ಪಾಕಿಸ್ತಾನದಲ್ಲಿ ದಾವೂದ್: ಸಹೋದರ ಇಕ್ಬಾಲ್ ಕಾಸ್ಕರ್ ನಿಂದ ಮಾಹಿತಿ ?
ಥಾಣೆ, ಸೆ. 22: ಭೂಗತ ಜಗತ್ತಿನ ಪಾತಕಿ ದಾವೂದ್ ಇಬ್ರಾಹಿಂ ಪ್ರಸ್ತತ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾನೆಯೇ? ಹೌದು ಎನ್ನುತ್ತಾರೆ ಕೆಲ ಪೊಲೀಸ್ ಅಧಿಕಾರಿಗಳು. ಆತನ ಸಹೋದರ ಇಕ್ಬಾಲ್ ಕಾಸ್ಕರ್(60) ದಾವೂದ್ ಪಾಕಿಸ್ತಾನದಲ್ಲಿರುವ ಬಗ್ಗೆ ಮಾಹಿತಿ ನೀಡಿದ್ದು, ನಾಲ್ಕೈದು ವಿಳಾಸಗಳನ್ನೂ ನೀಡಿದ್ದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ದಾವೂದ್ ತಮ್ಮಲ್ಲಿ ಆಶ್ರಯ ಪಡೆದಿದ್ದಾನೆ ಎಂಬ ಆರೋಪವನ್ನು ಪಾಕಿಸ್ತಾನ ನಿರಾಕರಿಸುತ್ತಲೇ ಬಂದಿದೆ. ದಾವೂದ್ ಇಬ್ರಾಹಿಂನ ವಾಸ ಮತ್ತು ಕಚೇರಿಗೆ ಸಂಬಂಧಿಸಿದ ಒಂಬತ್ತು ವಿಳಾಸಗಳನ್ನು ಪಾಕಿಸ್ತಾನಕ್ಕೆ ಭಾರತ ಹಸ್ತಾಂತರಿಸಿತ್ತು.
ಕಾಸ್ಕರ್ ಪ್ರಸ್ತುತ ಮುಂಬೈನಲ್ಲಿ ವಾಸವಿದ್ದು, ಈತನ ಇಬ್ಬರು ಸಹಚರರನ್ನು ಸೆಪ್ಟೆಂಬರ್ 18ರಂದು ಬಂಧಿಸಲಾಗಿತ್ತು. ಕೆಲ ಸ್ಥಳೀಯ ರಾಜಕಾರಣಿಗಳ ನೆರವಿನೊಂದಿಗೆ ಅಕ್ರಮ ವಸೂಲಿ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು.
ಆದರೆ ಕಳೆದ ಮೂರು ವರ್ಷಗಳಿಂದ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಸಂಶಯದಿಂದ ದಾವೂದ್ ತನ್ನ ಜತೆ ಹಾಗೂ ಸಂಬಂಧಿಗಳ ಜತೆ ಮಾತನಾಡುತ್ತಿಲ್ಲ ಎನ್ನುವ ಮಾಹಿತಿಯನ್ನೂ ಆತ ನೀಡಿದ್ದಾನೆ ಎನ್ನಲಾಗಿದೆ. ಆದರೆ ಮತ್ತೊಬ್ಬ ಸಹೋದರ ಅನೀಸ್ ಅಹ್ಮದ್ ಜತೆ ಸಂಪರ್ಕದಲ್ಲಿದ್ದಾನೆ ಎಂಬ ಮಾಹಿತಿಯನ್ನೂ ತನಿಖೆ ವೇಳೆ ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.