ಸೈನಾ ಬಯೋಪಿಕ್ನಲ್ಲಿ ಶ್ರದ್ಧಾ ಕಪೂರ್
ತನ್ನ ಮಹತ್ವಾಕಾಂಕ್ಷಿ ಚಿತ್ರ ಹಸೀನಾ ಪಾರ್ಕರ್ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಶ್ರದ್ಧಾ ಕಪೂರ್ ಇನ್ನೊಂದು ಬಯೋಪಿಕ್ ಚಿತ್ರದಲ್ಲಿ ನಟಿಸಲು ಸಿದ್ಧತೆ ನಡೆಸುತ್ತಿದ್ದಾರೆ. ವಿಶ್ವವಿಖ್ಯಾತ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್ ರ ಜೀವನಕಥೆ ಆಧಾರಿತ ಈ ಚಿತ್ರವು ತನ್ನ ವೃತ್ತಿಬದುಕಿಗೆ ಹೊಸ ಮೈಲುಗಲ್ಲಾಗಲಿದೆ ಎಂಬ ಭರವಸೆಯನ್ನು ಆಕೆ ಹೊಂದಿದ್ದಾರೆ. ಸೈನಾ ನೆಹ್ವಾಲ್ ಎಂಬ ಜೀವಂತದಂತಕಥೆಯನ್ನು ಬೆಳ್ಳಿತೆರೆಯಲ್ಲಿ ಮೂಡಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆೆ.ಸೈನಾ ಪಾತ್ರಕ್ಕೆ ಜೀವತುಂಬುವಲ್ಲಿ ತಾನು ಶಕ್ತಿ ಮೀರಿ ಪ್ರಯತ್ನಿಸುವುದಾಗಿಯೂ ಶ್ರದ್ಧಾ ಹೇಳಿಕೊಂಡಿದ್ದಾರೆ.
ಸೈನಾ ಪಾತ್ರಕ್ಕಾಗಿ ಶ್ರದ್ಧಾ ಈಗ ಸಾಕಷ್ಟು ಫೀಲ್ಡ್ವರ್ಕ್ ಕೂಡಾ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಈಗ ಅವರು ಪ್ರತಿದಿನ ಎರಡು ಗಂಟೆಗಳ ಕಾಲ ಬ್ಯಾಡ್ಮಿಂಟನ್ ಆಡುತ್ತಿದ್ದಾರಂತೆ. ಸೈನಾ ಅವರ ಕೋಚ್ ಆಗಿದ್ದ ಪುಲೇಲಾ ಗೋಪಿಚಂದ್ರಿಂದಲೇ ಶ್ರದ್ಧಾ ಕೂಡಾ ಬ್ಯಾಡ್ಮಿಂಟನ್ ತರಬೇತಿ ಪಡೆಯುತ್ತಿದ್ದಾರಂತೆ. ಒಟ್ಟಿನಲ್ಲಿ ತನ್ನ ಪಾತ್ರಕ್ಕೆ ನೈಜತೆ ತರಲು ಶ್ರದ್ಧಾಪಡುತ್ತಿರುವ ಶ್ರಮಕ್ಕೆ ಚಿತ್ರರಸಿಕರು ತಲೆದೂಗಲೇ ಬೇಕು.
ಇತ್ತೀಚೆಗೆ ಶ್ರದ್ಧಾ, ಹೈದರಾಬಾದ್ನಲ್ಲಿರುವ ಸೈನಾ ನಿವಾಸಕ್ಕೆ ತೆರಳಿ, ಬ್ಯಾಡ್ಮಿಂಟನ್ ತಾರೆಯ ಜೊತೆ ಚಿತ್ರದ ಬಗ್ಗೆ ವಿಚಾರವಿನಿಮಯವನ್ನು ಕೂಡಾ ನಡೆಸಿದ್ದಾರೆ.
ಇನ್ನೂ ಹೆಸರಿಡದ ಈ ಬಯೋಪಿಕ್ ಚಿತ್ರವನ್ನು ಅಮೋಲ್ ಗುಪ್ತೆ ನಿರ್ದೇಶಿಸಲಿದ್ದಾರೆ.