varthabharthi

ನೇಸರ ನೋಡು

ಕನ್ನಡ ಚಿತ್ರರಂಗದ ಒಂದು ಅಚ್ಚರಿ: ‘ಫೀನಿಕ್ಸ್’ ಅಯ್ಯರ್

ವಾರ್ತಾ ಭಾರತಿ : 23 Sep, 2017
ಬಿ.ಎನ್. ರಂಗನಾಥ ರಾವ್

ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಅಯ್ಯರ್ ಅವರದೇ ಒಂದು ಮಹತ್ವಪೂರ್ಣವಾದ ರೋಚಕ ಅಧ್ಯಾಯ. ಇದು ಅವರ ಜನ್ಮಶತಾಬ್ದಿ ವರ್ಷವೆಂದು ಎಷ್ಟು ಜನ ಕನ್ನಡಿಗರಿಗೆ ಗೊತ್ತೋ ಇಲ್ಲವೋ ತಿಳಿಯದು. ಜನ್ಮ ಶತಾಬ್ದಿ ಆಚರಣೆಯ ಸದ್ದುಗದ್ದಲವಂತೂ ಕೇಳಿಬರುತ್ತಿಲ್ಲ. ಕನ್ನಡ ಮತ್ತು ಸಂಸ್ಕೃತ ಇಲಾಖೆ ಮತ್ತು ಕನ್ನಡ ಚಲಚ್ಚಿತ್ರ ಅಕಾಡಮಿ ಕರ್ನಾಟಕದ ಪ್ರಮುಖ ನಗರಗಳಲ್ಲಿ ಅಯ್ಯರ್ ಅವರ ಚಿತ್ರಗಳ ಪೂರ್ವಾವಲೋಕನ ಪ್ರದರ್ಶನೋತ್ಸವವನ್ನು ಏರ್ಪಡಿಸಿದಲ್ಲಿ ಅದು ಜಿ. ವಿ. ಅಯ್ಯರ್ ಅವರ ಜನ್ಮ ಶತಾಬ್ದಿಯ ಸೂಕ್ತ ಸ್ಮರಣೆಯಾದೀತು.

ಕನ್ನಡದ ಪ್ರಪ್ರಥಮ ವಾಕ್ಚಿತ್ರ ‘ಸತಿ ಸುಲೋಚನ’ 1934ರಲ್ಲಿ ಬಿಡುಗಡೆಯಾಯಿತು. ಅಂದರೆ ಕನ್ನಡ ಚಲನಚಿತ್ರಕ್ಕೆ ಸುಮಾರು ಎಂಬತ್ತು ವರ್ಷಗಳಿಗೂ ಮಿಗಿಲಾದ ಸುದೀರ್ಘ ಇತಿಹಾಸವಿದೆ. ಈ ಸುದೀರ್ಘ ಇತಿಹಾಸದ ಮಹತ್ವ ಏನು ಎನ್ನುವಿರಾ? ಜಗತ್ತಿನ ಚಲನಚಿತ್ರಗಳೊಂದಿಗೆ ವಿಮರ್ಶಾತ್ಮಕವಾಗಿ ಸರಿಸಾಟಿ ನಿಲ್ಲುವ, ಸ್ಪರ್ಧಿಸುವ ಅರ್ಹತೆಯನ್ನು ಗಳಿಸಿಕೊಂಡಿರುವುದು ಸಾಧಾರಣವಾದ ಸಾಧನೆಯೇ? ಮೂಕಿಯಿಂದ ವಾಕ್ಚಿತ್ರದವರೆಗೆ, ಕಪ್ಪುಬಿಳುಪಿನಿಂದ ಬಣ್ಣದವರೆಗೆ ನಡೆದುಬಂದಿರುವ ಈ ವರ್ಣರಂಜಿತ ಇತಿಹಾಸದಲ್ಲಿ 1970ರ ಕಾಲಘಟ್ಟ ಕನ್ನಡ ಚಿತ್ರ ರಂಗದ ಪುನರುತ್ಥಾನದ ಕಾಲ.

‘ಸಂಸ್ಕಾರ’ದಂಥ ಹೊಸ ಸಂವೇದನೆಯ ಚಿತ್ರದೊಂದಿಗೆ ಕನ್ನಡದಲ್ಲಿ ಹೊಸ ಅಲೆಯ ಚಿತ್ರಗಳ ಯುಗಾರಂಭವಾಯಿತು. ಈ ಕಾಲಘಟ್ಟ ಹೊಸಬರಿಗೆ ನವನವೋನ್ಮೇಷಶಾಲಿ ಅವಕಾಶಗಳ ಬಾಗಿಲುಗಳು ತೆರೆದಿದ್ದರ ಜೊತೆಗೆ ಮೂಕಿ ದಿನಗಳಿಂದ ಕನ್ನಡ ಚಿತ್ರೋದ್ಯಮದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಹಳೆಯ ತಲೆಮಾರಿನ ಅನೇಕ ಮಂದಿ ಕಲಾವಿದರು ಮತ್ತು ನಿರ್ದೇಶಕರ ಮರುಹುಟ್ಟಿಗೆ ಕಾರಣವಾಯಿತು. ಈ ಮರುಹುಟ್ಟು ಕನ್ನಡದಲ್ಲಿ ಕ್ಲಾಸಿಕಲ್ ಚಿತ್ರಗಳ ಶಕೆಗೆ ನಾಂದಿಹಾಡಿತು. ಹೀಗೆ ಮರುಹುಟ್ಟು ಪಡೆದು ಕನ್ನಡಕ್ಕೆ ಕ್ಲಾಸಿಕಲ್ ಎನ್ನಬಹುದಾದ ಚಿತ್ರಗಳನ್ನು ನೀಡಿ, ಕನ್ನಡ ಚಿತ್ರೋದ್ಯಮವನ್ನು ಜಗತ್ತಿನ ಸಿನೆಮಾದ ಜೊತೆ ವಿಮರ್ಶಾತ್ಮಕ ಹೋಲಿಕೆ ಅರ್ಹವಾಗಿಸಿದ ಅತ್ಯುನ್ನತ ಸಾಧನೆಗೆ ಕಾರಣ ಪುರುಷರಾದವರಲ್ಲಿ ಜಿ.ವಿ.ಅಯ್ಯರ್ ಪ್ರಮುಖರು.

ಇದು ಗಣಪತಿ ವೆಂಕಟರಮಣ ಅಯ್ಯರ್ ಅವರ ಜನ್ಮಶತಾಬ್ದಿ ವರ್ಷ. ಕನ್ನಡದ ಮೊದಲ ಮೂಕಿ ಚಿತ್ರ ‘ವಸಂತ ಸೇನೆ’ ತಯಾರಾದದ್ದು 1929ರಲ್ಲಿ. ಅದಕ್ಕೂ ಮೊದಲೇ ಹುಟ್ಟಿದವರು ಜಿ.ವಿ.ಅಯ್ಯರ್-1917ರ ಸೆಪ್ಟಂಬರ್ 3ರಂದು, ಮೈಸೂರು ಜಿಲ್ಲೆಯ ತಾಲೂಕು ಕೇಂದ್ರವಾಗಿದ್ದ ನಂಜನಗೂಡಿನಲ್ಲಿ. ಹೈಸ್ಕೂಲ್‌ವರೆಗೆ ಶಿಕ್ಷಣ ನಂಜನಗೂಡಿನಲ್ಲೇ. ಶಾಲೆಯ ಓದು ಅಷ್ಟಕ್ಕಷ್ಟೆ ಆದರೂ ಅಯ್ಯರ್ ಲೋಕಾನುಭವದ ಜೊತೆಗಿನ ಸ್ವಯಂ ಅಧ್ಯಯನದಿಂದ ಬೆಳೆದ ಸ್ವಯಮಾಚಾರ್ಯ ಪುರುಷರು. ಅಯ್ಯರ್‌ಗೆ ಜೀವನವೇ ವಿಶ್ವವಿದ್ಯಾನಿಲಯ, ಲೋಕಾನುಭವವೇ ಗುರು. ವಿದ್ಯಾರ್ಥಿಯಾಗಿದ್ದಾಗಲೇ ಅಯ್ಯರ್‌ರವರನ್ನು ಸಿನೆಮಾ ಆಕರ್ಷಿಸಿತು. ಹಗಲುಹೊತ್ತು ಊರಿನ ಬೀದಿಗಳಲ್ಲಿ ಸಂಚರಿಸುತ್ತ ಹೊಸ ಮೂಕಿ ಚಿತ್ರದ ಪ್ರಚಾರದ ಗಾಡಿ ತೂರುತ್ತಿದ್ದ ಕರಪತ್ರಗಳ ವಸಂತಸೇನಾಕರ್ಷಣೆಗೆ ಬೆರಗಾಗುತ್ತದ್ದ ಬಾಲಕ ಅಯ್ಯರ್‌ಗೆ ಸಂಜೆಯ ಪ್ರದರ್ಶನಕ್ಕೆ ದುಡ್ಡು ಹೊಂಚುವುದು ಹೇಗೆ ಎಂಬ ಉಪಾಯದ ಕಸರತ್ತಿನಲ್ಲೇ ಹೆಚ್ಚು ಸಮಯ ಕಳೆದುಹೋಗುತ್ತಿತ್ತು.

ಮೂಕಿ ಸಿನೆಮಾದ ಜೊತೆಗೆ ಅಯ್ಯರ್ ಅವರನ್ನು ಬಾಲ್ಯದಲ್ಲಿ ಕೈಬೀಸಿ ಕರೆದದ್ದು ರಂಗಭೂಮಿ. 1936ರ ಸುಮಾರಿನಲ್ಲಿ ಕೈಲಾಸಂ ನಂಜನಗೂಡಿಗೆ ಭೇಟಿಕೊಟ್ಟದ್ದು ಅಯ್ಯರ್ ಪಾಲಿಗೆ ಒಂದು ಸುವರ್ಣಾವಕಾಶ. ನಂಜನಗೂಡು ತಾಲೂಕಿನ ಕಳಲೆ, ಸೋಸಲೆ, ಅಗರ ಮೊದಲಾದ ಕುಗ್ರಾಮಗಳಲ್ಲೂ ಆಧುನಿಕ ನಾಟಕಗಳನ್ನು ಪ್ರದರ್ಶಿಸಿ, ವೃತ್ತಿ ರಂಗಭೂಮಿ ನಾಟಕಗಳಿಗೆ ಪಳಗಿದ್ದ ಮನಸ್ಸುಗಳಲ್ಲಿ ಹೊಸ ಅಭಿರುಚಿಯ ಸಂಚಲನ ಉಂಟುಮಾಡಿದ ಕೈಲಾಸಂ ಕಂಪೆನಿ ತರುಣ ಅಯ್ಯರ್ ಮೇಲೆ ಗಾಢ ಪ್ರಭಾವ ಬೀರಿತು.

‘‘ನನ್ನ ಬೌದ್ಧಿಕ ಚಿಂತನೆಗೆ ಹೊಸತಿರುವು ನೀಡಿದವರು ಕೈಲಾಸಂ. ಇದರ ಮಧ್ಯೆ ದಕ್ಷಿಣಾ ಮೂರ್ತಿ ಶಾಸ್ತ್ರಿಗಳಿಂದ ಸಂಸ್ಕೃತ ಪಾಠವೂ ಆಯಿತು. ಆದರೆ ಗುಬ್ಬಿ ಕಂಪೆನಿಯ ಸೆಳೆತದ ಮುಂದೆ ಅಮರಕೋಶ ಹಿಂದೆ ಉಳಿಯಿತು. ಗುಬ್ಬ್ಬಿ ಕಂಪೆನಿಯಲ್ಲಿ ಅಯ್ಯರ್ ಅವರ ರಂಗಭೂಮಿ ಕಾಯಕ ಶುರುವಾದದ್ದು ನಾಟಕಗಳ ಪೋಸ್ಟರುಗಳನ್ನು ಬರೆಯುವ, ಗೋಡಗಳಿಗೆ ಅಂಟಿಸುವ ಕೆಲಸದಿಂದ.ಆಗಷ್ಟೆ ಮೀಸೆ ಮೂಡುತ್ತಿದ್ದ ಹದಿಹರೆಯದ ಅಯ್ಯರ್‌ರಿಗೆ ಇದು ತನ್ನ ಪ್ರತಿಭೆಗೆ ಸಾಲದೆನ್ನಿಸಿ ಪುಣೆಗೆ ಹೋಗಿ ಪ್ರಭಾತ್ ಕಂಪೆನಿ ಸೇರಲು ನಿಶ್ಚಯಿಸಿದರು(1932). ಪುಣೆಯಲ್ಲಿ ಪ್ರಭಾತ್ ಕಂಪೆನಿ ಬಾಗಿಲು ಕಾಯುವುದೇ ಕೆಲಸವಾಯಿತು. ಆದರೆ ಆ ಬಾಗಿಲು ತೆರೆಯಲಿಲ್ಲ. ಪ್ಲೇಗು ಮಾರಿಯು ಪುಣೆಯನ್ನು ಪ್ರವೇಶಿಸಿದ್ದರಿಂದ ನಂಜನಗೂಡಿಗೆ ಜೀವ ಉಳಿಸಿಕೊಂಡು ವಾಪಸಾಗುವುದು ಅನಿವಾರ್ಯವಾಯಿತು. ಮತ್ತೆ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಕಂಪೆನಿಯ ಬಾಗಿಲು ತಟ್ಟಿದರು. ಬಾಗಿಲೇನೋ ತೆರೆಯಿತು.

ಆದರೆ ಪಾತ್ರಗಳು... ಆ ಕಾಲದಲ್ಲಿ ಹೊಸಬರಿಗೆ ಅವಕಾಶ ಸಿಗಬೇಕಾದರೆ ಹಳೆಯ ನಟನಟಿಯರಲ್ಲಿ ಯಾರಾದರೂ ಕಾಯಿಲೆ ಬೀಳಬೇಕು ಅಥವಾ ಕಂಪೆನಿ ಬಿಡಬೇಕು. ಇಂಥ ಅವಕಾಶಕ್ಕಾಗಿ ಅಯ್ಯರ್ ಕಂಪೆನಿಯ ಪೋಸ್ಟರ್ ಇತ್ಯಾದಿ ಪುಡಿಗೆಲಸಗಳನ್ನು ಮಾಡುತ್ತಾ ಸೈಡ್‌ವಿಂಗ್‌ನಲ್ಲಿ ಆರೆಂಟು ತಿಂಗಳು ಕಾದು ನಿಂತರು. ಕೊನೆಗೂ ಗುಬ್ಬಿ ಕಂಪೆನಿಯಲ್ಲಿ ಬಣ್ಣಹಚ್ಚುವ ಸುಮೂಹೂರ್ತ ಬಂದೇಬಿಟ್ಟಿತು.ವೀರಣ್ಣನವರು ‘ಶ್ರೀ ಕೃಷ್ಣಗಾರುಡಿ’ಯಲ್ಲಿ ಒಂದು ಸಣ್ಣ ಪಾತ್ರಕೊಟ್ಟರು. ಟಿ.ಎನ್.ಬಾಲಕೃಷ್ಣ, ಬಿ.ವಿ.ಕಾರಂತ್ ಗುಬ್ಬಿ ಕಂಪೆನಿಯಲ್ಲಿ ಅಯ್ಯರರ ಖಾಸಾ ಗೆಳೆಯರು. ಸಣ್ಣಪುಟ್ಟ ಕಾರಣಗಳಿಗಾಗಿ ವೀರಣ್ಣನವರೊಂದಿಗೆ ಜಗಳವಾಡಿ ಕಂಪೆನಿ ಬಿಟ್ಟು ಹೋಗುವುದು, ಕೈ ಖಾಲಿ ಆದಾಗ ಮತ್ತೆ ಕಂಪೆನಿ ಸೇರುವುದು-ಹೀಗೆ ಸಾಗಿದ್ದ ಕಂಪೆನಿ ಜೀವನ ಸಾಕಾಗಿ ಅಯ್ಯರ್ ಬಾಲಣ್ಣನ ಜೊತೆಗೂಡಿ ಬೆಂಗಳೂರಿನಲ್ಲಿ ಆರ್.ಎನ್.ಆರ್ಟ್ಸ್ ಎಂಬ ಬೋರ್ಡು-ಭಿತ್ತಿ ಪತ್ರಗಳನ್ನು ಬರೆಯುವ ಕಂಪೆನಿ ಶುರುಮಾಡಿದರು.

‘ಸಂಸಾರ ನೌಕೆ’ ಚಿತ್ರದ ಅಮೋಘ ಅಭಿನಯದಿಂದ ಎಂ.ವಿ.ರಾಜಮ್ಮ ನವರಿಗೆ ಅದೃಷ್ಟ ಖುಲಾಯಿಸಿದ್ದ ದಿನಗಳು. ರಾಜಮ್ಮನವರು ಚಿತ್ರ ತಯಾರಿಕೆ ಸಾಹಸಕ್ಕೆ ಕೈಹಾಕಿದರು. ಚಿತ್ರ ‘ರಾಧಾರಮಣ’. ಇದರಲ್ಲಿ ಅಯ್ಯರ್‌ಗೆ ಕೇಶೀದೈತ್ಯನ ಪಾತ್ರ ಹಾಗೂ ಹಾಡುಗಳನ್ನು ಬರೆಯುವ ಕೆಲಸವನ್ನು ವಹಿಸಲಾಯಿತು. ಈ ಚಿತ್ರದೊಂದಿಗೆ ಅಯ್ಯರ್ ಮತ್ತು ಬಾಲಕೃಷ್ಣ ಇಬ್ಬರ ಚಲನಚಿತ್ರ ಜೀವನ ಯಾತ್ರೆಯೂ ಶುರುವಾಯಿತು.ರಾಧಾರಮಣ ನಂತರ ಎಚ್.ಎಲ್.ಎನ್.ಸಿಂಹರ ‘ಬೇಡರ ಕಣ್ಣಪ್ಪ’ನಿಗೆ ಚಿತ್ರ ಸಾಹಿತ್ಯ ರಚಿಸುವ ಹೊಣೆ ಅಯ್ಯರ್ ಅವರದ್ದಾಯಿತು. ಜೊತೆಗೆ ಒಂದು ಮುಖ್ಯ ಪಾತ್ರದಲ್ಲೂ ನಟಿಸಿದರು. ಮುಂದೆ ‘ನಲ್ಲ ತಂಗಾಳ್, ‘ಹರಿಭಕ್ತ’ ‘ಓಹಿಲೇಶ್ವರ’, ‘ಜಗಜ್ಯೋತಿ ಬಸವೇಶ್ವರ’ ಮೊದಲಾದ ಚಿತ್ರಗಳಲ್ಲಿ ಸಾಹಿತ್ಯ ರಚನೆ ಮತ್ತು ಅಭಿನಯ-ಈ ಎರಡು ದೋಣಿಗಳಲ್ಲಿ ಸಾಗಿತ್ತು ಅಯ್ಯರ್ ಜೀವನಯಾತ್ರೆ.

1960ರ ದಶಕ ಕನ್ನಡ ಚಲಚಿತ್ರ ರಂಗಕ್ಕೆ ಕೆಟ್ಟ ಕಾಲ. ಡಬ್ಬಿಂಗ್ ಚಿತ್ರಗಳ ಹಾವಳಿ, ಕಚ್ಚಾ ಫಿಲ್ಮ್ ಕೊರತೆ ಇತ್ಯಾದಿ ಉಪಟಳಗಳಿಂದ ಕನ್ನಡ ಚಿತ್ರ ನಟ-ನಟಿಯರೆಲ್ಲ ತವರುಮನೆಯಾದ ನಾಟಕದ ಕಂಪೆನಿಗಳಿಗೆ ಹಿಂದಿರುಗಿದ್ದರು. ನಾಟಕದ ಗಳಿಕೆಯಿಂದ ಸಂಸಾರ ನಿರ್ವಹಣೆಯ ನಂತರ ಉಳಿದ ಅಲ್ಪಸ್ವಲ್ಪ ಹಣವನ್ನೇ ಬಂಡವಾಳವಾಗಿಟ್ಟುಕೊಂಡು ಕನ್ನಡ ಕಲಾವಿದರು ಒಂದುಗೂಡಿ ತಾವೇ ಒಂದು ಚಿತ್ರ ತಯಾರಿಸುವ ಆಲೋಚನೆ ಮಾಡಿದರು. ಈ ಅಲೋಚನೆ ಮೂಡಿದ್ದೇ ಕನ್ನಡ ಚಲನ ಚಿತ್ರ ಕಲಾವಿದರ ಸಂಘದ ವತಿಯಿಂದ ‘ರಣಧೀರ ಕಂಠೀರವ’ ಚಿತ್ರ ನಿರ್ಮಾಣಕ್ಕೆ ನಿರ್ಧಾರವಾಯಿತು. ‘ರಣಧೀರ ಕಂಠೀರವ’ ಕನ್ನಡದ ಮೊದಲ ಐತಿಹಾಸಿಕ ಚಿತ್ರ. ಸಂಕಲನ ತಜ್ಞ ಎನ್.ಸಿ.ರಾಜನ್ ಈ ಚಿತ್ರದ ನಾಮಮಾತ್ರ ನಿರ್ದೇಶಕರು. ಸಾಹಿತ್ಯ, ನಿರ್ದೇಶನ ಎಲ್ಲದರ ಸಂಪೂರ್ಣ ಹೊಣೆ ಅಯ್ಯರ್ ಅವರದೇ.

‘ರಣಧೀರ ಕಂಠೀರವ’ದ ಯಶಸ್ಸು ಅಯ್ಯರ್ ಅವರ ಅದೃಷ್ಟ ಬಾಗಿಲನ್ನು ತೆರೆಯಿತು. ಆ ನಂತರ ಅಭಿನಯ, ಸಾಹಿತ್ಯ ರಚನೆ, ನಿರ್ದೇಶನ ಹೀಗೆ ಅಯ್ಯರ್ ಪ್ರಯೋಗಶೀಲ ರಾದರು. ಹಲವಾರು ಚಿತ್ರಗಳಲ್ಲಿ ನಟಿಸಿದರು, ಹಲವಾರು ಚಿತಗಳಿಗೆ ಹಾಡು-ಸಂಭಾಷಣೆಗಳನ್ನು ಬರೆದರು, ಹಲವಾರು ಚಿತ್ರಗಳನ್ನು ನಿರ್ದೇಶಿಸಿ ದರು. ಅಯ್ಯರ್ ಎಪ್ಪತ್ಮೂರು ಚಿತ್ರಗಳಿಗೆ ಚಿತ್ರಕಥೆ-ಸಂಭಾಷಣೆ -ಹಾಡು ಗಳನ್ನು ರಚಿಸಿದ್ದಾರೆ. ಹದಿನೇಳಕ್ಕೂ ಹೆಚ್ಚು ಚಿತ್ರಗಳನ್ನು ಸ್ವಂತ ನಿರ್ಮಿಸಿ, ನಿರ್ದೇಶಿಸಿದ್ದಾರೆ. ‘ಭೂದಾನ’ದಿಂದ ಆರಂಭವಾಗಿ, ‘ವಾಲ್ ಪೋಸ್ಟರ್’ ವರೆಗೆ ನಡೆದು ಬಂದಿರುವ ನಿರ್ದೇಶಕ ಅಯ್ಯರ್ ಅವರ ಹಾದಿ ಸೃಜನ ಶೀಲ ಕಲಾವಿದನೊಬ್ಬನ ಬೆಳವಣಿಗೆಯ ಏಳುಬೀಳುಗಳ ಹಾದಿ. 1969ರವರೆಗೆ ಅಯ್ಯರ್ ಸುಮಾರು ಏಳು ಚಿತ್ರಗಳನ್ನು ತಯಾರಿಸಿದರು. ಇವೆಲ್ಲ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡವು. ಇದೇ ಹುಮ್ಮಸ್ಸಿನಿಂದ 1969ರಲ್ಲಿ ‘ಚೌಕದ ದೀಪ’ ತಯಾರಿಸಿದರು.

‘ಚೌಕದ ದೀಪ’ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಾಣಲಿಲ್ಲ.ವಿಮರ್ಶಕರ ಮೆಚ್ಚುಗೆಯನ್ನೂ ಗಳಿಸಲಿಲ್ಲ. ಇದು ಅಯ್ಯರ್ ಅವರಲ್ಲಿ ಖಿನ್ನತೆಯನ್ನು ಮೂಡಿಸಿತು. ಅಯ್ಯರ್ ಸುಮಾರು ಮೂರು ವರ್ಷಗಳ ಕಾಲ ಅಜ್ಞಾತವಾಸದಲ್ಲಿ ಕಳೆದರು. ‘ಚೌಕದ ದೀಪ’ ವಿಷಣ್ಣತೆ ಮೂಡಿಸಿ ದರೂ ಆಸೆಭರವಸೆಗಳು ಹೋಗಿರಲಿಲ್ಲ. ಈ ಅಜ್ಞಾತ ವಾಸದಲ್ಲಿ ಭಾರತೀಯ ಚಲನಚಿತ್ರಮಾಧ್ಯಮದ ಬೆಳವಣಿಗೆಯನ್ನೂ ಹೊಸಹೊಸ ಪ್ರಯೋಗ ಗಳನ್ನು ಕಂಡು ಆಧ್ಯಯನ ಮಾಡಿದರು. ‘ಸಂಸ್ಕಾರ’ ನೋಡಿದರು, ಕನ್ನಡ ಹಾಗೂ ಇತರ ಭಾಷೆಗಳ ಹೊಸ ಅಲೆಯ ಚಿತ್ರಗಳನ್ನು ಅವಲೋಕಿಸಿ ದರು. ಇವೆಲ್ಲ ಚಲಚಿತ್ರ ಮಾಧ್ಯಮ ಕುರಿತ ಅಯ್ಯರ್ ಅವರ ಆಲೋಚನೆಗಳಿಗೆ, ಪರಿಕಲ್ಪನೆಗಳಿಗೆ ಹೊಸ ಬೆಳಕಿಂಡಿಯನ್ನು ತೆರೆದವು. ಹೊಸ ಆಲೋಚನೆ-ಚಿಂತನೆಗಳು ಎಸ್.ಎಲ್.ಭೈರಪ್ಪನವರ ‘ವಂಶವೃಕ್ಷ’ ಕಾದಂಬರಿಯನ್ನು ಬೆಳ್ಳಿತೆರೆಗೆ ತರಲು ಪ್ರೇರಕಶಕ್ತಿಗಳಾದವು.

ದಿಲ್ಲಿಯಲ್ಲಿ ಬಿ.ವಿ.ಕಾರಂತರ ಮನೆಯಲ್ಲಿ ಕುಳಿತು ‘ವಂಶವೃಕ್ಷ’ದ ಚಿತ್ರಕಥೆ ಬರೆದರು. ಕಾರಂತ್-ಕಾರ್ನಾಡ್ ಜೊತೆಗೂಡಿ ‘ವಂಶವೃಕ್ಷ’ ನಿರ್ದೇಶಿಸಿದರು. ‘ವಂಶವೃಕ್ಷ’ ಯಶಸ್ಸು ಗಳಿಸಿದ್ದಷ್ಟೇ ಅಲ್ಲದ ಕನ್ನಡ ಚಲಚಿತ್ರ ಇತಿಹಾಸದಲ್ಲಿ ಒಂದು ಮೈಲಿಗಲ್ಲೆನಿಸಿ ಕೊಂಡಿತು. ಹೊಸಹುಟ್ಟಿಗೆ ಹಾತೊರೆಯುತ್ತಿದ್ದ ಅಯ್ಯರ್‌ಗೆ ‘ವಂಶವೃಕ್ಷ’ದ ಯಶಸ್ಸು ಒಂದು ಚಿಮ್ಮುಹಲಗೆಯಾಯಿತು. ಇದೇ ಹುರುಪಿನಲ್ಲಿ ತರಾಸು ಕಾದಂಬರಿ ಆಧಾರಿತ ‘ಹಂಸಗೀತೆ’ ನಿರ್ಮಿಸಿದರು. ‘ಹಂಸಗೀತೆ’ಯೊಂದಿಗೆ ಅಯ್ಯರ್ ಕನ್ನಡ ಚಿತ್ರರಂಗದಲ್ಲಿ ಹೊಸಹುಟ್ಟು ಪಡೆದರು. ಹೊಸ ಹೆಜ್ಜೆ ಇಡಲಾರಂಭಿಸಿದ ಅಯ್ಯರ್, ಪವಾಡಗಳನ್ನು ಬದಿಗಿರಿಸಿ ಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತ-ತತ್ವಗಳನ್ನು ರಜತ ಪರದೆಯ ಮೆಲೆ ಒರೆಗೆ ಹಚ್ಚುವ ನಿರ್ಧಾರ ಮಾಡಿದರು.

ಹೀಗೆ ಬೆಳ್ಳಿ ಪರದೆಯಲ್ಲಿ ಆದಿಶಂಕರರು ಅವತರಿಸಿದರು. ಬಾಲಮುರಳಿಯವರ ಸಂಗೀತ, ಅಯ್ಯರ್ ನಿರ್ದೇಶನದಲ್ಲಿ ‘ಆದಿ ಶಂಕರಾಚಾರ್ಯ’ ಭರ್ಜರಿ ಯಶಸ್ಸು ಕಂಡಿತು. ಅಖಿಲ ಭಾರತ ಮಟ್ಟದಲ್ಲಿ ಪ್ರಭಾವ ಬೀರಿತು. ಇನ್ನೊಂದು ಸಂಸ್ಕೃತ ಚಿತ್ರ ಮಾಡಿ ಎಂದು ಉತ್ತರ ಭಾರತದ ನಿರ್ಮಾಪಕನೊಬ್ಬ ಅವರಿಗೆ ದುಂಬಾಲು ಬಿದ್ದ. ಜೊತೆಗೆ ದೇಶವಿದೇಶಗಳಲ್ಲಿ ‘ಆದಿ ಶಂಕರಾಚಾರ್ಯ’ ಗಿಟ್ಟಿಸಿಕೊಂಡ ವಿಮರ್ಶಾತ್ಮಕ ಪ್ರಶಂಸೆ ಪ್ರಚಾರಗಳು ಧಾರ್ಮಿಕ/ಆಧ್ಯಾತ್ಮಿಕ ಆಯಾಮಗಳ ಇನ್ನಷ್ಟು ಚಿತ್ರಗಳ ನಿರ್ಮಾಣಕ್ಕೆ ಪ್ರೇರಣೆ, ಪ್ರಚೋದನೆಗಳನ್ನು ನೀಡಿದವು.

ಹೀಗೆ ಬಂದವು: ‘ಮಧ್ವಾಚಾರ್ಯ’, ‘ರಾಮಾನುಚಾರ್ಯ’, ‘ಭಗವದ್ಗೀತೆ’, ‘ವಿವೇಕಾನಂದ’ ಚಿತ್ರಗಳು. ‘ನಾಟ್ಯ ರಾಣಿ ಶಾಂತಲಾ’ ಮತ್ತು ‘ಕೃಷ್ಣ ಲೀಲಾ’ ಅಯ್ಯರ್ ಇಳಿವಯಸ್ಸಿನಲ್ಲಿ ನಟಿ ಪಂಡರೀ ಬಾಯಿ ಅವರಿಗಾಗಿ ನಿರ್ದೇಶಿಸಿದ ಚಿತ್ರಗಳು. ಅಯ್ಯರ್ ಅವರು ಭಾರತೀಯ ಮೌಲ್ಯಗಳನ್ನು ಪ್ರತಿನಿಧಿಸುವ ‘ರಾಮಾಯಣ’ ಚಿತ್ರದ ಕನಸು ಕಂಡಿದ್ದರು. ‘ರಾಮಾಯಣ’ದ ಚಿತ್ರ ಕಥೆ ಬರೆದು ತಯಾರಿಕೆಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡರು. ಅದರೆ ಇದೇ ಅವಧಿಯಲ್ಲಿ ಸಂಭವಿಸಿದ ಪತ್ನಿಯ ನಿಧನ ಮೊದಲಾದ ಕೌಟುಂಬಿಕ ಕಾರಣಗಳಿಂದಾಗಿ ಅವರಿಂದ ‘ರಾಮಾಯಣ’ ಮಾಡಲು ಸಾಧ್ಯವಾಗಲೇ ಇಲ್ಲ.

‘ಕುದುರೆ ಮೊಟ್ಟೆ’ ಅಯ್ಯರ್ ಅವರು ಆದಿಶಂಕರನಿಗೂ ಮೊದಲೇ ನಿರ್ದೇಶಿಸಿದ ಅವರ ಎರಡನೆಯ ಕಲಾತ್ಮಕ ಚಿತ್ರ. ‘ವಾಲ್ ಪೋಸ್ಟರ್’ ಅವರ ಮೊದಲ ಕಲಾತ್ಮಕ ಚಿತ್ರ ಎನ್ನುವ ಅಭಿಪ್ರಾಯವಿದೆ. ಕನ್ನಡ ಕಲಾತ್ಮಕ ಚಿತ್ರಗಳ ಸಾಲಿನಲ್ಲಿ ಎದ್ದು ಕಾಣುವ ಪ್ರಯೋಗವಾದ, ವಿಮರ್ಶಕರ ಮೆಚ್ಚುಗೆ ಗಳಿಸಿದ ಒಂದು ಒಳ್ಳೆಯ ಚಿತ್ರ ‘ಕುದುರೆ ಮೊಟ್ಟೆ’ ಸಾರ್ವತ್ರಿಕ ಪ್ರದರ್ಶನಕ್ಕೆ ತೆರೆ ಕಾಣಲೇ ಇಲ್ಲ. ಚಿತ್ರಮಾಧ್ಯಮದಲ್ಲಿ ಮೂಡಿಬಂದಿರುವ ನವ್ಯಕಾವ್ಯವೆಂದು ಬನ್ನಂಜೆ ಗೋವಿಂದಾಚಾರ್ಯರ ಪ್ರಶಂಸೆಗೆ ಪಾತ್ರವಾಗಿರುವ ‘ವಾಲ್ ಪೋಸ್ಟರ್’ ಸಹ ತೆರೆ ಕಾಣದೇ ಹೋದದ್ದು ಕನ್ನಡ ಚಿತ್ರ ರಸಿಕರ ದೌರ್ಭಾಗ್ಯ.

‘ಹಂಸಗೀತೆ’ ಬಿಡುಗಡೆಯಾದಾಗ ಚಿತ್ರವಿಮರ್ಶಕರು ಅಯ್ಯರ್ ಅವರನ್ನು ಫೀನಿಕ್ಸ್ ಪಕ್ಷಿಗೆ ಹೋಲಿಸಿದ್ದುಂಟು. ಫೀನಿಕ್ಸ್ ಸುಮಾರು 500-600 ವರ್ಷಗಳ ಹಿಂದೆ ಅರೇಬಿಯಾದ ಮರಳುಗಾಡಲ್ಲಿ ಜೀವಿಸಿತ್ತು ಎನ್ನಲಾದೊಂದು ಕಾಲ್ಪನಿಕ ಪಕ್ಷಿ. ಈ ಸುಂದರ ಪಕ್ಷಿ ಸ್ವಯಂ ಚಿತೆಗೆ ಬಿದ್ದು ತನ್ನನ್ನೇ ಸುಟ್ಟುಕೊಂಡು ಭಸ್ಮವಾಗಿ ಆ ಬೂದಿಯಿಂದ ಹೊಸಜೀವ ತಾಳಿ ಮೇಲೆದ್ದು ಮತ್ತೊಂದು ಕಾಲಚಕ್ರ ಜೀವಿಸಿರಲು ಮರುಹುಟ್ಟು ಪಡೆಯಿತು. ಫೀನಿಕ್ಸ್ ಜಿ.ವಿ.ಅಯ್ಯರ್ ಅವರಿಗೆ ಅರ್ಥಪೂರ್ಣವಾಗಿ ಹೊಂದುವ ರೂಪಕ. ನಿಶ್ಚಯವಾಗಿಯೂ ‘ಹಂಸಗೀತೆ’ ಅಯ್ಯರ್ ಅವರಿಗೆ ಕನ್ನಡ ಚಿತ್ರ ರಂಗದಲ್ಲಿ ಮರುಹುಟ್ಟನ್ನು ನೀಡಿತ್ತು. ಈ ಮರುಹುಟ್ಟು, ಅಯ್ಯರ್ ಅವರು ಅಲ್ಲಿಯವರೆಗಿನ ಅನುಭವಗಳ ಅಗ್ನಿದಿವ್ಯದಲ್ಲಿ ಸ್ವತಃ ಸುಟ್ಟುಕೊಂಡು ಪಡೆದ ಮರುಹುಟ್ಟು ಎಂಬುದು ಅವರ ಚಿತ್ರಗಳನ್ನು ಅಧ್ಯಯನ ಮಾಡಿದವರಿಗೆ ವಿದಿತವಾಗಿರುವ ಸತ್ಯ. ಅಯ್ಯರ್ ಅವರ ಖಾಸಗಿ ಬದುಕು ಮತ್ತು ಚಿತ್ರಜೀವನಗಳನ್ನು ವಸ್ತುನಿಷ್ಟವಾಗಿ ಅವಲೋಕಿಸಿದವರಿಗೆ ಅವರೊಂದು ಅಚ್ಚರಿಯಂತೆ ಕಾಣುತ್ತಾರೆ.

ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಅಯ್ಯರ್ ಅವರದೇ ಒಂದು ಮಹತ್ವಪೂರ್ಣವಾದ ರೋಚಕ ಅಧ್ಯಾಯ. ಇದು ಅವರ ಜನ್ಮಶತಾಬ್ಧಿ ವರ್ಷವೆಂದು ಎಷ್ಟು ಜನ ಕನ್ನಡಿಗರಿಗೆ ಗೊತ್ತೋ ಇಲ್ಲವೋ ತಿಳಿಯದು. ಜನ್ಮ ಶತಾಬ್ದಿ ಆಚರಣೆಯ ಸದ್ದುಗದ್ದಲವಂತೂ ಕೇಳಿಬರುತ್ತಿಲ್ಲ. ಕನ್ನಡ ಮತ್ತು ಸಂಸ್ಕೃತ ಇಲಾಖೆ ಮತ್ತು ಕನ್ನಡ ಚಲಚ್ಚಿತ್ರ ಅಕಾಡಮಿ ಕರ್ನಾಟಕದ ಪ್ರಮುಖ ನಗರಗಳಲ್ಲಿ ಅಯ್ಯರ್ ಅವರ ಚಿತ್ರಗಳ ಪೂರ್ವಾವಲೋಕನ ಪ್ರದರ್ಶನೋತ್ಸವವನ್ನು ಏರ್ಪಡಿಸಿದಲ್ಲಿ ಅದು ಜಿ. ವಿ. ಅಯ್ಯರ್ ಅವರ ಜನ್ಮ ಶತಾಬ್ದಿಯ ಸೂಕ್ತ ಸ್ಮರಣೆಯಾದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)