದರೆ ತ್ರಿವಳಿ ತಲಾಖ್ ಕುರಿತ ತೀರ್ಪಿನಲ್ಲಿ ಮುಸ್ಲಿಮೇತರರು ಖುಷಿಪಡುವುದಕ್ಕಾದರೂ ಏನಿದೆ ಯೆಂದು ಕೇಳಿದರೆ ಮತೀಯತೆಯ ಇಲ್ಲವೇ ರಾಜಕೀಯವಾಗಿ ಗೆದ್ದ ದೊಡ್ಡಸ್ತಿಕೆಯ ಹೊರತು ಇನ್ನೇನೂ ಇರಲಿಕ್ಕಿಲ್ಲ. ಪಕ್ಕದ ಮನೆಯವನಿಗೆ ಮಕ್ಕಳಾದರೆ ಸಿಹಿ ಹಂಚುವ ನಿಸ್ವಾರ್ಥತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಅಪರೂಪವಿದ್ದೀತು.

ಇದಾದ ಆನಂತರ ಖಾಸಗಿತನದ ಹಕ್ಕಿನ ಕುರಿತಾದ ಒಂಬತ್ತು ಸದಸ್ಯರ ಸಂವಿಧಾನ ಪೀಠದ ಒಮ್ಮತದ ತೀರ್ಪು ಬಂದಿತು. ಇದರ ನಾಯ ಕತ್ವವೂ ಮುಖ್ಯ ನ್ಯಾಯಾಧೀಶರದ್ದೇ. ಎಲ್ಲರೂ ಖಾಸಗಿತನದ ಹಕ್ಕು ಮೂಲಭೂತವಾದದ್ದೆಂದು ತೀರ್ಮಾನಿಸಿದರು. ಖಾಸಗಿತನವು ಉಳ್ಳವರ ಸೌಕರ್ಯವೆಂದು ಮತ್ತು ಬಹುಪಾಲು ಬಡ ಪ್ರಜೆಗಳಿಗೆ ಖಾಸಗಿತನದಿಂದಾಗಿ ಏನೂ ಅನುಕೂಲವಿಲ್ಲವೆಂಬುದನ್ನು ಮತ್ತು ಅವರು ಸರಕಾರ ನೀಡುವ ಅನುಕೂಲತೆಗಳಿಂದ ವಂಚಿತರಾಗುತ್ತಾರೆಂದು ಹೇಳಿದ್ದನ್ನು ನ್ಯಾಯಾಲಯವು ಟೀಕಿಸಿದೆ. ಖಾಸಗಿತನವು ಎಲ್ಲರ ಪ್ರಕೃತಿದತ್ತ ಹಕ್ಕು ಮತ್ತು ಅಂತಹ ಹಕ್ಕನ್ನು ಸರಕಾರ ನೀಡಲಾರದ್ದಾದ್ದರಿಂದ ಅದನ್ನು ಕಿತ್ತುಕೊಳ್ಳುವ ಹಕ್ಕು ಸರಕಾರಕ್ಕಿಲ್ಲವೆಂದು ಸ್ಪಷ್ಟಪಡಿಸಿದೆ.

ಇದರ ಸೀಮೆ ಇನ್ನಷ್ಟು ವಿಸ್ತಾರವಾಗುವ ಸಾಧ್ಯತೆಯಿದೆ. ಏಕೆಂದರೆ ಈ ಪ್ರಶ್ನೆ ಬಂದಿರುವುದೇ ಆಧಾರ್‌ನ ಆಧಾರದಲ್ಲಿ ಸರಕಾರವು ಪ್ರಜೆಯ ಖಾಸಗಿತನವನ್ನು ಮೊಟಕುಗೊಳಿಸುತ್ತಿದೆಯೆಂಬ ವಿವಾದದ ಪ್ರಕರಣದಲ್ಲಿ. ಈ ಪ್ರಕರಣವನ್ನು ವಿಚಾರಿಸುತ್ತಿರುವ ನ್ಯಾಯಪೀಠವು ಖಾಸಗಿತನವು ಮೂಲಭೂತ ಹಕ್ಕು ಹೌದೇ ಎಂಬ ಕುರಿತು ಪ್ರತ್ಯೇಕವಾದ ತೀರ್ಮಾನವಾಗುವುದು ಒಳಿತೆಂಬ ಕಾರಣಕ್ಕಾಗಿ ಆ ಕುರಿತ ಪೀಠಕ್ಕೆ ಈ ಪ್ರಶ್ನೆಯನ್ನು ವರ್ಗಾಯಿಸಿತು. ಇಲ್ಲೂ ಸಮಸ್ಯೆ ಬಂದಿರುವುದು ಈ ಹಿಂದೆ ಐವರ ಪೀಠ ಮತ್ತು ಎಂಟು ಮಂದಿಯ ನ್ಯಾಯ ಪೀಠವು ನೀಡಿದ ತೀರ್ಪಿನಿಂದಾಗಿ. ಅದರಿಂದಾಗಿ ಒಂಬತ್ತು ಮಂದಿಯ ನ್ಯಾಯ ಪೀಠವನ್ನು ರಚಿಸಬೇಕಾಯಿತು. ಈಗ ಖಾಸಗಿತನವೂ ಮೂಲಭೂತ ಹಕ್ಕೆಂದು ತೀರ್ಮಾನವಾದ್ದರಿಂದ ಆಧಾರದ ಹಿನ್ನೆಲೆಯಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಮುಂದಿನ ನೆಲೆ ಯಾವುದೆಂಬುದನ್ನು ಸರ್ವೋಚ್ಚ ನ್ಯಾಯಾಲಯವು ತೀರ್ಮಾನಿಸಬೇಕಾಗಿದೆ. ಅಷ್ಟೇ ಅಲ್ಲ ಭಾರತೀಯ ದಂಡ ಸಂಹಿತೆಯನ್ವಯ ಅಪರಾಧವೆಂದು ಪರಿಗಣಿಸಿರುವ ವೈಯಕ್ತಿಕ ನಡೆನುಡಿಗಳನ್ನು ಅಪರಾಧಗಳೆಂದು ಪರಿಗಣಿಸುವುದು ವೈಯಕ್ತಿಕ/ಖಾಸಗಿತನದ ಮೇಲಿನ ಹಸ್ತಕ್ಷೇಪವಾಗುತ್ತದೆಯೇ ಎಂಬುದನ್ನೂ ಪುನರ್ವಿಮರ್ಶಿಸಬೇಕಾಗಿದೆ.

ಇವುಗಳಲ್ಲಿ ಕಲಂ 377ರನ್ವಯ ನಡೆಯುವ ಅನೈಸರ್ಗಿಕ ನಡತೆಗಳು ಹಾಗೂ ಸಲಿಂಗ ಕಾಮ/ವಿವಾಹ ಇತ್ಯಾದಿಗಳೂ ಸೇರುತ್ತವೆ. ಯಾವ್ಯಾವ ಪ್ರಕರಣಗಳು ಖಾಸಗಿತನದ ಮೇಲೆ ಆಕ್ರಮಣವೆನ್ನಿಸಿಕೊಳ್ಳುತ್ತವೆಯೆಂದು ಈಗಲೇ ಪಟ್ಟಿ ಮಾಡುವುದು ಕಷ್ಟ. ಈ ಅಂಶವು ನ್ಯಾಯಾಲಯದ ಗಮನಕ್ಕೂ ಬಂದಿದೆ. ಆದ್ದರಿಂದಲೇ ಅದು ತೀರ್ಪಿನಲ್ಲಿ ಸರಕಾರವು ಕಾನೂನನ್ನು ತಂದು ಖಾಸಗಿತನದ ಮೇಲೆ ಸೂಕ್ತ ನಿಯಂತ್ರಣ ಹೊಂದಬಹುದೆಂದೂ ಅದರ ನ್ಯಾಯಬದ್ಧತೆಯನ್ನು ಆಯಾಯ ಪ್ರಕರಣಗಳಲ್ಲಷ್ಟೇ ತೀರ್ಮಾನಿಸಬೇಕಾಗುತ್ತದೆಂದೂ ಹೇಳಿ ಪ್ರಜೆಯನ್ನೂ, ಸರಕಾರವನ್ನೂ ತುದಿಗಾಲಿನಲ್ಲಿ ನಿಲ್ಲಿಸಿದೆ.

ಈಗ ಆಧಾರ್‌ನ್ನು ಸರಕಾರದ ಎಲ್ಲ ಒಡೆತನಗಳಿಗೆ ಜೋಡಿಸಿದ್ದನ್ನು ಪ್ರಶ್ನಿಸಿ ಹೂಡಿದ ಅರ್ಜಿಯು ಇನ್ನಷ್ಟು ಆಕರ್ಷಕವಾಗಲಿದೆ. ಜಾರ್ಜ್ ಆರ್ವೆಲ್ ತನ್ನ 1984ರಲ್ಲಿ ಕಾಣಿಸಿದ ಏಕಸ್ವಾಮ್ಯದ ಭಯವು ಭಾರತವನ್ನು 1975ರಲ್ಲೊಮ್ಮೆ ಕಾಡಿದ್ದನ್ನು ಮತ್ತು ಈಗ ಕೆಲವು ಸಮಯಗಳಿಂದ ಕಾಡುತ್ತಿರುವುದನ್ನು ವ್ಯಕ್ತಿ ಸ್ವಾತಂತ್ರ್ಯದ ಮೇಲಣ ಹಲ್ಲೆಯೆಂದು ಅನೇಕರು ಟೀಕಿಸಿದ್ದಾರೆ. ಹೀಗೆ ಟೀಕಿಸುವವರನ್ನು ಬುದ್ಧಿಜೀವಿಗಳೆಂದು ಆಪಾದಿಸಿ ದೂರಮಾಡುವುದು ಸುಲಭ. ಏಕೆಂದರೆ ಪೂಜಾ ಸ್ಥಳಗಳನ್ನು ಪ್ರವೇಶಿಸುವವರು ಹೊರಗೆ ತಮ್ಮ ಪಾದರಕ್ಷೆಗಳನ್ನು ಬಿಟ್ಟು ಪ್ರವೇಶಿಸುವಂತೆ ಕುರುಡು ನಂಬಿಕೆಯಿಂದ ಸರಕಾರವನ್ನು ನಂಬುವ ಬಹುಪಾಲು ಪ್ರಜೆಗಳು (ಈ ಪೈಕಿ ವಿದ್ಯಾವಂತರು-ಅವಿದ್ಯಾವಂತರೆಂಬ ವ್ಯತ್ಯಾಸವಿರುವುದಿಲ್ಲ) ತಮ್ಮ ಮೆದುಳು-ಪ್ರಜ್ಞೆ-ಬುದ್ಧಿಯನ್ನು ಬಿಟ್ಟೇ ವಿಚಾರ-ವಸ್ತುಗಳನ್ನು ಪ್ರವೇಶಿಸುತ್ತಾರೆ.

ಖಾಸಗಿತನದ ತೀರ್ಪು ಬಂದ ತಕ್ಷಣ ಕೇಂದ್ರ ಸರಕಾರವು ಮಿಶ್ರ ಪ್ರತಿಕ್ರಿಯೆ ಗಳನ್ನು ನೀಡತೊಡಗಿದೆ. ತ್ರಿವಳಿ ತಲಾಖ್ ತೀರ್ಪು ಬಂದಾಗ ಹಾಡಿ ಕುಣಿದ ಕೇಂದ್ರ ಸರಕಾರದ ನಾಯಕರು ಇದೇನೂ ಅಂತಿಮವಲ್ಲ ಮತ್ತು ಇದು ನೀಡುವ ಸ್ವಾತಂತ್ರ್ಯವು ಸ್ವೇಚ್ಛಾಚಾರವನ್ನು ಪ್ರೋತ್ಸಾಹಿಸಬಹುದಾದ್ದರಿಂದ ಸೂಕ್ತ ನಿರ್ಬಂಧವನ್ನು ವಿಧಿಸಬಹುದೆಂಬ ಹಾಗೆ ತಮ್ಮ ಮೀಸೆಗೆ ಮಣ್ಣಾಗದ ವರಸೆಯನ್ನು ಪ್ರದರ್ಶಿಸಿದ್ದಾರೆ. ಹೀಗಾದರೆ ತಾನು ಬೆತ್ತಲೆಯಾಗಿ ಭಾಷಣ ಮಾಡಬಹುದೇ ಎಂದು ಕಾನೂನು ಮಂತ್ರಿಗಳು (ಅವರೂ ವಕೀಲರೇ!) ವ್ಯಂಗ್ಯವಾಡಿದ್ದಾರೆ. (ಅದೂ ನಿಮ್ಮ ಖಾಸಗಿತನವೆಂದು ತಿಳಿದಿದ್ದರೆ, ಧೈರ್ಯವಿದ್ದರೆ ಹಾಗೆ ಮಾಡಿ ಎಂದು ಯಾರೂ ಇನ್ನೂ ಸವಾಲೆಸೆದಿಲ್ಲ!) ಹೀಗೆ ಮಾತನಾಡುತ್ತಿರುವ ಅನೇಕರು 1975ರ ತುರ್ತುಸ್ಥಿತಿಯನ್ನು ಅನುಭವಿಸಿದವರು. ಪ್ರಜಾತಂತ್ರದ ಮೌಲ್ಯಗಳಿಗೆ ತಿಲಾಂಜಲಿಯಿತ್ತಿದೆಯೆಂದು ಭಾವಿಸಿದ ತರ್ಕಗಳು ಈಗ ತಮ್ಮ ಅಧಿಕಾರಕ್ಕೆ ಕುತ್ತು ತರುತ್ತಿವೆಯೆಂದು ಈ ಮಹಾನುಭಾವರು ಬಗೆಯುತ್ತಿರುವುದು ದುರಂತ. ರಾಜಕೀಯದಲ್ಲಿ ಒಳ್ಳೆಯವರು-ಕೆಟ್ಟವರು ಎಂಬುದಿಲ್ಲ, ಎಲ್ಲರೂ ಸಮಾನ ಸುಖಿ-ದುಃಖಿಗಳು ಎಂಬುದು ಸಾಬೀತಾಗುವುದು ಇಂತಹ ಕ್ಷಣಗಳಲ್ಲೇ!

ಒಂದಲ್ಲ ಒಂದು ರೀತಿಯಲ್ಲಿ ಈ ಎಲ್ಲ ವಿಚಾರಗಳು ಧರ್ಮ ಮತ್ತು ನಡೆ-ನುಡಿಗಳಿಗೆ ಸಂಬಂಧಿಸಿದವುಗಳು. ವಿಶೇಷವೆಂದರೆ ಒಂದೇ ಅರ್ಥ ನೀಡುವ ಪದ ಸಮುಚ್ಚಯಗಳು ಒಂದೊಂದು ಸಂದರ್ಭಗಳಲ್ಲಿ ತಮ್ಮ ಸದ್ಯದ ಅನುಕೂಲಕ್ಕೆ ತಕ್ಕಂತೆ ಭಿನ್ನ ಅರ್ಥವನ್ನು ಕೊಡಬೇಕೆಂದು ರಾಜಕಾರಣಿಗಳು ಬಯಸುವುದು.

ಇದರೊಂದಿಗೇ ಧರ್ಮದ ದುರುಪಯೋಗ ಯಾವ ಮಟ್ಟಕ್ಕೇರಬಹು ದೆಂಬುದಕ್ಕೆ ಸಾಕ್ಷಿಯಾದ ದೇರಾ ಸಚ್ಚಾ ಸೌದಾ ಗುರ್ಮೀತ್ ರಾಮ್ ರಹೀಮ್ ಕೂಡಾ ಅಗಸ್ಟ್‌ನಲ್ಲೇ ಅತ್ಯಾಚಾರದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವುದು. ಈ ದೇಶದ ದೇವಮಾನವರ ಪವಾಡಗಳ, ಆಷಾಢ ಭೂತಿತನದ ಕುರಿತು ಸ್ವಾತಂತ್ರ್ಯಪೂರ್ವದಲ್ಲೇ ಪಾಶ್ಚಾತ್ಯರಲ್ಲಿ ಸಂಶಯವಿದ್ದಿತು. ಬುದ್ಧ, ಮಹಾವೀರ, ಬಸವಣ್ಣ, ಕಬೀರ, ನಾನಕ, ರಾಮಕೃಷ್ಣ ಪರಮಹಂಸ, ವಿವೇಕಾನಂದ, ಅರವಿಂದರಂತಹ ಶ್ರೇಷ್ಠ ಸಂತರಿದ್ದರು.

ಆದರೆ ಇಂತಹವರ ದಾರ್ಶನಿಕತೆಯ ಮೇಲೆಯೇ ಸವಾರಿ ಮಾಡಿ ಜನರನ್ನು ಸಮ್ಮೋಹಿಸಿ ಯಾವುದೇ ಬಂಡವಾಳ ಹೂಡದೆ ಖ್ಯಾತರಾದ ಅನೇಕರನ್ನು ಈ ದೇಶ ಕಂಡಿದೆ; ಕಾಣುತ್ತಿದೆ. ಆದರೆ ಭಾರತವನ್ನು ವಿಶ್ವಗುರುವಾಗಿಸುವ ಹುಮ್ಮಸ್ಸಿನಲ್ಲಿ ಇಂತಹ ಕಳೆಗಳನ್ನು ಬೆಳೆಗಳೆಂದು ಅನೇಕ ಭಾರತೀಯರು ದೇಶ-ವಿದೇಶಗಳಲ್ಲಿ ಪರಿಚಯಿಸಿದ್ದು ಉಂಟು. ರಾಜಕಾರಣಿಗಳು, ಶ್ರೀಮಂತರು, ಮತ್ತಿತರ ಅವಕಾಶವಾದಿಗಳು ತಮ್ಮ ವರ್ಚಸ್ಸನ್ನು ಬೆಳೆಸಿ ಕೊಳ್ಳುವುದಕ್ಕಾಗಿಯೇ ಇಂತಹ ಸಂತರನ್ನು ಸೃಷ್ಟಿಸಿದ್ದುಂಟು. ಈ ಪರಸ್ಪರ ಸಹಾಯವಾಣಿಯನ್ನು ಕಂಡು ಸಮಾಜದ ಅವಕಾಶವಂಚಿತರು ತಾವೂ ಸಮಾಜದ ಪಿರಮಿಡ್/ಏಣಿಯಲ್ಲಿ ಮೇಲೇರಲು ಇಂತಹ ಸಂತರು ಮತ್ತು ಅವರು ಊಳಿಡುವ ಧರ್ಮವೇ ಊರುಗೋಲೆಂದು ತಿಳಿಯುತ್ತಾರೆ ಮತ್ತು ಅವರು ಈ ದೇವಮಾನವರನ್ನು ಆಶ್ರಯಿಸುತ್ತಾರೆ.

ತೀರಾ ಮುಗ್ಧತನ ಎಷ್ಟಿದೆಯೆಂದರೆ ಮಕ್ಕಳಾಗದಿದ್ದರೆ ಇಂತಹವರನ್ನು ಆಶ್ರಯಿಸಿದರೆ ಮಕ್ಕಳಾಗುತ್ತವೆಂಬ ನಂಬಿಕೆಯವರೂ ಇದ್ದಾರೆ! ಒಬ್ಬೊಬ್ಬ ದೇವಮಾನವನ ಹಣೆಬರಹವೂ ಈ ರಾಮ್ ರಹೀಮ್‌ನಂತೆ ಬಿಚ್ಚತೊಡಗಿದರೂ ಈ ಸಮುದಾಯದ ಇತರರ ವ್ಯವಹಾರ, ವ್ಯಾಪಾರಕ್ಕೆ ತೊಂದರೆಯಾಗದಿರುವುದು ಅಚ್ಚರಿಯ ವಿಚಾರವಲ್ಲ. ಏಕೆಂದರೆ ತಾನೇ ಗುಂಡಿಗೆ ಬೀಳುವವರೆಗೂ ಮುಗ್ಧರು, ಅಜ್ಞಾನಿಗಳು ವಿವೇಕಿಗಳನ್ನು, ವಿವೇಕದ ನುಡಿಗಳನ್ನು ನಂಬುವುದಿಲ್ಲ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂಬ ಉಕ್ತಿಯನ್ನು ತಪ್ಪುಅರ್ಥದಲ್ಲಿ ವ್ಯಾಖ್ಯಾನಿಸಿ ಬೆಂಕಿ ಸುಡುತ್ತದೆಂದು ಹೇಳಿದರೂ ಬೆಂಕಿಯನ್ನು ಸ್ಪರ್ಶಿಸಿಯೇ ನಂಬುವ ವ್ಯಕ್ತಿಗಳು ಬೇಕಷ್ಟಿದ್ದಾರೆ. ಆದ್ದರಿಂದ ರಾಮ-ರಹೀಮರ ನಾಡಿನಲ್ಲಿ ಅವರ ಹೆಸರು ಹೇಳಿಕೊಂಡು ಲೌಕಿಕರಿಂದ ಹೆಚ್ಚು ಲೌಕಿಕ ಸಮೃದ್ಧರಾಗಿರುವ ದಾನವರು ಹುಲುಸಾದ ಬೆಳೆ ಪಡೆದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.

ಆಗಸ್ಟ್ ತಿಂಗಳು ಭಾರತಕ್ಕೆ ಸ್ವಾತಂತ್ರ್ಯ ಬಂದ ತಿಂಗಳು. ಧರ್ಮದ ಹೆಸರಿನಲ್ಲಿ ಹಿಂಸೆ ನಡೆಸಲಾಗದು ಎಂದು ಈ ದೇಶದ ಪ್ರಧಾನಿ ಕರೆಕೊಟ್ಟಿ ದ್ದಾರೆ. ಅದನ್ನು ನಿಜಾರ್ಥದಲ್ಲಿ ನಿರೂಪಿಸುವ ಹೊಣೆ ಈ ದೇಶದ ವಿವೇಕಯುತ ಪ್ರಜೆಗಳಿಗಿದೆ. ಆಳುವವರು ಬದಲಾಗಬಹುದು; ಆದರೆ ಸಮಾಜ, ದೇಶ ತನ್ನ ಹರಿವನ್ನು ಕಾಪಾಡಿಕೊಳ್ಳಬೇಕು. ಈ ದಿಸೆಯಲ್ಲಿ ನ್ಯಾಯಾಂಗವು ಸ್ವಲ್ಪಮಟ್ಟಿಗಾದರೂ ಕಾರ್ಯಪ್ರವೃತ್ತವಾಗಿದೆ. ಈ ಹಾದಿಯನ್ನು ರೂಢಿಗೊಳಿಸಿ ಮುಂದುವರಿಯುವುದು ಇಂದಿನ ಅಗತ್ಯ ಮಾತ್ರವಲ್ಲ, ಎಂದೆಂದಿನ ಅಗತ್ಯವೂ ಹೌದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)