varthabharthi

ಭೀಮ ಚಿಂತನೆ

ಬಹಿಷ್ಕೃತ ಭಾರತದ ಋಣ ಲೌಕಿಕವಾದ ಋಣ ಅಲ್ಲವೇನು?

ವಾರ್ತಾ ಭಾರತಿ : 22 Sep, 2017

ಭಾಗ-2

ಒಳ್ಳೆಯ ಕೆಟ್ಟ ಜಾಹೀರಾತುಗಳ ಮೈಲಿಗೆ ಕೂಡ ಈ ಪತ್ರಿಕೆಗೆ ಆಗಗೊಡಲಿಲ್ಲ. ಅದರಲ್ಲಿಯ ವಿಷಯಗಳಿಗೆ ದೊಡ್ಡ ದೊಡ್ಡ ಶೀರ್ಷಿಕೆಗಳನ್ನು ಕೊಟ್ಟು ಪ್ರತಿಯೊಂದು ಸಾಲಿನ ಮಧ್ಯೆ ಸಾಕಷ್ಟು ಅಂತರವಿಟ್ಟು ಸಾಕಷ್ಟು ವಿಷಯಗಳನ್ನು ಆದಷ್ಟು ಕಡಿಮೆ ಮಾಡುವ ಮೈಗಳ್ಳತನವನ್ನೂ ಅದು ಮಾಡಿಲ್ಲ. ಲೇಖನದ ಚರ್ಚೆಯ ದೃಷ್ಟಿಯಿಂದ ನೋಡಿದರೆ 'ಬಹಿಷ್ಕೃತ ಭಾರತ' ಎತ್ತಿಹಾಕುವ ಪ್ರಶ್ನೆಯೇನಲ್ಲ.

ಮಹಾರಾಷ್ಟ್ರದ ಹೊಗಲಿಕೆ ಪಡೆಯುವ ಎಲ್ಲ ಅತ್ಯುತ್ತಮ ಪತ್ರಿಕೆಗಳಲ್ಲಿ 'ಬಹಿಷ್ಕೃತ ಭಾರತ' ಒಂದು ಅನ್ನುವುದನ್ನು ನಾನು ಹೇಳುವ ಅಗತ್ಯವಿಲ್ಲ. ಈ ಪತ್ರಿಕೆಯ ದರ್ಜೆ ಎಷ್ಟು ದೊಡ್ಡದು, ಅದರಲ್ಲಿಯ ಲೇಖನಗಳು ಎಷ್ಟು ಜ್ಞಾನ ಕೊಡುವ ಹಾಗೂ ತಿಳುವಳಿಕೆ ಮೂಡಿಸುವ ಲೇಖನಗಳು ಅನ್ನುವುದರ ಪುರಾವೆಯನ್ನು ಈ ಪತ್ರಿಕೆ ಈಗಾಗಲೇ ಕೊಟ್ಟಿದೆ. ಹೀಗಿರುವಾಗ ಪತ್ರಿಕೆಯ ಅನಿಯಮಿತತೆಗೆ ಕಾರಣ ಚಂದಾದಾರರ ಕೊರತೆ ಅನ್ನುವುದರ ಬಗ್ಗೆ ನನಗೆ ನಂಬಿಕೆಯಾಗುವುದಿಲ್ಲ. 'ಬಹಿಷ್ಕೃತ ಭಾರತ'ದ ಶೋಚನೀಯ ಸ್ಥಿತಿಗೆ ಬಹಿಷ್ಕೃತ ವರ್ಗದಲ್ಲಿ ಇಂದಿಗೂ ಸಮಾಜ ಕಾರ್ಯದ ಬಗ್ಗೆ ಆಸ್ಥೆ ಇಲ್ಲದಿರುವುದೇ ಕಾರಣ. ಅವರಿಗೆ ಅಸ್ಥೆ ಇದ್ದಿದ್ದರೆ 'ಬಹಿಷ್ಕೃತ ಭಾರತ'ಕ್ಕೆ ನಷ್ಟ ಆಗುವ ಬದಲು ಅದೊಂದು ಚಮತ್ಕಾರದ ಸಾಧನವಾಗುತ್ತಿತ್ತು. ದಲಿತ ಸಮಾಜ ಸಾಕಷ್ಟು ದೊಡ್ಡ ಸಮಾಜ.

ಅವರ ಹಿತಗಳ ಬಗ್ಗೆ ಚರ್ಚಿಸುವ ಹಾಗೂ ಅವರಲ್ಲೇ ಒಬ್ಬರಿಂದ ಪ್ರಕಟಿಸಲ್ಪಡುವಂತಹ ಪತ್ರಿಕೆಯನ್ನು ಪ್ರತಿಯೊಂದು ಊರಿನ ದಲಿತರು ಸಾಮಯಿಕವಾಗಿ ಊರಿಗೊಂದು ಸಂಚಿಕೆಯಂತೆ ಖರೀದಿಸಲು ಅಡ್ಡಿ ಇಲ್ಲ. ಆದರೆ ಮೊದಲಿನಿಂದಲೇ ನಾನು ಸಣ್ಣಪುಟ್ಟ ಆಸೆಗಳನ್ನು ಇಟ್ಟುಕೊಂಡವನು. ದಲಿತ ಸಮಾಜ ಅಜ್ಞಾನಿಗಳ ಸಮಾಜ, ಅವರಿಂದ ದೊಡ್ಡ ಓದುಗರ ಗುಂಪು ಸಿಗುವುದು ಕಷ್ಟ ಅನ್ನುವುದರ ಅರಿವು ನನಗಿತ್ತು. ಆದರೆ ದಲಿತರಲ್ಲಿಯ ವಿದ್ಯಾವಂತ ಶಿಕ್ಷಕರಾದರೂ ತಮ್ಮ ಪತ್ರಿಕೆಗೆ ಬೆಂಬಲ ಕೊಡಬಹುದೆಂಬ ಭರವಸೆ ನನಗಿತ್ತು. ಅಂತಹ ಬೆಂಬಲವೇನಾದರೂ ಸಿಕ್ಕಿದ್ದರೆ 'ಬಹಿಷ್ಕೃತ ಭಾರತ' ಚಮತ್ಕಾರ ಪತ್ರಿಕೆಯಾಗುತ್ತಿಲ್ಲವಾದರೂ ನಷ್ಟವನ್ನನುಭವಿಸುತ್ತಿರಲಿಲ್ಲ. ಆದರೆ ದಲಿತರ ದುರ್ದೈವದಿಂದ ಅವರ ಶಿಕ್ಷಕರೇ ತಮ್ಮ ಕರ್ತವ್ಯ ಮರೆತರು.

ದಲಿತ ಶಿಕ್ಷಕರಲ್ಲಿ ಶೇ.75ರಷ್ಟು ಜನ ಇಂದಿಗೂ 'ಬಹಿಷ್ಕೃತ ಭಾರತ'ದ ಚಂದಾದಾರರಾಗಿಲ್ಲ ಹಾಗೂ ಚಂದಾದಾರರಾಗಿರುವವರ ವರ್ತನೆ ನಾವು ಕೇವಲ ಹಣಗಳಿಸಲು ಪತ್ರಿಕೆ ಪ್ರಕಟಿಸುತ್ತಿದ್ದೇವೆ ಅನ್ನುವಂತಿದೆ. ಇದಕ್ಕೆ ಬೇಕಾದರೆ ನಾನು ಉದಾಹರಣೆ ಕೊಡುತ್ತೇನೆ, ಒಮ್ಮೆ ಒಬ್ಬ ಶಿಕ್ಷಕನು ಪತ್ರಿಕೆ ಕೊಂಡುಕೊಂಡನು. ಕೆಲವು ಸಂಚಿಕೆಗಳ ನಂತರ ರೂಢಿಯ ಪ್ರಕಾರ ಅವನಿಗೆ 3ರೂ. ನಾಲ್ಕಾಣೆಯ ವಿ.ಪಿ ಕಳುಹಿಸಿಕೊಡಲಾಯಿತು. ಮೊದಲು ಆತ ಅದನ್ನು ಸ್ವೀಕರಿಸಿಲ್ಲ. ಮುಂದೊಂದು ದಿನ ಈತನೆ 2ರೂಪಾಯಿ 14ಆಣೆಯ ಮನಿ ಆರ್ಡರ್ ಮಾಡಿ ''ನನ್ನ ಚಂದಾ ಮೂರು ರೂಪಾಯಿ ಅದರಲ್ಲಿ ಎರಡಾಣೆಯನ್ನು ಮನಿ ಆರ್ಡರಿನ ಖರ್ಚಾಗಿ ಕಳೆದು 2 ರೂ 14 ಆಣೆ ಕಳುಹಿಸಿದ್ದೇನೆ, ಪತ್ರಿಕೆ ಕಳಿಸುದನ್ನು ಮುಂದುವರಿಸಿ'' ಎಂದು ಬರೆದು ಕಳಿಸಿದ. ನಿಜ ಹೇಳಬೇಕೆಂದರೆ ಆ ಮನುಷ್ಯ ಪತ್ರಿಕೆಗೆ ಖರ್ಚು ಮಾಡಿದ ಹಣ ಮರುಪಾವತಿಸಲು 3ರೂಪಾಯಿ 14 ಆಣೆಯ ಮನಿಆರ್ಡರ್ ಕಳುಹಿಸಬೇಕಿತ್ತು. ಆದರೆ ಹಾಗೇನು ಮಾಡದೆ 6 ಆಣೆಯ ನಷ್ಟ ಮಾಡಿದ್ದಕ್ಕೆ ಗೊಣಗಾಡಿದ ಹಾಗೂ ಕೆಳಗಿನಂತೆ ಕಾಗದ ಬರೆದು ಕಳಿಸಿದ.
ಅನೇಕಾನೇಕ ಸಾಷ್ಟಾಂಗ ನಮಸ್ಕಾರಗಳು,
(ದೇವರು ನನಗೆ ಸ್ವಾರ್ಥ ಬುದ್ಧಿಯನ್ನು ಕೊಟ್ಟೇಯಿಲ್ಲ) ನನ್ನ ಕಾರ್ಡಿನೊಳಗೆ ನಿಮಗೆ ಉತ್ತರಿಸಲು ಸುಲಭವಾಗಲೆಂದು ಜೋಡಿ ಕಾರ್ಡನ್ನು ಕಳುಹಿಸಿದ್ದೆ. ಅದರಲ್ಲಿ ನೀವು ಇನ್ನು ಒಂದೂವರೆ ರೂಪಾಯಿ ಕಳುಹಿಸಿದರೆ ಸಂಚಿಕೆಯನ್ನು ಕಳುಹಿಸುತ್ತೇವೆ ಎಂದು ಬರೆದಿದ್ದೀರಿ. ನಾನು ಒಂದೂವರೆ ರೂಪಾಯಿ ಕಳುಹಿಸಲು ಸಿದ್ಧನಿದ್ದೇನೆ. ಆದರೆ ನೀವು ಇಷ್ಟು ದೊಡ್ಡ ವ್ಯಕ್ತಿಗಳಾಗಿದ್ದರೂ ನನಗೆ ನಿಮ್ಮ ಮೇಲೆ ಸ್ವಲ್ಪವೂ ನಂಬಿಕೆಯಿಲ್ಲ. ನಾನೇನು ಯಾರನ್ನೂ ಲೂಟಿ ಮಾಡಲು ಕುಳಿತಿಲ್ಲ ಮಹಾಶಯರೆ.

ಶ್ರೀ--- ಅವರು ನೂರಾರು ಜನರ ಚಂದಾಗಳನ್ನು ನುಂಗಿದರು. ಶ್ರೀ---- ಅವರು ಕೂಡಾ ಚಂದಾ ಹಣವನ್ನು ಕಬಳಿಸಿ ಮೋಸ ಮಾಡಿದರು. ಹಾಗೆಯೇ ಶ್ರೀ----- ಅವರು ಕೂಡಾ ನಮ್ಮ ಚಂದಾ ಹಣವನ್ನು ಕಬಳಿಸಿದರೂ ನಾನು ಅತ್ತ ಹೆಚ್ಚು ಗಮನಕೊಡಲಿಲ್ಲ. ಆದರೆ ತಾವು ಕೇವಲ ಒಂದೂವರೆ ರೂಪಾಯಿಗೋಸ್ಕರ ನನ್ನ ಸಂಚಿಕೆಯನ್ನು ನಿಲ್ಲಿಸಿದಿರಿ. ಸುಮಾರು ಪತ್ರಕರ್ತರು ನನ್ನ ಹಣ ಕಬಳಿಸಿದ್ದಾರೆ, ನಾನು ಯಾರದ್ದೇ ಒಂದು ನಯಾ ಪೈಸೆಯನ್ನೂ ಮುಳುಗಿಸಿದವನಲ್ಲ. ಈ ಒಂದೂವರೆ ರೂಪಾಯಿಯಿಂದ ನನಗೇನು ಲಾಭ? ಸಮಾಜಹಿತವಾಗಬೇಕು ಆದರೆ ಸ್ವಾರ್ಥವಿರಬಾರದು ಅನ್ನುವುದು ನನ್ನ ಅನಿಸಿಕೆ.''

ಕೆಲವು ಚಂದಾದಾರರ ವರ್ತನೆ ಸಾಕಷ್ಟು ದುರಗ್ರಹಪೀಡಿತವಾಗಿ ರುತ್ತದೆ. ಮೇಲಿನ ಹಠಮಾರಿ ಚಂದಾದಾರನಿಗೆ ನಮಗೂ ಮೋಸವಾಗುತ್ತಿದೆ, ನಮ್ಮ ಹಣವನ್ನೂ ಜನ ಹೇಗೆ ಕಬಳಿಸುತ್ತಿದ್ದಾರೆ ಅನ್ನುವುದನ್ನು ನನಗೆ ಒಂದು ಉದಾಹರಣೆಯ ಮೂಲಕ ಹೇಳುವುದಿದೆ. ''ಸರ್, ಸುಮಾರು ನಾಲ್ಕು ನೂರು ಜನ ಚಂದಾದಾರರಾಗಿ ನಮ್ಮ ಒಂಬತ್ತು ಹತ್ತು ಸಂಚಿಕೆಗಳನ್ನು ಕೊಂಡು ವಿ.ಪಿಯ ಸಮಯ ಬಂದಾಗ ವಿ.ಪಿಯನ್ನು ನಿರಾಕರಿಸಿ ವಿ.ಪಿಯ ಖರ್ಚು ಹಾಗೂ ಕಳೆದ ಸಂಚಿಕೆಯ ಖರ್ಚಿನ ಭಾರವನ್ನು ಪತ್ರಿಕೆಯ ಮೇಲೆ ಹೇರಿದರು.'' ನಿಜ ಹೇಳಬೇಕೆಂದರೆ ಈ ಬೇಜವಾಬ್ದಾರಿ ವರ್ತನೆಗೆ ಯಾವುದೇ ಕಾರಣವಿಲ್ಲ.

ಆರಂಭದಲ್ಲಿ 'ಬಹಿಷ್ಕೃತ ಭಾರತ'ವನ್ನು ಕಳುಹಿಸಿದ ಎಲ್ಲರಿಗೂ ''ನೀವು ಚಂದಾದಾರರಾಗುತ್ತೀರಿ ಅನ್ನುವ ಭರವಸೆಯ ಮೇರೆಗೆ ಈ ಸಂಚಿಕೆಯನ್ನು ಕಳುಹಿಸುತ್ತೇವೆ, ನೀವು ಚಂದಾದಾರರಾಗಬಯಸದಿದ್ದರೆ ಹಾಗೆಂದು ಈ ಪತ್ರದ ಮೂಲಕ ತಿಳಿಸಿ, ಹಾಗೆ ತಿಳಿಸದಿದ್ದರೆ ನೀವು ಚಂದಾದಾರರಾಗಬಯಸುತ್ತೀರಿ ಎಂದು ತಿಳಿದು ಸಂಚಿಕೆ ಕಳುಹಿಸುವುದನ್ನು ಮುಂದುವರಿಸುತ್ತೇವೆ'' ಎಂದು ಎಲ್ಲರಿಗೂ ತಿಳಿಸಲಾಗಿತ್ತು. ಆದರೆ ಸುಪ್ರಸಿದ್ಧ ಕ್ರಿಕೆಟ್ ಆಟಗಾರ ಹಾಗೂ ದಾಭೋಳಿ ಚಮ್ಮಾರರ ಹಿತಕ್ಕಾಗಿ ಸಾಮಾಜಿಕ ಚಳವಳಿಯ ಹೊಸ ಕ್ರೀಡಾಂಗಣದ ಮೇಲೆ ಅದೇ ಹಳೆಯ ಉತ್ಸಾಹದಿಂದ ಇಳಿದಿದ್ದ ಬಾಳು ಬಾಬಾಜಿ ಪಾಲವಣಕರ್ ಅವರನ್ನು ಬಿಟ್ಟರೆ ಬೇರೆ ಯಾವುದೇ ಚಂದಾದಾರರು ಈ ನಮ್ಮ ಸೂಚನೆಯ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಈ ಕ್ರಿಕೆಟರ್ ಮಾತ್ರ ''ದಯವಿಟ್ಟು ನಿಮ್ಮ ಪತ್ರಿಕೆಯನ್ನು ಇನ್ನು ಮುಂದೆ ನಮಗೆ ಕಳುಹಿಸಬೇಡಿ'' ಎಂದು ತಕ್ಷಣ ತಿಳಿಸಿದರು.

ಅವರ ಉತ್ತರ ಓದಿ ನಮಗೆ ಆಶ್ಚರ್ಯವಾದರೂ ಬೇಸರವಾಗಲಿಲ್ಲ. ಏಕೆಂದರೆ ಅವರು ನಮ್ಮ ಹೆಚ್ಚಿನ ಖರ್ಚನ್ನು ತಪ್ಪಿಸಿ ಉಪಕಾರ ಮಾಡಿದ್ದರು. ಇಂತಹುದೇ ಉಪಕಾರವನ್ನು ಉಳಿದವರೂ ಮಾಡಿದ್ದರೆ ಅವರಿಗೇನೂ ನಷ್ಟವಾಗುತ್ತಿರಲಿಲ್ಲ. ನಮ್ಮ ದುರಗ್ರಹಿ ಹಾಗೂ ಹಟಮಾರಿ ಚಂದಾದಾರರು ಹಾಗೂ ಇತರ ಆಶ್ರಯದಾತರು 'ಬಹಿಷ್ಕೃತ ಭಾರತ'ದ ಪ್ರಕಟನೆ ಉಳಿದ ಪತ್ರಿಕೆಗಳಂತೆ ಹಣ ಗಳಿಸಲು ಆಗುತ್ತಿಲ್ಲ ಅನ್ನುವುದನ್ನು ನೆನಪಿಡಬೇಕು. ಇದು ಜನಜಾಗೃತಿಗಾಗಿ ತೆಗೆದುಕೊಂಡಿರುವ ಸ್ವಂತ ದೀಕ್ಷೆಯಾಗಿದೆ. ಇಂತಹ ಜನಸೇವೆಯಲ್ಲಿ ದೀಕ್ಷೆ ಪಡೆದಿರುವ ಮನುಷ್ಯ ಪ್ರಕಟಿಸುತ್ತಿರುವ ಪತ್ರಿಕೆಯೊಂದಿಗೆ ಹೀಗೆ ಜಿಪುಣತನದಿಂದ ವರ್ತಿಸುವುದು ಉದಾರತೆಯಲ್ಲ.

ಹೀಗೆ ಅನಾಸ್ಥೆ ತೋರಿಸುವ ಶಿಕ್ಷಕರಿಂದ 'ಬಹಿಷ್ಕೃತ ಭಾರತ'ಕ್ಕೆ ಸಾಕಷ್ಟು ಚಂದಾ ಸಿಗುವ ಆಸೆ ಇಟ್ಟುಕೊಳ್ಳುವುದು ವ್ಯರ್ಥ. ಓದುಗರನ್ನು ಹೆಚ್ಚಿ ಸುವ ವಿಷಯದಲ್ಲಿ ಸ್ಥಿತಿ ಸಾಕಷ್ಟು ನಿರಾಶಾಜನಕವಾಗಿರುವುದರಿಂದ 'ಬಹಿಷ್ಕೃತ ಭಾರತ'ವನ್ನು ಮುಳುಗದಂತೆ ರಕ್ಷಿಸಲು ಯಾವುದಾದರೂ ಶಾಶ್ವತವಾದ ಉಪಾಯವನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಆ ಯೋಜನೆಯನ್ನೇ ಈ ಸಂಚಿಕೆಯಲ್ಲಿ ದಲಿತರೆದುರು ಚರ್ಚಿಸಬೇಕಿದೆ. 'ಬಹಿಷ್ಕೃತ ಭಾರತ'ಕ್ಕಾಗಿ ಸ್ವಂತದ ಮುದ್ರಣಾಲಯವನ್ನು ಆರಂಭಿಸುವುದೇ ಆ ಯೋಜನೆ.

ಮುದ್ರಣಾಲಯ ಯೋಜನೆಯನ್ನು ಜಾರಿಗೆ ತರಲು ನಲವತ್ತು ಸಾವಿರ ರೂಪಾಯಿಗಳನ್ನು ಹೊಂದಿಸಬೇಕಿದೆ. ಮೇಲು ನೋಟಕ್ಕೆ ಇದು ಬಹಳ ದೊಡ್ಡ ಮೊತ್ತ ಅನಿಸಿದರೂ ದಲಿತರ ಜನಸಂಖ್ಯೆಗೆ ಹೋಲಿಸಿದರೆ ಏನೂ ಅಲ್ಲ ಅನ್ನಬಹುದು. ಕೇವಲ ಮುಂಬೈಯಂತಹ ನಗರದಲ್ಲಿ ಹೊಲೆಯರ ಒಂದು ಲಕ್ಷ ವಸತಿಗಳಿವೆ. ಪುಣೆ, ಸೋಲಾಪುರಗಳಲ್ಲಿ ಏನಿಲ್ಲವೆಂದರೂ ಅದೇ ಜಾತಿಯ ಇಪ್ಪತ್ತಿಪ್ಪತ್ತು ಸಾವಿರ ಜನರ ವಸತಿಯಿದೆ. ಈ ಎಲ್ಲ ಜನರು ಸೇರಿ ತಲಾ ಒಂದು ರೂಪಾಯಿಯನ್ನು ಒಟ್ಟು ಮಾಡುವ ಸಂಕಲ್ಪ ಮಾಡಿದರೆ 1 ಲಕ್ಷ 40 ಸಾವಿರ ರೂಪಾಯಿಯ ಫಂಡ್‌ನ ಸಂಗ್ರಹವಾಗುತ್ತದೆ. ಇದರಲ್ಲಿ ಎಲ್ಲ ದಲಿತರನ್ನು ಸೇರಿಕೊಂಡರೆ ಇದಕ್ಕಿಂತ ಎರಡು ಪಟ್ಟು ಹಣ ಸಂಗ್ರಹವಾಗುತ್ತದೆ. ನಗರದ ವಿಷಯ ಬಿಟ್ಟು ಹಳ್ಳಿಯ ಜನರ ಬಗ್ಗೆ ಗಮನ ಹರಿಸಿದರೆ ಇಂದು ಮರಾಠಿ ಮಾತನಾಡುವ ಜಿಲ್ಲೆಗಳು ಮುಂಬೈಯಲ್ಲಿ 10 ಇವೆ.

ಪ್ರತಿಯೊಂದು ಜಿಲ್ಲೆಗೂ 10 ತಾಲೂಕುಗಳು ಹಾಗೂ ಪ್ರತಿಯೊಂದು ತಾಲೂಕಿಗೂ 100 ಊರುಗಳು ಎಂದು ಲೆಕ್ಕ ಹಾಕಿದರೂ ಪ್ರತಿಯೊಂದು ಊರಿನವರು 10 ರೂಪಾಯಿ ಸಹಾಯ ಮಾಡುವುದಾಗಿ ನಿರ್ಧರಿಸಿದರೂ ಏನಿಲ್ಲವೆಂದರೂ ಈ ಕೆಲಸಕ್ಕಾಗಿ ಒಂದು ಲಕ್ಷ ರೂಪಾಯಿಗಳನ್ನು ಸಂಗ್ರಹಿಸಬಹುದು ಹಾಗೂ ಹತ್ತು ಸಾವಿರ ಊರುಗಳಲ್ಲಿ ಅರ್ಧದಷ್ಟಾದರೂ ಊರುಗಳಿಂದ ಈ ಕೆಲಸದಲ್ಲಿ ಸಹಾಯ ಮಾಡಿದರೂ 50,000 ರೂಪಾಯಿಗಳನ್ನು ಸಂಗ್ರಹಿಸುವುದು ಕಠಿಣವಾಗಲಾರದು. ಇಷ್ಟು ದೊಡ್ಡ ಮುದ್ರಣ ಯಂತ್ರ ಯಾಕೆ? ಎಂದು ಕೆಲವರು ಕೇಳಬಹುದು. ಹೀಗೆ ಕೇಳುವವರು ಒಂದು ವಿಷಯ ನೆನಪಲ್ಲಿಡಬೇಕು.

ಮುದ್ರಣ ಯಂತ್ರವನ್ನು ಪತ್ರಿಕೆಗಾಗಿ ಖರೀದಿಸುವುದಿದೆ. ಕೇವಲ ಪತ್ರಿಕೆಗಾಗಿ ಖರೀದಿಸುವುದಾದರೆ ಐದು ಸಾವಿರ ರೂಪಾಯಿಯಲ್ಲಿ ಅದನ್ನು ಖರೀದಿಸಬಹುದು. ಆದರೆ ಅದರಿಂದೇನು ಲಾಭ? ನನ್ನ ಪತ್ರಿಕೆ ನನ್ನ ಮುದ್ರಣಾಲಯದಲ್ಲಿ ಮುದ್ರಣಗೊಳ್ಳಬೇಕು ಅನ್ನುವುದರಲ್ಲಿ ವಿಶೇಷ ಲಾಭವಿಲ್ಲ. ಪತ್ರಿಕೆ ಮುದ್ರಿಸುವ ಕಷ್ಟದೊಂದಿಗೆ ಮುದ್ರಣಯಂತ್ರದ ಕಷ್ಟವೂ ಮೈಮೇಲೆ ಬರಲಿದೆ, ಹಾಗಾಗಿ ನನಗೆ ನನ್ನ ಮುದ್ರಣಾಲಯದಲ್ಲಿ ಕೇವಲ ನನ್ನ ಪತ್ರಿಕೆಯನ್ನಷ್ಟೇ ಮುದ್ರಿಸುವುದಿಲ್ಲ. ಇತರ ಪತ್ರಿಕೆಗಳು ಇಲ್ಲವೆ ಕರಪತ್ರಿಕೆಗಳನ್ನು ಮುದ್ರಿಸಿದರೆ ಮಾತ್ರ ಮುದ್ರಣಯಂತ್ರವನ್ನು ಖರೀದಿಸುವುದರಲ್ಲಿ ಲಾಭವಿದೆ ಅನಿಸುತ್ತದೆ. ಈ ಮುದ್ರಣಾಲಯದಿಂದ ಲಾಭವಾಗಿ 'ಬಹಿಷ್ಕೃತ ಭಾರತ'ಕ್ಕಾಗಿರುವ ನಷ್ಟ ಭರಿಸುವ ಉದ್ದೇಶ ನನ್ನದಾಗಿದೆ. ಮುದ್ರಣ ಯಂತ್ರದ ಖರ್ಚು ಸರಿದೂಗಿಸಿ ಅದರಿಂದ ಲಾಭವೂ ಆಗಬೇಕೆಂದಿದ್ದರೆ ಆ ಮುದ್ರಣ ಯಂತ್ರ ದೊಡ್ಡದಾಗಿರಬೇಕು. ಸಣ್ಣ ಮುದ್ರಣ ಯಂತ್ರದಿಂದ ಲಾಭಕ್ಕಿಂತ ತೊಂದರೆಯೇ ಹೆಚ್ಚು. ಆದ್ದರಿಂದಲೇ ದೊಡ್ಡ ಮುದ್ರಣ ಯಂತ್ರವನ್ನು ಖರೀದಿಸುವ ಯೋಚನೆಯನ್ನು ನಾನು ಮಾಡಿದ್ದೇನೆ. ಫಂಡ್ ಅಂದಕೂಡಲೇ ಜನ ಹೆದರುತ್ತಾರೆ. ಮೋಸಗಾರರು ಫಂಡ್ ಸಂಗ್ರಹಿಸಿ ಅದನ್ನು ಕಬಳಿಸುತ್ತಾರೆ ಅನ್ನುವುದು ನಿಜ. ಆದರೆ ಮೋಸಗಾರರು ಫಂಡ್ ಸಂಗ್ರಹಿಸುತ್ತಾರೆಂದರೆ ಫಂಡ್ ಸಂಗ್ರಹಿಸುವ ಎಲ್ಲರೂ ಮೋಸಗಾರರಾಗಿರಲು ಸಾಧ್ಯವಿಲ್ಲ ಅಲ್ಲವೇ? ಈ ಫಂಡಿನಿಂದ ಖರೀದಿಸುವ ಮುದ್ರಣ ಯಂತ್ರವನ್ನು ತನ್ನ ಸ್ವತ್ತಾಗಿಸುವ ಉದ್ದೇಶ ನನ್ನದಲ್ಲ ಎಂದು ತಿಳಿಸುವುದು ಅಗತ್ಯವಾಗಿದೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)