varthabharthi

ನೇಸರ ನೋಡು

ಕನ್ನಡ ವಿವಿ ‘ಬೆಳ್ಳಿ’ ಮಧ್ಯೆ ಕಾರ್ಮೋಡಗಳು

ವಾರ್ತಾ ಭಾರತಿ : 17 Sep, 2017

ಮಲ್ಲಿಕಾ ಘಂಟಿಯವರು ಸೂಟ್ ಕೇಸಿನ ಮಾತನ್ನು ನಿರಾಕರಿಸಿದ್ದಾರೆ, ತಮ್ಮ ಮಾತಿಗೆ ತಪ್ಪರ್ಥ ಕಲ್ಪಿಸಲಾಗಿದೆ ಎಂದಿದ್ದಾರೆ. ಇದ್ದೀತು. ಹಾಗೆಂದ ಮಾತ್ರಕ್ಕೆ ಸರಕಾರದಲ್ಲಿ ಎಲ್ಲವೂ ಸರಿಯಿದೆ ಎಂದು ಅರ್ಥವಲ್ಲ. ಪ್ರತಿಭಟನೆ ಮುಂದುವರಿಸುತ್ತೇನೆ ಎನ್ನುವ ಅವರ ಮಾತು ವಿ.ವಿ.ಗೆ ಸಂಬಂಧಿಸಿದಂತೆ ಆಡಳಿತ ಯಂತ್ರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎನ್ನುವುದನ್ನು ಧ್ವನಿಸುತ್ತದೆ. ಮುಖ್ಯ ಮಂತ್ರಿಗಳು ಕನ್ನಡ ವಿ.ವಿ.ಯ ಸಮಸ್ಯೆಗಳತ್ತ ಗಮನಹರಿಸಿ ಅವುಗಳನ್ನು ಪರಿಹರಿಸುವುದು ಮಾತ್ರವಲ್ಲದೆ ಮುಂದೆ ಇಂಥ ಸಮಸ್ಯೆಗಳು ಉದ್ಭವಿಸಲು ಅವಕಾಶ ಕೊಡದಂತೆ ಅಧಿಕಾರಶಾಹಿಗೆ ತಕ್ಕ ಚಿಕಿತ್ಸೆ ಮಾಡಬೇಕು.


ಈಗ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಶುರುವಿಗೇ ಪರ-ವಿರೋಧ ಚರ್ಚೆ, ವಾದವಾಗ್ವಾದಗಳ ಮಧ್ಯೆಯೇ ಹುಟ್ಟಿದ ಶಿಶು. ಬೆಂಗಳೂರಿನ ಸಾಹಿತಿ, ಕಲಾವಿದರ ಬಳಗ ಕನ್ನಡದ ಏಳಿಗೆಯ ದೃಷ್ಟಿಯಿಂದ ಕನ್ನಡ ವಿಶ್ವ ವಿದ್ಯಾನಿಲಯವೊಂದನ್ನು ಸ್ಥಾಪಿಸಬೇಕೆಂದು 1985ರಲ್ಲಿ ಸರಕಾರದ ಮುಂದೆ ಬೇಡಿಕೆ ಮಂಡಿಸಿದಾಗ ಈ ಚರ್ಚೆ ಶುರುವಾಯಿತು.ಸಾಹಿತಿ-ಕಲಾವಿದರ ಬಳಗ ಸರಕಾರದ ಮುಂದೆ ತನ್ನ ಪರಿಕಲ್ಪನೆಯ ಕನ್ನಡ ವಿಶ್ವವಿದ್ಯಾನಿಲಯದ ರೂಪುರೇಷೆಯನ್ನು ಹೀಗೆ ಬಿಂಬಿಸಿತ್ತು:

‘‘ಕನ್ನಡ ನಾಡಿನ ಕೇಂದ್ರ ಪ್ರದೇಶವೊಂದರಲ್ಲಿ -ಹಂಪೆಯಂತಹ ಭಾವನಾತ್ಮಕ ಪ್ರಾಮುಖ್ಯವುಳ್ಳ ಕಡೆ-ತಮಿಳು ವಿಶ್ವವಿದ್ಯಾನಿಲಯದ ಮಾದರಿಯಲ್ಲಿ ಕನ್ನಡ ವಿಶ್ಸವಿದ್ಯಾನಿಲಯವೊಂದನ್ನು ಸ್ಥಾಪಿಸಲು ತುರ್ತಾಗಿ ಕರ್ನಾಟಕ ಸರಕಾರವು ಕಾರ್ಯೋನ್ಮುಖವಾಗಬೇಕು. ಕನ್ನಡ ಹಾಗೂ ಕರ್ನಾಟಕದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ತೌಲನಿಕ ಅಧ್ಯಯನ, ಕರ್ನಾಟಕ ಇತಿಹಾಸ, ಕರ್ನಾಟಕದ ಕಲೆ, ಧರ್ಮ, ಸಮಾಜ ಮುಂತಾದವುಗಳ ಬಗೆಗಿನ ಸಂಶೋಧನೆ, ಹಸ್ತಪ್ರತಿ ಶಾಸ್ತ್ರ, ಅನುವಾದ, ಪುರಾತತ್ವ ಶೋಧ, ಜಾನಪದ ಮುಂತಾದ ವಿಭಾಗಗಳನ್ನೊಳಗೊಂಡಿರುವಂತೆ ಈ ವಿಶ್ವ ವಿದ್ಯಾನಿಲಯವು ಆಳವಾದ ಸಂಶೋಧನೆಗಳಿಗೆ ಮೀಸಲಾಗಿರಬೇಕು.’’

ಆಗ ಇದನ್ನು ವಿರೋಧಿಸಿ ಕರ್ನಾಟಕದಲ್ಲಿ ಕನ್ನಡ ವಿಶ್ವವಿದ್ಯಾನಿಲಯದ ಅಗತ್ಯವಿಲ್ಲ ಎನ್ನುವ ಪ್ರತಿವಾದವೊಂದು ಬೌದ್ಧಿಕ ವಲಯದಲ್ಲಿ ಹುಟ್ಟಿಕೊಂಡಿತು. ಸಾಹಿತಿಗಳು ಕಲಾವಿದರ ಬಳಗ ಹೇಳುವ ವಿಶ್ವವಿದ್ಯಾನಿಲಯದ ಕಾರ್ಯಗಳನ್ನೆಲ್ಲ ಕನ್ನಡ ಅಧ್ಯಯನಕ್ಕೆ ಮೀಸಲಾದ ಒಂದು ಸಂಸ್ಥೆಯೇ ನಿರ್ವಹಿಸಬಹುದು. ಅದಕ್ಕಾಗಿಯೇ ಕನ್ನಡ ವಿಶ್ವವಿದ್ಯಾನಿಲಯ ಏಕೆ? ಪ್ರತ್ಯೇಕ ಕನ್ನಡ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಬೇಕಾಗಿಲ್ಲ; ಆಗ ಬೇಕಾದ ಕೆಲಸವೆಂದರೆ ನಮ್ಮ ರಾಜ್ಯ ಎಲ್ಲ ವಿಶ್ವವಿದ್ಯಾನಿಲಯಗಳನ್ನು ಕನ್ನಡ ವಿಶ್ವವಿದ್ಯಾನಿಲಯ ಗಳನ್ನಾಗಿ ಮಾಡುವುದು ಎಂಬುದು ವಿರೋಧಿಗಳ ವಾದವಾಗಿತ್ತು.

ಕನ್ನಡ ವಿಶ್ವವಿದ್ಯಾನಿಲಯದ ಅಗತ್ಯವನ್ನು ಮನಗಂಡ ಕರ್ನಾಟಕ ಸರಕಾರ 1991ರಲ್ಲಿ ಹಂಪಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ, ಜಾನಪದ ಇತ್ಯಾದಿಗಳನ್ನು ಬೆಳೆಸಿ ಅಭಿವೃದ್ಧಿಪಡಿಸುವ ಘನ ಉದ್ದೇಶದಿಂದ ಕನ್ನಡ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿತು. ಕವಿ ಚಂದ್ರಶೇಖರ ಕಂಬಾರರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಸಂಸ್ಥಾಪಕ ಕುಲಪತಿಗಳಾಗಿ ನೇಮಕಗೊಂಡು ಕನ್ನಡ ವಿಶ್ವವಿದ್ಯಾನಿಲಯಕ್ಕೆ ಸುಭದ್ರವಾದ ಅಡಿಪಾಯವನ್ನು ಹಾಕಿದರು. ಬೋಧನೆ-ಸಂಶೋಧನೆ-ಸೃಜನಶೀಲತೆಗಳಿಗೆ ವಿಶ್ವವಿದ್ಯಾನಿಲಯದಲ್ಲಿ ಹೊಸ ಗುರಿಗಮ್ಯತೆಗಳನ್ನು ಹಮ್ಮಿಕೊಟ್ಟರು. ಈ ಇಪ್ಪತ್ತೈದು ವರ್ಷಗಳಲ್ಲಿ ಕಂಬಾರರ ನಂತರ ಪ್ರೊ.ಎಂ.ಎಂ.ಕಲಬುರ್ಗಿಯವರಂಥ ಮೇಧಾವಿಗಳ ನೇತೃತ್ವದಲ್ಲಿ ಕನ್ನಡ ವಿ.ವಿ. ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಯ ಕೆಲಸಗಳನ್ನು ಗಮನಾರ್ಹ ರೀತಿಯಲ್ಲಿ ಮಾಡಿಕೊಂಡು ಬಂದಿದೆ. ಕಾವೇರಿ-ತುಂಗಭದ್ರೆಯರಲ್ಲಿ ಸಾಕಷ್ಟು ನೀರು ಹರಿದಿದೆ. ಕನ್ನಡ ವಿ.ವಿ.ಯ ಶೈಶವಾವಸ್ಥೆಯಲ್ಲೇ ತುಂಗಭದ್ರೆಯಲ್ಲಿ ಭರಪೂರ ಪ್ರವಾಹ ಬಂದು ಕಂಬಾರರು ಕಟ್ಟಿದ್ದೆಲ್ಲ ಕೊಚ್ಚಿಹೋಗಿ ಅವರು ಮತ್ತೆ ಅವಶೇಷಗಳಿಂದ ಪುನರ್‌ನಿರ್ಮಾಣ ಗೈಯಲು ತೋಳೇರಿಸಿ ನಿಲ್ಲಬೇಕಾಯಿತು.

ಈಗಷ್ಟೆ ರಜತ ಮಹೋತ್ಸವ ಆಚರಿಸಿರುವ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕನ್ನಡದ ಕೆಲಸಗಳು ಸಾಕಷ್ಟು ಆಗಿವೆ. ಕೆಲವರಿಗೆ ಆಗಿರುವ ಕೆಲಸಗಳ ಬಗ್ಗೆ ತೃಪ್ತಿ ಇರಲಾರದು. ಇನ್ನು ಕೆಲವರ ದೃಷ್ಟಿಯಲ್ಲಿ ಹೆಮ್ಮೆಪಡುವಂಥ ಕೆಲಸಗಳೂ ಆಗಿವೆ. ಕನ್ನಡ ವಿಶ್ವವಿದ್ಯಾನಿಲಯದ ಈಗಿನ ಕುಲಪತಿಗಳ ದೃಷ್ಟಿಯಲ್ಲೇ ‘ಮಾಡಬೇಕಾದ್ದು ಬಹಳಷ್ಟಿದೆ’ ಎನ್ನುವ ಅತೃಪ್ತಿಯೂ ಇದೆ. ಆರೋಗ್ಯಕರ ಅತೃಪ್ತಿ ಮುಂದಿನ ಸಾಧನೆಗೆ ಸೋಪಾನವಾದೀತು. ಇದೆಲ್ಲ ಏನೇ ಇರಲಿ ಆರಂಭಕ್ಕೆ ಕನ್ನಡ ವಿಶ್ವವಿದ್ಯಾನಿಲಯದ ಕಡು ವಿರೋಧಿಗಳಲ್ಲೊಬ್ಬರಾಗಿದ್ದ ಹಾ.ಮಾ.ನಾಯಕರು ಬರೆದಂತೆ:

‘‘ಕನ್ನಡ ನಮ್ಮ ಜನಜೀವನವನ್ನು ಸಂಪೂರ್ಣವಾಗಿ ತುಂಬಿಕೊಳ್ಳಬೇಕೆಂದು ಅಪೇಕ್ಷಿಸುವ ಯಾರೂ ಪ್ರತ್ಯೇಕ ಕನ್ನಡ ವಿಶ್ವವಿದ್ಯಾನಿಲಯವನ್ನು ಒಪ್ಪುವುದಿಲ್ಲ. ನಮ್ಮೆಲ್ಲ ವಿಶ್ವವಿದ್ಯಾನಿಲಯಗಳೂ ಕನ್ನಡದ್ದಾಗಬೇಕೆಂದು ಅಪೇಕ್ಷಿಸುತ್ತಾರೆ. ಒಂದು ವೇಳೆ ಯಾವುದಾದರೂ ಕಾರಣದಿಂದ ಅದು ಅಸ್ತಿತ್ವಕ್ಕೆ ಬಂದರೆ ಅದು ವಿಶ್ವವಿದ್ಯಾಲಯಗಳ ತತ್ವಕ್ಕೆ ಮೀರಿದ್ದಾಗುತ್ತದೆ.ಕನ್ನಡಕ್ಕೆ ಸಂಬಂಧಿಸಿದಂತೆ ಒಂದು ಅಸ್ಪಶ್ಯ ಸಂಸ್ಥೆ ಎನ್ನಿಸಿಕೊಳ್ಳುತ್ತದೆ. ಇದನ್ನು ನಮ್ಮ ಕನ್ನಡ ಜನರು ಎಷ್ಟು ಬೇಗ ಅರಿತುಕೊಂಡರೆ ಅಷ್ಟು ಒಳ್ಳೆಯದು.’’

(ಸಂಪ್ರತಿ-ಆಗಸ್ಟ್ 25,1985). ಹಾ.ಮಾ.ನಾಯಕರ ನಿರೀಕ್ಷೆ ದಿಟವಾಗಲಿಲ್ಲ. ಅದರಿಂದ ವಿಶ್ವವಿದ್ಯಾ ನಿಲಯಗಳ ತತ್ವಗಳನ್ನೂ ಮೀರಿದ್ದೂ ಆಗಲಿಲ್ಲ, ಕನ್ನಡಕ್ಕೆ ಸಂಬಂಧಿಸಿದಂತೆ ಅದು ಅಸ್ಪಶ್ಯವೂ ಆಗಲಿಲ್ಲ. ಇತಿಹಾಸ ಪೂರ್ವಾಗ್ರಹ ಗಳನ್ನು ಸುಳ್ಳಾಗಿಸಿದೆ.

ಹಂಪಿ ಕನ್ನಡ ವಿಶ್ವವಿದ್ಯಾ ನಿಲಯದ ಕೆಲಸಕಾರ್ಯಗಳು, ಸಾಧನೆಗಳು ಕಾಲಕಾಲಕ್ಕೆ ಬೌದ್ಧಿಕ ವಲಯದ ವಿಮರ್ಶೆ-ಪರಾಮರ್ಶೆಗಳಿಗೊಳಗಾಗ ಬೇಕು ಎಂಬುದು ಎಲ್ಲರೂ ಒಪ್ಪುವ ಮಾತೇ. ತಪ್ಪುಒಪ್ಪುಗಳನ್ನು ಸ್ವಾಗತಿಸಬೇಕಾದ್ದು ಆರೋಗ್ಯಕರ ನಿಲುವಾಗುತ್ತದೆ. ಅಂಥದ್ದೊಂದು ಕೆಲಸ ಈ ಅಂಕಣದ ಮಿತಿಯಲ್ಲಿ ಸಾಧ್ಯವಾಗದು. ಪ್ರಸ್ತುತ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಸುದ್ದಿಯಲ್ಲಿರುವುದು ಅದರ ಈಗಿನ ಕುಲಪತಿ ಶ್ರೀಮತಿ ಮಲ್ಲಿಕಾ ಘಂಟಿಯವರು ಆಡಿದ್ದಾರೆನ್ನಲಾದ ಕೆಲವು ಮಾತುಗಳಿಂದಾಗಿ. ಮಲ್ಲಿಕಾ ಘಂಟಿಯವರು ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ನೇಮಕಗೊಂಡು ಮೂರು ವರ್ಷಗಳು ಉರುಳಿವೆ.

ಸಮಾಜದ ಕೆಳಸ್ತರದಿಂದ ಬೆಳೆದು ಬಂದಿರುವ ಮಲ್ಲಿಕಾ ಘಂಟಿಯವರು ಕವಿಗಳು, ವಿಮರ್ಶಕರು. ಒಳ್ಳೆಯ ಅಧ್ಯಾಪಕಿಯೆಂದು ವಿದ್ಯಾರ್ಥಿ ವೃಂದದ ಕೀರ್ತಿಗಳಿಸಿದವರು. ಸೂಕ್ಷ್ಮ ಸಂವೇದನಾಶೀಲೆಯಾದ ಮಲ್ಲಿಕಾ ವರ್ಣೀಕೃತ-ಶ್ರೇಣೀಕೃತ ಸಮಾಜದಲ್ಲಿನ ಶೋಷಣೆ-ಅಸಮಾನತೆಗಳನ್ನೂ ಅಡಚಣೆಗಳನ್ನು ಮೀರಿ ನಿಲ್ಲಲು ಹೋರಾಟದ ಛಲವನ್ನೂ ಮೈಗೂಡಿಸಿಕೊಂಡವರು. ಸಂಡೂರಿನ ಕುಮಾರಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ದೊರಕಿಸಿಕೊಡಲು ಹೋರಾಟ ಸಂಘಟಿಸಿದವರು. ಕರ್ನಾಟಕ ವಿಶ್ವವಿದ್ಯಾನಿಲಯದ ಬಳ್ಳಾರಿ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿ ಅಧ್ಯಯನ ಕೇಂದ್ರವನ್ನು ಬೆಳೆಸುವುದರಲ್ಲಿ ಎದುರಾದ ಸಂಕುಚಿತ ಮನೋಭಾವದ ಶಕ್ತಿಗಳ ವಿರುದ್ಧ ಧೃತಿಗೆಡದೆ ಹೋರಾಡಿದವರು.

ಪ್ರತಿಭೆ, ಸೃಜನಶೀಲ ಕಾರ್ಯಕ್ಷಮತೆ ಮೊದಲಾದ ಅರ್ಹತೆಗಳಿಂದಾಗಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಸ್ಥಾನ ಅವರನ್ನರಸಿ ಬಂತು. ಕನ್ನಡ ವಿ.ವಿ.ಗೆ ಹೊಸ ದಿಗಂತಗಳನ್ನು ಸೃಷ್ಟಿಸುವ ಹುಮ್ಮಸ್ಸಿನಿಂದಲೇ ಈ ಹೊಣೆಗಾರಿಕೆಯನ್ನು ಒಪ್ಪಿಕೊಂಡ ಮಲ್ಲಿಕಾ ಘಂಟಿಯವರಿಗೆ ಈ ಹುದ್ದೆಯೇನೂ ಕುಸುಮಸದೃಶ ಪೀಠವಾಗಿರಲಿಲ್ಲ. ಸಣ್ಣಪುಟ್ಟ ಕಿರಿಕಿರಿಗಳ ಮಧ್ಯೆಯೂ ಅವರ ಕ್ರಿಯಾಶೀಲತೆ ಮೊಂಡಾಗಲಿಲ್ಲ. ವಿಶ್ವವಿದ್ಯಾನಿಲಯದ ಹಣಕಾಸಿನ ಮುಗ್ಗಟ್ಟು ಅವರ ಅನೇಕ ಯೋಜನೆಗಳಿಗೆ ಎದುರಾಗಿರುವ ತೊಡಕು. ಈ ಹಣಕಾಸಿನ ಮುಗ್ಗಟ್ಟೇ ಮಲ್ಲಿಕಾ ಘಂಟಿಯವರನ್ನು ಅವರು ನೀಡಿರುವರೆಂಬ ಹೇಳಿಕೆಯಿಂದಾಗಿ ವಿವಾದದ ಸುಳಿಯಲ್ಲಿ ಸಿಲುಕಿಸಿರುವಂತಿದೆ. ‘‘ಸೂಟ್ ಕೇಸ್ ತುಂಬ ದುಡ್ಡು ತೆಗೆದುಕೊಂಡು ಹೋದರೆ ವಿಧಾನ ಸೌಧದಲ್ಲಿ ಕೆಲಸವಾಗುತ್ತದೆ’’ ಎಂಬುದಾಗಿ ಮಲ್ಲಿಕಾ ಘಂಟಿಯವರು ಹೇಳಿದ್ದಾರೆಂದು ವಿದ್ಯುನ್ಮಾನ ಮಾಧ್ಯಮದ ಕೆಲವು ವಾಹಿನಿಗಳು ಬಿತ್ತರಿಸಿದ್ದು ಸಹಜವಾಗಿಯೇ ಇದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯವರನ್ನು ಕೆರಳಿಸಿದೆ.

ವೃತ್ತಿಪರ ನೀತಿನಿಯಮಗಳನ್ನೆಲ್ಲ ಗಾಳಿಗೆ ತೂರಿರುವ ಖಾಸಗಿ ವಿದ್ಯುನ್ಮಾನ ವಾಹಿನಿಗಳಿಗಂತೂ ಇಂಥವೆಲ್ಲ ‘‘ಆಹಹಾ ಇಂದೆನಗೆ ಆಹಾರ ಸಿಕ್ಕಿತು’’ ಎಂಬಂಥ ಅತ್ಯುತ್ಸಾಹ ಉಕ್ಕಿಸುವ ಸುದ್ದಿಗಳು. ಕೆಲವು ವಾಹಿನಿಗಳಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಪೆಟ್ಟುಕೊಡಲು ಯಾವ ಅಸ್ತ್ರವಾದರೂ ನಡೆದೀತು. ಅಂತೆಯೇ ಪ್ರಧಾನ ಮಂತ್ರಿ ಮೋದಿಯವರ ಅರ್ಚನೆಗೆ ಯಾವ ಪುಷ್ಪವಾದರೂ ನಡೆದೀತು. ಮಲ್ಲಿಕಾ ಘಂಟಿಯವರದು ಎನ್ನಲಾದ ಈ ‘ಮಾತುಗಳು’ ಎಲ್ಲೆಲ್ಲಿ ಮುಟ್ಟ ಬೇಕೋ ಅಲ್ಲಲ್ಲಿಗೆ ಮುಟ್ಟಿವೆ. ಸಚಿವರಿಗೆ ಕೋಪಬರಿಸಿದೆ. ಬಿಜೆಪಿ ಯವರಿಗೆ ‘ಸಿದ್ದರಾಮಯ್ಯನವರನ್ನು ಬಡಿಯಲು ಇನ್ನೊಂದು ಕೋಲು’ ಸಿಕ್ಕಿತೆಂದು ಸಂತೋಷ ಉಂಟುಮಾಡಿದೆ. ಈ ಮಧ್ಯೆ ಮಲ್ಲಿಕಾ ಘಂಟಿಯವರ ಸ್ಪಷ್ಟೀಕರಣದ ಕುರಿತು ಯಾರೂ ತಲೆಕೆಡಿಸಿಕೊಂಡಂತಿಲ್ಲ. ಮಲ್ಲಿಕಾ ಘಂಟಿಯವರ ಸ್ಪಷ್ಟನೆ ಹೀಗಿದೆ:

‘‘ಕಾಂಗ್ರೆಸ್ ಸರಕಾರದಲ್ಲಿ ಸೂಟ್‌ಕೇಸ್ ಸಂಸ್ಕೃತಿ ಇದೆ ಎಂದು ನಾನೆಲ್ಲಿಯೂ ಹೇಳಿಲ್ಲ. ಹಣ ಗಳಿಕೆಗಾಗಿ ಇಲೆಕ್ಟ್ರಾನಿಕ್ ಮಾಧ್ಯಮಗಳು ಸುಳ್ಳುಸುದ್ದಿ ಬಿತ್ತರಿಸುತ್ತಿವೆ. ಚಂದ್ರಶೇಖರ ಕಂಬಾರರು ಕುಲಪತಿಗಳಾಗಿದ್ದಾಗ ಅಂದಿನ ರಾಜಕಾರಣಿಗಳು ವಿ.ವಿ.ಗೆ ಸಂಬಂಧಿಸಿದ ವಿಚಾರಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದರು.
ಅಧಿಕಾರಿಗಳು ಕಂಬಾರರ ಕಾಗದ ಪತ್ರ ದಸ್ತಾವೇಜು ತಂಬಿದ ಸೂಟ್ ಕೇಸುಗಳನ್ನು ಇಸಿದುಕೊಂಡು ಅವುಗಳಲ್ಲಿ ಹಣ ಕೊಟ್ಟು ಕಳುಹಿಸುತ್ತಿದ್ದರು. ಈಗ ನಾನೇ ಕಾಗದ ಪತ್ರ ದಸ್ತಾವೇಜುಗಳು ತಂಬಿದ ಸೂಟ್‌ಕೇಸುಗಳನ್ನು ಹೊತ್ತು ಅಲೆದಾಡುವ ಕಾಲಬಂದಿದೆ. ಹಣ ಮಾತ್ರ ಸಿಗುತ್ತಿಲ್ಲ.......’’

ಬದಲಾಗಿರುವ ಕಾಲಮಾನವನ್ನು ತಿಳಿಸಲು ತಾವು ಸೂಟ್ ಕೇಸಿನ ರೂಪಕವನ್ನು ಬಳಸಿರುವುದಾಗಿಯೂ ಸೂಟ್‌ಕೇಸ್ ತುಂಬ ದುಡ್ಡು ತೆಗೆದು ಕೊಂಡೊಯ್ಯಬೇಕಿದೆ ಎಂದು ಹೇಳಿಲ್ಲವೆಂದು ನುಡಿದಿರುವ ಮಲ್ಲಿಕಾ ಘಂಟಿವರು ತಮ್ಮ ಹೋರಾಟ ಮನೋಭಾವಕ್ಕನು ಗುಣವಾಗಿಯೇ ‘‘ವ್ಯವಸ್ಥೆಯ ವಿರುದ್ಧ ಹಿಂದೆಯೂ ಪ್ರತಿಭಟಿಸಿದ್ದೆ ಮುಂದೆಯೂ ಪ್ರತಿಭಟಿಸುತ್ತೇನೆ’’ ಎಂದು ನುಡಿದಿದ್ದಾರೆ. ಇದ್ದೀತು. ಹಣದ ಮುಗ್ಗಟ್ಟು, ಮಂಜೂರಾತಿಯಂಥ ಆಡಳಿತಾತ್ಮಕ ಮುಜುಗರಗಳಿಂದಾಗಿ ಕನ್ನಡ ವಿ.ವಿ.ಯ ಕೆಲಸ ನನೆಗುದಿಗೆ ಬಿದ್ದಿರುವುದರಿಂದ ಉಂಟಾಗಿರುವ ದುಗುಡವನ್ನು ತೋಡಿಕೊಳ್ಳುವ ಸಂದರ್ಭದಲ್ಲಿ ಮಲ್ಲಿಕಾ ಘಂಟಿಯವರೊಳಗಣ ಕವಿ ರೂಪಕದ ಭಾಷೆಯಲ್ಲಿ ಈ ಮಾತನ್ನು ಅವರಿಂದ ಆಡಿಸಿರಬಹುದು.

ಮಲ್ಲಿಕಾ ಘಂಟಿಯವರ ವ್ಯಕ್ತಿತ್ವ ಮತ್ತು ಚಾರಿತ್ರ್ಯಗಳನ್ನು ಹತ್ತಿರದಿಂದ ಬಲ್ಲವರಿಗೆ ಅವರು ಖಂಡಿತವಾಗಿಯೂ ಸಿದ್ದರಾಮಯ್ಯನವರ ಸರಕಾರದ ವಿರುದ್ಧ ನೇರವಾಗಿ ಭ್ರಷ್ಟಾಚಾರದ ಆರೋಪ ಹೊರಿಸುವ ಈ ಮಾತು ಗಳನ್ನಾಡಿರಲಾರರು ಎನಿಸುತ್ತದೆ. ಕುಲಪತಿ ಸ್ಥಾನಕ್ಕೆ ಸಿದ್ದರಾಮಯ್ಯನವರ ಸರಕಾರದಿಂದಲೇ ನೇಮಕಗೊಂಡಿರುವ ಮಲ್ಲಿಕಾ ಘಂಟಿಯವರು ತಮ್ಮ ಸ್ವಚ್ಛಬಿಂಬಕ್ಕೇ ಕಳಂಕ ತಗುಲಿಸಬಹುದಾದಂಥ ದಡ್ಡತನವನ್ನು ಖಂಡಿತಾ ಮಾಡಿರಲಾರರು. ಸಿದ್ದರಾಮಯ್ಯನವರ ಸರಕಾರವೂ ಕನ್ನಡದ ಬಗ್ಗೆ ಉದಾರವಾಗಿಯೇ ಇದೆ. ಕನ್ನಡ ವಿ.ವಿ. ಬೆಳ್ಳಿ ಹಬ್ಬಕ್ಕೆ 25 ಕೋಟಿ ರೂ. ಬಿಡುಗಡೆ ಮಾಡಿದೆ.

ಬಹುಶ: ಅಧಿಕಾರಶಾಹಿಯ ಕೆಂಪುಪಟ್ಟಿ ವರ್ತನೆ ಗಳಿಂದಾಗಿ ಮಲ್ಲಿಕಾ ಘಂಟಿಯವರಿಗೆ ಇಂಥ ಭಾವನೆ ಬಂದಿರಲಿಕ್ಕೂ ಸಾಕು. ಈ ಕಾರ್ಮೋಡಗಳೆಲ್ಲ ಒಂದೆರಡು ದಿನಗಳಲ್ಲಿ ತಿಳಿಗೊಂಡು ಬಿಂಬಗಳು ಸ್ವಚ್ಛವಾಗಬಹುದು. ನೇಮಕಾತಿ ಇತ್ಯಾದಿ ಕನ್ನಡ ವಿ.ವಿ.ಯೋಜನೆಗಳಿಗೆ ಸರಕಾರ ಹಸಿರು ನಿಶಾನೆ ತೋರಬಹುದು. ಆದರೆ ವಿಷಾದನೀಯ ಸಂಗತಿಯೆಂದರೆ-

 ಕನ್ನಡ ಶಾಲೆಗಳ ರಿಪೇರಿ, ಕನ್ನಡ ವಿಶ್ವವಿದ್ಯಾನಿಲಯಗಳು, ಕನ್ನಡ ಮೇಷ್ಟ್ರುಗಳ ನೇಮಕ, ಕನ್ನಡ ಪುಸ್ತಕಗಳ ಸಗಟು ಖರೀದಿ ಇತ್ಯಾದಿ ಬಾಬ್ತುಗಳಿಗೇ ಏಕೆ ಕನ್ನಡ ಉದಾರಿ ಸರಕಾರದಿಂದ ಅಡಚಣೆಯುಂಟಾಗುತ್ತದೆ?ಕನ್ನಡದ ಕೆಲಸಗಳಿಗೇಕೆ ಹಣಕಾಸಿನ ಮುಗ್ಗಟ್ಟು ಎದುರಾಗುತ್ತದೆ? ಯಾರು ಉತ್ತರಿಸ ಬಹುದು ಈ ಪ್ರಶ್ನೆಗಳಿಗೆ?

ಮಲ್ಲಿಕಾ ಘಂಟಿಯವರು ಸೂಟ್ ಕೇಸಿನ ಮಾತನ್ನು ನಿರಾಕರಿಸಿದ್ದಾರೆ, ತಮ್ಮ ಮಾತಿಗೆ ತಪ್ಪರ್ಥ ಕಲ್ಪಿಸಲಾಗಿದೆ ಎಂದಿದ್ದಾರೆ. ಇದ್ದೀತು. ಹಾಗೆಂದ ಮಾತ್ರಕ್ಕೆ ಸರಕಾರದಲ್ಲಿ ಎಲ್ಲವೂ ಸರಿಯಿದೆ ಎಂದು ಅರ್ಥವಲ್ಲ. ಪ್ರತಿಭಟನೆ ಮುಂದುವರಿಸುತ್ತೇನೆ ಎನ್ನುವ ಅವರ ಮಾತು ವಿ.ವಿ.ಗೆ ಸಂಬಂಧಿಸಿದಂತೆ ಆಡಳಿತ ಯಂತ್ರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎನ್ನುವುದನ್ನು ಧ್ವನಿಸುತ್ತದೆ. ಮುಖ್ಯ ಮಂತ್ರಿಗಳು ಕನ್ನಡ ವಿ.ವಿ.ಯ ಸಮಸ್ಯೆಗಳತ್ತ ಗಮನಹರಿಸಿ ಅವುಗಳನ್ನು ಪರಿಹರಿಸುವುದು ಮಾತ್ರವಲ್ಲದೆ ಮುಂದೆ ಇಂಥ ಸಮಸ್ಯೆಗಳು ಉದ್ಭವಿಸಲು ಅವಕಾಶ ಕೊಡದಂತೆ ಅಧಿಕಾರಶಾಹಿಗೆ ತಕ್ಕ ಚಿಕಿತ್ಸೆ ಮಾಡಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)