varthabharthi

ಅನುಗಾಲ

ಹೊಸ ಹಗಲ ನಿರೀಕ್ಷಿಸೋಣ

ವಾರ್ತಾ ಭಾರತಿ : 14 Sep, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಇರುಳು ಕಳೆದು ಬೆಳಗಾಗುತ್ತದೆ. ದೀರ್ಘವಾದ ರಾತ್ರಿಯ ಅನಂತರವೂ ಬೆಳಗಿದೆ, ಬೆಳಕಿದೆ ಎಂಬ ಉಕ್ತಿಯಿದೆ. ಅದು ಮನುಷ್ಯನ ಐತಿಹಾಸಿಕ ಚಿರಜೀವನವನ್ನು ಹೇಳುತ್ತದೆ. ಸತ್ತ ಮಾತ್ರಕ್ಕೆ ಎಲ್ಲವೂ ಅಳಿಯುವುದಿಲ್ಲವೆಂಬುದು ನಮ್ಮ ಸಂಸ್ಕೃತಿಯ ಭಾಗವಾಗಿ ಉಳಿದಿದೆ. ಜಂಗಮಕ್ಕಳಿವಿಲ್ಲ. ಸದಾ ಕ್ರಿಯಾಶೀಲವಾದ ಬದುಕಿಗೂ ಅಳಿವಿಲ್ಲ. ದೇಹ, ಆಕಾರ, ಚಿತ್ರ, ಮರೆಯಾದರೂ ಅಂತಹ ಬದುಕು ಎಲ್ಲರ ಮನಸ್ಸುಗಳಲ್ಲಿ ಹುತ್ತಗಟ್ಟಿರುತ್ತದೆ.


ಗೌರಿ ಲಂಕೇಶ್ ಗತಿಸಿದರು. ನಿರ್ದಯಿಗಳ ಗುಂಡಿಗೆ ತನ್ನ ಗುಂಡಿಗೆಯನ್ನು ತೆರೆದು ಕೊಟ್ಟರು. ಕನ್ನಡ ಪತ್ರಿಕೋದ್ಯಮದ ಮಾತ್ರವಲ್ಲ, ಚಳವಳಿಗಳ ಒಂದು ಅಧ್ಯಾಯವೇ ಮುಗಿದುಹೋಯಿತೇನೋ ಎಂಬಂತೆ ಅಗಲಿದರು. ಪರ-ವಿರೋಧ ನಿಲುವುಗಳ ನಡುವೆಯೂ ಹೃದಯ ವನ್ನು ಹೊಂದಿದ ಎಲ್ಲರನ್ನೂ ಕಲಕಿ ಹೋದರು. ದಾಭೋಲ್ಕರ್, ಪನ್ಸಾರೆ, ಕಲಬುರ್ಗಿಯಂತಹ ಧೀಮಂತರ ಸಾವಿನಂತೆಯೇ ಇದೂ ನಿಗೂಢವಾಗಿ ಇತಿಹಾಸದಲ್ಲಿ ಹುಗಿದು ಹೋದರೂ ಒಂದು ವೈಚಾರಿಕ ದಾಖಲೆಯಾಗಿ ಮತ್ತು ಅನೇಕರಿಗೆ ಸ್ಪೂರ್ತಿಯ ಸೆಲೆಯಾಗಿ ಉಳಿಯುವುದರಲ್ಲಿ ಸಂದೇಹವಿಲ್ಲ. ಒಬ್ಬ ವ್ಯಕ್ತಿಯ ಸಾವು ಆ ವ್ಯಕ್ತಿಯ ಸಾವು ಮಾತ್ರ ಎನ್ನಿಸಿಕೊಳ್ಳಬೇಕಾದರೆ ಸಮಾಜಕ್ಕೆ ಆತನ ಕಾಣಿಕೆ ಏನೂ ಇರಬಾರದು. ಆಗ ಆತನಿಗೋಸ್ಕರ ಅಳುವುದಕ್ಕೆ ಆತನ ಕುಟುಂಬ ಮತ್ತು ಬಂಧುವರ್ಗ ಮಾತ್ರವಿರುತ್ತದೆ. ಆಪ್ತರನ್ನು ಕಳೆದುಕೊಂಡಾಗ ದುಃಖಿಸುವುದು ಸಹಜ. ದಿನಾ ಎಲ್ಲೋ ಯಾರೋ ಸಾಯುತ್ತಿರುತ್ತಾರೆ. ಅವರ ಕುಟುಂಬ ವರ್ಗ ಕಣ್ಣೀರು ಸುರಿಸುತ್ತದೆ. ಮರೆಯದಿದ್ದರೂ ಮರೆತಂತೆ ನಟಿಸಲೇಬೇಕಾಗುತ್ತದೆ.

ಏಕೆಂದರೆ ಬದುಕು ನಡೆಯಬೇಕಲ್ಲ! ಸಾವಿನ ಮನೆಗಳಲ್ಲೂ ದಿನಚರಿ ಸ್ವಲ್ಪಕುಂಟುತ್ತ, ಸ್ವಲ್ಪಎಡವುತ್ತ ಹಾಗೂ ಹೀಗೂ ನಡೆಯುತ್ತದೆ. ಶ್ರೀಮಂತರಿಗಾದರೋ ದುಃಖಿಸುವುದಕ್ಕೆ ಹೆಚ್ಚು ಅವಕಾಶವಿದೆ. ಏಕೆಂದರೆ ಅವರಿಗೆ ಒಂದಷ್ಟು ದಿನಗಳಿಗೆ ಮಾತ್ರವಲ್ಲ, ಒಂದು ತಲೆಮಾರಿಗಾಗುವಷ್ಟು ಸಂಪತ್ತಾದರೂ ಇರುತ್ತದೆ ಮತ್ತು ಸಂತೈಸಲು ಒಂದಷ್ಟು ಮಂದಿ ಹೀಗೇ ಅನಾಯಾಸವಾಗಿರುವವರು ಸಿಕ್ಕುತ್ತಾರೆ. ಆದರೆ ಬಡವರಿಗೆ, ನಿರ್ಗತಿಕರಿಗೆ ದುಃಖಿಸುವುದಕ್ಕೆ ಮತ್ತು ದುಃಖಿಸುತ್ತ ಕಾಲಯಾಪನೆ ಮಾಡುವುದಕ್ಕೆ ಬಿಡುವಿರುವುದಿಲ್ಲ; ವ್ಯವಧಾನವಿರುವುದಿಲ್ಲ. ಕೆಲವೊಮ್ಮೆ ಅಂತ್ಯಸಂಸ್ಕಾರಕ್ಕೂ ಹಣವಿಲ್ಲದೆ ಕಾಡಿಬೇಡಿ ಸಾಲ ತಂದು ಅದನ್ನು ನಿರ್ವಹಿಸಬೇಕಾಗುತ್ತದೆ.

ದುಡಿಯದಿದ್ದರೆ ಹೊಟ್ಟೆ ಕೇಳುವುದಿಲ್ಲ. ಆಗ ಸಾವನ್ನು ಮೀರಿದ ಸಂಕಟದ ಅನುಭವವಾಗುತ್ತದೆ. ಬದುಕಿ ಉಳಿದವರ ಯೋಗಕ್ಷೇಮವು ಸಾವಿನಿಂದುಂಟಾದ ಪರಿಣಾಮವನ್ನು ಶಮನಗೊಳಿಸದಿದ್ದರೂ ಅದನ್ನು ಅನಿವಾರ್ಯವಾಗಿ ದೂರಗೊಳಿಸುತ್ತದೆ. ಬಡವನ ದುಃಖ ಎಂಬ ನುಡಿಗಟ್ಟು ತಯಾರಾದ್ದೇ ಇಂತಹ ಸಂದರ್ಭಗಳಿಂದಾಗಿ ಇರಬಹುದು. ಆದರೆ ದುರಂತದ ಗತಿ ತೀವ್ರವಾಗುವುದು ಯಾರೊಬ್ಬನ ಸಾವು ಸಾಮಾಜಿಕವಾಗಿ ಪ್ರಸ್ತುತವಾದಾಗ. ಸಾಮಾನ್ಯವಾಗಿ ಸಾರ್ವಜನಿಕ ವ್ಯಕ್ತಿತ್ವದ ಎಲ್ಲ ಜನರು ಸತ್ತಾಗ ಹೀಗಾಗುತ್ತದೆಯೆಂದು ಅನ್ನಿಸುವುದಿಲ್ಲ. ಸತ್ತವನು ಒಳ್ಳೆಯವನಾಗಿದ್ದರೆ ಆತನ ಸಾವು ಕೆಲವರಲ್ಲಾದರೂ ಶೂನ್ಯವನ್ನು ನಿರ್ಮಿಸುತ್ತದೆ. ಸತ್ತವನು ಕೆಟ್ಟವನಾಗಿದ್ದರೆ ಜನರು ಸಾರ್ವಜನಿಕವಾಗಿ ಸಂತೋಷ-ಸಮಾಧಾನವನ್ನು ವ್ಯಕ್ತಪಡಿಸದಿದ್ದರೂ ಖಾಸಗಿಯಾಗಿ, ಗುಟ್ಟಾಗಿ, ತಮ್ಮ ತೃಪ್ತಿಯನ್ನು ಅಭಿವ್ಯಕ್ತಿಸುತ್ತಾರೆ. ಅಬ್ಬ, ಮಾರಿ ತೊಲಗಿತು ಎಂದು ತಮ್ಮಲ್ಲೇ ಅಂದುಕೊಳ್ಳುತ್ತಾರೆ.

ಆದರೆ ಸಾಮಾಜಿಕವಾಗಿ ಸಕ್ರಿಯವಾಗಿ, ತನ್ನ ಧೈರ್ಯ, ಪ್ರಾಮಾಣಿಕತೆ, ಮತ್ತು ನಿರ್ಭಿಡೆೆಯಿಂದ ಭಾಗವಹಿಸಿದವರಿಗೆ ಬರುವ ಸಾವು ಸಮಕಾಲೀನ ಸಮಾಜದ ಸಾವೂ ಆಗಬಹುದು. ಹಾಗಲ್ಲದಿದ್ದರೂ ಕನಿಷ್ಠ ಅದು ಹಗಲು ರಾತ್ರಿಗಳಂತೆ ಬದಲಾಗುವ ಘಟನಾವಳಿಗಳ ಸಂಕೇತವೂ ಆಗಬಹುದು. ಬದುಕಿದ್ದಾಗಿನ ವ್ಯಕ್ತಿತ್ವವು ಸಾವಿನ ಆನಂತರವೂ ಉಗುರಿನಂತೆ ಬೆಳೆಯುತ್ತಲೇ ಇರುತ್ತದೆ. ಇದು ನೆನಪಿನ ಕಾರಣವಷ್ಟೇ ಅಲ್ಲ; ಒಬ್ಬನ ಬದುಕು ತನ್ನ ಗತ, ವರ್ತಮಾನ ಮತ್ತು ಭವಿಷ್ಯದ ಮೇಲೆ ಬೀರುವ ಪರಿಣಾಮವು ಆತನ ಸುತ್ತಲಿನ ವರ್ತುಲದ ಮೇಲೂ ಬೀರುವ ಪರಿಣಾಮವಾಗಿರುತ್ತದೆ. ಮಹಾತ್ಮಾ ಗಾಂಧಿ ಸತ್ತಾಗ ನಮ್ಮೆಲ್ಲರ ಬದುಕಿನ ಬೆಳಕನ್ನು ಕಳೆದುಕೊಂಡೆವು ಎಂದು ನೆಹರೂ ಹೇಳಿದ್ದು ಇದೇ ಅರ್ಥದಲ್ಲಿ. ಸಾವನ್ನು ಸಂಭ್ರಮಿಸುವ ಸುಖ ರಾಕ್ಷಸೀಯವಾದದ್ದು. ಇದು ಯಾವುದೇ ಸಂಸ್ಕೃತಿಯ ಕುರುಹಲ್ಲ; ಬದಲಾಗಿ ವಿಕೃತಿಯ ಕುರುಹು.

ಅವರು ಬದುಕಿದ್ದಾಗ ನನ್ನೊಡನೆ ಜಗಳಾಡಿದರು, ಆದ್ದರಿಂದ ಅವರ ಸಾವು ನನಗೆ ಸಂತೋಷ ತಂದಿದೆ ಎಂದು ಯಾರಾದರೂ ಹೇಳಿದರೆ ಆತನ ಆತ್ಮ ಸತ್ತಿದೆ ಅಥವಾ ಆತನಿಗೆ ಆತ್ಮವೇ ಇಲ್ಲ ಎಂದು ತಿಳಿಯಬಹುದು. ಈ ಆತ್ಮಹೀನತೆಯು ಇಂದು ಸಮಾಜದಲ್ಲಿ ಬಹಳಷ್ಟು ಜನರಿಗಿದೆ. ಗೌರಿ ಲಂಕೇಶ್ ಸತ್ತಾಗ ಬಹಳಷ್ಟು ಜನರು ಸಂಭ್ರಮಿಸಿದರು. ಈ ಸಂಭ್ರಮಕ್ಕೆ ಕೆಲವರಾದರೂ ತಾತ್ವಿಕ ಕಿಲುಬನ್ನಂಟಿಸಿದರು. ವಿಶೇಷವೆಂದರೆ ಆಕೆ ಒಬ್ಬ ಮಹಿಳೆಯೆಂಬುದನ್ನೂ ಪರಿಗಣಿಸದೆ ಹಳಿದರು. ಇದು ಯಾವ ದೇಶವನ್ನು ವಿಶ್ವದ ಸಾಂಸ್ಕೃತಿಕ ಗುರುವೆಂದು ನಮ್ಮ ಬೆನ್ನನ್ನು ನಾವೇ ಸವರಿಕೊಂಡು ಹೆಮ್ಮೆ ಪಡುತ್ತೇವೆಯೋ ಮತ್ತು ಎಲ್ಲಿ ಮಹಿಳೆಯರನ್ನು ಗೌರವಿಸಿದರೆ ದೇವತೆಗಳೂ ಸಂತೋಷಪಡುತ್ತರೆಂದು ಕತ್ತೆತ್ತಿ ಹೇಳುತ್ತೇವೆಯೋ ಅಂತಹ ಭಾರತದಲ್ಲಿ ನಡೆದಿದೆಯೆಂಬುದು ನಮ್ಮ ಕುಸಿದ, ಶಿಥಿಲವಾದ, ಮೌಲ್ಯವನ್ನು ಹೇಳುತ್ತದೆ. ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಎಲ್ಲೆಡೆ ಗೌರಿ ಲಂಕೇಶ್ ಸಾವು ಸುದ್ದಿಯಾಯಿತು. ಆಕೆ ಲಂಕೇಶ್ ಮಗಳೆಂದಲ್ಲ; ಬದಲಾಗಿ ಕತ್ತೊತ್ತಿ ಸಾಯಿಸುವ ದಬ್ಬಾಳಿಕೆಯನ್ನು ಎದುರಿಸಿ ನಡೆಯುವ ಧೀಮಂತಿಕೆಯನ್ನು ಪ್ರದರ್ಶಿಸಿದಳು ಎಂಬುದಕ್ಕಾಗಿ. ಆಕೆಯ ಧೋರಣೆ, ತರ್ಕ ಮತ್ತು ನಿಲುವುಗಳನ್ನು ಒಪ್ಪದಿದ್ದರೂ ಅದನ್ನು ಮೆಚ್ಚಿಕೊಳ್ಳಬೇಕು; ಅದು ಧೀರೋದಾತ್ತತೆ. ನಿರಂಜನರ ‘ಚಿರಸ್ಮರಣೆ’ ಎಂಬ ಕ್ರಾಂತಿಕಾರಿ ಬದುಕಿನ ಕುರಿತ ಕಾದಂಬರಿಯ ಕೊನೆಯಲ್ಲಿ ಈ ಮಾತುಗಳು ಬರುತ್ತವೆ:

‘‘ಅಪ್ಪುಕುಟ್ಟಿಯನ್ನೆತ್ತಿಕೊಂಡು ಜಾನಕಿ ಹೊರಗೆ ಅಂಗಳದಲ್ಲಿ ಕುಳಿತಳು. ಹುಡುಗ ಒಂದೇ ಸಮನೆ ಅಳುತ್ತಿದ್ದ. ಅವನನ್ನು ಸಂತೈಸಲಾಗದೆ ಸೋತು ಜಾನಕಿ ಆಕಾಶವನ್ನು ದಿಟ್ಟಿಸಿದಳು. ಅಲ್ಲಿ ಕೋಟಿ ಚಿಕ್ಕೆಗಳು ಮಿನುಗುತ್ತಿದ್ದವು. ಪಶ್ಚಿಮದಲ್ಲೊಂದೆಡೆ ನಾಲ್ಕು ನಕ್ಷತ್ರಗಳು ಒಂದೇ ಸಮನಾದ ಪ್ರಭೆಯಿಂದ ಬೆಳಗುತ್ತಿದ್ದಂತೆ ಕಂಡಿತು.
ಜಾನಕಿ ಆ ನಾಲ್ವರಲ್ಲಿ ಮೊದಲ ನಕ್ಷತ್ರದತ್ತ ಬೊಟ್ಟು ಮಾಡಿ ಹೇಳಿದಳು:
ಅಪ್ಪುಕುಟ್ಟಿ, ಅಲ್ಲಿ ನೋಡಿದ್ಯಾ? ಅಪ್ಪಅಲ್ಲಿದ್ದಾರೆ, ನೀನು ಅಳಬಾರ್ದು. ಅತ್ತರೆ ಅವರಿಗೆ ದುಃಖವಾಗ್ತದೆ.

ಬಲು ದೀಘವಾಗಿತ್ತು ಕಯ್ಯೂರಿನಲ್ಲಿ ಆ ರಾತ್ರಿ. ಹಾಗಿದ್ದರೂ ಇರುಳು ಕಳೆದು ಮೆಲ್ಲಮೆಲ್ಲನೆ ಬೆಳಗಾಯಿತು.’’
ಕ್ರಾಂತಿಕಾರಣವಾಗಿ ನೇಣಿಗೇರಿದ ಕೆಯ್ಯೂರಿನ ನಾಲ್ವರ ಕೊನೆಯ ದಿನವು ಕಳೆದ ರಾತ್ರಿ ಅದು. ಅಗಲಿದ ನಾಯಕರ ಸಂಸಾರದ ಸ್ಥಿತಿಯನ್ನು ಬಣ್ಣಿಸುವುದರೊಂದಿಗೇ ಚಿಕ್ಕೆಗಳು ನೆನಪಿನ ನಕ್ಷತ್ರಗಳಾಗಿ ಮಿನುಗುವ ಚಿತ್ರವನ್ನು ಈ ಸನ್ನಿವೇಶ ಕಟ್ಟಿಕೊಡುತ್ತದೆ.

ಕುವೆಂಪು ಬರೆದ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ಕಿಷ್ಕಿಂಧಾ ಸಂಪುಟಂನ 2ನೆ ಅಧ್ಯಾಯ ಓ ಲಕ್ಷ್ಮಣಾ. ಇದು ಸೀತಾಪಹಾರದ ಮಂತ್ರ. ಮಾರೀಚನು ತನ್ನ ಅಂತಿಮ ಕ್ಷಣಗಳಲ್ಲಿ ‘‘ಓ ಲಕ್ಷ್ಮಣಾ’’ ಎಂದು ಕೂಗಿಕೊಂಡು ಸಾಯುತ್ತಾನೆ. ಆದರೆ ಆತನ ಆಕ್ರಂದನವು ಬೇರೆಯೇ ಆದ-ಅಂದರೆ ಶ್ರೀರಾಮನಿಗೇನಾಯಿತೋ ಎಂಬ ಆತಂಕದ- ಅರ್ಥವನ್ನು ಸೀತೆಗೆ ನೀಡುವುದರಿಂದ ಆಕೆಯ ಬಲವಂತಕ್ಕೆ ಲಕ್ಷ್ಮಣನು ಶ್ರೀರಾಮನನ್ನರಸುತ್ತ ಹೋಗುತ್ತಾನೆ. ಆದರೆ ಶ್ರೀರಾಮ ನಿಗೇನೂ ಆಗಿರುವುದಿಲ್ಲ. ಸೀತೆಯೊಬ್ಬಳೇ ಇದ್ದಾಳೆನ್ನುವ ಕಲ್ಪನೆಯಲ್ಲಿ, ಆಕೆಗೇನಾಯಿತೋ ಎಂಬ ಆತಂಕದಲ್ಲಿ ಸೋದರರು ಮರಳಿದಾಗ ಸೀತೆ ಅಲ್ಲಿರುವುದಿಲ್ಲ. ಸೀತಾಪಹಾರ ನಡೆದುಹೋಗಿರುತ್ತದೆ. ಜಟಾಯುವಿನಿಂದ ಸೀತಾಪಹಾರದ ಕುರಿತು ಅರಿತ ಶ್ರೀರಾಮನು ಮನುಷ್ಯಮಾತ್ರನಾಗಿ ದುಖಿಃಸುತ್ತಾನೆ. ‘‘ಓ ಲಕ್ಷ್ಮಣಾ’’ ಎಂಬ ಕೂಗು ಹೀಗೆ ಒಂದು ದಾರುಣ ದುರಂತದ ಸಾಕ್ಷಿಯಾಗುತ್ತದೆ. (ಇಷ್ಟಕ್ಕೂ ಸೀತೆ ಮತ್ತೆ ಲಭಿಸುತ್ತಾಳೆ ಎಂಬುದು ಶ್ರೀರಾಮನಿಗೆ ಗೊತ್ತಿರುವುದಿಲ್ಲವಲ್ಲ!)

ಮುಂದಿನ (3ನೆ) ಅಧ್ಯಾಯವಾದ ‘ಶಬರಿಗಾದನು ಅತಿಥಿ ದಾಶರಥಿಯ’ ಆರಂಭ ಪಂಚವಟಿಯಲ್ಲಿ ಸೀತೆಯನ್ನು ಕಳೆದುಕೊಂಡ ಶ್ರೀರಾಮ ಲಕ್ಷ್ಮಣರು ಆ ಧಾತ್ರಿಯನ್ನು ಬಿಟ್ಟು ಮುಂದುವರಿಯುವ ಈ ಸಾಲುಗಳಿಂದ:
ತೊಲಗಿತಾ ಓ ಲಕ್ಷ್ಮಣಾ ದಿನಂ; ಕಳೆದುದಾ

ಓ ಲಕ್ಷ್ಮಣಾ ರಾತ್ರಿ; ಮರುದಿನಂ ಬಿಟ್ಟರಾ ಓ ಲಕ್ಷ್ಮಣಾ ಸ್ಮತಿಯ ಪಂಚವಟಿ ಧಾತ್ರಿಯಂ.

ಹಗಲು ಮತ್ತು ರಾತ್ರಿ ಮತ್ತು ಗತಕಾಲದ ಘಟನೆಗಳು ಹೀಗೆ ಮನುಷ್ಯನ ನೆನಪಿನ ಸ್ಮತಿಪಟಲದಲ್ಲಷ್ಟೇ ಉಳಿಯುತ್ತವೆ. ಈ ಸಾಲುಗಳು ಎಲ್ಲ ಕಾಲದ, ಎಲ್ಲ ದೇಶಗಳ ಕರಾಳ ನೆನಪನ್ನು, ವರ್ತಮಾನವನ್ನು ವಿವರಿಸುತ್ತವೆ. ಕಳೆದದ್ದು ದಿನ ಮಾತ್ರವಲ್ಲ, ರಾತ್ರಿಯನ್ನೂ ಹೌದು. ದಿನವು ಬೆಳಕನ್ನು, ಆಸೆಯನ್ನು, ಮನುಷ್ಯನ ಚಟುವಟಿಕೆಯನ್ನು, ವ್ಯವಹಾರವನ್ನು ಸಂಕೇತಿಸಿದರೆ, ರಾತ್ರಿಯು ನಿಗೂಢತೆಯನ್ನು, ನಿಷ್ಪಂದವನ್ನು, ನಿದ್ರೆಯ ಸ್ವರೂಪದ ಅರೆಮರೆವನ್ನು ಸಂಕೇತಿಸುತ್ತದೆ. ಹೀಗೆ ಆಸೆ-ನಿರಾಸೆಗಳ ನಡುವೆ ಬದುಕು ಮುಂದುವರಿಯುವುದನ್ನು ಸೀತಾಪಹಾರದ ಅನಂತರದ ಈ ನಡೆನುಡಿಗಳು, ವರ್ತನೆಗಳು ಸಂಕೇತಿಸುತ್ತವೆ.

ಕುವೆಂಪು ಇಲ್ಲಿ ಸೀತೆ ಇಲ್ಲವೆ ಶ್ರೀರಾಮನನ್ನು ಹೆಸರಿಸದೆ ‘‘ಓ ಲಕ್ಷ್ಮಣಾ’’ ಎಂಬ ನುಡಿಗಟ್ಟನ್ನು ಮತ್ತೆ ಮತ್ತೆ ಪ್ರಯೋಗಿಸುತ್ತಾರೆ. ಸೀತೆ ಆ ಕಾಲದಲ್ಲಿ ಒಬ್ಬ ಸಾರ್ವಜನಿಕ ಇಲ್ಲವೇ ಸಾಮಾಜಿಕ ವ್ಯಕ್ತಿಯಾಗಿರಲಿಲ್ಲ. ಆಕೆಯ ಅಗಲಿಕೆಯು ಶ್ರೀರಾಮಲಕ್ಷ್ಮಣರ ದುಃಖವಷ್ಟೇ ಹೊರತು ಜಗತ್ತಿನ, ಸಮಾಜದ ದುಃಖವಾಗಿರಲಿಲ್ಲ. ಆದರೂ ಆದು ದೀರ್ಘವಾದ ಇತಿಹಾಸವನ್ನು ಹೊಂದಿ ಒಂದು ಪರಂಪರೆಯ ಸತ್ಯವನ್ನು ಹೇಳಿತು. ಹಾಗಿದ್ದರೂ ಇರುಳು ಕಳೆದು ಬೆಳಗಾಗುತ್ತದೆ. ದೀರ್ಘವಾದ ರಾತ್ರಿಯ ಅನಂತರವೂ ಬೆಳಗಿದೆ, ಬೆಳಕಿದೆ ಎಂಬ ಉಕ್ತಿಯಿದೆ. ಅದು ಮನುಷ್ಯನ ಐತಿಹಾಸಿಕ ಚಿರಜೀವನವನ್ನು ಹೇಳುತ್ತದೆ. ಸತ್ತ ಮಾತ್ರಕ್ಕೆ ಎಲ್ಲವೂ ಅಳಿಯುವುದಿಲ್ಲವೆಂಬುದು ನಮ್ಮ ಸಂಸ್ಕೃತಿಯ ಭಾಗವಾಗಿ ಉಳಿದಿದೆ. ಜಂಗಮಕ್ಕಳಿವಿಲ್ಲ. ಸದಾ ಕ್ರಿಯಾಶೀಲವಾದ ಬದುಕಿಗೂ ಅಳಿವಿಲ್ಲ. ದೇಹ, ಆಕಾರ, ಚಿತ್ರ, ಮರೆಯಾದರೂ ಅಂತಹ ಬದುಕು ಎಲ್ಲರ ಮನಸ್ಸುಗಳಲ್ಲಿ ಹುತ್ತಗಟ್ಟಿರುತ್ತದೆ.

ರಾಬರ್ಟ್ ಕಿಂಗ್ ಎಂಬ ಐರೋಪ್ಯ ಚಿಂತಕನು ಭಾರತದ ಏಳುಬೀಳುಗಳ ಕುರಿತು ವಿಸ್ತಾರವಾಗಿ ಬರೆದಿದ್ದಾನೆ. ಒಮ್ಮೆ ಸರ್ವಾಧಿಕಾರದ ಕತ್ತಲಿಗೆ ದೂಡಲ್ಪಟ್ಟು ಮತ್ತೆ ಪ್ರಜಾತಂತ್ರದ ಬೆಳಗಿಗೆ ಮರಳಿದ ಅಪರೂಪದ ದೇಶಗಳಲ್ಲಿ ಭಾರತವೂ ಒಂದು ಎಂದು ಶ್ಲಾಘಿಸಿ ಇಷ್ಟೊಂದು ಜಾತಿ, ಮತ, ಧರ್ಮ, ಜನಾಂಗ, ಭಾಷೆ, ಹೀಗೆ ವಿವರಿಸಲಸಾಧ್ಯವಾದ ವೈವಿಧ್ಯಗಳನ್ನು ಹೊಂದಿದ ಭಾರತವೆಂಬ ಒಂದು ದೇಶವು ಸಾಮರಸ್ಯದಿಂದ ಇರಲು ಸಾಧ್ಯವೆಂದು ಜಗತ್ತಿಗೆ ತೋರಿಸಿಕೊಟ್ಟಿದೆಯೆಂದು ಮತ್ತು ವೈವಿಧ್ಯತೆಯಲ್ಲಿ ಏಕತೆಯು ಸಹಜಸಾಧ್ಯವೆಂದು ಆತ ಹೇಳುತ್ತಾನೆ. ಆದರೆ ಆತನ ಮಾತುಗಳನ್ನು ಸುಳ್ಳು ಮಾಡುವುದಕ್ಕೆ ಒಂದು ತಲೆಮಾರಿನ ಸಮಾಜದ ದುಷ್ಟಶಕ್ತಿಗಳು ಹೊರಟಿವೆಯೆಂಬುದು ಒಂದು ಸವಾಲಾಗಿ ಪರಿಣಮಿಸಿದೆ.

ಬಹುತ್ವವೇ ಈ ದೇಶದ ಬೆನ್ನೆಲುಬೆಂಬುದನ್ನು ಮರೆತು ಬಹುಮತದ ಶಕ್ತಿಯೇ ಶಾಶ್ವತದ ಶಕ್ತಿಯೆಂದು ನಿರೂಪಿಸುವಂತೆ ಗೌರಿ ಲಂಕೇಶ್ ಸಾವಿನಂತಹ ಅನೇಕ ಘಟನೆಗಳು ರಕ್ತರಾತ್ರಿಗಳಲ್ಲಿ ನಡೆಯುತ್ತಿವೆ. ಕುವೆಂಪು ಹೇಳಿದ ದಿನ-ರಾತ್ರಿಯ ಕಲ್ಪನೆ ಸಾಕಾರಗೊಳ್ಳುವುದೇ ಇಲ್ಲಿ. ಹೇಗೆ ದುರಂತಗಳ ನಡುವೆಯೂ ಬೆಳಗಾಗುತ್ತದೆಯೋ ಹಾಗೆಯೇ ಮತ್ತೆ ರಾತ್ರಿಯಾಗುತ್ತದೆ. ಈ ಹಗಲು ರಾತ್ರಿಗಳು ಏಳು-ಬೀಳುಗಳ ಪುನರಾವರ್ತನೆಯ ಸಂಕೇತ. ಯಾವುದು ಅಂತಿಮವೆಂಬುದನ್ನು ಹೇಳಲು ಸಾಧ್ಯವಿಲ್ಲವಾದರೂ ಹೊಸ ಹಗಲು ಮೂಡಿದರೆ ಗೌರಿ ಲಂಕೇಶ್ ಅವರ ಸಾವೂ ಸಾರ್ಥಕವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)