varthabharthi

ಓ ಮೆಣಸೇ

ಓ ಮೆಣಸೇ..

ವಾರ್ತಾ ಭಾರತಿ : 4 Sep, 2017
ಪಿ.ಎ.ರೈ

ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ಸಹಿಸುವುದಿಲ್ಲ

- ನರೇಂದ್ರ ಮೋದಿ, ಪ್ರಧಾನಿ

ಉಳಿದೆಲ್ಲ ಹೆಸರಲ್ಲಿ ನಡೆಯುವ ಹಿಂಸೆ ಸಹಿಸುತ್ತೀರಿ ಎಂದಾಯಿತು.
 ---------------------

   
 ಮುಂದಿನ ಮಹಾಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೆಣಸಲು ಮಹಾಭಾರತ ಮಿತ್ರಕೂಟ ರಚಿಸಲಾಗುವುದು

- ಶರದ್ ಯಾದವ್, ಜೆಡಿಯು ಭಿನ್ನಮತೀಯ ನಾಯಕ

ಶಕುನಿ ಪಾತ್ರವನ್ನು ನಿರ್ವಹಿಸಲು ನಾಯಕರ ನಡುವೆ ಸ್ಪರ್ಧೆ ನಡೆಯುತ್ತಿದೆಯಂತೆ.

---------------------   
 ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಿದರೆ ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಸಾಕಾರಗೊಳ್ಳಲಿದೆ

- ಯಡಿಯೂರಪ್ಪ, ಬಿಜೆಪಿ ಕರ್ನಾಟಕ ಅಧ್ಯಕ್ಷ

ಬಿಜೆಪಿಯ ವರಿಷ್ಠರೀಗ ಯಡಿಯೂರಪ್ಪ ಮುಕ್ತ ಬಿಜೆಪಿಯ ಕನಸು ಕಾಣುತ್ತಿದ್ದಾರೆ.

---------------------
ಯಾವುದೇ ಕ್ಷೇತ್ರದ ಶಿಖರದಲ್ಲಿ ಕುಳಿತವರು ಸಮಾಜ ಮುಜುಗರ, ಅವಮಾನ ಪಡುವಂತಹ ಕೃತ್ಯಗಳನ್ನು ಮಾಡಬಾರದು

- ಬಾಬಾ ರಾಮ್‌ದೇವ್, ಯೋಗ ಗುರು

ತಮ್ಮಂಥವರು ಶಿಖರದಲ್ಲಿ ಕುಳಿತಿರುವುದೇ ಸಮಾಜದ ಪಾಲಿಗೆ ಮುಜುಗರ, ಅವಮಾನ.

---------------------
ಆರೋಗ್ಯವಂತ ದೇಹ ದೇಗುಲವಿದ್ದಂತೆ

- ಜೆ.ಆರ್.ಲೋಬೋ, ಶಾಸಕ

ಅದಕ್ಕೇ ದೇಗುಲದೊಳಗೆ ಬಡವರಿಗೆ, ದಲಿತರಿಗೆ ಮುಕ್ತ ಪ್ರವೇಶ ಇಲ್ಲದೇ ಇರುವುದು.

---------------------

ಈಗ ನಿಭಾಯಿಸುತ್ತಿರುವ ಖಾತೆಯಲ್ಲಿ ತೃಪ್ತಿಯಿದೆ
-ಡಿ.ಕೆ. ಶಿವಕುಮಾರ್, ಸಚಿವ

ತಮ್ಮ ಬ್ಯಾಂಕ್ ಖಾತೆಯ ಕುರಿತಂತೆ ವಿವರಗಳೇ?
 ---------------------
ಕಾಂಗ್ರೆಸ್‌ನವರು ಎಷ್ಟು ದಲಿತ ಹೆಣ್ಣು ಮಕ್ಕಳನ್ನು ಮದುವೆಯಾಗಿದ್ದಾರೆ?

-ಜಗದೀಶ್ ಶೆಟ್ಟರ್, ಬಿಜೆಪಿ ನಾಯಕ

ಇನ್ನೊಬ್ಬರ ಮನೆ ಹೆಣ್ಣು ಮಕ್ಕಳನ್ನು ಕಾಂಗ್ರೆಸ್ ಕುತ್ತಿಗೆಗೆ ಕಟ್ಟಲು ನಾಚಿಕೆಯಾಗುವುದಿಲ್ಲವೇ ನಿಮಗೆ?
 ---------------------
ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ

-ಎಂ.ವೆಂಕಯ್ಯನಾಯ್ಡು, ಉಪರಾಷ್ಟ್ರಪತಿ

ಅವರಿಗೆ ಪ್ರೋತ್ಸಾಹ ನೀಡುವ ಯೋಗ್ಯ ನಾಯಕರ ಕೊರತೆಯಷ್ಟೇ ಇದೆ.

---------------------
ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ತಮಗೆ ಸಹಾಯ ಮಾಡಿದವರನ್ನೆೆಲ್ಲ ದೂರ ತಳ್ಳುತ್ತಿದ್ದಾರೆ
 -ಎಚ್.ವಿಶ್ವನಾಥ್, ಮಾಜಿ ಸಂಸದ

ಬಹುಶಃ ನೀವೀಗ ಅವರಿಂದ ಪ್ರತಿ ಸಹಾಯ ಬಯಸಿರಬೇಕು.

--------------------- 
ರಾಹುಲ್ ಗಾಂಧಿ ದಲಿತ ಹೆಣ್ಣು ಮಗಳನ್ನು ಮದುವೆಯಾಗಲಿ
- ಗೋವಿಂದ ಕಾರಜೋಳ, ಮಾಜಿ ಸಚಿವ

ಮದುವೆಯಾದ ಹೆಣ್ಣು ಮಗಳನ್ನು ನಡುನೀರಿನಲ್ಲಿ ಬಿಡುವುದಕ್ಕಿಂತ, ಮದುವೆಯಾಗದೇ ಇರುವುದೇ ವಾಸಿ.

---------------------
ರಾಹುಲ್ ಪ್ರಭಾವಿಯಾಗಲು ಸಮಯಬೇಕು
- ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ಸಮಯ ಸಾಧಕರೇ ತುಂಬಿಕೊಂಡಿರುವಾಗ, ಸಮಯವೆಲ್ಲಿ ಸಿಗಬೇಕು?
 ---------------------
ಐಟಿ ದಾಳಿಯಿಂದ ನಮ್ಮ ಆತ್ಮ ಸ್ಥೈರ್ಯ ಕುಸಿದಿಲ್ಲ

- ಡಿ.ಕೆ.ಶಿವಕುಮಾರ್, ಸಚಿವ

ಸಿದ್ದರಾಮಯ್ಯರ ಆತ್ಮಸ್ಥೈರ್ಯ ಹೆಚ್ಚಿದೆಯಂತೆ.

---------------------
ಹಿಂದೂ ಭಯೋತ್ಪಾದನೆ ಪದಕ್ಕೆ ನನ್ನ ತೀವ್ರ ಆಕ್ಷೇಪ ಇದೆ

- ರಾಜೀವ್ ಮಹರ್ಷಿ, ಕೇಂದ್ರ ಗೃಹ ಕಾರ್ಯದರ್ಶಿ

ಕೇಸರಿ ಭಯೋತ್ಪಾದನೆ ಎನ್ನುವುದೇ ಅತ್ಯುತ್ತಮ.
 ---------------------
ಪಂಚಕುಲಾ ಹಿಂಸಾಚಾರಕ್ಕೆ ತೀರ್ಪು ಪ್ರಕಟಿಸಿದ ಜಡ್ಜ್ ಕಾರಣ

- ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ಹಲವು ಜಡ್ಜ್‌ಗಳು ನೀಡಿರುವ ತಪ್ಪು ತೀರ್ಪಿನ ಕಾರಣದಿಂದಲೇ ನೀವೀಗ ದಿಲ್ಲಿಯಲ್ಲಿ ಕುರಿತು ಈ ರೀತಿ ಮಾತನಾಡಲು ಸಾಧ್ಯವಾಗಿರುವುದು.

---------------------
ಬಿಜೆಪಿ ಪಾಲಿಗೆ ಕಾರ್ಯಕರ್ತರೇ ರಿಯಲ್ ಸ್ಟಾರ್‌ಗಳು

- ಸಿ.ಟಿ ರವಿ, ಶಾಸಕ

ರಿಯಲ್ ಎಸ್ಟೇಟ್ ಸ್ಟಾರ್‌ಗಳಿರಬೇಕು.

---------------------
ನಾಡಿನ ಭಾಷೆ , ಧ್ವಜದ ಬಗ್ಗೆ ಸರಕಾರವು ಜನತೆಯಲ್ಲಿ ಗೊಂದಲ ಮೂಡಿಸುತ್ತಿದೆ

-ಶೋಭಾ ಕರಂದ್ಲಾಜೆ, ಸಂಸದೆ

ಭಾಷೆ, ಧ್ವಜದ ಬಗ್ಗೆ ನಿಮಗೇ ಗೊಂದಲವಿರುವಂತಿದೆ.

---------------------
ಜೀವವಿರುವವರೆಗೆ ಸಿದ್ದರಾಮಯ್ಯರ ದುಷ್ಟ ಸರಕಾರದ ಎದುರು ಭಿಕ್ಷೆ ಬೇಡುವುದಿಲ್ಲ

- ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ಮುಖಂಡ

ರೋಲ್‌ಕಾಲ್ ಮಾಡಿಯೇ ಬದುಕುತ್ತೇನೆ ಎಂದು ನಿರ್ಧರಿಸಿದಂತಿದೆ.

---------------------
ದೇವೇಗೌಡರು ಬದುಕಿರುವವರೆಗೆ ಮಾತ್ರ ನಾನು ರಾಜಕೀಯ ಮಾಡುತ್ತೇನೆ, ಬಳಿಕ ಮನೆಯಲ್ಲೇ ಕೂರುತ್ತೇನೆ

- ಎಚ್.ಡಿ.ರೇವಣ್ಣ, ಮಾಜಿ ಸಚಿವ

ಕುಮಾರಸ್ವಾಮಿಯ ಮೇಲೆ ಭರವಸೆಯಿಲ್ಲ ಎಂದಾಯಿತು.

---------------------
ನನ್ನ ಬಣ್ಣ ಕೇಸರಿಯಲ್ಲ

- ಕಮಲ್ ಹಾಸನ್, ಚಿತ್ರ ನಟ

ಆಗಾಗ ಬಣ್ಣ ಬದಲಿಸುವುದು ಒಳ್ಳೆಯ ರಾಜಕೀಯ ಅಲ್ಲ.

---------------------
ನೋಟು ಅಮಾನ್ಯ ಸ್ವತಂತ್ರ ಭಾರತದ ಅತಿದೊಡ್ಡ ಹಗರಣ

- ಸಂಜಯ್ ಸಿಂಗ್, ಆಪ್ ನಾಯಕ
  ಭಾರತ ಸ್ವತಂತ್ರಗೊಂಡದ್ದೇ ಒಂದು ಬೃಹತ್ ಹಗರಣ ಎಂದು ಹೇಳುತ್ತಿದ್ದಾರೆ ಬಿಜೆಪಿ ನಾಯಕರು.
 --------------------

ಜಿಲ್ಲೆಯಲ್ಲಿ ಧಾರ್ಮಿಕ ಭಾವನೆ ಜಾಗೃತಗೊಂಡಿದೆ

- ಪ್ರಮೋದ್ ಮಧ್ವ್ವರಾಜ್, ಸಚಿವ

ಪೊಲೀಸರಿಗೆ ಗಲಭೆ ನಡೆಯ ಬಹುದಾದ ಸೂಚನೆ ನೀಡುತ್ತಿದ್ದೀರಿ ಎಂದುಕೊಳ್ಳುತ್ತಿದ್ದೇವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು