varthabharthi

ನೇಸರ ನೋಡು

ಒಂದು ಸೈದ್ಧಾಂತಿಕ ಹತ್ಯೆಯ ಸುತ್ತ...

ವಾರ್ತಾ ಭಾರತಿ : 10 Sep, 2017
ಜಿ.ಎನ್.ರಂಗನಾಥ್ ರಾವ್

ಗೌರಿ ಲಂಕೇಶ್ ಇನ್ನಿಲ್ಲ. ಆದರೆ ಆಕೆಯ ನಿಧನಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಿದರೆ ನಮ್ಮ ಸಮಾಜ ಏಕಿಷ್ಟು ಬರ್ಬರವಾಗುತ್ತಿದೆ? ಏಕಿಷ್ಟು ಅನಾಗರಿಕವಾಗುತ್ತಿದೆ ಎಂದು ಗಾಬರಿಯಾಗುತ್ತದೆ. ನಮ್ಮ ಸಮಾಜದ ಮಾನಸಿಕ ಆರೋಗ್ಯ ಕೆಟ್ಟಿದೆಯೇ? ಇಂದು ಇದು ಕೇವಲ ಅನುಮಾನವಾಗಿ ಉಳಿದಿಲ್ಲ. ಕಾಡುವ ಕಟುವಾಸ್ತವವಾಗಿದೆ. ಒಂದು ಮನೆಯಲ್ಲಿ ಭಿನ್ನಮತಹೊಂದಿರುವ ಎಳೆಯರ ಹತ್ಯೆಯಾದಾಗ ನಾವು ಸಂಭ್ರಮಿಸುತ್ತೇವೆಯೇ? ಹಬ್ಬ ಆಚರಿಸುತ್ತೇವೆಯೇ? ಹೋಳಿಗೆ ಊಟದ ಮಾತಾಡುತ್ತೇವೆಯೇ? ಇದು ನಮ್ಮ ಸಂಸ್ಕೃತಿಯೇ?


ಮಿನರ್ವ ಸರ್ಕಲ್‌ನ ಸಮೀಪದ ಮನೆಯಿಂದ ಅಪ್ಪ ಲಂಕೇಶರ ಕೈಹಿಡಿದು ಹತ್ತಿರದ ಲಾಲ್‌ಬಾಗಿಗೋ ಗಾಂಧಿ ಬಜಾರಿಗೋ ಪುಟ್ಟ ಪುಟ್ಟ ಹೆಜ್ಜೆಯಿಡುತ್ತ, ಮುಗ್ಧ ಪ್ರಶ್ನೆಗಳಿಂದ ಅಪ್ಪನನ್ನೂ ಜೊತೆಯಲ್ಲಿರುತ್ತಿದ್ದ ಕಿ.ರಂ.ನಾಗರಾಜ್ ಮತ್ತಿತರ ನಮ್ಮಂಥವರನ್ನು ವಿಸ್ಮಯಗೊಳಿಸುತ್ತಿದ್ದ ಐದು ವರ್ಷದ ಪುಟ್ಟ ಗೌರಿ, ಗೌರಿ ಲಂಕೇಶ್ ಆಗಿ ಬೆಳೆದು ತಂದೆಯ ಪ್ರಭಾವದಿಂದ ಹೊರಬಂದು ನಿರ್ಭೀತ ಪತ್ರಕರ್ತೆಯಾಗಿ ರೂಪುಗೊಂಡಿದ್ದನ್ನು ಹತ್ತಿರದಿಂದ ದೂರದಿಂದ ಕಂಡ ನಮ್ಮೆಲ್ಲರ ಎದೆಯೂ ಮಾನವ ಘನತೆಯನ್ನು ಎತ್ತಿಹಿಡಿಯುತ್ತಿದ್ದ ಮಗಳೊಬ್ಬಳನ್ನು ಕಳೆದುಕೊಂಡು ದುಃಖದ ಮಡುವಾಗಿದೆ. ಮುಚ್ಚಟೆಯಿಂದ ಬೆಳೆಸಿದ ಮಗಳು ಪ್ರಬುದ್ಧೆಯಾಗಿ ಕಟು ಸತ್ಯಗಳನ್ನು ನಮ್ಮ ಮುಖಕ್ಕೆ ರಾಚುತ್ತಾ, ಅನ್ಯಾಯಗಳ ವಿರುದ್ಧ ಹೋರಾಡುತ್ತಾ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕೊಲೆಪಾತಕಿಯಾದ ಸಮಾಜದ ಭಾಗ ವಾದ ನಾವೂ ನೀವೂ ಮಗಳ ಹತ್ಯೆಯಿಂದ ಅಪರಾಧಿ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಇದಕ್ಕೆಲ್ಲ ಯಾರು ಹೊಣೆ?

ಗೌರಿ ಸಮೂಹ ಮಾಧ್ಯಮದಲ್ಲಿ ಪದವಿ ಪಡೆದು ದಿಲ್ಲಿಯಿಂದ ಹಿಂದಿರುಗುವ ವೇಳೆಗೆ ಆಕೆಯನ್ನು ಬರಮಾಡಿಕೊಳ್ಳಲು ತಂದೆಯ ‘ಲಂಕೇಶ್ ಪತ್ರಿಕೆ’ ಸಿದ್ಧವಾಗಿತ್ತು. ಗೌರಿ ಅದರ ಒಡತಿಯಾಗಿ ಮೆರೆಯಬಹುದಿತ್ತು. ಆದರೆ ಆಕೆ ಆರಿಸಿಕೊಂಡದ್ದು ತಿಮಿಂಗಿಲಗಳಿದ್ದ ಮುಖ್ಯವಾಹಿನಿಯ ಪತ್ರಿಕೋದ್ಯಮವನ್ನು. ಇದು ಆ ಕ್ಷಣಕ್ಕೆ ಅಪ್ಪನ ನೆರಳಿನಿಂದ ಮುಕ್ತಳಾಗಲು ರಹದಾರಿಯಾಗಿ ಕಂಡಿರಬಹುದು ಅಥವಾ ಸ್ವತಂತ್ರಳಾಗಿ ಪತ್ರಿಕೋದ್ಯಮದ ಆಳಅಗಲಗಳನ್ನು ಈಸುವ ಗುಪ್ತ ಆಸೆಯೂ ಇದ್ದೀತು. ಆಂಗ್ಲ ದಿನಪತ್ರಿಕೆಯಲ್ಲಿ, ನಿಯತಕಾಲಿಕಗಳಲ್ಲಿ, ದೂರದರ್ಶನ ವಾಹಿನಿಗಳಲ್ಲಿ ದುಡಿಯುತ್ತಾ ಪತ್ರಿಕೋದ್ಯಮದ ಒಳಸುಳಿಗಳನ್ನೂ ಸಾರ್ವಜನಿಕ ಜೀವನದ ಕಟುವಾಸ್ತವಗಳನ್ನೂ, ಅಸಲಿನಕಲಿತನಗಳನ್ನೂ, ತಣ್ಣಗಿನ ಕ್ರೌರ್ಯದ ರಾಜಕಾರಣವನ್ನೂ ಹತ್ತರದಿಂದ ಕಂಡಳು.

ಈ ದುರ್ದಮ್ಯ ಶಕ್ತಿಗಳ ಹಿಡಿತದಲ್ಲಿ ಸಿಕ್ಕಿ ನರಳುತ್ತಿರುವ ಶೋಷಿತರನ್ನು (ಅಪ್ಪಸದಾ ಕಳಕಳಿ ತೋರುತ್ತಿದ್ದ ಶೋಷಿತರು) ತನ್ನ ವೃತ್ತಿಯ ಕೇಂದ್ರವಾಗಿಸಿಕೊಂಡಳು. ಮಾನವ ಹಿತವೇ ಪತ್ರಿಕಾಧರ್ಮವಾಗಬೇಕೆಂಬ ಬದ್ಧ ನಿಲುವಿನಿಂದ ಮುಂದಿನ ಹಾದಿ ಸ್ಪಷ್ಟವಾಗಿತ್ತು. ತಂದೆಯ ಅಕಾಲ ಮರಣದಿಂದಾಗಿ ಬೆಂಗಳೂರಿಗೆ ವಾಪಸಾದ ಗೌರಿ ‘ಲಂಕೇಶ್ ಪತ್ರಿಕೆ’ ಸಂಪಾದಕರಾದರು. ಆ ವೇಳೆಗೆ ‘ಲಂಕೇಶ್ ಪತ್ರಿಕೆ’ ಶೋಷಿತರ ದನಿಯಾಗಿ ಕನ್ನಡ ಪತ್ರಿಕೋದ್ಯಮದಲ್ಲಿ ವಿಶೇಷ ಛಾಪನ್ನು ಮೂಡಿಸಿತ್ತು. ತಂದೆಯ ಪ್ರಭಾವ ಬೇಡವೆನಿಸಿದರೂ ಅವರ ಪತ್ರಿಕೆಯ ಈ ಕೀರ್ತಿಯ ಭಾರಹೊತ್ತೇ ‘ಲಂಕೇಶ್ ಪತ್ರಿಕೆ’ಯನ್ನು ಮುಂದುವರಿಸುವ ಹೊಣೆಗಾರಿಕೆಯನ್ನು ವಹಿಸಿಕೊಂಡ ಗೌರಿಗೆ ಆ ಕಾಲಘಟ್ಟದಲ್ಲಿ ದೇಶದ ರಾಜಕಾರಣದಲ್ಲಿ ಆಗುತ್ತಿದ್ದ ಬದಲಾವಣೆಗಳ, ಸಂಕ್ರಮಣದ ಹೊರಳುಗಳ ಸೂಕ್ಷ್ಮ ಅರಿವಿತ್ತು. ಲಂಕೇಶ್ ಪತ್ರಿಕೆಗೆ ಗೌರಿಯ ಸ್ವತಂತ್ರ ಪ್ರವೃತ್ತಿಯ ಛಾಪು ಢಾಳವಾದ ಘಟ್ಟದಲ್ಲಿ ಅದನ್ನು ತಮ್ಮನಿಗೆ ಬಿಟ್ಟುಕೊಟ್ಟರು. ಹನ್ನೆರಡು ವರ್ಷಗಳ ಹಿಂದೆ (2005) ‘ಗೌರಿ ಲಂಕೇಶ್’ ಪತ್ರಿಕೆ ಹೊರಬಂತು. ಗುರಿ ನಿಚ್ಚಳವಾಗಿತ್ತು, ದಾರಿಯೂ ಮುಕ್ತವಾಯಿತು.

ಜೀವ ಕಾರುಣ್ಯ, ಜೀವನ ಪ್ರೀತಿ ತುಂಬಿ ತುಳುಕುತ್ತಿದ್ದ ಗೌರಿಯ ಪತ್ರಿಕೆ ಮೂಲದ ಜನಪರ ನೀತಿಯನ್ನು ಉಳಿಸಿಕೊಂಡಿದ್ದರ ಜೊತೆಗೆ ಜನಪರವಾದ ಚಳವಳಿಗಳ ಮುುಖವಾಣಿಯಾಗಿಯೂ ಕ್ರಿಯಾಶೀಲವಾಯಿತು. ಗೌರಿಯ ಸಂಪಾದಕೀಯ ಅಂಕಣ ‘ಕಂಡದ್ದು ಕಂಡಹಾಗೆ’ ಸಮಕಾಲೀನ ಸಮಾಜಕ್ಕೆ ಹಿಡಿದ ದರ್ಪಣವಾಯಿತು. ‘ಗೌರಿ ಲಂಕೇಶ್ ಪತ್ರಿಕೆ’ ಜನಮೆಚ್ಚುವ ಭೋಗಲಾಲಸೆಗಳ ಸುಂದರ ಮುಖಗಳಿಗೆ ದರ್ಪಣವಾದುದಕ್ಕಿಂತ ಹೆಚ್ಚಾಗಿ ಸಮಾಜದ ಕುರೂಪ ಮುಖಗಳಿಗೆ, ಅಕರಾಳವಿಕರಾಳಗಳಿಗೆ ಕೈಗನ್ನಡಿಯಾದದ್ದೇ ಹೆಚ್ಚು. ಇದರಿಂದಾಗಿ ಗೌರಿ ಗಳಿಸಿದ ಜನಾದರಣೆಗಿಂತ ಮಿಗಿಲಾದುದು ಕೋಪತಾಪ ವಿರೋಧಗಳು. ಬೆದರಿಕೆಗಳು ಬರತೊಡಗಿದವು. ಮಾನಹಾನಿ ಮೊಕದ್ದಮೆಗಳನ್ನು ಎದುರಿಸಬೇಕಾಯಿತು. ಇದಾವುದರಿಂದಲೂ ಗೌರಿ ಧೃತಿಗೆಡಲಿಲ್ಲ. ಬದಲಾಗಿ ತಮ್ಮನ್ನು ‘ಕ್ರಿಯಾವಾದಿ ಪತ್ರಕರ್ತೆ’-ಆ್ಯಕ್ಟಿವಿಸ್ಟ್ ಜರ್ನಲಿಸ್ಟ್ ಎಂದು ಕರೆದುಕೊಂಡರು. ನೇರವಾಗಿ ಸಾಮಾಜಿಕ ಆಂದೋಲನಗಳಲ್ಲಿ ಭಾಗಿಯಾದರು.

ಹಿಂಸಾಮಾರ್ಗ ತ್ಯಜಿಸುವಂತೆ ನಕ್ಸಲೀಯರ ಮನ ಒಲಿಸುವುದರಲ್ಲಿ, ಅವರನ್ನು ಮುಖ್ಯ ಜೀವನವಾಹಿನಿಗೆ ಮರಳಿ ತರುವುದರಲ್ಲಿ, ‘ಸಿಟಿಜನ್ಸ್ ಇನಿಷಿಯೇಟಿವ್ ಫಾರ್ ಪೀಸ್’ ಮೂಲಕ ಪ್ರಮುಖ ಪಾತ್ರವಹಿಸಿದರು. ಸಂಘ ಪರಿವಾರದ ಮುತ್ತಿಗೆ ವಿರುದ್ಧ ಬಾಬಾಬುಡನ್‌ಗಿರಿ ಚಳವಳಿಯಲ್ಲಿ ಪಾಲ್ಗೊಂಡರು. ದಲಿತ ಚಳವಳಿಗಳಲ್ಲಿ ಭಾಗವಹಿಸಿದರು. ಗೌರಿ ಪತ್ರಕರ್ತೆಯಾಗಿ, ಕ್ರಿಯಾವಾದಿಯಾಗಿ ಸಂಘಪರಿವಾರದ ಮನುಚಿಂತನೆಗಳ ಕಡುವಿರೋಧಿಯಾಗಿದ್ದರು. ದೇಶದಲ್ಲಿ ಬಲಪಂಥೀಯ ಶಕ್ತಿಗಳು ಪ್ರಬಲವಾದಾಗ, ಕೋಮು ವೈಷಮ್ಯಗಳನ್ನು ಬೆಳೆಸುವ, ಸಮಾಜದ ಸ್ವಾಸ್ಥ್ಯ ಕೆಡಿಸುವ ವಿಕೃತ ಮನಮಸ್ಸುಗಳ ವಿರುದ್ಧ ಸೆಟೆದು ನಿಂತರು. ಕೋಮು ಸೌಹಾರ್ದ ವೇದಿಕೆಗಳ ಜೊತೆಗೂಡಿ ದುಡಿದರು. ಪತ್ರಿಕಾ ಬರವಣಿಗೆ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆ ಮೂಲಕ ಹಿಂದುತ್ವ ರಾಜಕಾರಣವನ್ನು, ಜಾತಿ ಪದ್ಧತಿಯನ್ನು ಕಟುವಾದ ಮಾತುಗಳಲ್ಲಿ ಟೀಕಿಸಿದರು. ಇದರಿಂದಾಗಿ ಅವರಿಗೆ ‘ಹಿಂದೂ ದ್ವೇಷಿ’ ಎಂಬ ಹಣೆಪಟ್ಟಿಯೂ ಅಂಟಿಕೊಂಡಿತು. ಬಸವಣ್ಣ ಮತ್ತು ಅಂಬೇಡ್ಕರ್ ಪ್ರತಿಪಾದಿಸಿದ ಸಮತಾ ಸಮಾಜ ಕಟ್ಟುವುದು ತಮ್ಮ ಸಂವಿಧಾನಾತ್ಮಕ ಜವಾಬ್ದಾರಿ ಎಂಬುದು ಗೌರಿಯ ದೃಢ ನಂಬಿಕೆಯಾಗಿತ್ತು.‘ಪಾಂಚಾಲಿ’, ‘ಸಾವಂತ್ರಿ’ ಹೆಸರುಗಳಲ್ಲಿ ಮಹಿಳಾ ಸಂವೇದನೆಗಳಿಗೆ ದನಿಯಾದರು.

ಕೋಮುವಾದಿ ಫ್ಯಾಶಿಸ್ಟ್ ರಾಜಕೀಯದ ಉಗ್ರ ವಿರೋಧಿಯಾಗಿದ್ದ ಗೌರಿ, ‘‘ಪ್ರೊ.ಕಲಬುರ್ಗಿಯವರ ಹತ್ಯೆಯಾದಾಗ, ಮೋದಿ ಭಕ್ತರು ಮತ್ತು ಹಿಂದುತ್ವ ಬ್ರಿಗೇಡ್ ಹತ್ಯೆಗಳನ್ನು ಸ್ವಾಗತಿಸುತ್ತಾರೆ, ತಮ್ಮ ಸಿದ್ಧಾಂತವನ್ನು ವಿಮರ್ಶಿಸುವವರು ಸತ್ತಾಗ ಅವರ ಸಾವನ್ನು ಸಂಭ್ರಮದಿಂದ ಆಚರಿಸುತ್ತಾರೆ (ಉದಾ:ಅನಂತ ಮೂರ್ತಿ ಮರಣ) ನಾವು ಎಂಥ ಕಾಲದಲ್ಲಿ ಬದುಕುತ್ತಿದ್ದೇವೆ ನೋಡಿ’’ ಎಂದು ಪ್ರತಿಕ್ರಿಯಿಸಿದ್ದರು. ಈಗ ಪ್ರೊ. ಕಲಬುರ್ಗಿಯವರ ಎರಡನೆಯ ತಿಥಿ ನಂತರದ ಕೆಲವೇ ದಿನಗಳಲ್ಲಿ ಕಲಬುರ್ಗಿಯವರನ್ನು ಹತ್ಯೆಮಾಡಿದ ರೀತಿಯಲ್ಲೇ ಗೌರಿಯವರನ್ನು ಹತ್ಯೆಮಾಡಲಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಗೌರಿಯವರ ಹತ್ಯೆಯನ್ನು, ಸ್ವಾಗತಿಸುವ ಮಾತುಗಳಲ್ಲಿ, ನಿಂದೆಯ ಮಾತುಗಳಲ್ಲಿ ಆಚರಿಸಲಾಗುತ್ತಿದೆ. ವಿಕೃತ ಮನಸ್ಸುಗಳ ವಿಕಾರಗಳು ಹರಿದಾಡುತ್ತಿವೆ.

ಗೌರಿ ಲಂಕೇಶ್ ಇನ್ನಿಲ್ಲ. ಆದರೆ ಆಕೆಯ ನಿಧನಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಿದರೆ ನಮ್ಮ ಸಮಾಜ ಏಕಿಷ್ಟು ಬರ್ಬರವಾಗುತ್ತಿದೆ? ಏಕಿಷ್ಟು ಅನಾಗರಿಕವಾಗುತ್ತಿದೆ ಎಂದು ಗಾಬರಿಯಾಗುತ್ತದೆ. ನಮ್ಮ ಸಮಾಜದ ಮಾನಸಿಕ ಆರೋಗ್ಯ ಕೆಟ್ಟಿದೆಯೇ? ಇಂದು ಇದು ಕೇವಲ ಅನುಮಾನವಾಗಿ ಉಳಿದಿಲ್ಲ. ಕಾಡುವ ಕಟುವಾಸ್ತವವಾಗಿದೆ. ಒಂದು ಮನೆಯಲ್ಲಿ ಭಿನ್ನಮತಹೊಂದಿರುವ ಎಳೆಯರ ಹತ್ಯೆಯಾದಾಗ ನಾವು ಸಂಭ್ರಮಿಸುತ್ತೇವೆಯೇ? ಹಬ್ಬ ಆಚರಿಸುತ್ತೇವೆಯೇ? ಹೋಳಿಗೆ ಊಟದ ಮಾತಾಡುತ್ತೇವೆಯೇ? ಇದು ನಮ್ಮ ಸಂಸ್ಕೃತಿಯೇ? ಗೌರಿಯ ಹತ್ಯೆ ಒಬ್ಬರಿಗೆ ನಮ್ಮ ಮನೆಯಲ್ಲಿ ಹೋಳಿಗೆ ಒಬ್ಬಟ್ಟಿನ ಸಂಭ್ರಮದ ಸಂಗತಿಯಾದರೆ ಮತ್ತೊಬ್ಬರಿಗೆ ‘‘ಧರ್ಮಕ್ಕಾಗಿ ಜೀವಕೊಡಬೇಕು ಅಂತೇನಿಲ್ಲ. ರ್ಮದ ವಿರುದ್ಧ ಮಾತನಾಡುವವರ ಜೀವತೆಗೆದರೆ ಆಯ್ತು’’ಎನ್ನುವ ಸಮಾಧಾನದ ಸಂಗತಿಯಾಗಿ ತೋರುತ್ತದೆ. ಆರೋಗ್ಯವಂತ ಮನಸ್ಸುಗಳು ಪ್ರತಿಕ್ರಿಯಿಸುವ ಪರಿಯೇ ಇದು?

ಸಾಮಾಜಿಕ ಜಾಲ ತಾಣ ಯುವಮನಸ್ಸುಗಳ ಅಭಿವ್ಯಕ್ತಿಗೆ ದೊರೆತಿರುವ ನೂತನ ಮಾಧ್ಯಮವಾಗಿದೆ. ಈ ಮಾಧ್ಯಮವನ್ನು ದ್ವೇಷಾಸೂಯೆಗಳ ಅಭಿವ್ಯಕ್ತಿ ಮಾರ್ಗವಾಗಿ ಬಳಸಿಕೊಳ್ಳುವುದು ಸರಿಯೇ? ಯುವಮನಸ್ಸುಗಳನ್ನು ಈ ವಿಕೃತಿಗಳಿಗೆ ತಳ್ಳುತ್ತಿರುವ ಶಕ್ತಿಗಳು ಯಾರು?

ಯಾವುದೇ ಧರ್ಮ ತನ್ನ ಅಂತಃಸತ್ತ್ವದ ಬಲದಿಂದ ಬದುಕುತ್ತದೆಯೇ ವಿನ: ಬಾಹ್ಯ ಬಲಪ್ರಯೋಗದಿಂದಲ್ಲ. ಇದಕ್ಕೆ ನಮ್ಮ ಹಿಂದೂ ಧರ್ಮಕ್ಕಿಂತ ಮಿಗಿಲಾದ ಮತ್ತೊಂದು ಉತ್ತಮ ಉದಾಹರಣೆ ಇರಲಾರದು. ನಮ್ಮ ಆಚಾರ್ಯರು ಈ ಅಂತಃಸತ್ವದ ಬಲದಿಂದಲೇ ನಾಸ್ತಿಕವಾದಿಗಳು, ವಿಗ್ರಹ ಭಂಜಕರು, ಅನ್ಯಧರ್ಮಾಂಧರುಗಳನ್ನು ಗೆದ್ದರು. ಸತ್ಯನಿಷ್ಠೆ ಮತ್ತು ತರ್ಕಬಲಗಳಿಂದ ಗೆದ್ದರು. ಧರ್ಮ ತನ್ನ ಅಂತಃಸ್ಸತ್ತ್ವದಿಂದ ಉಳಿಯಿತು.ಸಹಸ್ರಾರು ವರ್ಷಗಳಿಂದ ‘ಸಹನಾವವತು ಸಹನೌಭುನಕ್ತು..’, ‘ವಸುಧೈವಕ ಕುಟುಂಬಕಂ’ನಂಥ ಮೌಲ್ಯಗಳ ಬಲದಿಂದ ಉಳಿದುಕೊಂಡು ಬಂದಿದೆ.

ಆದರೆ ಈಗ ತರ್ಕವಾಗ್ವಾದಗಳ ಬಲದಿಂದ ಗೆಲ್ಲಲಾಗದ ದುರ್ಬಲರು ಧರ್ಮದ ಹೆಸರಿನಲ್ಲಿ ಬಂದೂಕಿನ ಬಲಪ್ರಯೋಗದಿಂದ ಭಿನ್ನಮತವನ್ನು ಮಣಿಸುವ ವಾಮಮಾರ್ಗ ಹಿಡಿದಿರುವುದು ವಿಷಾದನೀಯವಲ್ಲವೇ? ನಮ್ಮ ದೇಶದ ಇಂದಿನ ಸ್ಥಿತಿ ಇದು. ಪ್ರಧಾನ ಮಂತ್ರಿಯವರಿಗೆ ಗೌರಿಯಂಥವರ ಹತ್ಯೆ ಒಂದು ಯಃಕಶ್ಚಿತ್ ಪ್ರಾಣಿಯ ನಿರ್ಗಮನವೆನಿಸಿರಬಹುದು. 1992ರಿಂದ ದೇಶದಲ್ಲಿ 40 ಪತ್ರಕರ್ತರ ಹತ್ಯೆಯಾಗಿದೆ. ಪತ್ರಿಕಾ ಸ್ವಾತಂತ್ರ್ಯದ ಸೂಚಿಯಾದ 192 ರಾಷ್ಟ್ರಗಳ ಯಾದಿಯಲ್ಲಿ ಭಾರತದ ಸ್ಥಾನ 136ಕ್ಕೆ ಕುಸಿದಿದೆ. ನೋಟು ಅಮಾನ್ಯೀಕರಣದ ನಂತರ ಎಟಿಎಂ ಸಾಲುಗಳಲ್ಲಿ ನಿಂತು 100ಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ. ಗೋರಕ್ಷಕ ಪಡೆಗಳ ಉತ್ಸಾಹಕ್ಕೆ ಸಿಲುಕಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರೈತರ ಆತ್ಮಹತ್ಯೆಗೆ ಕೊನೆಯಿಲ್ಲ. ನಿತ್ಯ ಸಾಯುವವರಿಗೆ ಅಳಲು ಪುರುಸೊತ್ತೆಲ್ಲಿದೆ. ಪ್ರಧಾನಿಗಷ್ಟೇ ಅಲ್ಲ ಬಿಜೆಪಿ ರಾಷ್ಟ್ರೀಯ ನಾಯಕರಿಗೂ ಹೀಗೇ ಅನ್ನಿಸಿದ್ದರೆ ಆಶ್ಚರ್ಯವೇನಿಲ್ಲ.

ಗೌರಿ ಲಂಕೇಶರ ಹತ್ಯೆಯ ಸುದ್ದಿ ತಿಳಿದ ಘಳಿಗೆಯಿಂದಲೇ ಕಾರಣ ಹುಡುಕುವ ಪ್ರಯತ್ನ ಪೊಲೀಸರಿಗೂ ಮೊದಲೇ ಸಾರ್ವಜನಿಕ ವಲಯಗಳಲ್ಲ ಶುರುವಾಗಿದೆ. ಗೌರಿ ಲಂಕೇಶರನ್ನು ಹತ್ಯೆಮಾಡಿದ್ದು ಯಾರು ಎಂಬುವುದಕ್ಕಿಂತ, ಅವರನ್ನು ಕೊಂದದ್ದು ಏಕೆ ಎಂಬುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಒಂದು ಕೊಲೆಯ ಸುತ್ತ ಹತ್ತಾರು ಸಾಧ್ಯತೆಗಳಿರುತ್ತವೆ. ಕೊಂದವರು ಯಾರು? ಕೊಲೆಯ ಸಂಚು ನಡೆಸಿದವರು ಯಾರು?ಅದನ್ನು ಪ್ರೋತ್ಸಾಹಿಸಿದವರು ಯಾರು? ತಮಗಿಷ್ಟವಿಲ್ಲದಿದ್ದರೂ ಅದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ? ಅದರ ಲಾಭ ಪಡೆದುಕೊಳ್ಳುವವರು ಯಾರು? ಇದರಲ್ಲಿ ಮೊದಲೆರಡು ಪ್ರಶ್ನೆಗಳಿಗೆ ಪೊಲೀಸರ ತನಿಖೆಯಿಂದ ಉತ್ತರ ದೊರೆಯಬೇಕಾಗಿದೆ. ಉಳಿದ ಪ್ರಶೆಗಳಿಗೆ ಉತ್ತರ ಹುಡುಕುವ ಹೊಣೆ ನಮ್ಮೆಲ್ಲರ ಮೇಲಿದೆ. ಈಗಾಗಲೇ ಇಂಥ ಪ್ರಯತ್ನಗಳು ನಡೆದಿವೆ. ಗೌರಿಗೆ ಶತ್ರುಗಳು ಯಾರೂ ಇರಲಿಲ್ಲ ಎಂದು ಅವರ ಕುಟುಂಬದವರೇ ಹೇಳಿದ್ದಾರೆ.

ಅವರಿಗೆ ಹಣಕಾಸಿನ ಮುಗ್ಗಟ್ಟಿದ್ದಿರಬಹುದಾರೂ ಭೂಮಿಕಾಣಿ ಲೇವಾದೇವಿ ಸೇರಿದಂತೆ ಹಣಕಾಸಿನ ವ್ಯಾಜ್ಯಗಳೇನೂ ಇರಲಿಲ್ಲ. ಪ್ರತಿಯಾಗಿ ಗೌರಿಯ ಬಗ್ಗೆ ಕೇಳಿಬರುತ್ತಿರುವ ಮುಖ್ಯ ‘ದೂರೆಂದರೆ’ ಅವರು ಹಿಂದುತ್ವ ರಾಜಕಾರಣದ ವಿರೋಧಿಯಾಗಿದ್ದರು ಎಂಬುದು. ಅಷ್ಟೇ ಅಲ್ಲ, ಗೌರಿ ಪ್ರಗತಿಪರರಾಗಿದ್ದರು. ಎಡಪಂಥೀಯ ಸಿದ್ಧಾಂತದ ಪ್ರತಿಪಾದಕಿಯಾಗಿದ್ದರು.ಇವೆಲ್ಲದರಿಂದ ದೊರೆಯುವ ಸುಳಿವೆಂದರೆ, ಗೌರಿಯವರ ಹತ್ಯೆ ಸೈದ್ಧಾಂತಿಕ ದ್ವೇಷದಿಂದ ಆಗಿರಬಹುದು ಎಂದಾಗ ಅರೋಪದ ಬೆರೆಳು ಎಡ-ಬಲ ಎರಡೂ ಸಿದ್ಧಾಂತಗಳತ್ತ ಚಾಚಿಕೊಳ್ಳುತ್ತದೆ. ಹಿಂಸಾಮಾರ್ಗ ತೊರೆಯುವಂತೆ ಮನ ಒಲಿಸಿ ನಕ್ಸಲೀಯರನ್ನು ಮುಖ್ಯವಾಹಿನಿಗೆ ತರುವ ಉತ್ಸಾಹದಲ್ಲಿ ಸುಧಾರಣಾವಾದಿ ಗೌರಿಯವರು ಮಾವೋವಾದಿ ನಕ್ಸಲೀಯ ಚಳವಳಿಯನ್ನು ಭಗ್ನಗೊಳಿಸುತ್ತಿದ್ದರೆಂಬದು ಒಂದು ಅಭಿಪ್ರಾಯ.

ಆದರೆ ಎಡಪಂಥೀಯರು ಇದನ್ನು ಅಲ್ಲಗಳಿದಿದ್ದಾರೆ. ಗೌರಿಯವರ ಬಗ್ಗೆ ತಮಗೆ ಇಂಥ ದ್ವೇಷ ಇಲ್ಲವೆಂದು ಹೇಳಿಕೆ ನೀಡಿದ್ದಾರೆ. ಇನ್ನು ಬಿಜೆಪಿ ಶಾಸಕರೊಬ್ಬರು ಆಡಿರುವ ಮಾತುಗಳು ಬಲಪಂಥೀಯರಿಂದ ಹತ್ಯೆ ನಡೆದಿರಬಹುದು ಎಂಬ ಊಹೆಯನ್ನು ಪುಷ್ಟೀಕರಿಸುತ್ತವೆ. ಇದೂ ಸತ್ಯವಲ್ಲದಿರಬಹುದು. ಆದರೆ ಇದು ಸಂಘಪರಿವಾರದ ಸುಪ್ತ ಮನಸ್ಸಿನೊಳಗಣ ಬಯಕೆಯ ಸ್ಪಷ್ಟ ಸುಳಿವನ್ನು ನೀಡುತ್ತದೆ. ಇಂಥ ಕೊಲೆಗಳ ಪೊಲೀಸ್ ತನಿಖೆ ಕಾಂಗ್ರೆಸ್ ಆಡಳಿತದಲ್ಲಾಗಲೀ ಬಿಜೆಪಿ ಆಡಳಿತದಲ್ಲಾಗಲೀ ಕಾಟಾಚಾರದ ತನಿಖೆಗಳಾಗಿರುತ್ತವೆ. ವರ್ಷಗಳು ಕಳೆದರೂ ಅಪರಾಧಿಗಳ ಪತ್ತ್ತೆಯಾಗುವುದಿಲ್ಲ. ಈ ಮಾತಿಗೆ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ. ಕಲಬುರ್ಗಿಯವರ ಹತ್ಯೆಗಳ ತನಿಖೆಗಳ ಉದಾಹರಣೆ ನಮ್ಮ ಮುಂದಿದೆ.

ಈ ಎಲ್ಲ ಪ್ರಕರಣಗಳಲ್ಲೂ ಗುರುತುಪತ್ತೆ ಇಲ್ಲದ ಹಂತಕರು ಸಂಘಪರಿವಾರಕ್ಕೆ ಪ್ರತಿಕೂಲವಾದ ಸಿದ್ಧಾಂತಗಳಲ್ಲಿ ಒಲವಿದ್ದ ಬುದ್ಧಿಜೀವಗಳನ್ನು ಕೊಂದಿದ್ದಾರೆ. ಈ ಹತ್ಯೆಗಳು ರಾಜಕೀಯ ಸೇಡಿಗಾಗಿ, ರಾಜಕೀಯವಾಗಿ ಮುಗಿಸಲು ಮಾಡಿರುವ ಕೊಲೆಗಳಲ್ಲ ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ತಾವು ಒಪ್ಪದ ಪ್ರತಿಸಿದ್ಧಾಂತವೊಂದರ ಸೊಲ್ಲಡಗಿಸುವ ಹೀನಕೃತ್ಯ ಈ ಕೊಲೆಗಳು. ಈ ಮೂವರೂ ನಮ್ಮ ಸಂವಿಧಾನದಲ್ಲಿ ನಮೂದಿಸಿರುವ ವೈಜ್ಞಾನಿಕ ಮನೋಭಾವ ಬೆಳೆಸುವ ಕಾರ್ಯದಲ್ಲಿ ಮಗ್ನರಾಗಿದ್ದವರು ಎಂಬುದನ್ನೂ ನಾವು ಮರೆಯುವಂತಿಲ್ಲ. ನಮ್ಮ ಸಂವಿಧಾನವನ್ನು ವಿರೋಧಿಸುವ ಸಿದ್ಧಾಂತದಿಂದಲೇ ಇವರ ಹತ್ಯೆಯಾಗಿದೆ ಎನ್ನುವ ತೀರ್ಮಾನದಲ್ಲಿ ಹುರುಳಿಲ್ಲದೇ ಇಲ್ಲ. ಗೌರಿಯವರ ಹತ್ಯೆಯೂ ಇದೇ ರೀತಿಯದ್ದಾಗಿದೆ. ನಮ್ಮ ಕಾಲದ ಆಡಳಿತಾರೂಢ ಪಕ್ಷದ ಸಿದ್ಧಾಂತದಿಂದ ಗೌರಿಯವರ ಹತ್ಯೆಯಾಗಿದೆ ಎನ್ನುವ ಮಾತು ಜೋರಾಗೇ ಕೇಳಿಬರುತ್ತಿದೆ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)