varthabharthi

ಪ್ರಚಲಿತ

ಇಂಥ ಗೌರಿ ಇನ್ನೆಲ್ಲಿ ಸಿಗುತ್ತಾರೆ...

ವಾರ್ತಾ ಭಾರತಿ : 11 Sep, 2017
ಸನತ್ ಕುಮಾರ್ ಬೆಳಗಲಿ

ಕರ್ನಾಟಕ ಮಾತ್ರವಲ್ಲ ದೇಶದ ಚರಿತ್ರೆಯಲ್ಲಿ ಗೌರಿಗೆ ಹೋಲಿಕೆ ಮಾಡಲು ಹುಡುಕುತ್ತ ಹೊರಟರೆ ಕೆಲವೇ ಕೆಲವರು ಸಿಗುತ್ತಾರೆ. ಅಕ್ಕಮಹಾದೇವಿಯ ವೈರಾಗ್ಯ, ಒನಕೆ ಓಬವ್ವನ ಛಲ, ಕಿತ್ತೂರು ಚೆನ್ನಮ್ಮನ ರಾಜಿರಹಿತ ಗುಣ, ಇಂದಿರಾ ಗಾಂಧಿಯ ದಿಟ್ಟತನ, ಗಾರ್ಕಿ ತಾಯಿ ಕಾದಂಬರಿಯ ತಾಯ್ತನ, ಸಾವಿಗೂ ಹೆದರದ ಚಿತ್ತಗಾಂಗ ಕ್ರಾಂತಿಯ ಪ್ರೀತಿ ಲತಾ ವಾಡ್ಡೇದಾರಳ ಶೂರತನ, ಸಾವಿತ್ರಿಬಾಯಿ ಫುಲೆಯ ಅಕ್ಷರಸೇವೆ ಹೀಗೆ ಎಲ್ಲವೂ ಸೇರಿ ನಮ್ಮ ಗೌರಿಯಂಥ ವ್ಯಕ್ತಿತ್ವ ರೂಪುಗೊಂಡಿದೆ.


ಗೌರಿ ಲಂಕೇಶ್ ನಮ್ಮನ್ನಗಲಿ ನಾಳೆ ಮಂಗಳವಾರಕ್ಕೆ ಒಂದು ವಾರ. ನಮ್ಮೆಲ್ಲರಿಂದ ಅವರು ದೂರವಾಗಿದ್ದಾರೆ. ಆದರೆ ಅವರು ನಮ್ಮಲ್ಲಿಯೇ ಆವರಿಸಿಕೊಂಡಿದ್ದಾರೆ ಮತ್ತು ಒಂದಿಲ್ಲೊಂದು ಸ್ವರೂಪದಲ್ಲಿ ಸಂವಾದ ನಡೆಸಿದ್ದಾರೆ ಎಂಬ ಭಾವ ಈಗಲೂ ಇದೆ. ಕಾರಣ, ಹಲವರಿಗೆ ತಾಯಿ, ಸಹೋದರಿ, ಹೋರಾಟ ಗಾರ್ತಿ, ವಿಚಾರವಾದಿ, ಪತ್ರಕರ್ತೆ, ಧೈರ್ಯವಂತೆಯಾಗಿ ಗೌರಿ ಆಪ್ತವಾಗಿದ್ದರು.

ನಿರಾಸೆಯ ಕಾರ್ಮೋಡಗಳನ್ನು ಪಕ್ಕಕ್ಕೆ ಸರಿಸಿ ಆಶಾಭಾವ ಮೂಡಿಸುವ ಚೆಲುಮೆ ಆಗಿದ್ದರು. ವೈಯಕ್ತಿಕವಾಗಿ ಹಲವು ಸಮಸ್ಯೆ, ಸವಾಲು ಮತ್ತು ಸಂಕಷ್ಟಗಳಿದ್ದರೂ ಅದ್ಯಾವುದನ್ನೂ ತೋರಗೊಡದೇ, ಸಮಾಜದ ನೋವಿಗೆ ಸ್ಪಂದಿಸಿದರು. ಅಪಾಯದಲ್ಲಿರುವ ಮಾನವೀಯತೆ ಉಳಿಸಿಕೊಳ್ಳಲು ಹೆಣಗಿದರು. ದೇಶವನ್ನು ಫ್ಯಾಶಿಸ್ಟ್ ಹಿಡಿತದಿಂದ ಮುಕ್ತಗೊಳಿಸಲು ಪ್ರಯತ್ನಿಸಿದರು. ಅದಕ್ಕಾಗಿ ದೇಶದ ಉದ್ದಗಲಕ್ಕೂ ಸಂಚರಿಸಿದರು. ಪತ್ರಿಕೆ ಮುಖಾಂತರ ಹಲವರನ್ನು ಜಾಗೃತಗೊಳಿಸಿದ ಮತ್ತು ಕೋಮುವಾದ ಮುಖವಾಡ ಬಯಲುಗೊಳಿಸಿದ ಅವರು ವಿರಮಿಸಲು ಬಯಸಲಿಲ್ಲ. ಆದರೆ ಇದನ್ನು ಸಹಿಸದ ಜೀವವಿರೋಧಿಗಳು ಅವರ ಬಲಿ ಪಡೆದರು.

ಕಳೆದ ಮಂಗಳವಾರ ರಾತ್ರಿ ಟಿವಿಯಲ್ಲಿ ಗೌರಿ ಲಂಕೇಶ್ ಹತ್ಯೆ ಎಂಬ ಸ್ಕ್ರಾಲಿಂಗ್ ಬರುತ್ತಿದ್ದಂತೆಯೇ ತಕ್ಷಣವೇ ನಂಬಲು ಆಗಲಿಲ್ಲ. ಯಾವ ಚಾನೆಲ್ ತಿರುಗಿಸಿದರೂ ಅದೇ ಸುದ್ದಿ. ತುಂಬಾ ಹೊತ್ತಿನವರೆಗೆ ದಿಕ್ಕೇ ತೋಚದಂತಾಯಿತು. ಟಿವಿಯಲ್ಲಿ ವರದಿಗಾರರು ಹತ್ಯೆ ಖಚಿತಪಡಿಸುತ್ತಿದ್ದರೂ ನಂಬುವ ಸ್ಥಿತಿಯಲ್ಲಿ ನಾನಿರಲಿಲ್ಲ. ಕ್ರಮೇಣ ದೂರವಾಣಿ ಕರೆ ಮತ್ತು ಆಪ್ತರ ಮೂಲಕ ಆ ಸುದ್ದಿ ದೃಢಪಟ್ಟಿತು.

ಆದರೆ ಆ ಕರಾಳ ರಾತ್ರಿ ಉಂಟು ಮಾಡಿದ ಆಘಾತ, ಕೊಟ್ಟ ನೋವು ಅಷ್ಟಿಷ್ಟಲ್ಲ. ಕ್ರೌರ್ಯ ಎಂಬುದು ಈ ಮಟ್ಟದ ಹೀನ ಕೃತ್ಯಕ್ಕೆ ಇಳಿಯಿತೇ ಎಂಬ ಬೇಸರ ಒಂದೆಡೆಯಿದ್ದರೆ, ಯಾರಿಗೂ ಕೇಡು ಬಯಸದ ಗೌರಿಯವರ ಜೀವ ಪಡೆವ ಹೃದಯಹೀನ ಜನರಿದ್ದಾರೆಯೇ ಎಂದು ಗಾಬರಿಯಾಯಿತು. ಮನುಷ್ಯತ್ವ ಎಂಬುದು ಅರ್ಥ ಕಳೆದುಕೊಂಡಿತೇ ಎಂಬ ಪ್ರಶ್ನೆ ಕಾಡತೊಡಗಿತು.

ಗೌರಿಯವರೊಂದಿಗೆ ವಿವಿಧ ಚಳವಳಿ, ಹೋರಾಟ ಮತ್ತು ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು ನೆನಪಾದವು. ಕೋಮು ಸೌಹಾರ್ದ ವೇದಿಕೆ, ಕೋಮುವಾದ ವಿರೋಧಿ ಹೋರಾಟ, ಬಾಬಾ ಬುಡಾನಗಿರಿ ಚಳವಳಿ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಮಾವೇಶ ಒಂದೆರಡಲ್ಲ. ಪ್ರತೀ ಕಾರ್ಯಕ್ರಮ ಅಥವಾ ಸಮಾವೇಶದಲ್ಲಿ ಗೌರಿಯವರಿಂದ ವ್ಯಕ್ತವಾಗುತ್ತಿದ್ದ ಪ್ರಮುಖ ಕಳಕಳಿ: ಕೋಮು ಸೌಹಾರ್ದ ಮತ್ತು ಸಹಬಾಳ್ವೆ. ರಾಜ್ಯವಲ್ಲದೇ ಎಲ್ಲೆಡೆ ವ್ಯಾಪಿಸುತ್ತಿರುವ ಕೋಮುವಾದವನ್ನು ಆರಂಭಿಕ ಹಂತದಲ್ಲೇ ತಡೆಗಟ್ಟದಿದ್ದರೆ, ಇಡೀ ದೇಶವನ್ನೇ ನುಂಗಿ ಹಾಕೀತು ಎಂಬ ಭೀತಿ ಮತ್ತು ಆತಂಕ ಅವರಲ್ಲಿತ್ತು. ಅದಕ್ಕಾಗಿ ತಮ್ಮ ವೈಯಕ್ತಿಕ ಜೀವನ ಮತ್ತು ಆರೋಗ್ಯದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸೌಹಾರ್ದ ಚಳವಳಿಯಲ್ಲಿ ಅವರು ತೊಡಗಿಸಿಕೊಂಡಿದ್ದರು.

ತಾವು ನಂಬಿದ ತತ್ವ, ಸಿದ್ಧಾಂತ ಮತ್ತು ವಿಚಾರಗಳಿಗೆ ಬದ್ಧರಾಗಿದ್ದ ಗೌರಿ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಖ್ಯಾತ ಪತ್ರಕರ್ತೆ ಎಂಬ ಹಮ್ಮುಬಿಮ್ಮು ಇಲ್ಲದೇ ಎಲ್ಲರೊಂದಿಗೆ ಬೆರೆಯುತ್ತಿದ್ದ ಅವರು ಎಲ್ಲರನ್ನೂ ಸಮಾನ ಮನಸ್ಕರನ್ನಾಗಿ ಕಾಣುತ್ತಿದ್ದರು. ತಮ್ಮ ಕೆಲಸವನ್ನು ಇನ್ನೊಬ್ಬರಿಗೆ ವಹಿಸದೇ ತಾವೇ ಮಾಡುವುದರಲ್ಲಿ ಖುಷಿಪಡುತ್ತಿದ್ದ ಅವರು ಹಲವು ಸಂದರ್ಭಗಳಲ್ಲಿ ಕಿರಿಯರಿಗೆ ಅಲ್ಲದೇ ಹಿರಿಯರಿಗೂ ಮಾದರಿಯಾದರು. ಹೋರಾಟ, ಚಳವಳಿ ಹೊರತುಪಡಿಸಿದರೆ ಬಹುತೇಕ ಸಮಯದಲ್ಲಿ ಗಾಂಧಿ ಬಝಾರ್‌ನ ತಮ್ಮ ಪತ್ರಿಕೆಯ ಕಚೇರಿಯಲ್ಲಿ ಸಿಗುತ್ತಿದ್ದ ಅವರನ್ನು ಭೇಟಿಯಾಗಲು ಹೋರಾಟಗಾರರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಬರುತ್ತಿದ್ದರು. ಕಾರ್ಯ ಒತ್ತಡದ ಮಧ್ಯೆಯೂ ಅವರು ಸ್ವಲ್ಪವೂ ಬೇಸರಪಟ್ಟುಕೊಳ್ಳದೇ ಖುಷಿಯಿಂದ ಮಾತನಾಡುತ್ತಿದ್ದರು.

ಹತ್ಯೆಗೆ ಸಂಬಂಧಿಸಿದಂತೆ ಮಹತ್ವದ ಸುಳಿವು ಸಿಕ್ಕಿದೆಯೆಂದು ಸರಕಾರ ಹೇಳುತ್ತಿದ್ದರೂ ಕೆಲ ಮಾಧ್ಯಮದವರು ತನಿಖೆ ಹಾದಿಯನ್ನೇ ತಪ್ಪಿಸುವ ವ್ಯವಸ್ಥಿತ ಪ್ರಯತ್ನ ನಡೆಸಿದ್ದಾರೆ. ಮೂಲಭೂತವಾದಿ, ಕೋಮುವಾದಿ ಮತ್ತು ಜೀವವಿರೋಧಿ ಶಕ್ತಿಗಳಿಂದ ಈ ಕೃತ್ಯ ನಡೆದಿದ್ದರೂ ಇದನ್ನು ನಕ್ಸಲರ ತಲೆಗೆ ಕಟ್ಟಲು ಯತ್ನಿಸುತ್ತಿದ್ದಾರೆ. ಗೌರಿಯವರು ಕೋಮುವಾದಿಗಳ ಮುಖವಾಡ ಬಯಲುಗೊಳಿಸಿದ್ದು ಅಲ್ಲದೇ ಕೋಮುವಾದದ ವಿರುದ್ಧ ದಿಟ್ಟ ಹೋರಾಟ ಕೈಗೊಂಡವರು. ಪತ್ರಿಕೆಯ ಪ್ರತಿಯೊಂದು ಸಂಚಿಕೆಯಲ್ಲೂ ಕೋಮುವಾದದ ಕುರಿತ ಬರಹ, ಅಂಕಣಗಳನ್ನು ಪ್ರಕಟಿಸಿದರು. ಅದಕ್ಕಾಗಿ ಜೀವ ಬೆದರಿಕೆ ಎದುರಿಸಿದ್ದು ಅಲ್ಲದೇ ಕೋರ್ಟ್ ಗಳಿಗೂ ಅಲೆದಾಡಬೇಕಾಯಿತು. ಆದರೆ ನಕ್ಸಲರ ವಿಷಯದಲ್ಲಿ ಅವರಿಗೆ ಯಾವತ್ತೂ ಅಂತಹ ಆಕ್ಷೇಪ ವ್ಯಕ್ತವಾಗಲಿಲ್ಲ. ಹೋರಾಟದಲ್ಲಿ ತೊಡಗಿಕೊಂಡಿದ್ದ ಪ್ರಮುಖರನ್ನು ಮುಖ್ಯವಾಹಿನಿಗೆ ಕರೆ ತಂದು ಸರಕಾರದ ಎದುರು ಶರಣಾಗತಿ ಮಾಡಿಸಿದಾಗಲೂ ವಿರೋಧ ಇರಲಿಲ್ಲ. ಜೀವ ಬೆದರಿಕೆಯನ್ನು ಯಾರೂ ಒಡ್ಡಲಿಲ್ಲ. ಆದರೆ ಈಗ ಒಮ್ಮಿಂದೊಮ್ಮೆಲೇ ಮಾಧ್ಯಮದಲ್ಲಿ ನಕ್ಸಲರನ್ನು ಹತ್ಯೆ ಆರೋಪಿಗಳನ್ನಾಗಿಸುವ ವ್ಯವಸ್ಥಿತ ಸಂಚು ನಡೆದಿದೆ.

ಧಾರವಾಡದಲ್ಲಿ ಸಂಶೋಧಕ ಪ್ರೊ. ಎಂ.ಎಂ.ಕಲಬುರ್ಗಿಯವರ ಹತ್ಯೆ ನಡೆದಾಗಲೂ ಅದರ ತನಿಖೆಯ ದಿಕ್ಕನ್ನು ತಪ್ಪಿಸಲು ಬೇರೆ ಬೇರೆ ರೀತಿಯ ಕತೆಗಳನ್ನು ಕಟ್ಟಲಾಯಿತು. ಆಸ್ತಿ ವಿವಾದ ಮತ್ತು ಅಂತಹ ಯಾವುದೇ ಕಲಹಗಳು ಇರಲಿಲ್ಲ ಎಂದು ಸ್ವತಃ ಅವರ ಕುಟುಂಬ ಸದಸ್ಯರೇ ಪದೇಪದೇ ಹೇಳಿದರೂ ಮಾಧ್ಯಮಗಳು ಸೇರಿದಂತೆ ಕೆಲವರು ಆಸ್ತಿ ವಿವಾದ ಮತ್ತು ವೈಯಕ್ತಿಕ ಕಾರಣವೆಂದು ಹುಯಿಲೆಬ್ಬಿಸಿದರು.

ಮಹಾರಾಷ್ಟ್ರದಲ್ಲಿ ವಿಚಾರವಾದಿ ಪನ್ಸಾರೆಯವರ ಹತ್ಯೆ ನಡೆದಾಗಲೂ ಟೋಲ್ ಮಾಫಿಯಾದವರ ದುಷ್ಕೃತ್ಯವೆಂದು ಬಣ್ಣಿಸಲು ಯತ್ನಿಸಿದರು. ಆದರೆ ದುರಂತವೆಂದರೆ, ದಾಭೋಲ್ಕ್ಕರ್ ಸೇರಿದಂತೆ ನಾಲ್ವರು ವಿಚಾರವಾದಿಗಳು ಹತರಾದರೂ ಇದುವರೆಗೆ ಆರೋಪಿಗಳ ಬಂಧನವಾಗಿಲ್ಲ. ಇದು ಮೂಲಭೂತವಾದಿ ಮತ್ತು ಕೋಮುವಾದಿಗಳ ದುಷ್ಕೃತ್ಯವೆಂದು ತನಿಖೆಯಲ್ಲಿ ಸುಳಿವು ಸಿಕ್ಕರೂ ತಪ್ಪಿತಸ್ಥ ಸಂಘಟನೆ ಮತ್ತು ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿಲ್ಲ. ಆಪ್ತ ಸದಸ್ಯರು ಅಷ್ಟೇ ಅಲ್ಲ ಕೊಂಚ ಪರಿಚಿತವುಳ್ಳವರು, ಶತ್ರುಗಳು ಸಾವನ್ನಪ್ಪಿದಾಗ ಅಥವಾ ದುರಂತದಲ್ಲಿ ಅಮಾಯಕರು ಜೀವ ಕಳೆದುಕೊಂಡಾಗ, ಮನಸ್ಸು ಬೇಸರಗೊಳ್ಳುತ್ತದೆ. ಆದರೆ ಗೌರಿಯವರ ಸಾವಿನ ಸುದ್ದಿ ಕೇಳಿ ಕೆಲವರು ಸಂಭ್ರಮಿಸಿದ್ದು ನಿಜಕ್ಕೂ ವಿಕೃತದ ಪರಮಾವಧಿ.

ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅವಹೇಳನಕಾರಿಯಾಗಿ ಕಾಮೆಂಟು, ಸ್ಟೇಟಸ್‌ಗಳನ್ನು ಹಾಕಿದ್ದು ಅಲ್ಲದೇ ವಿಕಾರವಾಗಿ ಸಂತಸಪಟ್ಟಿದ್ದು ಅತ್ಯಂತ ಹೀನವಾದದ್ದು. ಅಂಥವರು ಮನುಷ್ಯತ್ವ ಮತ್ತು ಜೀವವಿರೋಧಿಗಳು ಅಲ್ಲದೇ ಮತ್ತೇನೂ ಅಲ್ಲ. 1948ರಲ್ಲಿ ಮಹಾತ್ಮಾ ಗಾಂಧಿ ಹತ್ಯೆಯಾದಾಲೂ ಕೆಲವರು ಸಿಹಿ ಹಂಚಿ ಸಂಭ್ರಮಿಸಿದ್ದರು. ಆಗಲೂ ಆ ಹತ್ಯೆಯನ್ನು ಮುಸ್ಲಿಮರ ತಲೆಗೆ ಕಟ್ಟಲು ವದಂತಿ ಹಬ್ಬಿಸಲಾಗಿತ್ತು. ಆಗ ಪ್ರಧಾನಿ ನೆಹರೂ ದಿಲ್ಲಿ ಆಕಾಶವಾಣಿ ಕೇಂದ್ರಕ್ಕೆ ಬಂದು ರಾಷ್ಟ್ರವನ್ನು ಉದ್ದೇಶಿಸಿ ಗಾಂಧಿ ಹಂತಕ ಮುಸ್ಲಿಮ್ ಅಲ್ಲ, ಗೋಡ್ಸೆ ಎಂದು ಹೇಳಬೇಕಾಯಿತು.

ಕರ್ನಾಟಕ ಮಾತ್ರವಲ್ಲ ದೇಶದ ಚರಿತ್ರೆಯಲ್ಲಿ ಗೌರಿಗೆ ಹೋಲಿಕೆ ಮಾಡಲು ಹುಡುಕುತ್ತ ಹೊರಟರೆ ಕೆಲವೇ ಕೆಲವರು ಸಿಗುತ್ತಾರೆ. ಅಕ್ಕಮಹಾದೇವಿಯ ವೈರಾಗ್ಯ, ಒನಕೆ ಓಬವ್ವನ ಛಲ, ಕಿತ್ತೂರು ಚೆನ್ನಮ್ಮನ ರಾಜಿರಹಿತ ಗುಣ, ಇಂದಿರಾ ಗಾಂಧಿಯ ದಿಟ್ಟತನ, ಗಾರ್ಕಿ ತಾಯಿ ಕಾದಂಬರಿಯ ತಾಯ್ತನ, ಸಾವಿಗೂ ಹೆದರದ ಚಿತ್ತಗಾಂಗ ಕ್ರಾಂತಿಯ ಪ್ರೀತಿ ಲತಾ ವಾಡ್ಡೇದಾರಳ ಶೂರತನ, ಸಾವಿತ್ರಿಬಾಯಿ ಫುಲೆಯ ಅಕ್ಷರಸೇವೆ ಹೀಗೆ ಎಲ್ಲವೂ ಸೇರಿ ನಮ್ಮ ಗೌರಿಯಂಥ ವ್ಯಕ್ತಿತ್ವ ರೂಪುಗೊಂಡಿದೆ.

ಹೆಸರಾಂತ ಪತ್ರಿಕರ್ತೆಯಾದರೂ ನಮ್ಮ ಗೌರಿ ಯಾರಿಗೂ ಕೈಯೊಡ್ಡಲಿಲ್ಲ. ಆಕೆಯ ಹೆಸರು ಹೋರಾಟದ ಕರಪತ್ರದಲ್ಲಿ ಇರುತಿತ್ತೇ ಹೊರತು ಗಣಿ ಖದೀಮರ ಸೀಕ್ರೆಟ್ ಡೈರಿಯಲ್ಲಿ ಅಲ್ಲ. ಗೌರಿಯವರನ್ನು ನಾವೇಕೆ ಗೌರವಿಸಬೇಕೆಂದರೆ, ಅವರು ಸಿದ್ದರಾಮಯ್ಯ ಸರಕಾರಕ್ಕೆ ತಾತ್ವಿಕ ಕಾರಣಕ್ಕಾಗಿ ಬೆಂಬಲಿಸಿದರೂ ಅವರಿಂದ ಸ್ವಂತಕ್ಕೆ ಯಾವ ನೆರವನ್ನೂ ಬಯಸಲಿಲ್ಲ. ಇತರರಂತೆ ಗಣಿ ಮಾಫಿಯಾದ ಅಮೇದ್ಯಕ್ಕೆ ನಾಲಿಗೆ ಚಾಚಲಿಲ್ಲ. ಘನತೆಯಿಂದ ಬದುಕಿ ಚರಿತ್ರೆಯ ಪುಟದಲ್ಲಿ ಅಕ್ಕಮಹಾದೇವಿ, ಒನಕೆ ಓಬವ್ವ, ಕಿತ್ತೂರು ಚೆನ್ನಮ್ಮನಂಥವರ ಸಾಲಿಗೆ ಸೇರಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)