varthabharthi

ಅನುಗಾಲ

ನೆರಳ ನೀಡಿದ ಮರವ ಮರೆತರೆ...

ವಾರ್ತಾ ಭಾರತಿ : 21 Sep, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಇಂತಹ ಯೋಜನೆಗಳು ಎಷ್ಟರ ಮಟ್ಟಿಗೆ ಜನೋಪಯೋಗಿ ಯೆಂಬುದು ಚರ್ಚೆಯ ವಿಷಯ. ಆದರೆ ಕೊನೇ ಪಕ್ಷ ಇವೆಲ್ಲ ಮಾಯಾಬಝಾರ್ ನಿರ್ಮಾಣವಲ್ಲ, ಬದಲಾಗಿ ಅನೇಕ ವರ್ಷಗಳ ದುಡಿಮೆಯ ಫಲ ಮತ್ತು ಇದರಲ್ಲಿ ಭಾಗಿಯಾದ ಪೂರ್ವಸೂರಿಗಳು ಹಲವರಿದ್ದಾರೆಂಬುದನ್ನು ನೆನಪಿಟ್ಟುಕೊಂಡು ಅವರಿಗೆ ಸಲ್ಲತಕ್ಕ ಗೌರವವನ್ನು ನೀಡದಿದ್ದರೆ ಭವಿಷ್ಯ ಅದಕ್ಕೆ ಉತ್ತರಿಸುತ್ತದೆ.


ಬಹಳಷ್ಟು ಸಲ ಪುನರುಕ್ತಿಗೊಂಡ, ಅಮೆರಿಕದ ಯಶಸ್ವಿ, ಜನಪ್ರಿಯ ಅಧ್ಯಕ್ಷರಾಗಿದ್ದ, ಕೊನೆಗೆ ಹಂತಕನ ಬುಲೆಟಿಗೆ ಗುರಿಯಾಗಿ ಅಸುನೀಗಿದ ಅಬ್ರಹಾಂ ಲಿಂಕನ್ ಅವರ ಒಂದು ಮಾತು ಹೀಗಿದೆ: ‘‘ನೀವು ಎಲ್ಲರನ್ನೂ ಕೆಲವು ಸಮಯ ಮರುಳುಮಾಡಬಹುದು, ಮತ್ತು ಕೆಲವು ಮಂದಿಯನ್ನು ಎಲ್ಲ ಸಮಯವೂ ಮರುಳು ಮಾಡಬಹುದು, ಆದರೆ ಎಲ್ಲರನ್ನೂ ಎಲ್ಲ ಕಾಲದಲ್ಲೂ ಮರುಳುಮಾಡಲು ಸಾಧ್ಯವಿಲ್ಲ.’’ ಯಾವುದೇ ಸಂದರ್ಭದಲ್ಲೂ ಇದು ಅನ್ವಯವಾಗುವ ಸತ್ಯ. ಆದರೆ ಈ ಮಾತನ್ನು ಸುಳ್ಳು ಮಾಡಬಹುದೆಂದು ಭಾರತದ ಪ್ರಧಾನಿ ಮೋದಿಯವರು ತೋರಿಸಿಕೊಟ್ಟಿದ್ದಾರೆ. ಇದಕ್ಕಾಗಿ ಅವರು ಅಭಿನಂದನಾರ್ಹರು.

ಕಳೆದ ಮೂರು ವರ್ಷಗಳಿಂದ ಆಡಳಿತವನ್ನು ಮಾಡಿದ ಮೋದಿ ಪಕ್ಷಾಧಿಕಾರಕ್ಕಿಂತ ಸರ್ವಾಧಿಕಾರಕ್ಕೆ ಹೆಚ್ಚು ಬೆಲೆಕೊಟ್ಟವರು. ಇದಕ್ಕೆ ಅವರದೇ ಪಕ್ಷವು ಕೊಡಬೇಕಾದ ಬೆಲೆಯೆಷ್ಟು ಎಂಬುದನ್ನು ಭವಿಷ್ಯವೇ ನಿರ್ಧರಿಸಬೇಕು. ಏಕೆಂದರೆ ರಾಜಕೀಯದಲ್ಲಿ ಯಾವ ತರ್ಕವೂ ತಲೆಕೆಳಗಾಗಬಹುದು. ಮತ್ಸ್ಯಪಾದವನ್ನು ಕಂಡುಹಿಡಿಯಬಹುದು, ಆದರೆ ಹೆಣ್ಣನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂಬ ಪಾರಂಪರಿಕ ಸುಳ್ಳು ನಂಬಿಕೆಯನ್ನು ‘‘ಮತದಾರನನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ’’ ಎಂದು ಬದಲಾಯಿಸಿ ಹೇಳಬಹುದು. ಆದ್ದರಿಂದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಳ್ಳೆಯದನ್ನು ಮಾಡಿದವರು ಉಳಿಯುತ್ತಾರೆ, ಕೆಟ್ಟದ್ದನ್ನು ಮಾಡಿದವರು ಅಳಿಯುತ್ತಾರೆ ಎಂದು ಆಶಿಸುವುದು ಮೂರ್ಖತನ. ಈಚೆಗೆ ಸರ್ವೋಚ್ಚ ನ್ಯಾಯಾಲಯವು ಇದೇ ಅರ್ಥದಲ್ಲಿ ‘‘ಹಣ ವೆಚ್ಚಮಾಡಬಲ್ಲವರು ಜೈಲಲ್ಲಿದ್ದರೂ ಎಷ್ಟೇ ಕೆಟ್ಟದ್ದನ್ನು ಮಾಡಿದರೂ ಮತ್ತೆ ಮತ್ತೆ ಆಯ್ಕೆ ಹೊಂದುತ್ತಾರೆ’’ ಎಂದು ತನ್ನ ಖೇದವನ್ನು ವ್ಯಕ್ತಪಡಿಸಿತು.

ಮೋದಿ ಪಾರಮ್ಯದ ಆಡಳಿತಕ್ಕೆ ಇದು ಸಲೀಸಾಗಿ ಹೊಂದಿಕೊಳ್ಳುತ್ತದೆ. ಇದನ್ನು ಬೌದ್ಧಿಕವಾಗಿ ಚರ್ಚಿಸಬೇಕೇ ಹೊರತು ಭಾವುಕವಾಗಿ ಅಲ್ಲ. ದೇಶದ ಬಹುಸಂಖ್ಯಾತ ಹಿಂದುಗಳಿಗೆ ಅಸಂಖ್ಯ ದೇವರುಗಳು. ಈ ದೇವರುಗಳನ್ನು ಯಾವ ಆಧಾರದಲ್ಲಿ, ಅಥವಾ ಯಾಕೆ ಮತ್ತು ಹೇಗೆ ನಂಬುತ್ತೀರಿ ಎಂದರೆ ಉತ್ತರಿಸಲು ಬಹುಪಾಲು ಯಾರಿಗೂ ಸಾಧ್ಯವಿಲ್ಲ. ಇದೊಂದು ಕುರುಡು ನಂಬಿಕೆ- ಮುಗ್ಧತೆಯಿಂದ, ಇಲ್ಲವೇ ಅಜ್ಞಾನದಿಂದ ಹುಟ್ಟಿಕೊಂಡದ್ದು. ‘ದೇವರ ಭಯವೇ ಜ್ಞಾನದ ಆರಂಭ’ ಎಂಬುದನ್ನು ಯಾವ ನೆಲೆಯಲ್ಲಿ ಹೇಳಿದರೋ ನಾನರಿಯೆ. ಮಾರ್ಕ್ ಟ್ವೈನ್ ಹೇಳಿದಂತೆ ಮೊದಲ ಮೋಸಗಾರನು ಮೊದಲ ಮೂರ್ಖನನ್ನು ಸಂಧಿಸಿದಾಗ ಧರ್ಮವು ಸಂಶೋಧಿಸಲ್ಪಟ್ಟಿತು ಎಂದು ಹೇಳುವುದರಿಂದ ಆರಂಭಿಸಿ ಧರ್ಮವೆಂದರೆ ನಿನ್ನ ಒಳಿತಿಗಾಗಿ ನಾನೇನು ಹೇಳುತ್ತೇನೋ ಅದು ಎಂಬಲ್ಲಿಯ ವರೆಗೆ ಧರ್ಮವನ್ನು ವ್ಯಾಖ್ಯಾನಿಸಲಾಗಿದೆ. ಧರ್ಮವೆಂಬ ನಾಣ್ಯದ ಎರಡೂ ಬದಿಗಳಲ್ಲಿ ಒಂದೇ ಚಿಹ್ನೆಯಿರುವುದರಿಂದ ನೀವು ಅದನ್ನು ಹೇಗೇ ಚಿಮ್ಮಿಸಿದರೂ ಅದು ತನ್ನೆಲ್ಲ ಕುಣಿತ, ಹೊಳೆತಗಳೊಂದಿಗೆ ಕೊನೆಗೂ ಸಾರುವುದು ಒಂದನ್ನೇ. ಅದು ಇನ್ನೂ ಚಿಮ್ಮುತ್ತಲೇ ಇದೆ; ನೆಲ ತಲುಪಿಲ್ಲ; ಅನಾವರಣಗೊಂಡಿಲ್ಲ.

ನೀವು ಒಬ್ಬಾನೊಬ್ಬ ರಾಜಕೀಯ ವ್ಯಕ್ತಿಯನ್ನು ಯಾವ ಆಧಾರದಲ್ಲಿ ಅಥವಾ ಯಾಕೆ ನಂಬುತ್ತೀರಿ (ಮತ್ತು ಬೆಂಬಲಿಸುತ್ತೀರಿ) ಎಂದು ಕೇಳಿದರೆ ಅವರಿಂದ ಅಸಂಗತ ಮತ್ತು ಅಸಂಬದ್ಧ ಉತ್ತರಗಳು ಸಿಗುವುದು ಖಚಿತ. ಈ ಪೈಕಿ ಕೆಲವರಾದರೂ ತಾವೇಕೆ ನಂಬುತ್ತೇವೆ ಮತ್ತು ಬೆಂಬಲಿಸುತ್ತೇವೆಂಬುದಕ್ಕೆ ನೆಪಗಳನ್ನು ಸಿದ್ಧಪಡಿಸಿಟ್ಟುಕೊಳ್ಳುತ್ತಾರೆ; ಇನ್ನು ಕೆಲವರು ತಮ್ಮನ್ನು ಪ್ರಶ್ನಿಸಿದವರ ವಿರುದ್ಧ ಪ್ರಶ್ನಿಸಿದ್ದೇ ಕಾರಣವಾಗಿ ನಿಮಗೇಕೆ ಈ ಉಸಾಬರಿ ಅಥವಾ ನೀವ್ಯಾರು ನಮ್ಮನ್ನು ಪ್ರಶ್ನಿಸುವುದಕ್ಕೆ? ನಿಮ್ಮ ಯೋಗ್ಯತೆಯೇನು? ಅಥವಾ ನಿಮಗೆ ಉತ್ತರಿಸಬೇಕಾದ ಅಗತ್ಯ ನನಗೇನಿದೆ? ಎಂಬಂತಹ ಖಂಡನಾ ನಿರ್ಣಯಗಳನ್ನು ಸಿದ್ಧಪಡಿಸುತ್ತಾರೆ; ಇನ್ನೂ ಕೆಲವರು ಅತ್ಯಂತ ಉದ್ಧಟತನದ, ಅಜ್ಞಾನದ, ತೀರ ಕೆಳಮಟ್ಟದ (ಬೆಲ್ಟಿನ ಕೆಳಗಿನ ಎಂಬುದಕ್ಕೆ ಈಗ ಅರ್ಥವೇ ಇಲ್ಲದಾಗಿದೆ; ಏಕೆಂದರೆ ಬೆಲ್ಟಿನ ಮೇಲಿಂದು ಯಾವಾಗಲೋ ಮಾಯವಾಗಿದೆ!), ಇಲ್ಲವೇ ನೋಯುವುದಕ್ಕೇ ಇರತಕ್ಕ ಪದಸಮುಚ್ಚಯದ ಉತ್ತರಗಳನ್ನು ನೀಡುತ್ತಾರೆ.

ಇದು ಮೋದಿಯ ಪ್ರಸಂಗದಲ್ಲಂತೂ ವಾಸ್ತವ. ಮಕ್ಕಳು ಗೊತ್ತಿಲ್ಲದೆ ಆಡಿದ ಪದಕ್ಕೂ ಹೆತ್ತವರು ಅರ್ಥವನ್ನು ಪೂರೈಸುತ್ತಾರೆ. ಮಗು ಸೂಜಿಯಲ್ಲಿ ಚುಚ್ಚಿದರೆ ಆತ ವೈದ್ಯನಾಗುತ್ತಾನೆಂದು, ಉಪಕರಣಗಳನ್ನು ಬಿಚ್ಚಿದರೆ ಅಥವಾ ಮುರಿದರೆ ತಂತ್ರಜ್ಞನಾಗುತ್ತಾನೆಂದು, ವಿವರಿಸಿದ ಹೆತ್ತವರಿದ್ದಾರೆ. ಹಾಗೆಯೇ ಮೋದಿಯವರ ಎಲ್ಲ ಹೆಜ್ಜೆಗಳಿಗೂ ಸರಿಯಾಗಿ ತಾಳ ಹಾಕುವ ದೊಡ್ಡ ಗುಂಪೇ ಇದೆ. ಹೀಗಾಗಿ ಅವರು ತಾಳ ತಪ್ಪದೆ ಸರಿಯಾಗಿಯೇ ಹೆಜ್ಜೆ ಹಾಕುತ್ತಿದ್ದಾರೆಂದು ಅಂದುಕೊಳ್ಳಬಹುದು. ಮೋದಿಯವರ ದೊಡ್ಡಗುಣವೆಂದರೆ ಅವರಿಗೆ ಹಿಂದಣ ಹೆಜ್ಜೆಯ ಬಗ್ಗೆ ವಿಶ್ವಾಸವಿಲ್ಲ. ಅದನ್ನು ಅಲ್ಲಮನೊಂದಿಗೇ ಸಾಯಿಸಿದ್ದಾರೆ. ಎಲ್ಲವೂ ವಿಷ್ಣುವಿನ ಕಿವಿಯ ಅಮೇಧ್ಯದಿಂದ ಮಧುಕೈಟಭರು ಹುಟ್ಟಿದಂತೆ ತನ್ನ ವರ್ತಮಾನದ ಸೃಷ್ಟಿಯೆಂಬಂತೆ ಮಾತನಾಡುತ್ತಾರೆ. ಇದರಿಂದಾಗಿ ಗಾಂಧಿ, ನೆಹರೂ ಸೇರಿದಂತೆ ಈ ದೇಶದ ಇತಿಹಾಸದಲ್ಲಿ ಬಂದುಹೋದ ಅನೇಕ ಸ್ಮರಣೀಯರು ಯಕಶ್ಚಿತ್ ಆಗುತ್ತಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮುಂತಾದ ಅನೇಕ ಶಿಕ್ಷಣ ಸಂಸ್ಥೆಗಳು, ಭಾಕ್ರಾ ಅಣೆಕಟ್ಟಿನಂತಹ ಅನೇಕ ಯೋಜನೆಗಳು, ಭಾರೀ ಕೈಗಾರಿಕೆಗಳು ಜನರ ಮನಸ್ಸಿನಲ್ಲಿ ಸುಳಿಯಬಾರದೆಂಬ (ಸಂ)ಯೋಜಿತ ವ್ಯವಸ್ಥೆಗಳು ನಡೆಯುತ್ತಿವೆ. ಹೆಸರುಗಳು ಬದಲಾಗುತ್ತಿವೆ. ಕಳೆದ ಅನೇಕ ದಶಕಗಳಲ್ಲಿ ದೇಶದಲ್ಲಿ ಭ್ರಷ್ಟಾಚಾರ ಮತ್ತು ಕಪ್ಪು ಹಣ ವೃದ್ಧಿಯಾಗಿರುವುದು ಎಲ್ಲರ ಗಮನಕ್ಕೂ ಬಂದಿದೆ. ಪ್ರಾಯಃ ಈ ಕಾರಣಕ್ಕೇ ಎಂಬಂತೆ ಕೆಲವು ತಿಂಗಳುಗಳ ಹಿಂದೆ ದೊಡ್ಡ ಮೌಲ್ಯಗಳ ನೋಟಿನ ಅಮಾನ್ಯೀಕರಣ ನಡೆಯಿತು. ಇದರ ಆರ್ಥಿಕ ಸಿದ್ಧಾಂತ ಇನ್ನೂ ಚಿದಂಬರ ರಹಸ್ಯವಾಗಿ ಉಳಿದಿದೆ. ಮೋದಿಯವರು ಇದೊಂದು ಕಪ್ಪುಹಣವನ್ನು ಅಡಗಿಸುವ ಭಾರೀ ರಾಜಕೀಯ ಹೆಜ್ಜೆಯೆಂದು ಬಣ್ಣಿಸಿದ್ದಾರೆಯೇ ಹೊರತು ಇದರಿಂದ ದೇಶದ ಕಪ್ಪುಹಣ ಎಲ್ಲಿ ಮತ್ತು ಹೇಗೆ ಬಯಲಾಗಿದೆಯೆಂಬುದನ್ನು ಹೇಳುತ್ತಿಲ್ಲ.

ಐನೂರು ಮತ್ತು ಸಾವಿರದ ಈ ದೊಡ್ಡ ನೋಟುಗಳ ಬದಲಿಗೆ ಇವಕ್ಕೂ ಹೆಚ್ಚಿನ ಎರಡು ಸಾವಿರ ರೂಪಾಯಿಯ ನೋಟುಗಳನ್ನು ಮುದ್ರಿಸಲಾಯಿತು. ಯಾವ ತರ್ಕಕ್ಕೂ ಒಲ್ಲದ ಮತ್ತು ಒಗ್ಗದ ಈ ಯೋಜನೆಯನ್ನು ಸಮರ್ಥಿಸಿಕೊಳ್ಳಲಾರದ ರಿಸರ್ವ್ ಬ್ಯಾಂಕಿನ ಗವರ್ನರ್ ಪಟೇಲ್ ಆ ಬಗ್ಗೆ ಮಾತನಾಡುವುದನ್ನೇ ಕೈಬಿಟ್ಟರು. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಈ ಯೋಜನೆಯ ದೂರಗಾಮಿ ದುಷ್ಪರಿಣಾಮಗಳನ್ನು ತರ್ಕಬದ್ಧವಾಗಿ ಹೇಳಿದಾಗಲೂ ಅದನ್ನು ಒಂದು ರಾಜಕೀಯ ಅಭಿವ್ಯಕ್ತಿಯೆಂಬಂತೆ ಖಂಡಿಸಲಾಯಿತೇ ವಿನಾ ಉತ್ತರಿಸಲಾಗಲಿಲ್ಲ. ಪರಿಣಾಮದಲ್ಲಿ ಇದೊಂದು ತುಘಲಕ್ ಯೋಜನೆಯೆಂಬುದು ಸ್ಪಷ್ಟವಾಗಿದೆಯಾದರೂ ಬಹುತೇಕ ಎಲ್ಲ ನೋಟುಗಳೂ ಪೆವಿಲಿಯನ್ ಸೇರಿದ ಮೇಲೂ ವಿತ್ತ ಸಚಿವ ಅರುಣ್ ಜೇಟ್ಲಿಯವರು ಇದೊಂದು ಕಪ್ಪುಹಣದ ವಿರುದ್ಧದ ಮತ್ತು ಗಣಕೀಕರಣದ ಪರವಾಗಿ (ಇದು ಹೊಸ ನೆಪ!) ಸಮರ್ಥಿಸಲು ಹೆಣಗಾಡುತ್ತಿದ್ದಾರೆ.

ಚೆಸ್ (ಚದುರಂಗ) ಆಟದಲ್ಲಿ ಸೋಲುತ್ತ ಬರುವವನು ತನ್ನ ‘ರಾಜ’ನನ್ನು ಕೈಯಲ್ಲಿ ಹಿಡಿದುಕೊಂಡು ತಾನು ಸೋಲಲಾರೆ ಎಂದು ಹಠಹಿಡಿದ ಹಾಸ್ಯಾಸ್ಪದ ಮತ್ತು ದಯನೀಯ ಸ್ಥಿತಿಯನ್ನು ಈ ತಂಡ ತಲುಪಿದೆ. ಹೇಗಾದರೂ ಅಧಿಕಾರದಲ್ಲಿ ಉಳಿಯಬೇಕೆಂಬ ಮೌಲ್ಯಮುಕ್ತ ಮಹತ್ವಾಕಾಂಕ್ಷೆಯ ಹೊರತಾಗಿ ಈ ದೇಶಕ್ಕೆ ಒಳ್ಳೆಯದಾಗಬೇಕೆಂಬ ಆಶಯವೇ ಇಲ್ಲದಾಗಿದೆ. ನಂತರ ಜಿಎಸ್‌ಟಿ ಎಂಬ ಒಂದು ತೆರಿಗೆ ಪದ್ಧತಿಯನ್ನು ತರಲಾಯಿತು. ಇದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಷ್ಟೇ ಮಹತ್ವದ ವಿಚಾರವೆಂಬಂತೆ ಅಸೇತು ಹಿಮಾಚಲ ಪರ್ಯಂತ ಸಾಕಷ್ಟು ಪ್ರಚಾರ ನಡೆಸಲಾಯಿತು. ಇದೇನೂ ಒಂದು ದಿನದ ಕಾರ್ಯಾಚರಣೆಯಲ್ಲ. ಕಳೆದ ಅನೇಕ ವರ್ಷಗಳಿಂದ ಮೋದಿಯವರ ವಿರೋಧವೂ ಸೇರಿದಂತೆ ಒಂದಲ್ಲ ಒಂದು ಕಾರಣಕ್ಕೆ ಮುಂದೂಡಲ್ಪಟ್ಟ ಯೋಜನೆ ಇದು. ಆದರೆ ಇದರ ಯಶಸ್ಸನ್ನು (ಅದಿನ್ನೂ ನಿರ್ಧಾರವಾಗಬೇಕಷ್ಟೇ) ಇನ್ಯಾರಿಗೂ ಕೊಡದೆ ತಾನೇ ಪಡೆಯಬೇಕೆಂಬ ಮೋದಿ ಪ್ರಣೀತ ದುರಾಸೆ ಮೇಲ್ನೋಟಕ್ಕೇ ವಿದಿತವಾಗಿದೆ. ಆದರೆ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಈಗಿರುವ ಅಡ್ಡಿ ಆತಂಕಗಳನ್ನು ನಿವಾರಿಸಲು ಸಂಬಂಧಿತರು ಒದ್ದಾಡುತ್ತಿದ್ದಾರೆ.

ಈಗಾಗಲೇ ಇದರಲ್ಲಿನ ತಾರತಮ್ಯ ಮತ್ತು ಭ್ರಷ್ಟಾಚಾರಕ್ಕೆ ಇದು ಕಾರಣವಾಗಬಹುದೆಂಬ ಸಂಶಯ ಪ್ರಕಟವಾಗುತ್ತಿದೆ. ಬಂಡವಾಳ ಹರಿದು ಬರುವುದೆಂಬ ಆಸೆಯೂ ಕ್ಷೀಣವಾಗುತ್ತಿದೆ. ಹ್ಯುಂಡೈ ಸಂಸ್ಥೆ ಈಗಾಗಲೇ ತನ್ನ ಅಸಂತೋಷವನ್ನು ಹೊರಗೆಡಹಿದೆ. ಮೊನ್ನೆಯಷ್ಟೇ ಮೋದಿ ಗುಜರಾತಿನ ಅಹ್ಮದಾಬಾದಿನಿಂದ ಮುಂಬೈಗೆ ಜಪಾನ್ ದೇಶದ ದಯೆಯಿಂದ (ಈ ದಯೆಯನ್ನು ವಿಶ್ವ ರಾಜಕೀಯ ವರ್ತುಲದಲ್ಲಿ ಸಹಕಾರ ಎಂದು ಹೇಳಲಾಗುತ್ತಿದೆ) ಬುಲೆಟ್ ಟ್ರೈನ್ ಯೋಜನೆಗೆ ಶಿಲಾನ್ಯಾಸ ಮಾಡಿದರು. ಈ ಘಟನೆ ಅನೇಕ ವಿಶೇಷಗಳಿಗೆ ಕಾರಣವಾಯಿತು. ಜಪಾನ್ ಎಂಬ ಅಭಿವೃದ್ಧಿ ಹೊಂದಿದ ಬೃಹತ್ ಸಾರ್ವಭೌಮ ರಾಷ್ಟ್ರದ ನಾಯಕರು ಭಾರತ ಭೇಟಿಯಲ್ಲಿ ಒಂದು ರಾಜ್ಯವನ್ನೇ ಕೇಂದ್ರೀಕರಿಸಿದ್ದು ಇದೇ ಮೊದಲು. (ಜಪಾನಿನ ಪ್ರಧಾನಿ ಬುಲೆಟ್ ಟ್ರೈನಿನ ಶಿಲಾನ್ಯಾಸ ಸಮಾರಂಭದಲ್ಲಿ ಆಗಿನ ಪ್ರಧಾನಿಗಳಾಗಿದ್ದ ತನ್ನ ಅಜ್ಜ ಮತ್ತು ನೆಹರೂ ಹೇಗೆ ಪರಸ್ಪರ ಅರ್ಥಪೂರ್ಣ ಸಹಕಾರದ ಮೂಲಕ ಉಭಯ ದೇಶಗಳ ಅಭಿವೃದ್ಧಿಗೆ ನೆರವಾದರೆಂದು ಹೇಳಿದರು.) ಉಭಯ ನಾಯಕರ ರೋಡ್ ಶೋ ನಡೆಯಿತು.

ಇನ್ನೂ ಮುಖ್ಯವಾಗಿ ‘‘ಇದನ್ನು ಗುಜರಾತ್‌ನಲ್ಲೇ ಏಕೆ ಮಾಡಬೇಕು’’ ಎಂಬ ಪ್ರಶ್ನೆಗೆ ಪ್ರಧಾನಿಯೂ ಸೇರಿದಂತೆ ಸಾಕಷ್ಟು ನಾಯಕರು ಮತ್ತವರ ಬೆಂಬಲಿಗರು ‘‘ಗುಜರಾತ್ ಭಾರತದಲ್ಲಿ ಇಲ್ಲವೇ’’ ಎಂಬ ಮರುಪ್ರಶ್ನೆ ಹಾಕಿ ಕುಹಕವಾಡಿದರು. ಗುಜರಾತ್ ಅಲ್ಲದೆ ಉಳಿಕೆ ರಾಜ್ಯಗಳು ಭಾರತದಲ್ಲಿ ಇಲ್ಲವೇ ಎಂದು ಯಾರೂ ಮತ್ತೆ ಪ್ರಶ್ನೆ ಮಾಡಿದಂತಿಲ್ಲ. ಆದರೆ ಇದು ಈ ಸಮಸ್ಯೆಯ ಪರಿಹಾರವೇ ಅಲ್ಲ. ಅವಸರವಸರವಾಗಿ ಈ ಯೋಜನೆ ಗುಜರಾತಿಗೆ ಬಂದದ್ದು ಇನ್ನು ಕೆಲವೇ ತಿಂಗಳುಗಳಲ್ಲಿ ಅಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ರಾಜಕೀಯ ಲಾಭಕ್ಕಾಗಿ. ಅಷ್ಟೇ ಅಲ್ಲ, ಸರಕಾರದ ಪ್ರಾತಿನಿಧಿಕ ಸಂಸ್ಥೆಯಾದ ಮಾರುತಿ ಸುಝುಕಿಯಿಂದ ತಾನು ಗುಜರಾತಿನಲ್ಲಿ ಬಂಡವಾಳ ಹೂಡುವುದಾಗಿ ಇದೇ ಸಂದರ್ಭದಲ್ಲಿ ಹೇಳಿಸಲಾಯಿತು. ಇದಾದ ನಿಕಟೋತ್ತರದಲ್ಲೇ ಸರ್ದಾರ್ ಸರೋವರ ಯೋಜನೆಯ ಕೊನೆಯ ಹಂತದ ಉದ್ಘಾಟನೆಯೂ ಆಯಿತು. ಇದೊಂದು ವೈಯಕ್ತಿಕ ಆಚರಣೆಯೆಂಬಂತೆ ಇದನ್ನು ಮೋದಿಯವರ ಹುಟ್ಟುದಿನದಂದೇ ನೆರವೇರಿಸಲಾಯಿತು.

ಇದೂ ಮುಂದಿನ ಚುನಾವಣೆಯ ಬಳುವಳಿ. ಯಾವೊಬ್ಬ ರಾಷ್ಟ್ರನಾಯಕನೂ ಇಷ್ಟು ಅಗ್ಗವಾಗಬಾರದು. (ಅಗ್ಗವೆಂದರೆ ಶ್ರೇಷ್ಠ ಎಂಬರ್ಥವನ್ನು ತಕ್ಷಣ ಉದಾಹರಿಸಲಾಗುತ್ತದೆ!) ನ್ಯಾಯಾಧೀಶರಂತೆ, ದೇಶದ ಪ್ರಧಾನಿಯೂ ಅಧಿಕಾರ ರಾಜಕೀಯದಿಂದ ಮುಕ್ತವಾಗಿರಬೇಕು. ಚಿಲ್ಲರೆ ರಾಜಕೀಯ ಮಾಡಬಾರದು. ಕೊನೇ ಪಕ್ಷ ಅವನ್ನು ನೇಪಥ್ಯದಿಂದಲಾದರೂ ಮಾಡಬೇಕು. ಆದರೆ ಮೋದಿಯವರ ಅರ್ಥಕೋಶದಲ್ಲಿ ಇವಕ್ಕೆಲ್ಲ ಅರ್ಥವಿಲ್ಲ.

ಇಂತಹ ಯೋಜನೆಗಳು ಎಷ್ಟರ ಮಟ್ಟಿಗೆ ಜನೋಪಯೋಗಿಯೆಂಬುದು ಚರ್ಚೆಯ ವಿಷಯ. ಆದರೆ ಕೊನೇ ಪಕ್ಷ ಇವೆಲ್ಲ ಮಾಯಾ ಬಝಾರ್ ನಿರ್ಮಾಣವಲ್ಲ, ಬದಲಾಗಿ ಅನೇಕ ವರ್ಷಗಳ ದುಡಿಮೆಯ ಫಲ ಮತ್ತು ಇದರಲ್ಲಿ ಭಾಗಿಯಾದ ಪೂರ್ವಸೂರಿಗಳು ಹಲವರಿದ್ದಾರೆಂಬುದನ್ನು ನೆನಪಿಟ್ಟುಕೊಂಡು ಅವರಿಗೆ ಸಲ್ಲತಕ್ಕ ಗೌರವವನ್ನು ನೀಡದಿದ್ದರೆ ಭವಿಷ್ಯ ಅದಕ್ಕೆ ಉತ್ತರಿಸುತ್ತದೆ. ವಿಶ್ವಶ್ರೇಷ್ಠ ಉದ್ಯಮಿ ವಾರನ್ ಬಫೆ ಹೇಳಿದಂತೆ ಇಂದು ಒಬ್ಬ ಮರದ ನೆರಳಿನಲ್ಲಿದ್ದಾನೆಂದರೆ ಈ ಮರವನ್ನು ಯಾರೋ ಒಬ್ಬ ಎಂದೋ ನೆಟ್ಟಿದ್ದಾನೆಂದು ಅರ್ಥ. ನೆರಳು ನೀಡಿದ ಮರವನ್ನು ಕಡಿಯಲು, ಮೂರ್ಖರನ್ನು ಇನ್ನಷ್ಟು ಮೂರ್ಖರನ್ನಾಗಿಸಲು ಬಂದವರಿಗೆ ಈ ಅರ್ಥ ಅರ್ಥವಾಗುವುದಾದರೂ ಹೇಗೆ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)