varthabharthi

ಸಂಪಾದಕೀಯ

ಬ್ಯಾಂಕಿಂಗ್ ಪರೀಕ್ಷೆಗೆ ಹಿಂದಿ ಹೇರಿಕೆ ಬೇಡ

ವಾರ್ತಾ ಭಾರತಿ : 20 Sep, 2017

ಏಕ ಧರ್ಮ, ಏಕ ಸಂಸ್ಕೃತಿ, ಏಕ ಭಾಷೆ ಎಂಬ ರಹಸ್ಯ ಕಾರ್ಯಸೂಚಿಯನ್ನು ಇಟ್ಟುಕೊಂಡು ಭಾರತದ ವೈವಿಧ್ಯತೆಯನ್ನು ನಾಶ ಮಾಡಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹುನ್ನಾರ ನಡೆಸಿದೆ. ಕೇಂದ್ರ ಸರಕಾರದ ಹಿಂದಿ ಭಾಷೆಯನ್ನು ಹೇರುವ ನೀತಿಯ ವಿರುದ್ಧ ಹಿಂದಿಯೇತರ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಕನ್ನಡ ಸೇರಿದಂತೆ ದೇಶದ ಎಲ್ಲ ಪ್ರಾದೇಶಿಕ ಭಾಷೆಗಳು ರಾಷ್ಟ್ರ ಭಾಷೆಗಳೇ ಎಂದು ಸಂವಿಧಾನ ಹೇಳುತ್ತದೆ. ಆದರೆ, ಐದಾರು ರಾಜ್ಯಗಳ ಜನರು ಮಾತನಾಡುವ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆ ಎಂದು ಸಂಘಪರಿವಾರ ಪ್ರತಿಪಾದಿಸುತ್ತಿದೆ. ಸಂಘಪರಿವಾರದ ಈ ಪ್ರತಿಪಾದನೆಗೆ ಪೂರಕವಾಗಿ ಹಿಂದಿಯನ್ನು ದೇಶದ ಮೇಲೆ ಬಲವಂತವಾಗಿ ಹೇರಲು ಕೇಂದ್ರ ಸರಕಾರ ಯತ್ನಿಸುತ್ತಿದೆ. ಗ್ರಾಮೀಣ ಬ್ಯಾಂಕ್‌ಗಳ ಅಧಿಕಾರಿಗಳು ಹಾಗೂ ಕಚೇರಿ ಸಹಾಯಕರ ಹುದ್ದೆಗಳಿಗಾಗಿ ದೇಶವ್ಯಾಪಿ ನಡೆಯುತ್ತಿರುವ ಪ್ರಾಥಮಿಕ ಪರೀಕ್ಷೆಯಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಹೇರಿದ ಕ್ರಮದ ವಿರುದ್ಧ ಕರ್ನಾಟಕದಲ್ಲಿ ಇತ್ತೀಚೆಗೆ ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡ ಅಭ್ಯರ್ಥಿಗಳು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಕೇಂದ್ರ ಸರಕಾರದ ಕ್ರಮದಿಂದ ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಕೆಲ ಪರೀಕ್ಷಾ ಕೇಂದ್ರಗಳಿಗೆ ಕಳೆದವಾರ ಮುತ್ತಿಗೆ ಹಾಕಿದ ಪರಿಣಾಮವಾಗಿ ಪೊಲೀಸ್ ಭದ್ರತೆಯಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳು ನಡೆದವು.

ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಬಳ್ಳಾರಿ, ದಾವಣಗೆರೆ ಮತ್ತು ಶಿವಮೊಗ್ಗ ಸೇರಿದಂತೆ 20ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಡೆದ ಈ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನಡೆಸುತ್ತಿರುವುದಕ್ಕೆ ಅಭ್ಯರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಪರೀಕ್ಷೆ ಬರೆಯುವವರಿಗೆ ಪ್ರಾದೇಶಿಕ ಭಾಷೆಯ ಜ್ಞಾನ ಕಡ್ಡಾಯ ಎಂಬ ನಿಯಮ ಇಲ್ಲದೇ ಇರುವುದರಿಂದ ಹೊರ ರಾಜ್ಯದ ಅಭ್ಯರ್ಥಿಗಳು ಕರ್ನಾಟಕಕ್ಕೆ ಬಂದು ಪರೀಕ್ಷೆ ಬರೆದು ಈ ರಾಜ್ಯದ ಜನರ ಉದ್ಯೋಗಾವಕಾಶಗಳನ್ನು ಕಿತ್ತುಕೊಳ್ಳುತ್ತಿದ್ದಾರೆಂಬ ಪ್ರತಿಭಟನೆ ನ್ಯಾಯ ಸಮ್ಮತವಾಗಿದೆ. ಬಲವಂತವಾಗಿ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಹೇರುತ್ತಿರುವ ಕೇಂದ್ರ ಸರಕಾರದ ನೀತಿಯ ವಿರುದ್ಧ ಇತ್ತೀಚೆಗೆ ತೀವ್ರಗೊಳ್ಳುತ್ತಿರುವ ಆಂದೋಲನ ಈ ಪರೀಕ್ಷೆಗಳ ಸಂದರ್ಭದಲ್ಲೂ ಮುಂದುವರಿದಿದೆ. ಕಳೆದ ತಿಂಗಳು ಬೆಂಗಳೂರು ಮೆಟ್ರೋದಲ್ಲಿ ಹಿಂದಿ ಹೇರಿಕೆಯನ್ನು ಪ್ರತಿಭಟಿಸಿ ಚಳವಳಿ ನಡೆಸಿದ ಕನ್ನಡಿಗರು ಜಯಶಾಲಿಗಳಾಗಿದ್ದರು. ಈ ಗೆಲುವಿನ ಉತ್ಸಾಹದ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಹಾಗೂ ಅಂತಿಮವಾಗಿ ಬ್ಯಾಂಕ್‌ಗಳಲ್ಲಿ ನಡೆಯುತ್ತಿರುವ ಹಿಂದಿ ಹೇರಿಕೆ ವಿರುದ್ಧ ಕನ್ನಡಿಗರು ಈಗ ಸಂಘಟಿತರಾಗುತ್ತಿದ್ದಾರೆ. ಹಿಂದಿ ಹೇರಿಕೆ ವಿರುದ್ಧ ಕನ್ನಡಿಗರು ನಡೆಸಿದ ಹೋರಾಟ ನ್ಯಾಯಸಮ್ಮತವಾಗಿದೆ. ಹಿಂದಿ ಭಾಷಿಕರೇ ಇಲ್ಲದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಗ್ರಾಮೀಣ ಬ್ಯಾಂಕ್‌ಗಳ ಹುದ್ದೆಗಳಿಗೂ ಉತ್ತರ ಭಾರತದ ಕೆಲ ರಾಜ್ಯಗಳ ಪ್ರಾದೇಶಿಕ ಭಾಷೆಯಾದ ಹಿಂದಿಯನ್ನು ಹೇರಿಕೆ ಮಾಡುವುದು ಅನ್ಯಾಯದ ಪರಮಾವಧಿ ಆಗುತ್ತದೆ. ಇದೊಂದು ತರ್ಕಹೀನ ಕ್ರಮವಾಗಿದೆ. ರಾಜ್ಯದಲ್ಲಿ ಇರುವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಈಗಾಗಲೇ ಬಹುತೇಕ ಕಡೆ ಕನ್ನಡ ಭಾಷೆಯ ಗಂಧಗಾಳಿಯನ್ನೂ ಅರಿಯದ ಉತ್ತರ ಭಾರತದ ರಾಜ್ಯಗಳ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಕನ್ನಡ ಭಾಷೆ ಗೊತ್ತಿಲ್ಲದ ಈ ಸಿಬ್ಬಂದಿಯಿಂದ ಕನ್ನಡದ ಗ್ರಾಹಕರಿಗೆ ತುಂಬಾ ತೊಂದರೆಯಾಗಿದೆ. ಬೇರೆ ರಾಜ್ಯಗಳಿಂದ ವರ್ಗಾವಣೆಯಾಗಿ ಬರುವ ಈ ಸಿಬ್ಬಂದಿ ಈ ನೆಲದ ಭಾಷೆಯನ್ನು ಕಲಿಯಲು ಯಾವುದೇ ಆಸಕ್ತಿಯನ್ನು ತೋರಿಸುವುದಿಲ್ಲ. ಹೀಗಾಗಿ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲದ ಕನ್ನಡ ಗ್ರಾಹಕರಿಗೆ ತೊಂದರೆಯಾಗಿದೆ. ರಾಷ್ಟ್ರೀಕೃತ ಹಾಗೂ ಗ್ರಾಮೀಣ ಬ್ಯಾಂಕ್‌ಗಳಿಗೆ ನೌಕರರನ್ನು ನೇಮಕ ಮಾಡಲು ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದ ಹಾಗೂ ಭಾರತೀಯ ಬ್ಯಾಂಕ್‌ಗಳ ಸಂಘದಿಂದ ಅನುಮೋದಿತವಾದ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಮಿತಿ(ಐಬಿಪಿಎಸ್) ರಾಷ್ಟ್ರ ಮಟ್ಟದಲ್ಲಿ ಕಾಲಕಾಲಕ್ಕೆ ಪರೀಕ್ಷೆಗಳನ್ನು ನಡೆಸುತ್ತಾ ಬಂದಿದೆ. ಈ ಸಂಸ್ಥೆ ಗ್ರಾಮೀಣ ಬ್ಯಾಂಕ್‌ಗಳಿಗೆ ನೇಮಕ ಮಾಡಿಕೊಳ್ಳಲು ನಡೆಸುವ ಪರೀಕ್ಷೆಗೆ ಆರ್‌ಬಿಐ ಪರೀಕ್ಷೆ ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದಿರುವುದು ಆರ್‌ಬಿಐ ಪರೀಕ್ಷೆ. ಈಗಾಗಲೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಐಬಿಪಿಎಸ್ ಪರೀಕ್ಷೆಯ ಪರಿಣಾಮವಾಗಿ ದೇಶವ್ಯಾಪಿಯಾಗಿ ಬ್ಯಾಂಕ್ ಶಾಖೆಗಳಲ್ಲಿ ಆಯಾ ರಾಜ್ಯಗಳ ಭಾಷೆಗಳನ್ನು ತಿಳಿದವರಿಗಿಂತ ಹೆಚ್ಚಾಗಿ ಹಿಂದಿ ಭಾಷಿಕ ಸಿಬ್ಬಂದಿಯೇ ತುಂಬಿಕೊಂಡಿದ್ದಾರೆ. ಹಿಂದಿ ಅಥವಾ ಇಂಗ್ಲಿಷ್ ತಿಳಿಯದ ಕೇವಲ ಕನ್ನಡ ಅಥವಾ ಪ್ರಾದೇಶಿಕ ಭಾಷೆಯನ್ನು ಮಾತ್ರ ತಿಳಿದ ಜನಸಾಮಾನ್ಯರು ಬ್ಯಾಂಕ್‌ಗಳಿಗೆ ಹೋದರೆ ಅಲ್ಲಿನ ತಮ್ಮ ವ್ಯವಹಾರಕ್ಕಾಗಿ ತುಂಬಾ ಪರದಾಡಬೇಕಾಗುತ್ತದೆ. ಈಗಲಾದರೂ ಕೇಂದ್ರ ಸರಕಾರ ಎಚ್ಚೆತ್ತು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿರುವ ಈ ಲೋಪಗಳನ್ನು ಸರಿಪಡಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಗಳಲ್ಲಿ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯನ್ನು ತಿಳಿದ ನೌಕರರನ್ನು ಮಾತ್ರ ನೇಮಕ ಮಾಡಿಕೊಳ್ಳಬೇಕು. ಈಗ ಇದ್ದುದರಲ್ಲಿ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆಯನ್ನು ತಿಳಿದ ನೌಕರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಏಕೆಂದರೆ 2013ರಲ್ಲಿ ನಡೆದ ಆರ್‌ಬಿಐ ಪರೀಕ್ಷೆಯಲ್ಲಿ ಎಸೆಸೆಲ್ಸಿ ಅಥವಾ ಪಿಯುಸಿಯವರೆಗೆ ಸ್ಥಳೀಯ ಭಾಷೆಯನ್ನು ಕಡ್ಡಾಯವಾಗಿ ಓದಿದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿತ್ತು. ಆದರೆ, 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ನಿಯಮವನ್ನು ಬದಲಾವಣೆ ಮಾಡಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ. ಹಿಂದಿ ಲಾಬಿಯ ಒತ್ತಡವೇ ಇದಕ್ಕೆ ಕಾರಣವಾಗಿದೆ. ಹೀಗಾಗಿ ಆಯಾ ರಾಜ್ಯಗಳಲ್ಲಿನ ಜನರ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ. ದೇಶದ ಗ್ರಾಮೀಣ ಜನತೆಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸುತ್ತಿರುವ ಕೆಲ ಹಂತದ ಕೇಂದ್ರಗಳೆಂದರೆ ಗ್ರಾಮೀಣ ಬ್ಯಾಂಕ್‌ಗಳು. ಅಲ್ಲಿ ಸ್ಥಳೀಯ ಭಾಷೆ ಗೊತ್ತಿಲ್ಲದ ನೌಕರರನ್ನು ನೇಮಕ ಮಾಡಿ ತಂದು ಕೂರಿಸಿದರೆ ಹಳ್ಳಿಗಳ ಜನ ತುಂಬಾ ತೊಂದರೆ ಪಡುತ್ತಾರೆ. ಅಂತಲೇ ಹಿಂದಿ ಹೇರಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. 60ರ ದಶಕದಲ್ಲಿ ಬಲವಂತದ ಹಿಂದಿ ಹೇರಿಕೆಯನ್ನು ವಿರೋಧಿಸಿ ತಮಿಳುನಾಡಿನಲ್ಲಿ ಭಾರೀ ಜನಾಂದೋಲನ ನಡೆದಿತ್ತು. ಇದು ಎಲ್ಲಿಯವರೆಗೆ ಮುಂದುವರಿಯಿತೆಂದರೆ ಪ್ರತ್ಯೇಕ ತಮಿಳುನಾಡಿಗಾಗಿ ಜನ ಬೇಡಿಕೆ ಮುಂದಿಟ್ಟರು. ಆಗ ತಕ್ಷಣ ಎಚ್ಚೆತ್ತ ನೆಹರೂ ಸರಕಾರ ಹಿಂದಿ ಹೇರಿಕೆ ನೀತಿಯನ್ನು ಕೈಬಿಟ್ಟಿತು. ತ್ರಿಭಾಷಾ ಸೂತ್ರ ವನ್ನು ಜಾರಿಗೆ ತಂದಿತು. ಇಂದಿಗೂ ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾಗುತ್ತಲೇ ಇದೆ. ಜನಸಂಘದ ಕಾಲದಿಂದಲೂ ಭಾರತೀಯ ಜನತಾಪಕ್ಷ ಭಾರತವನ್ನು ನೋಡುವುದು ಧರ್ಮದ ಆಧಾರದಲ್ಲಿ. ಸಂಘಪರಿವಾರದ ಸಿದ್ಧಾಂತದಲ್ಲಿ ರಾಷ್ಟ್ರೀಯ ವೈವಿಧ್ಯತೆಗೆ ಅವಕಾಶವಿಲ್ಲ. ಆರೆಸ್ಸೆಸ್ ಸಿದ್ಧಾಂತವನ್ನು ಒಪ್ಪಿಕೊಂಡು ಏಕ ಭಾಷೆ, ಏಕ ಧರ್ಮ, ಏಕ ಸಂಸ್ಕೃತಿಯನ್ನು ದೇಶದ ಮೇಲೆ ಹೇರಲು ನರೇಂದ್ರ ಮೋದಿ ಸರಕಾರ ಹೊರಟಿರುವುದರಿಂದ ದಕ್ಷಿಣದ ರಾಜ್ಯಗಳಲ್ಲಿ ಮಾತ್ರವಲ್ಲ ಈಶಾನ್ಯ ರಾಜ್ಯಗಳಲ್ಲೂ ಪ್ರತಿರೋಧ ವ್ಯಕ್ತವಾಗುತ್ತಿವೆ. ಯುಪಿಎಸ್ಸಿ ಪರೀಕ್ಷೆಗಳು ಪ್ರಾದೇಶಿಕ ಭಾಷೆಯಲ್ಲಿ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆಯನ್ನು ಕಡೆಗಣಿಸಿ ಹಿಂದಿ ಮತ್ತು ಇಂಗ್ಲಿಷ್‌ನ್ನು ಹೇರುತ್ತಿರುವುದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟಾಗಿದೆ. ಈ ಹೇರಿಕೆ ಇದೇ ರೀತಿ ಮುಂದುವರಿದರೆ ಈ ದೇಶದಲ್ಲಿ ಪ್ರತ್ಯೇಕತಾವಾದ ನಾನಾ ಸ್ವರೂಪಗಳಲ್ಲಿ ತಲೆ ಎತ್ತುತ್ತದೆ.
ಕರ್ನಾಟಕದ ಕೃಷ್ಣಾ ಗ್ರಾಮೀಣ ಬ್ಯಾಂಕ್, ಕಾವೇರಿ ಗ್ರಾಮೀಣ ಬ್ಯಾಂಕ್ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸೇರಿದಂತೆ ದೇಶದಲ್ಲಿ 56 ಗ್ರಾಮೀಣ ಬ್ಯಾಂಕ್‌ಗಳು ಅಸ್ತಿತ್ವದಲ್ಲಿವೆ. ಈ ಬ್ಯಾಂಕ್‌ಗಳಲ್ಲಿ ಆಯಾ ರಾಜ್ಯಗಳ ಸ್ಥಳೀಯ ಭಾಷೆಗೆ ಆದ್ಯತೆ ದೊರೆಯಬೇಕಾಗಿದೆ. ಇದಕ್ಕಾಗಿ ಈ ರಾಜ್ಯಗಳ ಜನ ಮುಂದಿಟ್ಟಿರುವ ಬೇಡಿಕೆ ನ್ಯಾಯಸಮ್ಮತವಾಗಿದೆ. ಇನ್ನುಮುಂದೆ ಬ್ಯಾಂಕ್ ನೇಮಕಾತಿ ಪರೀಕ್ಷೆಗಳು ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ ನಡೆಯುವುದು ಅಗತ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)