varthabharthi

ಅನುಗಾಲ

ಕೊಲೆ ಹಬ್ಬಕ್ಕೆ ಎಂದು ಕೊನೆ?

ವಾರ್ತಾ ಭಾರತಿ : 7 Sep, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಧರ್ಮದ ಆಧಾರದಲ್ಲಿ ಸಮಾಜವನ್ನು, ದೇಶವನ್ನು ಮಾತ್ರವಲ್ಲ ಜಗತ್ತನ್ನೂ ಕಟ್ಟುವುದು ಸಾಧ್ಯವಿಲ್ಲ ಎಂಬುದನ್ನು ಅನಾದಿಯಿಂದ ಮನುಷ್ಯನು ಕಂಡಿದ್ದಾನೆ ಮಾತ್ರವಲ್ಲ, ಸಾಬೀತುಮಾಡಿದ್ದಾನೆ. ಇಷ್ಟಾದರೂ ಎಲ್ಲೆಡೆಯ ಲೌಕಿಕ ಸುಖಭೋಗಗಳು ತನಗೇ ಇರಲಿ ಎಂದು ಯೋಚಿಸುವುದು ತಪ್ಪಲ್ಲ. ಅಸಂಖ್ಯ ಯುದ್ಧಗಳು ನಡೆದರೂ ಮನುಷ್ಯನಿಗೆ ಕಲಹದಲ್ಲಿ ದುರಂತದಲ್ಲಿ ಎಲ್ಲ ಬದುಕುಗಳು ಪರ್ಯಾಯವಸಾನ ಹೊಂದುತ್ತವೆ ಎಂಬ ಕಟು ಸತ್ಯ ಅರಿವಾದಂತಿಲ್ಲ.


ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅಂತಲ್ಲ, ರಾಜ್ಯ, ದೇಶ, ಇವನ್ನೆಲ್ಲ ಒಳಗೊಂಡ ವಿಶಾಲವಾದ ಜಗತ್ತಿನ ಎಲ್ಲೆಡೆ ಕ್ರೌರ್ಯ ಮತ್ತು ಹಿಂಸೆ ತಾಂಡವವಾಡುತ್ತಿದೆ. ಆಕಾಶ ಗಂಗೆ, ಅದಕ್ಕೂ ವಿಸ್ತಾರವಾದ ಅಗಣಿತ ವ್ಯೋಮದಲ್ಲಿ ಏನು ನಡೆಯುತ್ತಿದೆಯೆಂದು ಭೂಮಿಯಲ್ಲಿರುವವರಿಗೆ ಇನ್ನೂ ಗೊತ್ತಾಗಿಲ್ಲ. ಆದರೂ ಇಡೀ ಜಗತ್ತು ಒಂದೇ ಸೂತ್ರ ಬದ್ಧತೆಯಿಂದ ನಡೆಯುತ್ತಿದೆಯೆಂಬುದನ್ನು ಕಲ್ಪಿಸಿದರೆ ಅಲ್ಲೂ ಇಷ್ಟೇ ವ್ಯಾಪಕವಾದ ಹಿಂಸೆ ನಡೆಯುತ್ತಿರಬಹುದು. ಅನೇಕರಿಗೆ ಅದೇ ಸಮಾಧಾನದ ವಿಚಾರ. ಭಾರತಕ್ಕೆ ಬ್ರಿಟಿಷ್ ವಸಾಹತುಶಾಹಿಯಿಂದ ಬಿಡುಗಡೆಗೊಂಡ ಕ್ಷಣಗಳು ಸಂಭ್ರಮವನ್ನೂ ಶೋಕವನ್ನೂ ಏಕಕಾಲಕ್ಕೆ ನೀಡಿದವು.

ಅತೀವ ಕಷ್ಟದಲ್ಲಿ ಒಂದಾದ ಈ ಉಪಖಂಡದ ಜನರು, ಅರಸೊತ್ತಿಗೆಗಳು ಭಾರತ ಪಾಕಿಸ್ತಾನ ಎಂಬ ಇನ್ನೊಂದು ಹೊಸ ಮತ್ತು ಕೃತಕ ವಿಭಜನೆಯನ್ನೆದುರಿಸಿದವು. ಒಟ್ಟು ಕುಟುಂಬದ ಆಸ್ತಿಗಳು ಮನೆಯ ಹಿರಿಯನ ಎದುರೇ ವಿಭಾಗವಾದಂತೆ ಪರಿಚಿತರು ಅಪರಿಚಿತರಾದರು. ವಿಭಜನೆಯ ದುರಂತದ ಕುರಿತು ಅನೇಕ ಕೃತಿಗಳು ಬಂದಿವೆ. ಸಾದತ್ ಹಸನ್ ಮಾಂಟೋನ ಕಥೆಗಳು ಕರುಳು ಹಿಂಡುವಂಥವು. ಸ್ವಾತಂತ್ರ್ಯ ಪೂರ್ವ ಭಾರತದ ಬಿಡಿಭಾಗಗಳು ಆಳುವವರ ಕೈಯಲ್ಲಿ, ವಸಾಹತುಶಾಹಿಗಳ ಕೈಯಲ್ಲಿ ದಮನಕಾರಿ ಹಿಂಸೆಯನ್ನು ಅನುಭವಿಸಿದ್ದು ಸ್ವತಂತ್ರ ಭಾರತಕ್ಕೆ ಪಾಠವಾಗಬೇಕಾಗಿತ್ತು. ಆದರೆ ಸ್ವತಂತ್ರ ಭಾರತದ ಮೊದಲ ದಿನಗಳಲ್ಲಿ ದೇಶದ ಎಲ್ಲೆಡೆ ಭಯಾನಕವಾದ ರೌದ್ರ ಹಿಂಸೆಯು ತಾಂಡವವಾಡಿ ಸಮಾಜದ ಸ್ವಾಸ್ಥವನ್ನೇ ಕೆಡಿಸಿತ್ತು. ಧರ್ಮದ ಆಧಾರದಲ್ಲಿ ಸಮಾಜವನ್ನು, ದೇಶವನ್ನು ಮಾತ್ರವಲ್ಲ ಜಗತ್ತನ್ನೂ ಕಟ್ಟುವುದು ಸಾಧ್ಯವಿಲ್ಲ ಎಂಬುದನ್ನು ಅನಾದಿಯಿಂದ ಮನುಷ್ಯನು ಕಂಡಿದ್ದಾನೆ ಮಾತ್ರವಲ್ಲ, ಸಾಬೀತುಮಾಡಿದ್ದಾನೆ.

ಇಷ್ಟಾದರೂ ಎಲ್ಲೆಡೆಯ ಲೌಕಿಕ ಸುಖಭೋಗಗಳು ತನಗೇ ಇರಲಿ (ಮತ್ತೊಂದಿಷ್ಟು ರಿಯಾಯಿತಿಯ ಮನೋಧರ್ಮದಲ್ಲಿ ತನ್ನ ಮಕ್ಕಳು, ಕುಟುಂಬ ಹೀಗೆ ಬಂಧು-ಬಳಗಕ್ಕಿರಲಿ) ಎಂದು ಯೋಚಿಸುವುದು ತಪ್ಪಲ್ಲ. ಅಸಂಖ್ಯ ಯುದ್ಧಗಳು ನಡೆದರೂ ಮನುಷ್ಯನಿಗೆ ಕಲಹದಲ್ಲಿ ದುರಂತದಲ್ಲಿ ಎಲ್ಲ ಬದುಕುಗಳು ಪರ್ಯಾಯವಸಾನ ಹೊಂದುತ್ತವೆ ಎಂಬ ಕಟು ಸತ್ಯ ಅರಿವಾದಂತಿಲ್ಲ. ಈ ಅರಿವಿರುವ ಕೆಲವೇ ಮಂದಿ ತಮ್ಮ ಬದುಕಿಗೆ ಮತ್ತು ತಮ್ಮ ಸುತ್ತಲಿನ ಬದುಕುಗಳಿಗೆ ಬೆಳಕಾಗಲು ಇಲ್ಲವೇ ಬೆಳಕು ತೋರಲು ಬಯಸಿದರು. ಅದು ವಿಫಲವಾದಾಗಲೂ ತಮ್ಮ ಪ್ರಯತ್ನವನ್ನು ಸ್ಮರಿಸಿದರು. ವಿಷಾದಪಟ್ಟರು. ಮುಂದೆ ಬೆಳಗಾಗಬಹುದೆಂಬ ಸ್ಮತಿಯೊಂದಿಗೆ ಮಬ್ಬುಗತ್ತಲಲ್ಲಿ ಮರೆಯಾದರು.

21ನೆ ಶತಮಾನ ಯಾವ ದಿಕ್ಕಿಗೆ ಸಾಗುತ್ತಿದೆಯೆಂಬ ಬಗ್ಗೆ ಕಳೆದ ಕೆಲವು ವರ್ಷಗಳಲ್ಲಿ ಸಂಕೇತಗಳು ಸಿಗುತ್ತಿವೆ. ಇಸ್ಲಾಮಿಕ್ ಸ್ಟೇಟ್‌ನ ಹಂತಕರು ಜಾತಿಮತಗಳ ಭೇದವಿಲ್ಲದೆ ಕೈಗೆ ಸಿಕ್ಕಿದ ಎಲ್ಲರನ್ನೂ ಗಂಡು-ಹೆಣ್ಣು-ಮಕ್ಕಳು-ಮುದುಕರೆನ್ನದೆ ಶಿಕ್ಷಿಸಿದರು. ಅತ್ಯಾಚಾರವೆನ್ನುವುದು ಶಕ್ತರ ಆಯುಧವೆನಿಸಿದೆ. ವಿಶೇಷವೆಂದರೆ ಇಂತಹ ಸಂದರ್ಭದಲ್ಲೂ ಇವನ್ನು ನೋಡಿ, ಕೇಳಿ ಸಂತೋಷಪಟ್ಟವರಿದ್ದಾರೆ. ಇಂತಹ ಸಂದರ್ಭದಲ್ಲಿ ಹಿಂದೂ ಧರ್ಮವನ್ನು ಸಹಿಷ್ಣುತೆಯ ಮತವೆಂಬಂತೆ ಬಿಂಬಿಸಿ ಭಾರತದಷ್ಟು ಸಹಿಷ್ಣುತೆಯ ದೇಶ ಇನ್ನೊಂದಿಲ್ಲವೆಂದು ತಮ್ಮ ತಲೆಗೆ ತಾವೇ ಶಾಂತಿಯ ಕಿರೀಟವನ್ನಿಟ್ಟು ವಿಜಯಯಾತ್ರೆ ನಡೆಸಿದವರಿದ್ದಾರೆ. ಆದರೆ ಭಾರತದಲ್ಲೂ ಈಚೆಗೆ ನಡೆದ ಹಿಂಸೆಗಳು ನಮ್ಮ ‘ಸಹಿಷ್ಣುತೆ’ಯ ಕವಚವನ್ನು ಕಳಚಿಟ್ಟವು. ಬೌದ್ಧ ಧರ್ಮವೇ ಶ್ರೇಷ್ಠವೆಂದು ಅನೇಕರು ವಾದಿಸಿದ್ದುಂಟು.

ಆದರೆ ಈಚೆಗೆ ಮ್ಯಾನ್ಮಾರ್ (ಬರ್ಮಾ)ನಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲೆ ಅಲ್ಲಿನ ಬೌದ್ಧರು ನಡೆಸಿದ ಹಿಂಸೆಯನ್ನು ನೋಡಿದರೆ ಬುದ್ಧನೇ ಆತ್ಮಹತ್ಯೆ ಮಾಡಿಕೊಳ್ಳಬೇಕು. (ಕೆಲವರ್ಷಗಳ ಹಿಂದೆ ಶ್ರೀಲಂಕಾದಲ್ಲೂ ತಮಿಳರ ಮೇಲೆ ಇಂತಹ ಹಿಂಸೆ ನಡೆದಿತ್ತು.) ಇವನ್ನೆಲ್ಲ ಗಮನಿಸಿದರೆ ಹಿಂಸೆಯೇ ಪರಮ ಧರ್ಮವೆಂದು ಘೋಷಿಸುವ ದಿನ ದೂರವಿಲ್ಲವೆಂದು ಕಾಣುತ್ತದೆ. *ಈ ಕ್ಷಣಕ್ಕೆ ಗೋಪಾಲಕೃಷ್ಣ ಅಡಿಗರು 1940-50ರ ದಶಕದಲ್ಲಿ ಬರೆದ ‘‘ಎಂದು ಕೊನೆ’’ ಕವನವು ನೆನಪಾಗುತ್ತದೆ. ಮುಂದೆ ಅವರು ಬರೆಯಬಲ್ಲ ಹಿಮಗಿರಿಯ ಕಂದರ, ಭೂಮಿಗೀತ, ವರ್ಧಮಾನ ಮುಂತಾದ ಕವನಗಳಿಗೆ ಇಲ್ಲಿ ಬೀಜಾಂಕುರವಾಗಿತ್ತು. ಕವಿ ಆರಂಭಿಸುವುದು ಮತ್ತು ಕೊನೆಗೊಳಿಸುವುದು ಸುಮಾರಾಗಿ ಒಂದೇ ರೀತಿಯಲ್ಲಿ: ಎಂದು ಕೊನೆ?-ಹಾ- ಎಂದು ಕೊನೆ?

ಒಬ್ಬರನ್ನೊಬ್ಬರು ಕೊಂದು ಕಳೆವ ಕೊಲೆ

ಹಬ್ಬಕೆ ತಾ ಬರದೇನು ಕೊನೆ?

ಈ ಕೊಳೆಕೊಬ್ಬಿಗೆ, ಈ ಬಗೆಮಬ್ಬಿಗೆ

ಎಂದು ಕೊನೆ?-ಓ-ಎಂದು ಕೊನೆ? ಆದರೆ ಇದು ಇಂದು ನಿನ್ನೆಯದಲ್ಲ; ಯುಗದಿಂದಲು ಬಗೆಬಗೆಯಿಂದಲು

ನಗುವಿನೊಳೂ ಯಾತನೆಯೊಳಗೂ ನರನೆದೆಯಾಳವನಳಲಿಪ ಅಳುಕಿದು; ‘ಬರದೆ ಕೊನೆ?-ಇದ-ಕಿರದೆ ಕೊನೆ?’ ಕವಿ ಹಿಂಸೆಗೊಂದು ಅನಾದಿತ್ವವನ್ನು ಕಲ್ಪಿಸಿದ್ದಾರೆ. ಅನೇಕ ಬಾರಿ ನಮಗೆ ಸಮಾಧಾನ ತರುವ ವಿಷಯವೆಂದರೆ- ಇದು ಇದ್ದದ್ದೇ- ಎಂಬ ಒಳಸುಯ್ಲು. ಸೀತಾ ದ್ರೌಪದಿಯರು ಅನುಭವಿಸದ ಕಷ್ಟವನ್ನು ನಾವು ಅನುಭವಿಸುತ್ತಿಲ್ಲವಲ್ಲ ಎಂದು ಇಂದೂ ಹೆಂಗಳೆಯರು ಕೊರಗುತ್ತ ಹೇಳುವುದುಂಟು. ವಿಶ್ವದ ಎಲ್ಲ ಪುರಾಣ-ಕಾವ್ಯಗಳು ಕಲಹದ, ಹಿಂಸೆಯ, ದುರಂತದ, ವಿಷಾದದ ಕೊನೆಗೆ ಪಶ್ಚಾತ್ತಾಪದ ಬೇಗೆಯ ಬೆಂಕಿ-ಹೊಗೆಯಲ್ಲಿ ಮಿಂದವುಗಳೇ. ಶ್ರೀರಾಮಚಂದ್ರ ಸರಯೂ ನದಿಯಲ್ಲಿ ಮುಳುಗಿದ; ಶ್ರಿಕೃಷ್ಣ ಬೇಡನ ಬಾಣಕ್ಕೆ ಗುರಿಯಾದ; ಯೇಸು ಶಿಲುಬೆಗೇರಿದ; ಬಸವಣ್ಣ ಕೂಡಲ ಸಂಗಮದಲ್ಲಿ ಬದುಕನ್ನು ಮುಗಿಸಿದ. ಇತರರೂ ಸುಖವಾಗಿ ಸತ್ತರೆಂದು ಭಾವಿಸಬೇಡಿ. ಅವರಿಗೂ ತಮ್ಮದೇ ವ್ಯಾಕುಲಗಳಿದ್ದವು. ಏನಿಲ್ಲವೆಂದರೂ ತಮ್ಮಿಂದ ಈ ಜಗತ್ತನ್ನು ಒಂದಿಷ್ಟೂ ತಿದ್ದಲು ಸಾಧ್ಯವಾಗಿಲ್ಲವೆಂಬ ದುಃಖವಿರಬಹುದು. ತಮ್ಮ ಸಂಸಾರವನ್ನು ಬೀದಿಗೆ ಹಾಕಿ ತಾವೊಬ್ಬರೇ ಜಗತ್ಕಲ್ಯಾಣಕ್ಕೆಂದು ಅಲೆದವರಿಗೆ ಕೊನೆಗೂ ಖಾಲಿತನವೇ ಪ್ರಾಪ್ತಿಯಾದದ್ದನ್ನು ಗಮನಿಸಿದರೆ ಎಲ್ಲ ಹಿಮಪರ್ವತಗಳನ್ನು ನಮ್ಮ ಋಷಿಮುನಿಗಳ ಸಂಸಾರದ ಕಣ್ಣೀರಿನ ಹೆಪ್ಪುಗಟ್ಟಿದ ಸ್ಥಿತಿಯೆಂಬ, ಉಳಿದ ಬೆಟ್ಟಗುಡ್ಡಗಳನ್ನು ಆಸೆ ಆಕಾಂಕ್ಷೆಗಳು ಮಣ್ಣಾದವೆಂಬ, ಕರಗದ ಕಲ್ಲೆಂಬ, ರೂಪಕ ಯಥಾರ್ಥವಿರಬಹುದೇನೋ? ಸಮುದ್ರದ ನೀರು ಕಣ್ಣೀರಿನ ಉಪ್ಪಿನ ತವರುಮನೆಯಾಗಿರಬಾರದೇಕೆ? ಆದರೂ ಎಲ್ಲೋ ದೀರ್ಘ ಕತ್ತಲ ಅನಂತರ ಬೆಳಕು ಬರುವುದೆಂಬ, ಕಡೆದಾಗ ಅಮೃತ ಬರುವುದೆಂಬ ನಿರೀಕ್ಷೆ. ಇದಕ್ಕಾಗಿ ಸಮುದ್ರ ಮಥನ. ಆದರೆ ಹಾಗಾಗಲಿಲ್ಲ:

ಎನಿಬರೊ ನರವರರೆದ್ದು ಬಂದು

ಕಡೆ ಕಡೆದರು ನರನೆದೆಯ;

ಹಾಲಾಹಲವೇ ಹರಿಯಿತು, ಮೊರೆಯಿತು:

ಬಾರದೇನೊ ಅಮೃತ-ಎಂದಿಗೂ-ಬಾರದೇನೋ ಅಮೃತ?

ಎಂದು ಕವಿ ಮತ್ತೆ ತನ್ನ ಸಂಕಟವನ್ನು ಹಾಡಿದರು. ಹಿಂಸೆ ಮನುಷ್ಯನಿಗೆ ಎಂದೂ ಅಹಿಂಸೆಯ ಪಾಠ ಹೇಳಲಿಲ್ಲ. ಹೀಗೆ ಮಾಡಬೇಡಿ ಎಂದು ಹೇಳುವುದಾದರೂ ಹೇಗೆ? ನೋಡಿ ಕಲಿಯಬೇಕು. ಅಹಿಂಸೆಯನ್ನು ಅನುಸರಿಸಿ ಎಂದು ಹೇಳುವುದು ಯಾರು? ಅಹಿಂಸಾ ಪರಮೋ ಧರ್ಮ ಎಂದವರು ಅದರೊಳಗಿರುವ ಹಿಂಸಾ ಎಂಬ ಪದವನ್ನು ತ್ಯಜಿಸಿ ಹೊಸ ಪದವನ್ನು ಹಾಕಲಿಲ್ಲ. ಹೀಗಾಗಿ ನೋಡುವವರಿಗೆ, ಕೇಳುವವರಿಗೆ ‘ಅಹಿಂಸಾ’ ಎಂಬ ಪದವು ಪ್ರತಿಮೌಲ್ಯವಾಯಿತೇ ವಿನಾ ಮೂಲ ನಿಲುವಿನ ಪದವೆಂದು ಅನ್ನಿಸಲೇ ಇಲ್ಲ. ಇದೊಂದು ರೀತಿಯಲ್ಲಿ ಆಲ್ಕೋಹಾಲಿನಲ್ಲಿ ಹಾಲಿದೆ ಎಂದಂತೆ. ಕವಿ ಮುಂದುವರಿದು ಮುಗಿಲಲಿ ಮೂಡಿದ ಒಲವಿನ ಕನಸು

ಮನಸಿಗಿಳಿಯದಲ್ಲ-ಇಳಿದರು-ನನಸನಾಳದಲ್ಲ!

ಅರಿವಿಗು ಇರುವಿಗು ಇರುವೀ ಅಂತರ

ಕಳೆಯಲಾರದೇನೋ-ಎಂದಿಗು-

ಅಳಿಯಲಾರದೇನೋ! ಎನ್ನುತ್ತಾರೆ. ಯೂನಿಯನ್ ಜಾಕ್ ಧ್ವಜವಿಳಿದು ತ್ರಿವರ್ಣ ಧ್ವಜವೇರಿದಾಗ ಕನಸುಗಳು ಅದಕ್ಕಿಂತಲೂ ಎತ್ತರಕ್ಕೆ ಹಾರಿ ತೇಲಾಡಿದವು. ಇನ್ನೇನು ನಮ್ಮೀ ದೇಶವು ವಿಶ್ವಗುರುವಾಯಿತು; ವಿಶ್ವಸಾರ್ವಭೌಮವಾಯಿತು ಎಂದೆಲ್ಲ ಹೆಮ್ಮೆ ಪಟ್ಟೆವು. ಆದರೆ ಕವಿ ಹೇಳುವಂತೆ ಕನಸುಗಳು ಕನಸಿನ ಸಾಮ್ರಾಜ್ಯದಲ್ಲಿ ಮಾತ್ರ ವಿಹರಿಸಬಹುದು. ಅವು ನನಸನಾಳವು. ಕನಸಿನ ಆಳದಿಂದ ನನಸಿನ ನೆಲಕ್ಕೆ ಬಂದಾಗ ಮೈಯೆಲ್ಲ ಮಣ್ಣು. ಅರಿವಿಗೂ ಇರುವಿಗೂ ಅಂದರೆ ಪ್ರಾಯಃ ಆದರ್ಶಕ್ಕೂ ವಾಸ್ತವತೆಗೂ ಇರುವ ಅಂತರ ಎಂದಿಗೂ ಕಡಿಮೆಯಾಗದು. ವಾಸ್ತವದಲ್ಲಿ ಮನುಷ್ಯ ಸಂಬಂಧಗಳು ಹೇಗಿವೆ? ಕವಿ ಹೇಳುತ್ತಾರೆ: ಎದೆಗು ಎದೆಗು ನಡುವಿದೆ ಹಿರಿಗಡಲು:

ಮುಟ್ಟಲಾರೆವೇನೋ?-ಸೇತುವೆ-ಕಟ್ಟಲಾರೆವೇನೋ?

ನಡುವಿನ ತೆರೆಗಳ ಮೊರೆಹವೆ ಮಾನವ ಜೀವಗಾನವೇನೋ-ದೇವನ-ದಿವ್ಯದಾನವೇನೋ! ಪರಸ್ಪರ ಸಂಧಿಸಲಾಗದ ನಡುಗಡ್ಡೆಗಳಂತಿರುವ ನಾವು ಈ ಕಂದರವನ್ನು ತುಂಬಲಾರೆವು. ಸೇತುವೆ ಕಟ್ಟದೆ ಈ ದಡದಿಂದ ಆ ದಡಕ್ಕೆ ಹೋಗುವುದಾದರು ಹೇಗೆ? ಆದರು ಆಸೆಗಳಿರುವ ಮನಸ್ಸಿಗೆ ಈ ಅಗಾಧ ಅಂತರದ ನಡುವೆ ಕೇಳಿಬರುವ ತೆರೆಗಳ ಸದ್ದು ಜೀವದ ಮೋಹನ ಗಾನವಾಗಿ ಕೇಳಿಬರುತ್ತದೆ. ಇದನ್ನು ಕವಿ ಜೀವಗಾನವೆನ್ನುತ್ತಾರೆ; ಮುಳುಗುವ ಜಗತ್ತಿನಲ್ಲಿ ಇದೇ ಸೃಷ್ಟಿಕರ್ತನ ದಿವ್ಯದಾನವೆನ್ನುತ್ತಾರೆ. ಈಗಿನ ಜಗತ್ತು, ಸಮಾಜ ಹೇಗಿದೆ? ಪರಸ್ಪರ ಸಾಮರಸ್ಯಕ್ಕೆ ಅಗತ್ಯವಾದ ನಂಬಿಕೆ, ವಿಶ್ವಾಸ ಎಲ್ಲಿದೆ? ಕವಿ ಬರೆಯುತ್ತಾರೆ: ಒಬ್ಬರನ್ನೊಬ್ಬರು ನಂಬುವ ತುಂಬುವ

ಹಬ್ಬವು ಕಬ್ಬದ ಕಾದಂಬಿನಿಯಲಿ ಮೂಡುವ ಮಸುಳುವ ಮಳೆ ಬಿಲ್ಲಾಯಿತೆ? ಮೊಳೆಯದೆ ಅದು ಎದೆಯಾಳದಲಿ?

ಬೆಳೆಯದೆ ನಮ್ಮೀ ಬಾಳಿನಲಿ? ಹೇಗೆ ಅಶಾಶ್ವತವಾದ ಕಾಮನಬಿಲ್ಲು ಬಂದುಹೋದ ಮಳೆಯ ನೆನಪಾಗಿ ಒಂದಷ್ಟು ರಂಜಿಸಿ ಕೊನೆಗೆ ಇಲ್ಲವಾಗುತ್ತದೆಯೋ ಹಾಗೆಯೇ ಈ ನಂಬಿಕೆಯ ಪಾತ್ರಧಾರಣೆಯು ಮೊಳೆಯದೆ ಹಾಗೆಯೇ ಮಾಸಿಹೋಗುತ್ತಿದೆಯಲ್ಲ! ನಮ್ಮ ಬದುಕಿನಲ್ಲಿ ಅದು ಮೊಳೆಯದಿದ್ದಾಗ ಇನ್ನು ಬೆಳೆಯುವ ಪ್ರಮೇಯವೇ ಇಲ್ಲ. ಹೀಗಾಯಿತೇ ಎಂಬ ಸ್ವಮರುಕ ಕವಿಯನ್ನು ಕಾಡುತ್ತದೆ. ಇಂತಹ ಆತಂಕಗಳು ಯಾರಿಗೆ? ಸಂವೇದನಾಶೀಲ ಮನಸ್ಸಿಗೆ ಮಾತ್ರ. ಆರ್ದ್ರಗೊಂಡ ಮನಸ್ಸಿಗೆ ಮಾತ್ರ ಈ ಕೊರತೆಯ ತಳಮಳ. ಕವಿ ತನ್ನ ಪದ್ಯದ ಕೊನೆಯಲ್ಲಿ ತಿಳಿಯುವ ಹೃದಯದ ಈ ತಳಮಳಕೆ, ಬೆಳೆಯುವ ಬುದ್ಧಿಯ ಈ ಕಳವಳಕೆ, ಬಲಿಯುವ ನರಕುಲದೀ ಒಳರೋಗಕೆ ಎಂದು ಕೊನೆ?-ಹಾ- ಎಂದು ಕೊನೆ? ಒಬ್ಬರನೊಬ್ಬರು ಕೊಂದು ಕಳೆವ ಕೊಲೆ ಹಬ್ಬಕೆ ತಾ ಇರದೇನು ಕೊನೆ?

ಎಂದು ಕೊನೆ?-ಹಾ-ಎಂದು ಕೊನೆ? ಎನ್ನುತ್ತಾರೆ. ಮೊದಲ ಚರಣ (ಸ್ಟಾಂಜಾ)ದ ಪದಗಳೇ ಕೊನೆಗೂ ಬಂದಿವೆಯೆಂದು ಅನ್ನಿಸಬಹುದು; ಆದರೆ ಇಲ್ಲಿ ಬರದೇನು ಎಂದು ಮೊದಲು ಹಾಡಿದ್ದಕ್ಕೆ ಪ್ರತಿಯಾಗಿ ಇರದೇನು ಎಂಬ ಪದ ಹಾಗೂ ಓ ಎಂಬ ಉದ್ಗಾರಕ್ಕೆ ಪ್ರತಿಯಾಗಿ ಹಾ ಎಂಬ ಪದವಿದೆ. ನರಕುಲವು (ಇಲ್ಲಿ ಮನುಕುಲ ಎಂಬ ಪದವು ಪ್ರಯೋಗವಾಗಿಲ್ಲ!) ಸಾವಿನ ಹೊರತಾದ ಒಂದು ಭಯಂಕರ ಒಳರೋಗಕ್ಕೆ ತುತ್ತಾಗಿದೆ. ಮನುಷ್ಯ ಬಲಿದಂತೆಲ್ಲ ಈ ರೋಗವೂ ಉಲ್ಬಣವಾಗುತ್ತಿದೆ.

ಇದು ಹೊರಗೆ ಕಾಣುವಂಥದ್ದಲ್ಲ; ಒಳಗಿನಿಂದಲೇ ಮನಸ್ಸು ಬುದ್ಧಿಗಳನ್ನು ವ್ಯಾಪಿಸಿ, ಪ್ರಭಾವಿಸಿ ಹೃದಯಹೀನರನ್ನಾಗಿಸಿ ಎಲ್ಲಕಡೆ ಹಾಹಾಕಾರವನ್ನು ಸೃಷ್ಟಿಸುವ ಅಂಟು ರೋಗ. ವಿನಾಶವನ್ನು ಪರಿಣಾಮವಾಗುಳ್ಳ ರೋಗದಿಂದಷ್ಟೇ ಮನುಷ್ಯ ಮನುಷ್ಯರು ಪರಸ್ಪರ ಅಂಟಿದ್ದಾರೆ. ಇದಕ್ಕೆ ಕೊನೆಯಿಲ್ಲವೇ ಎಂಬ ದಯನೀಯ ದೈನ್ಯಶೋಕವಿದೆ. *ಹಿಂಸೆಯ ದಾರುಣ ಸ್ಥಿತಿ ಅರ್ಥವಾಗದವರ ಕುರಿತು ಅನುಕಂಪದ ಹೊರತು ಇನ್ನೇನೂ ಮಾಡದ ಸ್ಥಿತಿಯಲ್ಲಿ ನಾವಿದ್ದೇವೆ. ಅಂಥವರ ಕೈಯಲ್ಲಿ ಸಿಕ್ಕು ಸಾಯುವುದು ವ್ಯಕ್ತಿಗಳು ಮಾತ್ರವಲ್ಲ; ಸಂಸ್ಕೃತಿ ಕೂಡಾ. ಯಾರೂ ಶಾಶ್ವತರಲ್ಲ. ಆದರೆ ಅಸ್ಥಿರತೆ ಇಷ್ಟೊಂದು ಕಾಡಬಾರದಲ್ಲ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)