varthabharthi

ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 24 Sep, 2017

ಕೋಲ್ಕತಾದಿಂದ ಮೋದಿ ಸ್ಪರ್ಧೆ?

2019ರ ಲೋಕಸಭಾ ಚುನಾವಣೆಗಾಗಿ ಬಿಜೆಪಿಯ ‘ಸಮರಯಂತ್ರ’ವನ್ನು ಅಮಿತ್ ಶಾ ಈಗಾಗಲೇ ಸಜ್ಜುಗೊಳಿಸಿಟ್ಟಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಉತ್ತರಪ್ರದೇಶ, ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳಲ್ಲಿ ವಸ್ತುಶಃ ಪ್ರತಿಯೊಂದು ಸ್ಥಾನವನ್ನು ಗೆದ್ದಿತ್ತಾದರೂ, ಅದೇ ಸಾಧನೆಯನ್ನು 2019ರಲ್ಲಿಯೂ ಪುನರಾವರ್ತಿಸುವ ಸ್ಥಿತಿಯಲ್ಲಿ ಈಗ ತಾನಿಲ್ಲವೆಂಬುದು ಅದಕ್ಕೆ ಅರಿವಾಗಿದೆ. ಹೀಗಾಗಿ 2019ರಲ್ಲಿ ತನಗೆ ಹೆಚ್ಚಿನ ಸ್ಥಾನಗಳನ್ನು ತಂದುಕೊಡಬಲ್ಲ ಹೊಸ ‘ಹುಲ್ಲುಗಾವಲು’ಗಳಿಗಾಗಿ ಅದು ಹುಡುಕಾಡುತ್ತಿದೆ. ಬಹುಶಃ ಅಮಿತ್‌ಶಾ ಆಗಿರಲೂಬಹುದು, ಪಕ್ಷದ ನಾಯಕರೊಬ್ಬರು 2019ರ ಚುನಾವಣೆಯಲ್ಲಿ ಮೋದಿಯವರನ್ನು ವಾರಣಾಸಿಯ ಜೊತೆಗೆ ಕೋಲ್ಕತಾದಲ್ಲಿಯೂ ಕಣಕ್ಕಿಳಿಸುವ ಯೋಚನೆಯನ್ನು ಹರಿಯಬಿಟ್ಟಿದ್ದಾರಂತೆ. ಪಶ್ಚಿಮ ಬಂಗಾಳದಲ್ಲಿಯೂ ಪಕ್ಷಕ್ಕೆ ಉತ್ತೇಜನ ನೀಡಲು ಹಾಗೂ ಅಲ್ಲಿ ಅದರ ನೆಲೆಯನ್ನು ವಿಸ್ತರಿಸುವ ಒಂದು ವಿಧಾನ ಇದಾಗಿರಬಹುದು. ‘‘ ಬಂಗಾಳದಲ್ಲಿ 15 ಸ್ಥಾನಗಳನ್ನು ಗೆದ್ದರೂ ಧಾರಾಳವಾಯಿತು’’ ಎಂದು ಅದು ಭಾವಿಸಿರುವ ಹಾಗೆ ಕಾಣುತ್ತದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 42 ಸ್ಥಾನಗಳ ಪೈಕಿ ಎರಡನ್ನು ಮಾತ್ರ ಗೆದ್ದುಕೊಂಡಿತ್ತು. ಆಗ ಅದರ ಮತಗಳಿಕೆ ಶೇ.17ರಷ್ಟಾಗಿತ್ತು. ಸದ್ಯ ಅಮಿತ್ ಶಾ, ಪಶ್ಚಿಮಬಂಗಾಳದಲ್ಲಿ ಪ್ರವಾಸ ಕೈಗೊಂಡಿದ್ದು, ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳಲು ಅವರು ಸ್ಥಳೀಯ ನಾಯಕರು ಹಾಗೂ ಮಾಧ್ಯಮಗಳ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ಮೋದಿ ಕೋಲ್ಕತಾದಲ್ಲಿ ಸ್ಪರ್ಧಿಸುವುದರಿಂದ ಬಿಜೆಪಿಯ ಬದ್ಧ ವೈರಿಗಳಾದ ಕಮ್ಯುನಿಸ್ಟರನ್ನು ರಾಜ್ಯದಲ್ಲಿ ಧೂಳೀಪಟಗೊಳಿಸಬಹುದೆಂದು ಬಹುಶಃ ಅಮಿತ್ ಶಾ ಭಾವಿಸಿರುವಂತಿದೆ.

ರಿತಬ್ರತಾ: ಕೇಸರೀಕರಣ

ಸಿಪಿಎಂ ಇತ್ತೀಚೆಗೆ ತನ್ನ ರಾಜ್ಯಸಭಾ ಸದಸ್ಯ ರಿತಬ್ರತಾ ಬ್ಯಾನರ್ಜಿ ಅವರನ್ನು ‘ಘೋರವಾದ ಪಕ್ಷ ವಿರೋಧಿ ಚಟುವಟಿಕೆ’ಗಾಗಿ ಉಚ್ಛಾಟಿಸಿತು. ರಿತಬ್ರತಾ ಅವರು ಇತ್ತೀಚೆಗೆ ಬಂಗಾಳಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸಿಪಿಎಂ ಹಾಗೂ ಅದರ ಕೇಂದ್ರೀಯ ನಾಯಕತ್ವವನ್ನು ಟೀಕಿಸಿದ್ದರು. ತನ್ನ ವಿರುದ್ಧ ಹೊರಿಸಲಾದ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪಗಳ ತನಿಖೆಗಾಗಿ ರಚನೆಯಾಗಿರುವ ತನಿಖಾ ಆಯೋಗವನ್ನು ಕೂಡಾ ಅವರು ತರಾಟೆಗೆ ತೆಗೆದುಕೊಂಡಿದ್ದರು. ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡದೆ ಸುಮ್ಮನಿರುವಂತೆ ಪಕ್ಷದ ನಾಯಕ ಸೀತಾರಾಮ ಯೆಚೂರಿ ನೀಡಿದ ಸಲಹೆಯನ್ನು ಅವರು ಲೆಕ್ಕಿಸಲಿಲ್ಲ. ಆದರೆ ರಿತಬ್ರತಾ ರಾಜಕೀಯದಲ್ಲಿ ಅಧಿಕ ವೇಗದೊಂದಿಗೆ ಸಾಗುತ್ತಿರುವಂತೆ ಕಾಣುತ್ತಿದೆ. ಕೆಲವು ಮೂಲಗಳ ಪ್ರಕಾರ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುವ ಸನ್ನಾಹದಲ್ಲಿದ್ದಾರೆ. ಅವರೀಗ ಪ್ರಧಾನಿಯವರನ್ನು ಭೇಟಿಯಾಗಲು ಕಾಯುತ್ತಿದ್ದಾರೆ. ಬಹುಶಃ ಮುಂದಿನ ತಿಂಗಳು ಆ ಭೇಟಿ ನಡೆಯುವ ಸಾಧ್ಯತೆಯಿದೆ. ತನ್ನ ಈವರೆಗಿನ ರಾಜಕೀಯ ಬದುಕಿನುದ್ದಕ್ಕೂ ಬಿಜೆಪಿ ವಿಚಾರಧಾರೆಯ ವಿರುದ್ಧ ಹೋರಾಡಿದ್ದ ರಿತಬ್ರತಾ ಪಾಲಿಗೆ ಇದೊಂದು ದೊಡ್ಡ ಬದಲಾವಣೆಯಾಗಿದೆ. ಅದರೆ ಸಿಪಿಎಂಗೆ ಇದರಿಂದ ಮುಜುಗರವಾಗಿದೆ. ಸಿಪಿಎಂ ನಾಯಕನನ್ನು ತನ್ನ ತೆಕ್ಕೆಗೆ ಸೆಳೆಯಲು ಸಾಧ್ಯವಾಗಿರುವುದು ಬಿಜೆಪಿಗೆ ದೊರೆತ ದೊಡ್ಡ ಗೆಲುವೆಂದು ಭಾವಿಸಲಾಗಿದೆ.

ಕಠಿಣ ಪರಿಶ್ರಮದ ಗೋಯೆಲ್

ಪಿಯೂಶ್ ಗೋಯಲ್ ಪ್ರಧಾನಿಯನ್ನು ‘ಇಂಪ್ರೆಸ್’ ಮಾಡುವಲ್ಲಿ ಸಫಲರಾಗಿದ್ದಾರೆ. ರೈಲ್ವೆ ಸಚಿವರಾಗಿ ಅವರು ಭಡ್ತಿ ಪಡೆದಿರುವುದು ಇದಕ್ಕೆ ನಿದರ್ಶನವಾಗಿದೆ. ರೈಲ್ವೆ ಸಚಿವರಾಗಿ ಅಧಿಕಾರವಹಿಸಿಕೊಂಡ ಕೆಲವೇ ದಿನಗಳಲ್ಲಿ ಗೋಯಲ್ ಅವರು ರೈಲ್ವೆಯ ಸುರಕ್ಷತಾ ಮಾನದಂಡಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ. ನೂತನ ರೈಲ್ವೆ ಸಚಿವರು ಶಿಷ್ಟಾಚಾರವನ್ನು ಕಡೆಗಣಿಸಿ, ಕೇಂದ್ರ ಕಚೇರಿಯಾದ ‘ರೈಲ್ ಭವನ್’ನಲ್ಲಿ ಸಭೆಗಳನ್ನು ಏರ್ಪಡಿಸುವ ಬದಲು ಉತ್ತರ ರೈಲ್ವೆ ವಿಭಾಗದ ಮುಖ್ಯ ಕಚೇರಿಯಿರುವ ಬರೋಡಾ ಹೌಸ್‌ನಲ್ಲಿ ಸಭೆ ನಡೆಸಿದ್ದಾರೆ. ಸಭೆ ನಡೆಯುವ ಸ್ಥಳದ ಬದಲಾವಣೆಯಿಂದ ಗೋಯಲ್‌ಗೆ ಒಂದು ಲೆಕ್ಕದಲ್ಲಿ ಹೆಚ್ಚಿನ ಪ್ರಯೋಜನವೂ ದೊರೆಯಿತು. ರೈಲ್ವೆ ಸಚಿವರಾಗಿ ನೇಮಕಗೊಂಡಿದ್ದಕ್ಕಾಗಿ ತನ್ನನ್ನು ಅಭಿನಂದಿಸಲು ರೈಲ್ವೆ ಭವನ್‌ನಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದ ಸಂದರ್ಶಕರ ‘ಕಾಟ’ದಿಂದ ಅವರು ಪಾರಾಗಿದ್ದಾರೆ. ಬರೋಡಾ ಹೌಸ್‌ನಲ್ಲಿ ನಡೆದ ಸಭೆಯಲ್ಲಿ ಸಚಿವರು, ಹಾನಿಗೊಳಗಾದ ರೈಲ್ವೆ ಹಳಿಗಳನ್ನು ತ್ವರಿತವಾಗಿ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾಮಗ್ರಿಗಳ ಅಥವಾ ಪರಿಣತಿಯ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿಕೂಡದೆಂದು ಗೋಯಲ್, ರೈಲ್ವೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ. ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿವರಣೆಗಳನ್ನು ಪಡೆಯಲು ಗೋಯಲ್‌ಗೆ ಇರುವ ಆಸಕ್ತಿ ಹಾಗೂ ರೈಲ್ವೆಯನ್ನು ಕಾಡುವ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವುದನ್ನು ಕಂಡು ರೈಲ್ವೆ ಅಧಿಕಾರಿಗಳು ಕೂಡಾ ಸಂತುಷ್ಟರಾಗಿದ್ದಾರೆ.

ನಿತೀಶ್ ಪಾಳಯಕ್ಕೆ ಪ್ರಶಾಂತ್ ಕಿಶೋರ್ ವಾಪಸ್?

ರಾಜಕೀಯದಲ್ಲಿ ಶತ್ರುಗಳಾಗಲಿ ಅಥವಾ ಮಿತ್ರರಾಗಲಿ ಇಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ನಾಣ್ಣುಡಿಯನ್ನು ಬಲವಾಗಿ ನಂಬಿದ್ದಾರೆ. ತನ್ನ ಮಾಜಿ ರಾಜಕೀಯ ಸಲಹೆಗಾರ ಹಾಗೂ ಸಮಾಲೋಚಕನಾದ ಪ್ರಶಾಂತ್ ಕಿಶೋರ್‌ರನ್ನು ಓಲೈಸಲು ಅವರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕುಮಾರ್ ಅವರು ಕಿಶೋರ್‌ರನ್ನು ಪಾಟ್ನಾಕ್ಕೆ ಆಹ್ವಾನಿಸಿದ್ದಾರೆ ಹಾಗೂ ಬೇರೆ ರಾಜಕೀಯ ಪಕ್ಷಗಳಿಗೆ ‘ಫ್ರೀಲಾನ್ಸ್ ಸಮಾಲೋಚಕ’ನಾಗಿ ಕೆಲಸ ಮಾಡುವುದನ್ನು ಬಿಟ್ಟು, ಬಿಹಾರಕ್ಕೆ ಬಂದು ನೆಲೆಸುವಂತೆ ಅವರ ಮನವೊಲಿಸಲು ಯತ್ನಿಸುತ್ತಿದ್ದಾರೆ. ಅಂದಹಾಗೆ ಬಿಹಾರವು ಕಿಶೋರ್‌ರ ತವರು ರಾಜ್ಯವೂ ಹೌದು. ಒಳ್ಳೆಯ ಹುದ್ದೆಯೊಂದನ್ನು ನೀಡುವ ಕೊಡುಗೆಯನ್ನು ಕೂಡಾ ನಿತೀಶ್ ಅವರು ಕಿಶೋರ್‌ರ ಮುಂದಿಟ್ಟಿದ್ದಾರೆ. ಆದರೆ ಕೇಸರಿ ಪಾಳಯಕ್ಕೆ ನಿತೀಶ್ ವಾಪಸಾಗಿರುವುದನ್ನು ಒಪ್ಪದ ಕಿಶೋರ್ ಅವರು ಈ ಮನವಿಗೆ ಸ್ಪಂದಿಸದೆ ಉಳಿದಿದ್ದಾರೆ. ಕೆಲವು ವ್ಯಕ್ತಿಗಳಾದರೂ ತಮ್ಮ ಆದರ್ಶಗಳನ್ನು ಬದ್ಧವಾಗಿ ನಡೆದುಕೊಳ್ಳುತ್ತಿರುವಂತೆ ಕಾಣುತ್ತಿದೆ.

 ಮತ್ತೆ ಸ್ಥಾನ ಭದ್ರಪಡಿಸಿದ ಸ್ಮೃತಿ

ಮತ್ತೊಮ್ಮೆ ತಾನು ಉನ್ನತ ಮಟ್ಟದ ಸಚಿವೆಯಾಗಿ ಸಂಪುಟದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಬಹುದಾದ ಖಾತೆಯು ಸ್ಮತಿ ಇರಾನಿಗೆ ಈಗ ಲಭ್ಯವಾಗಿದೆ. ಸಂಪುಟ ಪುನಾರಚನೆಯ ಬಳಿಕ ಮಾಹಿತಿ ಹಾಗೂ ಪ್ರಸಾರ ಖಾತೆಯ ಪೂರ್ಣ ಉಸ್ತುವಾರಿ ದೊರೆತ ಬಳಿಕ ಅವರಿಗೆ ಈ ಭಾವನೆ ಬಂದಿರಬಹುದು. ಅವರು ಜವಳಿ ಸಚಿವೆಯೂ ಹೌದು. ಆದರೆ ಖಂಡಿತವಾಗಿಯೂ ಮಾಧ್ಯಮಗಳ ಕೇಂದ್ರಬಿಂದುವಾಗುವಂತಹ ಖಾತೆ ಅದಲ್ಲ. ಆದರೆ ಮಾಹಿತಿ ಹಾಗೂ ಪ್ರಸಾರ ಸಚಿವಾಲಯದಲ್ಲಿ ಅದು ಸಾಧ್ಯವಿದೆ. ಸ್ಮತಿ ಇರಾನಿ ತೀರಾ ಇತ್ತೀಚೆಗೆ ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಎರಡು ಮುಖ್ಯ ಕಚೇರಿಗಳಾದ ‘ಸೂಚನಾ ಭವನ್’ ಹಾಗೂ ದೂರದರ್ಶನದ ಮುಖ್ಯ ಕಾರ್ಯಾಲಯಕ್ಕೆ ಭೇಟಿ ನೀಡಿದ್ದಾರೆ. ಒಂದು ಕಚೇರಿಯಲ್ಲಿ ಕೆಲವು ಅಧಿಕಾರಿಗಳು ನಿದ್ರಿಸುತ್ತಿವುದನ್ನು, ಇನ್ನೊದರಲ್ಲಿ ಕೆಲವರು ಗೈರುಹಾಜರಾಗಿರುವುದನ್ನು ಅವರು ಗಮನಿಸಿದ್ದಾರೆ. ಇಂತಹ ಪ್ರವೃತ್ತಿ ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಅವರು ಹಿರಿಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ ಸ್ಮತಿ ಅವರ ಸಾರಥ್ಯದಲ್ಲಿ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಈಗ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ ಹಾಗೂ ಮಾಧ್ಯಮಗಳು ಇದಕ್ಕಾಗಿ ಕಾಯಬೇಕಾಗಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)